ಜೀವನ ಜೋಕಾಲಿ
Team Udayavani, Jul 14, 2017, 3:45 AM IST
ಹೊಸ ಮನೆಯ ಕಟ್ಟಡದ ಪ್ಲಾನ್ ರೆಡಿಯಾಗುತ್ತಿರಬೇಕಾದರೆ ಆರ್ಕಿಟೆಕ್ಟ್ ಹತ್ತಿರ ಅಡುಗೆ ಮನೆ ಎಲ್ಲಿರಬೇಕು, ಹೇಗಿರಬೇಕು ಎಂದು ಚರ್ಚಿಸಿದಷ್ಟೇ ಸೀರಿಯಸ್ ಆಗಿ ಜೋಕಾಲಿ ಎಲ್ಲಿ ಕಟ್ಟಬೇಕು, ಎಲ್ಲಿ ಹುಕ್ ಹಾಕಬೇಕೆಂದು ತಲೆಕೆಡಿಸಿಕೊಳ್ಳುತ್ತಿದ್ದೆ. ನನ್ನ ಜೋಕಾಲಿ ಪ್ರೇಮಕ್ಕೆ ತಕ್ಕಂತೆ ಹೊಸ ಮನೆಯಲ್ಲಿ ದೊಡ್ಡ ಬಾಲ್ಕನಿ, ಬಾಲ್ಕನಿಯಲ್ಲಿ ಜೋಕಾಲಿ ಸಿಕ್ಕಿಸಲು ದೊಡ್ಡ ಎರಡು ಹುಕ್ಕುಗಳು ಬಂದವು. ಗೃಹಪ್ರವೇಶದ ಗಡಿಬಿಡಿಯಲ್ಲಿ ನನ್ನ ಜೋಕಾಲಿ ಪ್ರೇಮ ಸ್ವಲ್ಪ ಸಮಯ ಹಿಂದಿನ ಸೀಟ್ ಹಿಡಿದಿತ್ತು. ಗೃಹಪ್ರವೇಶ ಮುಗಿದು ಹೊಸ ಮನೆಯಲ್ಲಿ ಸಾಮಾನುಗಳೆನ್ನೆಲ್ಲ ಜೋಡಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸಿ “ಉಸ್ಸಪ್ಪ’ ಎಂದು ಸೋಫಾದಲ್ಲಿ ಕೂರುತ್ತಿದ್ದಂತೆ ಮತ್ತೆ ಸ್ಮತಿಪಟಲದಲ್ಲಿ ಧುತ್ತನೆ ಎದುರು ಬಂದು ನಿಂತಿತು ಜೋಕಾಲಿ.
ಚಿಕ್ಕವಳಿದ್ದಾಗ ನಾನೂ ಎಲ್ಲಾ ಮಕ್ಕಳಂತೆ ಜೋಕಾಲಿ ಪ್ರೇಮಿಯಾಗಿದ್ದೆ, ಆದರೆ, ಮದುವೆಯಾಗಿ ಮಕ್ಕಳಾದ ಮೇಲೂ ಪಾರ್ಕಿನಲ್ಲಿ ಮಕ್ಕಳನ್ನು ಜೋಕಾಲಿ ಮೇಲೆ ಕೂರಿಸಿ ಆಡಿಸುವಾಗಲೂ ನಾನೇ ಜೋಕಾಲಿ ಮೇಲೆ ಕೂತು ಆಡುತ್ತಿರುವ ಕನಸು ಕಂಡೆ, ಸಂಭ್ರಮ ಪಟ್ಟೆ. ಪಾರ್ಕಿನಲ್ಲಿ ಯಾರೂ ಇಲ್ಲದಿರುವಾಗ ಚಿಕ್ಕ ಮಕ್ಕಳ ಜೋಕಾಲಿಯಲ್ಲಿ ಕೂರಲು ಪ್ರಯತ್ನಿಸುತ್ತಿದ್ದೆ, ಕೂತು ಬಿದ್ದದ್ದೂ ಇದೆ. ನನ್ನ ಗಂಡ ಸ್ವಂತ ಮನೆ ಕಟ್ಟಲು ತೀರ್ಮಾನಿಸಿದಾಗ ನಾನು ಸ್ವಂತ ಮನೆಯಲ್ಲಿ ಜೋಕಾಲಿ ಕಟ್ಟುವ ಬಗ್ಗೆ ಸೀರಿಯಸ್ ಆದೆ. ಹೊಸ ಮನೆಯ ಕಟ್ಟಡದ ಪ್ಲಾನ್ ರೆಡಿಯಾಗುತ್ತಿರಬೇಕಾದರೆ ನಾನಂತೂ ಗಂಡನೊಡನೆ, ಆರ್ಕಿಟೆಕ್ಟ್ ಹತ್ತಿರ ಅಡುಗೆ ಮನೆ ಎಲ್ಲಿರಬೇಕು, ಹೇಗಿರಬೇಕು ಎಂದು ಚರ್ಚಿಸಿದಷ್ಟೇ ಸೀರಿಯಸ್ ಆಗಿ ಜೋಕಾಲಿ ಎಲ್ಲಿ ಕಟ್ಟಬೇಕು, ಎಲ್ಲಿ ಹುಕ್ ಹಾಕಬೇಕೆಂದು ಚರ್ಚಿಸುತ್ತಿದ್ದೆ. ನನ್ನ ಜೋಕಾಲಿ ಪ್ರೇಮಕ್ಕೆ ತಕ್ಕಂತೆ ಹೊಸಮನೆಯಲ್ಲಿ ದೊಡ್ಡ ಬಾಲ್ಕನಿ, ಬಾಲ್ಕನಿಯಲ್ಲಿ ಜೋಕಾಲಿ ಸಿಕ್ಕಿಸಲು ದೊಡ್ಡ ಎರಡು ಹುಕ್ಕುಗಳು ಬಂದವು.
ಗೃಹಪ್ರವೇಶದ ಗಡಿಬಿಡಿಯಲ್ಲಿ ನನ್ನ ಜೋಕಾಲಿ ಪ್ರೇಮ ಸ್ವಲ್ಪ ಸಮಯ ಹಿಂದಿನ ಸೀಟ್ ಹಿಡಿದಿತ್ತು. ಗೃಹಪ್ರವೇಶ ಮುಗಿದು ಹೊಸ ಮನೆಯಲ್ಲಿ ಸಾಮಾನುಗಳೆನ್ನೆಲ್ಲ ಜೋಡಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸಿ “ಉಸ್ಸಪ್ಪ’ ಎಂದು ಸೋಫಾದಲ್ಲಿ ಕೂರುತ್ತಿದ್ದಂತೆ ಅಲ್ಲಾವುದ್ದೀನನ ಜೀನ್‌ನಂತೆ ನನ್ನ ಸ್ಮತಿಪಟಲದಲ್ಲಿ ಧುತ್ತನೆ ಎದುರು ಬಂದು ನಿಂತಿತು ಜೋಕಾಲಿ. ಸರಿ, ಚೆಂದದ ಜೋಕಾಲಿಗಾಗಿ ಗಂಡನೊಡನೆ ಹಲವು ದಿನ, ಹಲವು ಜಾಗ ಸುತ್ತಾಡಿದರೂ ಮನಸ್ಸಿಗೆ ಇಷ್ಟವಾಗುವ, ನನ್ನ ತನು, ಮನದಲ್ಲಿ ಆಡಿಕೊಂಡಿದ್ದ ಜೋಕಾಲಿ ಮಾತ್ರ ಸಿಗಲಿಲ್ಲ, ಕಡೆಗೊಂದು ದಿನ ಶಿವಾಜಿನಗರದ ಕೊನೆಯ ಅಂಗಡಿಯ ಪ್ಯಾಸೇಜಿನಲ್ಲಿ ತೂಗಾಡಿಸಿದ್ದ ಜೋಕಾಲಿಯೊಂದು ಮನಸ್ಸಿಗೆ ಹಿಡಿಸಿತು. ಜೋಕಾಲಿಗೆ ಸುಂದರ ಡಿಸೈನಿನ ನಾಲ್ಕೆಳೆಯ ಸ್ಟೀಲಿನ ಚೈನುಗಳಿದ್ದು, ಮಧ್ಯೆ ಕೂರಲು 2 ಅಡಿ ಉದ್ದದ, 1.5 ಅಡಿ ಅಗಲದ ಹಳದಿ ಬಣ್ಣದ ಹಲಸಿನ ಹಲಗೆಯಿತ್ತು. ಚೌಕಾಸಿ ಮಾಡಿದಾಗ 500 ರೂ. ಕಡಿಮೆ ಮಾಡಲು ಅಂಗಡಿಯವನು ಒಪ್ಪದಿದ್ದರೂ ಸಂತೋಷದಿಂದಲೇ ಜೋಕಾಲಿಯನ್ನು ಮಡಿಲಲ್ಲಿಟ್ಟುಕೊಂಡು ಮನೆಗೆ ತಂದೆ. ಒಂದು ಭಾನುವಾರ ಪತಿರಾಯರಿಂದ ಜೋಕಾಲಿಯ ಆರೋಹಣವಾಯಿತು, ಗಂಡ-ಹೆಂಡತಿ ಒಟ್ಟಿಗೆ ಕೂತು ಸೆಲ್ಫಿಯೂ ತೆಗೆದಲ್ಲಾಯಿತು, ಫೇಸ್‌ಬುಕ್ಕಿಗೆ ಅಪಲೋಡ್ ಮಾಡಿಯೂ ಆಯಿತು.
ನಿನ್ನೆ ಮನೆ ಕೆಲಸವನ್ನೆಲ್ಲ ಮುಗಿಸಿದ ನಾನು ಒಬ್ಬಳೇ ಜೋಕಾಲಿಯಲ್ಲಿ ಕೂತು ಆಡತೊಡಗಿದೆ. ಜೋಕಾಲಿ ಹಿಂದೆ ಮುಂದೆ ಆಡುತ್ತಿದ್ದಂತೆ ನನ್ನ ಮನಸ್ಸೂ ಹಿಂದೆ ಮುಂದೆ ಆಡತೊಡಗಿತು.
“”ಅಣ್ಣಯ್ಯ ನಂಗೊಂದು ಉಯ್ನಾಲೆ (ಜೋಕಾಲಿ) ಕಟ್ಟಿ ಕೊಡ್” ಎನ್ನುತ್ತ ನನ್ನ ದೊಡ್ಡಣ್ಣನ ಹಿಂದೆ 3-4 ವಾರ ಸುತ್ತಾಡಿದಾಗ “”ಹೆಣೇ ನಿಂಗೆಂತಕ್ಕೆ ಉಯ್ನಾಲೆ? ಆಡಿ ಕಾಲ್ ಮುರ್ಕಂಬುಕಾ?” ಎಂದಾಗಲೆಲ್ಲ ಕಣ್ಣೀರು ತುಂಬಿ ಬರುತ್ತಿತ್ತು, ಕಣ್ಣಿನಿಂದ ಕೆನ್ನೆಗಿಳಿದ ನೀರು ಮೂಗಿನಿಂದ ಇಳಿದ ನೀರಿನೊಂದಿಗೆ ಸೇರಿಕೊಂಡಾಗ ಉದ್ದ ಲಂಗದಿಂದ ಒರೆಸಿಕೊಳ್ಳುತ್ತಿದ್ದೆ. “”ಬಾಮಿ(ಬಾವಿ) ಹಗ್ಗ ಸಮª ಹೋಯಿ ಹೊಸ ಹಗ್ಗ ಬದ್ಲ ಮಾಡೊತ್ತಿಗೆ ಹಳೆ ಬಾಮಿ ಹಗ್ಗದಲ್ಲಿ ನಿಂಗೆ ಉಯ್ನಾಲೆ ಕಟ್ಟಿಕೊಡ್ತೆ” ಎನ್ನುವ ಭರವಸೆಯನ್ನು ದೊಡ್ಡಣ್ಣ ಇತ್ತ. ಬಾವಿಯ ಹಗ್ಗ ಹಳೆಯದಾದಾಗ ಜೋಕಾಲಿ ಕಟ್ಟುವ ಭರವಸೆ ಸಿಗುತ್ತಿದ್ದಂತೆ ನಾನು ದಿನಕ್ಕೆ ನಾಲ್ಕು ಸಲ ಬಾವಿಯ ಹಗ್ಗವನ್ನು ಪರೀಕ್ಷಿಸತೊಡಗಿದೆ. “”ಈ ಹೆಣ್ಣ ಎಂತಕ್ ಈಡೀ ದಿನ ಬಾಮಿ ಹತ್ರ ಹೊಯ್ಕಂಡ್, ಬಾಮಿ ನೀಕತ್ತ, ಬಾಮಿ ಹಾರತ್ತ ಎಂತ ಕತೆ? ಹೆಣೇ ಬಾ ಇಲ್ಲ” ಎನ್ನುತ್ತ ಅಮ್ಮನಿಂದ ಗದರಿಕೆಯೂ ಬಂತು, ಒಂದೆರಡು ಸಲ ಮಜ್ಜಿಗೆ ಕಡೆಯುವ ಹಗ್ಗದಿಂದ ಎರಡೇಟೂ ಬಿತ್ತು. ನನ್ನ ಈ ಬಾವಿಯ ಸುತ್ತ ತಿರುಗಾಟ ಬಾವಿಯ ಹಗ್ಗಕ್ಕೇ ಬೇಜಾರು ಬಂತೇನೋ, ಅಂತು ಇಂತೂ ಅಲ್ಲಿ ಇಲ್ಲಿ ಸವೆದು ಹೋದ ಲಕ್ಷಣ ಕಾಣಿಸಿಕೊಂಡಿತು. “”ಮಾಣಿ, ಬಾಮಿ ಹಗ್ಗ ಸಮª ಹೊತ್ತಾ ಇತ್ತ, ಈ ಸಲ ಸಂತೇಲಿ ಬಾಮಿ ಹಗ್ಗದ ಜೋಡೊಂದು ತಕ್ಕಂಡ ಬಾ ಕಾಂಬ” ಎಂದು ಅಮ್ಮ ಅಣ್ಣನಿಗೆಂದಾಗ ನಾನಂತೂ ಕುಣಿದು ಕುಪ್ಪಳಿಸಿದೆ, ನನ್ನ ಬಹುದಿನದ ಕನಸಾದ ಜೋಕಾಲಿ ಕಟ್ಟಿ ಆಡುವ ದಿನ ಹೆಚ್ಚು ದೂರವಿಲ್ಲ.
ಮುಂದಿನ ಒಂದೆರಡು ವಾರದಲ್ಲಿ ಸಂತೆಯಿಂದ ಹೊಸ ಹಗ್ಗ ಬಂತು, ಬಾವಿಯ ನೀರೆಳೆಯುವ ಹಗ್ಗ ಬದಲಾಯಿತು, ಬದಲಾದ ಹಳೆಯ ಹಗ್ಗ ಹಟ್ಟಿಯ ಪಕ್ಕದಲ್ಲಿ ಕೂತಿತ್ತು. ಮತ್ತೆ ದೊಡ್ಡಣ್ಣನ ಹಿಂದೆ ಮುಂದೆ ಸುತ್ತಾಡತೊಡಗಿದೆ, ಅಣ್ಣನೂ ಸುಮ್ಮನೆ ಬಿಡುವವನಲ್ಲ. “”ಹೆಣೇ ಹಾಡಿ (ಚಿಕ್ಕ ಕಾಡು)ಲ್ ಸಿಕ್ಕಿದ ಗೊಯ್ ಹಣ್ಣ (ಗೇರು ಹಣ್ಣು) ಎಲ್ಲಾ ನಂಗೇ ಕೊಡ್ಕ, ಗೇರುಬೀಜವೂ ಸುಟ್ಟ ನಂಗೇ ಕೊಡ್ಕ, ಹಾಂಗರ್ ಮಾತ್ರ ನಿಂಗೆ ಉಯ್ನಾಲೆ ಕಟ್ಟಿ ಕೊಡ್ತೆ, ನಿಂಗ್ ಧಿಮಾಕ್ ಜಾಸ್ತಿ, ಒಂದ ಸರ್ತಿ ಉಯ್ನಾಲೆ ಕಟ್ಟಿ ಕೊಟ್ರ ಮ್ಯಾಲೆ ನೀ ನನ್ನ ಮುಖ ಕಾಂತಿಲ್ಲ ನಂಗ ಗೊತ್ತಿತ್” ಎನ್ನುವ ಕಂಡೀಶನ್ನೂ ಬಂತೂ, ಸರಿ ಅಣ್ಣ ಹೇಳಿದ್ದಕ್ಕೆಲ್ಲ ಗೋಣಾಡಿಸಿದೆ, ವಿಧೇಯ ವಿದ್ಯಾರ್ಥಿಯಂತೆ ಅಣ್ಣ ಹೇಳಿದ್ದನ್ನೆಲ್ಲ ಒಂದು ವಾರ ಪೂರ್ತಿ ಮಾಡಿದೆ. ಸಂಪ್ರೀತನಾದ ದೊಡ್ಡಣ್ಣ ಜೋಕಾಲಿ ಕಟ್ಟಿಕೊಡಲು ತೀರ್ಮಾನಿಸಿದ, ಸಣ್ಣಣ್ಣ, ತಮ್ಮ ಎಲ್ಲರೂ ದೊಡ್ಡಣ್ಣನಿಗೆ ಸಹಾಯಕ್ಕೆ ಬಂದರು. ಮನೆಯ ಹಿಂದಿನ ಕಾಳಪ್ಪಾಡಿ ಮಾವಿನ ಮರಕ್ಕೆ ಉಯ್ನಾಲೆ ಕಟ್ಟುವುದೆಂದು ತೀರ್ಮಾನವಾಯಿತು. ಆಗ ಬಂತು, ಅಪ್ಪಯ್ಯನ ಗುಡುಗು, “”ಮಕ್ಕಳೇ ಮಾಯಿನ ಮರಕ್ಕೆ ಮಾತ್ರ ಉಯ್ನಾಲೆ ಕಟ್ಟುದ ಬ್ಯಾಡ, ಹಗಲ ರಾತ್ರಿ ಆಡ್ತಾ ಆಯ್ಕಂತ್ರಿ, ಮಧ್ಯಾಹ್ನದ ಹೊತ್ತ ಒಂದ ಗಳಗೆ ಮನಕಂತೆ ಅಂದ್ರೂ ನಿಮ್ಮ ರಗಳೆ ತಡೂಕೆ ಆತ್ತಿಲ್ಲ” ಅದೂ ಸರಿಯೇ, ಮಾವಿನ ಮರವಿರುವುದು ಮನೆಯ ಮಲಗುವ ಕೋಣೆಯ ಹೊರಗೇ. ಕಡೆಗೆ ಎಲ್ಲರ ಒಮ್ಮತದ ಅಭಿಪ್ರಾಯದಂತೆ ಮನೆಯ ಎದುರಿನ ಬಿಳಿ ಸಂಪಿಗೆಯ ಮರಕ್ಕೆ ಕಟ್ಟುವುದೆಂದು ತೀರ್ಮಾನವಾಯಿತು. ದೊಡ್ಡಣ್ಣ ಸಂಪಿಗೆಯ ಮರವೇರಿದ, ದೊಡ್ಡಣ್ಣನೊಂದಿಗೆ ಚಿಕ್ಕಣ್ಣ, ತಮ್ಮ, ಬಾವಿಹಗ್ಗ ಎಲ್ಲವೂ ಮರವೇರಿತು, ಹಗ್ಗದ ಉಯ್ನಾಲೆ ಇಳಿಬಿದ್ದಿತು. ಕೂರಲು ಹೆಡೆ ಮಂಡೆ (ತೆಂಗಿನ ಓಲಿಯ ಬುಡಭಾಗ) ಇಡಲಾಯಿತು, ಕುಂಡೆ ಉರಿಯಬಾರದೆಂದು ದಪ್ಪ ಗೋಣೆಯೂ ಹಾಸಿಯಾಯಿತು. ಉಯ್ನಾಲೆ ತಯ್ನಾರಾಗುತ್ತಿದ್ದಂತೆ ಚಿಕ್ಕಣ್ಣ ಕೂತು “ಬೋಣಿ’ ಮಾಡಿದ, ಚಿಕ್ಕಣ್ಣ ಮೇಲೇಳುತ್ತಿದ್ದಂತೆ ದೊಡ್ಡಣ್ಣ ಕೂತು ಆಡತೊಡಗಿದ, ಮತ್ತೆ ತಮ್ಮ ಕೂತ, ಹೀಗೆ ಅಣ್ಣ ತಮ್ಮಂದಿರೇ ಆಡತೊಡಗಿದಾಗ ನನ್ನ ಗಲಾಟೆ ಶುರುವಾಯಿತು, ಕಣ್ಣಲ್ಲಿ ಗಂಗಾ-ಭಾಗೀರಥಿ ಹರಿದಳು, “”ಮಕ್ಕಳೇ ಆ ಹೆಣ್ಣಿಗೊಂಚೂರ ಆಡೂಕೆ ಕೊಡುಕಾಗª? ಹೆಣ್ಣ ಆಪಾಟಿ ಅಳತ್ತಲೇ” ಎಂದು ಅಮ್ಮ ಗದರಿದಾಗ, ಸ್ವಲ್ಪ ಗಿಡ್ಡಗಿದ್ದ ನನ್ನನ್ನು ಅಣ್ಣಂದಿರು ಎತ್ತಿ ಜೋಕಾಲಿಯ ಮೇಲೆ ಕೂರಿಸಿ, ಹಿಂದಿನಿಂದ ತಳ್ಳತೊಡಗಿದರು, “ಅಯ್ಯೊಯ್ಯೊ’ ಎಂಬ ಕಿರುಚಾಟ ನನ್ನಿಂದ ಮತ್ತೆ ಶುರುವಾಯಿತು, ನಂತರ ಖುಷಿಯ ನಗು ಎಲ್ಲವೂ.
ಎಲ್ಲರೂ ಕೂತು ಆಡಿ ಆಡಿ, ಹಗ್ಗ ಸ್ವಲ್ಪ ಜಗ್ಗಿ ನಾನೇ ಹತ್ತಿ ಕೂತು ಆಡುವಂತಾದೆ. ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲವೆನ್ನದೇ ಜೋಕಾಲಿ ಆಡಿಕೊಂಡಿರುತ್ತಿದ್ದೆ, ನನ್ನ ಪ್ರಾಣ ಗೆಳತಿ ವಸುಧಾ, ಜಂಬದ ಕೋಳಿಯರಾದ ಪಕ್ಕದ ಮನೆಯ ಪೂರ್ಣಿಮಾ, ಕಲಾ, ಶೋಭಾ ಎಲ್ಲರೂ ಆಡಲು ಸೇರಿಕೊಂಡರು, ಈ ಜಂಭದ ಕೋಳಿಗಳಿಗೆ ಹೆಚ್ಚು ಆಡಲು ಕೊಡದೆ ನಾನು ವಸುಧಾ ಮಾತ್ರ ಆಡಿಕೊಂಡಿರುತ್ತಿದ್ದೆವು. “”ಹೆಣೇ ಕತ್ತಲೆ ಆಯ್ತ, ದೀಪ ಹಚ್ಚಿಯಾಯ್ತ, ಕೈ ಕಾಲ್ ತೊಳ್ಕಂಡ ಭಜನೆ ಮಾಡುಕಾಗª” ಅಮ್ಮ ಕಿರಿಚಿಕೊಂಡಾಗಲೇ ಜೋಕಾಲಿ ಬಿಟ್ಟು ಬರುತ್ತಿದ್ದದ್ದು.
ನನ್ನ ಈ ಸಂತೋಷಕ್ಕೆ ಯಾರ ಕಣ್ಣು ಬಿತ್ತೂ ಗೊತ್ತಿಲ್ಲ, ರಜಾ ಮುಗಿದು ಇನ್ನೇನು ಶಾಲೆ ಶುರುವಾಗಲು ಎರಡು ದಿನವಿತ್ತು, ಆಡುವ ಭರದಲ್ಲಿ ಸಂಪಿಗೆ ಮರದ ಕೊಂಬೆಯ ಬುಡದಲ್ಲೇ ಹಗ್ಗ ಸವೆದದ್ದು ಗೊತ್ತಾಗಲಿಲ್ಲ. ಮಧ್ಯಾಹ್ನ ಊಟ ಮಾಡಿ ಜೋಕಾಲಿ ಏರಿ ನನ್ನಷ್ಟಕ್ಕೇ ಆಡಿಕೊಂಡಿದ್ದೆ, ವಸುಧಾ ಬಂದವಳೇ ಎಂದಿನಂತೆ ಜೋರಾಗಿ ನನ್ನನ್ನು ಹಿಂದಿನಿಂದ ನೂಕಿದಾಗ ಖುಷಿಯಿಂದ ಒಮ್ಮೆ “ಹೋ’ ಕಿರುಚಿಕೊಂಡವಳು ಮರುಕ್ಷಣದಲ್ಲೇ ಜೋಕಾಲಿಯ ಹಗ್ಗ ಕಡಿದು ನೆಲಕ್ಕೆ ಬಿದ್ದು ಅಮ್ಮ ಎಂದು ಸೂರು ಹಾರುವ ಹಾಗೆ ಕಿರುಚಿದೆ. ಅಳುತ್ತಿದ್ದ ನನ್ನನ್ನು ಅಣ್ಣಂದಿರು ಡಾಕ್ಟರ ಹತ್ತಿರ ಕರೆದುಕೊಂಡು ಹೋದಾಗ ಕಾಲಿನ ಮೂಳೆ ಮುರಿದದ್ದು ಖಾತ್ರಿಯಾಯಿತು, ಡಾಕ್ಟರ್ ಬ್ಯಾಂಡೇಜ ಕಟ್ಟಿದ್ದು ಮಾತ್ರವಲ್ಲದೆ ಒಂದು ತಿಂಗಳ ಬೆಡ್ ರೆಸ್ಟ್ ಹೇಳಿದರು. ಜೋಕಾಲಿ ಮುರಿದ ದುಃಖ ಮತ್ತು ಕಾಲುನೋವಿನ ದುಃಖದೊಂದಿಗೆ, “”ಹಗಲೂ, ರಾತ್ರಿಯೂ ಈ ನಮುನೆ ಆಡಿದ್ರೆ ಎಂತ ಆತ್ತ, ಹೆಣ್ಣ ಮಕ್ಕಳ ಹೆಚ್ಚ ಹಾರಡುಕಾಗ” ಎನ್ನುವ ಅಮ್ಮನ ಬೈಗುಳಿಯ ಮಾತುಗಳು ಮನಸ್ಸಿಗೆ ಕಿರಿಕಿರಿ ತಂದವು, ಆದರೆ, ಶಾಲೆಗೆ ಒಂದು ತಿಂಗಳು ಚಕ್ಕರ್ ಕೊಡಬೇಕಾದಾಗ ಪರಿಸ್ಥಿತಿ ಮಾತ್ರ ಮನಸ್ಸಿಗೆ ಸ್ವಲ್ಪ ಸಂತೋಷ ತಂದಿತು. ಅಣ್ಣ ತಮ್ಮನ ಉಪಚಾರ, ಈ ಎಲ್ಲಾ ಹಗರಣಕ್ಕೆ ತಾನೇ ಕಾರಣಳೆಂದು ಮುಖ ಸಣ್ಣದು ಮಾಡಿಕೊಂದು ಹಿಂದೆ ಮುಂದೆ ಸುತ್ತಾಡಿ, ಬೇಡಿದ್ದನ್ನೆಲ್ಲ ತಂದು ಕೊಡುತ್ತಿದ್ದ ವಸುಧಾಳನ್ನು ಇಲ್ಲಿ ನೆನೆಯಲೇ ಬೇಕು. ಅಂದು ತುಂಡಾದ ಜೋಕಾಲಿಯನ್ನು ಮತ್ತೆ ಕಟ್ಟಲಿಲ್ಲ.
ಅಲ್ಲಿ ಇಲ್ಲಿ ಪಾರ್ಕಿನಲ್ಲಿ ಜೋಕಾಲಿಯಲ್ಲಿ ಕೂತದ್ದು ಬಿಟ್ಟರೆ ಹೊಸ ಮನೆ ಕಟ್ಟಿ ಜೋಕಾಲಿ ಕಟ್ಟಿಯೇ ಕೂತದ್ದು. ಈಗ ಜೋಕಾಲಿಯಲ್ಲಿ ಆಡುವಾಗ ಚಿಕ್ಕವಳಿದ್ದಾಗ ಅನುಭವಿಸಿದ ಸಂತೋಷ ಸಿಗದಿದ್ದರೂ, ಮನಸ್ಸಿಗೆಷ್ಟು ಬೇಜಾರಿದ್ದರೂ ಜೋಕಾಲಿಯಲ್ಲಿ ಕೂತು ಆಡಿಕೊಂಡಾಗ ಹೊಸತು, ಹಳತು ಎಲ್ಲವೂ ನೆನಪಾಗಿ ಮನಸ್ಸಿಗೇನೊ ಖುಷಿ, ನನ್ನ ಬಾಲ್ಯದ ಸಂಗಾತಿಗಳೆಲ್ಲಾ ಒಬ್ಬೊಬ್ಬರಾಗಿ ಎದುರು ಬಂದಂತಾಗುತ್ತದೆ.
– ಗೀತಾ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.