ಜಗತ್ತೇ ಒಂದು ದೊಡ್ಡ ಶಹರ ಅಲ್ಲಿ ಮದುವೆ ಎಂಬ ವ್ಯವಹಾರ
Team Udayavani, Jan 13, 2017, 3:45 AM IST
ನಮಗಿಬ್ಬರಿಗೂ ವಯಸ್ಸಾಗಿದೆ. ಅವಳಿಗೆ ಇತ್ತೀಚೆಗೆ ಆರೋಗ್ಯ ಸರಿಯಿಲ್ಲದೇ ಮನೆಕೆಲಸ ಮಾಡ್ಲಿಕ್ಕೆ ಕಷ್ಟ ಪಡ್ತಿದ್ದಾಳೆ. ಮಗನಿಗೆ ಒಂದು ಮದುವೆ ಮಾಡಿಸುವಾ ಅಂತ ಯೋಚನೆ ಮಾಡ್ತಿದ್ದೇವೆ. ನನ್ನ ಮಗನಿಗೊಂದು ಹೆಣ್ಣು ಬೇಕು. ಸರಕಾರಿ ಕೆಲಸದಲ್ಲಿರೋ ಹುಡುಗಿ ಇದ್ರೆ ಹೇಳಿ. ನನ್ನ ಮಗ ವಿದೇಶಕ್ಕೆ ಹೋಗಬೇಕೆಂದಿದ್ದಾನೆ. ವಿದೇಶದಲ್ಲಿ ಉದ್ಯೋಗದಲ್ಲಿರುವ ಹುಡುಗಿ ಹುಡುಕುತ್ತಿದ್ದೇವೆ ಲಕ್ಷಗಟ್ಟಲೆ ಖರ್ಚುಮಾಡಿ ಮಗನಿಗೆ ಮೆಡಿಕಲ್ ಓದಿಸಿದ್ದೇವೆ. ಒಳ್ಳೆಯ ಸ್ಥಿತಿವಂತ ಹುಡುಗಿ ಇದ್ರೆ ಹೇಳಿ. ಒಂದು ಸೈಟು, ಕಾರು, ಸಾಕಷ್ಟು ಚಿನ್ನಾಭರಣ ಕೊಟ್ಟು , ಮದುವೆ ಖರ್ಚು ನೋಡ್ಕೊಳ್ಳೋದಾದ್ರೆ ಉದ್ಯೋಗವಿಲ್ಲದ ಹುಡುಗಿಯೂ ಆಗ್ಬಹುದು’ ಗಂಡುಮಕ್ಕಳಿಗೆ ಹೆಣ್ಣು ಹುಡುಕುವ ಕೆಲವು ಹೆತ್ತವರ ಮಾತುಗಳಿವು. ಇದು ಹೊಸತೊಂದು ಸಂಬಂಧವನ್ನು ಕಟ್ಟುವ ಮಾತೆಂಬುದಕ್ಕಿಂತ ಒಂದು ವ್ಯಾಪಾರದ ಮಾತುಕತೆಯೆಂಬಂತೆ ಭಾಸವಾಗುತ್ತದೆ.
ಗಂಡು-ಹೆಣ್ಣು ಕೂಡಿಬಾಳುವ, ಒಬ್ಬರಿಗೊಬ್ಬರು ಹೆಗಲಾಗಿ, ಸಾಂತ್ವನವಾಗಿ ಪರಸ್ಪರ ಹಂಚಿಕೊಂಡು ಬದುಕುವ ಪವಿತ್ರ ಸಂಬಂಧವಾಗಿ ಮದುವೆಯನ್ನು ಕಾಣುವವರ ಸಂಖ್ಯೆ ವಿರಳವಾಗುತ್ತಿದೆ. ತಮ್ಮ ಮಗನಿಗೆ ಅವನನ್ನು ಅರ್ಥಮಾಡಿಕೊಳ್ಳುವ, ಪ್ರೀತಿಸುವ, ಅವನ ಆಶೋತ್ತರಗಳಿಗೆ ಸ್ಪಂದಿಸುವ ಜೀವನಸಂಗಾತಿ ಬೇಕೆಂದು ಬಯಸುವ ಹೆತ್ತವರು ವಿರಳ. ಆಸ್ತಿ, ಅಂತಸ್ತು, ಉದ್ಯೋಗ, ಶ್ರೀಮಂತಿಕೆಗಳ ಮಾನದಂಡಗಳ ಮೇಲೆ ಸಂಬಂಧಗಳನ್ನು ಕಟ್ಟಲು ಜನ ಉತ್ಸುಕರಾಗಿದ್ದಾರೆ. ಮಗ ಯಾವುದಾದರೂ ಹುಡುಗಿಯನ್ನು ಪ್ರೀತಿಸಿದರೆ ಬಲವಂತವಾಗಿ ಅವಳಿಂದ ಅವನನ್ನು ದೂರಮಾಡಿ ತಮ್ಮ ಅಂತಸ್ತಿಗೆ ತಕ್ಕ ಅಥವಾ ಅದಕ್ಕೂ ಮಿಗಿಲಾದ ಹುಡುಗಿಯನ್ನು ತಂದು ಮದುವೆ ಮಾಡಿಸುವ ಹೆತ್ತವರಿದ್ದಾರೆ. ಆಸ್ತಿ, ಅಂತಸ್ತು ಸರಿಹೊಂದಿದರೂ ಇಲ್ಲಿ ಮನಸ್ಸು-ಮನಸ್ಸುಗಳ ನಡುವೆ ಹೊಂದಾಣಿಕೆ ಬರಬಹುದೇ ಎಂಬುದನ್ನು ಯಾರೂ ಚಿಂತಿಸುವುದಿಲ್ಲ. ಹಲವು ಸಲ ಇಂತಹ ಹುಡುಗನನ್ನು ಮದುವೆಯಾದ ಹುಡುಗಿ ಅವನ ಪ್ರೀತಿಯನ್ನು ಪಡೆಯಲಾರದೇ ಜೀವನವಿಡೀ ಅತೃಪ್ತಿಯಿಂದ ಬದುಕಬೇಕಾಗುತ್ತದೆ. ಇಲ್ಲಿ ಆ ಹುಡುಗ, ಅವನು ಪ್ರೀತಿಸಿದ ಹುಡುಗಿ, ಅವನು ಮದುವೆಯಾದ ಹುಡುಗಿ, ಹೀಗೆ ಹಲವರ ಬದುಕು ಹಾಳಾಗಿಹೋಗಿರುತ್ತದೆ.
ದಿನವೂ ಕಚ್ಚಾಡಿಕೊಂಡು ದಿನ ದೂಡುವುದರಲ್ಲಿ ಅಥವಾ ವಿಚ್ಛೇದನದಲ್ಲಿ ಆ ದಾಂಪತ್ಯ ಕೊನೆಗೊಳ್ಳುತ್ತದೆ. ಪ್ರತಿಷ್ಠೆ ಉಳಿಸಲು ಹೋಗಿ ಯುವ ಪ್ರಾಯದ ಮಕ್ಕಳು ಜೀವನದಲ್ಲಿ ಜಿಗುಪ್ಸೆಯಿಂದ ಬದುಕುವಂತಾಗಲು ಸ್ವತಃ ಪೋಷಕರೇ ಕಾರಣರಾಗುತ್ತಾರೆ. ಕೆಲವು ಹುಡುಗರಿದ್ದಾರೆ, ಅವರಿಗೆ ತಮ್ಮ ಹೆಂಡತಿಯಾಗುವವಳು ತೆಳ್ಳಗೆ, ಬೆಳ್ಳಗಿರಬೇಕು, ಇನ್ನು ಕೆಲವರಿಗೆ ಹುಡುಗಿ ಬೆಳ್ಳಗೆ, ಗುಂಡಗೆ, ಮುದ್ದಾಗಿರಬೇಕು. ಕಪ್ಪು ಮೈಬಣ್ಣದವರಿಗೆ, ಹೆಚ್ಚು ತೆಳ್ಳಗೆ ಅಥವಾ ಹೆಚ್ಚು ದಪ್ಪಗಿರುವವರಿಗೆ, ಹೆಚ್ಚು ಎತ್ತರ ಅಥವಾ ತುಂಬಾ ಕುಳ್ಳಗಿರುವವರಿಗೆ, ಅಂಗ ಊನತೆಯಿರುವವರಿಗೆ, ಬಡತನದಲ್ಲಿರುವವರಿಗೆ ವಿವಾಹ ಮಾರುಕಟ್ಟೆಯಲ್ಲಿ ಬೇಡಿಕೆಯೇ ಇರುವುದಿಲ್ಲ. ಅಂಥವರಿಗೆ ಒಳ್ಳೆಯ ಉದ್ಯೋಗವಿದ್ದರೆ, ಶ್ರೀಮಂತಿಕೆಯಿದ್ದರೆ ಹಣದಾಸೆಗೆ ಮದುವೆಯಾಗಲು ಕೆಲವರು ಮುಂದೆ ಬರುತ್ತಾರೆ. ಇಂಥವರನ್ನು ಮದುವೆಯಾಗಬೇಕಾದರೆ ಹೆಚ್ಚು ವರದಕ್ಷಿಣೆಯ ಬೇಡಿಕೆಯಿಡುವವರಿದ್ದಾರೆ. ಇದ್ಯಾವುದಕ್ಕೂ ತಯಾರಿಲ್ಲದಿದ್ದರೆ ಆ ಹೆಣ್ಣು ಜೀವನಪೂರ್ತಿ ಅವಿವಾಹಿತಳಾಗಿ ಉಳಿಯಬೇಕಾಗುತ್ತದೆ. ಇಲ್ಲದಿದ್ದರೆ ಮುದುಕನನ್ನೋ, ವಿಚ್ಛೇದಿತನನ್ನೋ ಮದುವೆಯಾಗಬೇಕಾಗುತ್ತದೆ.
ಮದುವೆಯೆಂಬ ಮಾರುಕಟ್ಟೆಯಲ್ಲಿ ಹೆಣ್ಣೊಂದು ವ್ಯಾಪಾರದ ಸರಕೆಂಬುದು ಇದರಿಂದ ವೇದ್ಯವಾಗುತ್ತದಲ್ಲವೇ?
ಅಂತೂಇಂತೂ ಮದುವೆಯಾದರೆ ನಂತರ ಹೆಣ್ಣಿಗೆ ಗಂಡನ ಮನೆಯಲ್ಲಿ ಸಿಗುವ ಸ್ಥಾನಮಾನವೇನು? ಬಹುಶಃ ಅದೂ ಕೂಡ ಬಹಳ ನಿರಾಶಾದಾಯಕವಾಗಿರುತ್ತದೆ. ಬಹುತೇಕ ಮನೆಗಳಲ್ಲಿ ಹೆಣ್ಣು ಅಸ್ತಿತ್ವವಿಲ್ಲದ ಒಂದು ಜೀವ. ಮನೆಗೆಲಸ ಮಾಡುವ, ಅತ್ತೆ-ಮಾವನ ಚಾಕರಿ ಮಾಡುವ ಆಳು. ಗಂಡನ ಸುಖಕ್ಕೆ ಸ್ಪಂದಿಸಿ, ಅವನ ಮಕ್ಕಳನ್ನು ಹೊತ್ತು, ಹೆತ್ತು ಸಾಕುವ ಯಂತ್ರ. ಹಲವು ಮನೆಗಳಲ್ಲಿ ಅವಳಿಗೆ ಅಭಿಪ್ರಾಯ ಸ್ವಾತಂತ್ರÂವಿಲ್ಲ. ಗಂಡ, ಅತ್ತೆ, ಮಾವ, ಆ ಮನೆಯ ಇತರ ಹಿರಿಯರ ಮಾತೇ ಅಂತಿಮ. ಇವಳ ಸಲಹೆ ಎಷ್ಟೇ ಉತ್ತಮವಾಗಿರಲಿ ಅದನ್ನು ಪರಿಗಣಿಸುವವರಿಲ್ಲ. ಹಲವು ಅತ್ತೆ ಮಾವಂದಿರು ಸೊಸೆಯನ್ನು ತಮ್ಮ ಮನೆಯವಳು ಎಂಬ ಆತ್ಮೀಯತೆಯಿಂದ ನೋಡಿಕೊಳ್ಳುವ ಬದಲು, ಬೇರೆ ಮನೆಯಿಂದ ಬಂದವಳು ಎಂಬ ತಾತ್ಸಾರ ಭಾವದಿಂದ ಕಾಣುವುದೇ ಹೆಚ್ಚು. ಹೆಂಡತಿಯ ಮನೆಯವರನ್ನು ಮಾತುಮಾತಿಗೂ ಹಂಗಿಸುವ ಗಂಡಸರೂ ಇದ್ದಾರೆ. ಇಂತಹ ಮನೆಗಳಲ್ಲಿ ಆ ಹೆಣ್ಣಿನ ಸ್ಥಿತಿ ಸಿಂಹದ ಗುಹೆಯಲ್ಲಿ ಸಿಕ್ಕಿಕೊಂಡ ಹರಿಣದಂತಿರುತ್ತದೆ.
ಉದ್ಯೋಗಸ್ಥರಾದ ಹೆಂಗಸರನ್ನು ಅವರು ದುಡಿದು ಸಂಪಾದಿಸುತ್ತಾರೆ ಎಂಬ ಕಾರಣಕ್ಕೆ ಗೌರವಿಸುವವರಿದ್ದಾರೆ. ಆದರೆ ಕೆಲವು ಮನೆಗಳಲ್ಲಿ ಉದ್ಯೋಗದಲ್ಲಿದ್ದರೂ ಹೆಣ್ಣಿಗೆ ಬೆಲೆಯಿಲ್ಲದ ಪರಿಸ್ಥಿತಿಯಿದೆ. ಹೆಂಡತಿಯ ಸಂಬಳವನ್ನು ಬಲವಂತವಾಗಿ ವಸೂಲಿ ಮಾಡಿ, ಅವಳು ಪೈಸೆಪೈಸೆಗೂ ತನ್ನ ಮುಂದೆ ಕೈಯೊಡ್ಡಿ ಪ್ರತಿ ಖರ್ಚಿಗೂ ಲೆಕ್ಕ ಒಪ್ಪಿಸುವಂತೆ ಹೇಳುವ ಗಂಡಸರಿದ್ದಾರೆ. ಕೈಯಲ್ಲಿ ಹಣವಿದ್ದರೆ ಹೆಂಗಸರು ಅಹಂಕಾರ ತೋರಿಸುತ್ತಾರೆ ಎಂಬ ತಪ್ಪುಕಲ್ಪನೆಯಿಂದ ಹೆಂಡತಿಗೆ ಇಂಥವರು ಆರ್ಥಿಕ ದಿಗ್ಬಂಧನ ಹೇರುತ್ತಾರೆ. ಹೆಂಡತಿಯನ್ನು ಗಾಢವಾಗಿ ಪ್ರೀತಿಸುವ, ಗೌರವಿಸುವ, ಆರ್ಥಿಕ ಸ್ವಾತಂತ್ರ್ಯ ನೀಡುವ ಗಂಡಂದಿರೂ ಸೊಸೆಯನ್ನು ಮನೆಮಗಳಂತೆ ನಡೆಸಿಕೊಳ್ಳುವ ಅತ್ತೆ ಮಾವಂದಿರೂ ಇಲ್ಲವೆಂದಲ್ಲ. ಆದರೆ, ಭಾರತದ ಬೃಹತ್ ಜನಸಂಖ್ಯೆಗೆ ಹೋಲಿಸಿದರೆ ಅವರ ಸಂಖ್ಯೆ ವಿರಳ. ಉಳಿದಂತೆ ಹೆಚ್ಚಿನ ಎಲ್ಲಾ ಹೆಂಗಸರೂ ಒಂದಲ್ಲ ಒಂದು ರೀತಿಯಲ್ಲಿ ಗಂಡನ ಮನೆಯಲ್ಲಿ ಶೋಷಣೆಗೊಳಗಾಗುತ್ತಿದ್ದಾರೆ. ಹೆಣ್ಣಿನ ಬದುಕೆಂದರೆ ಹೀಗೆಯೇ ಎಂದು ಭಾವಿಸಿ ಅದಕ್ಕೆ ಒಗ್ಗಿಕೊಂಡು ಬದುಕುವವರಿಂದಾಗಿ ಬಹುಶಃ ಅವರ ನೈಜಸ್ಥಿತಿಗತಿಗಳ ಅರಿವು ಹೊರ ಜಗತ್ತಿಗಿರುವುದಿಲ್ಲ ಅಷ್ಟೇ.
ಮದುವೆಯೆಂಬುದು ಆತ್ಮೀಯತೆಯ ಅನುಬಂಧವಾಗುವ ಬದಲು, ಅನಿವಾರ್ಯತೆಯ ಬಂಧನ ಎಂಬಂತೆ ನಮ್ಮ ಹೆಣ್ಣುಮಕ್ಕಳು ಬದುಕುವ ಪರಿಸ್ಥಿತಿ ಬದಲಾಗಬೇಕಾದರೆ ಮದುವೆಯೆಂಬುದು ವ್ಯಾಪಾರವಲ್ಲ ಎಂಬ ಪ್ರಜ್ಞೆ ಎಲ್ಲರಿಗೂ ಬರಬೇಕು. ಹೆಣ್ಣಿಗೂ ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ಅವಕಾಶ ದೊರೆಯಬೇಕು.ಹಣ ಅಥವಾ ಇನ್ಯಾವುದೋ ಸ್ವಾರ್ಥ ಲಾಭಕ್ಕಾಗಿ ಗಂಡ ತನ್ನನ್ನು ಮದುವೆಯಾದ ಎಂಬ ಭಾವನೆ ಹೆಂಡತಿಗೆ ಬಂದರೆ ಆ ಸಂಬಂಧದಲ್ಲಿ ಮುಂದೆ ಆತ್ಮೀಯತೆ ಉಳಿಯಲಾರದು. ಹೆಚ್ಚು ವರದಕ್ಷಿಣೆ ತಂದ ಶ್ರೀಮಂತ ಮನೆತನದ ಕೆಲವು ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ದರ್ಪದಿಂದ ವರ್ತಿಸಲು ಈ ಭಾವನೆಯೂ ಕಾರಣವಾಗಿರಬಹುದು. ಮದುವೆಯೆಂದರೆ ಪ್ರತಿಷ್ಠೆ ಪ್ರದರ್ಶನಕ್ಕಿರುವ ವೇದಿಕೆಯಲ್ಲ. ಬೇರೆಲ್ಲ ಹೊಂದಾಣಿಕೆಗಿಂತ ಅಲ್ಲಿ ಬೇಕಿರುವುದು ಮನಸ್ಸುಗಳ ಹೊಂದಾಣಿಕೆ. ಮಕ್ಕಳ ಮದುವೆಯ ಬಗ್ಗೆ ಅವರ ಬದುಕು ಸುಂದರವಾಗಿರಬೇಕು ಎಂಬ ವಿಷಯಕ್ಕೆ ಹೆತ್ತವರು ಹೆಚ್ಚು ಆದ್ಯತೆ ಕೊಡಬೇಕು. ವ್ಯಕ್ತಿಗೆ, ವ್ಯಕ್ತಿತ್ವಕ್ಕೆ ಹೆಚ್ಚು ಬೆಲೆ ಕೊಟ್ಟು ಸಂಬಂಧಗಳನ್ನು ಸ್ಥಾಪಿಸಲು ನೋಡಿದರೆ ಆ ವಿವಾಹಗಳು ಬಂಧನವೆನಿಸದೇ ಆತ್ಮೀಯತೆ, ಪ್ರೀತಿಯ ಅನುಬಂಧವಾದೀತು. ಹೆಣ್ಣು ಮತ್ತು ಗಂಡು ಇಬ್ಬರೂ ಮಾನಸಿಕವಾಗಿ ಪ್ರಬುದ್ಧರಾಗಿ, ಸಾಕಷ್ಟು ಯೋಚಿಸಿ ಮದುವೆಯೆಂಬ ಗುರುತರ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಬೇಕು. ಬಾಹ್ಯ ಆಕರ್ಷಣೆಗಳ ನಶ್ವರತೆ ಹೆಣ್ಣಿಗೂ ಗಂಡಿಗೂ ಅರಿವಿರಬೇಕು. ವೈವಾಹಿಕ ಜೀವನದ ಬಗ್ಗೆ ಸ್ಪಷ್ಟವಾದ ಕಲ್ಪನೆ ಇಟ್ಟುಕೊಂಡು ಇಬ್ಬರೂ ಆ ಬದುಕಿಗೆ ಪ್ರವೇಶಿಸಿದರೆ ಆ ವಿವಾಹ ಜನ್ಮಜನ್ಮದ ಅನುಬಂಧವೆನಿಸೀತು.
– ಜೆಸ್ಸಿ ಪಿ. ವಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.