ಬದುಕು ಎಂದರೆ ಬೊಗಸೆಯೊಳಗಿನ ಹಕ್ಕಿಯಂತೆ!
Team Udayavani, Feb 2, 2018, 2:43 PM IST
ಬದುಕು ನಾವಂದುಕೊಂಡಷ್ಟು ಸುಲಭವೂ ಅಲ್ಲ, ಕಠಿಣವೂ ಅಲ್ಲ. ಇದೊಂದು ಪಾರಿವಾಳದಂತೆ; ಅದು ನಮ್ಮ ಕೈಯಲ್ಲಿರುವ ಹಕ್ಕಿ. ಹಕ್ಕಿಯನ್ನು ಬಲವಾಗಿ ಅಮುಕಿದರೆ ಅದು ಸತ್ತೇ ಹೋಗುತ್ತದೆ, ಹಾಗಂತ ಸ್ವಲ್ಪ ಸಡಿಲ ಬಿಟ್ಟರೆ ಹಾರಿ ಹೋಗಿ ಮತ್ತೆ ನಮ್ಮ ಕೈಗೆ ಬರುವುದೇ ಇಲ್ಲ. ನೋವು-ನಲಿವುಗಳ, ಸಿಹಿ-ಕಹಿಗಳ ಸಂಗಮವಾಗಿರುವ ಜೀವನ ಹಲವು ಬಾರಿ ದುಃಖಗಳ ಸಂತೆ ಎನಿಸುತ್ತದೆ. ಅನಿರೀಕ್ಷಿತವಾದ ಸಾವು- ಅಪಘಾತಗಳು, ಸಾಲ-ಸೋಲುಗಳು ನಮ್ಮ ಬಾಳನ್ನು ಛಿದ್ರಗೊಳಿಸುತ್ತವೆ. ಬದುಕಿನಲ್ಲಿ ಯಾತನೆ ಕಲಿಸುವ ಪಾಠವನ್ನು ಸಂತೋಷ ಕಲಿಸುವುದಿಲ್ಲ. ಹಾಗೆಯೇ ಹೆಚ್ಚಿನ ಸಂದರ್ಭದಲ್ಲಿ ಗಂಡಿಗಿಂತ ಹೆಚ್ಚು ಕಷ್ಟಪಡುವವಳು ಮಾತ್ರ ಹೆಣ್ಣೇ ಆಗಿದ್ದಾಳೆ. ಕೆಲವು ಚಾಣಾಕ್ಷ ಸ್ತ್ರೀಯರು ಎಣಿಕೆಗೂ ಮೀರಿ ಸ್ವಾತಂತ್ರ್ಯ ದಕ್ಕಿಸಿಕೊಂಡರೆ, ಇನ್ನು ಕೆಲವರು ಮಾತ್ರ ಮೇಣದ ಬತ್ತಿಯಂತೆ ತಮ್ಮನ್ನೇ ಸುಟ್ಟುಕೊಂಡು ಸುತ್ತಣ ಸಂಸಾರಕ್ಕೆ ಬೆಳಕನ್ನೀಯುತ್ತಿದ್ದಾರೆ. ನನ್ನ ಗೆಳತಿ ಪೃಥ್ವೀಯ ಜೀವನ ಇದಕ್ಕೊಂದು ಉತ್ತಮ ನಿದರ್ಶನ.
ಮಧ್ಯಮ ವರ್ಗದ ಸಂಪ್ರದಾಯಸ್ಥ ಕುಟುಂಬ. ಜೀವನ ನಿರ್ವಹಣೆಗೆ ಸರಕಾರಿ ಕೆಲಸ. ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವಾಗಲೇ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತರಾಗುತ್ತಿದ್ದ ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದ ಹೆತ್ತವರಿಗೆ ಮಗಳಿಗೆ 23 ಕಳೆದರೂ ಕಂಕಣ ಕೂಡಲಿಲ್ಲ ಎಂಬ ನೋವು ಹಗಲಿರುಳು ಕಾಡತೊಡಗಿತು. ಈ ವರ್ಷ ಮದುವೆ ನಡೆಯದಿದ್ದರೆ ಇನ್ನೈದು ವರ್ಷ ಲಗ್ನ ಇಲ್ಲವೆಂದ ಯಾರೋ ಜ್ಯೋತಿಷಿಗಳ ಮಾತೇ ನಿಜವೆಂದು ನಂಬಿ, ಎಷ್ಟೋ ಪೂಜೆ- ಪುನಸ್ಕಾರಗಳನ್ನು ನಡೆಸಿದರು. ಬಲಿ ಕುರಿಯಂತೆ ತಲೆ ಒಡ್ಡಿದಳು ಪೃಥ್ವೀ. ಎಡೆಬಿಡದ ಸತತ ಪ್ರಯತ್ನದ ಫಲವಾಗಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಸ್ಥನಾದ ಹುಡುಗನೊಂದಿಗೆ ವಿವಾಹ ನಿಶ್ಚಯಿಸುವಲ್ಲಿ ಯಶಸ್ವಿಯಾದರು ಜನ್ಮದಾತರು. ಜನನ ನಮ್ಮ ಆಯ್ಕೆ ಅಲ್ಲದ ಘಟನೆ. ಮರಣ ನಮ್ಮ ಅಧೀನದಲ್ಲಿಲ್ಲದ ಅಂತ್ಯ, ಆದರೆ ಜೀವನ ಮಾತ್ರ ನಾವೇ ರೂಪಿಸಿಕೊಳ್ಳಬಹುದಾದ ಒಂದು ಪಯಣ. ಮದುವೆ ಎನ್ನುವ ಅತೀ ಮುಖ್ಯ ಘಟ್ಟದಲ್ಲಿ ಹುಡುಗನ ಪೂರ್ವಾಪರ ವಿಚಾರಿಸದೆ, ಆತನ ಆಕರ್ಷಕ ಬಾಹ್ಯ ಸೌಂದರ್ಯಕ್ಕೆ ಮನಸೋತು ತೆಗೆದುಕೊಂಡ ಅವಸರದ ನಿರ್ಧಾರ, ಮೊದಲ ತಪ್ಪು ಹೆಜ್ಜೆ ಎಂಬಂತೆ ಆಕೆಯ ಜೀವನಕ್ಕೆ ಮುಳುವಾಯಿತು. ಅತಿ ಮಧುರ ಮಾತು, ವಿನಯದ ನಡವಳಿಕೆ ಆಕೆಯ ಚಿತ್ತವನ್ನು ಬಹುಬೇಗ ಆತನತ್ತ ಸೆಳೆದು ಪ್ರಪಂಚವನ್ನು ಅರಿಯುವ ಮೊದಲೇ ಪ್ರೀತಿಯ ಬಲೆಯಲ್ಲಿ ಬಂಧಿಸಿತು.
ಈ ಪ್ರಪಂಚದಲ್ಲಿ ಮುಖಗಳಿಗಿಂತ ಮುಖವಾಡಗಳಿಗೇ ಬೆಲೆ ಜಾಸ್ತಿ. ಪ್ರೀತಿಯಲ್ಲಿ ಸೆರೆಯಾಗುವ ಎಷ್ಟೋ ಹುಡುಗ-ಹುಡುಗಿಯರಿಗೆ ಮುಖವಾಡದ ಹಿಂದಿನ ಮುಖ ಅರ್ಥವಾಗುವಾಗ ಕಾಲ ಮಿಂಚಿ ಹೋಗಿರುತ್ತದೆ. ಬಾನಿಗೆ ಎಲ್ಲೆ ಇಲ್ಲ, ಪ್ರೀತಿಗೆ ಕಣ್ಣಿಲ್ಲ. ಕಲ್ಲು ಬಂಡೆಯೊಳಗೂ ಪ್ರವೇಶಿಸುವ ಪ್ರೀತಿಯ ಮಾಯೆಯೇ ಅಂತಹದು. ಪ್ರೇಯಸಿಗೆ ಸ್ವಲ್ಪ ತಲೆನೋವಾದರೂ ತನಗೇ ಜ್ವರ ಬಂದವನಂತೆ ನಟಿಸುತ್ತ ಸಮಯದ ಪರಿವೇ ಇಲ್ಲದೆ ಆಕೆಯ ದುಡ್ಡಲ್ಲೇ ಹರಟುತ್ತ ಮೊಬೈಲ್ ಕಂಪೆನಿಯನ್ನು ಉದ್ಧಾರ ಮಡುತ್ತಿದ್ದ. ಪ್ರೀತಿಯ ಭ್ರಮೆಯಲ್ಲಿ ಮುಳುಗಿದ್ದ ಪೃಥ್ವೀಗೆ ಕಣ್ಣೀರು ಬಂದವನಂತೆ ನಟಿಸುವವನ ಹಿಂದಿನ ಹಣದ ವ್ಯಾಮೋಹ, ಮೋಸ ಅರಿಯಲು ಅವಕಾಶವೇ ಸಿಗಲಿಲ್ಲ. ಬದುಕು ಬೆಸೆಯುವ ಹೊಂಗನಸುಗಳ ನಡುವೆ, ತಳಿರು- ತೋರಣಗಳ ಸ್ವಾಗತದಲಿ, ಅರಸಿನ ಕುಂಕುಮದ ಓಕುಳಿಯಲಿ, ಮಂಗಲವಾದ್ಯಗಳ ಝೇಂಕಾರದಲಿ, ಏಳು ಹೆಜ್ಜೆಗಳ ಅನುಬಂಧದಲಿ, ಬದುಕಿನ ಕಾವ್ಯಕ್ಕೆ ಶುಭನುಡಿ ಬರೆಯುವ ಸಂಭ್ರಮದ ಗಳಿಗೆಗೆ ನಾವೆಲ್ಲ ಮೂಕಸಾಕ್ಷಿಗಳಾದೆವು.
ಮದುವೆಯಾಗಿ ಸ್ವಲ್ಪ$ದಿನ ಮೇಲ್ನೋಟಕ್ಕೆ ಸಭ್ಯನಂತೆ ವರ್ತಿಸುತ್ತಿದ್ದವನ ಮುಖವಾಡ ಕಳಚಲು ಹೆಚ್ಚು ಸಮಯ ಬೇಕಾಗಲಿಲ್ಲ. ದುರಾಭ್ಯಾಸಗಳ ಒಡೆಯನಾಗಿ ರಾತ್ರಿ 11ಕ್ಕೆ ಮನೆಗೆ ಬರುತ್ತಿದ್ದವನ ಬೈಗುಳ ಪೆಟ್ಟುಗಳ ಸುರಿಮಳೆಗೆ ದಿನದಿನವೂ ತತ್ತರಿಸತೊಡಗಿದಳು ಪೃಥ್ವೀ. ಹೊಟ್ಟೆಯಲ್ಲಿ ಮಗುವಿದೆಯೆಂಬ ಕನಿಷ್ಠ ಕರುಣೆಯೂ ಇಲ್ಲದೆ ಕುಡಿದ ಮತ್ತಿನಲ್ಲಿ ಕೊಲೆ ಪ್ರಯತ್ನವೂ ನಡೆಸಿದ್ದ. ಹಣವೆನ್ನುವುದು ಉಪ್ಪಿನಂತೆ, ತುಸು ಬಾಯಲ್ಲಿಟ್ಟರೆ ರುಚಿ. ಸ್ವಲ್ಪ ಹೆಚ್ಚಾದರೂ ದಾಹ ತಡೆಯಲಾಗದು. ದುಡ್ಡಿನ ಬೆನ್ನತ್ತಿದವನ ಆಸೆಗೆ ಹಣ ಒಡವೆಗಳೆಲ್ಲಾ ಬ್ಯಾಂಕ್, ಬಾರ್‌ಗಳನ್ನು ಅಲಂಕರಿಸಿದವು. ಬಿಡಿ ಹೂವಿನಂತಿದ್ದ ತನ್ನೆಲ್ಲ ಕನಸುಗಳನ್ನು ಹೆಕ್ಕಿ ಒಗ್ಗೂಡಿಸಿ ಜೋಡಿಸಿ ಪ್ರೀತಿ ಎಂಬ ಮಾಲೆ ಕಟ್ಟಿ ಮುಡಿಗಿಡಬಹುದೆಂದು ಕಂಡ ನೂರಾರು ಕನಸುಗಳು ಅರಳುವ ಮೊದಲೇ ಕಮರಿ ಹೋದವು. ಸದಾ ಮಗಳ ಹಿತವನ್ನೇ ಬಯಸುವ ಹೆತ್ತವರೊಂದಿಗೆ ಒತ್ತೆಯಿಟ್ಟ ಕಣ್ಣೀರನ್ನೆಲ್ಲ ಬಿಕ್ಕಳಿಸಿದರೂ ತೇಪೆ ಹಚ್ಚುವ ಕೆಲಸವಾಯಿತೇ ವಿನಃ ಪ್ರಯೋಜನವಾಗಲಿಲ್ಲ. ಬೇವಿನ ಮರಕ್ಕೆ ಜೇನುತುಪ್ಪವನ್ನೆರೆದರೆ ಅದು ಸಿಹಿಯಾಗುವುದೇ? ಹಾವಿಗೆ ಹಾಲೆರೆದರೆ ಕಚ್ಚುವ ಗುಣ ಮರೆಯುವುದೇ. ಬದಲಾಗದ ಗಂಡನಿಂದ ವಿಚ್ಛೇದನ ಬಯಸಿದರೂ ಸಂಪ್ರದಾಯದ ಅಂಧಕಾರದಲ್ಲಿ ಮುಳುಗಿದ್ದ ಹೆತ್ತವರ ಮರ್ಯಾದೆ, ನೋಡುಗರ ಕೆಟ್ಟ ದೃಷ್ಟಿ, ಸಮಾಜದ ಕಡೆಗಣನೆ ಆತನಿಂದ ದೂರವಾಗಲು ಅಡ್ಡಿಪಡಿಸಿದವು. ಈತನ್ಮಧ್ಯೆ ಕತ್ತಲೆ ಆಗಸದಲ್ಲಿನ ಬೆಳದಿಂಗಳಂತೆ ಮುದ್ದಾದ ಮಗು ಮನೆ-ಮನವನ್ನು ತನ್ಮಯಗೊಳಿಸಿತು. ಆದರೆ ಕ್ಷಣಿಕ ಸುಖ, ಹಣದಲ್ಲಿ ಪ್ರೀತಿ ಅಳೆಯುವ ಮೂರ್ಖನಿಗೆ ಮಗುವಿನ ಅಗತ್ಯವೇ ಇರಲಿಲ್ಲ. ಕಾಲು ಒದ್ದೆಯಾಗದೆ ಸಮುದ್ರ ದಾಟಬಹುದು, ಆದರೆ, ಕಣ್ಣು ಒದ್ದೆಯಾಗದೆ ಜೀವನದ ಸಮುದ್ರ ದಾಟಲಾಗದು. “ನೀ ಹೂವಾದರೆ ನಾ ದುಂಬಿ, ನೀ ದಾರವಾದರೆ ನಾ ಗಾಳಿಪಟ’ ಎನ್ನುತ್ತಿದ್ದ ಆತನ ಮಾತಿನ ಮರ್ಮ ಅರಿಯಲೆತ್ನಿಸಿದಳು ಪೃಥ್ವೀ. ಆತ ಹೂವಿನಿಂದ ಹೂವಿಗೆ ಹಾರುವ ದುಂಬಿಯೇ ಆಗಿದ್ದ. ಆಕೆ ದಾರವಾಗಿ ಗಾಳಿಪಟ ಹಾರಿಸಲಷ್ಟೇ ಸೀಮಿತಳಾಗಿ ಯಾರ ಕಣ್ಣಿಗೂ ಗೋಚರಿಸಲಿಲ್ಲ. ಆಕಳು ತನ್ನ ಹಾಲನ್ನು ತಾನು ಕುಡಿಯುವುದಿಲ್ಲ, ಮರ ತನ್ನ ನೆರಳನ್ನು ತಾನು ಅನುಭವಿಸುವುದಿಲ್ಲ. ಜೀವನವೆಂದರೆ ಬರೀ ನಮಗಾಗಿ ಮಾತ್ರ ಬದುಕುವುದಲ್ಲ. ಬೇರೆಯವರಿಗಾಗಿಯೂ ಬದುಕಲೇಬೇಕಾದ ಇಕ್ಕಟ್ಟಿಗೆ ಸಿಲುಕಿ ಮಗುವಿನ ಉಳಿವಿಗಾಗಿ ಬದುಕಲೆತ್ನಿಸಿದಳು.
ವರ್ಷಗಳುರುಳಿ ನನ್ನ ಮದುವೆಯೂ ನಿಶ್ಚಯವಾಗಿ ಆಮಂತ್ರಣವೀಯಲು ಅವಳ ಮನೆಯತ್ತ ಹೆಜ್ಜೆ ಹಾಕಿದೆ. ಎಲ್ಲೆಲ್ಲೂ ನೀರವ ಮೌನ. ಸದಾ ಹಸನ್ಮುಖೀಯಾದ ಚೂಟಿ ಪೃಥ್ವೀ ಎಲ್ಲೋ ಮರೆಯಾಗಿ ನಿರಾಶಾವಾದಿ ಗೆಳತಿ ಮಾತ್ರ ಕಾಣಸಿಕ್ಕಳು. ಗುರುಹಿರಿಯರ ಆಶೀರ್ವಾದದೊಂದಿಗೆ ಕಾಯಾ-ವಾಚಾ-ಮನಸಾ ಅಗ್ನಿಸಾಕ್ಷಿಯಾಗಿ ಕಟ್ಟಿದ ಆಕೆಯ ಕೊರಳಿನಲ್ಲಿದ್ದ ಮಾಂಗಲ್ಯ ಒಮ್ಮೆಲೆ ಹತ್ತಾರು ಪ್ರಶ್ನೆಗಳ ಬಾಣಗಳನ್ನು ನನ್ನೆಡೆಗೆ ಎಸೆದಂತಾಯಿತು. ಜೇಡರ ಬಲೆಯಲ್ಲಿ ಸಿಕ್ಕ ಕೀಟದಂತೆ ಒಂದು ಕ್ಷಣ ಉತ್ತರ ಕಾಣದೆ ವಿಲವಿಲನೆ ಒದ್ದಾಡಿತು ನನ್ನಂತರಂಗ. ಆಕೆಯೇ ಮೌನ ಮುರಿದು ತನ್ನ ಅಂತರಾಳದಲ್ಲಿ ಹುದುಗಿಸಿಟ್ಟ ಭಾವನೆಗಳನ್ನು ಬಿಚ್ಚಿಟ್ಟು , ಕತ್ತಲೆಯಲ್ಲಿ ನಮ್ಮ ನೆರಳೂ ಕೂಡಾ ನಮ್ಮೊಂದಿಗಿರಲ್ಲ ಎಂದು ಅಳುನುಂಗಿ ನಕ್ಕಳು. ಸಾವರಿಸಿಕೊಂಡು ನಾನೆಂದೆ, “ಕಪ್ಪು$ ಮೋಡ ಮಳೆಯ ಸೂಚಕ, ಕತ್ತಲೆಯ ಆಕಾಶವೇ ಚಂದ್ರನಿಗೆ ಮೆರುಗು. ಗ್ರಹಣಕ್ಕೂ ಕ್ಷಣಿಕವಾದ ಬದುಕು. ಜಾಣಕುರುಡನಿಗೆ ತಿಳಿವಿನ ಬೆಳಕನ್ನೀಯುವುದು ಕಷ್ಟ. ನೋವು- ಚಿಂತೆಗಳಿಗೆ ನಮ್ಮ ಮನಸ್ಸೇ ಕಾರಣ. ಚೈತನ್ಯ ಬುದ್ಧಿಭಾವಗಳೆರಡರ ಸಮನ್ವಯ. ಕಣ್ಣೀರ ಬೆಲೆ ಗೊತ್ತಿಲ್ಲದವನಿಗಾಗಿ ದುಃಖೀಸುವುದು ವ್ಯರ್ಥ’ ಎಂದು ನನ್ನಿಂದಾದಷ್ಟು ಸಮಾಧಾನಪಡಿಸಿ ಮದುವೆಗೆ ಆಹ್ವಾನಿಸಿದೆ.
ನನ್ನ ಮೊಗದಲ್ಲೇಕೆ ಈಗ ನಗು ಕಾಣುತ್ತಿದೆ ಎಂದೆನ್ನ ಕೇಳಬೇಡ…
ಹೃದಯವೆಷ್ಟು ದುಃಖ ಸಹಿಸಬಲ್ಲುದು?
ಅರಿಯಲಾಗದ ಮೌನ…
ನಿಜವಲ್ಲದ ಸುಳ್ಳುಗಳು… ಸುಳ್ಳಾಗಿರುವ ಸತ್ಯಗಳು…
ಸತ್ಯ ಗೆಲ್ಲುವುದೋ? ಸುಳ್ಳು ಜಯಿಸುವುದೋ?
ಕಾಲ ಉತ್ತರಿಸುವುದೋ? ಮೌನ ಮಾತಾಗುವುದೋ? ಎನ್ನುವಂತಿದ್ದ ಆಕೆಯ ಮುಖಕನ್ನಡಿಯ ತಿಳಿಯಲು ಕಷ್ಟವಾಗಲಿಲ್ಲ. ನಾನೇ ಮುಂದುವರಿದು ಜೀವನದ ಕಡಲಿನಲ್ಲಿ ಇಳಿದರೆ ಮುತ್ತು-ರತ್ನ- ಹವಳಗಳು ಸಿಕ್ಕಾವು. ದಂಡೆಯಲ್ಲಿ ಕುಳಿತು ಅರಸಿದರೆ ಮಳಲು ಮಾತ್ರ ಸಿಕ್ಕೀತು. ಕಸ್ತೂರಿ ಮೃಗದಂತೆ ಪರಿಮಳಕ್ಕಾಗಿ ಕಾಡೆಲ್ಲ ಹುಡುಕದೇ, ಕಾಣದ ಕಡಲಿಗೆ ಹಂಬಲಿಸದೇ ನಿನ್ನಂತರಂಗದಲ್ಲಿರುವ ಸಂತಸದ ಕದ ತೆರೆದು ನೋಡು. ದೃಷ್ಟಿಯಂತೆ ಸೃಷ್ಟಿ. ಕಾಲದ ಚಲನೆ ನಿತ್ಯ ನಿರಂತರ. ಎಲ್ಲವನ್ನೂ ಮರೆಯಿಸುವ ಶಕ್ತಿ ಕಾಲಕ್ಕಿದೆ. ಕಾಲಾಯ ತಸ್ಮೈ ನಮಃ- ಮಗುವಿಗೆ ಉತ್ತಮ ಭವಿಷ್ಯ ರೂಪಿಸು, ಈ ಕಣ್ಮಣಿಯೇ ನಿನ್ನ ಸಂತಸವೆಂದು ಹೇಳಿ ಹೊರಡಲನುವಾದೆ.
ವರ್ಷ ಮೂರು ಕಳೆದಿದೆ. ಬರಿಯ ಕಷ್ಟಗಳೇ ತುಂಬಿದ್ದ ನನ್ನ ಬದುಕಿನಲ್ಲೂ ಎಲ್ಲರ ಹಾರೈಕೆ ಆಶೀರ್ವಾದದಿಂದಲೂ ಕಲ್ಪನೆಗೂ ಮೀರಿ ಆನಂದದ ಚಿಲುಮೆ ಮೂಡಿದೆ.
ಭಾವಬಿಂಬ ಅದಾಗಲೇ ಪ್ರತಿಫಲಿಸಿದೆ ಗೆಳತಿ…
ತಪ್ಪು ಅರಸುತ್ತ ಕುಳಿತರೆ, ಚಿಕ್ಕದಾದೀತೇ ಪ್ರೀತಿ?
ಸಾವಿರ ನೋವ ಮರೆಯಿಸುವ ಶಕ್ತಿ ನಿನ್ನಲ್ಲಡಗಿದೆ ನನ್ನರಸಿ…
ಎಸೆಯದಿರು ನಿನ್ನ ಹೂಬಾಣಗಳನ್ನು, ಸಹಿಸಿಕೊಳ್ಳುವ ಸಾಮರ್ಥ್ಯ ಈ ಎದೆಗಿಲ್ಲ, ನನ್ನ ಹೃದಯದ ಮಿಡಿತವೇ ನೀನೆಂದು ಉಸಿರಿನಷ್ಟು ಪ್ರೀತಿಸುವ ಗಂಡ, ಸದಾ ಖುಷಿ ಕೊಡುವ ಮಗುವಿನ ಜೊತೆಯಲ್ಲಿ ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸುವಲ್ಲಿ ತಲ್ಲೀನಳಾಗಿ ಗೆಳತಿಯತ್ತ ಗಮನಹರಿಸುವುದು ಬಹುಶಃ ಸಾಧ್ಯವಾಗಲಿಲ್ಲ. ತಿಂಗಳ ಹಿಂದೊಮ್ಮೆ ದೇವಸ್ಥಾನದಲ್ಲಿ ಯಾರೋ “ಪೃಥ್ವೀ… ಪೃಥ್ವೀ…’ ಎಂದು ಕರೆಯುತ್ತ ಮರೆಯಲ್ಲಿ ನಿಂತಿದ್ದ ಮಗುವಿನೊಂದಿಗೆ ಆಟವಾಡುವ ದೃಶ್ಯ ಗೋಚರಿಸಿತು. ಥಟ್ಟನೆ ಗೆಳತಿಯ ಮುಖ ಮಗುವಿನಲ್ಲಿ ಪ್ರತಿಫಲಿಸಿದಂತೆ ಭಾಸವಾಗಿ ಕೂಡಲೇ ಕರೆ ಮಾಡಿದೆ. ಆಕೆಯ ಸ್ವರದಲ್ಲಿದ್ದ ಏರಿಳಿತ, ನಗು, ಹಾಸ್ಯ, ಸಂತಸ ನನ್ನ ಮನಸ್ಸನ್ನು ತುಸು ಸ್ತಬ್ಧಗೊಳಿಸಿ ಮರುಪ್ರಶ್ನಿಸಿ ಪೃಥ್ವೀಯೇ ಹೌದೆಂಬುದನ್ನು ಖಾತ್ರಿಪಡಿಸಿಕೊಂಡೆ. ಕಟುಕ ಗಂಡನ ಜೊತೆ ಅನುದಿನವೂ ಯಾತನೆ ಪಡುತ್ತಿದ್ದ ನಿರಾಶಾವಾದಿ ಪೃಥ್ವೀ ಈಗ ಅವನಿಂದ ದೂರಾಗಿ ಸ್ವತಂತ್ರ ಬದುಕು ನಡೆಸುವಷ್ಟು ಸಬಲಳಾಗಿದ್ದಾಳೆ. ಮುಗ್ಧ ಮನಸ್ಸಿನ ವಸುಂಧರೆಯ ಮಡಿಲಲ್ಲಿ ನಾನೂ ಮಗುವಾಗಿದ್ದೇನೆ. ಹಸಿವು ತೃಪ್ತಿಯ ಸಂದಿಗ್ಧವಿಲ್ಲದಿದ್ದರೆ ಪ್ರೀತಿಯ ಸೊಲ್ಲು ಹುಟ್ಟುವುದಿಲ್ಲ, ಸಂತಸ ನಮ್ಮ ಮನಮಂದಿರದಲ್ಲಿ ಬೀಸುವ ಸುಗಂಧಭರಿತ ತಂಗಾಳಿಯಂತೆ. ಬಾಹ್ಯವಸ್ತುಗಳಿಂದ ಸಂತಸದ ಉತ್ಪತ್ತಿಯಲ್ಲ, ಅದು ಮಾರಾಟಕ್ಕೆ ಸಿಗುವ ವಸ್ತುವೂ ಅಲ್ಲ. ನಮ್ಮೊಳಗೆ ಉಂಟಾಗುವ ಮಾನಸಿಕ ಸ್ಪಂದನದ ಫಲ. ಸೂರ್ಯಾಸ್ತವಾದೊಡನೆ ಗಾಢಾಂಧಕಾರ, ಎಲ್ಲೆಲ್ಲೂ ದಟ್ಟ ಕಗ್ಗತ್ತಲು ಎಂದು ಗೋಳಿಡುವವನು ನಿರಾಶಾವಾದಿ. ಸೂರ್ಯ ಮುಳುಗಿದರೂ ಬಾನಲ್ಲಿ ಮಿನುಗುವ ನಕ್ಷತ್ರ, ಶಶಿಯನ್ನು ಕಂಡು ಸಮಾಧಾನ ಪಡುವವನು ಆಶಾವಾದಿ ಎಂದು ನೀನಂದಾಡಿದ ಮಾತಿನ ಕಟುಸತ್ಯವನ್ನು ತಿಳಿದು ಖುಷಿಯಿಂದ ಬದುಕುವ ಛಲ ನನ್ನಲ್ಲೂ ಮೂಡಿದೆ ಎಂದು ಪಟಪಟನೆ ಮುತ್ತುಗಳನ್ನುದುರುಸಿದಳು.
ಗದ್ದುಗೆಯಲ್ಲಿ ಕುಳಿತವರೆಲ್ಲ ಸಿದ್ಧರಲ್ಲ
ನೆಲದ ಮೇಲೆ ಕುಳಿತವರೆಲ್ಲ ಪೆದ್ದರಲ್ಲ
ಮೌನವಾಗಿರುವವರೆಲ್ಲ ಮುಗ್ಧರಲ್ಲ
ಮಾತನಾಡುವವರೆಲ್ಲ ಒರಟರಲ್ಲ
ಸತ್ಯವನ್ನು ಸುಳ್ಳಾಗಿಸುವವರೆಲ್ಲ ಜ್ಞಾನಿಗಳಲ್ಲ
ಅಸತ್ಯವನ್ನು ನಂಬುವವರೆಲ್ಲ ಅಜ್ಞಾನಿಗಳಲ್ಲ
ಟೋಪಿ ಹಾಕುವವರೆಲ್ಲ ಬುದ್ಧಿವಂತರಲ್ಲ
ಟೋಪಿ ಹಾಕಿಸಿಕೊಳ್ಳುವವರೆಲ್ಲ ದಡ್ಡರಲ್ಲ
ಬದುಕು ದೊಂಬರಾಟದಂತೆ. ಹಗ್ಗದ ಮೇಲೆ ನಡೆಯುವಾಟದಲ್ಲಿ ಸ್ವಲ್ಪ$ಎಚ್ಚರ ತಪ್ಪಿದರೂ ಅಪಾಯ ಖಂಡಿತ. ತಾಳ್ಮೆಯಿಂದ ಬೀಳದೆ ನಡೆದರೆ ಯಶಸ್ಸು ನಿಶ್ಚಿತ. ಹಾಗೆಯೇ ಮದುವೆಯ ವಿಷಯದಲ್ಲಿ ಅವಸರಿಸದೆ, ತಾಳ್ಮೆಯಿಂದ ಅವಲೋಕಿಸಿ ಸರಿಯಾದ ನಿರ್ಣಯ ತೆಗೆದುಕೊಳ್ಳುವಲ್ಲಿ ಹೆತ್ತವರ ಪಾತ್ರ ಅತೀ ಪ್ರಮುಖವಾದುದು. ಕೈ ಬರಹವನ್ನು ಓದುವ ಜ್ಯೋತಿಷಿಗಳ ಮಾತಿಗೆ ಮರುಳಾಗುವ ಮೊದಲು, ಕೈ ಇಲ್ಲದವರಿಗೂ ಭವಿಷ್ಯವಿದೆಯೆಂಬ ಅಲ್ಪಜ್ಞಾನ ನಮ್ಮಲ್ಲಿರಬೇಕು. ಬಾಹ್ಯ ಸೌಂದರ್ಯದಿಂದ ಕ್ಷಣಿಕ ಸುಖ ಮಾತ್ರ ಸಾಧ್ಯ. ಅಂತರಂಗ ಶುದ್ಧಿಯಾದ ಪ್ರೀತಿ ಕೊನೆಯವರೆಗೂ ನಮ್ಮೊಂದಿಗಿರುತ್ತದೆ. ನಿಜವಾದ ಪ್ರೀತಿಗೆ ಹಣ, ಸೌಂದರ್ಯದ ಅಗತ್ಯವಿಲ್ಲ. ಪ್ರಾಮಾಣಿಕ ಭಾವನೆಗಳಷ್ಟೇ ಸಾಕು.
ದೇವಸ್ಥಾನದ ಹೊರಗಿನಿಂದ ಬೀಸುತ್ತಿದ್ದ ತಣ್ಣನೆಯ ಗಾಳಿಯಿಂದ ದೇಹ ತಂಪಾಯಿತೇ ವಿನಾ ಮನಸ್ಸು ಮಾತ್ರ ಪ್ರಪಂಚದಲ್ಲಿನ ಮೂರ್ಖರನ್ನು ನೆನೆದು ಕುದಿಯುತ್ತಿತ್ತು. ಪೃಥ್ವೀಯಲ್ಲಿ ಮೂಡಿದ ಆತ್ಮವಿಶ್ವಾಸ, ದೃಢನಿರ್ಧಾರ ಬದುಕಿನ ಬಗೆಗಿನ ಆಶಾವಾದ ಇವೆಲ್ಲ ನನಗೆ ಖುಷಿ ಕೊಟ್ಟರೂ ಆಕೆ ತನಗೆ ಹಾಗೂ ತನ್ನ ಕಂದನಿಗಾದ ಅನ್ಯಾಯಕ್ಕಾಗಿ ಮನದ ಮೂಲೆಯಲ್ಲಿ ಕೊರಗದೆ ಇರಲಾರಳೇ ಎಂಬ ನೋವು ಪದೇ ಪದೇ ನನ್ನನ್ನು ಕಾಡುತ್ತಿದೆ. ಅಸಹಾಯಕ ಹೆಣ್ಣಿನ ಅಂತರಂಗವನ್ನು ಅರ್ಥೈಸಿಕೊಳ್ಳಲಾದೀತೆ?
ಸುಮತಿ ಎಂ. ಹೆಮ್ಮಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.