ಶಬರಿಮಲೆ ಮತ್ತು ಅಸಮಾನತೆಯ ಪ್ರಶ್ನೆ
Team Udayavani, Nov 30, 2018, 6:00 AM IST
ಮಹಿಳೆಯರು ಶಬರಿಮಲೆಗೆ ಹೋಗುವುದು ಎನ್ನುವಾಗ ಮನಸ್ಸಿನಲ್ಲಿ ಒಂದು ನಿರ್ದಿಷ್ಟ ಚಿತ್ರಣ ಮೂಡುತ್ತದೆ. ಇರುಮುಡಿಕಟ್ಟು ತಲೆಯ ಮೇಲಿಟ್ಟು ತಂದೆಯ ಹೆಗಲೇರಿ ಕುಳಿತ ಪುಟ್ಟ ಬಾಲಕಿ ಅಥವಾ ಕಪ್ಪು ಸೀರೆಯುಟ್ಟು ಊರುಗೋಲಿನ ಸಹಾಯದಿಂದ ಕಾಡುದಾರಿಯಲ್ಲಿ ನಡೆಯುವ ವೃದ್ಧೆ. ಇದು ಯಾರೋ ಹೇಳಿ ತಲೆಗೆ ತುಂಬಿದ ಚಿತ್ರಣವಲ್ಲ. ಶಬರಿಮಲೆ ಸನ್ನಿಧಾನ ಹಾಗೂ ಮಹಿಳೆ ಎಂದಾಗ ಅಲ್ಲಿನ ಕುರಿತು ಅರಿತಿರುವ ಬಹುತೇಕ ಜನರ ಮನಸ್ಸಿನಲ್ಲಿ ಮೂಡಿಬರುವಂತಹ ಸಾಮಾನ್ಯ ಚಿತ್ರಣ. ಗಡಿನಾಡು ಕಾಸರಗೋಡಿನಲ್ಲಿರುವುದರಿಂದಲೋ, ಮಕರ ಮಾಸದಲ್ಲಿ ಶಬರಿಮಲೆಗೆ ಹೋಗುವ ಭಕ್ತಾದಿಗಳು ತುಂಬಿದ ವಾಹನಗಳನ್ನು ನೋಡುತ್ತಲೇ ಬೆಳೆದಿದ್ದೇನೆ. ಶ್ರೀಗಂಧ ಹೂಗಳಿಂದ ಅಲಂಕರಿಸಿದ ವಾಹನಗಳು, ಭಜನೆ ಹಾಡುವ ಭಕ್ತರೂ ಅಲ್ಲಲ್ಲಿ ವಾಹನ ನಿಲ್ಲಿಸಿ ದಣಿವಾರಿಸುವವರೂ ಇರುತ್ತಾರೆ. 41 ದಿನಗಳ ಕಠಿಣ ವ್ರತ ನಡೆಸಿ ಸನ್ನಿಧಾನವನ್ನು ಸೇರುವ, 18 ಮೆಟ್ಟಿಲುಗಳನ್ನೇರುವ, ಮಕರ ಜ್ಯೋತಿಯನ್ನು ಕಾಣುವ ತವಕ ಅವರೆಲ್ಲರ ಕಣ್ಣುಗಳಲ್ಲಿ ತುಂಬಿರುತ್ತದೆ. ಅವರ ಉತ್ಸಾಹ, ಭಕ್ತಿ ಕಂಡು ಸಂತಸವಾಗುತ್ತದೆ. ಆದರೆ, ತಾನೂ ಆ ರೀತಿ ಹೋಗಬೇಕೆಂದು ಎಂದೂ ಅನಿಸಿಲ್ಲ. ಶಬರಿಮಲೆ ಸನ್ನಿಧಾನದ ಪಾವಿತ್ರ್ಯ, ವಿಶೇಷತೆಯನ್ನು ಅರಿತ ಯಾವ ಮಹಿಳೆಯೂ ಈ ರೀತಿ ಬಯಸುವುದಿಲ್ಲ.
ಹೆಣ್ಣುಮಕ್ಕಳ ಡ್ರೆಸ್ಸಿಂಗ್, ಉದ್ಯೋಗ ಆಯ್ಕೆ, ಸ್ವತಂತ್ರ ಬದುಕಿನ ಕುರಿತಾಗಿ ಅಸಮಾನತೆ ಎಂಬ ಪದ ಬಳಕೆಯಾದಾಗ ಎಲ್ಲ ಹೆಣ್ಣುಮಕ್ಕಳಂತೆ ನನಗೂ ಅಸಮಾಧಾನವಾಗುತ್ತದೆ. ದೇಶದೆಲ್ಲೆಡೆ ವಿವಾದ ಸೃಷ್ಟಿಸಿರುವ ಶಬರಿಮಲೆಗೆ ಮಹಿಳೆಯ ಪ್ರವೇಶ ನಿಷೇಧ ಮಾತ್ರ ಅಸಮಾನತೆ ಎಂದು ಒಮ್ಮೆಯೂ ಅನಿಸಿಲ್ಲ. ಮಹಿಳೆಗೆ ಸನ್ನಿಧಿ ಪ್ರವೇಶ ನಿಷೇಧಿಸುವುದು ತಪ್ಪು , ಇದು ಮಹಿಳಾ ವಿರೋಧಿ ಕ್ರಮ; ಎಂದೂ ಅನಿಸಿಲ್ಲ. ಶಬರಿಮಲೆ ಸನ್ನಿಧಾನದ ಕುರಿತು ತಿಳಿದಿರುವ ಯಾವ ಹೆಣ್ಣಿಗೂ ಇದೊಂದು ಅಸಮಾನತೆ ಎಂದೆನಿಸಲು ಸಾಧ್ಯವಿಲ್ಲ.
ಕುಟುಂಬದಿಂದ ಅಥವಾ ದೂರದ ನೆಂಟರೋ ಶಬರಿಮಲೆಗೆ ಹೋಗಿ ಬಂದಿದ್ದರೆ, “ಅರವಣ ಪಾಯಸ ತಂದಿರಾ?’ ಎಂದು ಕೇಳಿ ಪ್ರಸಾದ ಪಡೆಯುವ ಬಾಲ್ಯದ ಅಭ್ಯಾಸ ಈಗಲೂ ಇದೆ. ಮುಟ್ಟಿನ ದಿನಗಳಲ್ಲಿ ಪ್ರಸಾದದಿಂದ ಮಾರು ದೂರವಿರುತ್ತಾರೆ. ಹಾಗಿರುವಾಗ 18 ಪವಿತ್ರ ಮೆಟ್ಟಿಲುಗಳನ್ನು ಹತ್ತುವ ಯೋಚನೆಯಾದರೂ ಹೇಗೆ ಬರಲು ಸಾಧ್ಯ? ಸನ್ನಿಧಾನದ ಕುರಿತು ಹೆಚ್ಚೇನು ತಿಳಿಯದ ಸಣ್ಣ ಬಾಲಕಿಯೂ ಶಬರಿಮಲೆಗೆ ಹೋಗಬೇಕೆಂಬ ಆಸೆ ವ್ಯಕ್ತಪಡಿಸಿದ್ದನ್ನು ನಾನು ಕೇಳಿಲ್ಲ. ಇದು ಯಾರೂ ಹೇಳಿಕೊಟ್ಟಿರುವುದೋ, ಬಲವಂತವಾಗಿ ಹೇರಿದ್ದೂ ಅಲ್ಲ, ನೋಡಿಕೊಂಡು ಬೆಳೆದದ್ದು.
ಸೃಷ್ಟಿಯಾಗಿರುವ ವಿವಾದ ಯಾವ ರಾಜಕೀಯ ಪಕ್ಷದ ಆಟವೋ, ಯಾರ ಜನಪ್ರಿಯತೆ ಗಳಿಸುವ ಹುಚ್ಚೋ ದೇವರೇ ಬಲ್ಲ. ತಮ್ಮ ನಿಗದಿತ ಗುರಿ ತಲುಪುವುದಕ್ಕಾಗಿ ಸೃಷ್ಟಿಸುವ ವಿವಾದಗಳು ಯಾವ ರೀತಿಯ ಪರಿಣಾಮ ಬೀರಬಹುದೆಂದು ಯೋಚಿಸುವುದೇ ಇಲ್ಲವೇನೋ. ಶಬರಿಮಲೆಗೆ ಮಹಿಳೆಯರ ಪ್ರವೇಶವಿಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿರುವಾಗ ಧಾರ್ಮಿಕ ವಿಚಾರವನ್ನು ಕಾನೂನು ಚೌಕಟ್ಟಿಗೆ ತಂದು ವಿವಾದ ಸೃಷ್ಟಿಸುವ ಅಗತ್ಯವಾದರೂ ಏನಿತ್ತು?
ಶಬರಿಮಲೆಗೆ ಹೋಗುವಾಗ 41 ದಿನಗಳ ಕಠಿಣ ವ್ರತ ನಡೆಸಿ ಹೋಗುತ್ತಾರೆ. ಮುಟ್ಟಾಗುವ ಯಾವ ಮಹಿಳೆಯೂ ಈ ವ್ರತವನ್ನು ಪಾಲಿಸಲು ಖಂಡಿತ ಸಾಧ್ಯವಿಲ್ಲ. ಹೀಗಿರುವಾಗ ಮಹಿಳೆ ಶಬರಿಮಲೆಗೆ ಹೋಗಬಾರದು ಎನ್ನುವುದರಲ್ಲಿ ತಪ್ಪೇನಿದೆ? ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಮುಟ್ಟು ಮೈಲಿಗೆಯಾದರೆ ಸೃಷ್ಟಿಯೂ ಮೈಲಿಗೆ, ಸೃಷ್ಟಿ ಅಡಗಿರುವುದೇ ಅಲ್ಲಿ, ಮುಟ್ಟು ಮೈಲಿಗೆ ಎಂದಾದರೆ ಎಲ್ಲವೂ ಮೈಲಿಗೆ ಎಂಬರ್ಥ ಬರುವ ಕೆಲವು ಸಾಲುಗಳನ್ನು ಬರೆದಿತ್ತು. ಋತುಸ್ರಾವವನ್ನು ಮೈಲಿಗೆ ಅಲ್ಲ ಎನ್ನಲು ಸಾಧ್ಯವೇ ಇಲ್ಲ. ಪುರುಷನಾಗಲಿ, ಮಹಿಳೆಯಾಗಲಿ ರಕ್ತ ಎಂಬುದು ಮೈಲಿಗೆಯೇ. ಹಾಗಿರುವಾಗ ಮುಟ್ಟು ಮೈಲಿಗೆಯಲ್ಲ ಎನ್ನಲು ಹೇಗೆ ಸಾಧ್ಯ?
ಗಮನಿಸಲೇಬೇಕಾದ ವಿಚಾರವೇನೆಂದರೆ, ಯಾರೂ ಮಹಿಳೆಯನ್ನು ಮೈಲಿಗೆ ಎಂದಿಲ್ಲ. ಆ ರೀತಿಯಾಗಿ ಯೋಚಿಸಿರುವುದು, ಯೋಚಿಸಿದವರ ತಪ್ಪು. ರಕ್ತ ಎಂಬುದು ಮೈಲಿಗೆ ಎಂಬುದನ್ನು ಭಾರತದ ಸಂಸ್ಕೃತಿಯಲ್ಲಿ ಬಹುತೇಕ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹೆಣ್ಣಿನ ದೇಹದಲ್ಲಾಗುವ ಸಹಜ ಪ್ರಕ್ರಿಯೆಯ ಭಾಗವಾದ ಋತುಸ್ರಾವವನ್ನು ಮೈಲಿಗೆ ಎಂದು ಪರಗಣಿಸಲಾಗುತ್ತಿದೆಯೇ ಹೊರತು ಹೆಣ್ಣನ್ನಲ್ಲ. ಪುರಾಣ ಕಥೆಗಳಲ್ಲಿ ಋಷಿಗಳ ಯಾಗ, ಯಜ್ಞವನ್ನು ಕೆಡಿಸಲು ರಾಕ್ಷಸರು ರಕ್ತ-ಮಾಂಸ ತಂದು ಸುರಿಯುವುದರ ಕುರಿತು ಓದಿರುತ್ತೇವೆ. ರಾಮಾಯಣದಲ್ಲಿಯೂ ಋಷಿಗಳ ಯಾಗ, ಯಜ್ಞವನ್ನು ಕೆಡಿಸಲು ಮಾರೀಚ ಮತ್ತು ಸುಬಾಹು ರಕ್ತಮಾಂಸ ತಂದು ಸುರಿಯುತ್ತಿದ್ದರು. ಅವರನ್ನು ರಾಮ ವಧಿಸಿದ ಎಂಬುದನ್ನು ಓದಿದ್ದೇವೆ. ರಕ್ತ ಎಂಬುದು ಹಿಂದಿನಿಂದಲೂ ಮೈಲಿಗೆಯೇ. ಅದನ್ನು ಅಪವಿತ್ರ ಎಂದೇ ಪರಿಗಣಿಸಲಾಗುತ್ತದೆ. ಹಾಗಿರುವಾಗ ಮುಟ್ಟು ಎಂದರೆ ಮೈಲಿಗೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಲ್ಲವೆ.
ಮುಟ್ಟಿನ ದಿನಗಳಲ್ಲಿ ಸಾಮಾನ್ಯವಾಗಿಯೇ ಎಲ್ಲ ದೇವಸ್ಥಾನ ಪ್ರವೇಶಕ್ಕೆ ನಿಷೇಧವಿದೆ. ಶಬರಿಮಲೆಗೆ ವಿಶೇಷವಾಗಿ 41 ದಿನಗಳ ವ್ರತವಿರುವುದರಿಂದ ಸನ್ನಿಧಿಗೆ ಹೋಗುವುದು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಮಲಯಾಳ ದೃಶ್ಯಮಾಧ್ಯಮದಲ್ಲಿ ಶಬರಿಮಲೆ ವಿವಾದ ಕುರಿತು ನಡೆದ ಚರ್ಚೆಯ ಸಣ್ಣದೊಂದು ತುಣುಕು ವೈರಲ್ ಆಯಿತು. ಶಬರಿಮಲೆಗೆ ಮಹಿಳಾ ಪ್ರವೇಶ ಬೇಕು ಎನ್ನುವಾತ ಆ ನಿಯಮ ಹೇಗೆ ಜಾರಿ ಮಾಡಬಹುದೆಂದು ವಿವರಿಸುತ್ತಿದ್ದ. “”ಈಗಾಗಲೇ 18 ಮೆಟ್ಟಿಲುಗಳಿವೆ. ಈ ಮೂಲಕ ಪುರುಷರು ಪ್ರವೇಶಿಸುತ್ತಾರೆ, ಇನ್ನು ಮಹಿಳೆಯರಿಗಾಗಿ ಪ್ರತ್ಯೇಕ ಮೆಟ್ಟಿಲುಗಳನ್ನು ಮಾಡಿ ಆ ಮೂಲಕ ಅವರಿಗೆ ಹೋಗಲು ಅನುಕೂಲ ಮಾಡಿದರಾಯಿತು” ಎಂಬುದು ಆತನ ಮಾತಿನ ತಾತ್ಪರ್ಯ. ಮಹಿಳಾ ಪ್ರವೇಶ ವಿರೋಧಿಯಾಗಿ ಮಾತನಾಡುತ್ತಿದ್ದ ವ್ಯಕ್ತಿ ಥಟ್ಟನೆ, “”ಹಾಗೇ ಅಯ್ಯಪ್ಪನ ಇನ್ನೊಂದು ವಿಗ್ರಹವನ್ನು ನಿರ್ಮಿಸಿ, ಸಾರ್ವಜನಿಕ ಪ್ರದರ್ಶನಕ್ಕಿಟ್ಟರೆ ಸಮಸ್ಯೆ ಮುಗಿಯಿತಲ್ಲ” ಎಂದು ಟಾಂಗ್ ನೀಡಿದ. ಈತನ ವ್ಯಂಗ್ಯಕ್ಕೆ ಬಹಳಷ್ಟು ಪ್ರಶಂಸೆ ವ್ಯಕ್ತವಾಯಿತು. ಕಾರಣ, ಆತ ಹೇಳಿದ ಮಾತಿನಲ್ಲಿ ವಾಸ್ತವವಿತ್ತು. ಆಧುನಿಕತೆ ಆವರಿಸಿದಂತೆಲ್ಲ ಮನುಷ್ಯ ಸಂಪ್ರದಾಯಗಳನ್ನು , ನಿಯಮಗಳನ್ನು ತನಗೆ ಅನುಕೂಲವಾಗುವಂತೆ ಬದಲಾಯಿಸಿಕೊಂಡೇ ಬಂದಿದ್ದಾನೆ. ಇಂತಹ ದೊಡ್ಡ ಮಟ್ಟಿನ ಬದಲಾವಣೆ ನೈಜ್ಯತೆಗೂ, ಸಂಪ್ರದಾಯ-ನಂಬಿಕೆಗಳ ಮೂಲ ಉದ್ದೇಶಕ್ಕೆ ಕುತ್ತು ತರುವಂತಾದರೆ ಅದು ತಪ್ಪಲ್ಲವೇ? ಅಂತಹ ಬದಲಾವಣೆಯ ಅಗತ್ಯವಿದೆಯೇ? ಇದು ಸಂಸ್ಕೃತಿ, ಸಂಪ್ರದಾಯ ಅಪಾಯದಲ್ಲಿದೆ ಎಂಬ ಎಚ್ಚರಿಕೆಯ ಕರೆಗಂಟೆಯಲ್ಲವೆ?
ಶಬರಿಮಲೆಯ ವಿಶೇಷತೆ ಇರುವುದೇ 41 ದಿನಗಳ ವ್ರತದಲ್ಲಿ. ಈ ವ್ರತವನ್ನು ಮಹಿಳೆ ಪಾಲಿಸುವುದು ಸಾಧ್ಯವಿಲ್ಲ ಎಂದಲ್ಲವೇ ಪೂರ್ವಿಕರು ಮಹಿಳೆಯರ ಪ್ರವೇಶ ನಿಷೇಧಿಸಿ ಬಾಲಕಿಯರಿಗೂ, ವೃದ್ಧೆಯರಿಗಷ್ಟೇ ಪ್ರವೇಶ ಅನುಮತಿಸಿದ್ದು. ಇದೇನನ್ನು ಅರಿಯದೆ, ಅಥವಾ ಅರಿತೂ ದುರುದ್ದೇಶದಿಂದ ಸ್ತ್ರೀ ಸಮಾನತೆ ಎಂದು ಬೊಬ್ಬಿಡುವವರ ಕುರಿತು ಏನೆನನ್ನಬೇಕು? ಅಸಂಖ್ಯಾತ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿ, ಪುರಾತನ ಸನ್ನಿಧಿಯ ನಿಯಮವನ್ನು ಮುರಿದು, ಹಕ್ಕಿನ ಹೆಸರಿನಲ್ಲಿ ಸಂಪ್ರದಾಯಗಳನ್ನು ಉಲ್ಲಂ ಸಿ ವಿಘ್ನ ಸಂತೋಷದಿಂದ ಸನ್ನಿಧಿ ಪ್ರವೇಶಿಸಲು ಹೊರಟ ಮಹಿಳೆಯರು ಗಳಿಸಿದ್ದಾದರೂ ಏನನ್ನು? ಸಾಮಾನ್ಯವಾಗಿ ಸಮಾನತೆಯ ವಿಚಾರ ಬಂದಾಗ ಮಹಿಳೆಯರು ಒಂದಾಗುತ್ತಾರೆ. ಆದರೆ, ಶಬರಿಮಲೆ ವಿಚಾರದಲ್ಲಿ ಹಾಗಾಗಲಿಲ್ಲ. ಇದರಿಂದ ಹೊರಬರುವ ಸ್ಪಷ್ಟ ಸಂದೇಶವೇನೆಂದರೆ, ಬಹುಪಾಲು ಸ್ತ್ರೀಯರು ಶಬರಿಮಲೆಗೆ ಸ್ತ್ರೀಪ್ರವೇಶ ನಿಷೇಧವನ್ನು ಅಸಮಾನತೆ ಎಂದು ಪರಿಗಣಿಸಿಯೇ ಇಲ್ಲ.
ದಿವ್ಯಾ ಪೆರ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.