ಬೋಗಿಯಲ್ಲಿ ಕಣ್ಣುಗಳ ಪರಸ್ಪರ!
ಲೋಕಲ್ ಟ್ರೈನ್
Team Udayavani, Apr 26, 2019, 5:50 AM IST
ಮಾತಿಲ್ಲ ಕತೆಯಿಲ್ಲ, ಗುರುತು ಪರಿಚಯವೂ ಇಲ್ಲ, ಆದರೂ ನಿತ್ಯ ಹೊಸ ಹೊಸ ಮುಖಗಳು ಇದಿರು ಬದುರಾಗಿ ನಿಲ್ಲುತ್ತವೆ. ನೋಟಗಳು ಒಂದನ್ನೊಂದು ಕೂಡುತ್ತವೆ, ಕಾಡುತ್ತವೆ, ಬಣ್ಣಿಸುತ್ತವೆ. ಮಾತಿಗೂ ನಿಲುಕದ ನೂರಾರು ಭಾವಗಳು ಹೂವಾಗುತ್ತವೆ. ಅಂತರಂಗದ ಆಲಾಪನೆಯೊಳಗೆ ಹಾಡಾಗುತ್ತವೆ. ಅರ್ಥ-ಅನರ್ಥಗಳ ಇತ್ಯರ್ಥವು ಒಳಗೊಳಗೆ ನಡೆದರೂ ತೀರ್ಪಿಗಾಗಿ ಕಟಕಟೆಯೇರುವುದಿಲ್ಲ. ಸೌಂದರ್ಯವಿರುವುದು ನೋಡುವುದಕ್ಕೆ ತಾನೆ ಎಂದು ಅವರು ಯೋಚಿಸಿದರೆ, “ಎಷ್ಟೊತ್ತು ಕನ್ನಡಿಯ ಮುಂದೆ ನಿಂತು ಸಿಂಗರಿಸಿಕೊಂಡು ಬಂದಿರ್ತಿವಿ. ಅವರು ನಮ್ಮನ್ನು ನೋಡಿದರೇನು ತಪ್ಪು? ಮೈಕೈ ಸವೆದು ಹೋಗುತ್ತಾ!’ ಅನ್ನುವ ಭಾವ ಇವರದಾಗಿರುತ್ತದೆ. ಇಂಥ ಸಂದರ್ಭದಲ್ಲಿ ಎರಡೂ ಕಡೆಯವರಿಗೂ ಅದೆಷ್ಟು ಹೊತ್ತು ನಿಂತಿದ್ದರೂ ಕಾಲು ಸೋಲುವುದಿಲ್ಲ. ಮುಖ ಬಾಡುವುದಿಲ್ಲ. ದೂರದವರೆಗಿನ ರೈಲು ಪ್ರಯಾಣ ಬೋರೆನಿಸುವುದಿಲ್ಲ. ಜೋಡಿ ನಯನಗಳಿಗೆ ಜೊತೆ ಸಿಕ್ಕಿದರೆ, ಕಣ್ಣು ಕಣ್ಣು ಕಲೆತರೆ, ಮುಖಭಾವವೋ ಅಂದಚಂದವೋ ಇಷ್ಟವಾದರೆ, ಒಂದು ಸಣ್ಣ ನಗು. ಇಲ್ಲವಾದರೆ ಬರೀ ಮೌನರಾಗ. ನೆಕ್ಸ್‌ಟ್ ಸ್ಟೇಷನ್ ಸಿಎಸ್‌ಟಿ ಅನ್ನುವಾಗ ಇವೆಲ್ಲಕ್ಕೂ ತೆರೆ ಬೀಳುತ್ತದೆ. ಆವರೆಗೆ ಏನೋ ಒಂದನ್ನು ನೆನೆಯುತ್ತ ಅದ್ಯಾವುದೋ ಲೋಕದಲ್ಲಿದ್ದವರು ವಾಸ್ತವಕ್ಕೆ ಮರಳಿ, ಇಳಿಯಲು ಸನ್ನದ್ಧರಾಗುತ್ತಾರೆ. ಇಳಿದ ಮೇಲೆ ಬೇರೆ ಯಾರು ಯಾರನ್ನೂ ಕಾಯುವುದಿಲ್ಲ. ಇಷ್ಟವಾದಳೆಂದು ಹಿಂಬಾಲಿಸುವುದಿಲ್ಲ. ಆವರೆಗೆ ಏನೂ ನಡೆದಿಲ್ಲವೆಂಬಂತೆ ಅವರವರ ದಾರಿಯಲ್ಲಿ ಮುಂದುವರಿಯುತ್ತಾರೆ.
ಲೋಕಲ್ ರೈಲಿನಲ್ಲಿ ಕಥೆಗಳು ಮಾತ್ರವಲ್ಲ , ಮಧುರ ಕಾವ್ಯಗಳೂ ಹುಟ್ಟಿಕೊಳ್ಳುತ್ತವೆ. ಸಾಮಾನ್ಯವಾಗಿ ರೈಲಿನಲ್ಲಿ ಮೂರು ಬೋಗಿಗಳು ಮಾತ್ರ ಮಹಿಳೆಯರಿಗೆ ಮೀಸಲಾಗಿರುತ್ತವೆ. ಈ ಬೋಗಿಯ ಪಕ್ಕದಲ್ಲಿರುವ ಪುರುಷರ ಬೋಗಿ ಯಾವತ್ತೂ ಖಾಲಿ ಇರುವುದಿಲ್ಲ. ಮಹಿಳೆಯರ ಮತ್ತು ಪುರುಷರ ಬೋಗಿಗಳ ನಡುವೆ ಅಡ್ಡಲಾಗಿರುವ ತಡೆಗೋಡೆ ಸಂಪೂರ್ಣವಾಗಿ ಮುಚ್ಚಿರುವುದಿಲ್ಲ. ಹಳೆಯ ರೈಲಿನಲ್ಲಿ ಸರಿಗೆ ಮುಚ್ಚಿದ ಸಣ್ಣ ಕಿಟಕಿಯಷ್ಟು ಭಾಗ ಮಾತ್ರ ತೆರೆದಿರುತ್ತಿತ್ತು. ಆದರೆ, ಈಗಿನ ಹೊಸ ರೈಲಿನಲ್ಲಿ ಈಚೆಯವರು ಆಚೆಯವರಿಗೆ ಕಾಣಿಸುವಂತೆ ಅರ್ಧಭಾಗವೇ ತೆರೆದಿರುತ್ತದೆ. ಈ ಭಾಗದಲ್ಲಿ ಅಡªಲಾಗಿ ದಪ್ಪಗಿನ ಕಂಬಿಗಳ ಜೋಡಣೆಯಿರುತ್ತದೆ. ಲೋಕಲ್ ರೈಲು ಸಿಎಸ್‌ಟಿ ಕಡೆಗೆ ಚಲಿಸುತ್ತಿದ್ದು, ಮಹಿಳಾ ಬೋಗಿ ಮುಂದಿದ್ದರೆ ಪುರುಷರೆಲ್ಲ ಆ ದಿಕ್ಕಿಗೆ ತಿರುಗಿ ನಿಂತಿರುತ್ತಾರೆ. ಅಂತೆಯೇ ರೈಲು ತಿರುಗಿ ಬರುವಾಗ ಕೂಡ ಪುರುಷರು ನಿಲ್ಲುವ ದಿಕ್ಕು ಮಹಿಳಾ ಬೋಗಿಯನ್ನು ಅವಲಂಬಿಸಿರುತ್ತದೆ. ಕೆಲವರು ಹುಡುಗಿಯರನ್ನು ಪಟಾಯಿಸಲೆಂದೋ ಪ್ರೇಮಿಕೆಯನ್ನು ನೋಡಲೆಂದೋ ಅಥವಾ ಇನ್ನು ಕೆಲವರು ಅದ್ಯಾವ ಕಾರಣವಿಲ್ಲದೆಯೂ ಮಹಿಳಾ ಬೋಗಿಯ ಪಕ್ಕದ ಬೋಗಿಯನ್ನೇರುತ್ತಾರೆ.
ತನ್ನನ್ನು ಪಕ್ಕದ ಬೋಗಿಯಲ್ಲಿರುವ ಪುರುಷರು ನೋಡುತ್ತಿರುವರೆಂಬುದು ಮಹಿಳೆಯರಿಗೂ ತಿಳಿದಿರುತ್ತದೆ. ಅವರು ಯಾರಾದರೇನು, ನೋಡುವ ಕಣ್ಣುಗಳಿಗೆ ತಾನು ಸುಂದರವಾಗಿ ಕಾಣಬೇಕೆನ್ನುವ ಕಾರಣದಿಂದಲೋ ಕೆಲವರ ಬ್ಯಾಗಿನೊಳಗಿನಿಂದ ಮಿನಿ ಬ್ಯೂಟಿಪಾರ್ಲರ್ ಮೆಲ್ಲನೆ ತೆರೆದುಕೊಳ್ಳುತ್ತದೆ. ಇತ್ತ ತಿರುಗಿ ಅಂಗೈಯಗಲದ ಕನ್ನಡಿಯನ್ನು ಹಿಡಿದುಕೊಂಡು ತುಟಿಯ ಕೆಂಪು ಮಾಸಿದೆಯೇ? ಕೆನ್ನೆಗೆ ಹಚ್ಚಿದ ಪೌಂಡಿಷನ್ ಕ್ರೀಮ್, ಫೇಸಿಂಗ್ ಪೌಡರ್ ಕರಗಿದೆಯೇ? ಕಾಡಿಗೆ ಕದಡಿದೆಯೇ? ಯೂ ಶೇಪ್, ವಿ ಶೇಪ್, ಲೇಯರ್ ಕಟ್, ಸ್ಟೆಪ್ ಕಟ್, ಸ್ಟೆಪ್ ವಿದ್ ಲೇಯರ್ ಕಟ್, ಫೆದರ್ ಕಟ್, ಎಡ್ವಾನ್ಸ್ ಕಟ್- ಹೀಗೆ ಬೇರೆ ಬೇರೆ ರೀತಿಯಲ್ಲಿ ಕಟ್ ಮಾಡಿ ಇಳಿಬಿಟ್ಟ ಕೂದಲು ಅಸ್ತವ್ಯಸ್ತವಾಗಿದೆಯೇ ಎಂದು ಒಮ್ಮೆ ತಮ್ಮನ್ನು ತಾವೇ ನೋಡಿಕೊಳ್ಳುತ್ತಾರೆ. ಎಲ್ಲವೂ ಸರಿಯಾಗಿದ್ದರೆ, ಆಚೆಯವರಿಗೆ ಕಾಣಿಸುವಂತೆ ತಿರುಗಿ ನಿಲ್ಲುತ್ತಾರೆ. ತೊಟ್ಟ ಉಡುಪಿಗೆ ಒಪ್ಪುವ ಬಣ್ಣವನ್ನೇ ಬಳಿದ ನೀಳ ನಕ್ಷೆಯಿರುವ ಬೆರಳು ಪದೇ ಪದೇ ನವಿರಾದ ಕೂದಲಿನ ಮೇಲೆ ಲಲ್ಲೆಯಾಡುತ್ತಿರುತ್ತದೆ. ಮುತ್ತು ಹರಳಿನಿಂದ ಚಮಕಿಸುವ ಉಂಗುರ, ಕಿವಿಯೋಲೆ, ಕೈಬಳೆ, ಕೊರಳ ಸರ, ಹೀಗೆ ಅವರ ಉಡುಗೆ-ತೊಡುಗೆಗಳಿಗೆ ಹೆಮ್ಮೆಪಡುವಂಥ ಭಾವ ಮಹಿಳೆಯರ ಮುಖದಲ್ಲಿ ಕಂಗೊಳಿಸುತ್ತಿರುತ್ತದೆ. ಅಂತೆಯೇ ತಮ್ಮನ್ನು ನೋಡುವ ಅಪರಿಚಿತರಲ್ಲಿ ಅವರಿಗೆ ಒಂದಿನಿತೂ ಕೋಪವಿಲ್ಲ. ಇನ್ನು ಕೆಲವರು ಸೀರೆ ನೆರಿಗೆ ಜಾರಿದ್ದರೆ, ಚೂಡಿದಾರ್‌ನ ದುಪ್ಪಟ ಸರಿದಿದ್ದರೆ ತನ್ನನ್ನು ನೋಡುವ ಕಣ್ಣುಗಳಿಗೆ ಕಾಣದಿರಲೆಂದು ಬೇಗನೆ ಸರಿ ಮಾಡಿಕೊಳ್ಳುತ್ತಾರೆ. ಹುಡುಗಿಯರದ್ದೇ ಒಂದು ತಂಡವಿದ್ದರೆ, ಅದೇ ವಿಷಯ ಅವರಿಗೆ ತಮಾಷೆಯ ವಸ್ತುವಾಗಿಬಿಡುತ್ತದೆ. “ಟಿವಿ ನ್ಯೂಸ್ ನೋಡೇ…! ದೇವಾನಂದ್ ಸಿನೆಮಾಕ್ಕೆ ಹೊಸ ಹೀರೋಯಿನ್ ಹುಡುಕ್ತಾ ಇದ್ದಾನೆ’ ಅನ್ನುತ್ತ ತಮಾಷೆ ಮಾಡುವುದುಂಟು.
ಬೆಳಗಿನಿಂದ ಸಂಜೆಯವರೆಗೆ ಇಂಥ ಅನೇಕ ಕಾವ್ಯಗಳು ಬೋಗಿಯೊಳಗೆ ಅರಳುತ್ತವೆ. ನಿತ್ಯದ ಒತ್ತಡಗಳನ್ನು ಮರೆಯುತ್ತವೆ. ಮನಸ್ಸುಗಳು ಹಗುರಾಗುತ್ತವೆ. ಸಾಂತ್ವನವೋ ಮನರಂಜನೆಯೋ ಯಾವುದೋ ಒಂದರಲ್ಲಿ ತೃಪ್ತಿಯನ್ನು ಪಡೆದುಕೊಂಡು ಮತ್ತೆ ಇಳಿದು ಹೋಗುತ್ತವೆ. ಆದರೆ, ಇದರಿಂದ ಯಾರಿಗೂ ನೋವು ಉಂಟುಮಾಡುವ ಉದ್ದೇಶ ಯಾರಲ್ಲಿಯೂ ಇರುವುದಿಲ್ಲ. ಏನಿದ್ದರೂ ಬೋಗಿಯೊಳಗಡೆ ಇರುವಷ್ಟು ಹೊತ್ತು ಮಾತ್ರ. ಜಾಸ್ತಿಯೆಂದರೆ ಇಳಿದ ಮೇಲೆ ಒಮ್ಮೆ ತಿರುಗಿ ನೋಡುತ್ತಾರೆ ಅಷ್ಟೆ.
ಪುರುಷರ ಬೋಗಿಯಲ್ಲಿ ಮಹಿಳೆಯರು
ನಿತ್ಯ ರೈಲು ಪ್ರಯಾಣದ ಅಭ್ಯಾಸ ಇಲ್ಲದವರು, ಸಿಗುವ ಒಂದಿಷ್ಟು ಸಮಯದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಪ್ರೇಮಿಗಳು, ದೊಡ್ಡ ಬ್ಯಾಗು ಮತ್ತು ಸಣ್ಣ ಪ್ರಾಯದ ಮಗುವಿದ್ದರೆ ತನ್ನ ಪತಿಯನ್ನು ಹಿಂಬಾಲಿ ಸುವ ಮಹಿಳೆಯರು, ಬೋಗಿ ಖಾಲಿಯಿರುವುದು ಕಂಡುಬಂದಲ್ಲಿ, ಪುರುಷರ ಬೋಗಿಯನ್ನೇರುವುದುಂಟು. ಪ್ರೇಮಿಗಳು ಅಥವಾ ಪತಿಯಂದಿರು ಮಹಿಳೆಯರ ಜೊತೆಗಿದ್ದರೆ ಅವರನ್ನು ಒಂದು ಬದಿಯಲ್ಲಿ ನಿಲ್ಲಿಸಿ ತಮ್ಮ ತೋಳಿನ ಕಾವಲಿನಲ್ಲಿ ರಕ್ಷಣೆ ನೀಡುತ್ತಾರೆ. ವಯಸ್ಸಾದವರು, ಗರ್ಭಿಣಿಯರು ಅಥವಾ ಎಳೆ ಮಗುವನ್ನು ಕಂಕುಳಿನಲ್ಲಿರಿಸಿಕೊಂಡು ಬಂದ ಮಹಿಳೆಗೆ ಪುರುಷರೇ ಕರೆದು ಸೀಟು ಬಿಟ್ಟುಕೊಡುತ್ತಾರೆ. ಪೀಕ್ ಅವರ್ಸ್‌ನಲ್ಲಿ ಹುಡುಗರು ತಮ್ಮ ಪ್ರೇಮಿಕೆಯರನ್ನು ಕರೆದುಕೊಂಡು ರೈಲು ಹತ್ತಿದರೆ ಎಲ್ಲರೂ ಸೇರಿ ಅಸಮಾಧಾನ ವ್ಯಕ್ತಪಡಿಸುವುದುಂಟು. ಯಾಕೆಂದರೆ, ಅವರಿಂದಾಗಿ ಇಳಿಯುವಾಗ ಹತ್ತುವಾಗ ಎಲ್ಲರಿಗೂ ಅಡಚಣೆಯಗುತ್ತದೆ !
ಮಹಿಳೆ ಪುರುಷರ ಬೋಗಿಯೇರಿದಳೆಂದರೆ ಎಲ್ಲರ ದೃಷ್ಟಿಯೂ ಅವಳ ಮೇಲಿರುತ್ತದೆ. ಅದು ಸಹಜವೇ. ಕೆಲವರಂತೂ ತದೇಕ ಚಿತ್ತದಿಂದ ನೋಡುತ್ತಲೇ ಇರುತ್ತಾರೆ. ಯಾರಾದರೂ ಏನಾದರೂ ಅನ್ನುವರೆಂಬ ಪರಿವೆ ಅವರಿಗಿರುವುದಿಲ್ಲ. ಇನ್ನು ಕೆಲವರು ಕಣ್ಣು ತಪ್ಪಿಸಿ ನೋಡುವುದುಂಟು. ಎದುರು ಬದುರಾಗಿ ಕುಳಿತಿದ್ದರೆ, ಪಕ್ಕದಲ್ಲಿ ಹುಡುಗಿ ನಿಂತಿದ್ದರೆ ಮೊಬೈಲ್ ಸ್ಕ್ರೀನ್‌ನಲ್ಲಿ ಕೆಮರಾ ಆನ್ ಮಾಡಿ ಆ ಮೂಲಕ ನೋಡುವವರೂ ಅದೆಷ್ಟೋ ಮಂದಿ ಇದ್ದಾರೆ. ಕೆಲವು ತಿಂಗಳ ಹಿಂದೆ ಅಂಥ ಒಂದು ವೀಡಿಯೋ ವಾಟ್ಸಾಪ್ ಮತ್ತು ಫೇಸುºಕ್‌ನಲ್ಲಿ ವೈರಲ್ ಆಗಿತ್ತು. ಬಾಗಿಲ ಬಳಿ ನಿಂತು, ಇಯರ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು, ಬಾಗಿಲಿನ ಒತ್ತಿನಲ್ಲಿರುವ ಸರಳನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಒಬ್ಬಳು ಕಾಲೇಜು ಹುಡುಗಿ ನಿಂತಿದ್ದಳು. ರೈಲಿನ ವೇಗಕ್ಕೆ ಜೋರಾಗಿ ಗಾಳಿ ಬೀಸುತ್ತಿತ್ತು. ಅವಳು ಹಾರುವ ಮುಂಗುರಳನ್ನು ಇನ್ನೊಂದು ಕೈಯಲ್ಲಿ ಆಗಾಗ ಸರಿ ಮಾಡುತ್ತಿದ್ದಳು. ಟೀಶರ್ಟಿನ ಮೇಲೆ ತೊಟ್ಟಿರುವ ಜಾಕೆಟ್ ಬೇಡವೆನಿಸಿತೋ ಏನೋ! ಅದನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡಳು. ಅಷ್ಟರಲ್ಲಿ ಸರಳನ್ನು ಹಿಡಿದಿದ್ದ ಕೈ ತಪ್ಪಿ$ರೈಲಿನಿಂದ ಕೆಳಗೆ ಜಾರಿದಳು. ಅವಳನ್ನೇ ಗಮನಿಸುತ್ತಿದ್ದ ಹುಡುಗನೊಬ್ಬ ತಕ್ಷಣ ಒಂದು ಕೈಯನ್ನು ಹಿಡಿದುಬಿಟ್ಟ. ಒಂದು ಕೈ ಬಿಟ್ಟರೆ ಅವಳ ಇಡೀ ದೇಹ ಕೆಳಗಡೆ ನೇತಾಡುತ್ತಿತ್ತು. ಅಲ್ಲೇ ನಿಂತಿದ್ದ ಮತ್ತೋರ್ವ ವ್ಯಕ್ತಿ ಸಹಾಯಕ್ಕೆ ಬಂದರು. ರೈಲು ಚಲಿಸುತ್ತಿದ್ದಂತೆಯೇ ಅವಳನ್ನು ಮೇಲಕ್ಕೆತ್ತಿದರು. ಕೂದಳೆಳೆಯ ಅಂತರದಲ್ಲಿ ಅಂದು ಅವಳು ಪಾರಾಗಿದ್ದಳು. ಯಾರೋ ಒಬ್ಬರು ಸುಮಾರು ಐದು ನಿಮಿಷದಿಂದ ಅವಳ ಎಲ್ಲ ಚಲನವಲನಗಳನ್ನು ಸೆರೆ ಹಿಡಿದ ವೀಡಿಯೋ ಮರುಕ್ಷಣವೇ ಎಲ್ಲ ಕಡೆ ವೈರಲ್ ಆಗಿತ್ತು. ಟಿ.ವಿ, ನ್ಯೂಸ್ ಪೇಪರಿನಲ್ಲಿಯೂ ಸುದ್ದಿ ಪ್ರಕಟವಾಗಿತ್ತು. ಮಾಧ್ಯಮಗಳು ಅವಳ ಸಂದರ್ಶನವನ್ನೂ ನಡೆಸಿದ್ದವು. ಮೂರನೆಯ ಬಾರಿ ಇಂಥ ಕಂಟಕದಿಂದ ಪಾರಾದೆ ಅನ್ನುವುದರ ಜೊತೆಗೆ ಈ ದೃಶ್ಯವನ್ನು ಸೆರೆಹಿಡಿದವರ ಕುರಿತು ಕಟುವಾಗಿ ಹೇಳಿಕೆ ನೀಡಿದ್ದಳು.
ಅವರು ಮೊಬೈಲ್‌ನಲ್ಲಿಯೇ ಮಗ್ನರಾಗಿದ್ದಾರೆ. ನಮ್ಮತ್ತ ಗಮನವಿಲ್ಲ ಎಂದು ಭಾವಿಸಿದರೆ ಅದು ನಮ್ಮ ಭ್ರಮೆಯಷ್ಟೆ. ನಮ್ಮ ಅರಿವಿಗೆ ಬಾರದಿರುವ ಹಾಗೆ ಸೆರೆಹಿಡಿದ ಇಂಥ ಬೇರೆ ಬೇರೆ ದೃಶ್ಯಗಳು ಅಂತರ್ಜಾಲದಲ್ಲಿ ಹರಿದಾಡುತ್ತಿರುತ್ತವೆ ಎಂಬುದಕ್ಕೆ ರೈಲಿನಲ್ಲಿ ಜಾರಿ ಬಿದ್ದ ಹುಡುಗಿಯ ವೀಡಿಯೋ ವೈರಲ್ ಆದ ಒಂದು ಉದಾಹರಣೆ ಸಾಕು. ಸಹ ಪ್ರಯಾಣಿಕರನ್ನು ತನ್ನ ಮನೆಯವರಂತೆ ತಿಳಿದು ರಕ್ಷಣೆ ಮಾಡುವ ಮಾನವೀಯ ಮನಸ್ಸುಗಳ ಜೊತೆಗೆ, ಕದ್ದು ವೀಡಿಯೋ ಮಾಡಿ ಮಜಾ ಉಡಾಯಿಸುವ ಸ್ವಭಾವದವರೂ ಇರುತ್ತಾರೆ.
ಅನಿತಾ ಪಿ. ತಾಕೊಡೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.