ಮನಸ್ಸು ಕೃಷ್ಣನ ಅಭಿಸಾರಿಕೆ ರಾಧಾ-ಕೃಷ್ಣ ಪ್ರೇಮಪಯಣ
Team Udayavani, Feb 14, 2020, 5:26 AM IST
ಕಲಾದಾರ್ಶನಿಕರು ಗೀತ-ನೃತ್ಯ-ಚಿತ್ರ-ಕಾವ್ಯಗಳಲ್ಲ ರಸಗಳ ರಾಜ “ಶೃಂಗಾರ’ವನ್ನೇ ಮತ್ತೆ ಮತ್ತೆ ಬಣ್ಣಿಸಿದ್ದಾರೆ. ಮೇಲ್ನೋಟಕ್ಕೆ ಅವೆಲ್ಲ ರಾಧಾ-ಕೃಷ್ಣರ ಪ್ರೇಮ ಪ್ರಸಂಗಗಳ ಮೂಲಕ ಲೌಕಿಕ ಶೃಂಗಾರದ ಅನುಭವವನ್ನು ಹೃದ್ಯವಾಗಿ ನೀಡಿದರೂ, ಅಂತರಾಳದಲ್ಲಿ ಜೀವನವನ್ನು ಪ್ರೀತಿಸಬೇಕೆನ್ನುವ ಸಂದೇಶವನ್ನೂ ಕೊಡುತ್ತವೆ. ಪ್ರೇಮಿಗಳ ದಿನದಂದು ರಾಧೆಯಲ್ಲದೆ ಮತ್ತಾರು ನೆನಪಾಗುವರು ಹೇಳಿ…
ಸರ್ವವ್ಯಾಪಿ ಭಗವಂತ ಪ್ರೇಮಿಯಾಗುವ ಕತೆ ಎಷ್ಟು ಸುಂದರ ಅಲ್ಲವೆ. ಅಂತಹ ಭಗವಂತನೇ ಪ್ರೇಮವನ್ನು ಮತ್ತೂಂದು ಹೆಜ್ಜೆ ಮೇಲಕ್ಕೆ ಕೊಂಡೊಯ್ದು ಭಕ್ತನಾಗಿ ಕಾಣಿಸಿಕೊಳ್ಳುತ್ತಾನೆ. ಅಂತಹ ಸುಂದರ ಕಲ್ಪನೆಯೇ ರಾಧಾಕೃಷ್ಣಲೀಲೆ ಎನ್ನುತ್ತಾರೆ ಮಹಾದಾರ್ಶನಿಕ ರಾಮಕೃಷ್ಣ ಪರಮಹಂಸರು. ಹೃದಯ ಗಹ್ವರದೊಳಗಿರುವ ಕೃಷ್ಣನೆಂಬ ಆಕರ್ಷಣೆ ಕ್ಷಣಕ್ಷಣಕ್ಕೆ ವೃದ್ಧಿಸಿ, ಆ ಅನುಭವ ಒಳಗಣ್ಣಿಗೆ ಕಾಣಿಸುತ್ತದೆ. ಆಗ ಅದೇ ಕೃಷ್ಣ , ತನ್ನ ಭಕ್ತರನ್ನು ರಾಧೆಯಾಗಿಸಿ ಕುಣಿಸುತ್ತಾನೆ. ನಮ್ಮನ್ನು ಹತ್ತುಹಲವು ಭಾವಗಳೊಂದಿಗೆ ಕಾಡುತ್ತಾನೆ. ಅವನು ನಾಯಕನಾಗಿ ನಮ್ಮನ್ನು ನಾಯಕಿಯಾಗಿಸುತ್ತಾನೆ. ನವವಿಧ ಭಕ್ತಿಗಳಲ್ಲಿ ಕಾಂತಾಸಕ್ತಿಯೂ ಒಂದು. ಅದರ ಪ್ರಭೆಯೊಳಗೆ ನಮ್ಮನ್ನು ಸೆಳೆಯುತ್ತಾನೆ. ಇದು ಪ್ರೇಮ ವೈಭವ ಅಲ್ಲದೆ ಮತ್ತೇನು!
ಕೃಷ್ಣ ರಾಧೆಯರ ಪಾತ್ರವಿಲ್ಲದೇ ನೃತ್ಯವೊಂದು ಸಂಪೂರ್ಣವಾಗುವುದಿಲ್ಲ. ಒಂದು ಪ್ರಸ್ತುತಿಯಲ್ಲಿ ಕಲಾವಿದೆ ನಿರೂಪಿಸುವ ಅಷ್ಟನಾಯಿಕೆ ಭಾವದಲ್ಲಿ ಆಕೆಯ ಪಾಲಿಗೆ ಕೃಷ್ಣನೇ ನಾಯಕನಾಗಿರುತ್ತಾನೆ. ಕೃಷ್ಣನನ್ನು ಆರಾಧಿಸುವ ರಾಧೆಗೆ ಆತ ಪ್ರತಿ ಕ್ಷಣದಲ್ಲೂ ಹೃದಯಕ್ಕೆ ಗೋಚರವಾಗುತ್ತಾ, ಸರಸವಾಡುತ್ತಾ ರಮ್ಯ ಅನುಭವ ನೀಡುತ್ತಾನೆ. “ಕೃಷ್ಣ ನನ್ನವನೇ’ ಎಂಬ ಭಾವವನ್ನು ಮೂಡಿಸುತ್ತಾನೆ. ಇದುವೇ ಸ್ವಾಧೀನಪತಿಕೆ ನಾಯಕೀಭಾವ. ಇನಿಯ ಜೊತೆಗಿದ್ದರೆ ಜಗತ್ತೇ ಜೊತೆಗಿದ್ದಂತೆ ಭಾಸವಾಗುತ್ತದೆ ಅಲ್ಲವೇ. ಆ ಇನಿಯ ಭಗವಂತನೇ ಆಗಿದ್ದರೆ ಅನುಭೂತಿಯು ಎಷ್ಟೊಂದು ಅದ್ಭುತವಾಗಿರಬಹುದು !
ಪ್ರೇಮದ ಕೋಟೆಯೊಳಗೆ ಆ ಸರ್ವಶಕ್ತ ನಾಯಕ ನಮ್ಮೊಳಗೇ, ನಮ್ಮನ್ನೇ ಆರಾಧಿಸುತ್ತಿರುವಂತೆ ಭಾಸವಾಗಿ, ಆರಾಧನೆಯಿಂದ ಹೃದಯ ತುಂಬಿ, ಮನಸ್ಸು ಅರಳಿ ನಂದನವನವೇ ಕಣ್ಣೆದುರು ನಳನಳಿಸುತ್ತದೆ. ಮನಸ್ಸೂ ಆಗ ಪ್ರಪುಲ್ಲತೆಯಿಂದ ಲಘುವಾಗುವುದು. ಹಿಡಿದ ಕೆಲಸಗಳೆಲ್ಲ ಹೂ ಎತ್ತಿದಷ್ಟು ಸುಗಮವಾಗಿ ಸಾಗುತ್ತದೆ. ಇಂಥ ರಮ್ಯ ಅನುಭವದ ಮಂಟಪದಲ್ಲಿ ತೂಗುಯ್ನಾಲೆ ಆಡುತ್ತಿರುವಾಗಲೊಮ್ಮೆ, ಕಣ್ಣಾಮುಚ್ಚಾಲೆಯಾಡುವ ನೆಪದಲ್ಲಿ ಸರಕ್ಕನೆ ಕೃಷ್ಣನು ಕಣ್ಮರೆಯಾದರೆ? ಇನಿಯನನ್ನು ಅರಸುವ, ಅರಸಿ ಬೇಸತ್ತು ಪರಿತಪಿಸುವ, ಮತ್ತೆ ಮತ್ತೆ ಅವನನ್ನೇ ಚಿಂತಿಸುವ ರಾಧೆ ವಿರಹಿಣಿಯಲ್ಲದೆ ಮತ್ತೇನು.
ಪ್ರೀತಿಗಿಂತಲೂ ವಿರಹವೇ ಒಂದು ತೂಕ ಹೆಚ್ಚು ಎಂದೆನಿಸಿಬಿಡುತ್ತದೆ. ಕೃಷ್ಣನಿಲ್ಲದ ಅರೆಕ್ಷಣವೂ ಯುಗವಾದಂತೆ. ಇಡುವ ಹೆಜ್ಜೆಯೂ ಭಾರ. ಅಶನ ಉದರಕ್ಕೆ ಭಾರ. ವಸನ ದೇಹಕ್ಕೆ ಭಾರ.
ರಾಧಿಕಾ… ತವ ವಿರಹೇ ಕೇಶವಾ – ಕೊರಳಲ್ಲಿ ಧರಿಸಿದ ಹಾರ ಎದೆಗೆ ಭಾರವೆನಿಸಿಬಿಡುತ್ತದೆ. ಕಂಡದ್ದೆ
ಲ್ಲವೂ ದೋಷ. ಮಾಡಿದ್ದೆಲ್ಲವೂ ತಪ್ಪು. ಎಲ್ಲವೂ ಋಣಾತ್ಮಕ. ಕೃಷ್ಣನೆಂಬ ಆತ್ಮಸಖನ ಆಗಮನವನ್ನು ಎದುರು ನೋಡುವುದರಲ್ಲೇ ಆಸಕ್ತಿ. ಮಿಕ್ಕವೆಲ್ಲದರಲ್ಲಿ ನಿರಾಸಕ್ತಿ. ಅವನಿದ್ದಷ್ಟು ಹೊತ್ತು ಗಾಢವಾದ ಅವನ ಪ್ರೀತಿಯನ್ನು ಅನುಭವಿಸಿ, ಆ ಪ್ರೀತಿಯನ್ನು ಇನ್ನೊಂದು ಆತ್ಮದೊಂದಿಗೆ ಹಂಚಿಕೊಳ್ಳಲು ಬಯಸದೆ, ಮೋಸಹೋದವರಂತೆ ಹತಾಶರಾಗುತ್ತದೆ ಮನಸ್ಸು. ತನ್ನ ಮೇಲೆ ತನಗೇ ಜುಗುಪ್ಸೆಯುಂಟಾಗುತ್ತದೆ. ರಾಸೇ ಹರಿಮಿಹ ವಿಹಿತ ವಿಲಾಸಂ, ಸ್ಮರತಿ ಮನೋ ಮಮ ಕೃತ ಪರಿಹಾಸಂ.
ಈ ಅನುಭಾವವೇ ಮಿತಿಮೀರಿ ಮನಸ್ಸು ಸಂಯಮ ಕಳೆದುಕೊಂಡಾಗ ಸಿಟ್ಟು ಚಿಗುರೊಡೆಯುತ್ತದೆ. ಆಕೆ ಖಂಡಿತಾ ನಾಯಕಿ ಆಗುತ್ತಾಳೆ. ಭಗವಂತ ವಿಶ್ವವನ್ನೇ ಪ್ರೀತಿಸುವವನು ಎಂದು ಗೊತ್ತಿದ್ದರೂ, ನಿರ್ದಾಕ್ಷಿಣ್ಯವಾಗಿ ಖಂಡಿಸಿ ದೂರ ಸರಿಯುತ್ತದೆ ಆಕೆಯ ಮನಸ್ಸು.
ಯಾಹಿ ಮಾಧವ, ಯಾಹಿ ಕೇಶವ, ಮಾವದ ಕೈತವ ವಾದಂ ರಾಧೆಯೂ ಖಂಡಿಸಿದಳಂತೆ ಕೃಷ್ಣನನ್ನು ! ಎಂಥ ಕಲ್ಲು ಮನಸ್ಸು ನೋಡಿ ರಾಧೆಯದ್ದು. ತಾಂ ಅನುಸರ ಸರಸೀರುಹ ಲೋಚನ ; ” ಹೋಗು ಅವಳೊಡನೆ, ಈ ಮನೆಯ, ಮನದ ಬಾಗಿಲು ಯಾತಕ್ಕಾಗಿಯೋ’ ಎಂದು ವ್ಯಂಗ್ಯಭರಿತವಾಗಿ ಖಂಡಿಸುತ್ತಾಳೆ. ಪ್ರಿಯಕರ ಕ್ಷಮೆಯಾಚಿಸುತ್ತಿದ್ದರೂ ಸಿಟ್ಟು ಉಲ್ಬಣಗೊಳ್ಳುವ ಮನೋವೇದನೆ.
ಆದರೆ ಎಷ್ಟು ಹೊತ್ತು? ಅತ್ತ ಅಹಂಭಾವ. ಇತ್ತ ಕೃಷ್ಣನೆಂಬ ಮರೆಯಲಸಾಧ್ಯವಾದ ಅಯಸ್ಕಾಂತ. ಇವೆರಡರ ಮಧ್ಯೆ ತೊಳಲಾಡುವ ರಾಧೆಯು ಕಲಹಾಂತರಿತ ನಾಯಕಿಯಾಗುತ್ತಾಳೆ.
ಆದರೆ ಪ್ರೀತಿಯ ಮುಂದೆ ಅಹಂಭಾವ ಶರಣಾಗಲೇ ಬೇಕು. ಆಗ ಒಮ್ಮೆಲೇ ಪರಿಸರವೆಲ್ಲ ಅತಿ ಸುಂದರವಾಗಿ ಕಂಡು ಈ ಆತ್ಮ ಶೃಂಗಾರಕ್ಕೆ ಮನಸ್ಸು ಮಾಡುತ್ತದೆ. ಸರ್ವಾಭರಣ ಭೂಷಿತೆಯಾಗಿ ಸಂಭ್ರಮಿಸಿ, ರಾಧೆಯು, ನಾಯಕನಲ್ಲಿಗೆ ತೆರಳಿ ತನ್ನನ್ನೇ ಸಮರ್ಪಿಸುವ ಮನೋಭಾವದ “ಅಭಿಸಾರಿಕೆ’ಯಾಗುತ್ತಾಳೆ. ಇನಿಯನೆಡೆಗೆ ನಡೆಯುವ ದಾರಿ ಬಹಳ ಚಂದ. ಕೃಷ್ಣ ಸಖ್ಯದ ಕಲ್ಪನೆಯ ಕ್ಷಣಗಳಿಂದ ಜೀವ ಹಗುರ. ದಾರಿ ಮಧ್ಯದ ಎಡರು-ತೊಡರುಗಳೆಲ್ಲ ತೃಣಕ್ಕೆ ಸಮಾನ. ಬೆಟ್ಟದಂಥ ಸಮಸ್ಯೆಗಳನ್ನೆಲ್ಲ ಛಲಹೊತ್ತು ಎದುರಿಸುವ ಅದಮ್ಯ ಉತ್ಸಾಹ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅದು ಆತ್ಮ-ಪರಮಾತ್ಮ ಸಮ್ಮಿಲನದ ಧ್ಯೇಯ ಹೊತ್ತು ನಡೆಯುವ ಪಯಣ ಅಲ್ಲವೆ?
-ಭ್ರಮರಿ ಶಿವಪ್ರಕಾಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.