ಪಟಾಲಿ ಪಾಯೊಸ್, ಪೇಪೆ ತೊರ್ಕಾರಿ, ಮಿಶ್ಚಿ ಚೊಟ್ನಿ
Team Udayavani, Dec 21, 2018, 6:00 AM IST
ಕಳೆದ ವರ್ಷ ಇದೇ ಸಮಯದಲ್ಲಿ ಅಂದರೆ ಡಿಸೆಂಬರ್ ತಿಂಗಳಲ್ಲಿ ನಾನು ಮಂಗಳೂರಿನಿಂದ ರೈಲಿನಲ್ಲಿ ಕೊಲ್ಕತಾದಲ್ಲಿರುವ ಸೋದರಮಾವನ ಮನೆಗೆ ಹೋಗಿದ್ದೆ. ನಮ್ಮ ರಾಜ್ಯ ದಾಟಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ ಕ್ರಮಿಸಿ ಕೊನೆಗೆ ಪಶ್ಚಿಮ ಬಂಗಾಳದ ಕೊಲ್ಕೊತಾ ಸೇರುವ ಅದೊಂದು ಎರಡು ದಿನದ ಮರೆಯಲಾಗದ ಪಯಣ. ಸ್ವಾಮಿ ವಿವೇಕಾನಂದ, ಮಾತೆ ಶಾರದಾ ದೇವಿ, ರಾಮಕೃಷ್ಣ ಪರಮಹಂಸ, ರವೀಂದ್ರನಾಥ ಠಾಗೋರ್ ಮುಂತಾದ ಮಹಾತ್ಮರು ಬಾಳಿ ಬದುಕಿದ ಪುಣ್ಯನೆಲದಲ್ಲಿ ಒಂದು ವಾರ ಕಾಲ ನಾನಿದ್ದೆ ಎಂಬುದು ನನಗೆ ಪುಳಕ ತರುವ ವಿಷಯ.
ಕೊಲ್ಕತಾ ಭಾರತದ ಅತ್ಯಂತ ಪುರಾತನ ಹಾಗೂ ಬೃಹತ್ ಗಾತ್ರದ ನಗರ. ಇದು ಬ್ರಿಟಿಷರಿಂದ ಅಭಿವೃದ್ಧಿಗೊಂಡ ನಗರ. ಇಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳು ಹಲವು ಇವೆ. ಶಾರದಾ ಪೀಠ, ಬೇಲೂರು ಮಠ, ದಕ್ಷಿಣೇಶ್ವರ, ವಿಕ್ಟೋರಿಯಾ ಮೆಮೋರಿಯಲ್ ಹಾಲ್, ಹೌರಾ ಬ್ರಿಡ್ಜ್, ಬಟಾನಿಕಲ್ ಗಾರ್ಡನ್, ಬಿರ್ಲಾ ತಾರಾಲಯ, ವಿಲಿಯಂ ಕೋಟೆ, ಭಾರತೀಯ ಮ್ಯೂಸಿಯಂ, ಶಾಂತಿನಿಕೇತನ ಇವುಗಳಲ್ಲಿ ಪ್ರಮುಖವಾದವುಗಳು.
ಕೊಲ್ಕೊತಾ ಮಹಾನಗರವಾದರೂ ಆಧುನಿಕತೆಗೆ ಅಷ್ಟಾಗಿ ಒಡ್ಡಿಕೊಂಡಿಲ್ಲ. ಅಲ್ಲಿ ಮಾನವನೇ ಕಾಲಿನಲ್ಲಿ ತುಳಿದು ನಡೆಸುವ ಸೈಕಲ್‌ರಿûಾಗಳು, ರಸ್ತೆ ಮೇಲೆಯೇ ಚಲಿಸುವ ಟ್ರಾಮ್ ಎಂಬ ಒಂದು ಬೋಗಿ ಮಾತ್ರ ಇರುವ ರೈಲು ಗಮನ ಸೆಳೆಯುತ್ತದೆ. ಹೈಸ್ಪೀಡ್ ವಾಹನಗಳ ಜೊತೆ ಬಾಳುತ್ತಿರುವ ನಮಗೆ ಈ ಪಾರಂಪರಿಕ ನಿಧಾನ ಸಾರಿಗೆ ಅಲ್ಲಿ ಇನ್ನೂ ಉಳಿದುಕೊಂಡಿರುವುದು ಮತ್ತು ಜನಪ್ರಿಯವಾಗಿರುವುದು ಅಚ್ಚರಿ ಹುಟ್ಟಿಸುತ್ತದೆ. ನಗರ ದಾಟಿದರೆ ರಸ್ತೆಯ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಭತ್ತದ ಗದ್ದೆಗಳನ್ನು ಕಾಣಬಹುದು. ಈ ಗದ್ದೆಗಳಲ್ಲೂ ಅಷ್ಟೆ , ಆಧುನಿಕ ಯಂತ್ರಗಳ ಪ್ರವೇಶವಾಗಿಲ್ಲ. ನನ್ನೂರಿನ ಹಳ್ಳಿಯಲ್ಲಿ ಹೆಂಗಸರು ಕತ್ತಿ ಹಿಡಿದು ಪೈರು ಕೊಯ್ಯುವಂತೆ ಅಲ್ಲೂ ಕೊಯ್ಯುವುದನ್ನು ಕಂಡೆ. ನಾಟಿ ಎತ್ತುಗಳಿಂದ ಗದ್ದೆ ಹೂಡುವುದನ್ನು ಕಂಡೆ. ಹಳ್ಳಿಯ ಹಾಲನ್ನು ಅಥವಾ ತೊಟ್ಟೆ ಹಾಲನ್ನು ಇಲ್ಲಿಯ ಜನರು ನಂಬಬೇಕೆಂದು ಇಲ್ಲ. ಪೇಟೆಯಲ್ಲೇ 20-30 ಹಸು ಸಾಕಿ ಹಾಲು ಮಾರುವ ಗೌಳಿಗರು ಹಲವರಿದ್ದಾರೆ! ಗಗನಚುಂಬಿ ಕಟ್ಟಡಗಳ ಮೇಲೆ ಬೀಡು ಬಿಟ್ಟಿರುವ ಅಸಂಖ್ಯಾತ ಪಾರಿವಾಳಗಳನ್ನು ನೋಡುವಾಗ ಹಕ್ಕಿಗಳಿಗೂ ಹಳ್ಳಿ ಬೇಡ, ನಗರವೇ ಬೇಕು ಅಂದುಕೊಂಡೆ !
ಸೈಕಲ್‌ರಿûಾದಲ್ಲಿ ಕೂತು ಅತ್ತೆ ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋಗುವಾಗ ನಾನೂ ಒಟ್ಟಿಗೆ ಹೋಗುತ್ತಿದ್ದೆ. ಹಾಗೆ ಒಮ್ಮೆ ಹೋದಾಗ ಒಂದು ಟೀ ಕುಡಿಯುವ ಮನಸ್ಸಾಯಿತು. ಅಲ್ಲೇ ಇದ್ದ ಹೊಟೇಲಿಗೆ ನುಗ್ಗಿದೆ. ಅವರು ಟೀ ಕೊಟ್ಟದ್ದು ಇಲ್ಲಿನಂತೆ ಕಪ್‌ನಲ್ಲಿ ಅಲ್ಲ. ಪುಟ್ಟ ಕುಡಿಕೆಯಲ್ಲಿ. ಕುಡಿಕೆಗೆ ತುಟಿ ಇಟ್ಟು ಆ ಹೊಗೆಯಾಡುವ ಬಿಸಿಬಿಸಿ ಟೀಯನ್ನು ಸ್ವಲ್ಪ$ ಸ್ವಲ್ಪವೇ ಹೀರುತ್ತಿದ್ದರೆ ಏನು ಆನಂದ ! ಕುಡಿದ ಮೇಲೆ ಕುಡಿಕೆಯನ್ನು ಬಿಸಾಡಲು ಮನಸ್ಸಾಗಲಿಲ್ಲ. ತೋರಿಸಲು ಊರಿಗೆ ತರೋಣ ಎಂದು ತೊಳೆಯಲು ಹೊರಟೆ. ಅದನ್ನು ನೋಡಿದ ಹೊಟೇಲಿನವರು ನನಗೆ ಹೊಸ ಕುಡಿಕೆ ಕೊಟ್ಟು ಕುಡಿದದ್ದನ್ನು ಬಿಸಾಕಲು ಹೇಳಿದರು. ಪ್ರತಿ ಊರಿನಲ್ಲೂ ಪ್ಲಾಸ್ಟಿಕ್ ಲೋಟದ ಬದಲು ಮಣ್ಣಿನ ಲೋಟ ಇದ್ದರೆ ಎಷ್ಟು ಚೆನ್ನ! ಪರಿಸರದ ಜೊತೆಗೆ ಕುಂಬಾರಿಕೆ ವೃತ್ತಿಯೂ ಉಳಿದೀತು ಅಲ್ಲವೆ? ಅಲ್ಲಿ ಬೀದಿ ವ್ಯಾಪಾರವೇ ಹೆಚ್ಚು. ನಿತ್ಯ ಸಂತೆ ಎಂದರೂ ತಪ್ಪಾಗಲಿಕ್ಕಿಲ್ಲ. ಬೀದಿಯ ಎರಡೂ ಬದಿಯಲ್ಲಿ ಉದ್ದಕ್ಕೂ ರೈತರು, ವ್ಯಾಪಾರಿಗಳು ತಕ್ಕಡಿ ಇಟ್ಟು ತರಕಾರಿ, ಹಣ್ಣು, ಮೀನು ರಾಶಿ ಹಾಕಿ ವ್ಯಾಪಾರ ಮಾಡುತ್ತಾರೆ. ಬೀದಿಯಲ್ಲಿ ಅಲ್ಲದೆ ಅಲ್ಲಿ ಎಲ್ಲೂ ಅಂಗಡಿಯಲ್ಲಿ ತರಕಾರಿ ಇಟ್ಟು ಮಾರುವುದು ಕಾಣಲಿಲ್ಲ. ಬೆಳಿಗ್ಗೆ 5 ಗಂಟೆಗೇ ಆರಂಭವಾಗುವ ಬೀದಿ ಬದಿಯ ಮಾರಾಟ ರಾತ್ರಿ 11 ಗಂಟೆಯವರೆಗೂ ಇರುತ್ತದೆ. ಬೆಳಿಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಒಂದು ಪಾರ್ಟಿ ಇದ್ದರೆ ಮಧ್ಯಾಹ್ನದಿಂದ ನಡುರಾತ್ರಿವರೆಗೆ ಇನ್ನೊಂದು ಪಾರ್ಟಿಯವರು ಅದೇ ಜಾಗದಲ್ಲಿ ಕೂತು ವ್ಯಾಪಾರ ನಡೆಸುತ್ತಾರೆ. ಇದು ಇಲ್ಲಿಯ ವಿಶೇಷ. ಈ ಕಂಪ್ಯೂಟರ್ ಯುಗದಲ್ಲೂ ಸಾಮಾನುಗಳನ್ನು ತಕ್ಕಡಿಯಲ್ಲಿ ತೂಗಿ ಮಾರಾಟ ಮಾಡುತ್ತಾರೆ ಎಂದರೆ ನೀವು ನಂಬಲಿಕ್ಕಿಲ್ಲ. ಅಲ್ಲಿ ನಮ್ಮ ಊರಲ್ಲಿ ಇರುವಂತೆ ಮೀನಿಗೆಂದು ಪ್ರತ್ಯೇಕ ಮಾರುಕಟ್ಟೆ ಇಲ್ಲ. ತರಕಾರಿ ಹಾಗೂ ಮೀನು ಹತ್ತಿರ ಹತ್ತಿರವೇ ಇರುತ್ತದೆ. ರಸ್ತೆ ಬದಿಯಲ್ಲಿ ಬೃಹತ್‌ಗಾತ್ರದ ಮೆಟ್ಟುಕತ್ತಿಗಳ ಮೇಲೆ ಕುಳಿತು ವ್ಯಾಪಾರಿಗಳು ಭಾರೀ ಗಾತ್ರದ ಮೀನು ಕತ್ತರಿಸಿ ಮಾರಾಟ ಮಾಡುವುದನ್ನು ಎಂದೂ ಮೀನು ತಿನ್ನದ ನಾನು ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದೆ. ಅಲ್ಲಿ ಎಲ್ಲಾ ತರಕಾರಿ ರಾಶಿಯಲ್ಲೂ ಪಪ್ಪಾಯಿ ಇದ್ದೇ ಇರುತ್ತಿತ್ತು. ಚೆನ್ನಾಗಿ ಬಲಿಯದ ಈ ಪಪ್ಪಾಯಿಯನ್ನು ಹಣ್ಣು ಮಾಡಿ ತಿನ್ನಲು ಸಾಧ್ಯ ಇಲ್ಲ. ಮತ್ತೆ ಏಕೆ ಇಟ್ಟಿದ್ದಾರೆ? ಎಂಬ ಕುತೂಹಲ ನನಗೆ. ವ್ಯಾಪಾರಿಯಲ್ಲಿ ಕೇಳಿದೆ. ಅದಕ್ಕೆ ಅವನು, “”ಮೀನಿನಂತೆ ಪಪ್ಪಾಯಿಯೂ ಬಂಗಾಲಿಗಳ ಪ್ರಿಯ ಆಹಾರ. ಇದರಿಂದ ತೊರ್ಕಾರಿ (ಪಲ್ಯ) ಮಾಡುತ್ತಾರೆ. ಬಂಗಾಲಿಗಳಿಗೆ ಇದು ಬಹಳ ಅಚ್ಚುಮೆಚ್ಚು. ಮಿಶಿr ಚೊಟ್ನಿ ಎಂಬ ಸಿಹಿಯನ್ನೂ ತಯಾರಿಸುತ್ತಾರೆ. ಈ ಸಿಹಿ ಬಂಗಾಲಿಗಳ ಮದುವೆ, ಪೂಜೆ, ಹಬ್ಬ ಇತ್ಯಾದಿ ಶುಭ ಸಮಾರಂಭಗಳಲ್ಲಿ ಇರಲೇಬೇಕು” ಎಂದ.
ಪಪ್ಪಾಯಿಗೆ ಬಂಗಾಲಿಯಲ್ಲಿ ಪೇಪೆ ಎಂದು ಕರೆಯುತ್ತಾರೆ.ಅತ್ತೆ ನನಗೆ ಅದರಿಂದ ಹೇಗೆ ತೊರ್ಕಾರಿ, ಚೊಟ್ನಿ ತಯಾರಿಸುತ್ತಾರೆ ಎಂದು ವಿವರಿಸಿದರು. ಇದು ಅನ್ನ, ದೋಸೆ, ಚಪಾತಿ, ಪೂರಿ ಜೊತೆ ತಿನ್ನಲು ಬಹಳ ಚೆನ್ನಾಗಿರುತ್ತದೆ ಎಂದರು. ನನ್ನ ಮನೆಯಂಗಳದಲ್ಲಿ ಪಪ್ಪಾಯಿ ತಿನ್ನುವವರಿಲ್ಲದೆ ಮರದಲ್ಲೆ ಹಣ್ಣಾಗಿ ಕೊಳೆತು ಹೋಗುತ್ತಿರುವುದು ನೆನಪಾಯಿತು. ಅಂದ ಹಾಗೆ ಬಂಗಾಲಿಗಳು ಖಾದ್ಯ ತೈಲವಾಗಿ ಸಾಸಿವೆ ಎಣ್ಣೆಯನ್ನು ಬಳಸುತ್ತಾರೆ.
ಅದೇ ಬೀದಿಯಲ್ಲಿ ನಾನು ಗಾಡಿಯಲ್ಲಿ ಇಡ್ಲಿಯಾಕಾರದ ಚಿನ್ನದ ಬಣ್ಣದ ಬೆಲ್ಲ ಮಾರುವುದನ್ನೂ ನೋಡಿದೆ. ಅಂಗಡಿಗಳಲ್ಲೂ ಇತ್ತು. ಅಲ್ಲಿ ಅದಕ್ಕೆ “ಪಟಾಲಿ ಗೂಡ್’ ಎಂದು ಹೇಳುತ್ತಾರೆ. ಅದು ಒಂದು ಜಾತಿಯ ಈಚಲು ಮರದಿಂದ ಕಳ್ಳು ತೆಗೆದು ಕುದಿಸಿ ಗೆರಟೆಯಲ್ಲಿ ಹಾಕಿ ಸ್ಥಳೀಯವಾಗಿ ತಯಾರಿಸುವ ಬಹಳ ಸಿಹಿಯಾದ ಮತ್ತು ಸುವಾಸನಾಯುಕ್ತ ಬೆಲ್ಲ. ನವೆಂಬರ್‌ನಿಂದ ಮಾರ್ಚ್ ತಿಂಗಳ ತನಕ ಮಾತ್ರ ಸಿಗುತ್ತದೆ. ಆರಂಭದಲ್ಲಿ 150-200 ರೂ. ಕೇಜಿಗೆ ಇದ್ದರೆ ನಂತರ 60-70 ರೂಪಾಯಿಗೆ ಇಳಿಯುತ್ತದೆ. ಬಂಗಾಲಿಗಳು ಈ ಬೆಲ್ಲ ಮಾರುಕಟ್ಟೆಗೆ ಬರುವುದನ್ನೇ ಕಾಯುತ್ತಿರುತ್ತಾರೆ. ಇದರಿಂದ ತಯಾರಿಸುವ ಪಾಯಸಕ್ಕಿರುವ ರುಚಿ ಉಳಿದ ಬೆಲ್ಲದಿಂದ ತಯಾರಿಸುವುದಕ್ಕೆ ಇರುವುದಿಲ್ಲ. ಈ ಬೆಲ್ಲವನ್ನು ಪಾಯಸ ಮಾಡಿಯೇ ತಿನ್ನಬೇಕೆಂದಿಲ್ಲ. ಹಾಗೆಯೇ ತಿನ್ನಲೂ ಚಾಕೊಲೇಟ್‌ಗಿಂತ ಸ್ವಾದಿಷ್ಟ. ಒಂದು ತುಂಡು ಮುರಿದು ಬಾಯಿಗೆ ಹಾಕಿದರೆ ನೀರು ನೀರು. ಬಲ್ಲವರೇ ಬಲ್ಲರು ಬೆಲ್ಲದ ಸವಿಯ ಎಂಬಂತೆ ಈ ಬೆಲ್ಲದ ರುಚಿಯನ್ನು ತಿಂದೇ ಅನುಭವಿಸಬೇಕು. ಅಕ್ಷರಗಳಲ್ಲಿ ಹೇಳುವುದು ಸಾಧ್ಯವಿಲ್ಲ. ಹಸಿರು ಬಣ್ಣ, ರಸವಿರದ ಬೀಜದಿಂದ ಕೂಡಿದ ಕಾಯಿಯಂತೆ ಕಾಣುವ ಹೃದಯಾಕಾರದ ವಿಶೇಷ ಹಣ್ಣು ಪಾನಿಫಲ್, ಅಚ್ಚ ಬಿಳಿ ಬಣ್ಣದ ಗೆಣಸನ್ನು ಹೋಲುವ ಒಂದು ಜಾತಿಯ ಸಿಹಿ ಗಡ್ಡೆ, ಸೌತೆಕಾಯಿಯಂತೆ ಕಾಣುವ ಅದಕ್ಕಿಂತ ತುಂಬ ಚಿಕ್ಕದಾದ ಒಂದು ಬಗೆಯ ತರಕಾರಿ ಅಲ್ಲಿ ಮಾತ್ರ ನೋಡಿದ್ದು ಹಾಗೂ ತಿಂದದ್ದು. ಬೇಲೂರು ಮಠದ ಮುಂಭಾಗದಲ್ಲಿರುವ ಗಂಗಾ ನದಿಯನ್ನು ದೋಣಿಯಲ್ಲಿ ದಾಟಿ ಕಾಳಿ ಮಂದಿರ ತಲುಪಿದ್ದು ಸುಂದರ ಅನುಭವ. ಅಲ್ಲಿಯ ದೊಡ್ಡ ದೊಡ್ಡ ಮಾಲ್, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ, ಜಾಗತಿಕ ಮನ್ನಣೆ ಗಳಿಸಿದ ವಿಶೇಷ ತಿನಿಸು ರಸಗುಲ್ಲಕ್ಕಿಂತಲೂ ಪ್ರಕೃತಿಗೆ ಸಮೀಪವಾಗಿರುವ ಇಂಥ ಸಂಗತಿಗಳೇ ಹೆಚ್ಚು ಇಷ್ಟವಾಯಿತು.
ದಿನಾ ಅದೇ ಅಡುಗೆ ಮನೆ, ಅದೇ ತೋಟ, ಅದೇ ಕೂಲಿಕಾರರು… ಹೀಗೆ ದೈನಂದಿನ ಕೆಲಸದ ಏಕತಾನತೆಯಿಂದ ನನ್ನನ್ನು ಹೊರಬರುವಂತೆ ಮಾಡುವುದು ಪ್ರವಾಸ. ಪ್ರವಾಸದಿಂದ ಕಲಿಯುವುದು ಸಾಕಷ್ಟಿದೆ ಎಂಬುದು ನಾನು ಅನುಭವದಿಂದ ಕಂಡುಕೊಂಡ ಸತ್ಯ.
– ಸಹನಾ ಕಾಂತಬೈಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.