ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ
Team Udayavani, Mar 20, 2020, 5:15 AM IST
ಉಡುಪಿಯ ಆಸುಪಾಸಿನಲ್ಲಿ ಯಾವುದೇ ನೃತ್ಯ-ನಾಟಕವಿರಲಿ “ಬಾಷಾ’ಅವರ ವೇಷಭೂಷಣವೇ ಬೇಕು. “ಬಾಷಾ ಡ್ರೆಸ್ಸ್’ಗೆ ಒಂದು ಪರಂಪರೆಯೇ ಇದೆ. ಆ ಪರಂಪರೆಯನ್ನು ಸುಹೈಲ್ ಸಮರ್ಥವಾಗಿ ಮುಂದುವರಿಸುತ್ತಿದ್ದಾರೆ. ಒಂದು ಬನಿಯನ್, ಹಾಫ್ಫ್ಯಾಂಟ್ ಹಾಕಿಕೊಂಡು ಊರು ತಿರುಗುವ ಸುಹೈಲ್ ಅವರ ನಡೆ-ನುಡಿ ಎರಡೂ ನೇರ ಮತ್ತು ಸರಳ. ಯಾವಾಗಲೂ ಬಣ್ಣಬಣ್ಣದ ವೇಷಭೂಷಣಗಳ ನಡುವೆಯೇ ಮುಳುಗಿರುವ ಸುಹೈಲ್ ಮತ್ತು ಅವರ ಜೀವನ ಸಂಗಾತಿ ನೂರ್‌ಜಾನ್ ಅವರನ್ನು ಮಾತನಾಡಿಸಲು ಬನ್ನಂಜೆಯಲ್ಲಿರುವ ಅವರ ಮನೆಗೆ ಹೋಗಿದ್ದೆವು. ಬನ್ನಂಜೆಯ ದೊಡ್ಡ ಕಟ್ಟಡದಲ್ಲಿ ಬಹುಭಾಗದಲ್ಲಿ ವೇಷಭೂಷಣಗಳು ತುಂಬಿದ್ದರೆ ಒಂದು ಪಾರ್ಶ್ವದಲ್ಲಿ ಅವರ ಮನೆ. ಬಾಗಿಲಲ್ಲಿಯೇ ನೂರ್‌ಜಾನ್ ನಮ್ಮನ್ನು ಸ್ವಾಗತಿಸುತ್ತ ಹರಟೆಯಲ್ಲಿ ತೊಡಗಿದರು…
ಉಡುಪಿ ಸಾಂಸ್ಕೃತಿಕವಾಗಿ ಎಷ್ಟೊಂದು ಶ್ರೀಮಂತವಾಗಿದೆ. ಭದ್ರಾವತಿಯಲ್ಲಿ ಹುಟ್ಟಿ ಬೆಳೆದ ನಾನು ಈ ಊರಿಗೆ ಬಂದಾಗ ಈ ಊರಿನ ರೀತಿ-ರಿವಾಜುಗಳನ್ನು ನೋಡಿ ಅಚ್ಚರಿಯಾಯಿತು. ಮನುಷ್ಯತ್ವವನ್ನಷ್ಟೇ ನಂಬುವ ಇವರ ಸ್ವಭಾವವನ್ನು ಆರ್ಥಮಾಡಿಕೊಳ್ಳುವುದಕ್ಕೆ ಸ್ವಲ್ಪ ಸಮಯವೇ ಹಿಡಿಯಿತು.
ಅಂದ ಹಾಗೆ ಇವರು ಯಾವುದೇ ಜಾತಿ, ವರ್ಣ ಅಥವಾ ಧರ್ಮದ ಬಗ್ಗೆ ನಂಬಿಕೆ ಇರಿಸಿಕೊಂಡಿಲ್ಲ. ಯಾವಾಗಲೂ ಒಂದು ಮಾತು ಹೇಳುತ್ತಾರೆ: ಕಲಬೆರಕೆಯಿಲ್ಲದ ಶುದ್ಧ ಮನುಷ್ಯತ್ವವನ್ನು ಬೆಳೆಸಿಕೊಳ್ಳುವುದು ಮುಖ್ಯ. ಇವರೋ ಈ ಮಾತನ್ನು ಒಂದು ಸಾಲಿನಲ್ಲಿ ಹೇಳಬಹುದು. ಆದರೆ, ಹಾಗೆ ಬದುಕುವುದು ಸುಲಭವಲ್ಲ. ಈ ನಂಬಿಕೆಗೆ ಪೂರಕವಾಗಿ ಇವರು “ಕಾಯಕವೇ ಕೈಲಾಸ’ ಎಂಬ ಮಾತನ್ನು ಬಹುವಾಗಿ ನಂಬುತ್ತಾರೆ. ನಾವು ಮಾಡುವ ಕೆಲಸವೇ ದೇವರು. ಅದರಲ್ಲಿರುವ ಪ್ರಾಮಾಣಿಕತೆ, ಬದ್ಧತೆಗಿಂತ ದೊಡ್ಡ ದೇವರಿಲ್ಲ ಎಂದು ಹೇಳುತ್ತಾರೆ. ಹಾಗಾಗಿ ಇವರು ಆಚರಣೆಗಳ ಗೊಡವೆಗೇ ಹೋಗುವುದಿಲ್ಲ.
ಹಾಗಂತ ಯಾವುದೇ ಧರ್ಮ, ಮತಗಳ ಕುರಿತು ಉಡಾಫೆ ಧೋರಣೆಯನ್ನೂ ಹೊಂದಿದವರಲ್ಲ. ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್, ಜೈನ, ಬೌದ್ಧ ಧರ್ಮದ ಕುರಿತು ಅನೇಕ ಪುಸ್ತಕಗಳನ್ನು ಓದಿಕೊಂಡಿದ್ದಾರೆ. ಅವುಗಳ ಸಾರವನ್ನು ಸಂಗ್ರಹಿಸಿ ಹೇಳಬಲ್ಲರು. ದೇಶಸುತ್ತು, ಕೋಶ ಓದು ಎಂಬ ಗಾದೆ ಇವರಿಗೆ ಅನ್ವರ್ಥವಾಗಿದೆ. ವಾಸ್ತುಶಿಲ್ಪವನ್ನು, ಪ್ರಕೃತಿಯನ್ನು ಇವರು ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ದೇಶ, ವಿದೇಶಗಳನ್ನು ತುಂಬ ಆಸಕ್ತಿಯಿಂದ ಸುತ್ತಾಡಿದ್ದಾರೆ. ಹಿಂದೆಲ್ಲ ಕುತ್ತಿಗೆಗೆ ಒಂದು ಕ್ಯಾಮೆರಾ ನೇತು ಹಾಕಿಕೊಂಡು ತುಂಬಾ ಫೋಟೋ ತೆಗೆದಿದ್ದಾರೆ. ಭಾರತದ ವಿವಿಧ ದೇವಸ್ಥಾನಗಳು, ಮಂದಿರ-ಮಸೀದಿಗಳನ್ನು ಸಂದರ್ಶಿಸಿ ಅಲ್ಲಿನ ವಾಸ್ತುಶಿಲ್ಪವನ್ನು ಗಮನಿಸಿದ್ದಾರೆ. ಫೋಟೋಗಳನ್ನು ತೆಗೆದುಕೊಂಡು, ಅವುಗಳ ಬಗ್ಗೆ ಮತ್ತಷ್ಟು ಓದುತ್ತ ಕಳೆದುಹೋಗುವುದು ಅವರಿಗಿಷ್ಟ. ಚೀನಾ, ದುಬೈ, ರಷ್ಯಾ ದೇಶಗಳಲ್ಲಿಯೂ ಇದೇ ಮಾದರಿಯಲ್ಲಿ ಓಡಾಟ ಮಾಡಿ, ಕುತೂಹಲದಿಂದ ಗಮನಿಸಿದ್ದಾರೆ.
ಹಾಗೆ ಅವರ ಎಲ್ಲ ತಿರುಗಾಟಗಳಲ್ಲಿ ನಾನು ಜೊತೆಯಾದವಳಲ್ಲ. ಆದರೆ ನಾವು ಹನಿಮೂನ್‌ಗೆ ಕಾಶ್ಮೀರಕ್ಕೆ ಹೋಗಿದ್ದೆವು. ಆ ಟ್ರಿಪ್ ಇಬ್ಬರಿಗೂ ತುಂಬ ಇಷ್ಟವಾಗಿತ್ತು. 2000ನೇ ಇಸವಿಯಲ್ಲಿ ನಮ್ಮ ಮದುವೆಯಾಗಿ, ಬಹಳ ದಿನಗಳ ಬಳಿಕ ನಾವು ಕಾಶ್ಮೀರಕ್ಕೆ ಹೋದೆವು. ಅಲ್ಲಿನ ಪ್ರಕೃತಿ ಸೌಂದರ್ಯದ ಮುಂದೆ ಮತ್ಯಾವ ಸೌಂದರ್ಯವೂ ಗಣನೆಗೆ ಬಾರವು ಎಂದು ಇವರು ಹೇಳುತ್ತಿದ್ದರು. ಆ ಮಾತು ಅಕ್ಷರಶಃ ನಿಜ.
ಮದುವೆಗೆ ಮುನ್ನ ನಾನು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಲೈಬ್ರರಿ ಸೈನ್ಸ್ ವಿಷಯದಲ್ಲಿ ಎಂಎಸ್ಸಿ ಓದಿದ್ದೆ. ಹಾಗೆ ಲೈಬ್ರರಿ ಅಸಿಸ್ಟೆಂಟ್ ಆಗಿಯೂ ನಾನು ಕೆಲಸ ನಿರ್ವಹಿಸಿದ್ದೆ. ಉಡುಪಿಗೆ ಬಂದ ಮೇಲೆ “ವೆಲ್‌ಕಮ್ ಗ್ರೂಪ್ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಷನ್’ನಲ್ಲಿ ಲೈಬ್ರರಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದೆ. ಇವರಿಗೆ ಓದುವ ಗೀಳು. ನಾನು ಲೈಬ್ರರಿಯನ್. “ಸರಿಹೋಯಿತು ನಮ್ಮ ಜೋಡಿ…’ ಅಂತ ಸ್ನೇಹಿತರು ನಮ್ಮನ್ನು ನೋಡಿ ನಗುತ್ತಿದ್ದರು. ಅವರ ಹೇಳುವ ಮಾತೂ ನಿಜವೇ ಆಗಿತ್ತು. ನಾನು ಲೈಬ್ರರಿಗೆ ಹೊಸದಾಗಿ ಬಂದ ಪುಸ್ತಕಗಳನ್ನೆಲ್ಲ ತಂದುಕೊಡುತ್ತಿದ್ದೆ. ಇವರು ಅದನ್ನು ಗಬ್ಬಕ್ಕೆಂದು ಓದಿ ಮುಗಿಸುತ್ತಿದ್ದರು. ಪುಸ್ತಕಗಳನ್ನು ಜೋಡಿಸಲು ಅವುಗಳ ಸಾರವನ್ನು ಗ್ರಹಿಸಬೇಕಲ್ಲ. ಇವರೇ ಓದಿದ ಬಳಿಕ ನನಗೆ ಮಾಹಿತಿ ಕೊಡುತ್ತಿದ್ದರು. ನಾನು ಇವರಂತೆ ಗಟ್ಟಿ ಓದುಗಳಲ್ಲ. ಆದರೆ, ಮದುವೆಯ ಬಳಿಕವೂ ಅವರು ನನ್ನ ಅಧ್ಯಯನವನ್ನು ಪ್ರೋತ್ಸಾಹಿಸಿದ್ದಾರೆ. ಹಾಗಾಗಿ ನಾನು ಎಂ.ಫಿಲ್ ಓದುವುದು ಸಾಧ್ಯವಾಯಿತು.
ಲೈಬ್ರರಿಯಲ್ಲಿ ಪುಸ್ತಕಗಳನ್ನು ಜೋಡಿಸುವ ಕೆಲಸಕ್ಕೂ, ಹೀಗೆ ಅಂಗಡಿಯಲ್ಲಿ ಬಟ್ಟೆ, ಪ್ರಸಾಧನ ಸಾಮಗ್ರಿಗಳನ್ನು ಜೋಡಿಸುವುದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಎನ್ನಿ. ಹಾಗಾಗಿಯೇ ಈಗ ನಾನು ಲೈಬ್ರರಿ ಕೆಲಸ ಬಿಟ್ಟು ಇದರಲ್ಲಿಯೇ ಪೂರ್ತಿಯಾಗಿ ತೊಡಗಿಸಿಕೊಂಡಿದ್ದೇನೆ. ಇದೊಂದು ವಿಭಿನ್ನ ಲೋಕ. ಇಲ್ಲಿ ನಾವು ಪ್ರತಿನಿತ್ಯ ಗ್ರಾಹಕರೊಡನೆ ಸಂವಾದ ಮಾಡುತ್ತಲೇ ಇರಬೇಕು. ಸಮಾಜದ ಎಲ್ಲ ಸ್ತರದ ವ್ಯಕ್ತಿಗಳು ವೇಷಭೂಷಣಗಳಿಗಾಗಿ ಇಲ್ಲಿಗೆ ಬರುವುದರಿಂದ ನಾವು ಎಲ್ಲ ರೀತಿಯ ವ್ಯಕ್ತಿಗಳ ಜೊತೆಗೆ ಸಂಭಾಷಣೆ ಮಾಡಬೇಕಲ್ಲ. ಅವರ ಮನೋಭಾವವನ್ನು ಅರಿತು, ವೇಷಭೂಷಣಗಳ ಬಗ್ಗೆ ಮಾಹಿತಿ ನೀಡುವುದು, ಅವರ ಕೋರಿಕೆಯನ್ನು ಆಲಿಸುವುದು ಹೀಗೆ… ಈ ವೃತ್ತಿಯು ನಮಗೆ ಬದಲಾಗುತ್ತಿರುವ ಸಮಾಜವನ್ನು ತೋರಿಸಿಕೊಡಲು ಸಹಾಯ ಮಾಡುತ್ತದೆ.
ಉದಾಹರಣೆಗೆ ಹತ್ತು ವರ್ಷದ ಹಿಂದೆ ವೇಷಭೂಷಣಕ್ಕಾಗಿ ಬರುತ್ತಿದ್ದವರ ಸ್ವಭಾವ ಬೇರೆಯದೇ ರೀತಿ ಇರುತ್ತಿತ್ತು. ಈಗ ಜನರ ಮನೋಸ್ಥಿತಿ ಬೇರೆಯದೇ ರೀತಿ ಇದೆ. ಆದರೆ, ಈಗಿನ ತಲೆಮಾರಿನ ಯುವಜನತೆ ಬಹಳ ನಿರ್ದಿಷ್ಟವಾದ ಬೇಡಿಕೆಗಳನ್ನು ಮುಂದಿಡುತ್ತಾರೆ. ಮೊಬೈಲ್‌ನಲ್ಲಿ ಒಂದು ಫೋಟೋ ಹಿಡಿದುಕೊಂಡು ಬರುವ ಅವರು, “ಇಂತಹುದೇ ವೇಷವನ್ನು ನಮಗೆ ಕೊಡಿ’ ಎಂದು ಪಟ್ಟುಹಿಡಿಯುತ್ತಾರೆ. ಅವರ ಸ್ಪಷ್ಟತೆಯನ್ನು ನೋಡಿ ಖುಷಿಯಾದರೂ, ಅವರು ಇತರ ಸಾಧ್ಯತೆಗಳನ್ನು ನಿರಾಕರಿಸುತ್ತಾರಲ್ಲ ಎಂದು ಬೇಸರವಾಗುತ್ತದೆ. ಅಂದರೆ, ಯಾವುದೋ ಟೀವಿ ರಿಯಾಲಿಟಿ ಶೋದಲ್ಲಿ ಕಾಣಿಸುವ ವೇಷವನ್ನು ಅದೇ ಮಾದರಿಯಲ್ಲಿ ಬೇಕೆಂದು ಪಟ್ಟುಹಿಡಿದರೆ ಎಲ್ಲಿಂದ ತರುವುದು? ಆದರೆ, ಬದಲಾಗುತ್ತಿರುವ ಬೇಡಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತೇವೆ. ಅದಕ್ಕೆ ತಕ್ಕಂತೆ ನಮ್ಮ ಸಂಗ್ರಹದಲ್ಲಿರುವ ವೇಷಗಳ ಸ್ವರೂಪವನ್ನು ಅಪ್‌ಡೇಟ್ ಮಾಡುತ್ತ ಇರುತ್ತೇವೆ.
ಅಂದ ಹಾಗೆ 2020 ನಮಗೆ ಎರಡು ಕಾರಣಗಳಿಗೆ ಬಹಳ ಮುಖ್ಯವಾದ ವರ್ಷ. ನನ್ನ ಮಾವನವರು ಅಂದರೆ ಇವರ ತಂದೆ ಬಾಷಾ ಅವರು ಈ ಅಂಗಡಿಯನ್ನು ಸ್ಥಾಪಿಸಿ 50 ವರ್ಷ ಆದುದರಿಂದ ಇದು ಸುವರ್ಣ ಮಹೋತ್ಸವದ ವರ್ಷ. ಹಾಗೆಯೇ ನಮ್ಮ ಮದುವೆಗೆ 20 ವರ್ಷ ತುಂಬಿತು. ಈ ಸಂತೋಷವನ್ನು ಆಚರಿಸಲು ನಮ್ಮ ಜೊತೆಗೆ 8 ವರ್ಷ ವಯಸ್ಸಿನ ಪುಟಾಣಿ ಮೋಕ್ಷಾ ಇದ್ದಾಳೆ.
ನಾವು ಮಗಳಿಗೆ ಮೋಕ್ಷಾ ಎಂದು ಹೆಸರು ಇಡುವಾಗ ಎಲ್ಲರೂ ಅಚ್ಚರಿಪಟ್ಟಿದ್ದರು. ಆದರೆ, ಇದೇ ಹೆಸರನ್ನು ಯಾಕೆ ಆಯ್ಕೆ ಮಾಡಿಕೊಂಡೆವು ಎಂಬುದಕ್ಕೆ ಸ್ಪಷ್ಟ ಕಾರಣವೇನೂ ಇಲ್ಲ. ಸುಮಾರು ಲಕ್ಷಗಟ್ಟಲೆ ಹೆಸರುಗಳನ್ನು ನಾವಿಬ್ಬರೂ ಹುಡುಕಿದ್ದೆವು. ಮೋಕ್ಷಾ ಎನ್ನುವ ಹೆಸರು ಇವರಿಗೆ ಇಷ್ಟವೆನಿಸಿತು. ನನಗೂ ಅದು ಇಷ್ಟವಾಯಿತು. ಅವಳಿಗೆ ಸಂಗೀತ, ನೃತ್ಯವೆಂದರೆ ಬಹಳ ಇಷ್ಟ. ತಂದೆಯ ಪ್ರೀತಿಯ ಮಗಳು ಎಂದು ಬೇರೆ ಹೇಳಬೇಕೆ!
ನಮ್ಮ ಮಾವನವರು ಬಹಳ ಸರಳಜೀವಿ ಆಗಿದ್ದರು. ಊರಿನ ಎಲ್ಲ ಸಮುದಾಯದವರ ಭಾಷೆಯನ್ನು ಅವರು ಮಾತನಾಡಬಲ್ಲವರಾಗಿದ್ದರು. ಅವರ ಮನೆಯೊಳಗೆ ತೆರಳಿ, ಅಕ್ಕರೆಯಿಂದ ಊಟತಿಂಡಿ ಸವಿದು, ಎಲ್ಲರೊಡನೆ ಒಂದಾಗಿ ಬಾಳುತ್ತಿದ್ದರು ಎಂದು ಇವರು ಆಗಾಗ ಹೇಳುತ್ತಾರೆ. ಅವರ ಅಕಾಲಿಕ ಮರಣವಾದಾಗ ಇವರು ಉದ್ಯಮವನ್ನು ವಹಿಸಿಕೊಳ್ಳಬೇಕಾಯಿತು. ಇವರು ಓದಿದ್ದು ಡಿಫಾರ್ಮಾ. ಆದರೆ, ಓದಿಗೆ ಸಂಬಂಧವೇ ಇಲ್ಲದ ಈ ವೇಷಭೂಷಣಗಳ ಉದ್ಯಮಕ್ಕೆ ಇವರು ಬಂದರು. ಈ ಕೆಲಸವನ್ನು ಬಹಳ ಪ್ರೀತಿಯಿಂದ ನಿರ್ವಹಿಸುತ್ತಿದ್ದಾರೆ.
ಇವರಿಗೆ ತುಂಬ ಪ್ರೀತಿಯ ಮತ್ತೂಂದು ವಿಷಯವೆಂದರೆ ಬಟ್ಟೆಗಳು. ಮಾಮೂಲಿ ದಿನಗಳಲ್ಲಿ ಬರೀ ದೊಗಳೆ ಬನಿಯನ್° ಹಾಕಿಕೊಂಡೇ ಇರುವ ಇವರು, ಹೊರಡುವಾಗ ದಿರಿಸು ತುಂಬ ನೀಟ್ ಇರಬೇಕು ಎಂದು ಬಯಸುತ್ತಾರೆ. ಈ “ಪರ್‌ಫೆಕ್ಷನ್’ ಕೆಲವೊಮ್ಮೆ ನನಗೆ ಇರಿಸುಮುರಿಸು ಆಗುವುದುಂಟು. ಇದೇ ವಿಷಯಕ್ಕೆ ನಮ್ಮ ನಡುವೆ ಜಟಾಪಟಿ ಆಗುತ್ತದೆ. ನಮ್ಮ ವಾರ್ಡ್‌ರೋಬ್ ನೋಡಿದರೆ ಇವರ ದಿರಿಸುಗಳೇ ಹೆಚ್ಚಿವೆ. ನಾನೋ ಉತ್ತಮವಾದ ಕೆಲವೇ ದಿರಿಸುಗಳನ್ನು ಇಟ್ಟುಕೊಂಡಿದ್ದೇನೆ. ಇವರಿಗೋ ಸಿಟ್ಟು ಬೇಗ ಬರುತ್ತದೆ. ನಾನು ತಣ್ಣಗಿದ್ದುಬಿಡುತ್ತೇನೆ.
ಅಂಗಡಿ, ಮನೆ, ಮಗಳ ಆಟಪಾಠ ನಿರ್ವಹಣೆಯಲ್ಲಿ ಈಗ ಬದುಕು ಬ್ಯುಸಿಯಾಗಿಬಿಟ್ಟಿದೆ. ನಮ್ಮ ಮನೆಯಲ್ಲಿ ಹೆಚ್ಚಾಗಿಯೇ ಶಾಖಾಹಾರವನ್ನೇ ಮಾಡುವುದರಿಂದ ಅಡುಗೆ ತಲೆಬಿಸಿ ಕಡಿಮೆ. ಮನೆಗಿಂತ ಹೆಚ್ಚು ಹೊತ್ತು ಅಂಗಡಿಯಲ್ಲಿಯೇ ಕಳೆಯುತ್ತೇವೆ. ಮಗಳು ಬಂದ ಮೇಲೆಯೇ ಮನೆಗೆ ಹೋಗುವುದು.
ನಾನು ಇಷ್ಟಪಟ್ಟು ಕೈಗೆತ್ತಿಕೊಳ್ಳುವ ಯಾವ ಕೆಲಸಗಳನ್ನೂ ಅವರು ಆಕ್ಷೇಪಿಸುವುದಿಲ್ಲ. ಯಾವ ಬಟ್ಟೆ ಹಾಕಿಕೊಂಡರೂ ಆಕ್ಷೇಪಣೆ ಇಲ್ಲ. ವೆಸ್ಟರ್ನ್ ಡ್ರೆಸ್, ಮಾಡರ್ನ್ ಡ್ರೆಸ್, ಅಥವಾ ಸಾಂಪ್ರದಾಯಿಕ ಉಡುಗೆ-ನಿಂಗಿಷ್ಟವಾದ್ದು ಆಯ್ಕೆ ಮಾಡಿಕೊಳ್ಳು ಎನ್ನುತ್ತಾರೆ. ಆದರೆ ಒಂದೇ ಕಂಡಿಷನ್, ಆಯ್ಕೆ ಮಾಡಿಕೊಂಡ ಡ್ರೆಸ್ ನೀಟಾಗಿ, ಉತ್ತಮ ಗುಣಮಟ್ಟದ್ದಾಗಿ ಇರಬೇಕು. ಅವರೂ ಬಟ್ಟೆಗಳನ್ನು ಇಷ್ಟಪಟ್ಟು ಆಯ್ಕೆ ಮಾಡಿಕೊಳ್ಳುತ್ತಾರೆ. ಪರ್ಸ್‌ನಿಂದ ಹಿಡಿದು, ಹ್ಯಾಂಕಿವರೆಗೆ ಎಲ್ಲವೂ ಮ್ಯಾಚಿಂಗ್ ಇರಬೇಕು. ಇದೇ ಪರ್ಫೆಕ್ಷನ್ ವಿಷಯಕ್ಕೆ ನಾವು ಕೆಲವೊಮ್ಮೆ ಕೋಳಿ ಜಗಳ ಆಡಿದ್ದುಂಟು.
-ನೂರ್‌ಜಾನ್ ಎಸ್.
ಚಿತ್ರ: ಗಣೇಶ್ ಕಲ್ಯಾಣ್‌ಪುರ ನೂರ್‌ಜಾನ್ ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.