ಮಾತಿಗೆ ಸೊಪ್ಪು ಹಾಕಬೇಡಿ ಪದಾರ್ಥಕ್ಕೆ ಹಾಕಿ!
Team Udayavani, Oct 11, 2019, 12:30 PM IST
ದಿನನಿತ್ಯ ಬಳಸುವ ಸೊಪ್ಪಿಗೂ ಹೆಣ್ಣಿಗೂ ಅವಿನಾಭಾವ ಸಂಬಂಧವಿದೆ. ಪ್ರಕೃತಿದತ್ತವಾಗಿರುವ ತಾಯ್ತನದ ಕಾರಣದಿಂದ ಕಾಪಿಡುವ, ಬೆಳೆಸುವ, ಪಾಲಿಸುವ ಗುಣಗಳು ಅವಳಲ್ಲಿ ಸಹಜವಾಗಿದೆ. ಬೀಜಗಳನ್ನು, ಜೀವನಕ್ರಮಗಳನ್ನು ಇಂದಿಗೂ ಕಾಪಾಡಿ ಕೊಂಡಿರುವವರಲ್ಲಿ ಮಹಿಳೆಯರೇ ಹೆಚ್ಚು.
ಒಮ್ಮೆ ನಮ್ಮ ಊರಿನ ಗೌರಿ ಆಡುಗಳನ್ನು ಮೇವಿಗಾಗಿ ಹಿಡಿದುಕೊಂಡು ಬರುತ್ತಿದ್ದಳು. “ಆಡು ಮುಟ್ಟದ ಸೊಪ್ಪಿಲ್ಲ ಅಂತಾರಲ್ಲ ಗೌರಿ, ಬಿಡು ನೋಡೋಣ ಯಾವ ಯಾವ ಸೊಪ್ಪುಗಳನ್ನು ತಿನ್ನುತ್ತವೆ’ ಎಂದೆ ಉತ್ಸಾಹದಲ್ಲಿ. ಆಡು ತಿನ್ನುತ್ತ ಹೋದ ಸೊಪ್ಪುಗಳ ಪಟ್ಟಿಯನ್ನು ಮಾಡುತ್ತ ಹೋದೆವು. ನಮಗೆ ಗೊತ್ತಿರುವ ಸೊಪ್ಪುಗಳಿಗಿಂತ ಗೊತ್ತಿರದ ಸೊಪ್ಪುಗಳೇ ಹೆಚ್ಚಿದ್ದವು. ಇವತ್ತೂಂದು ಪ್ರಯೋಗ ಆಗೇ ಬಿಡಲಿ ಎಂದು ಆಡುಗಳು ಯಾವ ಯಾವ ಸೊಪ್ಪುಗಳನ್ನು ಜಾಸ್ತಿ ತಿನ್ನುತ್ತದೋ ಅದು ಹೆಚ್ಚು ರುಚಿ ಇರಬಹುದು ಎಂದು ಭಾವಿಸಿ, ಅವುಗಳನ್ನು ಕಿತ್ತು ತಂದು ಅಡುಗೆ ಮಾಡಿದೆವು! ಅವತ್ತು ನಮ್ಮ ಅಡುಗೆ ಬ್ರಹ್ಮಾಂಡ.
ನಾವು ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕು, ಹುತ್ರಿದುರ್ಗ ಹೋಬಳಿ, ಹೊಡಾಘಟ್ಟ ದಾಖಲೆ, ಪುಟ್ಟಯ್ಯನಪಾಳ್ಯದಲ್ಲಿ ಕೃಷಿ ಮಾಡಲು ಆರಂಭಿಸುವಾಗ ಜೀವಾಮೃತಕ್ಕಾಗಿ “ಮಲೆನಾಡ ಗಿಡ್ಡ’ ತಳಿಯ ಹಸುವನ್ನೇ ತರುವಂತೆ- ಸುಭಾಶ್ ಪಾಳೇಕರ್ ಅವರ “ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ’ಯ ಮೂಲಕ ಜಗತ್ತಿನೆಲ್ಲೆಡೆ ಹೆಸರಾದ- ಬನ್ನೂರು ಕೃಷ್ಣಪ್ಪ ಹೇಳಿದರು. ಮರುಮಾತಾಡದೆ ಸಾಗರದ ಬಳಿಯ ಮಂಚಾಲೆಯಿಂದ ಐದು ಹಸುಗಳನ್ನು ತಂದೆವು. ನಮ್ಮ ತೋಟದ ಕಳೆಯೆ ಬೇರೆಯಾಯಿತು. ನಾವು ಹಸುಗಳನ್ನು ಹೊರಗಡೆ ಬಿಡದೆ ಕಟ್ಟಿಹಾಕಿ ಹುಲ್ಲು ಹಾಕುತ್ತಿದ್ದೆವು. ನನ್ನ ತಂಗಿಯ ಮಾವನವರಾದ ರಾಮಮೂರ್ತಿ ಅವರು (ಕೃಷಿ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರು) ಹೇಳಿದರು “ಅವುಗಳ ಹಾಲು ಶ್ರೇಷ್ಠ ಎನ್ನುವುದು ಆ ಹಸುಗಳು ಕಾಡಲ್ಲಿ ಮೇದು ಬರುವ ಹಲವಾರು ಬಗೆಯ ಸೊಪ್ಪಿನಿಂದಾಗಿ. ನೀವು ಕಟ್ಟಿ ಮೇಯಿಸಿದರೆ ಆ ಹಾಲಿಗೆ ವಿಶೇಷತೆ ಹೇಗೆ ಬರಬೇಕು?’ ಎಂದು. ಅವುಗಳ ಸೆಗಣಿ ಮತ್ತು ಗಂಜಲ ಕೂಡ ವಿಶೇಷವೆಂದೇ ಹೇಳುತ್ತಾರೆ. ಕಾರಣ ಅವು ಹೆಚ್ಚು ಸೊಪ್ಪು-ಸದೆಗಳನ್ನು ತಿನ್ನುವ ಕಾರಣಕ್ಕೆ. ಮೇಕೆಯ ಹಾಲು ಕೂಡ ಅದು ಹೆಚ್ಚು ಸೊಪ್ಪು ತಿನ್ನುವ ಕಾರಣಕ್ಕೆ ಔಷಧಯುಕ್ತವಾಗಿರಲು ಸಾಕು.
ಜನ-ಜಾನುವಾರುಗಳಿಗೆ ಆಹಾರದಲ್ಲಿ ಬಹುವಾಗಿ ಬಳಕೆ ಆಗುತ್ತಿರುವ “ಸೊಪ್ಪು’ ಒಂದು ವಿಶೇಷವಾದ ಆಹಾರ. “ಉಪ್ಪು ಸೊಪ್ಪಿಲ್ಲದೆ ಊಟ ಉಂಟೆ?’ ಎನ್ನುವುದು ನಮ್ಮ ಹಿರಿಯರು ಹೇಳುತ್ತಿದ್ದ ಮಾತು. ಈಚೆಗೆ ತಮ್ಮ 112ನೆಯ ವಯಸ್ಸಿನಲ್ಲಿ ನಿಧನರಾದ ಸಿದ್ಧಗಂಗೆಯ ಸಿದ್ಧಪುರುಷ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು “ನಿಮ್ಮ ದೀರ್ಘಾಯುಷ್ಯದ ಗುಟ್ಟೇನು?’ ಎಂದು ಕೇಳಿದವರಿಗೆ “ದಿನವೂ ಬೆಳಿಗ್ಗೆ ಎದ್ದು ಬೇವಿನ ಸೊಪ್ಪು ತಿನ್ನುತ್ತೇನೆ. ಸೊಪ್ಪು ಸಿಗದಿದ್ದರೆ ತೊಗಟೆಯನ್ನು ನೀರಿನಲ್ಲಿ ನೆನೆಸಿ ತಿನ್ನುತ್ತೇನೆ’ ಎಂದಿದ್ದರು. ನಮ್ಮ ಅಜ್ಜಿ ದಿನನಿತ್ಯದ ಅಡುಗೆಯಲ್ಲಿ ಸೊಪ್ಪನ್ನು ಹೆಚ್ಚಾಗಿ ಬಳಸುತ್ತಿದ್ದುದರಿಂದ ಎಂಬತ್ತೆçದರ ವಯಸ್ಸಿನಲ್ಲೂ ಅವರ ತಲೆಯ ಕೂದಲು ಕಪ್ಪಗೆ ಇತ್ತು. ಎಂದೂ ಅನೀಮಿಯಾದಿಂದ ಬಳಲಲಿಲ್ಲ. ಕನ್ನಡಕ ಹತ್ತಿರಕ್ಕೂ ಬರಲಿಲ್ಲ. ಉಪವಾಸದ ಮಾರನೆಯ ದಿನ ಕಡ್ಡಾಯವಾಗಿ ಅಗಸೆ ಸೊಪ್ಪು ಮತ್ತದರ ಹೂವನ್ನು ತಿನ್ನುತ್ತಿದ್ದರು. ವಾರಕ್ಕೆ ಎರಡು ಬಾರಿ ನುಗ್ಗೆಸೊಪ್ಪು, ಉಳಿದ ದಿನ ಯಾವ ಸೊಪ್ಪಾದರೂ ಸರಿ ಪಲ್ಯವೋ, ತೊವ್ವೆಯೋ ಅಥವಾ ಹುಳಿಯ ರೂಪದಲ್ಲೋ ತೆಗೆದುಕೊಳ್ಳುತ್ತಿದ್ದರು. “ದಿನಾ ಸೊಪ್ಪು ತಿನ್ನಲು ನಾವೇನು ಆಡು- ಕುರಿಗಳೇ?’ ಎನ್ನುವ ನಮ್ಮ ಅಸಡ್ಡೆಯ ಮಾತುಗಳಿಗೆ- “ಎಲ್ಲ ರೋಗಗಳಿಗೂ ಮದ್ದು ಸೊಪ್ಪು ಕಣ್ರೀ’ ಎನ್ನುತ್ತಿದ್ದರು.
ಅತ್ಯಧಿಕ ನಾರಿನಾಂಶ ಮತ್ತು ಹಲವು ಖನಿಜಾಂಶವುಳ್ಳ ಬಹೂಪಯೋಗಿ ಸೊಪ್ಪಿನ ಬಳಕೆಗೆ ಬಹುದೊಡ್ಡ ಇತಿಹಾಸವೇ ಇದೆ. ಋಷಿ-ಮುನಿಗಳು ಕಾಡಲ್ಲಿ ಸಿಕ್ಕ ಸೊಪ್ಪುಗಳನ್ನೇ ತಿನ್ನುತ್ತಿದ್ದ ಉಲ್ಲೇಖವಿದೆ. ರಾಮಾಯಣ-ಮಹಾಭಾರತದ ಕಾಲದಿಂದಲೂ ನಮ್ಮಲ್ಲಿ ಸೊಪ್ಪಿನ ಬಳಕೆಯ ಕುರಿತಂತೆ ಕಥೆಗಳು ಇವೆ. ಸಂಜೀನಿ ಎಲೆಯನ್ನು ತರಲು ಹೋದ ಹನುಮ ಅದನ್ನು ಗುರುತಿಸಲಾಗದೆ ಬೆಟ್ಟವನ್ನೇ ಹೊತ್ತು ತಂದ ಕಥೆ ಎಲ್ಲರಿಗೆ ಗೊತ್ತಿದೆ. ಮಹಾಭಾರತದಲ್ಲಿ ಕಾಡಿನಲ್ಲಿದ್ದ ಕುಂತಿ ಬೆರಕೆ ಸೊಪ್ಪನ್ನು ಬಳಸುತ್ತಿದ್ದಳೆಂಬುದರ ಉಲ್ಲೇಖವಿದೆ. ಶಿವನಿಗೆ ಬಿಲ್ವಪತ್ರೆ ತುಂಬಾ ಪ್ರಿಯವಂತೆ. ಅವನ ಮಗ ಗಣೇಶ ಇಪ್ಪತ್ತೂಂದು ಪತ್ರೆಗಳಿಂದ ಪೂಜೆಗೊಳ್ಳುತ್ತಾನೆ. ಕೃಷ್ಣ ಮಲಗಿರುವುದು ಆಲದೆಲೆಯ ಮೇಲೆ. ಇವತ್ತೂ ಕೂಡ ಹಲವು ಕಾಯಿಲೆಗಳಿಗೆ ಸೊಪ್ಪಿನ ಔಷಧಿಗಳನ್ನೇ ಬಳಸಲಾಗುತ್ತಿದೆ. ಇವು ನಮ್ಮ ಸೊಪ್ಪು ಬದುಕಿನ ಬಹುಮುಖೀ ನೆಲೆಗಳು.
ಸೊಪ್ಪು ನಮ್ಮಲ್ಲಿ ಬಹುಮುಖ್ಯವಾಗಿ ಎರಡು ರೀತಿಯಲ್ಲಿ ಬಳಕೆಯಾಗುತ್ತಿತ್ತು. ಮೊದಲನೆಯದು ಆಹಾರವಾಗಿ. ಎರಡನೆಯದು ಔಷಧವಾಗಿ. ಆಹಾರವನ್ನು ಯಾವಾಗಲೂ ಔಷಧ ಎಂದೆ ಭಾವಿಸುತ್ತಿದ್ದ ನಮ್ಮ ಹಿರಿಯರು, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ವಿವಿಧ ಸೊಪ್ಪುಗಳನ್ನು ಬಳಸುತ್ತಿದ್ದರು. ತಕ್ಷಣಕ್ಕೆ ಸಿಗುವಂತೆ ನೋಡಿಕೊಳ್ಳುವ, ಕಾಪಿಟ್ಟುಕೊಳ್ಳುವ ಅನೇಕ ಮಾರ್ಗಗಳನ್ನು ಕಂಡುಕೊಂಡಿದ್ದರು. ಮನೆಯ ಮುಂದೆ ತುಳಸಿ, ಮನೆಯ ಹಿಂದಿನ ಮೂಲೆಯಲ್ಲಿ ನುಗ್ಗೆ. ಸೊಪ್ಪಿನ ಮಡಿ, ಬೇಲಿಗೆ ಹಬ್ಬಿಸಿದ ಬಸಳೆ, ಹತ್ತಿರದಲ್ಲೇ ಇದ್ದ ಕರಿಬೇವಿನ ಗಿಡ. ಬಟ್ಟೆ ಒಗೆಯುವ ಕಲ್ಲಿನ ಹತ್ತಿರ ಪುದಿನ, ಮಲ್ಲಿಗೆ ಬಳ್ಳಿಯ ಪಕ್ಕದಲ್ಲೇ ಬೆಳೆಯುತ್ತಿದ್ದ ನಾಗದಾಳಿ… ಹೀಗೆ ಹಲವು ಗಿಡ-ಮರಗಳು ಪ್ರತಿಯೊಂದು ಮನೆಯಲ್ಲಿಯೂ ಇರುತ್ತಿದ್ದವು.
ಯುಗಾದಿಯ ದಿನ ಬೇವು-ಬೆಲ್ಲ ತಿನ್ನುವುದರ ಮೂಲಕ ಬೇವಿನ ಎಲೆಗೆ ಇರುವ ಮಹತ್ವವನ್ನು ಸಂಪ್ರದಾಯದ ಹೆಸರಿನಲ್ಲಿ ಸಾರುವ ಪ್ರಯತ್ನ ಮಾಡಲಾಗಿದೆ. ಹಬ್ಬ-ಹರಿದಿನಗಳಲ್ಲಿ ಮನೆಯ ಅಲಂಕಾರಕ್ಕೂ ಮಾವಿನ/ಬೇವಿನ ಸೊಪ್ಪನ್ನು ಬಳಸುವ ಸಂಪ್ರದಾಯವಿದೆ. ದಾರಿಯಲ್ಲಿ ಸಿಕ್ಕುವ ಲಕ್ಕಿ ಸೊಪ್ಪಿನ ಕುಡಿಯನ್ನು ತಲೆಯಲ್ಲಿರಿಸಿಕೊಳ್ಳದೆ ಯಾವ ಹೆಣ್ಣುಮಗಳೂ ಮುಂದೆ ಸಾಗುತ್ತಿರಲಿಲ್ಲ. ಆಂಜನೇಯನಿಗೆ ವೀಳ್ಯದೆಲೆ ಹಾರ ಇಷ್ಟವಂತೆ! ಉಡುಪಿಯ ಶ್ರೀಕೃಷ್ಣನಿಗೆ ಪ್ರತಿದಿನ ಅಸಂಖ್ಯ ತುಳಸಿಯ ಅರ್ಚನೆಯಂತೆ. ಉಡುಪಿಯ ಸುತ್ತಮುತ್ತಲ ಪ್ರದೇಶಗಳಿಂದ ಮಾತ್ರವಲ್ಲ, ಬಸ್ಸು, ರೈಲುಗಳಲ್ಲಿ ಕೂಡ ಟನ್‌ಗಟ್ಟಲೆ ತುಳಸಿ ಬರುತ್ತದೆಯಂತೆ. ಆ ತುಳಸಿಯ ಕುಡಿಗಳನ್ನೆಲ್ಲ ಆಧುನಿಕವಾಗಿ ಸಂಸ್ಕರಿಸಿ ಧರ್ಮಸ್ಥಳದ ಸಿರಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಔಷಧವಾಗಿ ಬಳಸುತ್ತಿದ್ದಾರಂತೆ.
ಸೊಪ್ಪಿನ ಬಳಕೆಯಲ್ಲಿಯೂ ವೈವಿಧ್ಯ ಇದೆ. ಕೆಲವನ್ನು ನೇರವಾಗಿ ತಿನ್ನುವುದಿದೆ. ಇನ್ನು ಕೆಲವನ್ನು ಬಾಡಿಸಿ, ಬೇಯಿಸಿ ತಿನ್ನುವ ಕ್ರಮವಿದೆ. ಕರಾವಳಿಯ ಜನರ ಬೆಳಗಿನ ಬದುಕು ಆರಂಭವಾಗುವುದೇ ಕವಳದಿಂದ. ರಾತ್ರಿ ಯಕ್ಷಗಾನಕ್ಕೂ ಕವಳದ ನಂಟಿದೆ. ಯುದ್ಧದ ಆಹ್ವಾನವನ್ನು “ರಣವೀಳ್ಯ’ ಎಂದೇ ಕರೆಯಲಾಗುತ್ತದೆ. ವೀಳ್ಳೆದೆಲೆ ಒಪ್ಪಂದದ ಪ್ರತೀಕ. ಬಯಲು ಸೀಮೆಯ ಅಜ್ಜಿಯರ ಚೀಲವಂತೂ “ಎಲೆಯಡಿಕೆ ಚೀಲ’ವೆಂದೇ ಪ್ರಸಿದ್ಧ. ನಾವು ಕುಡಿಯುವ ಟೀ ಕೂಡ ಸೊಪ್ಪೇ ಅಲ್ಲವೇ? ಇನ್ನು ಆಯುರ್ವೆàದದಲ್ಲಿ ಕಷಾಯ, ಚೂರ್ಣ ಮುಂತಾಗಿ ವಿವಿಧ ರೂಪಗಳಲ್ಲಿ ಬಳಕೆ ಮಾಡುವ ಪದ್ಧತಿ ಈಗಲೂ ರೂಢಿಯಲ್ಲಿದೆ. ಮೈಯಲ್ಲಿ ಗಂಧೆ/ತುರಿಕೆ ಬಂದರೆ ದೊಡ್ಡಪತ್ರೆ ಸೊಪ್ಪನ್ನು ಅರೆದು ಹಚ್ಚುತ್ತಾರೆ. ಕೆಮ್ಮು ಬಂದರೆ ಇದೇ ಸೊಪ್ಪನ್ನು ಕಾವಲಿಯ ಮೇಲೆ ಬಿಸಿ ಮಾಡಿ ಅದರ ಜೊತೆ ಉಪ್ಪು ಅಥವಾ ಜೇನುತುಪ್ಪವನ್ನು ಹಾಕಿ ಕೊಡುತ್ತಾರೆ. ತಲೆಸುತ್ತು ಬಂದರೆ ನಾಚಿಕೆ ಮುಳ್ಳಿನ (ಮುಟ್ಟಿದರೆ ಮುನಿ) ಎಲೆಗಳ ಕಷಾಯವನ್ನು ಕುಡಿಸುತ್ತಾರೆ. ಇದು ಪಿತ್ತ ಹಾರಕ. ಮಲೆನಾಡಿನಲ್ಲಿ ಈಗಲೂ “ತಂಬುಳಿ ಇಲ್ಲದೆ ಊಟವಿಲ್ಲ’ ಎನ್ನುವ ಮಾತಿದೆ. ಮಲ್ಲಿಗೆ, ಗಂಧದ ಕುಡಿಗಳೂ ಅವರಿಗೆ ಊಟಕ್ಕೆ ಪದಾರ್ಥವೇ.
ಮನುಷ್ಯನ ನಾಗರೀಕತೆ ಶುರುವಾಗುವುದೇ ಕಾಡಿನಲ್ಲಿ. ಗೆಡ್ಡೆ-ಗೆಣಸು ಹಣ್ಣುಗಳ ಜೊತೆಗೆ ಸೊಪ್ಪುಗಳನ್ನು ತಿನ್ನುತ್ತ ಬೆಳೆದದ್ದು. ಬೆಂಕಿಯನ್ನು ಕಂಡುಹಿಡಿದು ದಾಪುಗಾಲನ್ನಿಟ್ಟಿದ್ದು ಬೇರೆಯದೇ ಮಾತು. ಅವನ ರುಚಿ ಬದಲಾದದ್ದು ಇಲ್ಲಿಂದ. ಎಲ್ಲ ಜಾತಿ-ಜನಾಂಗಗಳಲ್ಲಿಯೂ ಸೊಪ್ಪಿನ ರುಚಿಯ ಬಗ್ಗೆ, ಆಹಾರ ಕ್ರಮಗಳ ಬಗ್ಗೆ, ಉಪಯೋಗದ ಬಗ್ಗೆ ಹಲವು ಕ್ರಮಗಳು ಈಗಲೂ ಚಾಲ್ತಿಯಲ್ಲಿವೆ. ಅಮೆಜಾನ್ ಕಾಡಿನಲ್ಲಿರುವ ಮಹಿಳೆಯರು ಹಸಿರಿನ 37 ಜಾತಿಗಳನ್ನು ಗುರುತಿಸುತ್ತಾರಂತೆ. ಅಂದರೆ ಅವರಲ್ಲಿರುವ ಸೊಪ್ಪಿನ ಬಗೆಗಿನ ಜ್ಞಾನ ಎಷ್ಟು ದೊಡ್ಡದು!
ಮನುಷ್ಯ ತನ್ನ ಮಾನ ಮುಚ್ಚಿಕೊಳ್ಳಲು ಕೂಡ ಮೊದಲು ಬಳಸಿದ್ದು ಈ ಸೊಪ್ಪುಗಳನ್ನೇ. ಹೂಳುವಾಗ ಕೂಡ ಮಲಗಿಸುವುದು ಬಾಳೆಯ ಎಲೆಯ ಮೇಲೆ. ಜ್ಞಾನಪ್ರಸರಣ ಕ್ಕೂ ತಾಳೆಗರಿ ಮುಂತಾದವನ್ನು ಬಳಸಲಾಗುತ್ತಿತ್ತು. ಹೀಗೆ ಮನುಷ್ಯನ ಬಾಳಿನ ಪ್ರತಿ ಹಂತದಲ್ಲಿಯೂ ಸೊಪ್ಪಿನ ಮಹತ್ವ ಅಡಗಿದೆ. ದಿನನಿತ್ಯ ಬಳಸುವ ಸೊಪ್ಪಿಗೂ ಹೆಣ್ಣಿಗೂ ಅವಿನಾಭಾವ ಸಂಬಂಧವಿದೆ. ಪ್ರಕೃತಿದತ್ತವಾಗಿರುವ ತಾಯ್ತನದ ಕಾರಣದಿಂದ ಕಾಪಿಡುವ, ಬೆಳೆಸುವ, ಪಾಲಿಸುವ ಗುಣಗಳು ಅವಳಲ್ಲಿ ಸಹಜವಾಗಿದೆ. ಬೀಜಗಳನ್ನು, ಜೀವನಕ್ರಮಗಳನ್ನು ಇಂದಿಗೂ ಕಾಪಾಡಿಕೊಂಡಿರುವವರಲ್ಲಿ ಮಹಿಳೆಯರೇ ಹೆಚ್ಚು.
ತಮ್ಮ ದಿನನಿತ್ಯದ ಬಳಕೆಗೆ ಅನುಗುಣವಾಗಿ ಸ್ವಲ್ಪವೇ ಜಾಗದಲ್ಲಿ ಅಚ್ಚುಕಟ್ಟಾಗಿ ಬೆಳೆಯುವ ಕ್ರಮವನ್ನು ರೂಢಿಸಿಕೊಂಡಿದ್ದಕ್ಕೆ ಒಂದು ಪರಂಪರೆ ಇದೆ. “ಮನೆಯಲ್ಲೊಂದು ಕೀರೆ ಮಡಿ ಇಲ್ಲಾಂದ್ರೆ ಅದು ಮನೆಯೇ ಅಲ್ಲ ಎನ್ನುವುದು ಈಗಲೂ ಹಳ್ಳಿಗಳಲ್ಲಿರುವ ನಂಬಿಕೆ. ರಾಮನಗರ ಜಿಲ್ಲೆಯ ಮಾಗಡಿಯ ಸುತ್ತಮುತ್ತ ಸೊಪ್ಪು ಬೆಳೆಯುವ ಮಹಿಳೆಯರೇ ಸೇರಿ ಒಂದು ಸಂಘವನ್ನು ಮಾಡಿಕೊಂಡಿದ್ದು, ಪಾರಂಪರಿಕ ಬೀಜ ಸಂಗ್ರಹಣೆ ಮತ್ತು ಕೃಷಿಯಲ್ಲಿ ತೊಡಗಿರುವುದು ಏಷ್ಯಾದಲ್ಲೇ ಮಾದರಿಯದ್ದಾಗಿದೆ. ಸಾಂಪ್ರದಾಯಿಕವಾಗಿ ಸೊಪ್ಪನ್ನು ಬೆಳೆಯುವ ಈ ಗುಂಪುಗಳಲ್ಲಿ ಅದರ ಜನ ಪ್ರಸರಣೆಯ ಉದ್ದೇಶವೂ ಇರುವುದನ್ನು ಗಮನಿಸಬೇಕು.
ಸೊಪ್ಪನ್ನು ಕುಯ್ಯುವುದು ಮತ್ತು ಸೋಸುವುದು ಒಂದು ವಿಶಿಷ್ಟ ಕ್ರಮ. ಇದರಲ್ಲಿ ಸಾಮಾನ್ಯವಾಗಿ ಗಂಡಸರು ಪಾಲ್ಗೊಳ್ಳುವುದಿಲ್ಲ. “ಅಕ್ಕ ಗುಬ್ಬಚ್ಚಿ ಬಾಳೆ ಇಲ್ಲಿ ಸೊಂಪಾಗಿದೆ ತಕಾ’ ಎಂದು ಒಬ್ಬರು, “ಇಲ್ಲಿ ನೋಡಕ್ಕ ಮಳ್ಳಿಯಂಗೆ ಮಲಗವಳೆ’ ಎಂದು ಮತ್ತೂಬ್ಬಳು ಹೇಳುತ್ತಾ ಒಬ್ಬರಿಗೊಬ್ಬರು ಸೊಪ್ಪಿನ ತಾಣವನ್ನು ತೋರುತ್ತಾ ಕುಯ್ಯುವುದು ಸರ್ವೇಸಾಮಾನ್ಯ. ಕಾಡಿಗೆ ದನವನ್ನು ಅಟ್ಟಿಕೊಂಡು ಹೋದಾಗ ಕಂಡ ಸೀಗೆಯ ಕುಡಿಯನ್ನು ತಾವು ಮಾತ್ರವಲ್ಲ; ಎಲ್ಲರಿಗೂ ತಿಳಿಸಿ ಗುಂಪಾಗಿ ಕುಯ್ಯುವುದು ವಾಡಿಕೆ. ಅದರ ಮುಳ್ಳನ್ನು ಕೈಗೆ ನಾಟಿಸಿಕೊಳ್ಳದೆ ಕುಯ್ಯುವುದೂ ಒಂದು ಕುಶಲ ಕಲೆಯೇ. ಕೊಯ್ಯುವಾಗಿನ ಅದರ ಲಘುವಾದ ಘಮಲು ಮೈಮನಸ್ಸುಗಳನ್ನು ಹಗುರವಾಗಿಸುತ್ತದೆ.
ಸೊಪ್ಪುಗಳಲ್ಲಿ ಎರಡು ವಿಧ.
1. ಪ್ರಾಕೃತಿಕವಾಗಿ/ಸಹಜವಾಗಿ ಬೆಳೆಯುವ ಸೊಪ್ಪುಗಳು.
2. ಕೃಷಿ ಮಾಡಿ ಬೆಳೆಸುವ ಸೊಪ್ಪುಗಳು.
ಕೆಲವು ಸೊಪ್ಪುಗಳು ಪ್ರಾಕೃತಿಕವಾಗಿ ಬೆಳೆಯುತ್ತವೆ. ಅವಕ್ಕೆ ಯಾವ ಆರೈಕೆಯೂ ಬೇಡ. ಬೀಜಗಳು ಕೂಡ ನೈಸರ್ಗಿಕವಾಗಿಯೇ ರಕ್ಷಿಸಲ್ಪಡುತ್ತವೆ. ಈ ಸೊಪ್ಪಿನ ಬೀಜಗಳು ಸಾಮಾನ್ಯವಾಗಿ ಮಳೆಯ ನೀರು, ಗಾಳಿ, ದನಗಳ ಗೊಬ್ಬರ, ಹಕ್ಕಿಗಳ ಮೂಲಕ ಒಂದೆಡೆಯಿಂದ ಇನ್ನೊಂದು ಕಡೆಗೆ ಹರಡುತ್ತವೆ.
ಬೇಲಿಯಲ್ಲಿ, ನೆಲದಲ್ಲಿ, ನೀರಿನ ಮಗ್ಗುಲಲ್ಲಿ ಹರಿಯುವ ಕೆಲ ಅಂಬುಗಳು ಕೂಡ ಅಡುಗೆಗೆ ಬಳಕೆಯಾಗುತ್ತವೆ. (ಬಸಳೆ ಮತ್ತು ಕೆಸುವಿನ ಸೊಪ್ಪಿನ ಎಲೆ ಮತ್ತು ದಂಟುಗಳೆರಡನ್ನೂ ಸಾಂಪ್ರದಾಯಿಕವಾದ ಅಡುಗೆಗಳಲ್ಲಿ ಬಳಕೆಯಾಗುವುದನ್ನು ನಾವೆಲ್ಲಾ ಬಲ್ಲೆವು)
ದಗ್ಗಲರಿವೆ, ಹೊನಗೊನೆ, ಉತ್ತರಾಣಿ, ಅಣ್ಣೆಸೊಪ್ಪು, ಗಣಕಿ ಸೊಪ್ಪು, ನೆಗ್ಗಲ, ಗುಪ್ಪಟೆ, ನೆಲನೆಲ್ಲಿ ಮುಂತಾದವು ಈ ಜಾತಿಯವು. ನೆಟ್ಟ ಬೆಳೆಗಿಂತಲೂ ಹೆಚ್ಚಾಗಿ ಅರಳುವ ಈ ಸೊಪ್ಪುಗಳನ್ನು ಕಂಡು ನಮ್ಮ ಹಳ್ಳಿಗರು “ಭೂಮಾಯ್ತಿ ಬಂಜೆಯಾ?’ ಎಂದು ಉದ್ಗರಿಸುತ್ತಾರೆ.
ಕೆಲ ತರಕಾರಿಗಳ ಸೊಪ್ಪನ್ನು ಕೂಡ ಅಡುಗೆಗೆ ಬಳಕೆ ಮಾಡುತ್ತಾರೆ. ಕುಂಬಳದ ಕುಡಿ, ಸೋರೆ, ಮೂಲಂಗಿ ಸೊಪ್ಪು, ಈರುಳ್ಳಿ ಪೈರು- ಹೀಗೆ ಅನೇಕ ತರಕಾರಿಗಳ ಎಲೆಗಳನ್ನು ಬಳಸಿ ವೈವಿಧ್ಯಮಯ ಅಡುಗೆ ಮಾಡುತ್ತಾರೆ. ಇನ್ನು ಸೊಪ್ಪಿನಿಂದ ಮಾಡುವ ಪದಾರ್ಥಗಳೂ ಹಲವು. ರೈತಾಪಿ ಕುಟುಂಬಗಳಲ್ಲಿ ಇಂದಿಗೂ ಮಸ್ಸಪ್ಪು, ಬಸ್ಸಾರು, ಉಪ್ಪುಸಾರು ಸಾಧಾರಣವಾಗಿ ಇದ್ದೇ ಇರುತ್ತದೆ. ತಮ್ಮ ಹೊಲಗಳಲ್ಲಿ ಬೆಳೆಯುವ ಸೊಪ್ಪುಗಳನ್ನು ತರಕಾರಿಗಳಿಗಿಂತಲೂ ಹೆಚ್ಚಾಗಿ ರೈತರು ಸೊಪ್ಪುಗಳನ್ನೇ ಬಳಸುತ್ತಾರೆ. “ಕಾಡಲ್ಲಿ ಹೋದ್ರೆ ಏನೋ ಒಂದು ಸೊಪ್ಪು ಸಿಕ್ಕೇ ಸಿಗುತ್ತದೆ’ ಎನ್ನುವ ನಂಬಿಕೆ ಅವರದು. ಇದೊಂದು ಸಾಂಪ್ರದಾಯಿಕವಾದ ಕಲೆಯಾಗಿದ್ದು, ಈ ಜ್ಞಾನ ಒಂದು ಜನಾಂಗದಿಂದ ಇನ್ನೊಂದು ಜನಾಂಗಕ್ಕೆ ವರ್ಗಾವಣೆ ಆಗುತ್ತಿರುತ್ತದೆ. (ಬಲಿತ ಯಾವ ಸೊಪ್ಪನ್ನು ಅಡುಗೆಗೆ ಬಳಸಬಾರದು ಎಂಬ ನಿಯಮವಿದೆ) ಭೂಮಿಯ ಒಡೆತನ ಇಲ್ಲದವರಿಗೆ ಇದು ಅರ್ಥವಾಗುವುದೇ ಇಲ್ಲ!
ಕೊಟ್ಟೆ ಕಡುಬುಗಳಂಥ ಖಾದ್ಯದ ತಯಾರಿಕೆಯಲ್ಲಿ ಹಲಸಿನ ಎಲೆ, ಅರಸಿನ ಎಲೆಗಳ ಬಳಕೆಯನ್ನೂ ನೋಡಬಹುದು. (ಬಾಳೆ ಎಲೆಯನ್ನು ಕೂಡಾ ಬಳಸಲಾಗುತ್ತದೆ) ಅದರಲ್ಲಿನ ಪರಿಮಳದ ಕಾರಣಕ್ಕಾಗಿ ಬಳಸುವುದು ಮಾತ್ರವಾಗಿರದೆ; ಆ ಎಲೆಗಳಲ್ಲಿನ ಔಷಧೀಯ ಗುಣವೂ ನಮ್ಮ ಆರೋಗ್ಯವನ್ನು ಕಾಪಿಡುತ್ತದೆ.
ಕೆಲವು ಸೊಪ್ಪುಗಳನ್ನು ನೇರವಾಗಿ ಬೇಯಿಸದೆ ಬಳಸಲಾಗುತ್ತದೆ. ಪುದಿನ, ಕೊತ್ತಂಬರಿ, ಮೆಂತ್ಯ ಸೊಪ್ಪು ಇವುಗಳಲ್ಲಿ ಕೆಲವು. ಇತ್ತೀಚೆಗಿನ ದಿನಗಳಲ್ಲಿ ಮದುವೆ-ಮುಂಜಿ ಮುಂತಾದ ಕಾರ್ಯಕ್ರಮಗಳಲ್ಲಿ ಪುದಿನ ರಸ ಕೊಡುವುದು ಸರ್ವೇಸಾಮಾನ್ಯವಾಗಿದೆ. ಅಮೆರಿಕದಂಥ ದೇಶಗಳಲ್ಲಿ ಸೊಪ್ಪಿನಿಂದಲೇ ಮಾಡುವ ಸೂಪ್, ಸಲಾಡ್‌ಗಳು ಜನಪ್ರಿಯವಾಗಿವೆ.
ಪಿ. ಚಂದ್ರಿಕಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.