ಪದ ಹೇಳು ಬಾ!
Team Udayavani, Jan 17, 2020, 5:46 AM IST
“ಪದ’ ಎಂಬ ಪದವೇ ಎಷ್ಟೊಂದು ಸುಂದರ ! ಪದವಿಡುವುದು ಎಂದರೆ ಮಾತಿಗೆ ಶುರುವಿಡುವುದು ಎಂದಾಗುತ್ತದೆ, ನಡಿಗೆ ಆರಂಭಿಸುವುದು ಎಂದೂ ಆಗುತ್ತದೆ. ಎರಡನ್ನೂ ಕಲಿಸುವವಳು ಅಮ್ಮ ತಾನೆ?
ಹೊಸ ಪದಗಳ ಕಲಿಕೆಯು ನಮ್ಮ ಯೋಚನೆಯನ್ನು ಹರಿತಗೊಳಿಸುತ್ತದೆ. ಮಕ್ಕಳಿಗೆ ಹೊಸ ಪದವನ್ನು ಹೇಳಿಕೊಡುವುದರಿಂದ ಅವರ ಕಲಿಕಾ ಸಾಮರ್ಥ್ಯವೂ ಹೆಚ್ಚುತ್ತದೆ. ಕನ್ನಡ, ಸಂಸ್ಕೃತ ಪದಗಳಷ್ಟೇ ಅಲ್ಲ, ಇಂಗ್ಲಿಷ್ ಪದಗಳನ್ನೂ ಕಲಿಯುವ ಕೆಲವು ವಿಧಾನಗಳು ಈಗಲೂ ಬದಲಾಗಿಲ್ಲ.
ನಾಳೆ ಅಂದರೆ ಜ. 18 ವಿಶ್ವ ಥಿಸಾರಸ್ ದಿನ . ದಿನಾಚರಣೆಯ ನೆಪದಲ್ಲಿ ಹೊಸ ಪದಗಳ ಕಲಿಕೆಯ ಒಂದೆರಡು ವಿಧಾನಗಳು ಇಲ್ಲಿವೆ:
ನಮ್ಮ ಬಳಿ ಎಷ್ಟು ಪದ ಸಂಪತ್ತಿದೆಯೊ ಮಾತು ಮತ್ತು ಬರಹ ಅಷ್ಟು ಸ್ಪಷ್ಟತೆಯನ್ನು ಪಡೆಯುತ್ತದೆ ಎನ್ನುವುದು ಹಿರಿಯರ ಮಾತು. ಆದರೆ, ಯಾರ ಜೀವನಾನುಭವ ವಿಶಾಲವಾಗಿದೆಯೋ ಅವರ ಪದ ಸಂಪತ್ತೂ ಹೆಚ್ಚಿರುತ್ತದೆ ಎನ್ನುವುದು ಸುಳ್ಳಲ್ಲ. ಯಾಕೆಂದರೆ, ಪದಗಳು ಬದುಕಿನ ಸೂಕ್ಷ್ಮ ಸಂದರ್ಭಗಳನ್ನು ಗ್ರಹಿಸಿ ಅವುಗಳಿಗೆ ಒಂದು ಮೂರ್ತ ರೂಪವನ್ನು ನೀಡುತ್ತವೆ. ಅದೇ ಕಾರಣಕ್ಕೆ ಎಲ್ಲ ಭಾಷೆಗಳಲ್ಲಿ ಪದಸಂಪತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಒಂದೇ ವಿಚಾರಕ್ಕೆ ಸಮಾನಾರ್ಥಗಳಿರುವ ಹತ್ತಾರು ಪದಗಳು ಇರುತ್ತವಲ್ಲ. ಇಂಗ್ಲಿಷ್‌ನಲ್ಲಿ ಇದನ್ನು ಥಿಸಾರಸ್ ಅನ್ನುತ್ತಾರೆ. ನಾಳೆ ಅಂದರೆ ಜ. 18ರಂದು ವಿಶ್ವ ಥಿಸಾರಸ್ ಡೇ.
ಈ ದಿನಾಚರಣೆಯ ನೆಪವನ್ನು ಮೀರಿ ಯೋಚಿಸುವುದಾದರೆ, ಮಕ್ಕಳಿಗೆ ಆಸ್ತಿ, ಒಡವೆ, ಹಣ ಮುಂತಾದ ಸಂಪತ್ತನ್ನು ನೀಡಿದಂತೆಯೇ ವಿದ್ಯೆಯನ್ನು ಕಲಿಸುವ ಬಗ್ಗೆ ಪೋಷಕರಲ್ಲಿ ಉತ್ಸಾಹವಿದೆ. ಅದೇ ರೀತಿ ಅವರ ಪದ ಸಂಪತ್ತನ್ನೂ ಹೆಚ್ಚಿಸುವ ಬಗ್ಗೆ ತುಸು ಆಸ್ಥೆ ವಹಿಸಬಹುದು.
ಇಂದು ಎಲ್ಲವನ್ನೂ ಡಿಜಿಟಲ್ ಮಾಧ್ಯಮದಲ್ಲಿಯೇ ಕಲಿಯುವ ಮಕ್ಕಳ ಪದಕೋಶದಲ್ಲಿ ಪದಗಳ ಸಂಖ್ಯೆ ಬಹಳ ಕಡಿಮೆಯಾಗಿದೆ. ಕೃಷಿ ಮತ್ತು ಅರಣ್ಯ ಹಾಗೂ ದೈನಂದಿನ ಜೀವನಕ್ಕೆ ಬೇಕಾದ ಅನೇಕ ಪದಗಳು ಚಾಲ್ತಿಯಲ್ಲಿ ಇಲ್ಲದೇ ಇರುವುದರಿಂದ ಅವು ಮಾಯವಾಗಿವೆ. ಹಾಗಿದ್ದರೆ ಮಕ್ಕಳಿಗೆ ಹೊಸ ಪದಗಳನ್ನು ಹೇಳಿಕೊಡುವುದಕ್ಕಿರುವ ಸುಲಭ ಉಪಾಯಗಳೇನು?
ಎಲ್ಲ ಮಕ್ಕಳೂ ಕಥೆಗಳನ್ನು ಇಷ್ಟಪಡುತ್ತಾರೆ. ಕಥೆಗಳ ನಡುವೆ ಒಂದೋ ಎರಡೋ ಹೊಸ ಪದಗಳನ್ನು ಸೇರಿಸಿ ಅದು ಅವರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವ ಹಾಗೆ ಮಾಡಬಹುದು. ಹೋಮ್‌ವರ್ಕ್ ಮಾಡುತ್ತ ದಣಿದು ಸಪ್ಪೆ ಮೋರೆ ಹಾಕಿದ ಮಗುವಿನ ಬಳಿ, “”ನಿನ್ನೆ ಕೇಳಿದ ಆಮೆ ಮತ್ತು ಮೊಲದ ಮರಿಯ ಕಥೆಯಲ್ಲಿ ಬರುವ ಎಂಟು ಪದಗಳನ್ನು ಬರಿ” ಎಂದು ಹೇಳಬಹುದು. ಆಗ ಮಕ್ಕಳು ಹೊಸ ಪದಗಳ ಹುಡುಕಾಟ ಶುರು ಮಾಡುತ್ತಾರೆ. “”ಅಂಗಳದಲ್ಲಿರುವ ಗಿಡದಿಂದ ಐದು ಬಗೆಯ ಎಲೆಗಳನ್ನು ತರುತ್ತೀಯಾ” ಎಂದು ಕೇಳಿದರೆ ಪುರ್ರನೆ ಹೊರಗೆ ಓಡುವ ಮಗುವಿಗೆ, ಎಲೆಗಳ ವಿನ್ಯಾಸವು ಗಮನಕ್ಕೆ ಬರುತ್ತದೆ. ದಪ್ಪ ಎಲೆ, ಕತ್ತರಿ ಎಲೆ, ಅಶ್ವತ್ಥ ಎಲೆ, ಗರಿ ಗಿಡದ ಎಲೆ, ಝರಿ ಗಿಡದ ಎಲೆ… ಹೀಗೆ.
ಮಕ್ಕಳಿಗೆ ಶ್ಲೋಕ ಹೇಳಿಕೊಡುವ ಹವ್ಯಾಸ ಕೆಲವು ಮನೆಗಳಲ್ಲಿ ಇರುತ್ತದೆ. “ಅಯೋಧ್ಯಾ, ಮಥುರಾ, ಮಾಯಾ, ಕಾಶೀ, ಕಾಂಚೀ, ಆವಂತಿಕಾ…’ ಎಂಬುದಾಗಿ ಶ್ಲೋಕದ ನಡುವೆ ಬರುವ ಸಾಲಿನಲ್ಲಿ ದೇಶದ ಹಲವು ಸ್ಥಳಗಳ ಉಲ್ಲೇಖವಿದೆ. ಅಮರ ಸಿಂಹ ಬರೆದ ಅಮರ ಕೋಶವಂತೂ ಪದಸಂಪತ್ತಿನ ಭಂಡಾರ. ಈ ಕೋಶದಿಂದ ಹತ್ತು ಶ್ಲೋಕಗಳನ್ನು ಬಾಯಿಪಾಠ ಮಾಡಿದರೂ ಅದು ಬದುಕಿಗೆ ಮಾರ್ಗದರ್ಶಿ ಎಂಬಂತಿದೆ. ಉದಾಹರಣೆಗೆ, ಭೂಮಿಯ ಬಗೆಗೆ ಇರುವ ಎರಡು ಸಾಲಿನ ಶ್ಲೋಕದಲ್ಲಿಯೇ, ” ಭೂ, ಭೂಮಿ, ಅಚಲ, ಅನಂತ, ರಸಾ, ವಿಶ್ವಂಭರಾ, ಸ್ಥಿರಾ, ಧರಾ, ಧರಿತ್ರಿ, ಧರಣೀ, ಕ್ಷೋಣಿ, ಜ್ಯಾ, ಕಾಶ್ಯಪೀ, ಕ್ಷಿತೀ… ಹೀಗೆ ಸುಮಾರು 14 ಹೆಸರುಗಳನ್ನು ಕಲಿಯಬಹುದು. ಮಾತ್ರವಲ್ಲ , ಪ್ರತೀ ಪದದ ಹಿಂದೆಯೂ ಒಂದೊಂದು ಕಥೆಯಿದೆ. ಭೂಮಿಗೆ “ಕಾಶ್ಯಪೀ’ ಎಂಬ ಹೆಸರೇಕೆ ಬಂತು ಎಂಬ ಹುಡುಕಾಟವೂ ಮಕ್ಕಳಿಗೆ ಇಷ್ಟವಾಗಬಹುದು. ಭೂಮಿಗೆ ಸಂಬಂಧಿಸಿದ ಹೆಸರುಗಳನ್ನೇ ತಿಳಿಸುವ ಮೂರು ಶ್ಲೋಕಗಳಿವೆ ಈ ಕೋಶದಲ್ಲಿ.
ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೂ, ಇಂಗ್ಲಿಷ್ ಪದ ಸಂಪತ್ತು ಎಲ್ಲರಲ್ಲಿಯೂ ಹೇರಳವಾಗಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ತಾವು ಹೇಳಬೇಕಾದ ವಿಚಾರಕ್ಕೆ ಹತ್ತಾರು ವಾಕ್ಯಗಳನ್ನು ಬಳಸಬೇಕಾಗುತ್ತದೆ. ಅಥವಾ, like that, like this… ಎನ್ನುತ್ತ ಉದಾಹರಣೆಗಳನ್ನು ಕೊಡುತ್ತ ವಿವರಿಸಬೇಕಾಗುತ್ತದೆ. ಅನೇಕ ವಿದ್ಯಾರ್ಥಿಗಳು ಪ್ರತಿ ಮಾತಿಗೂ “I was like…” ಎಂಬ ಪದಗಳನ್ನು ಬಳಸುವುದುಂಟು. ಒಂದು ವಿಚಾರಕ್ಕೆ ಸ್ಪಷ್ಟವಾದ ಪದವೊಂದನ್ನು ಕಲಿತರೆ ಮಾತು ಬಹಳ ಪೇಲವವಾಗಿ, ಗಲಾಟೆ ಎಂಬಂತೆ ಕಿರಿಕಿರಿ ಅನಿಸುವುದಿಲ್ಲ.
ಸಮಕಾಲೀನ ವಿಚಾರಗಳಿಗೆ ಸಂಬಂಧಿಸಿದ ಪದ ಸಂಪತ್ತು ಹೇರಳವಾಗಿ ದೊರೆಯುವುದು ದಿನಪತ್ರಿಕೆಗಳಲ್ಲಿ. ಆಯಾ ದಿನದ ಸುದ್ದಿಯಲ್ಲಿ ಸದ್ಯದ ಪರಿಸ್ಥಿತಿಯನ್ನು ಬಣ್ಣಿಸುವ ರೀತಿಯಲ್ಲಿ ಅನೇಕ ಪದಗಳು ಲಭ್ಯ ಇರುತ್ತವೆ.
ಇಂಗ್ಲಿಷ್ ಭಾಷಾ ಕಲಿಕೆಗೂ ದಿನಪತ್ರಿಕೆಗಳನ್ನೇ ಬಳಸುವಂತೆ ಶಿಕ್ಷಕರು ಸಲಹೆ ಮಾಡುವುದು ಸಾಮಾನ್ಯ.
ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಬಹಳಷ್ಟು ಸುದ್ದಿ ಮಾಡಿದ ಹೊಸ ಪದ ಎಂದರೆ “ಬ್ರೆಕ್ಸಿಟ್’. ಯೂರೋಪಿಯನ್ ಯೂನಿಯನ್‌ನಿಂದ ಬ್ರಿಟನ್ ಹೊರಬರುವ ಪ್ರಕ್ರಿಯೆಯನ್ನು ಸಂಯೋಜಿಸಿ “ಬ್ರೆಕ್ಸಿಟ್(ಬ್ರಿಟನ್-ಎಕ್ಸಿಟ್)’ ಎಂಬ ಪದ ರೂಪುಗೊಂಡಿತು. ಅದೇ ಮಾದರಿಯಲ್ಲಿ ಬ್ರಿಟನ್ ಕುಟುಂಬದಿಂದ ರಾಜಕುಮಾರ ಹ್ಯಾರಿ ಮತ್ತು ಪತ್ನಿ ಮೇಘನ್ ಮಾರ್ಕಲ್ ಹೊರ ನಡೆದ ಪ್ರಕ್ರಿಯೆಯನ್ನು “ಮೆಕ್ಸಿಟ್’ ಎಂದು ಅಲ್ಲಿನ ಮಾಧ್ಯಮಗಳು ಕರೆದವು. ಹೀಗೆ ಸಂಯೋಜಿತ ಪದಗಳು ಅಥವಾ ಆಡುನುಡಿಯು ಜೋಡಿಯಾಗಿ ರೂಪುಗೊಂಡ ಪದಪುಂಜಗಳ ಮಾಹಿತಿಯು ದಿನಪತ್ರಿಕೆ, ವೆಬ್‌ಸೈಟ್‌ಗಳಲ್ಲಿ ಹೇರಳವಾಗಿ ದೊರೆಯುತ್ತವೆ. ಇದೇ ಕಾರಣಕ್ಕಾಗಿ ಮಕ್ಕಳಿಗೆ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸುವುದರಿಂದ ಅವರ ಜ್ಞಾನವೂ, ಪದ ಸಂಪತ್ತೂ ವೃದ್ಧಿಯಾಗುತ್ತದೆ.
ಸ್ಮೋಕ್ ಮತ್ತು ಫಾಗ್ ಎಂಬ ಪದಗಳನ್ನು ಜೋಡಿಸಿ, ಸ್ಮಾಗ್ ಎಂಬ ಪದಗಳು ಸೇರಿ “ಸ್ಮಾಗ್’ ಎಂಬ ಹೊಸ ಪದ ಹುಟ್ಟು ಪಡೆಯಿತು. ಇತ್ತೀಚೆ ಗೆ ದೆಹಲಿಯಲ್ಲಿ ಭಾರಿ ವಾಯುಮಾಲಿನ್ಯ ಉಂಟಾದಾಗ, ಸ್ಮಾಗ್ ಎಂಬ ಹೊಸ ಪದವು ತುಂಬಾ ಬಳಕೆಯಾಯಿತು. ಪದಗಳು ಹೆಚ್ಚು ಬಳಕೆಯಾಗಿ ಸವೆಷ್ಟೂ ಅವುಗಳು ಆಪ್ತವಾಗಿಬಿಡುತ್ತವೆ. ಫೆಂಟಾಸ್ಟಿಕ್ ಮತ್ತು ಫ್ಯಾಬ್ಯುಲಸ್ ಎಂಬ ಪದಗಳು ಸೇರಿ ಫೆಂಟಾಬ್ಯುಲಸ್ ಎಂಬ ಪದ ಎಷ್ಟೊಂದು ರಿಯಾಲಿಟಿ ಶೋಗಳಲ್ಲಿ ಹೊಗಳಿಕೆಯಾಗಿ ಬಳಕೆಯಾಗುತ್ತಿಲ್ಲ ! ನಾವು ಮೊಬೈಲ್‌ನಲ್ಲಿ ಬಳಸುವ ಇಮೋಟಿಕಾನ್ ಪದವನ್ನೇ ತೆಗೆದುಕೊಳ್ಳಿ. ಇಮೋಷನಲ್ ಐಕಾನ್ ಎಂಬ ಪದಗಳು ಸೇರಿ ಇಮೋಟಿಕಾನ್ ಎಂಬ ಹೊಸ ಪದ ಹುಟ್ಟಿಕೊಂಡಿದೆ. ಬ್ರಂಚ್, ಡಾಕ್ಯುಡ್ರಾಮಾ, ಫ್ರೆಎನಿಮಿ…. ಹೀಗೆ ಉದಾಹರಣೆಗಳು ಸಾವಿರಾರು.
ಕಲಿಕೆಗೆ ಆಯ್ಕೆ ಮಾಡಿಕೊಳ್ಳುವಾಗ ಹಳೇ ಕಾಲದ ಪದಗಳನ್ನೂ ಮತ್ತೆ ಚಾಲ್ತಿಗೆ ತರಬಹುದಲ್ಲವೇ. ಮಕ್ಕಳು ಅಜ್ಜ- ಅಜ್ಜಿಯರೊಡನೆ ಬೆರತಾಗ ಹಳೆ ಕಾಲದ ಪದಗಳು ಹೆಚ್ಚಾಗಿ ಮಾತಿನಲ್ಲಿ ಬರುವುದುಂಟು. “ಎಮ್ಮೆ ಈಯಿತೆಂದರೆ ಕೊಟ್ಟಿಗೆಯಲ್ಲಿ ಕಟ್ಟು’ ಎಂಬ ಗಾದೆ ಉದಾಹರಿಸಿ ಅಜ್ಜಿ ಬೈಯ್ಯುತ್ತಿದ್ದರೆ, ಪೇಟೆಯ ಮೊಮ್ಮಗ ಕೇಳುತ್ತಾನೆ: “ಕೊಟ್ಟಿಗೆ ಎಂದರೇನಜ್ಜಿ?’ ಅಲ್ಲಿಗೆ ಅಜ್ಜಿಯ ಸಿಟ್ಟು ಮಾಯ. “ಕೊಟ್ಟಿಗೆ’ ಯ ಕಥೆ ಶುರು. ಅದೇನೇ ಇರಲಿ, ನಿಮ್ಮ ಮಗು ಹೊಸ ಪದಗಳನ್ನು ಕಲಿಯುತ್ತಿದೆಯೇ ಎಂಬ ಬಗ್ಗೆ ಸ್ವಲ್ಪ ಗಮನ ಇದ್ದರೆ ಚೆನ್ನ ಅಲ್ಲವೇ.
ಶಾಲಿನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.