ಕಿರುತೆರೆಯ ಗೃಹಿಣಿಯರು
Team Udayavani, Jun 21, 2019, 5:00 AM IST
ಸಾಂದರ್ಭಿಕ ಚಿತ್ರ
ಮೊನ್ನೆ ಹೊರಗೆ ಹೋದಾಗ ನಿರ್ಮಲಕ್ಕ ಸಿಕ್ಕಿದ್ದರು. ಬಹಳ ದಿನವಾಯಿತು ಸಿಗದೇ ಎನ್ನುತ್ತ ಮಾತನಾಡಿಸಿದೆ. ಆದರೆ, ಅವರು ಮಾತನಾಡಲು ಅಷ್ಟೇನೂ ಆಸಕ್ತಿ ಇಲ್ಲದವರಂತೆ ಎಲ್ಲದಕ್ಕೂ ಚುಟುಕಾಗಿ ಉತ್ತರಿಸುತ್ತಿದ್ದರು. ಮೊದಲೆಲ್ಲ ಗಂಟೆಗಟ್ಟಲೆ ಊರ ಹರಟೆ ಹೊಡೆಯುತ್ತ ನನ್ನ ತಲೆ ತಿನ್ನುತ್ತಿದ್ದ ನಿರ್ಮಲಕ್ಕ ಈಗ ನಾನೇ ಮಾತನಾಡಿಸಿದರೂ ಯಾವುದೋ ಅವಸರ, ಏನೊ ಚಡಪಡಿಕೆಯಲ್ಲಿರುವಂತೆ ಗಳಿಗೆಗೊಮ್ಮೆ ತಮ್ಮ ವಾಚಿನಲ್ಲಿ ಸಮಯ ನೋಡಿಕೊಳ್ಳುತ್ತಿದ್ದರು. ನಾನು, “”ಎಲ್ಲಿಗಾದ್ರೂ ಹೋಗ್ಲಿಕ್ಕಿದೆಯಾ ನಿರ್ಮಲಕ್ಕ” ಎಂದಾಗ, “”ಹೋಗ್ಲಿಕ್ಕಿಲ್ಲ. ಆದರೆ ಟಿವಿಯಲ್ಲಿ ಕಿನ್ನರಿ ಬರೋ ಸಮಯ ಆಗ್ತಾ ಇದೆ. ಅದರ ನಂತರ ಪುಟ್ಟಗೌರಿ. ನಂತರ ಲಕ್ಷ್ಮೀಬಾರಮ್ಮದಲ್ಲಿ ಇವತ್ತೇನಾಗುತ್ತೆ ನೋಡಬೇಕು, ನಾನಿನ್ನು ಬರಲಾ. ನಿನಗೂ ಧಾರಾವಾಹಿ ನೋಡ್ಲಿಕ್ಕಿರಬಹುದಲ್ವಾ?” ಎನ್ನುತ್ತ ನನ್ನ ಉತ್ತರಕ್ಕೂ ಕಾಯದೆ ಹೊರಟೇ ಬಿಟ್ಟರು. ಅಬ್ಟಾ ಈ ಕಿರುತೆರೆಯ ಆಕರ್ಷಣೆಯೆ ಎನಿಸಿತು ನನಗೆ.
ಇತ್ತೀಚೆಗೆ ಕಿರುತೆರೆಯ ಸಾಲುಸಾಲಾಗಿ ಬಿತ್ತರಿಸುತ್ತಿರುವ ಧಾರಾವಾಹಿಗಳಲ್ಲಿ ಹೆಚ್ಚಿನವುಗಳು ಅಸಹಜ ಕ್ರೌರ್ಯ, ಸೆಂಟಿಮೆಂಟಲ್ ಕಥೆಗಳಿಗೆ ಒಂದಷ್ಟು ಉಪ್ಪುಖಾರದ ಲೇಪಕೊಟ್ಟು ನಿರ್ಮಿಸಿ ನೋಡುವವರ ಸಮಯ ವ್ಯಯಿಸುವ ವ್ಯರ್ಥಾಲಾಪಗಳಾಗಿವೆ. ಎಂದೂ ಮುಗಿಯದ ಇಂತಹ ಅಸಂಬದ್ಧ ಧಾರಾವಾಹಿಗಳು ಮನೆಯ ಗೃಹಿಣಿಯಲ್ಲಿರಬೇಕಾದ ಆದರ್ಶ ಗುಣಗಳನ್ನೆಲ್ಲ ಮೈವೆತ್ತಿಕೊಂಡು ಬಂದಂತಿರುವ ನಾಯಕಿಯ ಪಾತ್ರಕ್ಕೆ ಎದುರಾಗಿ ಅವಳನ್ನು ಶೋಷಿಸಲೆಂದೇ ಸೃಷ್ಟಿಯಾದ ಜಬರ್ದಸ್ತ್ ಖಳನಾಯಕಿಯರು “ಹೆಣ್ಣಿಗೆ ಹೆಣ್ಣೇ ಶತ್ರು’ ಎಂಬ ತಥಾಕಥಿತ ನಂಬಿಕೆಯ ಪ್ರಾಯೋಜಕರಾಗಿರುತ್ತಾರೆ. ಈ ಖಳನಾಯಕಿಯರು ಯಾವಾಗಲೂ ದೊಡ್ಡ ದೊಡ್ಡ ಕಂಪೆನಿಯ ಮಾಲಕಿಣಿಯರು. ಬಾಯಿ ತೆರೆದರೆ ಕೋಟಿ ಲೆಕ್ಕದಲ್ಲಿ ಮಾತು. ಇವರು ಚಿಟಿಕೆ ಹಾರಿಸಿದಾಗ ಸುಪಾರಿ ಗೂಂಡಾಗಳು ಪ್ರತ್ಯಕ್ಷರಾಗುತ್ತಾರೆ. ಅತಿಯಾದ ಆಭರಣ ಹಾಗೂ ಅಬ್ಬರದ ಡ್ರೆಸ್‌ನಲ್ಲಿರುವ ಖಳನಾಯಕಿ ಸೂಟ್‌ಕೇಸ್‌ನಿಂದ ನೋಟಿನ ಕಟ್ಟನ್ನು ತೆಗೆದು ತೆಗೆದು ಈ ಗೂಂಡಾಗಳ ಮುಖಕ್ಕೆ ಎಸೆಯುತ್ತಿರುತ್ತಾಳೆ. ನಾಯಕಿಯಾದವಳು ಎಲ್ಲವೂ ಗೊತ್ತಿದ್ದೂ ಒಳಗೇ ಅದುಮಿಟ್ಟುಕೊಂಡು ಬಾಯಿಬಿಡದೆ ಅಳುತ್ತ ಬಕೆಟ್ ಕಣ್ಣೀರು ಸುರಿಸುತ್ತಿರುತ್ತಾಳೆ. ಇಂಥ ಧಾರಾವಾಹಿಗಳನ್ನು ವರ್ಷಗಟ್ಟಲೆ ಎಳೆದರೂ ಮತ್ತು ಬೇಸರವಿಲ್ಲದೆ ನೋಡುವ ಗೃಹಿಣಿಯರು ಆ ಧಾರಾವಾಹಿಯ ಪಾತ್ರಗಳಲ್ಲಿ ತಮ್ಮನ್ನು ಕಾಣಲು ತೊಡಗುತ್ತಾರೆ. ಸದಾ ಅಳುತ್ತಿರುವ ನಾಯಕಿಯನ್ನು ನೋಡಿ “ಅಯ್ಯೋ ಪಾಪ… ನನ್ನ ಹಾಗೆ’ ಅಂದುಕೊಳ್ಳುತ್ತಾರೆ. ಖಳನಾಯಕಿಯನ್ನು ಬೈದುಕೊಳ್ಳುತ್ತಲೇ ಆಕೆಯ ಅಬ್ಬರದ ಅಲಂಕಾರಕ್ಕೆ ಮರುಳಾಗುತ್ತಾರೆ.
ಒಟ್ಟಾರೆ, ಈಗ ಮನೆಯಲ್ಲಿರುವ ಹೆಚ್ಚಿನ ಗೃಹಿಣಿಯರು ಸಂಜೆಯ ನಂತರ ಕಿರುತೆರೆ ಧಾರಾವಾಹಿಯಲ್ಲಿ ಮುಳುಗಿ ಹೋಗಿರುತ್ತಾರೆ. ಕೆಲವರಿಗೆ ಟಿವಿ ನೋಡುತ್ತಲೇ ತಿನ್ನುವ ಅಭ್ಯಾಸವೂ ಬೆಳೆದು ವ್ಯಾಯಾಮವಿಲ್ಲದೆ ಕೊಬ್ಬು , ಬೊಜ್ಜು , ಕೊಲೆಸ್ಟರಾಲ್ ಎಂದೆಲ್ಲ ಔಷಧಿಗಳಿಗೆ ಒಂದಷ್ಟು ಹಣ ಸುರಿಯಲಾಗುತ್ತಿದೆ.
ಕಿರುತೆರೆಯಲ್ಲಿ ಮನೆಯ ಗೃಹಿಣಿಯನ್ನು ಅಸಹಜವಾಗಿ ವಿಜೃಂಭಿಸಿ, ಅತಿ ಕ್ರೌರ್ಯ ಅಥವಾ ಅತಿ ಸಹನೆಯ ತೊತ್ತಾಗುವಂತೆ ಚಿತ್ರಿಸುತ್ತಾರೆ. ಇಂತಹ ಧಾರಾವಾಹಿಗಳನ್ನು ಕಣ್ಣವೆಯಿಕ್ಕದೆ ನೋಡುವ ಗೃಹಿಣಿಯರು ಈ ಅಸ್ವಾಭಾವಿಕ ವರ್ತುಲದಲ್ಲಿ ಕಳೆದುಹೋಗಿ, ಯಾವ ಗೊತ್ತು ಗುರಿಯೂ ಇಲ್ಲದ ಆಸೆಯಿದ್ದ ಆಲಾಪನೆಯಲ್ಲಿ ತೊಡಗಿಕೊಂಡ ಪ್ರಳಯಾಂತಕ ಧಾರಾವಾಹಿಗಳಿಂದಾಗಿ ಮಾನಸಿಕ ಪ್ರಭಾವಕ್ಕೊಳಗಾಗುವುದು ಸಹಜ. ಗೃಹಿಣಿ ತನ್ನ ಒಳಗಿರಬಹುದಾದ ಸೃಜನಶೀಲ ಭಾವಗಳ, ಪ್ರತಿಭೆಯ ಹೊಳಹುಗಳ ಶೋಧ ಕಾರ್ಯಕ್ಕೇ ಹೋಗದೆ ಎಲ್ಲ ಒಪ್ಪಿಕೊಂಡು ಕಿರುತೆರೆಯ ದಾಸರಾಗುತ್ತ ಹೋಗುವುದರಿಂದಲೇ ಏನೋ ಇಂತಹ ಧಾರಾವಾಹಿಗಳು ಒಮ್ಮೆ ಪ್ರಾರಂಭವಾದರೆ ಎಂದೂ ಮುಗಿಯುವುದೇ ಇಲ್ಲ.
ಈ ಕಿರುತೆರೆ ಪರಿಚಯವಾದ ಹೊಸತರಲ್ಲಿ ಉತ್ತಮವೆನಿಸುವ, ಮನಕ್ಕೆ ಮುದವಾಗಿ ರಂಜಿಸಿ, ಲಘುವಾದ ಚಿಂತನೆಗೆ ಹೆಚ್ಚುವಂತಹ ಧಾರಾವಾಹಿಗಳು ಪ್ರಸ್ತಾರವಾಗುತ್ತಿದ್ದವು. ಆದರೆ, ಈಗೆಲ್ಲ ಸ್ತ್ರೀಕೇಂದ್ರಿತ ಕ್ರೌರ್ಯ, ದ್ವೇಷ, ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದನ್ನು ಸಮರ್ಥಿಸುವ ಅಸಂಬದ್ಧ ಕತೆಗಳೇ ತುಂಬಿಹೋಗಿವೆ. ಅಂದರೆ ಇದನ್ನು ತಯಾರಿಸುವವರು ಬಿಂಬಿಸುವುದೇನೆಂದರೆ ಇಂತಹ ಧಾರಾವಾಹಿಗಳನ್ನು ಮನೆಯಲ್ಲಿರುವ ಗೃಹಿಣಿಯರು ಮಾತ್ರ ನೋಡುತ್ತಾರೆ. ಈ ಗೃಹಿಣಿಯರು ಯಾವುದೇ ಯೋಚಿಸುವ ಸಾಮರ್ಥ್ಯವಿಲ್ಲದವರು, ಚಿಂತನಾ ವಿಹೀನರು, ತಾರ್ಕಿಕತೆ, ಪ್ರಶ್ನೆ, ವಿರೋಧಗಳೊಂದೂ ಇಲ್ಲದ ಅಶಿಕ್ಷಿತ ಜೀವಂತ ಕಲ್ಲುಬಂಡೆಗಳು ಎಂದು. ಇಂತಹ ಜೀವಿಗಳಿಗೆ ಏನು ಉಣಬಡಿಸಿದರೂ ಎಂತಹ ಕಳಪೆ ಕಟ್ಟುಕತೆ ಸೃಷ್ಟಿಸಿದರೂ ನಡೆಯುತ್ತದೆ ಎಂಬ ಅಸಡ್ಡಾಳ ಭಾವ ಈ ಧಾರಾವಾಹಿ ಕತೃìಗಳದು. ಮನೆಯಲ್ಲಿರುವ ಈ ಗೃಹಿಣಿಯರು ಎಂತಹ ಕೀಳುಮಟ್ಟದ ಸರಕಾದರೂ ವಿರೋಧಿಸದೆ ಬೇಸರಿಸದೆ ನೋಡಿ ತಮ್ಮ ಟಿಆರ್‌ಪಿ ವೃದ್ಧಿಸಲು ಸಹಕರಿಸುತ್ತಾರೆ ಎಂದು ಭಾವಿಸಿ ಈ ಧಾರಾವಾಹಿ ಎಂಬ ಕೃತಕ ದೃಶ್ಯಗಳ ರೂಪಕವನ್ನು ಓತಪ್ರೋತವಾಗಿ ಬಿಡುಗಡೆ ಮಾಡುತ್ತಲೇ ನಿರ್ಮಾಪಕರು ತಮ್ಮ ಜೇಬಿನ ಭಾರ ಹೆಚ್ಚಿಸಿಕೊಳ್ಳುತ್ತಿರುವುದು ಕಹಿಯಾದರೂ ಸತ್ಯ ಎಂದು ಮೇಲ್ನೋಟಕ್ಕೆ ಅರಿವಿಗೆ ಬರುತ್ತದೆ. ಇದನ್ನು ನೋಡುವ ಮನಸ್ಸುಗಳೂ ಗೊಂದಲಮಯವಾಗಿ ಎಂದಾದರೊಂದು ದಿನ ಈ ಮುಗಿಯದ ಕತೆಯಲ್ಲಿ ಶಾಂತಿ ಸಿಗಬಹುದೇನೊ ಎಂಬ ನಿರೀಕ್ಷೆಯಲ್ಲಿಯೇ ಗೊತ್ತಾಗದಂತೆ ತಿಂಗಳುಗಳ, ವರ್ಷಗಳ ಹಳಿಯಲ್ಲಿ ಈ ಕಾಯುವಿಕೆಯ ರೈಲು ಉರುಳುತ್ತಲೇ ಇರುತ್ತದೆ.
ಕಿರುತೆರೆಯಂತೆಯೇ ಬೆಳ್ಳಿತೆರೆಯ ಮೇಲೂ ಗೃಹಿಣಿಯ ಪಾತ್ರದ ಗೋಳು ಅದೇ ರೀತಿ ಚಿತ್ರಿತವಾಗಿರುತ್ತದೆ. ಮನೆಯೆಂಬ ಕೃತಕ ದೃಶ್ಯದಲ್ಲಿ ಯಾರಾದರೂ ಇಬ್ಬರು ಸಂಭಾಷಿಸುತ್ತಲೊ, ಜಗಳ ಮಾಡುತ್ತಲೋ ಇದ್ದರೆ ಮನೆಯ ಬಾಕಿ ಸದಸ್ಯರೆಲ್ಲ ಸಾಲಾಗಿ ಪ್ರದರ್ಶನದ ಗೊಂಬೆಗಳಂತೆ ನಿಂತುಕೊಳ್ಳುವುದು. ಹೆಚ್ಚಾಗಿ ಸಿನಿಮಾ ನಾಯಕಿಯ ಪಾತ್ರ ಆದರ್ಶಗುಣಗಳ ಖಣಿಯಾಗಿಯೇ ಇರುತ್ತದೆ. ಅಂದರೆ ನಮ್ಮ ಸಮಾಜದಲ್ಲಿ ಗೃಹಿಣಿಯರಿಗಿರಬೇಕಾದ ತಥಾಕಥಿತ ನೀತಿ-ನಿಯಮಗಳ ಪಟ್ಟಿಯ ಎಲ್ಲ ಉತ್ತಮ ಗುಣಗಳನ್ನು ಹೊಂದಿರುವ ಸಿನಿಮಾ ನಾಯಕಿ ಕಣ್ಣೀರ ಹೊಳೆಯನ್ನೇ ಹರಿಸುತ್ತಾಳೆ. ಎಲ್ಲವನ್ನೂ ಅವಡುಗಚ್ಚಿ ಸಹಿಸಿಕೊಳ್ಳು ತ್ತಾಳೆ. ಪ್ರತಿಭಟನೆಯ ಸ್ವರವೇ ಅವಳಿಂದ ಹೊರಡುವುದಿಲ್ಲ. ಎಷ್ಟು ಕಷ್ಟ ಕೊಟ್ಟರೂ ತಾಳಿಕೊಳ್ಳುತ್ತಾಳೆ. (ಉದಾ: ಸತಿ ಸಕೂಬಾಯಿ). ಎಲ್ಲರ ಎದುರೂ ನಗುವಿನ ಮುಖವಾಡ ಧರಿಸಿ ಏಕಾಂತದಲ್ಲಿ ಕಣ್ಣೀರ ಕೋಡಿ ಹರಿಸುತ್ತಾಳೆ.
ಕಿರುತೆರೆಯಾಗಲಿ, ಸಿನಿಮಾ ಆಗಲಿ ಗೃಹಿಣಿಯನ್ನು ಮತ್ತೆ ಮತ್ತೆ ಅಬಲೆ, ಅಸಹಾಯಕಿ, ಮೌನವಾಗಿ ಕಷ್ಟಕೋಟಲೆಗಳನ್ನು ಸಹಿಸಿಕೊಳ್ಳುವ ಶೋಷಿತೆ, ಮುಗ್ದೆ ಎಂದೆಲ್ಲ ಚಿತ್ರಿಸುವುದರಿಂದ ಆಕೆ ಸಮರ್ಥ ಸಾಧಕಿಯಾಗಿಯೂ ಬದುಕಬಲ್ಲಳು ಎಂಬ ಆಕೆಯ ಮಹತ್ವಾಕಾಂಕ್ಷೆಯ ಇನ್ನೊಂದು ಮುಖವನ್ನು ಸಂಪೂರ್ಣವಾಗಿ ಅವಗಣಿಸಲಾಗುವುದು. ಇಂತಹ ಧಾರಾವಾಹಿ ಸಿನಿಮಾಗಳನ್ನು ನೋಡುವ ಗೃಹಿಣಿ ತಾನು ಏನು ಎಂದು ಒಮ್ಮೆಯಾದರೂ ತನ್ನೊಳಗೆ ಇಣುಕಿ ನೋಡುವ ಗೋಜಿಗೇ ಹೋಗದೆ ಕೈಲಾಗದೆ ಕಣ್ಣೀರು ಸುರಿಸುವ ಹೆಣ್ಣನ್ನೇ ಆದರ್ಶಪ್ರಾಯವಾಗಿಸಿಕೊಂಡು ಅಭದ್ರ ಮನಸ್ಥಿತಿಗೆ ಜಾರಿದರೆ ಇದಕ್ಕೆ ಯಾರು ಹೊಣೆ, ಗೃಹಿಣಿಯ ಆತ್ಮವಿಶ್ವಾಸಕ್ಕೆ ಸವಾಲೊಡ್ಡುವ ಇಂತಹ ಮಾಧ್ಯಮಗಳು ಎಂತಹ ಸಮಾಜ ಎಂತಹ ಮನೆಯನ್ನು ನಿರೂಪಿಸಲು ಸಾಧ್ಯ !
ವಿಜಯಲಕ್ಷ್ಮಿ ಶ್ಯಾನ್‌ಭೋಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.