ಪುಟಗಳ ಮಧ್ಯದ ನವಿಲುಗರಿ
Team Udayavani, Apr 27, 2019, 6:05 PM IST
ಮುಂಬೈ ಕನ್ನಡ ಕಥಾಲೋಕವನ್ನು ಬೆಳಗಿದ, ಕವನಗಳಿಂದ ಸ್ಪುರಿಸಿದ ನವಿಲುಗರಿಯಂಥ ಮೃದುಹಸ್ತವೊಂದು ಸ್ತಬ್ಧವಾಗಿದೆ. ಬರೆದ ಕೆಲವೇ ಶಬ್ದಚಿತ್ರಗಳಿಂದ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದ ಮುಂಬೈ ಲೇಖಕಿ ತುಳಸಿ ವೇಣುಗೋಪಾಲ ಇಹಯಾತ್ರೆ ಮುಗಿಸಿ ಎದ್ದು ನಡೆದಿದ್ದಾರೆ. ಮುಂಬೈ ಸಾಹಿತ್ಯಲೋಕದ ಆಪ್ತವರ್ಗ ದುಃಖದಲ್ಲಿ ಮುಳುಗಿದೆ.
ತಮ್ಮ ಕಥೆ, ಕವನಗಳ ಮೂಲಕ ಬುದ್ಧಿ-ಭಾವಲೋಕದ ಚಿತ್ತಾರವನ್ನು ಬಿಡಿಸಿಟ್ಟವರು, ತುಳಸಿ. ತನ್ನನ್ನು ತಟ್ಟಿ ಕಾಡಿದ ಮುಂಬೈಯ ಕೆಳಮಧ್ಯಮ ವರ್ಗದ ಜೀವನಾನುಭವದ ಚಿತ್ರಚಿತ್ತಾರವನ್ನು ಪ್ರಖರವಾದ ಶಬ್ದಗಳಲ್ಲಿ ಬಿಂಬಿಸಿದ ತುಳಸಿ, ಒಬ್ಬ ನಿರಂತರ ಶೋಧಕಿ. ಅವರ ಕಥೆಗಳಲ್ಲಿನ ಜೀವಭಾವದ ಮಿಡಿತ ಅನನ್ಯವಾದುದು.
ಮಂಗಳೂರಿನ ಬೋಳಾರದ ಮುಳಿಹಿತ್ಲಿನ ಮನೆಯಲ್ಲಿ ತುಳಸಿಹಬ್ಬದಂದು ಜನಿಸಿದ ಮಗುವನ್ನು ಕೈಗೆತ್ತಿಕೊಂಡ ತಂದೆ ಉದ್ಗರಿಸಿದ್ದೇ, “ನನ್ನ ತುಳಸಿ !’ ಎಂದು. ತಂದೆಯ ಮಗಳಾಗಿ, ಆ ಮಡಿಲಲ್ಲಿ ಒರಗಿ ಕಥೆಗಳ ನಕ್ಷತ್ರಲೋಕವನ್ನು ಕಂಡವರು, ತುಳಸಿ. ಪುರಾಣಕಥೆಗಳಿಂದ ತೊಡಗಿ, ಬೆಳೆದಂತೆ ತಂದೆ ಬಣ್ಣಿಸಿದ ತಾನ್‌ಸೇನ್, ಬೈಜೂ ಬಾವ್ರಾ, ಬಸಂತ್ ಬಹಾರ್ ಮುಂತಾದ ಸಿನೆಮಾ ಕಥೆಗಳ ರಂಗುರಂಗಿನ ಲೋಕದ ವರ್ಣನಾ ವೈಭವವನ್ನೂ, ಕುಮಾರವ್ಯಾಸ ಭಾರತದ ವಾಚನ, ಅರ್ಥವನ್ನೂ ಸವಿದವರು.
ಮನೆಯಲ್ಲಿ ತಂದೆ ಮತ್ತು ಮಾವಂದಿರ ಪುಸ್ತಕ ಭಂಡಾರದಿಂದ ಪ್ರಾಪ್ತವಾದ ಪುಸ್ತಕ ಸಂಪತ್ತಿನಂತೇ ಶಾಲೆಯಲ್ಲಿ ಒಳ್ಳೆಯ ಓದಿಗೆ ದಾರಿ ಮಾಡಿಕೊಟ್ಟ ಗೆಳತಿ ಜ್ಯೋತಿಯನ್ನೂ ಸ್ಮರಿಸಿದವರು, ಅವರು. ತಮ್ಮ ಬಾಲ್ಯದ ಆಟದಂಗಣವಾದ ಮುಳಿಹಿತ್ಲಿನ ಮೈದಾನ ಹಾಗೂ ನೇತ್ರಾವತಿ ತೀರಕ್ಕೆ ಮಾರುಹೋದವರು.
ಮುಂಬೈಯ ಲೇಖಕ, ಪತ್ರಕರ್ತ ಕೆ. ಟಿ. ವೇಣುಗೋಪಾಲ್ ತುಳಸಿಗೆ ದೂರದ ಬಂಧುವೂ ಹೌದು. ಅವರ ಮುಂಬೈ ಪತ್ರ, ವೈಕಂ, ಎಂ. ಟಿ. ಮೊದಲಾದ ಮಲೆಯಾಳೀ ಲೇಖಕರ ಕಥೆಗಳ ಅನುವಾದವನ್ನೋದಿ ಮೆಚ್ಚಿದ್ದರು ತುಳಸಿ. ಬಾಳಸಂಗಾತಿಯಾಗಿ ವೇಣುಗೋಪಾಲ್ ಬಂದಾಗ, ಸಾಹಿತ್ಯಾಸಕ್ತನ ಸಾಂಗತ್ಯವನ್ನೇ ಬಯಸಿದ್ದ ತುಳಸಿಯ ಹಂಬಲ ಕೈಗೂಡಿತ್ತು. ಮದುವೆಯ ಬಳಿಕ, ಪತಿಯ ಒತ್ತಾಸೆಯಂತೆ, ನವವಧುವಿನ ದಿನಚರಿ ಶೀರ್ಷಿಕೆಯಲ್ಲಿ, ಅನಿಸಿದ್ದನ್ನೆಲ್ಲ ಬರಿ, ಎಂಬ ಆದೇಶದೊಡನೆ ತುಳಸಿಯ ಬರವಣಿಗೆ ಮೊದಲಿಟ್ಟಿತು. ಮಲಯಾಳ ಕಥೆಗಳಿಂದ ಪ್ರಭಾವಿತರಾಗಿದ್ದ ಕೆ. ಟಿ. ಚಿಕ್ಕ ಚಿಕ್ಕ ವಾಕ್ಯರಚನೆ ಹಾಗೂ ಚಿಕ್ಕ ಚೌಕಟ್ಟಿನಲ್ಲಿ ಹೆಚ್ಚು ಹೇಳುವ, ಕಾವ್ಯಾತ್ಮಕ ಗುಣದ ಬರಹಗಳ ಬಗ್ಗೆ ತಿಳಿವಿತ್ತವರು. ಅಂತೆಯೇ ತಮ್ಮ ಕಥೆಗಳ ನಿಷ್ಠುರ ವಿಮರ್ಶಕರೂ ಆಗಿದ್ದರೆಂದು ತುಳಸಿ ನೆನೆದುಕೊಂಡಿದ್ದಾರೆ.
ಕಂಡುಂಡ ಜೀವನಾನುಭವದಿಂದ ರೂಪುಗೊಂಡ ತಪ್ತರು, ಗೃಹಭಂಗ, ಮುಂಜಾವಿಗೆ ಕಾದವಳು , ಇದು ಬೇರೆ ಕಥೆ, ಹೊಂಚು ಇಂಥ ಹತ್ತುಕಥೆಗಳ ಸಂಕಲನ, ಮುಂಜಾವಿಗೆ ಕಾದವಳು 1993ರಲ್ಲಿ ಬೆಳಕು ಕಂಡಿತು. ಕಥೆಯಲ್ಲಿನ ಕಾವ್ಯಾತ್ಮಕತೆ, ಪಾತ್ರಗಳ ಬಗೆಗಿನ ನಿರ್ಲಿಪ್ತತೆ, ಆ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಬರೆವ ರೀತಿ ತುಳಸಿಯ ಕಥೆಗಳನ್ನು ಅನನ್ಯವಾಗಿಸಿವೆ. ಶಿಕ್ಷಕಿಯಾಗಿ ದುಡಿದ ನಾಲ್ಕು ವರ್ಷಗಳ ಅನುಭವದಿಂದ ಹೊಮ್ಮಿದ ಕಥೆಗಳು, ಆವಿಷ್ಕಾರ ಮತ್ತು ಕೊನೆಯ ಸಾಲಿನ ಹುಡುಗ. ಮನಸ್ಸಿನಲ್ಲಿ ಕಥೆಯ ಬೀಜ ಮೊಳಕೆಯೊಡೆದು ಬೆಳೆವ ಪ್ರಕ್ರಿಯೆ, ಅದನ್ನು ಆಪ್ತರೆದುರು ತೆರೆದಿಡುವ ತವಕ ತನ್ನನ್ನು ಲೇಖಕಿಯಾಗಿ ರೂಪಿಸಿದೆ, ಎಂದಿ¨ªಾರೆ, ತುಳಸಿ. ಇದೇ ತುಮುಲ ಅವರನ್ನು ಕವಯಿತ್ರಿಯಾಗಿಯೂ ರೂಪಿಸಿದೆ. ಮರಣಶಯೆಯಲ್ಲಿ ಮೌನಿಯಾಗಿ ಮಲಗಿದ ವಾಚಾಳಿ ಗೆಳತಿಯನ್ನು ಕಂಡು ನೋವು ಹೆಪ್ಪುಗಟ್ಟಿ ಬರೆದ ಮೌನಿ, ಬೆಳಗಿನಲ್ಲೇ ಸೂರ್ಯಾಸ್ತ, ಪುಟಗಳ ಮಧ್ಯದಲ್ಲೊಂದು ನವಿಲುಗರಿ ಮುಂತಾದ ಇಪ್ಪತ್ತೈದು ಕವಿತೆಗಳ ಸಂಕಲನ, 1999ರಲ್ಲಿ ಬೆಳಕು ಕಂಡಿತು.
ಪತಿ ಕೆ. ಟಿ. ಅವರೊಡನೆ ನಾಲ್ಕು ನಾಲ್ಕು ಕಥೆಗಳು ಜೊತೆಯಾಗಿ ಜುಗಲ್ ಬಂದಿ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದುದೊಂದು ಹೊಸ ಪ್ರಯೋಗ. ಮುಂಜಾವಿಗೆ ಕಾದವಳು ಕೃತಿಗೆ ಭಾರತರತ್ನ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ ಮತ್ತು ವರ್ಧಮಾನ ಪೀಠದ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪ್ರಾಪ್ತವಾಗಿದೆ. ಪುಟಗಳ ಮಧ್ಯದಲ್ಲೊಂದು ನವಿಲುಗರಿ ಹಸ್ತಪ್ರತಿಗೆ ಜಿ. ಎಸ್. ಶಿವರುದ್ರಪ್ಪ ಕಾವ್ಯಸ್ಪರ್ಧೆಯಲ್ಲಿ ಬಹುಮಾನ ಲಭಿಸಿದೆ.
ಸ್ಪಾರೋ – ಸೌಂಡ್ ಆಂಡ್ ಪಿಕ್ಚರ್ ಆಕೈವ್ ಫಾರ್ ರಿಸರ್ಚ್ ಅನ್ ವಿಮೆನ್ ಸಂಸ್ಥೆಯಲ್ಲಿ ಕನ್ನಡ ಭಾಷಾ ಸಮನ್ವಯಕಿಯಾಗಿ ದುಡಿದವರು, ತುಳಸಿ. ನನ್ನಂಥ ಹಲವರನ್ನು ಸ್ಪಾರೋ ಸಂಸ್ಥೆಗೆ ಪರಿಚಯಿಸಿ, ಕನ್ನಡ ಜಾನಪದ, ಕಲೆ, ಸಾಹಿತ್ಯಾದಿ ಇತರ ಕ್ಷೇತ್ರಗಳ ಸಾಧಕಿಯರ ಸಾಧನಾಸಿರಿಯನ್ನು ಪರಿಚಯಿಸಿ, ದೃಶ್ಯ, ಧ್ವನಿಮುದ್ರಣದಲ್ಲಿ ಕಾಪಿಡುವ, ಅನುವಾದಿಸುವ ಕಾಯಕದಲ್ಲಿ ತೊಡಗಿಸಿ ಸಾರ್ಥಕತೆಯ ಅನುಭವವನ್ನು ಇತ್ತವರು. ಸಂಸ್ಥೆ ಹೊರತಂದ ಬೊಗಸೆಯಲ್ಲಿಷ್ಟು ಬೆಳಕು ತುಂಬಿ ಮತ್ತು ಮುಗಿಲ ಮಲ್ಲಿಗೆಯ ಎಟುಕಿಸಿ ಗ್ರಂಥಗಳ ಕಾರ್ಯನಿರ್ವಾಹಕ ಸಂಪಾದಕಿಯಾಗಿ ದುಡಿದವರು. ಸ್ಪಾರೋದ ಹೊಸ ಜವಾಬ್ದಾರಿ ತನ್ನಲ್ಲಿ ಹೊಸ ಆತ್ಮವಿಶ್ವಾಸವನ್ನೇ ಮೂಡಿಸಿ ತನ್ನ ವ್ಯಕ್ತಿತ್ವದ ಹೊಸಮುಖವನ್ನೇ ತನಗೆ ಪರಿಚಯಿಸಿತೆಂದು ಅವರಂದಿ¨ªಾರೆ. ಸ್ಪಾರೋ ಮಹಿಳೆಯರ ಬದುಕನ್ನು ಒಟ್ಟರ್ಥದಲ್ಲಿ ಗ್ರಹಿಸುವ ಅವಕಾಶವನ್ನು ತನಗಿತ್ತ ಬಗ್ಗೆ, ಈ ನಿಟ್ಟಿನ ಕ್ಷೇತ್ರ ಕಾರ್ಯದಲ್ಲಿ ಗೆಳತಿ, ಲೇಖಕಿ ಮಿತ್ರಾ ಹಾಗೂ ಬಿ. ಎಂ. ರೋಹಿಣಿ ಅವರು ಜೊತೆ ನೀಡಿದ ಬಗ್ಗೆ ಸ್ಮರಿಸಿ¨ªಾರೆ. ಈ ನೈಜ ಬದುಕಿನ ಸಂದರ್ಶನದಿಂದಾದ ಅನುಭವದಿಂದ ಕಥಾರಚನೆ ಹಿಂದೆ ಸರಿದು ಅದಕ್ಕಿಂತ ನೈಜ ಬದುಕಿನ ಕಥೆಗಳೇ ಮಹತ್ವದವು ಎಂಬ ಭಾವ ಬೆಳೆಯಿತೆಂದು ತುಳಸಿ ಅಂದಿದ್ದರು. ಕಥೆ ಬರೆಯುವುದು ಹಾಗೂ ಪ್ರಕಟಿಸುವುದಕ್ಕಿಂತ ಕಥೆ ಹೇಳುವುದೇ ತನಗೆ ಪ್ರಿಯವೆನ್ನುತ್ತಿದ್ದ ತುಳಸಿಯ ಬಾಯಲ್ಲಿ ಹೊಮ್ಮುತ್ತಿದ್ದ ಮಾತುಗಳು ಅವರ ಹೃದಯದಾಳದಿಂದಲೇ ಬರುತ್ತಿದ್ದವು. ವರ್ಷಗಳ ಹಿಂದೆ ಸಂಡೂರಿನಲ್ಲಿ ನಡೆದ ಕರ್ನಾಟಕ ಲೇಖಕಿಯರ ಸಂಘದ ಲೇಖ-ಲೋಕ ಸಮ್ಮೇಳನದಲ್ಲಿ ಸ್ಟೇಜ್ ಬೇಡವೆಂದು ಹೊರಗೆ ಬಯಲಲ್ಲಿ ಮರದ ಕೆಳಗೆ ಕುಳಿತು ತುಳಸಿ ತನ್ನ ಬದುಕು, ಬರಹವನ್ನು ಅತ್ಯಂತ ಆಕರ್ಷಕವಾಗಿ, ರೋಚಕವಾಗಿ ತೆರೆದಿಟ್ಟ ಬಗೆಯನ್ನು ನೋಡಿ, ಕೇಳಿ ಆನಂದಿಸಿದ ಭಾಗ್ಯ ನಮ್ಮದು.
ಸ್ಪಾರೋ ಸಂಸ್ಥೆಯ ಬೆಳ್ಳಿಹಬ್ಬ ಪ್ರಯುಕ್ತ ಕರ್ಜತ್‌ನಲ್ಲಿ ನಡೆದ ಎರಡು ದಿನಗಳ ಬಹುಭಾಷಾ ಸಾಹಿತ್ಯ ಸಮಾವೇಶ, ಎಕ್ಸ್‌ಪೀರಿಯೆನ್ಸ್‌ಸ್ ಆ್ಯಂಡ್ ಎಕ್ಸ್‌ಪ್ರೆಶ್ಶನ್ಸ್‌ನಲ್ಲಿ ತುಳಸಿಯ ಸಾಂಗತ್ಯ ನನ್ನ ಮನವನ್ನರಳಿಸಿದ ಪರಿ ಅನನ್ಯ. ಕರ್ಜತ್‌ನಲ್ಲಿ ಶ್ಯಾಮಲಾಳಿಗೆ ಕಾಫಿ ಸಿಗುವುದೋ ಇಲ್ಲವೋ ಎಂದು, ಪೂನಾದಿಂದ ಬರುವಾಗ ಮು¨ªಾದ ಬಾಟಿÉಯಲ್ಲಿ ನನಗಾಗಿ ಕಾಫಿ ಪೌಡರ್ ತಂದಿದ್ದ ತುಳಸಿ. ಅಂದಿನಿಂದಿಂದಿನವರೆಗೂ ದಿನವೂ ಬೆಳಿಗ್ಗೆ ಎ¨ªೊಡನೆ ನನ್ನ ಕಾಫಿಗಾಗಿ ನಾನು ದಿಟ್ಟಿಸುವುದು ಅದೇ ಬಾಟಲ್‌ನ ಪ್ರೀತಿಯ ಮುಖದತ್ತ. ಒತ್ತಾಯದಿಂದ ಬಿಡದೆ ತನ್ನ ಸೆಲ್ವಾರ್ ಕಮೀಜ್ ನನಗೆ ತೊಡಿಸಿ, ಈಗ ನೋಡಿ, ಈ ಬೆಟ್ಟದಲ್ಲಿ ನೀವು ಎಷ್ಟು ಆರಾಮವಾಗಿ ಸುತ್ತಾಡಬಹುದು, ಎಂದು ಸಂಭ್ರಮಿಸಿದ ತುಳಸಿ! ಐ.ಸಿ. ಕಾಲನಿಯ ತನ್ನ ತಂದೆಯ ಮನೆಯÇÉಾದ ಭೂತದ ಕಾಟದ ಬಗ್ಗೆ ಅತ್ಯಂತ ರೋಚಕವಾಗಿ ಬಣ್ಣಿಸಿದ ತುಳಸಿ! ಭೂತಗಳನ್ನು ನಂಬದ ನನ್ನ ಪರಿಹಾಸದ ನಗುವಿಗೆ, “ಸತ್ಯ, ಶ್ಯಾಮಲಾ’ ಎಂದು ನಂಬಿಸಲೆಳಸಿದ ತುಳಸಿ! ಬಾಳಸಂಗಾತಿಯ ಅಗಲಿಕೆಯ ಬಳಿಕ, ಮೊಮ್ಮಗಳ ಲಾಲನೆ-ಪಾಲನೆಯಲ್ಲಿ ಭಾಷಾ ಸಿರಿ, ಕಥಾಸಿರಿಯನ್ನೇ ಅವಳ ಮಡಿಲಿಗೆ ತುಂಬಿ ಬೆಳೆಸಿದ ತುಳಸಿ!
ಕಥನಲೋಕದ ಈ ಅದ್ಭುತ ಶಕ್ತಿಯ ಮುಂದಿನ ಕೃತಿಗಳಿಗಾಗಿ ನಾವೆಲ್ಲ ಕಾದಿದ್ದಂತೇ ತುಳಸಿ ಎದ್ದು ಕಾಣದ ಲೋಕಕ್ಕೆ ನಡೆದಿದ್ದಾರೆ. ಪುಟಗಳ ಮಧ್ಯದ ನವಿಲುಗರಿಯಾಗಿ, ಅದೇ ತಾನೇ ಮೀಯಿಸಿ ಕಟ್ಟಿ ಮಲಗಿಸಿದ ಕಂದನ ಬಿಸುಪಾಗಿ ನಮ್ಮ ಹೃದಯಗಳಲ್ಲಿ ಉಳಿದಿದ್ದಾರೆ.
ಶ್ಯಾಮಲಾ ಮಾಧವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.