ಉತ್ತರಪತ್ರಿಕೆ ಮೌಲ್ಯಮಾಪನ ರಸಮಯ ಸಮಯ!
Team Udayavani, Nov 22, 2019, 4:16 AM IST
ನಮ್ಮ ಸರಕಾರಿ ಶಾಲೆಗಳ ಶೈಕ್ಷಣಿಕ ವಾತಾವರಣಕ್ಕೂ, ಖಾಸಗಿ ಶಾಲೆಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಶಿಕ್ಷಕರ ಒತ್ತಾಯಕ್ಕೆ ಶಾಲೆಗೆ ಬರುವವರು, ಶಿಕ್ಷಕರ ಒತ್ತಾಯಕ್ಕಾಗಿ ಓದು, ಬರೆಹ, ಲೆಕ್ಕ ಮಾಡುವವರು ಇಲ್ಲಿ ಅಧಿಕ. ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಹೆತ್ತವರಲ್ಲಿ ಅನಕ್ಷರಸ್ಥರು ಹಾಗೂ ಪ್ರಾಥಮಿಕ ವಿದ್ಯಾಭ್ಯಾಸವಷ್ಟೇ ಇರುವವರು ಹೆಚ್ಚು. ಹಾಗಾಗಿ, ಮನೆಯಲ್ಲಿ ಶೈಕ್ಷಣಿಕ ವಾತಾವರಣ ಕಡಿಮೆ. ಶಿಕ್ಷಕರ ಹೊರತಾದ ಮೂಲಗಳಿಂದಲೂ, ಶಾಲೆಯಲ್ಲಿ ಕಳೆಯುವ ಸಮಯದ ಹೊರತಾಗಿಯೂ ಅವರು ಕಲಿಕೆಯಲ್ಲಿ ತೊಡಗಿಕೊಳ್ಳುವ ಸಂದರ್ಭ ಕಡಿಮೆ. ಪರೀಕ್ಷೆಯ ಹಿಂದಿನ ದಿವಸ ಏನೋ ಒಂದಿಷ್ಟು ಓದಿ ಬರುವವರೇ ಹೆಚ್ಚು. ನಿರಂತರ ಕಲಿಕೆಗಾಗಿ ನಾವೆಷ್ಟು ಪ್ರೇರೇಪಿಸಿದರೂ ಫಲ ಮಾತ್ರ ನಿರಾಶಾದಾಯಕ. (ಕಲಿಕೆಯಲ್ಲಿ ಶ್ರೇಷ್ಠ ಸಾಧನೆ ತೋರುವ ಕೆಲವು ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಕಾಣಸಿಗುವುದರಲ್ಲಿ ವಿಶೇಷವಿಲ್ಲ ) ಫಲಿತಾಂಶವೆಂಬ ಪೆಡಂಭೂತದ ಭಯದಿಂದ ನಾವು ಶಿಕ್ಷಕರು ಶಾಲೆಯಲ್ಲಿ ವಿಶೇಷ ತರಗತಿಗಳನ್ನು ನಡೆಸಿ, ನಿತ್ಯದ ತರಗತಿಗಳಲ್ಲೂ ಎರಡು-ಮೂರು ತಿಂಗಳ ಕಾಲ ಪುನರಾವರ್ತನೆ ನಡೆಸಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುತ್ತೇವೆ. (ಪರೀಕ್ಷೆಗಾಗಿ/ಅಂಕಗಳಿಕೆಗಾಗಿ ಕಲಿಸುವ, ಕೃತಕವೆಂಬಂತೆ ಪರೀಕ್ಷೆಗೆ ಸಿದ್ಧಗೊಳಿಸುವ ವ್ಯವಸ್ಥೆಯ ಕುರಿತು ಸ್ವತಃ ನನಗೆ ವಿರೋಧವಿದೆ. ಆದರೆ, ಪ್ರಸ್ತುತ ವ್ಯವಸ್ಥೆಯಲ್ಲಿ ಇದು ಅನಿವಾರ್ಯ) ಅಂತೂ ಮಕ್ಕಳು ಹೇಗೋ ಪರೀಕ್ಷೆ ಬರೆಯುತ್ತಾರೆ.
ಪರೀಕ್ಷೆ ಮುಗಿದ ಬಳಿಕ ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡಲು ಶುರುಹಚ್ಚುತ್ತೇವೆ. ನಿಜವಾಗಿಯೂ ಇದೊಂದು ನೀರಸವಾದ ಕೆಲಸ. ಆದರೆ ಉತ್ತರಗಳಲ್ಲಿನ ವೈವಿಧ್ಯ ಈ ಪ್ರಕ್ರಿಯೆಯನ್ನು ರಸವತ್ತಾಗಿ ಮಾರ್ಪಡಿಸುತ್ತದೆ. ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಸಮಯ. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ನಾಲ್ಕು ವಿಷಯಗಳನ್ನು ಕೊಟ್ಟು ಒಂದರ ಬಗ್ಗೆ ಪ್ರಬಂಧ ಬರೆಯಲು ಹೇಳಿದ್ದರು. ಒಬ್ಬ ವಿದ್ಯಾರ್ಥಿ ಗ್ರಂಥಾಲಯದ ಸದ್ಭಳಕೆ ಎಂಬ ವಿಷಯದ ಬಗ್ಗೆ ಪ್ರಬಂಧ ಬರೆದಿದ್ದ. ನಮ್ಮ ಶಾಲೆಯಲ್ಲಿ ಗ್ರಂಥಾಲಯವಿದೆ. ಅಲ್ಲಿ ತುಂಬಾ ಪುಸ್ತಕಗಳಿವೆ. ಅಲ್ಲಿ ವಿಜ್ಞಾನದ ಪ್ರಯೋಗದ ವಸ್ತುಗಳಿವೆ. ಊದುಕುಲುಮೆಗೆ ಬೆಂಕಿ ಹಾಕಿ ಉರಿಯುವುದನ್ನು ತೋರಿಸುತ್ತಾರೆ. ಅಲ್ಲಿ ಒಂದು ಅಸ್ಥಿಪಂಜರದ ದೇಹವಿದೆ. ವಿದ್ಯಾರ್ಥಿಗಳ ಕರಕುಶಲ ವಸ್ತುಗಳನ್ನು ಅಲ್ಲಿ ಇಟ್ಟಿದ್ದಾರೆ. ಅಲ್ಲಿ ಕಂಪ್ಯೂಟರ್ ಹಾಗೂ ಜೆರಾಕ್ಸ್ ಮೆಷಿನ್ ಇದೆ. ಹೀಗೆ ಸಾಗಿತ್ತು ಅವನ ಪ್ರಬಂಧ. ಇದನ್ನು ಓದಿದ ನಾವು ಶಿಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕೆವು. ಪಾಪ, ಅವನು ಇನ್ನು ಹೇಗೆ ಬರೆಯಬೇಕು! ಗ್ರಂಥಾಲಯದ ತರಹೇವಾರಿ ಉಪಯೋಗದ ವಿಶ್ವರೂಪವನ್ನು ಪ್ರದರ್ಶಿಸಿದವರು ನಾವೇ ತಾನೇ! ನಮ್ಮ ಶಾಲೆಯಲ್ಲಿ ಕೊಠಡಿಗಳ ಕೊರತೆಯಿರುವುದರಿಂದ ಈ ಕೊಠಡಿಯನ್ನು ಗ್ರಂಥಾಲಯ ಹಾಗೂ ಪ್ರಯೋಗಾಲಯ ಎರಡೂ ಆಗಿ ಬಳಸುತ್ತಿದ್ದೆವು. ಗ್ರಂಥಾಲಯದ ಪುಸ್ತಕಗಳ ಕಪಾಟುಗಳಲ್ಲದೇ, ವಿಜ್ಞಾನದ ಪ್ರಯೋಗದ ವಸ್ತುಗಳ ಕಪಾಟುಗಳೂ ಅಲ್ಲೇ ಇದ್ದೆವು. ಅದರಲ್ಲಿದ್ದ ಅಸ್ಥಿಪಂಜರದ ಮಾದರಿಯೇ ಅಸ್ಥಿಪಂಜರದ ದೇಹ. ಹಾಗಿದ್ದರೆ ಈ ಊದುಕುಲುಮೆ ಯಾವುದಿರಬಹುದು? ನಾವು ಗೊಂದಲಕ್ಕೊಳಗಾದೆವು. ಅಷ್ಟರಲ್ಲಿ ನೆನಪಿಗೆ ಬಂತು. ವಿಜ್ಞಾನದ ಮಾದರಿ ತಯಾರಿ ಸ್ಪರ್ಧೆಗಾಗಿ ಫಿರಂಗಿಯ ವರ್ಕಿಂಗ್ ಮಾಡೆಲ್ ತಯಾರಿಸಿದ್ದರು. ಬೆಂಕಿ ಕೊಟ್ಟಾಗ ಗುಂಡು ಸಿಡಿಯುವುದು ಹೇಗೆಂದು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯನ್ನೂ ನೀಡಲಾಗಿತ್ತು. ಸ್ಥಳಾವಕಾಶದ ಕೊರತೆಯಿಂದ ನಮ್ಮ ಕಂಪ್ಯೂಟರ್, ಪ್ರಿಂಟರ್, ಜೆರಾಕ್ಸ್ ಮೆಷಿನ್ ಎಲ್ಲವೂ ಇದೇ ಕೊಠಡಿಯಲ್ಲಿತ್ತು. ಗ್ರಂಥಾಲಯದ ಸದುಪಯೋಗ ಮಾಡುವ ಕ್ರಮವನ್ನು ನೋಡಿ ತಿಳಿದಿದ್ದ ಅವನು ಬರೆದದ್ದು ತಪ್ಪೆನ್ನುವುದಾದರೂ ಹೇಗೆ? ಪಠ್ಯಪುಸ್ತಕ, ಸಮವಸ್ತ್ರ, ವಿದ್ಯಾರ್ಥಿನಿಯರ ಶುಚಿ ಸ್ಯಾನಿಟರಿ ಪ್ಯಾಡ್ ಇವೆಲ್ಲ ಬಂದಾಗ ವಿದ್ಯಾರ್ಥಿಗಳಿಗೆ ಹಂಚುವ ಮೊದಲು ಗ್ರಂಥಾಲಯ ತಾತ್ಕಾಲಿಕ ದಾಸ್ತಾನು ಕೊಠಡಿಯೂ ಆಗುತ್ತಿತ್ತು! ಇವೆಲ್ಲವನ್ನೂ ಅವನು ಬರೆಯದಿದ್ದುದು ನಮ್ಮ ಪುಣ್ಯ!
ಇನ್ನೊಬ್ಬ ವಿದ್ಯಾರ್ಥಿ ಮಾಧ್ಯಮಗಳು ಹಾಗೂ ವಿದ್ಯಾರ್ಥಿ ಎಂಬ ವಿಷಯದ ಬಗ್ಗೆ ಬರೆದದ್ದೇ ಬರೆದದ್ದು ! ಮಾಧ್ಯಮ ಎಂಬುದು ಅಕ್ಷರ ತಪ್ಪಿನಿಂದಾದುದು ಎಂದು ಭಾವಿಸಿದ್ದನೋ ಏನೋ ಮಾಧ್ಯಮ ಎಂಬ ಶಬ್ದವನ್ನೇ ಬಳಸಿ ವ್ಯಾಯಾಮದ ಬಗ್ಗೆ ಬರೆದಿದ್ದ. ಅದೂ ಮೇಲಿನಂತೆಯೇ ರಸವತ್ತಾಗಿದ್ದು, ನಮ್ಮನ್ನು ನಕ್ಕು ನಗಿಸಿತ್ತು. ಗಾದೆ ಮಾತು ವಿಸ್ತರಿಸಿ ಬರೆಯಿರಿ ಎಂಬ ಪ್ರಶ್ನೆಯಲ್ಲಿ ಒಬ್ಬ ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬುದನ್ನು ವಿಸ್ತರಿಸಿ ಬರೆದಿದ್ದ. ಎಲ್ಲರ ಮನೆಯಲ್ಲಿ ಬೆಕ್ಕು ಇರುತ್ತದೆ. ಬೆಕ್ಕಿಗೆ ಹಾಲೆಂದರೆ ಇಷ್ಟ. ಅದು ಕದ್ದು ಹಾಲು ನೆಕ್ಕುತ್ತದೆ. ಆದಕಾರಣ ಹಾಲನ್ನು ಫ್ರಿಡ್ಜ್ನಲ್ಲಿಡಬೇಕು. ಬೆಕ್ಕು ಇಲಿಯನ್ನು ಹಿಡಿಯುತ್ತದೆ. ಬೆಕ್ಕು ತುಂಬಾ ಚಂದ ಇರುತ್ತದೆ. ನಕ್ಕರೆ ಆಯುಷ್ಯ ಹೆಚ್ಚುತ್ತದಂತೆ. ಮಕ್ಕಳು ಈ ರೀತಿ ಉತ್ತರಗಳನ್ನು ಬರೆದರೆ ಖಂಡಿತ ನಮ್ಮ ಆಯುಷ್ಯ ಹೆಚ್ಚುವುದರಲ್ಲಿ ಸಂದೇಹವಿಲ್ಲ.
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಜಿಲ್ಲಾ ಮೌಲ್ಯಮಾಪನ ಕೇಂದ್ರಕ್ಕೆ ಹೋದರೆ ಅಲ್ಲಿ ನಮ್ಮ ಜಿಲ್ಲೆಯಲ್ಲದ ಇತರ ಜಿಲ್ಲೆಗಳ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಸಿಗುತ್ತದೆ. ಕೆಲವರು ಉತ್ತರ ಪತ್ರಿಕೆಯಲ್ಲಿ ಕೆಲವು ವಿಚಿತ್ರ ರೀತಿಯ ಮನವಿ ಮಾಡಿರುತ್ತಾರೆ. “ನಾವು ಸರಕಾರಿ ಕನ್ನಡ ಮಾಧ್ಯಮದವರು ಸರ್. ನಮಗೆ ಇಂಗ್ಲಿಷ್ ಗೊತ್ತಿಲ್ಲ ಸರ್. ಹೇಗಾದರೂ ಪಾಸ್ ಮಾಡಿ ಸರ್. ದೇವರು ನಿಮಗೆ ಒಳ್ಳೆಯದು ಮಾಡ್ತಾನೆ ಸರ್…’ ಎಂದು ಒಬ್ಬ ಬರೆದಿದ್ದ. ನಮ್ಮ ಕೊಠಡಿಯಲ್ಲಿದ್ದ ಒಬ್ಬರು ಶಿಕ್ಷಕರಿಗೆ ಸಿಕ್ಕಿದ ಉತ್ತರ ಪತ್ರಿಕೆಯ ಒಳಗೆ ನೂರು ರೂಪಾಯಿ ನೋಟು ಇತ್ತು. ಜೊತೆಗೆ ಒಂದು ಅಡಿಬರಹವೂ. “ಸರ್, ದಯವಿಟ್ಟು ಈ ನೂರು ರೂಪಾಯಿ ತೆಗೆದುಕೊಂಡು ನನ್ನನ್ನು ಪಾಸ್ ಮಾಡಿ’. ಹಣವನ್ನು ಇನ್ನೇನು ಮಾಡುವುದು? ಆ ಶಿಕ್ಷಕರು ನಮ್ಮ ಕೊಠಡಿಯಲ್ಲಿದ್ದ ಎಲ್ಲರಿಗೂ ಬಿಸ್ಕೆಟ್ ತಂದು ಹಂಚಿದರು.
ಈ ಸಲ ಪ್ರಶ್ನೆಪತ್ರಿಕೆಯ ಸ್ವರೂಪ ಬದಲಾಗಿದೆ. ಅರ್ಧ ವಾರ್ಷಿಕ ಪರೀಕ್ಷೆಗೆ ಇಂಗ್ಲಿಷ್‌ನಲ್ಲಿ ಕಂಬಳದ ಚಿತ್ರ ಕೊಟ್ಟು ಅದರ ಬಗ್ಗೆ ಬರೆಯುವಂತೆ ಹೇಳಿದ್ದರು. ಕನ್ನಡ ಮಾಧ್ಯಮದ ನಮ್ಮ ಮಕ್ಕಳ ಉತ್ತರಗಳು ಒಂದಕ್ಕಿಂತ ಒಂದು ನಗುತರಿಸುತ್ತಿತ್ತು. ತಮಗೆ ಗೊತ್ತಿರುವ ಅರೆಬರೆ ಇಂಗ್ಲಿಷ್‌ನಲ್ಲಿ ಎಲ್ಲರೂ ಉತ್ತರವನ್ನಂತೂ ಬರೆದಿದ್ದರು. ಕಂಬುಳ ಈಸ್ ಫೇಮಸ್. ಟು ಕೌ ವಾಟರ್ ರನ್ನಿಂಗ್. ಎ ಮ್ಯಾನ್ ರನ್ನಿಂಗ್… ವ್ಯಾಕರಣಬದ್ಧವಾಗಿ ಸರಿಯಾಗಿ ಬರೆದವರೂ ಇದ್ದರು. ಸಂಪೂರ್ಣ ಕೈಚೆಲ್ಲಲು ಮನಸ್ಸಿಲ್ಲದೇ ಒಂದಿಬ್ಬರು ಇಂಗ್ಲಿಷ್ ಅಕ್ಷರದಲ್ಲಿ ಕನ್ನಡ ಭಾಷೆಯಲ್ಲಿ ವಿವರಣೆ ಕೊಟ್ಟಿದ್ದರು. ಮಕ್ಕಳ ಸ್ವಯಂಅಭಿವ್ಯಕ್ತಿಯನ್ನು ಪರೀಕ್ಷಿಸುವ ಇಂತಹ ಪ್ರಶ್ನೆಗಳು ಪ್ರಶ್ನೆಪತ್ರಿಕೆಯಲ್ಲಿ ಸೇರ್ಪಡೆಗೊಂಡಿರು ವುದು ಸ್ವಾಗತಾರ್ಹ. ಬಾಯಿಪಾಠ ಪದ್ಧತಿಯ ದುಷ್ಪರಿಣಾಮದಿಂದ ಭಾಷೆಯ ಕಲಿಕೆ ನಡೆಯುವುದೇ ಇಲ್ಲ. ಇಂತಹ ಪ್ರಶ್ನೆಗಳಲ್ಲಿ ಭಾಷೆಯ ಬಳಕೆ ಅನಿವಾರ್ಯ. ಹಾಗಾಗಿ, ಇಂಗ್ಲಿಷ್‌ನಂತಹ ಭಾಷೆಗಳಲ್ಲಿ ವಿದ್ಯಾರ್ಥಿ ಪಳಗಲು ಇಂತಹ ಪ್ರಶ್ನೆಗಳು ಅತ್ಯಗತ್ಯ.
ಸಾಹಿತ್ಯ ಕ್ಷೇತ್ರಕ್ಕೆ ನನ್ನ ಪಯಣ ಆರಂಭವಾದದ್ದು ಉದಯವಾಣಿಯಿಂದಲೇ. ಎಲ್ಲೋ ಅಲ್ಪಸ್ವಲ್ಪ ಬರೆಯುತ್ತಿದ್ದ ನನಗೆ ಕ್ಲಾಸ್‌ರೂಮ… ಎಂಬ ಈ ಅಂಕಣ ಬರೆಯುವ ದೊಡ್ಡದೊಂದು ಅವಕಾಶ ಕೊಟ್ಟ ಪತ್ರಿಕಾ ಬಳಗಕ್ಕೆ ನನ್ನ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
(ಅಂಕಣ ಮುಕ್ತಾಯ )
ಜೆಸ್ಸಿ ಪಿ. ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.