ಅಮ್ಮನ ಫಜೀತಿಗಳು
Team Udayavani, Dec 7, 2018, 6:00 AM IST
ಪ್ರತಿ ಅಮ್ಮನ ಅನುಭವಗಳೂ ವಿಭಿನ್ನವೇ. ಆದರೆ ಒದ್ದಾಟವಿಲ್ಲದ, ಅಸಹನೆಯಿಲ್ಲದ, ನೋವಿಲ್ಲದ, ದಿನವಿಡೀ ಇದೇನು ಮಾಡಿದ್ದನ್ನೇ ಮಾಡುತ್ತಿದ್ದೇನೆ ಎಂದುಕೊಳ್ಳದ ಅಮ್ಮನಂತೂ ಸಿಗಲಾರದು. ಫೇಸ್‌ಬುಕ್‌ನಲ್ಲಿ ಮಗಳಿಗೆ ಹೊಡೆಯುತ್ತಿರುವ ಸೆಲ್ಫಿ ಯಾರೂ ಹಾಕಿಕೊಳ್ಳುವುದಿಲ್ಲ. ಸೀದುಹೋದ ದೋಸೆಯ ಫೋಟೊ ಅಪ್‌ಲೋಡ್ ಆಗುವುದಿಲ್ಲ. ಉಕ್ಕಿದ ಹಾಲಿನ ಲೆಕ್ಕವಿಡುವುದಿಲ್ಲ. ಅವಳು, ಲೋಕಕ್ಕೆ ತನ್ನನ್ನು ತಾನು ಸಂತೋಷವಾಗಿಯೇ ತೋರಿಸಿಕೊಳ್ಳುವಳು.
ಮಗು… ಅವನ ನೆತ್ತಿಯ ಘಮಕ್ಕೆ ಸಮನಾದ ಪರಿಮಳ ಈ ಜಗತ್ತಲ್ಲೇ ಮತ್ತೂಂದಿಲ್ಲ. ಬೊಚ್ಚುಬಾಯಿಯಲ್ಲಿ ಈಗಷ್ಟೇ ಹುಟ್ಟಿದ ಹೊಳೆವ ಹಲ್ಲುಗಳ ಮಧ್ಯೆ ಸುರಿವ ಜೊಲ್ಲೂ ಮುತ್ತಿನ ಹನಿಯಂತೆ. ನಿಮೀಲಿತ ಕಣ್ಣಲ್ಲಿ ಪರಮ ಧ್ಯಾನಿಯಂತೆ ಹಾಲೂಡುವ ಅವನು ಸೋಜಿಗದ ಮುದ್ದೆ. ದುಂಡುಮಲ್ಲಿಗೆ ಮೊಗ್ಗಿನಂಥ ಎಳೆಯ ಬೆರಳಿಂದ ಅಮ್ಮನ ಕೆನ್ನೆಯ ತಟ್ಟಿ ಸೊಗಸಾದ ನಿದ್ರೆಯಿಂದ ಎಬ್ಬಿಸಿದರೂ ಉಕ್ಕುವುದು ಮುದ್ದಷ್ಟೇ… ಆದರೆ, ಮಗುವೆಂದರೆ ಇಷ್ಟೇನಾ?
ಅದು ಕರೀನಾ ಕಪೂರ್ ತನ್ನ ಮನೆಯ ಮೆಟ್ಟಿಲುಗಳ ಮೇಲೆಯೇ ವರ್ಕ್‌ಔಟ್ ಮಾಡುತ್ತಿದ್ದ ವಿಡಿಯೋ. “ಮಗುವಾದ ಮೇಲೂ ಎಷ್ಟೊಂದು ಫಿಟ್ ಆಗಿದ್ದಾಳೆ! ಅವಳ ನಿತ್ಯದ ವ್ಯಾಯಾಮ ಹೀಗಿರುತ್ತದೆ ನೋಡಿ… ಈ ಥರದ ಛಲ ಎಲ್ಲರಿಗೂ ಬೇಕು’ ಎಂಬ ವಿವರಣೆ. ಅದರ ಕೆಳಗೆ ಯಾರಧ್ದೋ ಕಮೆಂಟೂ ಇತ್ತು: “ಅವರಿಗೆ ಡಯಾಪರ್ ಚೇಂಜ್ ಮಾಡಲು, ಉಣ್ಣಿಸಲು, ಸ್ನಾನ ಮಾಡಿಸಲು ಕೈಗೊಬ್ರು ಇರ್ತಾರೆ. ನಿತ್ಯ ಯಾರ ಸಹಾಯವೂ ಇಲ್ಲದೆ ಬೆಳಿಗ್ಗೆಯಿಂದ ರಾತ್ರಿ ತನಕ ಒದ್ದಾಡುತ್ತಾಳಲ್ಲ. ಆ ತಾಯಿಯೇ ನಿಜವಾದ ಹೀರೋಯಿನ್’. ಕರೀನಾ ಬಗ್ಗೆ ಮೆಚ್ಚುಗೆ ಇದ್ದರೂ ಆ ಕಮೆಂಟ್‌ನಲ್ಲಿದ್ದದ್ದು ಅಕ್ಷರಶಃ ಸತ್ಯ ಅಂತನ್ನಿಸಿತು. ತಾಯ್ತನ ಎಷ್ಟು ಖುಷಿಯಧ್ದೋ, ಅಷ್ಟೇ ಕಷ್ಟದ್ದು ಕೂಡ. ಮಗು ಎಂದರೆ ಆಟ-ಮುದ್ದು ಇಷ್ಟೇ ಆಗಿದ್ದಿದ್ದರೆ ಅಮ್ಮನಿಗೆ ಒದ್ದಾಟಗಳೇ ಇರುತ್ತಿರಲಿಲ್ಲ.
ಮಗುವಿನೊಂದಿಗೇ ಫಜೀತಿಯೂ ಹುಟ್ಟಿ…
ಕಂದನ ಹುಟ್ಟಿನ ಖುಷಿ ಒಂದೆಡೆಯಾದರೆ ಫಜೀತಿಗಳೂ ಮತ್ತೂಂದೆಡೆ ಸಾಲುಗಟ್ಟಿ ನಿಂತಿರುತ್ತವೆ. ಅಮ್ಮನ ಎದೆ ಹಾಲೂಡುವುದು ಮಗುವಿಗೆ ಎಷ್ಟು ಹೊಸತೋ, ಕುಡಿಸುವುದು ಅಮ್ಮನಿಗೂ ಅಷ್ಟೇ ಹೊಸತು. ಆಗಷ್ಟೇ ಹೆರಿಗೆಯಾಗಿ ನೋವನ್ನು ಸಹಿಸಿಕೊಂಡು ಕೂರುವುದು, ಮಲಗುವುದೇ ಕಷ್ಟವಾಗಿದ್ದರೂ ಅಮ್ಮನೇ ಮಾಡಬೇಕಾಗಿರುವ ಮತ್ತು ಅವಳಷ್ಟೇ ಮಾಡಬಹುದಾದ ಕೆಲಸ ಇದು. ಯಾವ ಸೆಲೆಬ್ರಿಟಿಯೂ ಈ ಕರ್ತವ್ಯದಿಂದ ಕಳಚಿಕೊಳ್ಳಲಂತೂ ಸಾಧ್ಯವಿಲ್ಲ. ಆಗಲೇ ಶುರುವಾಗುತ್ತದೆ, ನಿದ್ದೆ ಇಲ್ಲದ ರಾತ್ರಿಗಳು. ಬಹಳಷ್ಟು ಮಕ್ಕಳು ಒಂದು ವರ್ಷದ ತನಕ ಅಮ್ಮನಿಗೆ ಕಾಟಕೊಡದೆ, ರಾತ್ರಿಗಳನ್ನು ಕಳೆಯುವುದೇ ಇಲ್ಲ. ಮೊದಲ ಮಗ ಸಾರ್ಥಕ ಹೀಗೆ ರಾತ್ರಿ ಎದ್ದು ಕಾರಣವೇ ಇಲ್ಲದೆ ಅಳುತ್ತಿದ್ದ. (ಅಥವಾ ಅವನಿಗೆ ಕಾರಣವಿದ್ದರೂ ನನ್ನ ಅರಿವಿಗೆ ಬರುತ್ತಿರಲಿಲ್ಲವೋ?) ಎಷ್ಟು ಸಮಾಧಾನ ಮಾಡಿದರೂ, ಹೊಟ್ಟೆ ನೋವೇನೋ ಎಂದು ಔಷಧಿ ಕೊಟ್ಟರೂ, ಲಾಲಿ ಹಾಡಿದರೂ, ತಟ್ಟಿದರೂ, ತೂಗಿದರೂ ನಿದ್ರೆ ಒಂದಿಲ್ಲ. ಬೆಳಗಿನ ಜಾವಕ್ಕೆ ಇನ್ನೇನು ನಿದ್ರೆ ಬಂತು ಎಂದು ಹಾಸಿಗೆಯ ಮೇಲಿಟ್ಟರೆ ಥಟ್ಟನೆ ಎದ್ದು ಮತ್ತೆ ಅಳು ಶುರು. ಹಾಗಾದಾಗೆಲ್ಲ ನಾನೂ ಅವನನ್ನು ಹಿಡಿದು ಅಳುತ್ತಾ ಕೂತ ರಾತ್ರಿಗಳಿಗೆ ಲೆಕ್ಕವಿಲ್ಲ. ಶೇ. 80ರಷ್ಟು ಅಮ್ಮಂದಿರು ನನ್ನಂಥವರೇ…
ಅಮೆರಿಕದ ಮಕ್ಕಳ ಮನಃಶಾಸ್ತ್ರಜ್ಞೆ ಎಮ್ಮಾ ಕೆನ್ನಿ , ಎರಡು ಸಾವಿರ ಅಮ್ಮಂದಿರ ಮುಂದೆ ಅವರ ಸವಾಲುಗಳೇನು ಎಂದು ಸರ್ವೆ ನಡೆಸಿ ಐವತ್ತು ಬಹುಮುಖ್ಯ ಸಮಸ್ಯೆಗಳ ಪಟ್ಟಿ ಸಿದ್ಧ ಮಾಡುತ್ತಾಳೆ. ಅವೆಲ್ಲಾ ಹೊಸ ಸಮಸ್ಯೆಗಳೇನಲ್ಲ ಮತ್ತೆ. ಎಲ್ಲಾ ಅಮ್ಮಂದಿರೂ ಎದುರಿಸುವ, ನೋಡಲು ಮಾಮೂಲಾದರೂ, ನಿಭಾಯಿಸಲು ಕಷ್ಟವಾದ ಸಮಸ್ಯೆ. ಅದರಲ್ಲಿ ಮೊದಲ ಸ್ಥಾನದಲ್ಲಿರುವುದು ಈ ನಿದ್ರಾರಹಿತ ರಾತ್ರಿಗಳೇ.
ನಿತ್ಯದ ಪೇಚಾಟಗಳು
ಬೆಳಗ್ಗೆ ಆರರಿಂದ ರಾತ್ರಿ ಹನ್ನೆರಡರ ತನಕ ಕೆಲಸ ಮಾಡುತ್ತಲೇ ಇದ್ದರೂ ಇನ್ನೂ ಮುಗಿದಿಲ್ಲವಲ್ಲ ಎನಿಸುತ್ತದೆ. ಆ ದಿನವನ್ನೊಮ್ಮೆ ರಿಕ್ಯಾಪ್ ಮಾಡಿದಾಗ “ನಾನು ಮಾಡಿದ್ದಾದರೂ ಏನು?’ ಎಂಬುದು ಹೊಳೆಯುವುದೇ ಇಲ್ಲ. ಆದರೆ, ಸಮಯ ಹೇಗೆಲ್ಲಾ ಕಳೆದಿರುತ್ತದೆಯೆಂದರೆ… ಸ್ನಾನಕ್ಕೆ ಹೋದಾಗಲೇ ಅಷ್ಟು ಹೊತ್ತು ಮಿಸುಕದೆ ಮಲಗಿದ್ದ ಮಗು ಎದ್ದಿರುತ್ತಾನೆ, ತರಕಾರಿ ಹೆಚ್ಚುವಾಗ ಕಾಲು ಹಿಡಿದು ನಿಂತವನು ಯಾವ ಟ್ರಿಕ್ಸ್ ಮಾಡಿದರೂ ಬಿಟ್ಟಿರುವುದಿಲ್ಲ. ವಾಷಿಂಗ್ ಮಶೀನ್‌ನಲ್ಲಿರುವ ತೊಳೆದಾದ ಅಷ್ಟೂ ಬಟ್ಟೆಯನ್ನು ಬಾತ್‌ರೂಂಗೆ ತಂದು ಹಾಕಿರುತ್ತಾನೆ (ಇಂಥ ಚಿತ್ರ-ವಿಚಿತ್ರ ಐಡಿಯಾಗಳಾದರೂ ಯಾಕಾಗಿ ಹುಟ್ಟುತ್ತವೋ ಗೊತ್ತಿಲ್ಲ), ಅಮ್ಮ ಊಟಕ್ಕೆ ಕೂತಾಗಲೇ ಇವನಿಗೆ ಟಾಯ್ಲೆಟ್, ಕಪಾಟಿನೊಳಗೆ ನೀಟಾಗಿ ಮಡಚಿಟ್ಟ ಬಟ್ಟೆಗಳೆಲ್ಲಾ ಅದ್ಯಾವುದೋ ಮಾಯದಲ್ಲಿ ಹೊರಬಿದ್ದಿರುತ್ತವೆ. ಆ ಬಟ್ಟೆಗಳ ಮೇಲೆ ಬಿದ್ದು ಪಕಪಕನೆ ನಗುತ್ತಾ ಹೊರಳಾಡುವ ಪಾಪುವನ್ನು ಕಂಡು ಮಾಡಿದ್ದೇ ಕೆಲಸ ಮತ್ತೆ ಮಾಡಬೇಕೆಂಬ ಅನಿವಾರ್ಯತೆಯಲ್ಲೂ , ಅವನನ್ನು ಎದೆಗವುಚಿ ನಗುತ್ತಾ ಆಡುವಾಗ ಒಲೆ ಮೇಲಿಟ್ಟ ಪಲ್ಯ ತಳ ಹಿಡಿದಿರುತ್ತದೆ. ದಿನವೊಂದು ಕಳೆದಿರುತ್ತದೆ.
ತಾಳ್ಮೆ ಎರವಲು ಪಡೆವ ಹಾಗಿದ್ದರೆ?
ಆವತ್ತು ರಜೆಯ ಬೆಳಗ್ಗೆ. ಮಕ್ಕಳಾದ ಸಾರ್ಥಕ (7 ವರ್ಷ) ಮತ್ತು ಸಂಪನ್ನ (1 ವರ್ಷ) ಇಬ್ಬರೂ ಆಡವಾಡುತ್ತಿದ್ದರು. ನಾನು ಕಾರ್ನ್ಪ್ಲೇಕ್ಸ್ ಬೌಲ್ ಹಿಡಿದು ಆರಾಮವಾಗಿ ತಿನ್ನಬಹುದು ಎಂದು ಸೋಫಾದ ಮೇಲೆ ಕಾಲು ಚಾಚಿ ಕುಳಿತೆ. ಎರಡು ತುತ್ತು ಬಾಯಿಗಿಟ್ಟಿದ್ದಷ್ಟೆ. “ಅಮ್ಮಾ… ಪಾಪಚ್ಚು ಉಚ್ಚೆ ಮಾಡಿಕೊಂಡ…’ ಅಂತ ಸಾರ್ಥಕ ಕೂಗಿದ. ಬೌಲ್ ಅಲ್ಲೇ ಇಟ್ಟು ಉಚ್ಚೆ ಒರೆಸಲು ಬಟ್ಟೆ ಹಿಡಿದು ಓಡಿದೆ. ಒರೆಸಿದ ಮೇಲೆ ನೆಲವಿನ್ನೂ ಒದ್ದೆ ಇದ್ದ ಕಾರಣ ಕಾಲು ಜಾರಿ ಬೀಳಬಾರದೆಂದು ರೂಂನಿಂದ ಹೊರಗೆ ಕಳಿಸಿದೆ. ಬಟ್ಟೆಯನ್ನು ಬಚ್ಚಲಿಲ್ಲ ತೊಳೆಯುತ್ತಿದ್ದೆ. ಅಷ್ಟರಲ್ಲಿ ಸಾರ್ಥಕ ಮತ್ತೆ ಕೂಗಿಕೊಂಡ. “ಅಮ್ಮಾ, ಬೇಗ ಬಾ… ದೊಒಒಒಡ್ಡ ಪ್ರಾಬ್ಲಿಂ…’ ಮತ್ತೆ ಓಡಿದೆ. ನನ್ನ ತಿಂಡಿ ಬೌಲ್ ಸಂಪನ್ನನ ಕೈಯಲ್ಲಿ! ಅರ್ಧ ಕೆಳಗೆ ಚೆಲ್ಲಿದೆ. ಇನ್ನರ್ಧವನ್ನಾದರೂ ಉಳಿಸಬೇಕೆಂದು ಪಿ.ಟಿ. ಉಷಾಳ ರೇಂಜಿಗೆ ಓಡಿ ಬೌಲ್ ಹಿಡಿದೆ. ನನ್ನ ಸ್ಪೀಡಿಗೆ, ಕೆಳಗೆ ಚೆಲ್ಲಿದ ಹಾಲು ಸಾಥ್ ಕೊಟ್ಟು ಸ್ಕೇಟಿಂಗ್ ಮಾಡುತ್ತಾ ರೊಂಯ್ಯನೆ ಜಾರಿಬಿದ್ದೆ. ಬೀಳುತ್ತಾ ನನ್ನ ಕಾಲು ಸಂಪನ್ನನಿಗೆ ತಾಗಿ ಅವನೂ ಬಿದ್ದ. ಬೌಲಲ್ಲಿದ್ದ ಅಷ್ಟೂ ಕಾರ್ನ್ಫ್ಲೇಕ್ಸ್ ಮತ್ತು ಹಾಲು ಹಾಲ್ ತುಂಬಾ! ಹಾಲ್ ಒರೆಸಿ ಮತ್ತೆ ತಿನ್ನಲು ಕೂತಾಗ ಸೊಂಟ ಸೋಬಾನೆ ಹಾಡುತ್ತಿತ್ತು! ತಾಳ್ಮೆ ಎಂಬುದೇನಾದರೂ ಕೊಳ್ಳುವಂತಿದ್ದರೆ ಅದನ್ನು ಮಾರುವ ಪುಣ್ಯಾತ್ಮ ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಸದಾ ಮೊದಲ ಸ್ಥಾನದಲ್ಲೇ ಇರುತ್ತಿದ್ದ!
ನಿರಂತರ ಯಾಗ
ಸರಿ… ನಿದ್ದೆ ರಹಿತ ರಾತ್ರಿಗಳು ಮುಗಿಯಿತು, ಅವನೇ ಕೂತು ಊಟ ಮಾಡುತ್ತಾನೆ, ಟಾಯ್ಲೆಟ್ ಟ್ರೇನಿಂಗ್ ಕೂಡಾ ಆಯಿತು, ಈಗ ಅವನನ್ನು ಕರಕೊಂಡು ಹೊರಹೋಗುವುದು ಅಷ್ಟು ತೊಂದರೆಯಾಗುತ್ತಿಲ್ಲ ಎಂದಾಗುತ್ತಿದ್ದಂತೆ ಹೊಸ ಸಮಸ್ಯೆಗಳ ಸೆಟ್ ಎದುರಾಗಿರುತ್ತವೆ. ಸುತ್ತಲೂ ಕಾಣುವ ಚಾಕಲೇಟ್, ಕುರುಕುರು ತಿಂಡಿಯನ್ನು ತಪ್ಪಿಸಿ ಉತ್ತಮ ಆಹಾರ ತಿನ್ನಿಸುವುದು ಹೇಗೆ ಎಂದು ಐಡಿಯಾ ಮಾಡಬೇಕು. ಆರಂಭದಲ್ಲಿ ಶಾಲೆಗೆ ಕಳುಹಿಸುವಾಗ ನಿತ್ಯ ನಡೆಯುವ ಪೇಚಾಟಗಳು, ಜೊತೆಗೆ ಸೇರಿಕೊಳ್ಳುವ ತುಂಟಾಟಗಳು, ಅದೆಲ್ಲಿಂದಲೋ ಕಲಿತು ಬಂದ ಕೆಟ್ಟ ಶಬ್ದ ತಿದ್ದುವುದು, ಕ್ರಿಯೇಟಿವಿಟಿಯ ಕಡೆಗೂ ಗಮನ ಕೊಡುವುದು, ಹೋಂವರ್ಕ್ ಮಾಡಿಸುವುದು… ಹೀಗೆ ಎಲ್ಲದರ ಜೊತೆಗೆ ತನ್ನ ಉದ್ಯೋಗವನ್ನೂ ನಿಭಾಯಿಸುತ್ತಾ ಅಮ್ಮ ಬೇಸ್ತು ಬಿದ್ದಿರುತ್ತಾಳೆ.
ಪ್ರತಿ ಅಮ್ಮನ ಅನುಭವಗಳೂ ವಿಭಿನ್ನವೇ. ಆದರೆ ಒದ್ದಾಟವಿಲ್ಲದ, ಅಸಹನೆಯಿಲ್ಲದ, ನೋವಿಲ್ಲದ, ದಿನವಿಡೀ ಇದೇನು ಮಾಡಿದ್ದನ್ನೇ ಮಾಡುತ್ತಿದ್ದೇನೆ ಎಂದುಕೊಳ್ಳದ ಅಮ್ಮನಂತೂ ಸಿಗಲಾರಳು. ಫೇಸ್‌ಬುಕ್‌ನಲ್ಲಿ ಮಗಳಿಗೆ ಹೊಡೆಯುತ್ತಿರುವ ಸೆಲ್ಫಿ ಯಾರೂ ಹಾಕಿಕೊಳ್ಳುವುದಿಲ್ಲ. ಸೀದುಹೋದ ದೋಸೆಯ ಫೋಟೊ ಅಪ್‌ಲೋಡ್ ಆಗುವುದಿಲ್ಲ. ಉಕ್ಕಿದ ಹಾಲಿನ ಲೆಕ್ಕವಿಡುವುದಿಲ್ಲ. ನಮ್ಮನ್ನು ನಾವು ಸಂತೋಷವಾಗಿಯೇ ಲೋಕಕ್ಕೆ ತೋರಿಸಿಕೊಳ್ಳುತ್ತೇವೆ. ಅಷ್ಟರಮಟ್ಟಿಗೆ ನಮ್ಮೊಳಗೊಬ್ಬ ಪಾಸಿಟಿವ್ ಪರಮಾತ್ಮನಿದ್ದಾನೆ. ಮತ್ತೆ ಬರುವ ರಾತ್ರಿಯಲ್ಲಿ ಲಾಲಿ ಹಾಡುವಾಗ ಮಡಿಲಲ್ಲಿರುವ ಮಗು, ಚಿನ್ನದಂಬಾರಿಯಲಿ ಕುಳಿತ ತೊಟ್ಟಿಲ ಸಿರಿಯಂತೆ, ದೇವರಂತೆ ಕಾಣುತ್ತಾನೆ!
ಶ್ರೀಕಲಾ ಡಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.