ನಾರಿ, ನಿನ್ನ ಊರೆಲ್ಲಿ ಬೇರೆಲ್ಲಿ?
Team Udayavani, Jan 27, 2017, 3:45 AM IST
ಮಗಳು, “ಅಪ್ಪಾ , ಎರಡು ದಿನ ರಜೆ ಇದೆ. ಎಲ್ಲಿಗಾದರೂ ಹೋಗೋಣ’ ಎಂದಿದ್ದಳು. “ಸರಿ ಪುಟ್ಟಿ, ನಾಳೆ ಮಧ್ಯಾಹ್ನದ ನಂತರ ಹೊರಡೋಣ. ಎಲ್ಲಿ ಅಂತ ನೀವೇ ಡಿಸೈಡ್ ಮಾಡಿ’ ಅಪ್ಪನ ತಥಾಸ್ತು. ಹಾಗೆಂದು, ಎಲ್ಲಿ ಹೋಗೋದು? ನಮಗೇನು ಸ್ವಂತ ಊರಿದೆಯೇ, ಹೋಗಿ ಒಂದು ನಾಲ್ಕು ದಿನ ಇದ್ದು ಬರಲು? ಯಾವುದೋ ಟೂರಿಂಗ್ ಪ್ಲೇಸಿಗೆ ಹೋಗೋದು, ಲಾಡ್ಜ್ ನಲ್ಲಿ ಉಳಿದುಕೊಳ್ಳೋದು ! ಅದೇ ಹೊಟೇಲೂಟ, ವಾಕರಿಕೆೆ ಬರುತ್ತೆ’ ಎಂದುಕೊಂಡಳು ಮಾನಸ.
ಎಲ್ಲರೂ ರಜೆ ಬಂದರೆ ಅವರ ಊರಿಗೆ ಹೋಗುತ್ತಾರೆ. ಹಳ್ಳಿಯ ಮನೆ ತೋಟ ಗದ್ದೆಗಳಲ್ಲಿ ಓಡಾಡುತ್ತಾರೆ. ಅಲ್ಲೇ ಅಕ್ಕಪಕ್ಕ ಹಳ್ಳಿಗಳಲ್ಲಿ ಇರುವ ನೆಂಟರ ಮನೆಗೆ ಹೋಗಿ ಸಂತಸದಿಂದ ನಲಿದಾಡುತ್ತಾರೆ. ಖುಷಿಯಾಗಿ ಉತ್ಸಾಹದ ಮೂಟೆ ಹೊತ್ತುಕೊಂಡು ವಾಪಸ್ಸು ಬರುತ್ತಾರೆ. ಬರುವಾಗ ಅಮ್ಮ ಕೊಟ್ಟಿದೆಂದೋ, ಚಿಕ್ಕಿ ಕೊಟ್ಟಳು ಎಂದೋ, ಅತ್ತೆ ಮಾಡಿಕೊಟ್ಟರು ಎಂದೋ ಚಕ್ಕುಲಿ ಕೋಡುಬಳೆ ಉಂಡೆ, ಉಪ್ಪಿನಕಾಯಿ, ಹಪ್ಪಳ ಸಂಡಿಗೆ ತರುತ್ತಾರೆ. ಮತ್ತೆ ಈ ನಗರದ ಯಾಂತ್ರಿಕ ಜೀವನಕ್ಕೆ ಮರಳಿದರೂ ಊರಿಗೆ ಹೋಗಿ ಬಂದ ಉತ್ಸಾಹ, ಏಕತಾನತೆಯನ್ನು ಕೊಂಚಕಾಲವಾದರೂ ಮರೆಮಾಡುತ್ತದೆ. ನಾರ್ತ್ ಇಂಡಿಯಾ ಸೌತ್ ಇಂಡಿಯಾ ಎಂದು ಟೂರು ಮಾಡಿದರೂ ಯಾವುದೋ ಒಂದು ಸಲವಾದರೂ ತಮ್ಮೂರಿಗೆ ವರ್ಷದಲ್ಲಿ ಒಮ್ಮೆಯಾದರೂ ಹೋಗಿಬರುತ್ತಾರೆ. ತಮ್ಮ ಬೇರುಗಳಿರುವ ಜಾಗಕ್ಕೆ ಹೋಗಿ ಸಂಭ್ರಮಿಸುತ್ತಾರೆ. “ಗೋಯಿಂಗ್ ಟು ನೇಟಿವ್’ ಎಂದು ಫೇಸ್‌ಬುಕ್ಕಿನಲ್ಲಿ ಹಾಕಿಕೊಳ್ಳುತ್ತಾರೆ.
ಮೂರು ದಿನ ರಜೆ ವಾವ್! ರಾತ್ರಿ ಬಸ್ಸಿಗೆ ಬುಕ್ ಆಗಿದೆ ಊರಲ್ಲಿ ಹಾಯಾಗಿ ಇದ್ದು ಬರ್ತೀವಿ” ಎಂದು ಸುಚಿತ್ರ ಖುಷಿಯಾಗಿ ಹೇಳಿದಾಗ ಮಾನಸ ಪೆಚ್ಚಾಗಿದ್ದಳು. “”ನಿಂದೇನು ಪ್ಲಾನು” ಎಂದು ಅವಳು ತಿವಿದು ಕೇಳಿದರೂ “”ಏನಿಲ್ಲಪ್ಪಇನ್ನು ನೋಡಬೇಕು” ಎಂದು ಜಾರಿಕೊಂಡಿದ್ದಳು. “”ನಾನಿವತ್ತು ಒಂದು ಗಂಟೆ ಬೇಗ ಹೋಗ್ತಿàನಪ್ಪ ,ಇನ್ನೂ ಪ್ಯಾಕಿಂಗ್ ಸರಿಯಾಗಿ ಆಗಿಲ್ಲ” ಎಂದು ಸಂಭ್ರಮಿಸುತ್ತಿದ್ದವಳನ್ನೇ ನೋಡುತ್ತಾ ಮಾನಸಳಿಗೆ ಕಣ್ಣಲಿ ನೀರು ಬರುವ ಹಾಗಾಯಿತು.
ಎಂದಿನಂತೆ ಮನೆಯ ದಾರಿ ಹಿಡಿದರೂ ಮನಸ್ಸು ಸಪ್ಪೆಯಾಗಿತ್ತು. ಮನೆಗೆ ಬಂದು ಯಾಂತ್ರಿಕವಾಗಿ ಮನೆಯ ಕೆಲಸಗಳನ್ನು ಮಾಡಿದ್ದಳು. ಮಗಳು ಅವಳ ಪಾಡಿಗೆ ಅವಳ ಕೋಣೆಯಲ್ಲಿ ಟ್ಯಾಬ್ ಹಿಡಿದು ಕುಳಿತಿದ್ದಳು. ಮನೆಯೆಲ್ಲಾ ಮೌನವಾಗಿತ್ತು. ಗಂಡ ಬರುವವರೆಗೆ ಏನು ಕೆಲಸ? ಟಿವಿ ಆನ್ ಮಾಡಿ ಎಲ್ಲಾ ಚಾನಲ್‌ಗಳನ್ನೂ ಒಂದು ರೌಂಡು ತಿರುಗಿಸುತ್ತಾ ಬಂದಳು. ಹಾಗೆಯೇ ತಾನು ಕುಳಿತಿದ್ದ ಲಿವಿಂಗ್ ರೂಮಿನ ಸುತ್ತ ಕಣ್ಣಾಡಿಸಿದಳು.
ಸಾಕಷ್ಟು ದೊಡ್ಡದಾದ ಫ್ಲಾಟ್, ವಿಶಾಲವಾದ ರೂಮುಗಳು, ದೊಡ್ಡ ಲಿವಿಂಗ್ ರೂಮು, ಆಧುನಿಕ ಕಿಚನ್, ಫಳಫಳ ಹೊಳೆಯುವ ಟೈಲ್ಸ… ಉಳ್ಳ ಬಾತ್‌ರೂಮ್, ಶೌಚಾಲಯಗಳು, ಮನೆಯ ಮುಂದೆ ಒಂದು ಸಿಟ್‌ಔಟ್, ಅದರಲ್ಲಿ ಕುಂಡಗಳಲ್ಲಿ ಬೆಳೆಸಿದ ಗಿಡಗಳು, ಮನೆಯ ಹಿಂದೆ ಸಾಕಷ್ಟು ಯುಟಿಲಿಟಿ ಏರಿಯಾ. ಲಿವಿಂಗ್ ರೂಮಿನಲ್ಲಿ ದುಬಾರಿ ಸೋಫಾಗಳು. ಬಾಗಿಲು ಕಿಟಕಿಗಳಿಗೆ ಆಲಂಕಾರಿಕ ಪರದೆಗಳು, ದೊಡ್ಡದಾದ ಟೀವಿ, ತನ್ನೆತ್ತರದ ಫ್ರಿ, ಅಡಿಗೆ ಮನೆಯಲ್ಲಿ ನಾಲ್ಕು ಬರ್ನರಿನ ದೊಡ್ಡ ಸ್ಟವ್, ಹೊಗೆ ಹೋಗಲು ಆಧುನಿಕ ಚಿಮಣಿ ಎಲ್ಲವೂ ಇದೆ. ಮನೆಯ ಗೋಡೆಗಳಿಗೆ ಅತ್ಯಾಕರ್ಷಕ ಪೇಂಟಿಂಗ್, ಅಲ್ಲಲ್ಲಿ ಒಳ್ಳೊಳ್ಳೆಯ ಕಲಾಕೃತಿಗಳನ್ನು ತೂಗುಹಾಕಿದ್ದಾರೆ.
ಹಾಲಿಗೆ ಎರಡೆರಡು ಫ್ಯಾನು, ಮಧ್ಯದಲ್ಲಿ ಆಲಂಕಾರಿಕ ದೀಪಗಳ ಗುತ್ಛ, ರೂಮುಗಳಲ್ಲಿ ದೊಡ್ಡ ದೊಡ್ಡ ವಾರ್ಡ್‌ರೋಬುಗಳು, ಅದರಲ್ಲಿರುವ ಬೆಲೆಬಾಳುವ ಬಟ್ಟೆಗಳು, ನಿಲುವುಗನ್ನಡಿ, ಡ್ರೆಸ್ಸಿಂಗ್ ಟೇಬಲ್ ಎಲ್ಲವನ್ನೂ ನೋಡುತ್ತಾ ಯಾವಾಗಲೂ ಆಗುತ್ತಿದ್ದ ಖುಷಿ ಈ ದಿನ ಆಗಲಿಲ್ಲ.
ಏನಿದ್ದರೇನು? ಎಲ್ಲವೂ ಯಾಂತ್ರಿಕ. ಮಾಡಿಸಿದ ಹೊಸದರಲ್ಲಷ್ಟೇ ಖುಷಿ, ಹೆಮ್ಮೆ . ಈಗ ಯಾವುದೂ ಇಲ್ಲ. ಇರುವ ಮೂರು ಜನ ಮೂರು ದಿಕ್ಕಿಗೆ. ಎಲ್ಲರ ಕೈಯಲ್ಲೂ ಮೊಬೈಲುಗಳು, ಅವರಿಗೆ ಬೇಕಾದವರ ಹತ್ತಿರ ಚಾಟಿಂಗ್. ಪಕ್ಕಪಕ್ಕದಲ್ಲೇ ಕುಳಿತಿದ್ದರೂ ಗಮನೆವೆಲ್ಲೋ, ಕಣ್ಣು ಮೊಬೈಲ್ ಮೇಲೆ, ಕ್ಷಣಕ್ಷಣಕ್ಕೂ ಅದರಿಂದ ಬರುವ ಠಣ… ಠಣ… ಮೆಸೇಜುಗಳ ಮೇಲೆ. ಉಂಡುಟ್ಟು ತೃಪ್ತಿಯಾಗಿರಲು ಎಲ್ಲವೂ ಇದೆ. ಆದರೆ ಜೀವಂತಿಕೆಯಿಲ್ಲ. ನಾವು ಯಾರು ಎಲ್ಲಿಂದ ಬಂದೆವು ಎಂದು ಹೇಳಿಕೊಳ್ಳಲು ನಮಗೆ ನಮ್ಮೂರೇ ಇಲ್ಲ. ನಮ್ಮ ಮನೆಯೇ ಇಲ್ಲ. ಬೇರುಗಳೇ ಇಲ್ಲದೆ ನಿಂತಿದ್ದೇವೆ, ಯಾವಾಗ ಕುಸಿದು ಬೀಳುತ್ತೇವೋ ಗೊತ್ತಿಲ್ಲ.
ಎಲ್ಲರೂ ರಜೆ ಬಂದರೆ ಅವರ ಊರಿಗೆ ಹೋಗುತ್ತಾರೆ. ಹಳ್ಳಿಯ ಮನೆ ತೋಟ ಗದ್ದೆಗಳಲ್ಲಿ ಓಡಾಡುತ್ತಾರೆ. ಅಲ್ಲೇ ಅಕ್ಕಪಕ್ಕ ಹಳ್ಳಿಗಳಲ್ಲಿ ಇರುವ ನೆಂಟರ ಮನೆಗೆ ಹೋಗಿ ಸಂತಸದಿಂದ ನಲಿದಾಡುತ್ತಾರೆ. ಖುಷಿಯಾಗಿ ಉತ್ಸಾಹದ ಮೂಟೆ ಹೊತ್ತುಕೊಂಡು ವಾಪಸ್ಸು ಬರುತ್ತಾರೆ. ಬರುವಾಗ ಅಮ್ಮ ಕೊಟ್ಟಿದ್ದೆಂದೋ, ಚಿಕ್ಕಿ ಕೊಟ್ಟಳು ಎಂದೋ, ಅತ್ತೆ ಮಾಡಿಕೊಟ್ಟರು ಎಂದೋ ಚಕ್ಕುಲಿ, ಕೋಡುಬಳೆ, ಉಂಡೆ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ ತರುತ್ತಾರೆ. ಮತ್ತೆ ಈ ನಗರದ ಯಾಂತ್ರಿಕ ಜೀವನಕ್ಕೆ ಮರಳಿದರೂ ಊರಿಗೆ ಹೋಗಿ ಬಂದ ಉತ್ಸಾಹ, ಏಕತಾನತೆಯನ್ನು ಕೊಂಚಕಾಲವಾದರೂ ಮರೆಮಾಡುತ್ತದೆ. ನಾರ್ತ್ ಇಂಡಿಯಾ, ಸೌತ್ ಇಂಡಿಯಾ ಎಂದು ಟೂರು ಮಾಡಿದರೂ ಯಾವುದೋ ಒಂದು ಸಲವಾದರೂ ತಮ್ಮೂರಿಗೆ ವರ್ಷದಲ್ಲಿ ಒಮ್ಮೆಯಾದರೂ ಹೋಗಿಬರುತ್ತಾರೆ. ತಮ್ಮ ಬೇರುಗಳಿರುವ ಜಾಗಕ್ಕೆ ಹೋಗಿ ಸಂಭ್ರಮಿಸುತ್ತಾರೆ. “ಗೋಯಿಂಗ್ ಟು ನೇಟಿವ್’ ಎಂದು ಫೇಸ್ ಬುಕ್ಕಿನಲ್ಲಿ ಹಾಕಿಕೊಳ್ಳುತ್ತಾರೆ.
ಮಾನಸ ಯೋಚಿಸುತ್ತಲೇ ಇದ್ದಳು. ತಮಗೇನಿದೆ? ತಮಗೆ ಯಾವ ಸಂಭ್ರಮವೂ ಇಲ್ಲ. ತಮಗೆ ಊರೆನ್ನುವುದೇ ಇಲ್ಲ. ತಮ್ಮ ಸ್ವಂತ ಊರು ನಗರದಿಂದ ಒಂದು ಎರಡು-ಮೂರು ಗಂಟೆ ಪ್ರಯಾಣ. ಆದರೆ ಹೋಗಲು ಅಲ್ಲಿ ಯಾರಿದ್ದಾರೆ? ಅಪ್ಪ-ಅಮ್ಮ ಇಲ್ಲಿಯೇ ಬಂದು ಬಿಟ್ಟಿದ್ದಾರೆ. ತಮ್ಮನಿಗೆ ಇಲ್ಲಿ ಕೆಲಸವಾಯಿತೆಂದು ಊರಲ್ಲಿದ್ದ ಜಮೀನು ಮನೆಯನ್ನು ಮಾರಿ ಇಲ್ಲಿ ದೊಡ್ಡದಾದ ಮನೆಯನ್ನು ಕೊಂಡುಕೊಂಡಿದ್ದಾರೆ. ನಗರದವರೇ ಆಗಿಬಿಟ್ಟಿದ್ದಾರೆ.
ಇನ್ನು ಬೇರೆ ಯಾರೂ ನೆಂಟರು ದಾಯಾದಿಗಳು ಅಲ್ಲಿ ಇಲ್ಲ. ಎಲ್ಲರೂ ನಗರ ಹತ್ತಿರವಾದ್ದರಿಂದ ಜೀವನೋಪಾಯ ಹುಡುಕಿಕೊಂಡು ಇಲ್ಲಿಯೇ ಬಂದುಬಿಟ್ಟಿದ್ದಾರೆ. ಇಲ್ಲಿನ ಹುಡುಗ-ಹುಡುಗಿಯರನ್ನು ಮದುವೆಯಾಗಿ ಇಲ್ಲಿಯೇ ನೆಲೆ ನಿಂತಿದ್ದಾರೆ. ಹೀಗಾಗಿ ಜಯನಗರ, ವಿಜಯನಗರ, ಹನುಮಂತನಗರ, ಬಸವನಗುಡಿ, ಕತ್ರಿಗುಪ್ಪೆ , ರಾಜಾಜಿನಗರ, ಶ್ರೀನಗರ ಹೀಗೆ ಇಡೀ ಬೆಂಗಳೂರೇ ನೆಂಟರಿಷ್ಟರ ಮನೆಗಳಿಂದ ತುಂಬಿಹೋಗಿದೆ. ಆದರೆ ಯಾರ ಮನೆಗೆ ಯಾರೂ ಹೋಗುವುದಿಲ್ಲ. ಏನಾದರೂ ಸಮಾರಂಭವಾದರೆ ಎಲ್ಲರೂ ಎಲ್ಲೋ ಕನ್‌ವೆನನ್ ಹಾಲಿನಲ್ಲೋ ಛತ್ರದಲ್ಲೋಸೇರುತ್ತಾರೆ.
“ಬನ್ನಿ ಮನೆಗೆ, ಬಾರೆ ಮನೆಗೆ, ನೀವೇನಪ್ಪಾ ನಮ್ಮ ಮನೆಗೆ ಬರೋದೇ ಇಲ್ಲ’ ಎಂದೆಲ್ಲಾ ಉಪಚಾರ ಮಾಡಿ ಕರೆಯುತ್ತಾರೆ. ತಾವೂ ಕರೆಯುತ್ತೇವೆ. ಆದರೆ ತಮಗೂ ಗೊತ್ತು ಅವರಿಗೂ ಗೊತ್ತು ಎಲ್ಲ ಬಾಯುಪಚಾರದ ಆಹ್ವಾನ ಎಂದು. ಯಾರ ಮನೆಗೂ ಯಾರೂ ಹೋಗಲ್ಲ. ಅಯ್ಯೋ ಈ ಸಿಟಿನಲ್ಲಿ ಈಗ ಎಲ್ಲರ ಮನೆಗಳಲ್ಲೂ ಗಂಡ-ಹೆಂಡತಿ ಇಬ್ಬರೂ ದುಡಿಯುವವರು. “ಸಿಗುವುದು ಒಂದು ಭಾನುವಾರದ ರಜೆ, ಆ ದಿನ ಮನೆಯಲ್ಲಿದ್ದರೆ ಸಾಕಪ್ಪ ಎಲ್ಲೂ ಹೋಗುವುದೂ ಬೇಡ ಯಾರೂ ಬರುವುದೂ ಬೇಡ ಎನಿಸಿಬಿಡತ್ತೆ’ ಎಂದು ತಾವೇ ಹೇಳಿಕೊಳ್ಳುತ್ತಾರೆ. ಹೀಗಿರುವಾಗ ಹೋಗುವುದೆಲ್ಲಿಗೆ ಬರುವುದೆಲ್ಲಿಗೆ? ಎಲ್ಲವೂ ನೀರಸ ಭಣಭಣ.
ನಮ್ಮ ಊರು ಹೇಗಿತ್ತು ಮಾನಸ ನೆನಪು ಮಾಡಿಕೊಂಡಳು. ಹಳ್ಳಿಯಲ್ಲಿ ದೊಡ್ಡದಾದ ಮನೆ, ದೊಡ್ಡ ಹಿತ್ತಲು. ಹಿತ್ತಲ ತುಂಬಾ ಹೂವಿನ ಗಿಡಗಳು, ತೊಂಡೆ ಚಪ್ಪರ, ಹಾಗಲ ಬಳ್ಳಿ, ಸೀಮೆಬದನೆ ಬಳ್ಳಿ, ಮೆಂತೆಸೊಪ್ಪಿನ ಮಡಿ, ಚಪ್ಪದವರೆಯ ದೊಡ್ಡದಾಗಿ ಹರಡಿಕೊಂಡ ಗಿಡ ಮನೆಯ ಮಾಡಿನವರೆಗೂ ವ್ಯಾಪಿಸಿತ್ತು. ನೀರು ಸೇದಲು ಬಾವಿ, ಎಷ್ಟು ಸೇದಿದರೂ ದಣಿವೆನ್ನುವುದೇ ಇರುತ್ತಿರಲಿಲ್ಲ. ಬಚ್ಚಲ ಹಂಡೆ ಕೊಳದಪ್ಪಲೆ ನೀರಿನ ಬಾನಿಗಳನ್ನೆಲ್ಲ ತುಂಬಿಸಿ ಗಿಡಗಳಿಗೂ ನೀರು ಸೇದಿ ಸೇದಿ ಹಾಕುತ್ತಿದ್ದೆವು. ದುಂಡು ಮಲ್ಲಿಗೆ ಗಿಡ ಹಾಗೂ ಪಾರಿಜಾತದ ಗಿಡದ ಬುಡದ ಅಗಲವಾದ ಪಾತಿಗೆ ಎಷ್ಟು ನೀರು ಹುಯ್ದರೂ ತುಂಬುತ್ತಿರಲಿಲ್ಲ. ನಾನು ಅಣ್ಣ ಇಬ್ಬರೂ ನೀರು ಸೇದುವುದು, ಬಿಂದಿಗೆ ಮೇಲೆ ಬಂದ ತಕ್ಷಣ ಅಮ್ಮ ಅದನ್ನು ಬಾವಿಯ ಆ ಕಡೆಯಿಂದ ಹಿಡಿದು ಬಕೆಟ್‌ಗೆ ಬಗ್ಗಿಸಿ ಬಚ್ಚಲ ಮನೆಗೆ ಮತ್ತು ಗಿಡಗಳಿಗೆ ಹಾಕುವುದು. ಹೀಗೆ ಎಷ್ಟು ಬಿಂದಿಗೆಗಳಾಗುತ್ತಿತ್ತೋ ಎಣಿಸಿದವರೇ ಇಲ್ಲ. ಈಗ ಅಪ್ಪಕೊಂಡ ಹೊಸಮನೆಯಲ್ಲಿ ಬಾವಿಯೂ ಇಲ್ಲ, ಸೇದುವುದೂ ಇಲ್ಲ. ಎಲ್ಲ ಕಡೆಯೂ ನಳ್ಳಿಗಳಿವೆ, ಪಂಪ್ ಮಾಡಿದರೆ ನೀರು ಬರುತ್ತದೆ. ಕಟ್ಟಿಗೆ ಒಲೆಯಲ್ಲಿ ಅಡಿಗೆ ಮಾಡುತ್ತಾ ಹೊಗೆ ಹೋಗಲು ಊದುಕೊಳವೆಯಲ್ಲಿ ಗಾಳಿ ಊದುತ್ತಾ ಅಡಿಗೆ ಮಾಡುತ್ತಿದ್ದ ಅಮ್ಮ ಈಗ ಸ್ಟೈಲಾಗಿ ಗ್ಯಾಸ್ ಮೇಲೆ ಅಡಿಗೆ ಮಾಡುತ್ತಾಳೆ. ಅವಳ ಮೈಮುಖ ಮಸಿಯಾಗುವುದಿಲ್ಲ. ಅವಳ ಸೀರೆಯಿಂದ ಹೊಗೆಯ ವಾಸನೆ ಬರುವುದಿಲ್ಲ. ಆ ಹೊಗೆಯ ವಾಸನೆ ಎಷ್ಟು ಆಪ್ಯಾಯಮಾನವಾಗಿರುತ್ತಿತ್ತು? ರುಬ್ಬುವ ಕುಟ್ಟುವ ರಗಳೆಯಿಲ್ಲ.
ಎಲ್ಲದಕ್ಕೂ ಮಿಕ್ಸಿಯಿದೆ ಗೆùಂಡರಿದೆ. ಹಳ್ಳಿ ಮನೆಯಲ್ಲಿ ಅಮ್ಮ ದೋಸೆಗೋ ಇಡ್ಲಿಗೋ ರುಬ್ಬುತ್ತಿದ್ದರೆ ಉದ್ದಿನ ವಾಸನೆ ಮನೆಯಿಡೀ ಘಮ್ ಎನ್ನುತ್ತಿತ್ತು. ಆ ರುಬ್ಬುವ ಕಲ್ಲಿನ ಗೂಟವನ್ನು ತಾನೂ ಹಿಡಿದು ಅಮ್ಮನ ಜೊತೆಗೆ ರುಬ್ಬುತ್ತಿದ್ದೆ. “ಕೈ ಬೊಬ್ಬೆ ಬರತ್ತೆ ನಿಂಗಾಗಲ್ಲಾ ಮರೀ, ಬಿಡು’ ಎನ್ನುತ್ತಿದ್ದರು ಅಮ್ಮ. ಬೆಳಗ್ಗೆ ಸಂಜೆ ಆಕಾಶವಾಣಿಯಲ್ಲಿ ಬರುತ್ತಿದ್ದ ಅಣ್ಣ ಹಾಗೂ ತಾತ ತಪ್ಪದೆ ಕೇಳುತ್ತಿದ್ದ ಪ್ರದೇಶ ಸಮಾಚಾರ, ರೇಡಿಯೋ ಕಾರ್ಯಕ್ರಮಗಳು. ಆಗ ಇದ್ದ ಮನರಂಜನೆ ಏಕೈಕ ರೇಡಿಯೋ ಮಾತ್ರ.
ಅಮ್ಮನಿಗೂ ಹಳ್ಳಿಯ ಜೀವನ ಸಾಕಾಗಿತ್ತೇನೋ ಅವಳ ನೆಂಟರೆಲ್ಲ ನಗರದಲ್ಲಿ. ಹೀಗಾಗಿ, ಅವಳಿಗೂ ನಗರವಾಸದ ಆಸೆ ಅಂಟಿಕೊಂಡಿರಬೇಕು. ಮಗನಿಗೆ ಕೆಲಸವಾದ ಕೂಡಲೆ ಇಲ್ಲಿದ್ದ ಜಮೀನು ಮನೆಯನ್ನು ಮಾರಿ ನಗರದಲ್ಲಿ ಮನೆ ಖರೀದಿಸಲು ಅಣ್ಣನಿಗೆ ದುಂಬಾಲು ಬಿದ್ದಿದ್ದಳು. ಅಣ್ಣನಿಗೂ ಮನೆಮಾರು ಮಾರಾಟ ಮಾಡಿ ಖಾಲಿಯಾಗಲು ಇಷ್ಟವಿಲ್ಲದಿದ್ದರೂ ಅಮ್ಮನ ಅಬ್ಬರಕ್ಕೆ ಹೆದರಿ ಎಲ್ಲವನ್ನೂ ಮಾರಿ ನಗರಕ್ಕೆ ಬಂದಿದ್ದರು. ಈಗ ಜೀವನಕ್ಕೇನೂ ತೊಂದರೆ ಇಲ್ಲ ಹಾಯಾಗಿದ್ದಾರೆ. ಆದರೆ ನಮಗೆ ನಮ್ಮೂರು, ನಮ್ಮ ಮನೆ ಅಂತ ಇದ್ದದ್ದು ಹೋಯಿತು. ಅಲ್ಲಿ ಈಗ ಯಾರೋ ವಾಸವಾಗಿದ್ದಾರೆ. ಹಿಂದೆ ಇದ್ದ ಮನೆಯ ರೂಪವೇ ಬದಲಾಗಿದೆ. ಎಲ್ಲವು ಪರಕೀಯ ಎನಿಸುತ್ತದೆ. ನಾನು ಹುಟ್ಟಿ ಬೆಳೆದ ಮನೆ ಎಂದು ಸಲುಗೆಯಿಂದ ಸಲೀಸಾಗಿ ಹೋಗಲು ಮನ ಹಿಂಜರೆಯುತ್ತದೆ. ನನ್ನ ಮಗಳಾದರು ಅಮ್ಮ-ಅಣ್ಣ ಹಳ್ಳಿಯಲ್ಲಿ ಇರುವವರೆಗೂ ಅಜ್ಜಿಯ ಮನೆ ಎಂದು ಹೋಗುತ್ತಿದ್ದಳು. ಆದರೆ ಈಗ ತಮ್ಮನ ಮಗಳಿಗೆ ಹಳ್ಳಿಯ ಮನೆ ಗೊತ್ತೇ ಇಲ್ಲ. ಹಳ್ಳಿಯೆ ವಾಸನೆಯೇ ಗೊತ್ತಿಲ್ಲ. ಅಕ್ಕಿ ಪ್ಲಾಂಟ್, ರಾಗಿ ಪ್ಲಾಂಟ್ ಎನ್ನುತ್ತಾಳೆ. ಪ್ಯಾಕೆಟ್ ನಂದಿನಿಯ ಹಾಲೇ ಅವಳಿಗೆ ಹಾಲು. ಮನೆಯಲ್ಲಿ ಹಸು ಕಟ್ಟಿ ಮೇಯಿಸಿ ಹಾಲು ಕರೆಯುತ್ತಿದ್ದುದು ಅವಳಿಗೆ ಗೊತ್ತೇ ಇಲ್ಲ. ನಾವು ಸೆಗಣಿಯಲ್ಲಿ ಮನೆ ಸಾರಿಸುತ್ತಿದ್ದೆವು. ಅವಳು “ಕೌ ಡಂಗ್ ಥೂ’ ಅಸಹ್ಯ ಅನ್ನುತ್ತಾಳೆ.
ಬೇರುಗಳಿಲ್ಲದವರು ನಾವು ಎಂದುಕೊಂಡಳು ಮಾನಸ. ಹಳ್ಳಿ ಮನೆಯ ನೆನಪಾಗಿ ಕಣ್ಣಲ್ಲಿ ಕಂಬನಿ ಕೋಡಿಯಾಗಿತ್ತು. ಅಷ್ಟು ಹೊತ್ತಿಗೆ ಗಂಡ ಬಂದಿದ್ದ. ಮೌನದಲ್ಲಿಯೇ ಊಟ ಮುಗಿದಿತ್ತು. ಮಗಳು “ಅಪ್ಪಾ ಎರಡು ದಿನ ರಜೆ ಇದೆ ಎಲ್ಲಿಗಾದರೂ ಹೋಗೋಣ’ ಎಂದಿದ್ದಳು. “ಸರಿ ಪುಟ್ಟಿà, ನಾಳೆ ಮಧ್ಯಾಹ್ನದವರೆಗೂ ಸ್ವಲ್ಪ$ಕೆಲಸ ಇದೆ. ಮಧ್ಯಾಹ್ನದ ನಂತರ ಹೊರಡೋಣ ಎಲ್ಲಿ ಅಂತ ನೀವೇ ಡಿಸೈಡ್ ಮಾಡಿ’ ಎಂದಿದ್ದ. ಎಲ್ಲಿ ಹೋಗೋದು ನಮಗೇನು ಸ್ವಂತ ಊರಿದೆಯೇ, ಹೋಗಿ ಒಂದು ನಾಲ್ಕು ದಿನ ಇದ್ದು ಬರಲು? ಯಾವುದೋ ರೆಸಾರ್ಟಿಗೋ ಮತ್ತೂಂದಕ್ಕೋ ಹೋಗೋದು, ಲಾಡ್ಜ್ ನಲ್ಲಿ ಉಳಕೋಳ್ಳೋದು! ಅದೇ ಹೊಟೇಲೂಟ ಥೂ ವಾಕರಿಗೆ ಬರುತ್ತೆ’ ಎಂದಿದ್ದಳು ಮಾನಸ. “ಹಾಗಂದರೆ ಹೇಗೆ ಮಮ್ಮಿ, ಎಲ್ಲೂ ಹೋಗದಿದ್ರೆ ನಂಗೂ ಬೇಜಾರಾಗಲ್ವಾ? ಮನೇಲೇ ಇರಬೇಕಾ’ ಎಂದಿದ್ದಳು ಮಗಳು ಮುಖ ದುಮ್ಮಿಸಿ. ಮಗಳಿಗೆ ಕಣ್ಣಲ್ಲೇ ಸುಮ್ಮನಿರಿಸಿದ್ದ ಅಪ್ಪ.
ಊಟದ ತಟ್ಟೆಬಟ್ಟಲುಗಳನ್ನು ತೊಳೆದು ಅಡುಗೆ ಮನೆ ಸ್ವತ್ಛಗೊಳಿಸಿ ಮಲಗಲು ಬಂದವಳಿಗೆ ಚದುರಿಹೋಗಿದ್ದ ಆಲೋಚನೆಗಳು ಮತ್ತೆ ಮುತ್ತಿಕೊಂಡವು. ಗಂಡ ಟೀವಿ ನೋಡುತ್ತಿದ್ದ. ಮಗಳು ಯಥಾಪ್ರಕಾರ ಅವಳ ರೂಮಿನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದಳು. ಈಗಿನ ಮಕ್ಕಳಿಗೆ ಯಾರೂ ಬೇಡ, ತಾವಾಯಿತು ತಮ್ಮ ಪಾಡಾಯ್ತು. ತಾವೂ ಚಿಕ್ಕಂದಿನಲ್ಲಿ ರಜೆ ಬಂತೆಂದರೆ ಅಜ್ಜಿಯ ಮನೆ, ನಮ್ಮ ಊರಿಗೆ ಅನತಿ ದೂರದಲ್ಲೇ ಇದ್ದ ಸೋದರತ್ತೆ ಮನೆಗೆ ಹೋಗುತ್ತಿದ್ದೆವು. ಟೀವಿ ಇಲ್ಲ, ಕಂಪ್ಯೂಟರ್ ಇಲ್ಲ , ಟ್ಯಾಬ್ ಇಲ್ಲ, ಫ್ಯಾನ್ ಇಲ್ಲ , ಫೋನೂ ಇಲ್ಲ. ಆದರೂ ಆ ದಿನಗಳು ಎಷ್ಟು ಚೆನ್ನಾಗಿರುತ್ತಿದ್ದವು. ಯಾವುದೂ ಕೊರತೆ ಎಂದೇ ಅನಿಸುತ್ತಿರಲಿಲ್ಲ. ತೋಟ ಗದ್ದೆ ಎಂದೆಲ್ಲ ತಿರುಗಾಡುವುದು ಹೊಟ್ಟೆ ತುಂಬಾ ಊಟ, ಕಣ್ಣು ತುಂಬಾ ನಿದ್ರೆ, ಇಳಿಸಂಜೆ ಹೊತ್ತಿನಲ್ಲಿ ಕುಂಟೆಬಿಲ್ಲೆ , ಲಗೋರಿ ಆಡುವುದು, ಮಧ್ಯಾಹ್ನವಾದರೆ ಮನೆ ಒಳಗೇ ಚೌಕಾಭಾರ, ಚನ್ನೆಮಣೆ, ಪಗಡೆ ಹೀಗೆ ಇದ್ದೇ ಇರುತ್ತಿತ್ತು. ರಜೆಯಲ್ಲಿ ಯಾರ ಮನೆಯಲ್ಲಿ ನೋಡಿದರೂ ಮಕ್ಕಳ ಸಂತೆ. ಎಷ್ಟು ಜನ ಬರುತ್ತಿದ್ದರೋ, ಎಷ್ಟು ದಿನ ಇರುತ್ತಿದ್ದರೋ ಲೆಕ್ಕ ಇಟ್ಟವರಿಲ್ಲ. ಆಗ ದುಡ್ಡಿಗೆ ಬರವಿತ್ತು. ಆದರೆ ಆತ್ಮೀಯತೆಗೆ ಪ್ರೀತಿಗೆ ಬರವಿರಲಿಲ್ಲ. ಸಂಜೆಯಾದರೆ ಅಂಗಳದಲ್ಲಿ ಎಲ್ಲರೂ ಕೂತು ಹರಟೆ ಹೊಡೆಯುವುದು, ಅಂತ್ಯಾಕ್ಷರಿ ಆಡುವುದು, ತಾವು ನೋಡಿದ ಸಿನಿಮಾದ ಕತೆ ಹೇಳುವುದು, ಸಿನಿಮಾ ನಟರ ಮಿಮಿಕ್ರಿ ಮಾಡುವುದು ಒಂದೇ ಎರಡೇ.
ಈಗ ಯಾರ ಮನೆಗೆ ಯಾರು ಹೋಗಬೇಕಾದರೂ ಯೋಚನೆ ಮಾಡಬೇಕು, ಮುಂಚೆಯೇ ಕೇಳಬೇಕು, “ಇರ್ತೀರಾ’ ಎಂದು. ಆದರೂ ಈಗಿನ ಮಕ್ಕಳು ಎಲ್ಲಿ ಹೋಗಲೂ ಇಷ್ಟಪಡುವುದಿಲ್ಲ. ತಾವಾಯ್ತು ತಮ್ಮ ಮನೆಯಾಯ್ತು. ತಮ್ಮ ಲ್ಯಾಪ್‌ಟಾಪು, ಟ್ಯಾಬು, ಮೊಬೈಲಾಯ್ತು. ಯಾರಿಗೆ ಯಾರೂ ಬೇಡ. ಎಲ್ಲರೂ ಬುದ್ಧಿವಂತರೇ, ಎಲ್ಲರ ಬಳಿಯೂ ಹಣವಿದೆ, ಸೌಕರ್ಯಗಳಿವೆ. ಆದರೂ ಏನೋ ಕೊರತೆ, ಆತ್ಮೀಯತೆಯೇ ಮಾಯವಾಗಿದೆ. ಈಗೆಲ್ಲ ಹಾಯ…ಬಾಯ… ಸಂಬಂಧಗಳು, ಮುಂಚಿನ ಬನ್ನಿ ಇಲ್ಲ. ಆಗ ಹತ್ತು ಪೈಸೆಗೆ ಸಿಗುತ್ತಿದ್ದ ಐಸ್‌ಕ್ಯಾಂಡಿ ಕೊಂಡು ಚೀಪುವುದರಲ್ಲಿ ಸಿಗುತ್ತಿದ್ದ ಆಪ್ಯಾಯತೆ ಈಗ ದುಬಾರಿಯಾದ ಬಟರ್‌ಸ್ಕಾಚ್ ಐಸ್‌ಕ್ರೀಮ… ಸವಿಯುವುದರಲ್ಲಿ ಸಿಗುತ್ತಿಲ್ಲ. ಅಮ್ಮ ಮಾಡುವ ಒತ್ತುಶಾವಿಗೆ ನುಚ್ಚಿನುಂಡೆಯ ರುಚಿ ಈಗಿನ ಪಿಜ್ಜಾ ಬರ್ಗರ್‌ಗಳಲ್ಲಿ ಇಲ್ಲ. ಆದರೂ ಅವೆಲ್ಲ ತಿನ್ನುತ್ತೇವೆ, ಡೆಲಿಷಿಯಸ್ ಎಂದು ಕಣ್ಣರಳಿಸುತ್ತೇವೆ. ಛೆ! ಎಂದು ಕೊಂಡಳು.
ಗಂಡ ಮಲಗಲು ಬಂದಿರಬೇಕು. ಹೊದಿಕೆಯನ್ನು ಕತ್ತಿನವರೆಗೂ ಎಳೆದುಕೊಂಡು ಬಿಗಿಯಾಗಿ ಕಣ್ಣುಮುಚ್ಚಿಕೊಂಡಳು ನಿದ್ರೆ ಬಂದವಳಂತೆ. ಅವನ ಪಾಡಿಗೆ ಅವನು ಮಲಗಿದ. ಐದು ನಿಮಿಷದಲ್ಲೇ ಗೊರಕೆ ಸದ್ದು ಕೇಳಿಸಿತ್ತು.
ಮಗಳನ್ನಾದರೂ ಬೇರೆ ಊರಲ್ಲಿರುವ ಹುಡುಗನಿಗೆ ಕೊಟ್ಟು ಮದುವೆ ಮಾಡಬೇಕು. ಹಾಗಾದರೂ ತಮಗೊಂದು ಊರಿರುತ್ತದೆ ಹೋಗಿಬರಲು. ಮಗಳ ಮಕ್ಕಳಿಗೆ ತಮ್ಮದು ಅಜ್ಜಿ ಮನೆಯಾಗುತ್ತದೆ, ಮಕ್ಕಳು ಇಲ್ಲಿ ಬರುತ್ತಾರೆ. ನಮ್ಮ ಮನೆ ಸಂಭ್ರಮಿಸುತ್ತದೆ. ಮಗಳಿಗೂ ತವರೂರು ಎಂಬುದು ಉಳಿಯುತ್ತದೆ ಎಂದುಕೊಂಡಳು. ಮರುಕ್ಷಣವೇ ತನ್ನ ಹುಚ್ಚು ಆಲೋಚನೆಗಳಿಗೆ ನಗುವೂ ಬಂತು.
ಮೊನ್ನೆ ಒಂದು ದಿನ ಕಚೇರಿಗೆ ಹೋಗುವಾಗ ಮಾನಸಳಿಗೆ ಅವರೂರಿಗೆ ಹೋಗುವ ಮಧುಸೂದನ ಬಸ್ಸು ಕಾಣಿಸಿತ್ತು. ಅದೇ ಹಸಿರುಹಳದಿ ಅಕ್ಷರಗಳಲ್ಲಿ ಬರೆದ ಹೆಸರು. ಬಸ್ಸಿನ ಶರೀರಕ್ಕೆ ಬಳಿದ ಹಸಿರುಹಳದಿ ಕೆಂಪು ಪಟ್ಟಿಗಳು. ಅದನ್ನು ನೋಡುತ್ತ ಅವಳಿಗೆ ಹೊಟ್ಟೆಯಲ್ಲೇನೋ ಕಲಸಿಕೊಂಡ ಹಾಗೆ ಸಂಭ್ರಮ, ತಳಮಳ ಒಟ್ಟಿಗೆ ಆಗಿತ್ತು. ಅವಳು ಕುಳಿತಿದ್ದ ಬಿಎಂಟಿಸಿ ಬಸ್ಸನ್ನು ಆ ಬಸ್ಸು ಹಾದು ಹೋದರೂ ಅವಳ ಮನಸ್ಸು ಮಧುಸೂದನ ಬಸ್ಸಿನ ಹಿಂದೆ ಅವಳೂರಿಗೆ ಹೊರಟುಹೋಗಿತ್ತು. ತನ್ನೂರಿನ ಬಸ್‌ಸ್ಟಾಪಿನಲ್ಲಿ ಇಳಿದ ಕೂಡಲೆ ಊರಿನ ಕಡೆ ನಡೆಯುವ ಕಾಲು ಹಾದಿ. ಹಾದಿಯುದ್ದಕ್ಕೂ ಆ ಬದಿ ಈ ಬದಿ ಹೊಂಗೆ ತೋಪು. ಹೊಂಗೆಯ ತಂಪು ನೆರಳು. ಹೊಂಗೆ ಹೂಗಳ ಘಮಲು. ದೊಡ್ಡ ದೊಡ್ಡ ಆಳವಾಗಿ ಬೇರುಬಿಟ್ಟ ಹುಣಿಸೆ ಮರಗಳು. ಊರ ಬಾಗಿಲ ಮುಂಚೆ ಸಿಗುತ್ತಿದ್ದ ಶೆಟ್ಟೋಜಿಯ ಹೊಲ, ನಳನಳಿಸುವ ಪೈರುಗಳು, ಗೋಪಮ್ಮನ ಹೊಲದಲ್ಲಿ ಹಾಕಿದ್ದ ಅವರೆಕಾಯಿಯ ಸೊಗಡಿನ ಕಂಪು ತಂಗಾಳಿಯಲ್ಲಿ ತೇಲಿ ಬಂದಾಗ ಆಹಾ! ಮೂಗಿಗೆ ಎಂಥಾ ಹಿತ! ಊರು ತಲುಪಿದೊಡನೆ “ಅಮ್ಮಯ್ಯ ಈಗ ಬಂದ್ಯಾ ಚೆಂದಾಕಿದೀಯಾ’ ಎಂದು ಕೇಳುವ ರೈತಾಪಿ ಜನರು, ಇನ್ನೇನು ಮಾನಸ ತನ್ನ ಮನೆಯ ತಿರುವಿನಲ್ಲಿ ತಿರುಗಬೇಕು ಅಷ್ಟು ಹೊತ್ತಿಗೆ ಕಂಡಕ್ಟರ್ ತಾನಿಳಿಯುವ ಸ್ಟಾಪಿನ ಹೆಸರು ಗಟ್ಟಿಯಾಗಿ ಕೂಗುತ್ತಿದ್ದ. ಧಡಕ್ಕನೆ ಕಣ್ಣು ಬಿಟ್ಟ ಅವಳಿಗೆ ತಾನು ಕುಳಿತಿದ್ದದ್ದು ಸಿಟಿಬಸ್ಸು ಎಂದು ಅರಿವಾಗಲು ಅರೆಕ್ಷಣ ಹಿಡಿದಿತ್ತು. ಗಡಬಡಿಸಿ ಇಳಿದಿದ್ದಳು. ಕಚೇರಿಗೆ ಹೋದರೂ ತನ್ನ ಊರಿನ ಗುಂಗು, ತನ್ನೂರಿನ ಬಸ್ಸು ನೋಡಿದ ಸಂಭ್ರಮ, ಯಾರಲ್ಲಾದರೂ ಹೇಳಿಕೊಳ್ಳಬೇಕೆನಿಸಿತ್ತು. ಯಾರಲ್ಲಿ ಹೇಳಿಕೊಳ್ಳುವುದು? ತನ್ನ ಸಂಭ್ರಮವನ್ನು ಯಾರು ತನ್ನ ಹಾಗೆ ಅರ್ಥ ಮಾಡಿಕೊಳ್ಳುತ್ತಾರೆ, ಆ ಪುಳಕವನ್ನು ತನ್ನಂತೆಯೇ ಯಾರು ಅನುಭವಿಸುತ್ತಾರೆ ಎನಿಸಿತ್ತು. ತಕ್ಷಣ ತಮ್ಮನ ನೆನಪಾಗಿತ್ತು. ಅವನಿಗೆ ಫೋನು ಮಾಡಿ, “ಹೇಯ… ಇವತ್ತು ಎಂಥ ಭಾರಿ ಖುಷಿ ಗೊತ್ತಾ’ ಎಂದಿದ್ದಳು. ಅವನೂ ಉತ್ಸುಕತೆಯಿಂದ, “ಏನಕ್ಕಾ ಏನಾಯ್ತು’ ಎಂದಿದ್ದ.
“ನಮ್ಮೂರಿನ ಮಧುಸೂದನ ಬಸ್ಸು ನೋಡಿದೆ ಕಣೋ, ಊರೆಲ್ಲಾ ನೆನಪಾಯಿತು ಎಷ್ಟು ಖುಷಿ ಆಯ್ತು ಗೊತ್ತಾ?’ ಎಂದಿದ್ದಳು. “ಅಯ್ಯೋ ಇಷ್ಟೇನಾ ನಾನೆÇÉೋ ನಿಂಗೋ ಭಾವನಿಗೋ ಪ್ರಮೋಷನ್ ಬಂತು ಅಂತ ತಿಳಕೊಂಡೆ, ಬಸ್ಸು ನೋಡಿ ಖುಷಿ ಪಡೋದಕ್ಕೇನಿದೆ? ಥೂ ನಿನ್ನ! ಈಗ ಬಿಜಿ ಇದೀನಿ ಮತ್ತೆ ಮಾಡ್ತೀನಿ’ ಎಂದು ಫೋನಿಟ್ಟಿದ್ದ. “ಥೂ ಇವನಜ್ಜಿ’ ಎಂದು ಬೈದುಕೊಂಡಿದ್ದಳು. ಸಂಭ್ರಮಿಸುವುದಕ್ಕೂ ಬರ ಇವನಿಗೆ. ಪ್ರಮೋಷನ್ನಂತೆ ಪ್ರಮೋಷನ್ನು ಬರೀ ಮೋಷನ್ನು. ಯಾವಾಗ್ಲೂ ದುಡ್ಡು ದುಡ್ಡು ಅಂತ ಸಾಯೋದೊಂದೇ ಗೊತ್ತಿರೋದು.
ನಿದ್ರೆಯಲ್ಲೇ ಬಿಕ್ಕಳಿಸುತ್ತಿದ್ದ ಅವಳನ್ನು ,”ಏನಾಯ್ತು ಯಾಕಳ್ತಿದ್ದೀಯಾ ಏನಾದರೂ ಕೆಟ್ಟ ಕನಸು ಬಿತ್ತಾ?’ ಎಂದು ಗಂಡ ಎಚ್ಚರಿಸುತ್ತಿದ್ದ. ಗಾಬರಿಯಿಂದ ದಬಕ್ಕನೆ ಎದ್ದು ಕುಳಿತಳು. ಗಂಡ ನೀರು ತಂದು ಕೊಟ್ಟ. “ಕುಡಿ, ಸುಧಾರಿಸಿಕೋ. ಬೇಡದ್ದೆಲ್ಲಾ ಯೋಚನೆ ಮಾಡಬೇಡ. ಆರಾಮಾಗಿ ಮಲಗು’ ಎಂದು ತಲೆ ಸವರಿದ್ದ. ಗಂಡನ ಮುಖವನ್ನೇ ದೀನವಾಗಿ ನೋಡಿದ ಅವಳು, “ನಂಗೆ ನಮ್ಮೂರು ನೆನಪಾಗ್ತಿದೆ. ಊರಿಗೆ ಹೋಗಬೇಕು, ನಮ್ಮನೆ ನೋಡಬೇಕು ಅನಿಸ್ತಿದೆ. ಆದರೆ, ಅಲ್ಲಿ ಯಾರಿದ್ದಾರೆ? ಯಾರೂ ಇಲ್ಲ ! ನಂಗೆ ಹೇಳಿಕೊಳ್ಳೋಕೆ ಒಂದು ಊರಿಲ್ಲ , ಬೇರಿಲ್ಲ’ ಎಂದು ಅವನ ಹೆಗಲ ಮೇಲೆ ತಲೆಯಿಟ್ಟು ಅಳತೊಡಗಿದಳು. ಸಾಂತ್ವನಿಸುವಂತೆ ಅವಳ ಬೆನ್ನು, ತಲೆ ನೇವರಿಸುತ್ತ ಅವನಂದಿದ್ದ , “ಹೋಗಲಿ ಬಿಡು, ಊರಿಲ್ಲದಿದ್ರೆ ಏನಂತೆ, ಅದಕ್ಕೆಲ್ಲ ಬೇಜಾರು ಮಾಡ್ಕೊàತಾರಾ? ನಿಂಗೆ ನಾನಿದೀನಿ ತಾನೆ?’ ಎಂದಿದ್ದ. ಅವಳ ಅಳು ಗಪ್ಪನೆ ನಿಂತಿತ್ತು.
– ವೀಣಾ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.