ಹೆಣ್ಣು ಮಕ್ಕಳ ಮೊಂಡು ಹಟ
ಅಧ್ಯಾಪಕಿಯ ಟಿಪ್ಪಣಿಗಳು
Team Udayavani, Oct 11, 2019, 11:49 AM IST
ಶಾಲೆಯಲ್ಲಿ ತರಗತಿ ಪ್ರಾರಂಭವಾಗುವ ಮೊದಲು ಕ್ಷೀರಭಾಗ್ಯದ ಹಾಲನ್ನು ವಿತರಿಸುತ್ತೇವೆ. ಒಬ್ಬಳು ಬಂದು ಇನ್ನೊಂದು ಹುಡುಗಿಯ ಹೆಸರು ಹೇಳಿ, “”ಮೇಡಂ, ಅವಳು ಹಾಲು ಕುಡಿಯುವುದಿಲ್ಲವಂತೆ” ಎಂದು ದೂರು ಹೇಳಿದಳು. ತರಗತಿಗೆ ಹೋಗಿ ವಿಚಾರಿಸಿದಾಗ ಅವಳು ಹಿಂದಿನ ದಿನ ಮನೆಯಲ್ಲೂ ಊಟ ಮಾಡಿಲ್ಲ, ಬೇರೆ ಏನನ್ನೂ ತಿನ್ನುವುದು, ಕುಡಿಯುವುದು ಮಾಡಿಲ್ಲ ಎಂದು ತಿಳಿಯಿತು. ಅವಳನ್ನು ಗದರಿಸಿ ಹಾಲು ಕುಡಿಯುವಂತೆ ಮಾಡಿದೆವು. ಮಧ್ಯಾಹ್ನವೂ ನಮ್ಮ ಭಯದಿಂದ ಊಟ ಮಾಡಿದಳು. ಮರುದಿನ ನೋಡಿದರೆ ಕಿವಿಯ ಓಲೆ, ಕತ್ತಿನ ಸರ ಇವು ಯಾವುದೂ ಇಲ್ಲದೇ ಬಂದಿದ್ದಾಳೆ. ಉಳಿದ ಮಕ್ಕಳು ದೂರು ಕೊಟ್ಟರು. ಹತ್ತನೆಯ ತರಗತಿಯಲ್ಲಿ ಕಲಿಯುತ್ತಿದ್ದ ಅವಳ ಅಕ್ಕನನ್ನು ಕರೆಸಿದೆವು. ಅವಳು ತರಗತಿಯ ಜಾಣ ವಿದ್ಯಾರ್ಥಿನಿ. ಅವಳ ತಂಗಿಯೂ ಬುದ್ಧಿವಂತಳೇ. ಆದರೂ ಅವಳ ವಿಚಿತ್ರ ವರ್ತನೆಗಳಿಂದಾಗಿ ಸಾಮಾನ್ಯ ಎನಿಸುವಷ್ಟೇ ಅಂಕಗಳನ್ನು ಪಡೆಯುತ್ತಿದ್ದಳು. ಈಗ ಅಕ್ಕನಲ್ಲಿ ವಿಚಾರಿಸಿದಾಗ ಅವಳು ಭಾರೀ ಹಟಮಾರಿ ಎಂದು ತಿಳಿಯಿತು. ಮನೆಯಲ್ಲಿ ಸ್ವಲ್ಪ ಜೋರು ಮಾಡಿದರೂ ಊಟ, ತಿಂಡಿ ಬಿಟ್ಟು ಕೋಣೆಗೆ ಹೋಗಿ ಬಾಗಿಲು ಹಾಕಿ ಮಲಗುತ್ತಿದ್ದಳು. ಮನೆಯವರು ಎಷ್ಟು ವಿನಂತಿಸಿದರೂ ಮತ್ತೆ ಊಟ ಮಾಡುತ್ತಿರಲಿಲ್ಲ. ಯಾವುದೋ ಕಾರಣಕ್ಕೆ ಸಿಟ್ಟು ಬಂದು ಈಗ ಕಿವಿಯೋಲೆಯನ್ನೆಲ್ಲ ಬಿಚ್ಚಿ ಬಿಸಾಡಿದ್ದಾಳಂತೆ.
ಅಪ್ಪ-ಅಮ್ಮ ಈ ಇಬ್ಬರು ಹೆಣ್ಣುಮಕ್ಕಳನ್ನು ಭಾರೀ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಮನೆಯಲ್ಲಿ ಇವರಿಂದ ಯಾವುದೇ ಕೆಲಸ ಮಾಡಿಸುತ್ತಿರಲಿಲ್ಲ. ಸಣ್ಣವಳು ಅತಿ ಮುದ್ದಿನಿಂದಾಗಿ ತೀರಾ ಹಟಮಾರಿ ಸ್ವಭಾವ ಬೆಳೆಸಿಕೊಂಡಿದ್ದಳು. ಮನೆಯ ಹಿನ್ನೆಲೆಯನ್ನು ಪರಿಶೀಲಿಸಿದಾಗ ಯಾವುದೇ ರೀತಿಯಲ್ಲಿ ಏನೂ ತೊಂದರೆ ಅವಳಿಗಿಲ್ಲ ಎಂಬುದು ಖಚಿತವಾಯಿತು. ಇವಳ ರೋಗಕ್ಕೆ ಸರಿಯಾದ ಮದ್ದು ಅವಳ ಸೊಕ್ಕು, ಹಟಮಾರಿತನಗಳನ್ನು ಮುರಿಯುವುದಷ್ಟೇ ಎಂದು ತಿಳಿಯಿತು. ಸ್ವಲ್ಪ ಖಾರವಾಗಿ ಮನಸ್ಸಿಗೆ ನಾಟುವಂತೆ ಒಂದಷ್ಟು ಉಪದೇಶ ಮಾಡಿದೆ. ನೀನು ಈ ರೀತಿ ವರ್ತಿಸಿದರೆ ಮದುವೆಯಾಗಿ ಒಂದೇ ದಿನದಲ್ಲಿ ನಿನ್ನ ಗಂಡ ನಿನ್ನನ್ನು ತವರಿಗೆ ಅಟ್ಟಿಬಿಡುತ್ತಾನೆ. “ಹೆಣ್ಣುಮಕ್ಕಳಿಗೆ ಈ ರೀತಿಯ ಮೊಂಡು ಹಟ ಒಳ್ಳೆಯದಲ್ಲ’ ಎಂದೆಲ್ಲ ಹೇಳಿ ಜೋರು ಮಾಡಿದೆ. ಸುಮ್ಮನೆ ನಿಂತು ಕೇಳುತ್ತಿದ್ದಳು. “ಇನ್ನೊಂದು ಬಾರಿ ಹಟ ಮಾಡಿ ಊಟ ಬಿಟ್ಟರೆ, ಬೋಳು ಕುತ್ತಿಗೆ-ಕಿವಿಯಲ್ಲಿ ಬಂದರೆ ಜಾಗ್ರತೆ’ ಎಂದು ಎಚ್ಚರಿಕೆ ಕೊಟ್ಟೆ. ಮರುದಿನ ಕಿವಿಯೋಲೆ ಹಾಕಿ ಬಂದಿದ್ದಳು. ಶಾಲೆಯ ಹಾಲು, ಊಟ ಎಲ್ಲಾ ತಕರಾರಿಲ್ಲದೇ ಸ್ವೀಕರಿಸಿದಳು. ಮನೆಯಲ್ಲೂ ತೀವ್ರ ಮೊಂಡು ಹಟ ಮಾಡುವುದನ್ನು, ಊಟ-ತಿಂಡಿ ಬಿಡುವುದನ್ನು ನಿಲ್ಲಿಸಿದಳು ಅಂತ ನಂತರದ ದಿನಗಳಲ್ಲಿ ಅವಳ ಅಕ್ಕನಿಂದ ತಿಳಿಯಿತು.
ಮಕ್ಕಳಿಗೆ ಕೆಲವೊಮ್ಮೆ ತಮ್ಮ ವರ್ತನೆ ತಪ್ಪು ಎಂದು ತಿಳಿದಿರುವುದಿಲ್ಲ. ಅವರಲ್ಲಿನ ದೋಷವನ್ನು ಎತ್ತಿ ತೋರಿಸಿ, ಸರಿಯಾದುದನ್ನು ಹೇಳಿಕೊಟ್ಟರೆ ಅವರು ಖಂಡಿತ ಆ ತಪ್ಪು ವರ್ತನೆಗಳನ್ನು ಬಿಡುತ್ತಾರೆ ಎಂಬುದು ಸತ್ಯ. ಇದು ಮತ್ತೂಂದು ಘಟನೆಯಿಂದಲೂ ಸಾಬೀತಾಯಿತು.
ಅಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿತ್ತು. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡದಂತೆ ನಾವು ಹದ್ದಿನ ಕಣ್ಣಿಟ್ಟು ಮೇಲ್ವಿಚಾರಣೆ ಮಾಡುತ್ತಿರುತ್ತೇವೆ. ಪರೀಕ್ಷೆ ಪ್ರಾರಂಭವಾಗುವ ಮೊದಲೇ ಆ ಶಿಕ್ಷಕಿ, “ಅತ್ತಿತ್ತ ಯಾರೂ ಏನನ್ನೂ ಕೇಳದೇ ನಿಮ್ಮಷ್ಟಕ್ಕೆ ನೀವು ಬರೆಯಬೇಕು. ಇದನ್ನು ಮೀರಿದವರನ್ನು ಹೊರಗೆ ಕಳಿಸಲಾಗುವುದು’ ಎಂದಿದ್ದರು. ಪರೀಕ್ಷೆಯ ಕೊನೆಯ ಹಂತಕ್ಕೆ ಬಂದಾಗ ಹತ್ತನೆಯ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಏನೋ ಮಾತನಾಡುತ್ತಿ ದ್ದರು. ಅವ ರನ್ನು ಶಿಕ್ಷಕಿ ಗದರಿಸಿದರು. ಪರೀಕ್ಷೆ ಮುಗಿದ ನಂತರ ಇಬ್ಬರನ್ನೂ ಕೆೊಠಡಿಗೆ ಕರೆಸಿ ವಿಚಾರಿಸಿದರು. “ನಾವು ಪರ ಸ್ಪರ ಕೇಳಿ ಬರೆದದ್ದಲ್ಲ, ಬರೆದು ಆಯ್ತಾ ಅಂತ ಕೇಳಿದ್ದಷ್ಟೇ’ ಅಂದಳು ಒಬ್ಬಳು. “ಪರೀಕ್ಷಾ ಕೊಠಡಿಯಲ್ಲಿ ಮಾತನಾಡಬಾರದು ಎಂದಿರುವಾಗ ನೀವು ಮಾತನಾಡಿದ್ದು ಯಾಕೆ, ಅದು ತಪ್ಪಲ್ವಾ?’ ಎಂದು ಅವರು ಕೇಳಿದ್ದೇ ಆ ಹುಡುಗಿ ಅಳತೊಡಗಿದಳು.
ವಿದ್ಯಾರ್ಥಿಗಳು ತಮ್ಮ ತಪ್ಪಿಲ್ಲದಿದ್ದರೆ ಕೆಲವೊಮ್ಮೆ ಅಳುತ್ತಾರೆ. ಕೆಲವರು ಶಿಕ್ಷೆಯಾದೀತೆಂಬ ಭಯದಿಂದ ತಪ್ಪು ಮಾಡಿದ್ದರೂ ಅಳುತ್ತಾರೆ. ಅವಳ ಅಳು ಜೋರಾಯ್ತು. ಅಳುವನ್ನು ನಿಯಂತ್ರಿಸಲಾಗದೇ ಅವಳು ಉಸಿರುಕಟ್ಟಿದಂತೆ ವರ್ತಿಸತೊಡಗಿದಳು. ಸ್ವಲ್ಪ ಹೊತ್ತಲ್ಲಿ ವಾಂತಿ ಮಾಡುವ ಸೂಚನೆ ತೋರಿದಳು. ವಾಷ್ ಬೇಸಿನ್ ಬಳಿ ಕರೆದೊಯ್ದೆವು. ವಾಂತಿ ಮಾಡಿದಳು. ನಂತರ ಕೈಕಾಲು ಕುಸಿದಂತೆ, ಶಕ್ತಿಗುಂದಿ ಬೀಳುವಂತೆ ವರ್ತಿಸತೊಡಗಿದಳು. ನಾವು ಶಿಕ್ಷಕಿಯರೆಲ್ಲರೂ ಅವಳನ್ನು ಸಮಾಧಾನಪಡಿಸಲು ಪರಿಪರಿಯಾಗಿ ಶ್ರಮಿಸಿದೆವು. ತುಂಬಾ ಹೊತ್ತಿನ ಬಳಿಕ ನಮ್ಮ ಪ್ರಯತ್ನ ಯಶಸ್ವಿಯಾಯಿತು.ಅವಳು ಶಾಂತಳಾದಳು. ಮರುದಿನ ಅವಳ ಮನೆಯವರನ್ನು ಬರಹೇಳಿದೆವು. ಅವಳ ಅಪ್ಪ ಬಂದರು. ಅವರನ್ನು ನೋಡುವಾಗಲೇ ತುಂಬಾ ಮೃದು ಸ್ವಭಾವದವರು ಎಂದು ತಿಳಿಯುತ್ತಿತ್ತು. ಅವರಿಗೆ ಹಿಂದಿನ ದಿನ ನಡೆದ ವಿಷಯ ತಿಳಿಸಿದೆವು. ಅದಕ್ಕವರು, “ಹೌದು, ನನಗೆ ಗೊತ್ತಿದೆ. ಅವಳು ಮನೆಯಲ್ಲೂ ಸಣ್ಣಸಣ್ಣ ಕಾರಣಕ್ಕೆ ಹೀಗೆ ಮಾಡುತ್ತಾಳೆ. ಅವಳನ್ನು ಎಲ್ಲರೂ ಮುದ್ದಿನಿಂದ ಅಮ್ಮಿà ಅಂತಲೇ ಕರೆಯುವುದು. ಅಪ್ಪಿತಪ್ಪಿ ಅವಳನ್ನು ಹೆಸರಿØಡಿದು ಕರೆದರೆ ಅತ್ತು ರಂಪ ಮಾಡುತ್ತಾಳೆ. ಏನು ಮಾಡುವುದೆಂದೇ ತಿಳಿಯದು’ ಎಂದರು.
ಮಕ್ಕಳನ್ನು ಪ್ರೀತಿಸಬೇಕು. ಆದರೆ, ಅತಿ ಪ್ರೀತಿಯೂ ಅವರ ಬೆಳವಣಿಗೆಗೆ ಮಾರಕ. ಮಕ್ಕಳ ವ್ಯಕ್ತಿತ್ವ ಉತ್ತಮವಾಗಬೇಕಾದರೆ ಸ್ವಲ್ಪ ಪ್ರಮಾಣದ ಗದರಿಸುವಿಕೆಯೂ ಬೇಕು. ಮಕ್ಕಳು ಮಾನಸಿಕವಾಗಿಯೂ ಗಟ್ಟಿಯಾಗಬೇಕು. ಸಹಿಸುವ ಗುಣ ಬೆಳೆಸಿಕೊಳ್ಳಬೇಕು. ಗದರಿಸುವ ಸಂದರ್ಭ ಬಂದಾಗ ಅವಳನ್ನು ಗದರಿಸಿ, ಆದರೆ ಅವಳು ಮಾಡುವ ಓರ್ವರ್ ಆ್ಯಕ್ಷನ್‌ಗಳನ್ನು ಕಡೆಗಣಿಸಿ. ಅವಳಿಗೆ ತಪ್ಪು ಏನು ಎಂಬುದನ್ನು ತಿಳಿಸಿಹೇಳಿ ಎಂದು ಅವಳ ಅಪ್ಪನಿಗೆ ಒಂದಷ್ಟು ಸಲಹೆಗಳನ್ನು ಹೇಳಿದೆವು. ಅವರದನ್ನು ಅಮೂಲ್ಯ ಎಂಬಂತೆ ಸ್ವೀಕರಿಸಿದರು. ಈ ಹುಡುಗಿಯನ್ನು ವೈಯಕ್ತಿಕವಾಗಿ ಕರೆದು, “ಪ್ರಪಂಚದಲ್ಲಿ ಸುಖ, ಸಂತೋಷ ಮಾತ್ರ ಇರುವುದಲ್ಲ. ಕಷ್ಟ-ದುಃಖಗಳೂ ಇರುತ್ತವೆ. ಕಷ್ಟ ಬಂದಾಗ ಎದೆಗುಂದುವುದಲ್ಲ. ಧೈರ್ಯದಿಂದ ಎದುರಿಸಬೇಕು. ಹೆಣ್ಣುಮಗು ನೀನು. ಸ್ಟ್ರಾಂಗ್ ಆಗಬೇಕು’- ಎಂದೆಲ್ಲ ಬುದ್ಧಿಮಾತು ಹೇಳಿದೆವು. ದಿನಗಳೆದಂತೆ ಅವಳಲ್ಲಿ ಗಟ್ಟಿತನ ಮೂಡುತ್ತಿರುವುದು ನಮ್ಮ ಅರಿವಿಗೆ ಬಂತು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅವಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾದಳು.
ಜೆಸ್ಸಿ ಪಿ. ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.