ಪೋಂಚೋ ಪ್ರಪಂಚ
Team Udayavani, Oct 26, 2018, 6:00 AM IST
ಯಾವುದೇ ಬಟ್ಟೆ ಧರಿಸಲಿ, ಮೇಲೊಂದು ಶಾಲು ಹೊದ್ದುಕೊಳ್ಳಬೇಕು. ಆ ಶಾಲೋ ಹೇಳಿದಂತೆ ಕೇಳುವುದೂ ಇಲ್ಲ. ಕ್ಷಣ ಕ್ಷಣಕ್ಕೂ ಅದು ಜಾರಿಬೀಳದಂತೆ ಕಣ್ಣುಗಳೂ, ಕೈಗಳೂ ಜಾಗೃತವಾಗಿರಬೇಕು. ಹೆಣ್ಣುಮಕ್ಕಳ ಈ ಸಮಸ್ಯೆಗೆ ಪರಿಹಾರವೇನೋ ಎಂಬಂತೆ ಬಂದಿರುವ ಹೊಸ ಟ್ರೆಂಡ್ ಈ “ಪೊಂಚೋ’. ಏನಿದು ಪೋಂಚೋ ಎಂದು ಯೋಚಿಸುತ್ತಿ ದ್ದೀರಾ? ವೃತ್ತಾಕಾರ ಅಥವಾ ಆಯತಾಕಾರದ ಬಟ್ಟೆ. ಅದರ ಮಧ್ಯಭಾಗದಲ್ಲಿ ಓಪನಿಂಗ್ ಇರುತ್ತದೆ. ಆ ತೆರೆದ ಭಾಗದ ಮೂಲಕ ತಲೆ-ಕುತ್ತಿಗೆ ಹಾಕಿ ಪೋಂಚೋವನ್ನು ಧರಿಸಿದರೆ, ಆರಾಮವಾಗಿ ಭುಜದ ಮೇಲೆ ಜೋತುಬಿದ್ದಿರುತ್ತದೆ. ಯಾವ ಉಡುಗೆಯ ಮೇಲೆ ಬೇಕಾದರೂ ಪೋಂಚೋವನ್ನು ಧರಿಸಬಹುದು. ಹೊಸ ಹೊಸ ವಿನ್ಯಾಸದಲ್ಲಿ ಕಾಣಸಿಗುವ ಪೋಂಚೋ, ಈಗ ಹೆಣ್ಣುಮಕ್ಕಳ ಫೇವರಿಟ್.
ಕ್ರೋಶೆ ಪೋಂಚೋ
ನೂಲುಹುರಿಯ ಮೂಲಕ ನೇಯ್ದು ಮಾಡಿರುವಂಥ ಪೋಂಚೋ. ಇದು ಬೇಸಗೆ ಹಾಗೂ ಚಳಿಗಾಲ ಎರಡಕ್ಕೂ ಸೂಕ್ತ. ನೀವು ಧರಿಸಿರುವ ಡ್ರೆಸ್ ಅಷ್ಟೇನೂ ಆಕರ್ಷಕವಾಗಿಲ್ಲ ಎಂದೆನಿಸಿದರೆ, ಮೇಲೊಂದು ಕ್ರೋಶೆ ಪೋಂಚೋವನ್ನು ಹೊದ್ದುಕೊಂಡರೆ ಸಾಕು, ಎಂಥ ಬೋರಿಂಗ್ ಡ್ರೆಸ್ ಕೂಡ ಗ್ಲಾಮರಸ್ ಆಗಿ ಬದಲಾಗುತ್ತದೆ.
ನಿಟ್ ಪೋಂಚೋ
ಉಣ್ಣೆಯಿಂದ ಹೆಣೆದು ಮಾಡಲಾದ ಪೋಂಚೋ ಚಳಿಗಾಲಕ್ಕೆ ಹೇಳಿಮಾಡಿಸಿದ ಉಡುಗೆಯಿದು. ಸ್ಟೆಟರ್‌ನಂತೆ ಕಾರ್ಯನಿರ್ವಹಿಸುವುದು ಮಾತ್ರವಲ್ಲ, ವಿವಿಧ ಬಣ್ಣಗಳಲ್ಲಿ ಬರುವ ಕಾರಣ ನೋಡಲೂ ಆಕರ್ಷಕವಾಗಿರುತ್ತದೆ. ಕೆಲವೊಂದು ಸ್ವೆಟರ್‌ನಲ್ಲಿ ಇರುವಂತೆ, ಪೋಂಚೋದಲ್ಲೂ ಟರ್ಟಲ್‌ನೆಕ್ ಪೋಂಚೋಗಳು ಸಿಗುತ್ತವೆ.
ಸಿಲ್ಕ್ ಪೋಂಚೋ
ಹೆಚ್ಚಿನವರು ಇದನ್ನು ಇಷ್ಟಪಡುವುದು ಲೈಟ್‌ವೈಟ್ ಇರುವ ಕಾರಣಕ್ಕೆ. ಸಿಲ್ಕ್ ಡ್ರೆಸ್ ಆಗಿರುವ ಕಾರಣ, ಇದು ಅತ್ಯಂತ ಹಗುರವಾಗಿರುತ್ತದೆ. ಬೇಸಗೆಕಾಲಕ್ಕೆ ಬೆಸ್ಟ್ . ಬೇರೆ ಉಡುಗೆಗಳ ಮೇಲೂ ಇದನ್ನು ಧರಿಸಬಹುದು ಅಥವಾ ಇದನ್ನೇ ಉಡುಗೆಯಾಗಿಯೂ ಧರಿಸಬಹುದು.
ಎಂಬ್ರಾಯಿಡರಿ ಪೋಂಚೋ
ಸಾಂಪ್ರದಾಯಿಕ ಪೋಂಚೋವನ್ನು ಬಯಸು ವವರು ಇದನ್ನು ಆಯ್ದುಕೊಳ್ಳುವುದು ಸೂಕ್ತ. ಬೇರೆ ಬೇರೆ ಪ್ಯಾಟರ್ನ್ ಹಾಗೂ ಬಣ್ಣಗಳಲ್ಲಿ ಎಂಬ್ರಾಯಿಡರಿ ವಿನ್ಯಾಸ ಮಾಡಿರಲಾಗುತ್ತದೆ. ಎಲ್ಲರನ್ನೂ ಬೇಗನೆ ಸೆಳೆಯುವ ಪೋಂಚೋವಿದು.
ಹುಡೆಡ್ ಪೋಂಚೋ
ಹುಡೆಡ್ ಟೀಶರ್ಟ್, ಸ್ವೆಟರ್ ಮಾದರಿಯಲ್ಲೇ ಹುಡೆಡ್ ಪೋಂಚೋ ಕೂಡ ಲಭ್ಯವಿದೆ. ಪೋಂಚೋ ದ ಮೇಲ್ಭಾಗದಲ್ಲಿ ಟೋಪಿಯಿದ್ದು, ಚಳಿಯಲ್ಲಿ ಈ ಹುಡೆಡ್ ಪೋಂಚೋ ಹಾಕಿಕೊಂಡರೆ ಫ್ಯಾಷನೆಬಲ್ ಆಗಿಯೂ ಕಾಣುತ್ತೀರಿ.
ಹೇಗೆಲ್ಲಾ ಧರಿಸಬಹುದು…
.ಮಾಮೂಲಿಯಾಗಿ ಧರಿಸುವ ಉಡುಗೆಯ ಮೇಲೂ ಪೋಂಚೋವನ್ನು ಹಾಕಿಕೊಳ್ಳಬಹುದು. ಸಿಂಪಲ್ ಆಗಿರುವ ಡ್ರೆಸ್ ತೊಟ್ಟು ಮೇಲೊಂದು ನೇಯ್ಗೆಯ ಪೋಂಚೋ ಧರಿಸಿದರೆ ಟ್ರೆಂಡಿಯಾಗಿ ಕಾಣುತ್ತದೆ.
.ಡೆನಿಮ್‌ನೊಂದಿಗೆ ಧರಿಸಿದರೂ ಆಕರ್ಷಕವಾಗಿ ಕಾಣುತ್ತದೆ.
.ಲೆಗ್ಗಿಂಗ್ಸ್ ಜೊತೆಗೆ ಉದ್ದನೆಯ ಪೋಂಚೋ ಧರಿಸುವುದೂ ಈಗ ಹೊಸ ಟ್ರೆಂಡ್, ಇದಕ್ಕೆ ಮೊಣಕಾಲಿನವರೆಗೆ ಬರುವ ಬೂಟ್ ಧರಿಸಿದರೆ ಇನ್ನೂ ಚೆಂದ.
.ಕ್ಯಾಶುವಲ್ ಲುಕ್ ಬೇಕೆಂದರೆ, ಹುಡೆಡ್ ಪೋಂಚೋ ಧರಿಸಬಹುದು.
.ಉದ್ದನೆಯ ಪೋಂಚೋ ಧರಿಸಿಕೊಂಡು, ಸೊಂಟಕ್ಕೊಂದು ಬೆಲ್ಟ್ ಹಾಕಿಕೊಂಡರೆ ಫ್ಯಾಶನೇಬಲ್ ಲುಕ್ ಗ್ಯಾರಂಟಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.