ದೀಪಾವಳಿ ಹಬ್ಬದ ವಿಶೇಷ ಖಾದ್ಯಗಳು
Team Udayavani, Oct 25, 2019, 4:20 AM IST
ದೀಪಾವಳಿ ಹಬ್ಬ ಮತ್ತೆ ಬಂದಿದೆ. ಹೊಸ ಬಟ್ಟೆ ಧರಿಸಿ, ಪಟಾಕಿ ಸುಡುಮದ್ದು ಸಿಡಿಸಿ, ಸಿಹಿ ತಿನ್ನುವ ಸಂಭ್ರಮ. ಹಬ್ಬಕ್ಕೆ ತಯಾರಿಸಬಹುದಾದ ಕೆಲವು ವಿಶೇಷ ಖಾದ್ಯಗಳು ಇಲ್ಲಿವೆ.
ಗೋಧಿ ಹಲ್ವ
ಬೇಕಾಗುವ ಸಾಮಗ್ರಿ: 1 ಕೆಜಿ ಇಡಿ ಗೋಧಿ, 2 ಕೆಜಿ ಸಕ್ಕರೆ, 10-15 ಗೋಡಂಬಿ, 7-8 ಏಲಕ್ಕಿ, 4 ಕಪ್ ತುಪ್ಪ, ಸ್ವಲ್ಪ ಕೇಸರಿ ಬಣ್ಣ.
ತಯಾರಿಸುವ ವಿಧಾನ: ಇಡಿ ಗೋಧಿಯನ್ನು ಬೆಳಗ್ಗೆ ನೆನೆಸಿ. ಸಾಯಂಕಾಲ ನುಣ್ಣಗೆ ರುಬ್ಬಿ. ಬಟ್ಟೆಯಲ್ಲಿ ಆರಿಸಿ ಹಾಲು ತೆಗೆದು 4-5 ಸಲ ನೀರು ಹಾಕಿ ಕಿವುಚಿ ಹಾಲು ತೆಗೆಯಿರಿ. ಆ ಮೇಲೆ ಮುಚ್ಚಿಟ್ಟು ಮಾರನೇ ದಿನ ಅಥವಾ 3 ದಿನ ಕಳೆದರೂ ಆಗಬಹುದು. ನೀರು ಮಾತ್ರ ದಿನವೂ ಬದಲಾಯಿಸಬೇಕು. ಹುಳಿ ನೀರು ತೆಗೆದು, 4 ಲೀಟರು ಹಾಕಿ ಚೆನ್ನಾಗಿ ಕದಡಿ. ಸಕ್ಕರೆ ಹಾಕಿ ಚೆನ್ನಾಗಿ ಮಗುಚಿ ಒಲೆಯ ಮೇಲೆ ಇಟ್ಟು ಕೈಯಾಡಿಸುತ್ತಾ ಇದ್ದು ಗಟ್ಟಿಯಾಗಿ ಕಣ್ಣು ಕಣ್ಣು ಆಗುವಾಗ ತಳಬಿಟ್ಟು ತುಪ್ಪ ಬಿಡುತ್ತದೆ. ಈ ಮೊದಲೇ ಬಣ್ಣ, ಗೋಡಂಬಿ, ಏಲಕ್ಕಿ ಪುಡಿ ಹಾಕಿಕೊಳ್ಳಿ. ಆಮೇಲೆ ಒಳ್ಳೆಯ ನಾರು ಆದ ಮೇಲೆ ತಟ್ಟೆಗೆ ಹರಡಿ. ಆರಿದ ಮೇಲೆ ತುಂಡು ಮಾಡಿ. ಈ ಹಲ್ವ ಕಾಯಿಸಲು 3 ಗಂಟೆ ಕಾಲ ಬೇಕಾಗುತ್ತದೆ. .
ಅಂಜೂರದ ಒಬ್ಬಟ್ಟು
ಬೇಕಾಗುವ ಸಾಮಗ್ರಿ: 100 ಗ್ರಾಂ ಮೈದಾಹಿಟ್ಟು , 50 ಗ್ರಾಂ ಚಿರೋಟಿ ರವೆ, 200 ಗ್ರಾಂ ಅಂಜೂರ, 200 ಗ್ರಾಂ ಬೆಲ್ಲ, 100 ಗ್ರಾಂ ಏಲಕ್ಕಿ ಪುಡಿ, ಸ್ವಲ್ಪ ಎಣ್ಣೆ.
ತಯಾರಿಸುವ ವಿಧಾನ: ಮೈದಾಹಿಟ್ಟು, ರವೆ, ಸ್ವಲ್ಪ ಎಣ್ಣೆ, ಅರಸಿನ ಹಾಕಿ ಕಣಕ ಕಲಸಿ ಮುಚ್ಚಿಡಿ. ಒಂದು ಗಂಟೆ ನೆನೆಸಿ. ಬಾಣಲೆಗೆ ನೀರು ಹಾಕಿ ಅಂಜೂರವನ್ನು ಸಣ್ಣ ಉರಿಯಲ್ಲಿ ಬೇಯಿಸಿ. ಬೆಲ್ಲವನ್ನು ಸೇರಿಸಿ. ಬೆಲ್ಲದ ಜೊತೆ ಬೆಂದ ಅಂಜೂರ ಹಾಕಿ ಮಿಕ್ಸಿಗೆ ಹಾಕಿ ರುಬ್ಬಿ. ನೀರು ಹಾಕಬಾರದು. ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ತೊಳಸಿ. ಹೂರಣ ಆದ ಮೇಲೆ ಏಲಕ್ಕಿ ಪುಡಿ ಹಾಕಿ ಕೆಳಗಿಡಿ. ನಂತರ ಉಂಡೆ ಮಾಡಿ ಕಣಕದೊಳಗೆ ಹೂರಣ ಇಟ್ಟು ಮಡಚಿ ತೆಳ್ಳಗೆ ಲಟ್ಟಿಸಿ. ಕಾದ ತವಾದ ಮೇಲೆ ಸಣ್ಣ ಉರಿಯಲ್ಲಿ 2 ಕಡೆ ಬೇಯಿಸಿ. ಈಗ ಬಿಸಿ ಬಿಸಿ ಒಬ್ಬಟ್ಟನ್ನು ಸವಿಯಲು ಬಲು ರುಚಿ.
ಚಾಕಲೇಟ್ ಲಾಡು
ಬೇಕಾಗುವ ಸಾಮಗ್ರಿ: 1 ಕಪ್ ಸ್ವಲ್ಪ ತರಿಯಾಗಿ ಪುಡಿ ಮಾಡಿದ ಬಿಸ್ಕೆಟ್ ಪುಡಿ, 1/2 ಕಪ್ ಚಾಕಲೇಟ್ ಪುಡಿ, 1/2 ಕಪ್ ಸಕ್ಕರೆಪುಡಿ, 2 ಚಮಚ ಪುಡಿಮಾಡಿದ ಕೊಬ್ಬರಿ ತುರಿ, 2 ಚಮಚ ತುಪ್ಪ , 1 ಚಮಚ, ಹಾಲು, ತುಪ್ಪದಲ್ಲಿ ಹುರಿದ ಗೋಡಂಬಿ 6-7.
ತಯಾರಿಸುವ ವಿಧಾನ: ಕೊಬ್ಬರಿಯನ್ನು ಮಿಕ್ಸಿಗೆ ಹಾಕಿ ಸ್ವಲ್ಪ ತರಿಯಾಗಿ ಪುಡಿ ಮಾಡಿ. ಒಂದು ಪಾತ್ರೆಗೆ ಬಿಸ್ಕೆಟ್ ಪುಡಿ, ಕೊಬ್ಬರಿ ಪುಡಿ, ಚಾಕಲೇಟ್ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಚೂರು, ತುಪ್ಪ , ಸಕ್ಕರೆ ಪುಡಿ, ಹಾಲು ಹಾಕಿ ಸರಿಯಾಗಿ ಬೆರೆಸಿ ಉಂಡೆ ಕಟ್ಟಿ. ಈಗ ರುಚಿಯಾದ ಚಾಕಲೇಟ್ ಲಾಡು ಸವಿಯಲು ಬಲು ರುಚಿ.
ಸೇಬು ಹಣ್ಣಿನ ಕೊಬ್ಬರಿ ಮಿಠಾಯಿ
ಬೇಕಾಗುವ ಸಾಮಗ್ರಿ: 4 ಕಪ್ ತೆಂಗಿನತುರಿ, ಸಿಪ್ಪೆ ತೆಗೆದು ರುಬ್ಬಿದ 2 ಸೇಬುಹಣ್ಣು , 2 ಕಪ್ ಸಕ್ಕರೆ, 1 ಚಮಚ ಏಲಕ್ಕಿ ಪುಡಿ, 4 ಚಮಚ ತುಪ್ಪ.
ತಯಾರಿಸುವ ವಿಧಾನ: ಒಂದು ದಪ್ಪ ತಳದ ಬಾಣಲೆಗೆ ಸೇಬುಹಣ್ಣಿನ ರಸ, ಸಕ್ಕರೆ, ತುಪ್ಪ ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ ಮಧ್ಯಮ ಗಾತ್ರದ ಉರಿಯಲ್ಲಿ ಕೈಯಾಡಿಸುತ್ತಾ ಇರಬೇಕು. ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ಸ್ವಲ್ಪ ಪುಡಿ ಮಾಡಬಹುದು. ಮಿಶ್ರಣ ಗಟ್ಟಿಯಾಗುತ್ತಾ ಬರುವಾಗ ಏಲಕ್ಕಿ ಪುಡಿಯನ್ನು ಹಾಕಿ. ಬಾಣಲೆಯಿಂದ ತಳ ಬಿಡುತ್ತಾ ಬರುವಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಸಮತಟ್ಟಾಗಿ ಮಾಡಿ. 5 ನಿಮಿಷಗಳ ನಂತರ ಚೌಕಾಕಾರವಾಗಿ ತುಂಡು ಮಾಡಿ. ರುಚಿಯಾದ ಸೇಬುಹಣ್ಣಿನ ಕೊಬ್ಬರಿ ಮಿಠಾಯಿ ಸವಿಯಲು ಸಿದ್ಧ.
ಖರ್ಜೂರ ಬರ್ಫಿ
ಬೇಕಾಗುವ ಸಾಮಗ್ರಿ: ಬೀಜ ತೆಗೆದ ಖರ್ಜೂರ ಹಣ್ಣು- 1/2 ಕೆಜಿ, ಸಕ್ಕರೆ- 2 ಚಮಚ, 1 ಹಿಡಿ ಗೋಡಂಬಿ, 7-8 ಮಾರಿ ಬಿಸ್ಕತ್.
ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು 1 ಚಮಚ ತುಪ್ಪ ಹಾಕಿ ಖರ್ಜೂರವನ್ನು ಹಾಕಿ ಬಿಸಿ ಮಾಡಿ. ಅದಕ್ಕೆ 1 ಚಮಚ ಸಕ್ಕರೆ ಸೇರಿಸಿ. ಮೆತ್ತಗಾದ ಖರ್ಜೂರವನ್ನು ಕಡುಗೋಲಿನಿಂದ ಜಜ್ಜಿ ಮುದ್ದೆ ಮಾಡಿ. ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಸಣ್ಣಗೆ ತುಂಡು ಮಾಡಿದ ಮಾರಿ ಬಿಸ್ಕತ್‌ನ್ನು ಖರ್ಜೂರದ ಮುದ್ದೆಗೆ ಸೇರಿಸಿ ಕಲಸಿ. ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಕಲಸಿದ ಮಿಶ್ರಣವನ್ನು ರೋಲ್ ಮಾಡಿ ಬಟರ್ ಪೇಪರಿನಲ್ಲಿ ಸುತ್ತಿ 15 ನಿಮಿಷ ಫ್ರಿಜ್‌ನಲ್ಲಿಡಿ. ನಂತರ ಈ ರೋಲ್‌ಗಳನ್ನು ವೃತ್ತಾಕಾರಕ್ಕೆ ತುಂಡು ಮಾಡಿ. ಪೌಷ್ಟಿಕವಾದ ರುಚಿಯಾದ ಖರ್ಜೂರ ಬರ್ಫಿ ಸವಿಯಲು ಸಿದ್ಧ.
ಸರಸ್ವತಿ ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.