ಹೆಣ್ಣು ಹಕ್ಕಿಯ ಹಾಡು
Team Udayavani, Dec 15, 2017, 1:49 PM IST
ಅಮ್ಮ ಹೇಳಿದ ಕತೆಯೊಂದು ನೆನಪಾಗುತ್ತಿದೆ. ಉಡುಪಿಯಲ್ಲಿ ಅಕ್ಕಮಠ ಎಂಬ ಪುರಾತನ ಮನೆಯಿದೆ. ಸುತ್ತಮುತ್ತಲಿನವರಿಗೆಲ್ಲ ಪ್ರೀತಿಯ ಪೇಪಿ (ದೊಡ್ಡಮ್ಮ)ಯಾಗಿದ್ದ ಇಳಿವಯಸ್ಸಿನ ಹೆಂಗಸೊಬ್ಬರು ಗಿಳಿಯೊಂದನ್ನು ಸಾಕಿದ್ದರಂತೆ. ಒಮ್ಮೆ ಮನೆಯವರೆಲ್ಲ ಪಡಸಾಲೆಯಲ್ಲಿ ಊಟಕ್ಕೆ ಕುಳಿತಿದ್ದ ಹೊತ್ತು. ಚಾವಡಿಯಲ್ಲಿ ಪಂಜರದಲ್ಲಿದ್ದ ಸಾರಿಕೆಯು ಹಠಾತ್ತನೆ, “ಪೇಪೀ ಕೇರೆ ಬಂತು… ಪೇಪೀ ಕೇರೆ ಬಂತು…’ ಎಂದು ಕಿರುಚಲಾರಂಭಿಸಿತಂತೆ. ಓಡಿ ಬಂದು ನೋಡಿದ್ರೆ ಕೇರೆ ಹಾವೊಂದು ಮಾಡಿನಿಂದಿಳಿದು ಪಂಜರವನ್ನು ಸುತ್ತು ಹಾಕಿದೆ! ಪಂಜರ ಅತ್ತಿಂದಿತ್ತ ಇತ್ತಿಂದತ್ತ ತೂಗಾಡುತ್ತಿದೆ, ಹೆದರಿ ಸಾವು ಬದುಕಿನ ನಡುವೆ ಹೊಯ್ದಾಡುವ ಗಿಳಿಯ ಪ್ರಾಣದಂತೆ. ಈ ಕೇರೆ ಹಾಗೂ ಗಿಳಿಯೆರಡೂ ನನಗೆ ರೂಪಕಗಳಂತೆ ಕಾಣುತ್ತವೆ. ಹೆಣ್ಣುಮಕ್ಕಳ ಅಪಹರಣ, ಅತ್ಯಾಚಾರ, ಕೊಲೆ, ಹಿಂಸೆ, ಆತ್ಮಹತ್ಯೆ, ಮರ್ಯಾದಾ ಹತ್ಯೆ… ಲೋಕವಾರ್ತೆಗಳನ್ನು ನಿತ್ಯ ಮಾಧ್ಯಮಗಳ ಮೂಲಕ ಕೇಳುತ್ತಿದ್ದೇವೆ. ಹಠಾತ್ತನೆ ಆವರಿಸುವ ಈ ಹೆಬ್ಟಾವುಗಳಿಂದ ರಕ್ಷಿಸಲೆಂದೇ ಅನಿವಾರ್ಯವಾಗಿ ತಮ್ಮ ಮನೆಯ ಕೂಸುಗಳನ್ನು ಮನುಷ್ಯ ಹಕ್ಕುಗಳನ್ನು ಕಸಿದುಕೊಂಡು ರೆಕ್ಕೆ ಕತ್ತರಿಸಿ ಪಂಜರದಲ್ಲಿಟ್ಟೇ ಮುದ್ದಿಸುವ ಕುಟುಂಬಗಳು ಇಂದಿಗೂ ಇವೆ.
ಪ್ರಸಿದ್ಧ ಲೇಖಕ ಕದಂಬಾಡಿ ಜತ್ತಪ್ಪ ರೈಯವರು ತಮ್ಮದೊಂದು ತುಳು ಕವನದಲ್ಲಿ ಹಸಿವಿಗೆ ಕಣ್ಣಿಲ್ಲ ಕಿವಿಯಿಲ್ಲ , ಹೊಟ್ಟೆ ಮಾತ್ರ ಎಂದಿದ್ದಾರೆ. ಹಸಿದವಳಿಗೇ ಗೊತ್ತು ಹಸಿವಿನ ಕಷ್ಟ! ಹೊಟ್ಟೆಗೆ ಹಿಟ್ಟಿಲ್ಲದ ಕಾಲ. ಇದ್ದರೂ ಅತ್ತೆಯ ಕೈಯಲ್ಲೇ ಅಧಿಕಾರವಿದ್ದ ಕಾಲ. ಅತ್ತೆ ಮನೆಯಲ್ಲಿಲ್ಲದ ಹೊತ್ತು. ಬೆಣ್ಣೆಯಲ್ಲಿ ಮುಳುಗಿಸಿ ಬಾಯಲ್ಲಿಟ್ಟ ಕಡುಬು ತುಂಡು ಇನ್ನೇನು ಗಂಟಲಿಂದ ಇಳಿಯಿತು ಎನ್ನುವಷ್ಟರಲ್ಲಿ ಅತ್ತೆಯು ಸೊಸೆಯ ಕುತ್ತಿಗೆ ಹಿಡಿದಳಂತೆ, ಸೊಸೆ ಸತ್ತೇಹೋದಳಂತೆ, ಎಕ್‌ತ್ ಹಕ್ಕಿ (ಬಿಕ್ಕಳಿಕೆ ಹಕ್ಕಿ)ಯಾದಳಂತೆ. ಬಿಕ್ಕಳಿಕೆ ಬರುವಂತೆ ಕೂಗುವ ಈ ಹಕ್ಕಿ ಹಟ್ಟಿ ಬಾಗಿಲಲ್ಲಿ ಕೂಗಿದ್ರೆ ಆಕಳ ಕೆಚ್ಚಲ ಹಾಲು ಬತ್ತಿ, ಹಾಲು ಬೆಣ್ಣೆಯಿಲ್ಲವಾಗುವುದಂತೆ. ಅದು ಕೂಗಲಿಕ್ಕಿಲ್ಲ ನನ್ನಜ್ಜಿ, “ಏನು? ಇಲ್ಲಿಂದ ಹೋಗ್ತಿಯಾ ಇಲ್ಲಾ ಸಟ್ಟುಗ ಒಲೆಗೆ ಹಾಕ್ಲಾ?’ ಎನ್ನುತ್ತಿದ್ದ ನೆನಪು. ಬಿಡುಗಡೆಯ ಬಯಕೆಯಿದ್ದ ಹೆಣ್ಣು ಜೀವವೇ ಜನಪದ ಕತೆಯಲ್ಲಿ ಹಕ್ಕಿಯಾಗಿದೆಯೇ? ಯಜಮಾನಿಕೆಗಾಗಿ, ಬೆಣ್ಣೆಗಾಗಿ ಹೆಣ್ಣಿನ ಜೀವವನ್ನೇ, ಕೊರಳ ಅಭಿವ್ಯಕ್ತಿಯನ್ನೇ ಹಿಸುಕುವ ಕಬಂಧಬಾಹುಗಳ ದೌರ್ಜನ್ಯವನ್ನು ಅಂಬೆಯಂತೆ ಮತ್ತೆ ಜೀವವಾಗಿ ಕೂಗಿ ಬಹಿರಂಗಪಡಿಸುವ ಹೆಣ್ಣಿನೊಳಗಿನ ಪ್ರತಿಭಟನೆಯ ಧ್ವನಿಯೇ ಇದು? ಸಾಧನೆಯ ಪಥದಲ್ಲಿ ಹಕ್ಕಿಯಾಗಿ ಎಷ್ಟೇ ಉನ್ನತಿಗೇರಿದರೂ ಹೆಣ್ಣಿನ ಕಂಠದ ಆಳದಿಂದ ಎತ್ತರಿಸುವ ಪ್ರತಿಭಟನೆಯ ಧ್ವನಿಯನ್ನು ಹೊರಬಾರದಂತೆ ಅಮುಕಿಟ್ಟು ಹೊರಗೆ ಮಾತ್ರವಲ್ಲ ಒಳಗಿಂದಲೂ ಅವಳನ್ನು ಮೌನವಾಗಿಸುವ ಯತ್ನ ನಡೆಯುತ್ತಲೇ ಇರುತ್ತದಲ್ಲ? ಅದರ ಕೂಗು ಒಂದು ಬಂಡಾಯ ಕಾವ್ಯವೆನಿಸುತ್ತದೆ ನನಗೆ.
ಟಿಟ್ಟಿಟ್ಟಿ ಟಿಟ್ಟಿಟ್ಟಿ ಟೀ… ಎಂದು ಮುಂಜಾನೆಯ ಹಾಲು ಬೆಳಕಿನಲ್ಲಿ ಟೀ ಹಂಚುವ ಟಿಟ್ಟಿಭ ಹಕ್ಕಿ ಕೆಲವೊಮ್ಮೆ ಅಪರಾತ್ರಿಯಲ್ಲಿ ಅಪಶ್ರುತಿಯಲ್ಲಿ ಹಾಡುವುದನ್ನು ಬಾಲ್ಯದಲ್ಲಿ ನಾನು ಕೇಳಿದ್ದೆ. ಆಗೆಲ್ಲ ಅಮ್ಮ, ಕಲ್ಲುಗಳ ಎಡೆಯಲ್ಲಿ ತಾನು ಇಟ್ಟ ಮೊಟ್ಟೆಗಳನ್ನು ದನಗಾಹಿ ಹುಡುಗರು ಗುಳುಂ ಮಾಡಿದರೆಂದು ಆ ತಾಯಿ ಟಿಟ್ಟಿಭವು, ಎರಡೇ ಎರಡು! ತತ್ತಿ ಇಟ್ಟೆ ! ಗುಡ್ಡೆ ಮಕ್ಳ ! ಬೊಜ್ಜಕ್ಕಾಯ್ತು! ಎಂದು ಅಳುತ್ತಿದೆ ಎಂಬ ಕತೆಯೊಂದಿಗೆ ಆ ಕೂಗನ್ನು ಲಯಬದ್ಧವಾಗಿ ಅನುಕರಿಸುತ್ತಿದ್ದರು. ತನ್ನ ಸಂತಾನವನ್ನು ಹೆಣ್ಣು ಭ್ರೂಣಗಳನ್ನು ಯಾರಧ್ದೋ ಒತ್ತಡಕ್ಕೊಳಗಾಗಿ ಕಳೆದುಕೊಂಡ, ಬೀದಿಗೆ ಬಿಸುಟಿದ ವಿವಾಹಿತ ಹಾಗೂ ಅವಿವಾಹಿತ ತಾಯ್ತನದ ಆಕ್ರಂದನವಲ್ಲವೇ ಇದು? ಮೊನ್ನೆ ಪುಟ್ಟ ಹಕ್ಕಿಯೊಂದು “ಟೊಪ್ಪಿ$ಸಿಕ್ತಾ? ಟೊಪ್ಪಿ$ಸಿಕ್ತಾ?’ ಎಂದು ಹಾಡುತ್ತಿತ್ತು ಹಗಲಲ್ಲಿ. ರಾತ್ರಿ ಆಗಸ ನೋಡಿದೆ, ಕೂಸು ತಲೆಯಿಂದ ಕಿತ್ತು ಎಸೆದ ಕುಲಾವಿಯಂತೆಯೇ ಚಂದ್ರ ನಗುತ್ತಿದ್ದ. ಹೇಳ್ಳೋಣವೆಂದರೆ ಮರುದಿನ ಅದರ ಪತ್ತೆಯೇ ಇಲ್ಲ! ಹೆಣ್ಣುಮಕ್ಕಳು ಚಂದದ ಟೋಪಿ ಹಾಕಿಸಿಕೊಂಡೇ ಬೆಳೆಯುವ ಕಾಲ ದೂರವಾಗಬೇಕಿದೆ! ನಿತ್ಯ ಹಿತ್ತಲಲ್ಲಿ ಕನ್ನಡದ ಜುಟ್ಟು ಪಿಕಳಾರವೊಂದು “ಪಿಕ್ ವಿವ್ ಅವೇಕ್ ವಿವ್ ವಿವೇಕ್ ವಿವ್’ ಎಂದು ಆಂಗ್ಲ ಭಾಷೆಯಲ್ಲಿ ಮುದ್ದಾಗಿ ಹಾಡುವಾಗ ಜಾಗೃತಿಗೀತೆ ಅನಿಸುತ್ತದೆ ನನಗೆ!
ಹಾ! ನೆನಪಾಯಿತು. ಇದುವರೆಗೂ ಕಣ್ಣಿಂದ ಕಾಣದ ಅನಾಮಿಕ ಹಕ್ಕಿಯೊಂದು ನಮ್ಮ ಹಳ್ಳಿಮನೆಯ ಮರದ ಮರೆಯಲ್ಲಿ ನಿತ್ಯ ಸೂಯೊದಯ ಕಾಲದಲ್ಲಿ ಹಾಡುತಿತ್ತು. ನನ್ನಜ್ಜಿ ಒಳಗೆ ಮೊಸರು ಕಡೆಯುತ್ತ “ಕೃಷ್ಣಾ ಏಳಯ್ಯ ಬೆಳಗಾಯಿತು’ ಎಂದು ಉದಯರಾಗ ಹಾಡುವ ಹೊತ್ತದು. ಶಾಸ್ತ್ರೀಯ ಸಂಗೀತ ಕಲಿಯದ ಈ ಹಕ್ಕಿ “ಶ್ರೀಹರಿ… ಶ್ರೀಹರಿ…’ ಎಂದು ಮನುಜರಂತೆ ಸ್ಪಷ್ಟವಾಗಿ ಹಾಡುತ್ತಿತ್ತು. ಅದರೊಳಗಿನ ಸ್ವರವನ್ನು ಅರಸಿದೆ, ಸಾದನಿ… ಸಾದನಿ… ಮೂರು ಶುದ್ಧ ಸ್ವರಗಳಲ್ಲಿ ಶ್ರೀಹರಿಯನ್ನು ಕರೆಯುತ್ತಿದೆ, ಥೇಟ್ ! ಆಗಸದ ಗರ್ಭದಿಂದ ಭೂಮಿಗಿಳಿದು ಮತ್ತೆ ಊರ್ಧಕ್ಕೇರುವ ದೇವಹಕ್ಕಿಯಂತೆ! ಅದಕ್ಕೇ ಅಕ್ಕಮಹಾದೇವಿಯು “ಎನ್ನ ಚೆನ್ನಮಲ್ಲಿಕಾರ್ಜುನನನ್ನು ಕಂಡಿರೇ ಪೇಳಿರೇ’ ಎಂದು ಚಿಲಿಮಿಲಿ ಎಂದು ಓದುವ ಗಿಳಿಗಳನ್ನು, ಸ್ವರವೆತ್ತಿ ಪಾಡುವ ಕೋಗಿಲೆಗಳನ್ನು, ಕೊಳದ ತಡಿಯೊಳಾಡುವ ಹಂಸಗಳನ್ನು, ಗಿರಿಗಹ್ವರದೊಳಗಾಡುವ ನವಿಲುಗಳನ್ನು… ಕೇಳುತ್ತ ಅಲೆದಳು ಕಾಣಬೇಕು! ಕತ್ತುಗಳನ್ನು ಮುಂದಕ್ಕೆ ಚಾಚಿ ಕಾಲುಗಳನ್ನು ಹಿಂದಕ್ಕೆ ಚಾಚಿ ಅಮೂರ್ತದತ್ತ ಹಾರುವ ಹಕ್ಕಿಸಾಲುಗಳು ಕಾಯಮೀರಿದ ಅಕ್ಕನ ಪ್ರೇಮಕವನದ ಸಾಲುಗಳಲ್ಲವೆ?
ಕಾತ್ಯಾಯಿನಿ ಕುಂಜಿಬೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
ಕಾಸರಗೋಡು: ಬೈಕ್ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.