ಡುಮ್ಮಿಯಾಗಿದ್ದವಳು ಸ್ಲಿಮ್ ಆಗುವ ಪರಿಣತಿ
Team Udayavani, Oct 27, 2017, 6:35 AM IST
ಪರಿಣಿತಿ ಚೋಪ್ರಾ ಈಗ ಸ್ಲಿಮ್ ಆ್ಯಂಡ್ ಟ್ರಿಮ್. ಕೆಲದಿನಗಳ ಹಿಂದೆಯಷ್ಟೇ 29ನೆಯ ಹುಟ್ಟುಹಬ್ಬ ಆಚರಿಸಿಕೊಂಡಿರುವ ಪಾರಿ ಪಾಲಿಗೆ ಈಗ ಅಚ್ಛೇ ದಿನಗಳು ಬಂದಿವೆ. ಅಂದ ಹಾಗೆ ಪಾರಿ ಬಾಲಿವುಡ್‌ನವರು ಆಕೆಗೆ ಇಟ್ಟಿರುವ ಮುದ್ದಿನ ಅಡ್ಡ ಹೆಸರು. ಆಕೆ ನಟಿಸಿದ ಗೋಲ್‌ಮಾಲ್ ಸರಣಿಯ ನಾಲ್ಕನೇ ಚಿತ್ರ ಸೂಪರ್‌ಹಿಟ್ ಆಗುವ ಲಕ್ಷಣ ಕಾಣಿಸಿದೆ. ಹಲವು ಖ್ಯಾತ ನಿರ್ದೇಶಕರು ಪಾರಿಯ ಜತೆಗೆ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಬಾಲಿವುಡ್‌ನ ತುಂಟ ಹುಡುಗಿ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ಪಾರಿ ಪ್ರತಿಭಾವಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದೃಷ್ಟ ತುಸು ಕೈಕೊಟ್ಟ ಕಾರಣ ಅವಳ ವೃತ್ತಿ ಬದುಕು ಏಳುಬೀಳುಗಳನ್ನು ಕಾಣುತ್ತಿದೆ.
2011ರಲ್ಲಿ ಲೇಡೀಸ್ ವರ್ಸಸ್ ರಿಕಿ ಬಹ್ಲ ಮೂಲಕ ಬಾಲಿವುಡ್‌ಗೆ ಬಂದ ಪಾರಿ ಇಶಕ್‌ಝಾದೆ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನೂ ಗಳಿಸಿದ್ದಾಳೆ. ತುಸು ಡುಮ್ಮಿ ಎನ್ನುವುದು ಅವಳ ಮೇಲಿದ್ದ ಆರೋಪ. ಆರಂಭದಲ್ಲಿ ಆಕೆ ವಿದ್ಯಾಬಾಲನ್, ಭೂಮಿ ಪೆಡೆ°àಕರ್ ಅವರಂಥ ಡುಮ್ಮಿ ನಾಯಕಿಯರ ಸಾಲಿನಲ್ಲಿ ಗುರುತಿಸಿಕೊಂಡಿದ್ದಳು. ಹೀಗಾಗಿ ಚಾಕೊಲೇಟ್ ಹೀರೊಗಳು ಅವಳ ಜತೆಗೆ ನಟಿಸಲು ಹಿಂದೇಟು ಹಾಕುತ್ತಿದ್ದರು. ಇದರಿಂದಾಗಿ ಸುಮಾರು ಒಂದು ವರ್ಷ ಪಾರಿಗೆ ಅವಕಾಶವೇ ಸಿಕ್ಕಿರಲಿಲ್ಲ. ಹಾಗೆಂದು ಆಕೆ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಬಿಡುವಿನ ವೇಳೆಯನ್ನು ಕೊಬ್ಬು ಕರಗಿಸಲು ಉಪಯೋಗಿಸಿದಳು. ಅದರ ಫಲವೀಗ ಕಾಣುತ್ತಿದೆ.
ಗೋಲ್‌ಮಾಲ್‌ನಲ್ಲಿ ಪಾರಿಯನ್ನು ಕಂಡವರು ಅವಳು ಹಿಂದಿನ ಪಾರಿ ಅಲ್ಲವೇ ಅಲ್ಲ ಎಂದು ಮೂಗಿನಮೇಲೆ ಬೆರಳಿಡುತ್ತಿದ್ದಾರೆ. ಗೋಲ್‌ಮಾಲ್ ಬೆನ್ನಿಗೆ ಸಂದೀಪ್ ಔರ್ ಪಿಂಕಿ ಫರಾರ್ ಎಂಬ ಚಿತ್ರಕ್ಕೆ ಪಾರಿ ಆಯ್ಕೆಯಾಗಿದ್ದಾಳೆ. ಇದರ ಜತೆಗೆ ಕೇಸರಿಯಲ್ಲಿ ಅಕ್ಷಯ್ ಕುಮಾರ್‌ಗೆ ನಾಯಕಿಯಾಗಲಿದ್ದಾಳೆ. ಇವೆರಡು ಬಿಗ್ ಬಜೆಟ್ ಚಿತ್ರಗಳು. ಇದಲ್ಲದೆ ಇನ್ನೂ ನಾಲ್ಕೈದು ಚಿತ್ರಗಳು ಕೈಯಲ್ಲಿವೆಯಂತೆ. ಪ್ರಿಯಾಂಕಾ ಚೋಪ್ರಾ ಸೋದರ ಸಂಬಂಧಿ ಎಂಬ ನೆರಳಿನಿಂದ ಹೊರಬರಲು ಪಾರಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾಳೆ. ಆರಂಭದ ದಿನಗಳಲ್ಲಿ ಇಂಥ ಒಂದು ಐಡೆಂಟಿಟಿ ಖುಷಿ ಕೊಡುತ್ತಿತ್ತು. ಆದರೆ ಈಗ ನನ್ನ ಕಾಲ ಮೇಲೆ ನಿಂತಿದ್ದೇನೆ. ಹೀಗಾಗಿ ಪದೇ ಪದೇ ಅಕ್ಕನ ಮೂಲಕ ಗುರುತಿಸುವ ಅಗತ್ಯವಿಲ್ಲ ಎನ್ನುವುದು ಪಾರಿಯ ಸ್ಪಷ್ಟ ನಿಲುವು.