ಒಬ್ಬನೇ ನಡೆಯಬಹುದು, ಒಬ್ಬಳೇ ನಡೆಯಬಾರದೆ !
Team Udayavani, Jan 6, 2017, 3:45 AM IST
ಈ ದಿನಗಳಲ್ಲಿ ಒಂಟಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಸುದ್ದಿಯಾಗುತ್ತಿರುವಾಗ ಹುಡುಗಿಯರು ರಸ್ತೆಗೆ ಕಾಲಿಡಲು ಹಗಲು ಹೊತ್ತಿನಲ್ಲೂ ಭಯಪಡಬೇಕಾದ ಪರಿಸ್ಥಿತಿಯಿದೆ. ಹಾಗಾಗಿ, ಅಲ್ಲೆಲ್ಲೋ ಮಂಜು ಕವಿದ ಬೆಟ್ಟಗಳಲ್ಲಿ ಕಾಡುಹೂವು ಹುಡುಕುತ್ತ ಅಲೆದಾಡುವ ಕನಸನ್ನು ರಾತ್ರಿ ನಿದ್ದೆಯಲ್ಲಿ ಬರಿಸಿಕೊಂಡು ತೆಪ್ಪಗಿರಬೇಕಷ್ಟೇ. ಆದರೂ ಇಳಿಸಂಜೆಯಲ್ಲಿ , ಮಸಿಕತ್ತಲ ರಾತ್ರಿಗಳಲ್ಲಿ ಕಾಡ ಸದ್ದನ್ನು ಆಲಿಸುತ್ತ ಸುಪ್ತಮನಸ್ಸಿನ ಜೊತೆ ಮಾತಾಡುತ್ತ ಒಬ್ಬಳೇ ನಡೆದುಹೋಗಬೇಕೆಂಬುದು ದಿನ ದಿನದ ಆಸೆ. ಉದುರಿದ ತರಗೆಲೆಗಳನ್ನು ಕಣ್ಣು ತುಂಬಿಕೊಂಡು ಹಸಿಮಣ್ಣಲ್ಲಿ ಪಾದವಿರಿಸಿ ಹೂಗಂಧವನ್ನು ಮೂಸುತ್ತ ಜಗತ್ತು ಮರೆತು ನಡೆಯುವ ಆ ಗಳಿಗೆಗಳು… ಓಹ್! ಇನ್ನೂ ದೊರಕಿಲ್ಲ.
ಕೆಲವೊಮ್ಮೆ ವಿಷಾದದ ಸಂಜೆ, ಏಕಾಂತದ ರಾತ್ರಿ, ಬೆಳದಿಂಗಳ ಬೆಳಗಿನ ಜಾವಗಳು ಕಾಡುವುದುಂಟು. ಆಗೆಲ್ಲ ಮೌನವಾಗಿ ನನ್ನೊಳಗೆ ನಡೆಯುತ್ತಿರುವ ಗೊಂದಲಗಳನ್ನು ಗಮನಿಸುತ್ತ ಉದ್ದುದ್ದಕ್ಕೆ ಒಬ್ಬಳೇ ನಡೆದುಹೋಗಬೇಕೆಂಬ ಉತ್ಕಟ ಆಸೆ ಹುಟ್ಟಿಬಿಡುತ್ತದೆ. ಆದರೆ, ಹೆಣ್ಣುಮಗಳೊಬ್ಬಳು ಸಂಜೆ ಆರರ ನಂತರ ಮನೆಯಿಂದ ಹೊರಗೆ ಕಾಲಿಟ್ಟರೆ ಯಾಕೆ, ಏನು, ಎಲ್ಲಿಗೆ, “ಬೇಡ’ ಎಂಬ ಪ್ರಶ್ನೋತ್ತರಗಳು ನಡೆದೇ ತೀರುತ್ತವೆ. ಇಂದಿನ ದಿನಗಳಲ್ಲಿ ದಿನಕ್ಕೊಂದು ಹೊಸ ದೌರ್ಜನ್ಯ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವಾಗ ರಸ್ತೆಗೆ ಕಾಲಿಡಲು ಹಗಲು ಹೊತ್ತಿನಲ್ಲೂ ಭಯಪಡಬೇಕಾದ ಪರಿಸ್ಥಿತಿಯಿದೆ ಬಿಡಿ! ಹಾಗಾಗಿ ಅಲ್ಲೆಲ್ಲೋ ಮಂಜು ಕವಿದ ಬೆಟ್ಟಗಳಲ್ಲಿ ಕಾಡುಹೂವು ಹುಡುಕುತ್ತ ಅಲೆದಾಡುವ ಕನಸನ್ನು ರಾತ್ರಿ ನಿದ್ದೆಯಲ್ಲಿ ಬರಿಸಿಕೊಂಡು ತೆಪ್ಪಗಿರಬೇಕಷ್ಟೇ.
ನಾನು ಒಮ್ಮೆ ಕಾಲೇಜು ಮುಗಿಸಿಕೊಂಡು ಬಸೂÅರಿನಿಂದ ಕುಂದಾಪುರಕ್ಕೆ ಒಬ್ಬಳೇ, ಪಕ್ಷಿಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಆಗೆಲ್ಲ ನಾನು ಪಕ್ಷಿ ವೀಕ್ಷಣೆಯ ಗೀಳು ಹತ್ತಿಸಿಕೊಂಡಿದ್ದೆ. ದಿನಗಟ್ಟಲೆ ನಮ್ಮ ತೋಟ, ಕಾಡುಗಳಲ್ಲಿ ತಿರುಗಾಡುತ್ತ ನಾನು ಕಂಡ ಹಕ್ಕಿಗಳ ಬಗ್ಗೆ ನೋಟ್ಸ್ ಮಾಡಿಕೊಳ್ಳುತ್ತಿದ್ದೆ. ಮನೆಗೆ ಬಂದು ತೇಜಸ್ವಿ , ಸಲೀಂ ಅಲಿ ಅವರ ಪುಸ್ತಕಗಳಲ್ಲಿ ಅವುಗಳ ಸಮಗ್ರ ವಿವರವನ್ನು ಓದಿಕೊಳ್ಳುತ್ತಿದ್ದೆ. ಹಾಗೆ, ಒಂದು ದಿನ ಕುಂದಾಪುರದ ಆ ಕಾರ್ಯಕ್ರಮದ ಬಗ್ಗೆ ಪತ್ರಿಕೆಯಲ್ಲಿ ಓದಿ ಅಲ್ಲಿಗೆ ಹೋದೆ. ತುಂಬ ಆಸಕ್ತಿಕರವಾಗಿತ್ತು. ಹಕ್ಕಿಗಳ ವಿವಿಧ ಫೋಟೋಗಳು, ಭರ್ತಿ ಮಾಹಿತಿಗಳು ಇದ್ದವು. ಸಮಯ ಸರಿದದ್ದೇ ತಿಳಿಯಲಿಲ್ಲ. ಕುಂದಾಪುರದಲ್ಲಿ ಬಸ್ಸು ಹಿಡಿದು ಹಾಲಾಡಿಗೆ ಬಂದು ಇಳಿಯುವ ಹೊತ್ತಿಗೆ ರಾತ್ರಿ ಒಂಬತ್ತು ಗಂಟೆಯಾಗಿತ್ತು !
ಕಾಡು, ಬಯಲುಗಳನ್ನು ದಾಟುತ್ತ ಅರ್ಧ ಗಂಟೆ ನಡೆಯಬೇಕು ನಮ್ಮೂರಿಗೆ. ಯಾವುದಕ್ಕೂ ಯಾರನ್ನೂ ಕಾಯದ, ಕೇಳದ ಆ ದಿನಗಳಲ್ಲಿ ನಾನು ಹಿಂದೆ ಮುಂದೆ ನೋಡದೆ ಹೊರಟೇಬಿಟ್ಟೆ ! ಆದರೆ ಒಳಗೊಳಗೇ ತಳಮಳವಾಯಿತು ಎಂದು ಹೇಳದಿದ್ದರೆ ತಪ್ಪಾಗುತ್ತದೆ.
ನಾಲ್ಕು ಹೆಜ್ಜೆ ಹಾಕಿದ್ದೇನಷ್ಟೇ. ನಮ್ಮ ಪಕ್ಕದ ಊರಿನ ನನಗಿಂತ ನಾಲ್ಕೈದು ವರ್ಷ ದೊಡ್ಡ ಹುಡುಗನೊಬ್ಬ ಸಿಕ್ಕಿದ. ಸುಸಂಸ್ಕೃತ ಕುಟುಂಬದ ಅವನು, “”ಒಬ್ಬರೇ ಹೋಗುತ್ತಿದ್ದೀರಾ? ಬ್ಯಾಟರಿ ಕೂಡಾ ಇಲ್ಲವಲ್ಲ ನಿಮ್ಮಲ್ಲಿ” ಎಂದ. ಅವನಲ್ಲಿ ಬ್ಯಾಟರಿ ಇತ್ತು. ನಿಜಕ್ಕೂ ಸಂತಸವಾಯಿತು. ಕತ್ತಲಲ್ಲಿ ಕಾಡುದಾರಿಯಲ್ಲಿ ಒಬ್ಬಳೇ ಹೋಗುವುದು ಹೇಗೆಂಬ ಒಳಗೊಳಗಿನ ಚಿಂತೆಗೆ ಒಂದು ಪರಿಹಾರ ಸಿಕ್ಕಿತಲ್ಲ ಎಂದು. ಇಬ್ಬರೂ ಬಿರಬಿರನೆ ಕಾಲು ಹಾಕಿದೆವು. ನಾನು, ಅದು, ಇದು ಮಾತಾಡಿದೆ. ಆತ ಬಹುತೇಕ ಮೌನವಾಗಿದ್ದ. ಕೊನೆಗೆ ಅರ್ಧ ದಾರಿ ಮುಗಿವ ಹೊತ್ತಿಗೆ ನನ್ನ ಮಾತುಗಳೂ ಖಾಲಿಯಾಗಿದ್ದವು. ಇಬ್ಬರೂ ಮೌನವಾಗಿ ದಾರಿ ಸವೆಸಿದೆವು. ಕೊನೆಗೆ, “”ಈ ತರ ಒಬ್ಬಳೇ ರಾತ್ರಿ ಮಾಡಿಕೊಂಡು ಇನ್ನು ಮುಂದೆ ಬರಬೇಡಿ” ಎಂದ. ಆಯಿತೆಂದೆ. ಬೇಡವೆಂದರೂ ಮನೆ ಬಾಗಿಲಿಗೆ ಬಿಟ್ಟು ಆತ ಅವನೂರಿಗೆ ಹೋದ. ಮನೆಯಲ್ಲಿ ಅಮ್ಮ ಸಿಟ್ಟಿನಿಂದ ಕಾಯುತ್ತಿದ್ದರು. ಕುಂದಾಪುರಕ್ಕೆ ಹೋಗುವೆನೆಂದು ತಿಳಿಸಿದ್ದೆ. ಆದರೆ ಇಷ್ಟು ತಡವಾಗುತ್ತದೆಂದು ಗೊತ್ತಿರಲಿಲ್ಲ. ದೂರವಾಣಿ, ಮೊಬೈಲು ಇಲ್ಲದ ಕಾಲ. ಪಾಪ ಅಮ್ಮ ಮಾತಾಡಲೇ ಇಲ್ಲ. ಮೌನದಲ್ಲೇ ಕೊಲ್ಲುತ್ತ ಮಲಗಲು ಹೋದರು. ನಾನು ಸಪ್ಪೆ ಮುಖ ಹೊತ್ತು ಊಟ ಮಾಡಿ ನನ್ನಷ್ಟಕ್ಕೆ ಹೋಗಿ ನಿದ್ದೆ ಮಾಡಿದೆ.
ಇನ್ನೊಂದು ಘಟನೆ. ನಾನು ಶಿಕ್ಷಕಿಯಾಗಿ ಹೊಳೆನರಸೀಪುರದಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದದ್ದು. ಚುನಾವಣಾ ಕರ್ತವ್ಯಕ್ಕೆ ಸಕಲೇಶಪುರದ ಹಳ್ಳಿಯೊಂದಕ್ಕೆ ಹಾಕಿದ್ದರು. ಮೂರು ದಿನಗಳ ಒತ್ತಡದ ಕೆಲಸ ಮುಗಿಸಿ ಮರಳಿದ್ದೆ. ಬಸ್ಸು ನನ್ನನ್ನು ತಂದು ಹೊಳೆನರಸೀಪುರದಲ್ಲಿ ಇಳಿಸಿದಾಗ ರಾತ್ರಿ ಎರಡು ಗಂಟೆ. ಫೋನ್ ಮಾಡೆಂದು ಹೇಳಿದ್ದ ಗಂಡ, ಎಷ್ಟೋ ಸಲ ಕಾಲ್ ಮಾಡಿದರೂ ತೆಗೆದುಕೊಳ್ಳಲಿಲ್ಲ. ಬಹುಶಃ ನಿದ್ದೆ ಮಾಡಿದ್ದರು. ಆ ನೀರವ ರಾತ್ರಿಯಲ್ಲಿ ಬಸ್‌ಸ್ಟಾಂಡಿನಲ್ಲಿದ್ದ ಎರಡು ನಾಯಿಗಳು ನನ್ನನ್ನು ನೋಡಿ ಎದ್ದು ಆಕಳಿಸಿ ಮೂಲೆ ಹಿಡಿದು ಮಲಗಿದವು. ಮುಸುಕು ಹೊದ್ದು ಕಲ್ಲುಬೆಂಚುಗಳ ಮೇಲೆ ಉರುಳಿಕೊಂಡಿದ್ದ ಕೆಲವರು ತಲೆ ಹೊರಗೆ ಹಾಕಿ ದಿಟ್ಟಿಸಿದರು. ಕೈಯಲ್ಲಿ ತುಯ್ಯುವ ಲಗೇಜು, ದೇಹವಿಡೀ ಹಿಂಡಿ ಹಿಪ್ಪೆ ಮಾಡುತ್ತಿದ್ದ ಸುಸ್ತು, ಎಲ್ಲವನ್ನೂ ಮೀರಿಸಿದ ಅವ್ಯಕ್ತ ಭಯ. ಏನು ಮಾಡಬೇಕೆಂದು ಹೊಳೆಯಲಿಲ್ಲ. ಮನೆಗೆ ಹತ್ತು ನಿಮಿಷದ ದಾರಿ. ಆ ದಾರಿಯ ಮಧ್ಯೆ ಸರ್ಕಾರಿ ಆಸ್ಪತ್ರೆಯ ಶವಾಗಾರ. ಮತ್ತೆ ಕಾಲ್ ಮಾಡಿದರೂ ಆ ಕಡೆಯಿಂದ ರಿಸೀವ್ ಮಾಡಲಿಲ್ಲ. ಸಿಡ್ ಸಿಡ್ ಸಿಡಾರೆಂದು ಸಿಟ್ಟು ಬಂತು, ಯಾರಲ್ಲೆಂದು ಗೊತ್ತಿಲ್ಲ! ಆ ಸಿಟ್ಟಲ್ಲೇ ಧಡಧಡ ಹೆಜ್ಜೆಹಾಕಿಕೊಂಡು ಹೊರಟೆ. ಪುಣ್ಯಕ್ಕೆ ದಾರಿಯಲ್ಲಿ ಯಾರೂ ಎದುರಾಗಲಿಲ್ಲ. ಶವಾಗಾರ ದಾಟಿತು. ಭೂತ-ಪ್ರೇತಗಳ ಭಯ ಇರಲಿಲ್ಲ. ಆದರೆ ಇಡೀ ಮೈ ಬೆವರಿನಿಂದ ಒದ್ದೆಯಾಗಿತ್ತು; ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿತ್ತು. ಮನೆ ಮೆಟ್ಟಿಲು ತಲುಪಿದಾಗ ನಮ್ಮವರು ಕಣ್ಣುಹೊಸಕಿಕೊಂಡು ಬರುತ್ತಿದ್ದರು. ಅವರ ಮುಖ ನೋಡದೆ ಸಿಡಿಮಿಡಿಗೊಳ್ಳುತ್ತ ಮನೆಯೊಳಗೆ ಸೇರಿಕೊಂಡೆ.
ಮೇಲಿನ ಎರಡು ಘಟನೆಗಳೂ ಓದುಗರಾದ ನೀವು ಪುರುಷರಾಗಿದ್ದರೆ ತೀರಾ ಸಾಮಾನ್ಯ ಅನಿಸುತ್ತದೆ. ಅದೇ ಇಲ್ಲಿನ ವಿಶೇಷ! ತೀರಾ ಸಾಮಾನ್ಯ ಸಹಜ ಘಟನೆಗಳೂ ನಮಗೆ- ಮಹಿಳೆಯರಿಗೆ ಜೀವ ಹಿಂಡುವ ವಿಷಯಗಳಾಗುತ್ತವೆ. ಹಗಲು ಹೊತ್ತಿನಲ್ಲೇ “ಎಲ್ಲಿಗೆ ಹೋದರೆ ಹೇಗೋ ಏನೋ… ಅಲ್ಲಿ ಏನು ಅಪಾಯ ಸಂಭವಿಸುತ್ತದೋ… ನಮ್ಮ ಮಾನಸಿಕ, ದೈಹಿಕ ಭಾವನೆಗಳನ್ನು ; ಆ ಮೂಲಕ ಇಡೀ ಬದುಕನ್ನು ಹೊಸಕಿ ಹಾಕಲು ಯಾರು ಕಾದುಕೊಂಡಿರುತ್ತಾರೋ!’ ಎಂಬಿತ್ಯಾದಿ ನೂರು ತಲೆನೋವುಗಳು ಸಿಡಿಯುತ್ತಿರುತ್ತವೆ. ಇನ್ನು ನಡುರಾತ್ರಿಯಲ್ಲಿ ಕತ್ತಲಲ್ಲಿ ಸ್ವಲ್ಪ ದೂರ ನಡೆಯಬೇಕಾದರೂ ಜೊತೆಗೊಂದು “ಗಟ್ಟಿ ಜನ’ ಬೇಕೇ ಬೇಕು. ನಮ್ಮ “ಆತ್ಮಸಾಕ್ಷಾತ್ಕಾರ’ದ ಮಾತು ಭಾರೀ ದೂರವಿದೆ ಬಿಡಿ!
ರಸ್ತೆಯ ವಿಷಯ ಹೋಗಲಿ, ಮನೆಯೊಳಗೂ ಉಸಿರು ಕಟ್ಟಿಸುವ ನೂರೆಂಟು ಪ್ರಶ್ನಾವಳಿಗಳು, ಉಸಿರು ಹಿಂಡುವ ಬಿಗಿ ಒಳ ಉಡುಪುಗಳು! ಸುಖಾಸುಮ್ಮನೆ ಅಂತೆ-ಕಂತೆಗಳ ಗಾಸಿಪ್‌ಗ್ಳು… ಆದರೂ ಇಳಿಸಂಜೆಯಲ್ಲಿ , ಮಸಿಕತ್ತಲ ರಾತ್ರಿಗಳಲ್ಲಿ ಕಾಡ ಸದ್ದನ್ನು ಆಲಿಸುತ್ತ ಸುಪ್ತಮನಸ್ಸಿನ ಜೊತೆ ಮಾತಾಡುತ್ತ ಒಬ್ಬಳೇ ನಡೆದುಹೋಗಬೇಕೆಂಬುದು ದಿನ ದಿನದ ಆಸೆ. ಉದುರಿದ ತರಗೆಲೆಗಳನ್ನು ಕಣ್ಣು ತುಂಬಿಕೊಂಡು ಹಸಿಮಣ್ಣಲ್ಲಿ ಪಾದವಿರಿಸಿ ಹೂಗಂಧವನ್ನು ಮೂಸುತ್ತ ಜಗತ್ತು ಮರೆತು ನಡೆಯುವ ಆ ಗಳಿಗೆಗಳು… ಓಹ್! ಇನ್ನೂ ದೊರಕಿಲ್ಲ. ನಾನೇ ಬರೆದ ಕವಿತೆಗಳಲ್ಲಿ ಬರುವ “ಅವಳ’ಂತೆ ನಡುರಾತ್ರಿಯ ಕಡಲ ದಂಡೆಯಲ್ಲಿ ಮೈಚೆಲ್ಲಿ ದೂರ ದಿಗಂತದ ಕಂದೀಲನ್ನು ಕಾಣುತ್ತ ಗೆಜ್ಜೆಕಾಲನ್ನು ಮರಳಲ್ಲಿ ಇಳಿಬಿಟ್ಟು ಇಡೀ ಕಡಲೆಂಬ ಕಡಲನ್ನು ನನ್ನೊಳಗೆ ತುಂಬಿಕೊಳ್ಳಬೇಕೆಂಬ ಹುಚ್ಚು… ಉಡುಪು ಸಡಿಲಿಸಿ, ಸರಾಗ ಉಸಿರಾಡಲು ಶ್ವಾಸಕೋಶಕ್ಕೆ ಅವಕಾಶ ಮಾಡಿಕೊಟ್ಟು ಮನದ ನರನರಗಳನ್ನು ಸಡಿಲಗೊಳಿಸಿ ಹೀಗೆ ಪಯಣಿಸುವ ಆಸೆಗೆ ನಾನಿನ್ನೂ ಕಲ್ಲುಹಾಕಿಕೊಂಡಿಲ್ಲ ! “ನಿರ್ಭೀತವಾಗಿ, ಪ್ರಾಮಾಣಿಕವಾಗಿ ನನ್ನ ದನಿಯನ್ನು ಪ್ರಕಟಿಸಿದ ದಿನ ಆ ಸ್ವಾತಂತ್ರ್ಯವನ್ನು ನನಗೆ ನಾನೇ ಪಡೆದುಕೊಳ್ಳುತ್ತೇನೆ’ ಎಂಬ ಹುಚ್ಚು ಆಸೆಯೊಂದಿಗೆ ಬದುಕುತ್ತಿದ್ದೇನೆ !
– ವಿಜಯಶ್ರೀ ಹಾಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.