ಆಶೀರ್ವಾದವೇ ಉಡುಗೊರೆ
Team Udayavani, Jun 14, 2019, 5:37 AM IST
ಆಚೆ ಬೈಲಿನ ಸುಶೀಲಕ್ಕನ ಮಗಳು ಗೀತಾಳಿಗೆ ಗಂಡು ಒದಗಿ ಬಂದಿದೆಯಂತೆ. ಮೊನ್ನೆ ಮಾತು ಕತೆ ನಡೆದು, ಆಚೆ ಈಚೆ ಹೋಗಿ ಬಂದು ಎಲ್ಲಾ ಆಗಿ ಈಗ ಲಗ್ನ ಕೂಡ ನಿಶ್ಚಯ ಆಗಿದೆಯಂತೆ. ಸಂಜೆಯ ಜಗಲಿಕಟ್ಟೆಯ ಸಭೆಯಲ್ಲಿ ಈ ಹೊಸ ವರದಿಯೊಂದು ಕಿವಿಗೆ ಬಿದ್ದದ್ದೇ ತಡ, ಎಲ್ಲ ಹೆಂಗಳೆಯರ ಕಿವಿಗಳು ಚುರುಕಾಗಿ ಮನಸುಗಳು ಪ್ರಫುಲ್ಲಗೊಳ್ಳುತ್ತವೆ. ಮತ್ತೂಮ್ಮೆ ಮದುವೆ ಮನೆಯ ಕೆಲಸದ ನೆಪದಲ್ಲಿ ಎಲ್ಲರೊಂದಿಗೆ ಕೂಡಿಯಾಡುವ ಅವಕಾಶ. ಪಕ್ಕದ ಮನೆಯಲ್ಲಿಯೋ, ಅನತಿ ದೂರದ ಸಂಬಂಧಿಕರ ಮನೆಯಲ್ಲಿಯೋ ಮದುವೆ ಎದ್ದಿತು ಅಂದರೆ ಅಲ್ಲರ ಮನೆಯಲ್ಲಿಯೂ ಸಡಗರವೇ.
ಹೆಂಗಳೆಯರಿಗೆ ದುಪ್ಪಟ್ಟು ಕೆಲಸ. ಮದುವೆ ಮನೆಯ ಪೂರ್ವ ತಯಾರಿಯ ಕೆಲಸಗಳಿಗೆ ಭಾಗಿಯಾಗಬೇಕು, ಇದೇ ದಾರಿಯಲ್ಲಿ ನೆಂಟರಿಷ್ಟರು ಹೋಗುವ ಕಾರಣ ಮನೆಗೊಮ್ಮೆ ಭೇಟಿ ಕೊಡದೆ, ಕುಶಲ ವಿಚಾರಿಸದೆ ಯಾರೂ ಮುಂದಕ್ಕೆ ಅಡಿಯಿಡಲಾರರು. ಹಾಗಾಗಿ, ತಮ್ಮ ಮನೆಯ ಸುತ್ತಮುತ್ತ ಎಲ್ಲವೂ ಅದಕ್ಕೂ ಮೊದಲೇ ಒಪ್ಪ ಓರಣಗೊಳ್ಳಬೇಕಿದೆ. ಹಬ್ಬಕ್ಕೆಂದು ಒಂದಾವರ್ತಿ ಸಾರಿಸಿದ ನೆಲದ ಸೆಗಣಿ ಹಕ್ಕಳೆಗಳೆಲ್ಲ ಎದ್ದುಕೊಂಡಿವೆ. ಮತ್ತೂಮ್ಮೆ ಒಪ್ಪವಾಗಿ ನೆಲ ಅರೆದು ಸೆಗಣಿ ಸಾರಿಸಿ ಶುಚಿಗೊಳಿಸಬೇಕು. ಒಂದೇ ಎರಡೇ! ಅವರಿಗೆಲ್ಲ ಕೈತುಂಬಾ ಕೆಲಸ. ಅದರ ನಡುವೆಯೇ ಒಂದಷ್ಟು ಹೊಸ ಜವಳಿ ಖರೀದಿಯಾಗಬೇಕು. ಅಕ್ಕಪಕ್ಕದವರೆಲ್ಲ ಸಣ್ಣ ಜರಿಯಂಚಿನ ಸೀರೆಯಲ್ಲಿ ಬರುವಾಗ ತಾನು ಅದೇ ಮಾಸಲು ಬಣ್ಣದ ಚೌಕುಳಿ ಸೀರೆಯಲ್ಲಿ ಪ್ರತೀ ಸಾರಿಯೂ ಕಾಣಿಸಿಕೊಂಡರೆ ಅದೆಷ್ಟು ಚೆನ್ನ ಇರುತ್ತೆ? ಗಂಡನಿಗೆ ಪೂಸಿ ಹೊಡೆದು ಈ ಸಲವಾದರೂ ಒಂದೊಳ್ಳೆಯ ಸೀರೆಯಾದರೂ ಕೊಂಡುಕೊಳ್ಳಬೇಕು. ಮತ್ತದೇ ಹಬ್ಬಕ್ಕೆಂದು ಹಾಕಿಸಿಕೊಂಡ ಗಿಲೀಟು ಬಳೆಗಳೆಲ್ಲ ಮಸಿ ಪಾತ್ರೆ ತಿಕ್ಕಿ ತಿಕ್ಕಿ ಗಿಲೀಟನ್ನೆಲ್ಲ ತಿಂದು ಹಾಕಿವೆ. ಹೇಗೂ ಮದುಮಗಳಿಗೆ ಬಳೆ ತೊಡಿಸಲು ಬಳೆಗಾರ ಬಂದೇ ಬರುತ್ತಾನಲ್ಲ? ಆಗ ಎಲ್ಲರ ಕಣ್ಣು ತಪ್ಪಿಸಿ ಜೀರಿಗೆ ಡಬ್ಬಿಯಲ್ಲಿ ಅಡಗಿಸಿಟ್ಟ ಒಂದಷ್ಟು ಚಿಲ್ಲರೆ ಕಾಸುಗಳನ್ನು ಸೇರಿಸಿ ಬಂಗಾರ ಬಣ್ಣದ ಗಿಲೀಟು ಬಳೆಯನ್ನೇ ಕೊಂಡು ಕೊಳ್ಳಬೇಕು.
ಹೀಗೆ ಮುಗಿಯದಷ್ಟು ಬೇಕುಗಳು, ಮಾಡಲೇಬೇಕಾದ ಸಿದ್ಧತೆಗಳು ಮೆರವಣಿಗೆ ಹೊರಡುತ್ತವೆ. ನೆರೆಮನೆಯ ಒಂದು ಮದುವೆಯ ಸುತ್ತ ಆಸುಪಾಸಿನ ಎÇÉಾ ಹೆಮ್ಮಕ್ಕಳ ಸಂಭ್ರಮಗಳು ಗರಿಗೆದರಿಕೊಳ್ಳುತ್ತವೆ. ಒಂದು ಹಳ್ಳಿಯಿಡೀ ಸಂಭ್ರಮದಲ್ಲಿ ಮೀಯುತ್ತಿದ್ದಂತೆ ಗೋಚರಿಸುತ್ತದೆ. ಇನ್ನು ಗಂಡಸರು ಅದಾಗಲೇ ಏನನ್ನು ಹೇಳಿಕೊಳ್ಳದೆಯೇ ಚಪ್ಪರ ಹಾಕುವುದು, ಕಂಬ ನೆಡುವುದು, ಹೀಗೆ ಇನ್ನಿತರ ಮದುವೆ ಮನೆಯ ತಯಾರಿಗಳಿಗೆ ತೆರಳಿಯಾಗಿರುತ್ತಿತ್ತು. ಒಂದೊಂದು ಮನೆಯವರಂತೆ ಒಬ್ಬೊಬ್ಬರು ಒಂದೊಂದು ಕೆಲಸದಲ್ಲಿ ನೆರವಾಗುತ್ತಿದ್ದರು. ಹುಡುಗಿಗೆ ಚಿನ್ನಾಭರಣ ಕೊಳ್ಳುವಂಥ ಅನಿವಾರ್ಯ ಖರ್ಚು ಬಿಟ್ಟರೆ, ಉಳಿದಂತೆ ಯಾವ ಹೊರೆಯೂ ಅಷ್ಟಾಗಿ ಮದುಮಗಳ ಅಥವಾ ಮದುಮಗನ ಮನೆಯವರ ತಲೆಯ ಮೇಲೆ ಹೊರೆ ಬೀಳುತ್ತಿರಲಿಲ್ಲ. ಊಟಕ್ಕೆ ಬಾಳೆ ಎಲೆ ಒಬ್ಬರ ಮನೆಯಿಂದ, ಅಡುಗೆಗೆ ಪಾತ್ರೆ-ಪಗಡಿ ಮತ್ತೂಂದು ಮನೆಯಿಂದ, ಮೇಜು, ಕುರ್ಚಿ… ಹೀಗೆ ಕೊಡುಕೊಳ್ಳುವಿಕೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕೊಡುವುದು ತೆಗೆದುಕೊಳ್ಳುವುದರಲ್ಲಿ ಯಾರಿಗೂ ಮನಸಿನಲ್ಲಿ ವೃಥಾ ಚಿಂತೆಯ ಇನಿತು ಸೋಂಕು ಕೂಡ ಇಲ್ಲ. ಯಾಕೆಂದರೆ, ಮುಂದೊಂದು ದಿನ ಇದೇ ಉಪಕಾರವನ್ನು ಅವರಿಗೂ ಎಲ್ಲರೂ ನೀಡುವವರೇ ಅಥವಾ ಅದರ ಅಗತ್ಯ ಬೀಳದಿದ್ದರೂ ಮತ್ತೂಬ್ಬರಿಗೆ ಇಂತಹ ಸಮಾರಂಭಗಳಿಗೆ ಕೊಡಲು ಯಾರ ಮನಸು ಕೂಡ ಹಿಂಜರಿಯುತ್ತಿರಲಿಲ್ಲ. ಅದೆಷ್ಟೇ ವೈಮನಸ್ಸು ಇದ್ದರೂ ಸಮಾರಂಭದ ಸಂಭ್ರಮದಲ್ಲಿ ಎಲ್ಲರೂ ಭಾಗಿಗಳಾಗುತ್ತಿದ್ದರು ಮತ್ತು ಅದೇ ಕಾರ್ಯಕ್ರಮ ಎಲ್ಲರ ಹೃದಯವನ್ನು ಅರಿತುಕೊಳ್ಳಲು, ಬೆಸೆದುಕೊಳ್ಳಲು ಸೇತುವಾಗುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಯಾರಾದರೂ ಆಗಿ ಬರದ ನೆರೆಹೊರೆಯವರಿದ್ದರೆ, ಅವರಿಗೆ ಮೊದಲೇ ವೀಳ್ಯ ಕೊಟ್ಟು ಕರೆಯುವಷ್ಟು ವಿಶಾಲ ಹೃದಯವಂತಿಕೆಯನ್ನು ಮದುವೆಮನೆ ಕಲಿಸಿ ಕೊಡುತ್ತಿತ್ತು. ಹೀಗೆ ಸಿದ್ಧಗೊಳ್ಳುವ ಒಂದು ಮದುವೆಯ ಹಿಂದೆ ಇಡೀ ಹಳ್ಳಿಯ ಜನರ ಅದರಲ್ಲೂ ಹೆಂಗಳೆಯರ ಓಡಾಟ ಸಾಕಷ್ಟು ಇರುತ್ತಿತ್ತು.
ನಮ್ಮ ಮಗನ ಮದುವೆಗೆ ದೊಡ್ಡ ಪಾತ್ರೆಯೊಂದು ಉಡುಗೊರೆ ಕೊಟ್ಟಿದ್ದಾರೆ. ಹಾಗಾಗಿ, ಅದಕ್ಕೆ ಸಮಾನಾದ ಬೇರೊಂದು ಉಡುಗೊರೆಯನ್ನು ಕೊಡಬೇಕು ಎಂಬುದಾಗಿ ಒಬ್ಬರ ಮನಸ್ಸು ಚಿಂತಿಸಿದರೆ, ಮತ್ತೂಬ್ಬರದು ಈ ಉಪಯೋಗಕ್ಕೆ ಬಾರದ ರಾಶಿ ಪಾತ್ರೆಗಳನ್ನು ಗೋಣಿಯಲ್ಲಿ ಕಟ್ಟಿ ಇಟ್ಟುಕೊಂಡು ಏನು ಮಾಡುವುದು? “ಕವರು ಕೊಟ್ಟು ಬಿಡುವ. ಒಂದಷ್ಟು ಅವರ ಖರ್ಚಿಗಾದರೂ ಒದಗಿ ಬರುತ್ತದೆ’ ಎಂಬ ಯೋಚನೆ. ಮದುವೆಯ ಹಿಂದಿನ ದಿನವಂತೂ ಹಳ್ಳಿಯ ಎಲ್ಲ ಹೆಂಗಳೆಯರದ್ದೇ ಕಾರುಬಾರು. ಮದುವೆಯ ನೆಪದಲ್ಲಿ ಎಲ್ಲರೂ ಒಂದೆಡೆ ಕಲೆತು, ಕಷ್ಟ- ಸುಖ ಹಂಚಿಕೊಂಡು ಒಂದು ವರುಷಕ್ಕಾಗುವಷ್ಟು ಖುಷಿಯಲ್ಲಿ ಮನಸ್ಸನ್ನು ತೋಯಿಸಿ ಮತ್ತದೇ ಹುರುಪನ್ನು ಎದೆಯೊಳಗೆ ಇಟ್ಟುಕೊಂಡು ಲವಲವಿಕೆಯಿಂದ ಕೆಲಸ ಕಾರ್ಯಗಳಲ್ಲಿ ಕಳೆದು ಹೋಗಿ ಬಿಡುತ್ತಿದ್ದರು.
ಈಗ ಆ ಊರಿನ ಎಲ್ಲಾ ಯುವಕ-ಯುವತಿಯರಿಗೆ ಮದುವೆಯಾಗಿ, ಮಕ್ಕಳಾಗಿ ಅವರಿಗೂ ಲಗ್ನ ಕೂಡಿ ಬರುತ್ತಿದೆ. ಮನೆಯಲ್ಲಿ ಸಮಾರಂಭ ನಿಭಾಯಿಸುವುದು ಕಷ್ಟ, ಅದೂ ಅಲ್ಲದೆ ಬಂದು ಹೋಗುವವರನ್ನು ಸತ್ಕರಿಸುವುದು ಇನ್ನೂ ತ್ರಾಸದ ಕೆಲಸ. ಒಪ್ಪ ಓರಣ ಮಾಡಿಟ್ಟ ಮನೆ ಅರೆಗಳಿಗೆಯಲ್ಲಿ ಕೊಳಕಾಗಿ ಬಿಡುತ್ತದೆ. ಹಾಗಾಗಿ ದೂರದೃಷ್ಟಿಯಿಟ್ಟುಕೊಂಡು ದೂರದ ಛತ್ರದಲ್ಲಿ ಮದುವೆ ಇಟ್ಟುಕೊಂಡು ಧಾಂ ಧೂಂ ಆಗಿ ಮದುವೆ ಶಾಸ್ತ್ರ ಮುಗಿಸಿ ಬಿಡುತ್ತಾರೆ. ಇನ್ನು ಕೆಲವರಂತೂ ಯಾರಿಗೂ ಹೇಳದೆ ಸದ್ದಿಲ್ಲದೇ ಮದುವೆಯಾಗಿ ಮತ್ತೆ ದೊಡ್ಡ ಸುದ್ದಿಯಾಗುತ್ತಾರೆ. ಇನ್ನು ಕೆಲವರಂತೂ ಕೊಟ್ಟು ತೆಗೆದುಕೊಳ್ಳುವ ಉಸಾಬರಿಯೇ ಬೇಡ ಅಂತ ಆಮಂತ್ರಣ ಪತ್ರಿಕೆಯಲ್ಲಿ ಆಶೀರ್ವಾದವೇ ಉಡುಗೊರೆ ಅಂತ ನಮೂದಿಸಿ ನಿರಾಳವಾಗಿ ಬಿಡುತ್ತಾರೆ. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆದರೂ ಯಾರಿಗೆ ಯಾರು ಅನಿವಾರ್ಯವಲ್ಲದ ಈ ಹೊತ್ತಿನಲ್ಲಿ ಗಡಿ ಬಿಡಿಯಲ್ಲಿ ಮುಗಿದು ಹೋಗಿ ಬಿಡುವ ಮದುವೆಯ ಸಮಾರಂಭ ಮದುವೆ ಮನೆಯವರಿಗಷ್ಟೇ ಸಂಭ್ರಮವಾಗಿ ಉಳಿಯುತ್ತಿದೆ. ಆಮಂತ್ರಿತರು ಭೋಜನ ಸಮಯಕ್ಕಾಗುವಾಗ ನೇರ ಭೋಜನ ಶಾಲೆಗೆ ನುಗ್ಗಿ ಗಡದ್ದಾಗಿ ಊಟ ಪೂರೈಸಿ, ಬಂದಿದ್ದೇವೆ ಅಂತ ಪೊಟೋದವನ ಮುಂದೆ ಹಾಜರಿ ಹಾಕಿ ತುರ್ತಿನ ಕೆಲಸ ಬಾಕಿ ಉಳಿದಂತೆ ಓಡಿ ಬಿಡುತ್ತಾರೆ. ಹೆಚ್ಚಿನ ಕಡೆ ಗಂಡಸರಷ್ಟೇ ಮದುವೆ ಮುಗಿಸಿ ಬರುತ್ತಾರೆ. ಆಪ್ತ ವಲಯದ ಮದುವೆಗಳು ಬಿಟ್ಟರೆ ಹೆಂಗಳೆಯರೆಲ್ಲರೂ ಈ ಸಂಭ್ರಮವನ್ನು ಅನುಭವಿಸುವ ಕ್ಷಣಗಳಿಂದ ವಂಚಿತರಾಗುವ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ!
-ಸ್ಮಿತಾ ಅಮೃತರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.