ಅವರೂ ಇಷ್ಟ ಅವರ ವೃತ್ತಿಯೂ ನಂಗಿಷ್ಟ
Team Udayavani, Jan 24, 2020, 6:26 AM IST
“ನಮ್ ಕುಂದಾಪ್ರ ಹುಡ್ಗ ಬೆಂಗ್ಳೂರಲ್ಲಿ ಇದ್ರೆಂತಾಯಿತ್, ಅವ ಇಲ್ಲಿಯವನೇ ಅಲ್ದಾ …’ ಅನ್ನೋ ಅಕ್ಕರೆಯಲ್ಲಿ ಚಲನಚಿತ್ರ ನಿರ್ದೆಶಕ ರಿಷಭ್ ಶೆಟ್ಟಿ ಅವರ ಮನೆಯನ್ನು ಹುಡುಕಿಕೊಂಡು ಬೆಂಗಳೂರಿನ ರಾಜರಾಜೇಶ್ವರಿ ನಗರದ “ಮಂತ್ರಿ ಆಲ್ಟನೀ’ಗೆ ಹೋದರೆ ಅಲ್ಲಿ ರಿಷಭ್ ಶೆಟ್ಟಿ ಇರಲಿಲ್ಲ.
“”ಅವ್ರೆಲ್ಲಿ ಮನೆಯಲ್ಲಿ ಇರ್ತಾರೆ. ಇಪ್ಪತ್ನಾಲ್ಕು ಗಂಟೆಯೂ ಕೆಲಸದ ಗುಂಗಲ್ಲೇ ಇರೋರು. ನಿನ್ನೆಯಷ್ಟೇ ಮೈಸೂರಿಗೆ ಹೋಗಿದ್ದಾರೆ” ಎನ್ನುತ್ತ ರಿಷಭ್ ಪತ್ನಿ , ಪ್ರಗತಿ ಶೆಟ್ಟಿ ಸ್ವಾಗತಿಸಿದರು.
ಪುಟಾಣಿ ರಣ್ವಿತ್ ಜೊತೆ ಆಟವಾಡುತ್ತಿದ್ದ ಪ್ರಗತಿ ಶೆಟ್ಟಿ ಹಸನ್ಮುಖೀ. “ತೆರೆಯ ಮೇಲೆ ಹೀರೋ ಆಗಿಯೂ ಮಿಂಚುವ, ವಿಲನ್ ಆದರೂ ಅಭಿಮಾನಿಗಳನ್ನು ಸಂಪಾದಿಸುವ ರಿಷಭ್‌ಗೆ ನೀವೇ ಸ್ಫೂರ್ತಿ ಅಲ್ವಾ. ಆದ್ದರಿಂದ ನಿಮ್ಮ ಬಳಿಯೇ ಮಾತನಾಡುವುದಕ್ಕೆ ಬಂದೆವು’ ಎನ್ನುವಾಗ ನಾಚಿಕೊಂಡ ಪ್ರಗತಿ, ಪತಿಯ ಬಗ್ಗೆ ನಿರರ್ಗಳವಾಗಿ ಮಾತನಾಡಿದರು.
ನಾನು ಬಾಲ್ಯ ಕಳೆದಿದ್ದು ತೀರ್ಥಹಳ್ಳಿಯಲ್ಲಿ. ಕಾಲೇಜು ಓದಿದ್ದು ಶಿವಮೊಗ್ಗದಲ್ಲಿ. ನಾವು ಮೂಲತಃ ಮಂದಾರ್ತಿಯವರಾದ್ರೂ ಅಪ್ಪ ಪ್ರಕಾಶ್ ಶೆಟ್ಟಿ ತೀರ್ಥಹಳ್ಳಿಗೆ ಹೋಗಿ ನೆಲೆಸಿದ್ದರು. ನಾನು ಕಾಲೇಜು ದಿನಗಳಲ್ಲಿ ಗೆಳತಿಯರೊಂದಿಗೆ ಆರಾಮವಾಗಿ ಸಿನಿಮಾ ನೋಡಲು ಥಿಯೇಟರ್‌ಗೆ ಹೋಗುವಾಗ ಈ ಸಿನಿಮಾ ಲೋಕ ಎಷ್ಟೊಂದು ಚೆಂದವಿದೆ ಅನಿಸುತ್ತಿತ್ತು. ಈ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದೂ ಅನಿಸುತ್ತಿತ್ತು. ಹಾಗಂತ ಫ್ಯಾಷನ್ ಡಿಸೈನಿಂಗ್ ಕಲಿಯುತ್ತೇನೆ ಎಂದರೆ ಮನೆಯಲ್ಲಿ ಅಪ್ಪ ಅಮ್ಮ “ಅದೆಲ್ಲಾ ಬೇಡ’ ಎಂದು ಹೇಳುತ್ತಿದ್ದರು. ಓದು ಮುಗಿದು ನಾನು ವಿಪ್ರೋ ಕಂಪೆನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುವಾಗ ಎಚ್.ಆರ್. ವಿಭಾಗದಲ್ಲಿ ರಿಷಭ್ ಶೆಟ್ಟಿ ಅವರ ಅಕ್ಕ ಪ್ರತಿಭಾ ಕೆಲಸ ಮಾಡುತ್ತಿದ್ದರು. ನನಗೆ ಸಿನಿಮಾ ಕ್ಷೇತ್ರ ಇಷ್ಟವೆಂಬುದು ಅವರಿಗೂ ಗೊತ್ತಿತ್ತು. ಆ ಬಳಿಕ ನಾನು ಐಬಿಎಂ ಕಂಪೆನಿ ಸೇರಿದೆ. ಅದೇ ಹೊತ್ತಿನಲ್ಲಿ ರಿಕ್ಕಿ ಸಿನಿಮಾ ಬಿಡುಗಡೆ ಆಯಿತು. ಬಿಡುಗಡೆ ಸಮಾರಂಭಕ್ಕೆ ಹೋದಾಗ, ನನ್ನ ಸ್ನೇಹಿತೆಯರೇ ರಿಷಭ್ ಜೊತೆ ಮಾತನಾಡುತ್ತ, “ಇವಳಿಗೂ ಆಡಿಷನ್‌ಗೆ ಚಾನ್ಸ್ ಕೊಡಿ’ ಎಂದು ಕೇಳಿದ್ದರು. ಆಗ ಅವರಿಗೆ ಮನೆಯಲ್ಲಿ ಹುಡುಗಿ ಹುಡುಕುತ್ತಿದ್ದರಂತೆ. ಇವರು ಆಡಿಷನ್‌ನಲ್ಲಿ ನನಗೆ ಚಾನ್ಸ್ ಕೊಡಿಸುವ ಬದಲು, ನನ್ನ ಬಗ್ಗೆ ಅವರ ಅಕ್ಕ ಪ್ರತಿಭಾ ಬಳಿ ಹೇಳಿಕೊಂಡಿದ್ದಾರೆ. ಆಮೇಲೆ ಅಕ್ಕನೇ ನನ್ನ ಬಗ್ಗೆ ವಿಚಾರಿಸಿ ಈ ಮದುವೆ ನಡೆಯುವಂತೆ ಮಾಡಿದರು.
ಮದುವೆಯಾದ ಮೇಲೆಯೇ ನನಗೆ ಸಿನಿಮಾ ಲೋಕ ವಾಸ್ತವ ಏನು ಅಂತ ಗೊತ್ತಾಗಿದ್ದು. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವೈಯಕ್ತಿಕ ಸಮಯವೆಂಬುದೇ ಇರುವುದಿಲ್ಲ. ಕಂಪೆನಿಯಲ್ಲಿ ಕೆಲಸ ಮಾಡುವಾಗ “ರಜೆ’ ಹಾಕುವ ಅವಕಾಶ ಇರುತ್ತದೆ. ಆದರೆ, ಇಲ್ಲಿ ಹಾಗಲ್ಲ. ಟೀಮ್‌ವರ್ಕ್ ಆದ್ದರಿಂದ ಎಲ್ಲರ ಸಮಯವನ್ನು ಗೌರವಿಸ ಬೇಕಾಗುತ್ತದೆ.
ಕಿರಿಕ್ ಪಾರ್ಟಿ ಸಿನಿಮಾವನ್ನು ಅಮೆರಿಕದಲ್ಲಿ ಬಿಡುಗಡೆ ಮಾಡುವ ಕಾರ್ಯಕ್ರಮವಿತ್ತು. ಅದೇ ಪ್ರವಾಸವನ್ನು ಸ್ವಲ್ಪ ವಿಸ್ತರಿಸಿ ಅಮೆರಿಕದಲ್ಲಿ 10 ದಿನ ಹನಿಮೂನ್ ಅಂತ ಸುತ್ತಾಡಿದೆವು. ಆಗಷ್ಟೇ ಕಿರಿಕ್ ಪಾರ್ಟಿ ಯಶಸ್ಸು ಕಂಡಿದ್ದರೂ ಈ ರಿಷಭ್ ವಿಮಾನದಲ್ಲಿ ನನ್ನೊಡನೆ ಕುಳಿತುಕೊಂಡು, “ಯಾಕೋ ನಾನೊಬ್ಬ ಕೆಲಸವಿಲ್ಲದ ಪೋರನಂತೆ ಅನಿಸ್ತಿದೆ ಮಾರಾಯ್ತಿ’ ಅಂತ ಹೇಳುತ್ತಿದ್ದರು. ನನಗೋ ಅಚ್ಚರಿ ! ಇಲ್ಲಿ ವಿಮಾನ ಇಳಿಯುತ್ತಿದ್ದಂತೆಯೇ ಕಿವಿಗೆ ಫೋನ್ ಅಂಟಿಸಿಕೊಂಡು ಕೆಲಸ ಶುರು ಮಾಡಿಯೇ ಬಿಟ್ಟರು. ಸಿನಿಮಾ ಶೂಟಿಂಗ್ ಇದ್ದಾಗ ಮುಂಜಾನೆ ಆರು ಗಂಟೆಗೇ ಎದ್ದು ಸೆಟ್‌ಗೆ ಹೋಗಿ ಕುಳಿತುಬಿಡುತ್ತಾರೆ. ಹೇಳಿದ ತಕ್ಷಣ ಫಟಾಫಟ್ ಕೆಲಸ ಆಗಬೇಕು ಅವರಿಗೆ. ಸೆಟ್‌ನಲ್ಲಿ ಕೆಲಸ ನಿಧಾನವಾದರೆ ರೇಗಿಬಿಡುತ್ತಾರೆ. ಆದರೆ ಮನೆಯಲ್ಲಿ ಅದಕ್ಕೆ “ಉಲ್ಟಾ ‘ ಎಂಬಂತೆ ಇರುತ್ತಾರೆ. ಮನೆಯವರೊಡನೆ ಬಹಳ ಕಡಿಮೆ ಸಮಯ ಸಿಗುವುದರಿಂದ ಅವರಿಗೆ ಅದರ ಮಹತ್ವ ಗೊತ್ತಿದೆ ಅನಿಸುತ್ತದೆ. ಈಗ ಮಗ ರಣ್ವಿತ್ ಜೊತೆ ಸಮಯ ಕಳೆಯುವುದೆಂದರೆ ಅವರಿಗೆ ತುಂಬ ಖುಷಿ.
ಮದುವೆಯಾದ ಹೊಸದರಲ್ಲಿ ನಾನು ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ಕಂಪೆನಿಯಲ್ಲಿ ಅಮೆರಿಕದ ಗ್ರಾಹಕರು ಹೆಚ್ಚಿದ್ದುದರಿಂದ ರಾತ್ರಿ ಪಾಳಿ ಇತ್ತು. ರಿಷಭ್ ಜೊತೆ ಇರಲು ಸಮಯವೇ ಸಿಗುತ್ತಿರಲಿಲ್ಲ. ಅಷ್ಟೇ ಅಲ್ಲ, ನನ್ನಿಷ್ಟದ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಬೇಕು ಅಂತ ಆಸೆಯಾಗುತ್ತಿತ್ತು. ಈ ಬಗ್ಗೆ ರಿಷಭ್‌ಗೆ ಹೇಳಿದಾಗ ಕೋರ್ಸ್ ಕಲಿಯುವಂತೆ ಪ್ರೋತ್ಸಾಹಿಸಿದರು. “ಮಿಫ್ಟ್’ ನಲ್ಲಿ ಕೋರ್ಸ್ ಮುಗಿಸಿ ಈಗ ನಾನು ರಿಷಭ್ ಚಿತ್ರಗಳಿಗೇ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದೇನೆ. ಇಷ್ಟದವರೊಂದಿಗೆ ಇಷ್ಟದ ಕೆಲಸ ಮಾಡುವುದು ನಿಜಕ್ಕೂ ಬಹಳ ಖುಷಿ.
ನಂಗೆ ಅವರ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತುಂಬಾ ಇಷ್ಟ. ಯಾಕೆಂದರೆ, ಆ ಚಿತ್ರಕ್ಕಾಗಿ ನಾವಿಬ್ಬರೂ ಒಟ್ಟಾಗಿ ಎರಡು ವರ್ಷ ಕೆಲಸ ಮಾಡಿದೆವು. ಅದೇ ಸಂದರ್ಭದಲ್ಲಿ ರಿಷಭ್ ಶೆಟ್ಟಿ ಫಿಲ್ಮ್ಸ್ ಎಂಬ ಪ್ರೊಡಕ್ಷನ್ ಹೌಸ್ ಆರಂಭವಾಯಿತು. ಆಡಿಯೋ ಕಂಪೆನಿಯೂ ಆರಂಭವಾಯಿತು. ಆ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯೂ ಬಂತು.
ಎಲ್ಲರೂ ಕೇಳುತ್ತಾರೆ, ಹೀರೋ ಗಂಡನೊಡನೆ ಜೀವನ ಮಾಡುವಾಗ ಜಗಳಗಳು ಜಾಸ್ತಿ ಅಲ್ವಾ ಅಂತ. ಆದರೆ, ನನಗೆ ಅಂತಹ ಪೊಸೆಸಿವ್‌ನೆಸ್ ಇಲ್ಲ. ನಿಜ ಹೇಳಬೇಕೆಂದರೆ ತೆರೆಯ ಹಿಂದೆ ಇದೊಂದು ನಿರಂತರ ಶ್ರಮ ಬಯಸುವ ಕೆಲಸ. ರಿಷಭ್ ಮನಸ್ಸು ನಂಗೊತ್ತು. ಯಾಕೆಂದರೆ ಅವರ ಮನಸ್ಸನ್ನು ಕೆಲಸದಿಂದ ವಿಮುಖಗೊಳಿಸುವುದು ಸಾಧ್ಯವೇ ಇಲ್ಲ. ಅಷ್ಟು ಬ್ಯುಸಿ ಇರುವ ಅವರ ಬಾಳಿನಲ್ಲಿ ನಾನು ಬಂದ ಮೇಲೆ ಅವರ ಕೌಟುಂಬಿಕ ಕಾರ್ಯಕ್ರಮಗಳಿಗೆಲ್ಲ ನಾನೇ ಪ್ರತಿನಿಧಿಯಂತೆ ಹೋಗುತ್ತಿದ್ದೇನೆ. ಕುಂದಾಪುರದ ಕೆರಾಡಿ ಎಂಬಲ್ಲಿ ಅವರ ಮನೆಯಿದೆ. ಅತ್ತೆ ರತ್ನಾವತಿ ಯಾವಾಗಲೂ ಹೇಳುತ್ತಿರುತ್ತಾರೆ, “ನೀನು ಬಂದ ಮೇಲೆ ಇವ ಆಗಾಗ ಊರಿಗೆ ಬತ್ತಿದ್ದ’ ಅಂತ. ನಮ್ಮ ಮನೆಯಲ್ಲಿಯೇ ನವರಾತ್ರಿ ಪೂಜೆ ಇರುತ್ತದೆ. ಮನೆಯ ಭೂತಕ್ಕೆ ಕೋಲ ಇದ್ದಾಗಲೂ ಊರಿಗೆ ಹೋಗುತ್ತೇವೆ. ಊರಿಗೆ ಹೋದಾಗ ರಿಷಭ್ ಫೋನಿಂದ ದೂರ ಇರ್ತಾರೆ. ಆಗೆಲ್ಲ ಅತ್ತೆ, ಮಾವ ಭಾಸ್ಕರ್ ಶೆಟ್ಟಿ , ಭಾವ ಪ್ರವೀಣ್, ಅತ್ತಿಗೆ ಸುಚಿತ್ರ ಜೊತೆ ಸಮಯ ಕಳೆಯುವುದು ಬಹಳ ಚೆನ್ನಾಗಿರುತ್ತದೆ. ಬಂಗುಡೆ ಅಂದರೆ ಅವರಿಗೆ ಪಂಚಪ್ರಾಣ. ನಂಗೆ ಏಡಿ ಮತ್ತು ಸಿಗಡಿಯಿಂದ ಮಾಡಿದ ಅಡುಗೆ ಅಂದ್ರೆ ಇಷ್ಟ. ಈಗ ಅವರಿಗೂ ಸಮುದ್ರಜೀವಿಗಳ ಅಡುಗೆ ರುಚಿಯೆನಿಸುತ್ತಿದೆ.
ನಮ್ಮ ಕುಟುಂಬದಲ್ಲಿ ಕಾರ್ಯಕ್ರಮಗಳಿಗೆ ಆಮಂತ್ರಿಸುವಾಗ ಸಂಬಂಧಿಕರು, “ಅವನು ಬ್ಯುಸಿ ಇರ್ತಾನೆ, ನೀನು ಬಂದು ಬಿಡಮ್ಮಾ’ ಎನ್ನುತ್ತಾರೆ. ಅಪರೂಪಕ್ಕೆ ರಿಷಭ್, ಎಲ್ಲಾದರೂ ಹೋಗುವ ಬಗ್ಗೆ, “ನೀನೇ ಪ್ಲಾನ್ ಮಾಡು’ ಎನ್ನುತ್ತಾರೆ. ನಾನು ಅವರ ಸಮಯ ನೋಡಿಕೊಂಡು ಏನಾದರೂ ಕಾರ್ಯಕ್ರಮ ಹಾಕ್ಕೊಂಡರೆ ಅವರು ಬರುವುದೇ ಇಲ್ಲ. ಆಗ ನಂಗೆ ಸಿಟ್ಟು ನೆತ್ತಿಗೇರುತ್ತದೆ. ನೀವು ಪ್ಲಾನ್ ಮಾಡುದೂ ಇಲ್ಲ, ನನ್ನ ಪ್ಲಾನ್ ಅನುಸರಿಸುವುದೂ ಇಲ್ಲ’ ಎಂದು ಮಾತು ಶುರು ಮಾಡುತ್ತೇನೆ. ನಮ್ಮ ನಡುವಿನ ಭಾರೀ ದೊಡ್ಡ ಕದನವೆಂದರೆ ಇದೇ. ಸಮಯ ಹೊಂದಾಣಿಕೆ. ಮತ್ತೆ ಅವರು ಒದ್ದೆ ಟವೆಲ್ ಬೆಡ್ ಮೇಲೆ ಹಾಕುವುದಕ್ಕೆ ಈ ಹಿಂದೆ ಜಗಳ ಆಗ್ತಿತ್ತು. ಈಗ ಅದೆಲ್ಲ ಅಭ್ಯಾಸವಾಗಿಬಿಟ್ಟಿದೆ.
ನಾನು ತೀರ್ಥಹಳ್ಳಿ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ವಾಸವಿದ್ದುದರಿಂದ ಕುಂದಾಪುರ ಕನ್ನಡ ನನಗೆ ನಿರರ್ಗಳವಾಗಿ ಮಾತನಾಡಲು ಬರುವುದಿಲ್ಲ. ಆದರೆ, ರಿಷಭ್‌ಗೆ ಕುಂದಾಪುರ ಕನ್ನಡ ಇಷ್ಟ. ಮಗನ, ಜೊತೆ ನನ್ನ ಜೊತೆ ಅದೇ ಭಾಷೆ ಮಾನಾಡುತ್ತಾರೆ.
ಉಳಿದವರು ಕಂಡಂತೆ ಚಿತ್ರದಲ್ಲಿ ಅವರು ಖಳನಾಯಕನ ಪಾತ್ರ ಮಾಡಿದ್ದರು. ಆಗಿನ್ನೂ ಮದುವೆಯಾಗಿರಲಿಲ್ಲ. ನಾನು ಆ ಚಿತ್ರ ನೋಡಿದ್ದೆ. “ಖಳನಾಯಕನ ಪಾತ್ರವನ್ನೂ ಇಷ್ಟು ಆಕರ್ಷಕವಾಗಿ ಮಾಡಬಹುದಾ…’ ಅಂತ ನಾನು ಮನಸ್ಸಿನಲ್ಲಿಯೇ ಅಂದುಕೊಂಡಿದ್ದೆ. ಬೆಲ್‌ಬಾಟಂ ಚಿತ್ರದಲ್ಲಿ ಅವರು ಹೀರೋ ಆಗಿಯೂ ವಿಭಿನ್ನವಾಗಿ ನಟಿಸ್ತಾರಲ್ಲಾ ಅಂತ ಅನಿಸಿತ್ತು. ಡಾ. ರಾಜ್‌ಕುಮಾರ್ ಎಂದರೆ ಅವರಿಗೆ ಅಚ್ಚುಮೆಚ್ಚು. ಅವರ ಚಿತ್ರಗಳನ್ನೆಲ್ಲ ಒಟ್ಟಾಗಿ ಕುಳಿತು ನೋಡಿದ್ದೇವೆ. ರಿಷಭ್ ಇದ್ರೆ ಜೀವನ ವೇಗವಾಗಿ ಓಡುತ್ತಿರುವಂತೆ ಅನಿಸುತ್ತದೆ. ಈಗ ಮಗನ ಹೆಜ್ಜೆಗಳೂ ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ.
ಸೀರೆ ಅವರಿಗಿಷ್ಟ
ರಿಷಭ್‌ಗೆ ಭಾರತೀಯ ಉಡುಗೆ ಎಂದರೆ ಇಷ್ಟ. ನಾನು ಸೀರೆ ಉಟ್ಟರೆ ಬಹಳ ಸಂಭ್ರಮ ಪಡುತ್ತಾರೆ. ನನಗೂ ಅಷ್ಟೇ, ಸೀರೆ ಉಟ್ಕೊಂಡು ಅವರೊಡನೆ ಹೊರಗೆ ಹೋಗುವುದೆಂದರೆ ಬಹಳ ಖುಷಿಯಾಗುತ್ತದೆ. ಈ ರಿಷಭ್ ಸದಾ ಬ್ಯುಸಿ ಬ್ಯುಸಿ. ಸದಾ ಕೆಲಸವನ್ನೇ ಪ್ರೀತಿಸುವ ಅವರನ್ನು ನೋಡುವುದು ನನಗೂ ಇಷ್ಟವೇ. ಅದಕ್ಕೇ ತಾನೇ ಐಟಿ ಕೆಲಸ ಬಿಟ್ಟು ಅವರಿಷ್ಟ ಪಡುವ ಕೆಲಸವನ್ನೇ ನನ್ನ ವೃತ್ತಿ ಮಾಡಿಕೊಂಡದ್ದು !
– ಪ್ರಗತಿ ರಿಷಭ್ ಶೆಟ್ಟಿ
ಪ್ರಗತಿ ರಿಷಭ್ ಶೆಟ್ಟಿ
ನಿರೂಪಣೆ: ಟೀಂ ಮಹಿಳಾ ಸಂಪದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.