ಪ್ರೀತಿ ಮಾತಿನ ಬಜಾರು ಸುತ್ತಿ ಸಾಗಿದೆ ಸುಮಾರು
Team Udayavani, Feb 14, 2020, 4:55 AM IST
ಸಾಯನ್ಸ್ ಬ್ಲಾಕ್‌ನಲ್ಲಿ ಐ ಲವ್ ಯೂ !
ಪ್ರೀತಿ ಹೇಗೆ ಹುಟ್ಟುತ್ತದೆ ಎಂಬುದನ್ನು ಈವರೆಗೆ ಯಾರೂ ಕಂಡುಹಿಡಿದಿಲ್ಲ ಎನ್ನಿ. ಈಗಿನ ವಿಶ್ವವಿದ್ಯಾಲಯ ಕಾಲೇಜು ಅಂದರೆ ಆಗಿನ ಸರ್ಕಾರಿ ಕಾಲೇಜಿನ ಮುಂದೆ, ಶರ್ಮಿಳಾ ಪ್ರಥಮ ಪಿಯುಸಿಗೆ ಅರ್ಜಿ ಭರ್ತಿ ಮಾಡುವಾಗ ನಾನು ಅವಳನ್ನು ನೋಡಿದ್ದು. ಒಂದು ಕ್ಷಣ ಸರಕ್ಕಂತ ಅವಳ ಚಹರೆ ಮನಸ್ಸಿನಲ್ಲಿ ನಾಟಿತ್ತು. ಆಗ ನಾನು ಮೊದಲನೆಯ ವರ್ಷದ ಬಿಎ ಪದವಿ ಓದುತ್ತಿದ್ದೆ. ಕಾಲೇಜು ದಿನಗಳಲ್ಲಿ ಸಂಗೀತವೇ ನನ್ನ ಜೀವಾಳ ಆಗಿತ್ತು. ಎಲ್ಲಿಯೇ ಸಂಗೀತ ಕಾರ್ಯಕ್ರಮ ನಡೆದರೂ ನಾನು ಭಾಗವಹಿಸುತ್ತಿದ್ದೆ. ಹಾಡುಗಳೊಂದಿಗೇ ಜೀವಿಸುತ್ತಿದ್ದ ನನಗೆ, ನಾನು ಹಾಡುತ್ತಿದ್ದ ಹಾಡುಗಳ ನಾಯಕಿಯನ್ನು ಕಂಡ ಹಾಗೆ ಅನಿಸಿತು. ಅವಳೂ ನನ್ನ ಹಾಡುಗಳನ್ನು ಇಷ್ಟಪಡುತ್ತಿದ್ದಳು ಎಂದು ನಂತರದ ದಿನಗಳಲ್ಲಿ ಗೊತ್ತಾಯಿತು. ಕಾಲೇಜು, ಓದು, ಹಾಡು, ಓಡಾಟದ ನಡುವೆ ನನ್ನ ಜೀವನದ ಕೇಂದ್ರಬಿಂದುವೇ ಅವಳು ಎನ್ನುವುದು ನನ್ನ ಮನಸ್ಸಿಗೇ ಸ್ಪಷ್ಟವಾಗತೊಡಗಿದಾಗ, ಈ ಮಾತನ್ನು ಅವಳಿಗೆ ಹೇಳಬೇಕು ಎನಿಸಿತು. ಆಗೆಲ್ಲ ಪ್ರೇಮನಿವೇದನೆ ಪತ್ರಗಳ ಮೂಲಕವೇ ನಡೆಯುತ್ತಿತ್ತು. ಆದರೆ, ನಾನೆಂದೂ ಆಕೆಗೆ ಪ್ರೇಮ ಪತ್ರ ಬರೆದಿಲ್ಲ. ಕಾಲೇಜಿನ ಸಾಯನ್ಸ್ ಬ್ಲಾಕ್‌ನಲ್ಲಿ ಅವಳನ್ನು ಆಗಾಗ ಭೇಟಿಯಾಗಿ ಮಾತನಾಡುತ್ತಿದ್ದೆ. ಅವಳೆಂದರೆ ನನಗೆ ಇಷ್ಟ ಎನ್ನುವುದು ಅವಳಿಗೂ ಅರ್ಥವಾದ ಹಾಗಿತ್ತು. ಆದರೂ ಅದೇ ಸಾಯನ್ಸ್ ಬ್ಲಾಕ್‌ನಲ್ಲಿ ಅವಳಿಗೆ ನಾನು ಪ್ರೀತಿಸುವ ವಿಷಯವನ್ನು ಪದಗಳಲ್ಲಿ ಹೇಳಿದೆ. ನನ್ನ ಮಾತು ಅವಳ ಮುಖದಲ್ಲಿ ನಗು ಮೂಡಿಸಿದ್ದು ನೋಡಿ, ಈ ವಿಚಾರದಲ್ಲಿ ಅವಳಿಗೆ ಸಮ್ಮತಿ ಇದೆ ಎಂದು ಗೊತ್ತಾಯಿತು.
ಪಿಯುಸಿ ಮುಗಿಸಿದ ಬಳಿಕ ಅವಳು ಸ್ನೇಹಿತೆಯರೊಡನೆ ಬೆಸೆಂಟ್ ಮಹಿಳಾ ಕಾಲೇಜು ಸೇರಿ ಪದವಿ ಓದಿದಳು. ನಾನು ಕಾಲೇಜು ಮುಗಿಸಿ, ವೃತ್ತಿಕ್ಷೇತ್ರವನ್ನು ಪ್ರವೇಶಿಸಿದೆ. ಮದುವೆಗೆ ಮನೆಯಲ್ಲಿ ಪ್ರತಿರೋಧವೇನೂ ಬರಲಿಲ್ಲ. ಹಾಗಾಗಿ, ಮದುವೆಯೂ ಹಿರಿಯರ ಒಪ್ಪಿಗೆಯೊಂದಿಗೇ ಸಂಭ್ರಮದಿಂದ ನಡೆಯಿತು. ಸಾಯನ್ಸ್ ಬ್ಲಾಕ್‌ನಲ್ಲಿ ಆರಂಭವಾದ ಬದುಕಿನ ಹಾಡು, ಇಂದಿಗೂ ಇಂಪಾಗಿ ಸಾಗಿದೆ.
-ದೇವದಾಸ್ ಕಾಪಿಕಾಡ್
ಪ್ರೊಫೆಸರ್ ದಂಪತಿಯ ಕೆಮಿಸ್ಟ್ರಿ !
ಪ್ರೇಮಿಸಿದ ದಿನಗಳು ಮರೆತೇ ಹೋಗಿವೆ. ಯಾಕೆಂದರೆ, ಈಗಲೂ ಪ್ರೇಮಿಸಿದ ದಿನಗಳಿಗಿಂತ ಹೆಚ್ಚಿನ ಪ್ರೀತಿ-ಪ್ರೇಮದಿಂದ ನಾವು ಬಾಳುತ್ತಿದ್ದೇವೆ. ಆ ಮಟ್ಟಿಗೆ ನಾನು ಬಹಳ ಅದೃಷ್ಟವಂತೆ. ನಾನು ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ 1985ರಲ್ಲಿ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಮೊದಲ ವರ್ಷ ಓದುತ್ತಿದ್ದೆ. ನಾರಾಯಣ್ ಅವರು ಕೆಮಿಸ್ಟ್ರಿ ವಿಷಯದಲ್ಲಿಯೇ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ಅವರು ಬಹಳ ಪ್ರತಿಭಾವಂತರಾದ್ದರಿಂದ ನಮಗೆ ಲ್ಯಾಬ್‌ನಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಪ್ರಾಯೋಗಿಕ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಸಲಹೆ, ಮಾರ್ಗದರ್ಶನ ಕೊಡುತ್ತಿದ್ದರು. ಎಲ್ಲ ವಿದ್ಯಾರ್ಥಿಗಳೊಡನೆ ಮಾತನಾಡಿದಂತೆಯೇ, ನನ್ನೊಡನೆಯೂ ಆಪ್ತವಾಗಿಯೇ ಮಾತನಾಡುತ್ತಿದ್ದರು.
ಬುದ್ಧಿವಂತ ಹುಡುಗನನ್ನು ಮದುವೆಯಾಗಬೇಕು ಎನ್ನುವ ಕನಸೊಂದು ನನ್ನಲ್ಲಿ ಅಡಗಿತ್ತು. ಅವರನ್ನು ನೋಡಿದಾಗ ಕನಸು ನನಸಾಗುವುದೆಂಬ ವಿಶ್ವಾಸ ಮೂಡಿ, ಲ್ಯಾಬ್‌ನಲ್ಲಿಯೇ ಒಂದು ಸಂಜೆ ಅವರೊಡನೆ ಮಾತನಾಡಿದೆ. “ನನಗೆ ನಿಮ್ಮನ್ನು ಕಂಡರೆ ಇಷ್ಟ. ನಾವಿಬ್ಬರು ಮದುವೆಯಾಗೋಣವಾ’ ಅಂತ ಸರಳವಾಗಿ ಕೇಳಿಬಿಟ್ಟೆ. ಅದು ಪ್ರೊಪೋಸ್ ಎನ್ನುವ ಪರಿಕಲ್ಪನೆಯೇನೂ ನನಗಿರಲಿಲ್ಲ. ನೇರವಾಗಿ, ಬಿಂದಾಸ್ ಆಗಿ ಮಾತನಾಡುವುದು ನನ್ನ ಸ್ವಭಾವ. ಅವರೂ, ಆ ಸಂದರ್ಭದಲ್ಲಿ ಬಹಳ ಸಂಯಮವಾಗಿ ವರ್ತಿಸಿದ್ದರು. ತಕ್ಷಣವೇ ಪ್ರತಿಕ್ರಿಯಿಸದೇ, “ಈ ಬಗ್ಗೆ ನಾಳೆ ಹೇಳ್ತೀನಿ’ ಅಂತಷ್ಟೇ ಹೇಳಿದರು. ಬಹುಶಃ ಇಡೀ ದಿನ ಯೋಚನೆ ಮಾಡಿದ್ದರೋ ಏನೋ, ಮಾರನೆಯ ದಿನ ಬಂದು, ಅವರ ಒಪ್ಪಿಗೆ ತಿಳಿಸಿದರು. ನಾನೇ ಪ್ರೊಪೋಸ್ ಮಾಡಿದ್ದೆ. ಆದರೆ, ನನ್ನ ಮನೆಯವರು ಮದುವೆಗೆ ಒಪ್ಪಲಿಲ್ಲ. ಅವರ ಮನೆಯವರು ನನ್ನನ್ನು ಅಕ್ಕರೆಯಿಂದ ಬರಮಾಡಿಕೊಂಡರು. ಬದುಕಿನಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಅವರ ಪ್ರೀತಿಯೇ ನನ್ನನ್ನು ಕೈ ಹಿಡಿದು ನಡೆಸಿದೆ. ನಮ್ಮದು ರಿಜಿಸ್ಟರ್x ವಿವಾಹ. ಈಗಲೂ ಅವರು ಅತ್ಯಂತ ಪ್ರತಿಭಾವಂತರೆಂದೇ ಗುರುತಿಸಿಕೊಂಡಿದ್ದಾರೆ. ವಿಶ್ವವಿದ್ಯಾಲಯಗಳ ಸಂಶೋಧನಾ ಲೇಖನಗಳ ಪ್ರಕಟಣೆಯಲ್ಲಿ ಅವರು ಟಾಪರ್. ನಾನು ಸೆಕೆಂಡ್ ಟಾಪರ್. ನಮ್ಮಿಬ್ಬರ ಕೆಮಿಸ್ಟ್ರಿ ತುಂಬ ಚೆನ್ನಾಗಿದೆ ಎಂದು ಬೇರೆ ಹೇಳಬೇಕೆ!
-ಬಿ. ಕೆ. ಸರೋಜಿನಿ
ಬಣ್ಣದ ಹಾದಿಯಲ್ಲಿ
ಕೆಂಪಾದ ಹೆಜ್ಜೆಗಳು
ನಾನು ಬಣ್ಣಗಳನ್ನು ತೀವ್ರವಾಗಿ ಪ್ರೀತಿಸಿದೆ. ಆದ್ದರಿಂದಲೇ ಬಣ್ಣಗಳೊಡನೆ ಆಟವಾಡುವ ಚಿತ್ರಮಿತ್ರ ನನಗೆ ತುಂಬ ಇಷ್ಟವಾಗಿಬಿಟ್ಟ. ಮದುವೆಗೆ ಮುಂಚೆಯೂ, ಈಗಲೂ ನಮ್ಮಿಬ್ಬರಿಗೂ ಬಣ್ಣಗಳೇ ಸಂಗಾತಿಯಾಗಿವೆ. ಜೊತೆ ಸೇರಿ ಬಣ್ಣಗಳನ್ನ ಹೊಸೆದು ಬದುಕನ್ನ ನೇಯುವ ಸುಖ ಈವಾಗ. ಇದುವೇ ನಮ್ಮಿಬ್ಬರ ಪಾಲಿಗೆ ಧ್ಯಾನ, ಹೋಮ-ಹವನ. ಪೂಜೆ-ಪುನಸ್ಕಾರ ಎಲ್ಲವೂ.
ಬದುಕಿನ ಕುರಿತು ಬಹುದೊಡ್ಡ ಕನಸಿನ ಮೂಟೆಯನ್ನು ಹೊತ್ತುಕೊಂಡು ಕಂಡರಿಯದ ಮುಂಬೈಗೆ ಬಂದಿಳಿದಿದ್ದ ನನ್ನ ಬದುಕಿನ ಹಾದಿಯಲ್ಲಿ-ಧುತ್ತನೆ ಕಣ್ಣೆದುರು ತನ್ನೆಲ್ಲ ಮುಗ್ಧತೆ, ಹುಡುಗಾಟ, ಇನ್ನಿಲ್ಲದ ಉತ್ಸಾಹ ಮತ್ತು ಜೀವನ ಪ್ರೀತಿಯೊಂದಿಗೆ ಚಿತ್ರಮಿತ್ರ ಬಂದಿದ್ದ. ಅವನು ತನ್ನ ಸ್ನೇಹದ ತೆಕ್ಕೆಯೊಳಗೆ ನನ್ನನ್ನು ಸೆಳೆದುಕೊಂಡ ಕ್ಷಣಗಳು ಮೊನ್ನೆಯಷ್ಟೇ ಘಟಿಸಿವೆ ಎಂಬಂತಿದೆ. ಅವನೇ ಮೊದಲು ಪ್ರೇಮ ನಿವೇದನೆ ಮಾಡಿದ್ದು. ಹಿರಿಯರು ನಮ್ಮ ಪ್ರೀತಿಗೆ ಆಶೀರ್ವಾದ ಮಾಡಿದರು.
ನಮ್ಮ ಪ್ರೀತಿಗೆ ಸ್ನೇಹ ಮತ್ತು ಪರಸ್ಪರ ಗೌರವವೇ ಬುನಾದಿ. ನಮ್ಮ ದಿನಗಳು ತುದಿಮೊದಲು ಇಲ್ಲದವು. ಬೆಳಗು ಯಾವಾಗ ಆಗುವುದೋ, ರಾತ್ರಿ ಯಾವಾಗ ಬರುವುದೋ ಎಂಬ ಎಚ್ಚರವಿಲ್ಲದೆ ನಮ್ಮ ನಮ್ಮ ಬಣ್ಣಗಳ ಲೋಕದಲ್ಲಿ ನಾವು ಕಳೆದು ಹೋಗಿರುತ್ತೇವೆ. ನಮ್ಮೆಲ್ಲ ಕಲಾಕೃತಿಗಳು ಈ ಧ್ಯಾನದ ಕೂಸುಗಳು.
ನಮ್ಮ ಕಲಾಕೃತಿಗಳಲ್ಲಿ ಜೀವಂತಿಕೆ ಉಳಿದುಕೊಂಡಿದ್ದರೆ ಅದಕ್ಕೆ ಕಾರಣ ನಮ್ಮಿಬ್ಬರ ನಡುವಿನ ಪ್ರೀತಿ. ಇಬ್ಬರೂ ಕಾಫಿಯನ್ನು ಪ್ರೀತಿಸುತ್ತ, ಕುಂಚವನ್ನು ಕೈಯಲ್ಲಿ ಹಿಡಿದು ಕುಳಿತುಬಿಡುತ್ತವೆ. ಇಬ್ಬರಿಗೂ ಸಂಗೀತವೆಂದರೆ ಬಲುಇಷ್ಟ. ಸಂಗೀತದ ಅಲೆಗಳು ನಮ್ಮ ದಿನದ ಬಹುಹೊತ್ತು ಆವರಿಸಿರುತ್ತದೆ. ನಮ್ಮಿಬ್ಬರ ಮೌನಕ್ಕೂ ಕೊನೆಯಿಲ್ಲ, ಮಾತಿಗೂ ಕೊನೆಯಿಲ್ಲ ಎಂದರೆ ಅಚ್ಚರಿಯಾದೀತು.
ನಾವಿಬ್ಬರು ಬಯಸಿದ ಬದುಕೇ ನಮ್ಮ ಒಡಲಿಗೆ ಬಂದು ಬಿದ್ದಿರುವ ಅದ್ಭುತವಾದ ಅಚ್ಚರಿ ಇದು. ಎಲ್ಲರಿಗೂ ಈ ಅದೃಷ್ಟ ಒಲಿದು ಬರುವುದಿಲ್ಲ. ಈ ಅಸಂಖ್ಯ ಬಣ್ಣಗಳೆಂಬ ಸ್ವರ್ಗದ ಹಾದಿಯಲ್ಲಿ ನಮ್ಮ ಹೆಜ್ಜೆಯಡಿಯ ಮಣ್ಣಿನ ಘಮದಲ್ಲಷ್ಟೇ ನಮ್ಮ ಗಮನ. ಮಳೆ ಸುರಿದರೆ ಕೊಡೆ ಹಿಡಿದು ಇಬ್ಬರೂ ನಡೆಯುತ್ತಾ, ನೀರು ಹರಿದರೆ ಕಾಗದದ ದೋಣಿ ಬಿಡುತ್ತ ಪುಟ್ಟ ಪುಟ್ಟ ಸಂಭ್ರಮವೂ ನಮ್ಮ ಕೈತಪ್ಪಿ ಹೋಗದಂತೆ ನಮ್ಮ ಜೀವನದ ಹೆಜ್ಜೆಗಳು ಬಣ್ಣಮಯವಾಗಿವೆ.
-ಅನು ಪಾವಂಜೆ
ಪ್ರೇಮಯಾನಕ್ಕೆ ಬಸ್ಸೊಂದು ನೆಪವಷ್ಟೇ
ಪ್ರೇಮದ ದಿನಗಳನ್ನು ಮರೆತರೆ ಬದುಕೇ ಮರೆತಂತೆ ಅಲ್ಲವೆ? ನಾನು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದಾಗ, ಮುದರಂಗಡಿಯಿಂದ ಬುಲೆಟ್‌ನಲ್ಲಿ ಹೊರಟು, ಮೂಲ್ಕಿಯಲ್ಲಿ ಅದನ್ನು ಪಾರ್ಕ್ ಮಾಡಿ, ಕ್ರೌನ್ ಎಂಬ ಎಕ್ಸ್‌ಪ್ರೆಸ್ ಬಸ್ಸಿನಲ್ಲಿ ಹೋಗುತ್ತಿದ್ದೆ. ಮಂಗಳೂರಿನ ಕೆಎಂಸಿಯಲ್ಲಿ ಎಂಬಿಬಿಎಸ್ ಓದುತ್ತಿದ್ದ ಕವಿತಾ, ಹೆಜಮಾಡಿಯಲ್ಲಿ ಅದೇ ಬಸ್ ಹತ್ತುತ್ತಿದ್ದಳು. ಪ್ರತೀದಿನದ ನಮ್ಮಿಬ್ಬರ ಭೇಟಿ ಪರಿಚಯಕ್ಕೆ ತಿರುಗಲು ಹೆಚ್ಚು ಕಾಲ ಬೇಕಾಗಲಿಲ್ಲ.
ಅವಳಿಗೆಂದು ಸೀಟು ಕಾಯ್ದಿರಿಸುವುದು, ರಶ್ ಇದ್ದಾಗ ನಾನೇ ಸೀಟು ಬಿಟ್ಟುಕೊಡುವುದು, ಆಗೀಗ ಒಂದೇ ಸೀಟಿನಲ್ಲಿ ಕುಳಿತುಕೊಳ್ಳುವ ಅವಕಾಶ- ಎಲ್ಲವೂ ಈಗಲೂ ಎಷ್ಟು ಬೆಚ್ಚನೆಯ ನೆನಪುಗಳು! ಆ ಬಸ್ಸೇ ನಮಗೆ ಪಾರ್ಕು, ಸಿನಿಮಾ, ಹೊಟೇಲ್ ಎಲ್ಲವೂ. ಎಷ್ಟು ಮಾತನಾಡಿದೆವು ಎಂದು ಲೆಕ್ಕ ಇಟ್ಟವರು ಯಾರು. ಹೀಗೆ ಇಬ್ಬರೂ ಅಕ್ಕಪಕ್ಕದ ಸೀಟಿನಲ್ಲಿ ಕುಳಿತು ಮಾತನಾಡುತ್ತಿದ್ದಾಗ, ಒಮ್ಮೆ ನಾನು ಆಕೆಗೆ ಪ್ರೊಪೋಸ್ ಮಾಡಿದ್ದೆ. “ನೀನಂದ್ರೆ ನಂಗೆ ತುಂಬ ಇಷ್ಟ. ಮದುವೆಯಾಗ್ತಿàಯ’. ಆಕೆ ಒಪ್ಪುತ್ತಾಳೆ ಎಂಬ ಪೂರ್ಣ ವಿಶ್ವಾಸದಿಂದ ನುಡಿದ ಮಾತಾಗಿತ್ತು ಅದು. ನನ್ನ ವಿಶ್ವಾಸ ಸುಳ್ಳಾಗಲಿಲ್ಲ.
ಆಕೆ ಒಪ್ಪಿದ ಮೇಲಂತೂ ಸುಮಾರು ಐದು ವರ್ಷಗಳ ಕಾಲ ಬಸ್ಸಿನಲ್ಲಿಯೇ ಪ್ರೇಮ ಪ್ರಯಾಣ ಸಾಗಿತ್ತು. ಪ್ರತೀದಿನ ಭೇಟಿಯಾದರೂ, ಪರಸ್ಪರ ಪತ್ರಗಳನ್ನು ಬರೆದುಕೊಳ್ಳುತ್ತಿದ್ದೆವು. ಪ್ರೇಮಪತ್ರವನ್ನು ಓದುವುದು ಎಷ್ಟು ಸಂಭ್ರಮವೋ, ಬರೆಯುವುದೂ ಅಷ್ಟೇ ಸಂಭ್ರಮದ ಮಾತಾಗಿತ್ತು. ಅಷ್ಟೊಂದು ಆಸ್ಥೆಯಿಂದ ಪತ್ರಗಳನ್ನು ಬರೆಯುತ್ತಿದ್ದೆ. ಜೊತೆಗೆ ಅವಳ ವೈದ್ಯಕೀಯ ಓದು, ನನ್ನ ಕಾನೂನು ಓದು ಸಾಗಿತ್ತು. ಇಬ್ಬರೂ ಶಿಕ್ಷಣ ಮುಕ್ತಾಯವಾದ ಮೇಲೆ ನಾನೇ ಅವಳ ಮನೆಗೆ ಹೋಗಿ ಮದುವೆಯ ಪ್ರಸ್ತಾವ ಮಾಡಿದ್ದೆ. ಮದುವೆಗೆ ಸಮಸ್ಯೆಯೇನೂ ಆಗಲಿಲ್ಲ. ನಮ್ಮದು ಆ ಕಾಲಕ್ಕೇ ಲವ್-ಅರೇಂಜ್ ಮ್ಯಾರೇಜ್ ಎಂದರೆ ತಪ್ಪಲ್ಲ. ಇಷ್ಟು ವರ್ಷಗಳ ಬಳಿಕ ಈಗಲೂ ನಮ್ಮ ಪ್ರೇಮಯಾನದ ಬಸ್ ಸಂತೃಪ್ತಿಯಿಂದ ಸಾಗುತ್ತಲೇ ಇದೆ.
-ಐವನ್ ಡಿಸೋಜಾ
ವಾಕಿಂಗ್‌ನಲ್ಲಿ ಪ್ರೇಮನಿವೇದನೆ
ಸ್ನಾತಕೋತ್ತರ ಪದವಿ ಓದುವಾಗ ನಾನು ಆಲ್ವಿನ್ ಡೆಸಾ ಅವರನ್ನು ಭೇಟಿಯಾದೆ. ಕೊಣಾಜೆಯಲ್ಲಿ ಮೊದಲನೆಯ ವರ್ಷದ ಎಂಎ ಇಂಗ್ಲಿಷ್ ಅಧ್ಯಯನ ಮಾಡುತ್ತಿದ್ದಾಗ ಅವರೂ ನನ್ನ ಸಹಪಾಠಿ. ನಾನು ಮೂಲತಃ ಉಡುಪಿಯವಳು, ಹಾಗೂ ಅವರು ಮೂಡುಬೆಳ್ಳೆಯವರು. ಹಾಗಾಗಿ, ಇಬ್ಬರೂ ಹಾಸ್ಟೆಲ್‌ನಲ್ಲಿಯೇ ಇದ್ದು ಓದುತ್ತಿದ್ದೆವು. ಪ್ರತಿದಿನ ಸಂಜೆ ವಾಕಿಂಗ್ ಹೋಗುವುದು, ಅಲ್ಲಿನ ಕಲ್ಲುಬೆಂಚಿನ ಮೇಲೆ ಕುಳಿತ ತುಂಬಾ ಹೊತ್ತು ಚರ್ಚಿಸುವುದು ನಮಗಿಬ್ಬರಿಗೂ ಇಷ್ಟವಾಗಿತ್ತು. ಕೆಲವೊಮ್ಮೆ ಸುಮ್ಮನೇ ಹರಟುತ್ತಿದ್ದೆವು. ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ನಾವಿಬ್ಬರೂ ಸ್ವಲ್ಪ ಗಂಭೀರರಾದೆವು. ಮುಂದಿನ ಜೀವನವನ್ನು ರೂಪಿಸಿಕೊಳ್ಳಬೇಕಾದ ಹೊಣೆಯ ಅರಿವೂ ನಮಗಾಗಿತ್ತು. ನಾವಿಬ್ಬರೂ ಇಷ್ಟಪಡುತ್ತಿದ್ದೇವೆ ಎಂದು ಗೊತ್ತಿದ್ದರೂ, ಪ್ರೀತಿಯನ್ನು ಮುಕ್ತವಾಗಿ ಮೊದಲ ಬಾರಿಗೆ ಹೇಳಿದ್ದು ಅವರೇ. ವಿಶ್ವವಿದ್ಯಾಲಯದ ಲೈಬ್ರರಿಯಿಂದ ಹಾಸ್ಟೆಲ್‌ನತ್ತ ಇಬ್ಬರೂ ಹೆಜ್ಜೆ ಹಾಕುತ್ತಾ ಇದ್ದಾಗ ಅವರೇ ಹೇಳಿದರು. “ನಾನು ನಿನ್ನ ಪ್ರೀತಿಸ್ತೀನಿ, ಮದುವೆಯಾಗೋಣ’. ಆ ವಾಕಿಂಗ್ ಅನ್ನೂ, ಆ ಮಾತುಗಳನ್ನೂ ನಾನು ಇಂದಿಗೂ ಮರೆತಿಲ್ಲ. ವಾಕಿಂಗ್ ಎನ್ನುವುದು ಎಷ್ಟೊಂದು ಆಹ್ಲಾದವಾಗಿತ್ತು ಎಂದರೆ ಅದು ನನ್ನ ಬದುಕಿನ ಹಾದಿಯನ್ನೇ ನಿಶ್ಚಯಿಸಿಬಿಟ್ಟಿತು.
ನಮ್ಮ ಮದುವೆ ಎನ್ನುವುದು ಸುಲಭವಾಗಿರಲಿಲ್ಲ. ನಾವೂ ಅಷ್ಟೆ, ಮನೆಯವರನ್ನು ಧಿಕ್ಕರಿಸಿ ಮದುವೆಯಾಗುವುದು ಬೇಡ ಎಂದುಕೊಂಡಿದ್ದೆವು. ಹಾಗಾಗಿ, ಇಬ್ಬರೂ ಮನೆಯಲ್ಲಿ ವಿಷಯ ತಿಳಿಸಿದಾಗ, ಹಿರಿಯರು ನೊಂದುಕೊಂಡರು. ಮೊದಲಿಗೆ ವಿರೋಧಿಸಿದರು. ಆದರೆ, ನಮ್ಮಿಬ್ಬರ ಜೀವನವನ್ನು ನಾವು ರೂಪಿಸಿಕೊಳ್ಳಬಲ್ಲೆವು ಎಂಬ ಭರವಸೆ ಹಿರಿಯರಲ್ಲಿ ಮೂಡಿದಾಗ, ಒಪ್ಪಿಗೆ ನೀಡಿದರು. ರಿಜಿಸ್ಟರ್ ಮದುವೆಯಾಗಿ, ಜೀವನ ಶುರು ಮಾಡಿದೆವು.
-ಕುಸುಮ್ ತಂತ್ರಿ ಡೆಸಾ
ಎಲ್ಲ ಆದದ್ದು ದುಶ್ಯಂತ- ಶಕುಂತಲೆಯರಿಂದಾಗಿ
ನಮ್ಮ ಪ್ರೀತಿಯ ಕತೆ ಹೇಳು ಎಂದು ಮಗ ಎಷ್ಟು ಸರ್ತಿ ಪೀಡಿಸಿದ್ದಾನೆ ! ನಾನು ಹೇಳಿಲ್ಲ. ಅವರೂ ಆ ಬಗ್ಗೆ ಮಾತನಾಡಿಲ್ಲ. ಯಾಕಂದ್ರೆ ಆ ಕತೆಯೇ ಅಷ್ಟು ದೊಡ್ಡದಿದೆ. ಈಗ ಹೇಳುವೆ ಕೇಳಿ. ಉಜಿರೆಯ ಎಸ್‌ಡಿಎಂ ಪದವಿ ಕಾಲೇಜಿನಲ್ಲಿ ನಾನು ಎರಡನೆಯ ವರ್ಷದ ಪದವಿ ಓದುತ್ತಿದ್ದಾಗ, ಚೇತನ್ ಕನ್ನಡ ಪಾಠ ಮಾಡುತ್ತಿದ್ದರು. ದುಶ್ಯಂತ- ಶಕುಂತಲೆಯ ಪ್ರೇಮವನ್ನು ಕಣ್ಣಿಗೆ ಕಟ್ಟುವಂತೆ ಅವರು ವಿವರಿಸುವಾಗ, ನಾನು ಕನಸಿನ ಲೋಕಕ್ಕೆ ಜಾರುತ್ತಿದ್ದೆ. ಅಲ್ಲಿ ಅವರೇ ದುಶ್ಯಂತ, ನಾನೇ ಶಕುಂತಲೆ.
ಅವರ ಕುರಿತು ನನ್ನಲ್ಲಿ ಪ್ರೀತಿ ಚಿಗುರಿದ ವಿಷಯ ಗುಟ್ಟಾಗಿ ಉಳಿಯಲೇ ಇಲ್ಲ. ನನ್ನ ಸ್ನೇಹಿತೆಯರಿಗೆ ತಿಳಿಯಿತು. ಎಲ್ಲರೂ ಸೇರಿ ಅವರಿಗೊಂದು ಅನಾಮಿಕ ಪ್ರೇಮಪತ್ರ ಬರೆಯುವುದೆಂದು ನಿರ್ಧರಿಸಿದೆವು. ಶಕುಂತಲೆ ಹೇಗೆ ಪತ್ರ ಬರೆದಳು ಎಂದು ಅವರೇ ಪಾಠ ಮಾಡಿದ್ದರಲ್ಲ ! ಆದರೆ, ನನ್ನ ಪ್ರೇಮ ನಿವೇದನೆಯ ಆ ಪತ್ರದಲ್ಲಿ ಭಾವನೆ ನನ್ನದು- ಕೈಬರಹ ಸ್ನೇಹಿತೆಯದ್ದು. ಪತ್ರ ತಲುಪಿದ ಕೂಡಲೇ, ಅವರು ಪತ್ರದ ಕೈಬರಹ ಯಾರದೆಂದು ಪರೀಕ್ಷಿಸಲು, ಕ್ಲಾಸ್ ಟೆಸ್ಟ್ ನೀಡಿದರು. ಆದರೆ, ಪತ್ರ ಯಾರದ್ದೆಂದು ಕಂಡುಹಿಡಿಯುವುದು ಅವರಿಗೆ ಸಾಧ್ಯವಾಗಲಿಲ್ಲ. ಕೈಬರಹ ಕಂಡುಹಿಡಿದರೂ, ಆಕೆ ಅಂತಹ ಸಾಲುಗಳನ್ನು ಬರೆಯುವವಳಲ್ಲ ಎಂಬುದು ಅವರಿಗೆ ಗೊತ್ತಾಗಿತ್ತು.
ಆಗ ಮತ್ತೂಂದು ಪತ್ರ ಬರೆದು, “ನಿಮ್ಮನ್ನು ಪ್ರೇಮಿಸುವ ಹುಡುಗಿ ಯಾರೆಂದು ತಿಳಿಯಬೇಕಾದರೆ, ಬೂದು ಬಣ್ಣದ ಶರ್ಟ್ ಹಾಕಿಕೊಂಡು ಬನ್ನಿ’ ಎಂದು ಸವಾಲು ಹಾಕಿದೆವು. ನಾವು ಸೂಚಿಸಿದ ದಿನ ಅವರ ಬೆಳ್ಳನೆಯ ಶರ್ಟ್ ಹಾಕಿ ಕಾಲೇಜು ಪ್ರವೇಶಿಸಿದರು. ಆದರೆ ನಾನು ಹತ್ತಿರ ಹೋಗಿ ಗಮನಿಸಿದಾಗ ತಿಳಿಯಿತು, ಅದರಲ್ಲಿ ಬೂದು ಬಣ್ಣದ ಗೆರೆಗಳಿದ್ದವು.
ಅವರ ಈ ಆಸಕ್ತಿಯೇ ನನ್ನಲ್ಲಿ ಕೊಂಚ ಧೈರ್ಯ ಮೂಡಿಸಿತು. ಸ್ಟಾಫ್ರೂಮ್‌ಗೆ ಹೋಗಿ, “ಲೆಕ್ಚರರ್‌ಗೆ ಪತ್ರ ಬರೆಯುವುದು ತಪ್ಪೆಂದು ಗೊತ್ತು. ಆದರೂ ಬರೆದೆ. ಕ್ಷಮಿಸಿ. ಮನಸ್ಸಿನ ಮಾತು ಹೇಳಿರುವೆ…’ ಎಂದು ತೋಚಿದ್ದೆಲ್ಲ ಹೇಳುವಷ್ಟರಲ್ಲಿ ಅಳುಬಂದಿತ್ತು. “ಈ ವಯಸ್ಸಿನಲ್ಲಿ ಇದೆಲ್ಲ ಸಾಮಾನ್ಯ’ ಎಂದಷ್ಟೇ ಅವರು ಹೇಳಿದರು.
ಕತೆ, ಕವನ, ಹಾಡು ಎಂದು ಎಲ್ಲ ಕ್ಷೇತ್ರಗಳಲ್ಲಿ ನಾನು ಚುರುಕಾಗಿದ್ದುದರಿಂದ, ಅವರು ಆಗಾಗ ನನ್ನೊಡನೆ ಪ್ರೋತ್ಸಾಹದ ಮಾತುಗಳನ್ನು ಮುಂಚೆಯೂ ಹೇಳುತ್ತಿದ್ದರು. ನಂತರವೂ ಅದೇ ರೀತಿ ವ್ಯವಹರಿಸುತ್ತಿದ್ದರು. ಆದರೆ, ಎಂದಿಗೂ “ನಾನೂ ಪ್ರೀತಿಸ್ತೇನೆ’ ಎಂದು ಹೇಳಿಯೇ ಇಲ್ಲ. ನೇರವಾಗಿ ಮದುವೆಗೆ ಬೇಕಾದ ಪ್ರಯತ್ನಗಳನ್ನು ಮಾಡಿದರು. ನನ್ನ ಮನೆಯಲ್ಲಿ ಈ ಮದುವೆಗೆ ವಿರೋಧವಿತ್ತು. ಆಗ ದೊಡ್ಡಪ್ಪ ಕಯ್ನಾರ ಕಿಞ್ಞಣ್ಣ ರೈ ನನ್ನ ತಂದೆಯವರಲ್ಲಿ ಮಾತನಾಡಿದರು. ಮಾವ ಅಮೃತ ಸೋಮೇಶ್ವರ ಅವರೂ ನನ್ನೊಡನೆ ಮಾತನಾಡಿ, “ಸರಿಯಾಗಿ ಯೋಚಿಸಿ ನಿರ್ಧರಿಸು’ ಎಂದು ಕಿವಿಮಾತು ಹೇಳಿದರು. ನನ್ನ ವಿಶ್ವಾಸದ ಮಾತುಗಳನ್ನು ಕೇಳಿದ ಬಳಿಕ ಅವರು, ನನ್ನಲ್ಲಿ ವಿಶ್ವಾಸ ಮಾತುಗಳನ್ನು ಆಡಿದರು. ಮದುವೆಯೂ ಚೆಂದಾಗಿ ನಡೆಯಿತು. ಈಗಲೂ ನಾನು ಅವರೊಡನೆ ಕೇಳುತ್ತೇನೆ, “ಒಮ್ಮೆಯಾದರೂ ಐ ಲವ್ ಯೂ ಅಂತ ಹೇಳಿ ಪ್ಲೀಸ್’. ಅವರಿನ್ನೂ ಹೇಳಿಲ್ಲ.
-ರಾಜೇಶ್ವರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೋಟೆಕಾರು ದರೋಡೆ ಪ್ರಕರಣ… ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತಂದ ಪೊಲೀಸರು
Cheque Bounce Case: ನಿರ್ದೇಶಕ ರಾಮ್ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳು ಜೈಲು ಶಿಕ್ಷೆ
Kalaburagi: ಜ. 26ರಂದು ಸಿದ್ಧಲಿಂಗೇಶ್ವರ ಪ್ರಕಾಶನ 131 ಗ್ರಂಥಗಳು ಏಕಕಾಲಕ್ಕೆ ಬಿಡುಗಡೆ
Bidar: ಡಿಐಜಿ ಅಜಯ್ ಹಿಲೋರಿ ದಿಢೀರ್ ಅಸ್ವಸ್ಥ… ಆಸ್ಪತ್ರೆಗೆ ದಾಖಲು
Swami Vivekananda: ವಿವೇಕʼರ ಚಿಂತನೆ ಅಳವಡಿಸಿಕೊಳ್ಳೋಣ