ನಾಟಕದವರ ವಾಸ್ತವ ಸಂಸಾರ
Team Udayavani, Mar 6, 2020, 5:22 AM IST
ಕಾಸರಗೋಡಿನಿಂದ ಕರಂದಕ್ಕಾಡು ಜಂಕ್ಷನ್‌ಗೆ ತೆರಳಿದರೆ ಅಲ್ಲಿ ಫೈಯರ್ ಸ್ಟೇಷನ್ ಒಂದಿದೆ. ಅದರ ಮುಂಭಾಗದಲ್ಲಿಯೇ ರಂಗಭೂಮಿಯ ಫಯರ್‌ಬ್ರಾಂಡ್ ಕಾಸರಗೋಡು ಚಿನ್ನಾ ಅವರ “ಪದ್ಮಗಿರಿ’ ನಿವಾಸ ಇದೆ. ತೆಂಗಿನ ತೋಟದ ತಂಗಾಳಿಯ ನಡುವೆ ಇರುವ ಮನೆಯಲ್ಲಿ ಚಿನ್ನಾ ಅವರ ಪತ್ನಿ ಶಾಂತಿ ನಾಯಕ್ ತಮ್ಮ ಪತಿಯ ಕ್ರಿಯಾಶೀಲ ಬದುಕಿನ ಹಾದಿಯನ್ನು ಹೇಳುತ್ತ ಹೋದರು. ಅದೊಂದು ಸುಂದರ ಪಯಣ…
ಗಡಿನಾಡಿನ ಜನರಿಗೆ ಒಂದು ಲಾಭವುಂಟು. ಹಲವು ಭಾಷೆಗಳನ್ನು ಅವರು ಕಲಿತಿರುತ್ತಾರೆ. ನನ್ನ ತವರೂರು ಕಾಂಞಂಗಾಡ್‌ನ ಸಮೀಪದ ಹೊಸದುರ್ಗ. ಅತ್ತ ಕೇರಳದ ಮಲಯಾಳ ಕೂಡ ಬರುತ್ತದೆ, ಇತ್ತ ಕರ್ನಾಟಕದ ಕನ್ನಡವೂ ಜೊತೆಗಿದೆ.
ನಮ್ಮ ಮನೆ ಭಾಷೆ ಕೊಂಕಣಿ. ಓದಿದ್ದೆಲ್ಲ ಮಲಯಾಳ ಮಾಧ್ಯಮದಲ್ಲಿ. ಮಲಯಾಳ ಮತ್ತು ಕೊಂಕಣಿಯೇ ಹೆಚ್ಚು ರೂಢಿಯಾಗಿಬಿಟ್ಟವಳಿಗೆ, ಮದುವೆಯಾಗಿ ಬಂದ ಮೇಲೆ ಕನ್ನಡ ಕಲಿಯಬೇಕೆಂದು ಇವರು ಒತ್ತಾಯಿಸಿದರು. ಇವರಂತೂ ಕನ್ನಡಪರ ಹೋರಾಟಗಾರರಲ್ಲವೆ? ನಮ್ಮ ಇಬ್ಬರು ಮಕ್ಕಳಲ್ಲಿ ಮಗನನ್ನು ಕನ್ನಡ ಮಾಧ್ಯಮದ ಶಾಲೆಗೇ ಸೇರಿಸಿದ್ದರು. ಮಗಳಿಗೆ ಒಂದು ಪಾಠ ಕನ್ನಡವಿತ್ತು. ಹಾಗಾಗಿ, ನಾನು ಮಕ್ಕಳ ಜೊತೆ ಸೇರಿ ಕನ್ನಡ ಚೆನ್ನಾಗಿ ಕಲಿತೆ. ಆಮೇಲೆ ಮಕ್ಕಳಿಗೇ ಕನ್ನಡ ಹೇಳಿಕೊಡುವಷ್ಟು ಕಲಿತೆ. ಈಗ ಕನ್ನಡ ಪೇಪರ್‌ಗಳನ್ನು ಓದುತ್ತೇನೆ. ಇಷ್ಟೆಲ್ಲ ಸಾಧ್ಯವಾದದ್ದು ಇವರ ಪ್ರೇರಣೆಯಿಂದ.
ನಮಗೆ ಹಲವು ಭಾಷೆಗಳು ಬರುತ್ತವೆ ಎಂದು ಬಹಳ ಕಾಲದವರೆಗೆ ನನಗೆ ಗೊತ್ತಿರಲಿಲ್ಲ. ಕರ್ನಾಟಕದ ಇತರ ಭಾಗದಿಂದ ಬಂದವರು ಅದನ್ನು ಹೇಳಿದ ಮೇಲೆಯೇ, “ಓ ಹೌದಲ್ಲ, ನಮಗೆ ಹಲವು ಭಾಷೆಗಳ ಸಂಪರ್ಕ ಇದೆಯಲ್ಲ!’ ಎಂದು ಅರಿವು ಮೂಡಿದ್ದು. ನನಗೆ ಬರುವ ಎಲ್ಲ ಭಾಷೆಗಳೂ ಇವರಿಗೂ ಗೊತ್ತು. ಆದರೆ, ಇವರು ಮಾತ್ರ ಸದಾ ಕನ್ನಡ ಪ್ರಿಯ! ಅಂದ ಹಾಗೆ, ಇವರ ಹೆಸರು ಗೊತ್ತಲ್ಲ. ಶ್ರೀನಿವಾಸ ರಾವ್. ಎಲ್ಲರೂ ಬಾಲ್ಯದಲ್ಲಿ “ಚಿನ್ನ” , “ಚಿನ್ನ’ ಎಂದು ಕರೆದು ಚಿನ್ನವೇ ಆಗಿ ಉಳಿದರು. ಕಾಸರಗೋಡು ಚಿನ್ನ ಎಂದರೆ ಎಲ್ಲರಿಗೂ ತಿಳಿದಿದೆ; ಶ್ರೀನಿವಾಸ ರಾವ್ ಎಂದು ಕೇಳಿದರೆ ಯಾರಿಗೂ ಗೊತ್ತಿಲ್ಲ.
ನಾನು ಹುಟ್ಟಿ ಬೆಳೆದ ಪರಿಸರದ ಪ್ರಭಾವದಿಂದಾಗಿಯೋ ಏನೋ, ನನಗೆ ನಾಚಿಕೆ ಜಾಸ್ತಿ. ಹಾಗಾಗಿ, ಹೊರಗಿನವರೊಂದಿಗೆ ಮಾತನಾಡುವುದು, ವ್ಯವಹರಿಸುವುದು ತುಸು ಕಡಿಮೆಯೇ. ಆದರೆ, ಇವರಿಗೆ ಸ್ನೇಹಿತರ ಬಳಗ ಬಹಳ. ಮನೆಗೆ ಬಂದು ಹೋಗುವವರು ತುಂಬ ಮಂದಿ. ನನ್ನನ್ನೂ ಇವರೇ ಒತ್ತಾಯಿಸಿ ಹೊರಗೆಲ್ಲ ಕರೆದೊಯ್ಯುತ್ತಾರೆ. ಜನರೊಂದಿಗೆ ಬೆರೆಯಲು, ಮಾತನಾಡಲು ಕಲಿತದ್ದು ಇವರಿಂದಾಗಿಯೇ.
ನನ್ನನ್ನು ತಾಯಿಮನೆಯಲ್ಲಿ “ಅನಿತಾ’ ಎಂದು ಕರೆಯುತ್ತಿದ್ದರು. ಗಂಡನ ಮನೆಯಲ್ಲಿ “ಶಾಂತಿ’ಯಾಗಿ ಬದಲಾದೆ. “ನೀನು ಮನೆಗೆ ಬಂದ ಮೇಲೆ ಶಾಂತಿ ನೆಲೆಸಿತು ಮಾರಾಯ್ತಿ’ ಎಂದು ಇವರು ಆಗಾಗ ತಮಾಷೆ ಮಾಡುವುದುಂಟು. ನಾವು ಐವರು ಹೆಣ್ಣುಮಕ್ಕಳು. ನಮ್ಮದು ಸಂಪ್ರದಾಯಸ್ಥ ಕುಟುಂಬ. ನನ್ನ ತಂದೆ ನಾರಾಯಣ ಕಾಮತ್ ಮತ್ತು ಅಮ್ಮ ಶಾಂತಾ. ಅಲ್ಲಿಯೂ ವ್ಯಾಪಾರವೇ ಮನೆ ಆದಾಯವಾಗಿತ್ತು. ಅಪ್ಪನಿಗೆ ಹೆಣ್ಣುಮಕ್ಕಳು ಹೊರಗೆ ಹೆಚ್ಚು ಓಡಾಡುವುದು ಇಷ್ಟವಾಗುತ್ತಿರಲಿಲ್ಲ. ಹಾಗಾಗಿ, ನಮಗೆ ನಾಟಕ ನೋಡುವ, ನಾಟಕದಲ್ಲಿ ಪಾತ್ರ ಮಾಡುವ ಅವಕಾಶವೇ ಸಿಕ್ಕಿರಲಿಲ್ಲ. ರಂಗಭೂಮಿಯ ಗಂಧಗಾಳಿ ಇಲ್ಲದ ನಾನು ರಂಗಭೂಮಿ ಕ್ಷೇತ್ರದವರೇ ಆದ ವ್ಯಕ್ತಿಯ ಕೈಹಿಡಿದಿದ್ದೆ. ಒಂದು ರೀತಿಯಲ್ಲಿ ಶುಭಯೋಗವೇ. ಆದರೆ, ನಾಟಕ, ಸಿನಿಮಾ, ಸಾಹಿತ್ಯ, ಹೋರಾಟ ಎಂದೆಲ್ಲ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಜೀವನ ಹೇಗಿರುತ್ತದೆ ಎಂಬ ಅರಿವು ನನಗೆ ಇರಲಿಲ್ಲ. ಮದುವೆಯಾಗಿ ಬಂದ ಮೇಲೆಯೇ ಅದೆಲ್ಲ ಗೊತ್ತಾದದ್ದು.
ಹಾಗೆಂದು, ಮನೆಯ ಹೊಣೆಯ ಕುರಿತು ಇವರು ಎಂದಿಗೂ ನಿರ್ಲಕ್ಷ್ಯ ವಹಿಸಿದವರಲ್ಲ. ಹೋರಾಟ-ನಾಟಕ-ಸಿನೆಮಾಗಳಿಂದ ಹೊಟ್ಟೆ ತುಂಬುವುದಿಲ್ಲವಷ್ಟೇ; ಜೀವನೋಪಾಯಕ್ಕೆ ಅಂಗಡಿ ಇದೆ- ಗಿರಿಧರ್ ಸ್ಟೋರ್ಸ್. ಇವರು ರಿಹರ್ಸಲ್-ಶೂಟಿಂಗ್ ಅಂತ ಹೊರಗೆ ಹೋದಾಗ ಅಂಗಡಿ-ಮನೆಯ ಜವಾಬ್ದಾರಿ ನನ್ನದೇ. ಕೆಲವು ವರ್ಷಗಳ ಹಿಂದೆ ಪ್ರಸಿದ್ಧವಾಗಿದ್ದ “ಲಾರಿ ನಾಟಕ’ ನಿಮಗೆ ಗೊತ್ತಿರಬೇಕಲ್ಲ, ಶನಿವಾರ-ಭಾನುವಾರ ಲಾರಿ ಹತ್ತಿಕೊಂಡು ಊರೂರಲ್ಲಿ ನಾಟಕ ಮಾಡಲು ಹೊರಡುತ್ತಿದ್ದರು. ಹಾಗೆ, ಬೆಂಗಳೂರಿನವರೆಗೂ ಹೋಗಿ ಬಂದಿದ್ದರು. ಶನಿವಾರವಾಗಲಿ, ಇತರದಿನಗಳಲ್ಲಾಗಲಿ ಇವರು ಹೊರಗೆ ಹೋದರೆ ಅಂಗಡಿಯ ಗಲ್ಲೆಯಲ್ಲಿ ನನ್ನದೇ ಕಾರ್ಯಭಾರ. ಅಂಗಡಿಯಲ್ಲಿ ಮೂವರು ಕೆಲಸಕ್ಕಿದ್ದಾರೆ. ತುಂಬಾ ವಿಶ್ವಾಸದವರು. ಹಾಗಾಗಿ, ವ್ಯಾಪಾರ ನಿರ್ವಹಣೆ ಸುಲಭವಾಗುತ್ತದೆ. ಭಾನುವಾರ ಅಂಗಡಿಗೆ ರಜೆ. ಭಾನುವಾರ ಇವರು ಮನೆಯಲ್ಲಿರುವುದೂ ಇಲ್ಲ , ಏನಾದರೊಂದು ಕಾರ್ಯಕ್ರಮ ಅಂತ ಹೋಗಿಬಿಡುತ್ತಾರೆ.
ಇವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾದಾಗ ಸಿಕ್ಕಾಪಟ್ಟೆ ಓಡಾಟ ಮಾಡುತ್ತಿದ್ದರು. ಆಗಂತೂ ಅಂಗಡಿಯನ್ನು ನಿಭಾಯಿಸುವುದು ಸವಾಲೇ ಆಗಿತ್ತು. ಆದರೆ, ಆ ಸಂದರ್ಭದಲ್ಲಿ ಅವರು ಕೊಂಕಣಿ ಭಾಷೆಯ ಅಭಿವೃದ್ಧಿಗೆ ಪೂರಕವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಇವರ ಹೆಚ್ಚೇನೂ ನಾಟಕಗಳನ್ನು ನಾನು ನೋಡಿಲ್ಲ. ಆಯ್ಲೋರೆ ಆಯ್ಲೊ! ಕೊಂಕಣಿ ನಾಟಕ ನನಗೆ ತುಂಬ ಇಷ್ಟವಾಗಿತ್ತು. ದೃಷ್ಟಿ ಕನ್ನಡ ನಾಟಕವನ್ನು ತುಂಬ ಮೆಚ್ಚಿಕೊಂಡಿದ್ದೆ. ಸಿನೆಮಾಗಳನ್ನೂ ನೋಡಿ ಖುಷಿಪಟ್ಟಿದ್ದೇನೆ. ನಾಟಕ ಬರೆಯುವುದು, ನಟಿಸುವುದು, ನಿರ್ದೇಶಿಸುವುದು ಬಹಳ ಇಷ್ಟ ಇವರಿಗೆ. ಒಂದೇ ಸಲ ಮೂರು ನಾಟಕಗಳನ್ನು ನಿರ್ದೇಶಿಸಿದ್ದೂ ಇದೆ. ಅಂಗಡಿಯಲ್ಲಿ ಕುಳಿತಾಗಲೂ ನಾಟಕ-ಸಿನೆಮಾಗಳದ್ದೇ ಧ್ಯಾನ. ಅಲ್ಲಿ ಕುಳಿತುಕೊಂಡೇ ನಾಟಕಗಳನ್ನು ಬರೆಯುವುದು, ಮಲಯಾಳದಿಂದ ಕೊಂಕಣಿಗೆ, ಕೊಂಕಣಿಯಿಂದ ನಾಟಕಗಳನ್ನು ಅನುವಾದ ಮಾಡುವುದು!
ಕೆಲ ವರ್ಷಗಳ ಹಿಂದೆ ಕಾಸರಗೋಡಿನ ಶಾಲಾಮಕ್ಕಳಿಗೆ ಕನ್ನಡ ಪಠ್ಯಪುಸ್ತಕ ಸಿಗಲಿಲ್ಲ ಎಂಬ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಅವರು ಕನ್ನಡ ಸಂರಕ್ಷಣಾ ಸಮಿತಿಯ ಮೂಲಕ ಹೋರಾಟ ನಡೆಸಿದ್ದರು. ಅಂದಿನ ಸಿಎಂ ಕೆ. ಕರುಣಾಕರನ್ ಕಾರ್ಯಕ್ರಮವೊಂದಕ್ಕೆ ಕಾಸರಗೋಡಿಗೆ ಬಂದಾಗ, ಅವರ ಮುಂದೆ ಕಪ್ಪುಬಾವುಟ ಪ್ರದರ್ಶನ ಮಾಡಿದ್ದರು. ಪೊಲೀಸರು ಇವರನ್ನು ಬಂಧಿಸಿದಾಗ ನನಗೆ ನಿಜಕ್ಕೂ ಆತಂಕವಾಗಿತ್ತು. ಅವರು ರಾಜಕೀಯ ಉದ್ದೇಶದಿಂದ ಹೀಗೆ ಮಾಡಿರಬಹುದು ಎಂದು ಸಿಎಂ ಭಾವಿಸಿದ್ದರಂತೆ. ಬಳಿಕ ಸಿಎಂ ಅವರಿಗೆ ಇವರ ನಿಜವಾದ ಉದ್ದೇಶ ಅರಿವಾಯಿತು. ಜಿಲ್ಲೆಯ ಮಕ್ಕಳಿಗೆ ಬೇಗನೇ ಕನ್ನಡ ಪಠ್ಯಪುಸ್ತಕಗಳು ದೊರಕುವಂತಾಯಿತು.
ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದು ಅವರು ಅನುಭವಗಳನ್ನು ಹೇಳಿಕೊಂಡದ್ದುಂಟು. ಕಪ್ಪು ಪತಾಕೆ ಅಂಗಡಿಯಲ್ಲಿ ಸಿಗಲಿಲ್ಲ ಅಂತ, ಕಪ್ಪು ಲುಂಗಿಯನ್ನೇ ಖರೀದಿಸಿ ಪತಾಕೆ ರೂಪದಲ್ಲಿ ಬೀಸಿದ್ದರಂತೆ. ಅದನ್ನು ಕೇಳಿ ನಾನೂ ನಕ್ಕಿದ್ದೆ.
ನಿರಂತರ ಹೋರಾಟದ ಮನೋಭಾವ ಇವರದ್ದು. ಕಾಸರಗೋಡಿನಿಂದ ಬೆಂಗಳೂರುವರೆಗೆ ಲಾರಿಯಲ್ಲಿ ನಾಯಿಬಾಲ ಎಂಬ ನಾಟಕ ಪ್ರದರ್ಶನ ಮಾಡಿ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದರು. ರಾಷ್ಟ್ರಕವಿ ಗೋವಿಂದ ಪೈಗಳ ಮನೆಯಿಂದ ಬೆಂಗಳೂರುವರೆಗೆ ಸಂಗೀತ ರಥ ನಡೆಸಿದ್ದರು. ಪಾರ್ಥಿಸುಬ್ಬನ ಊರು ಕುಂಬ್ಳೆಯಿಂದ ಬೆಂಗಳೂರು ವರೆಗೆ ಯಕ್ಷತೇರು ಕೊಂಡೊಯ್ದು ಕಲಾವಿದರ ಪರವಾಗಿ ದನಿ ಎತ್ತಿದರು. ಬರೋಬ್ಬರಿ ಒಂದೂವರೆ ಗಂಟೆ ಕಾಲ ಮೂಕ ನಾಟಕವನ್ನು ಗಲ್ಫ್ ರಾಷ್ಟ್ರಗಳಲ್ಲಿ ಪ್ರದರ್ಶನ ಮಾಡಿದ ಹಿರಿಮೆಯೂ ಅವರದು. ಬಹುಶಃ ಈ ಪ್ರಯತ್ನವನ್ನು ಮಾಡಿದ ಏಕೈಕ ಭಾರತೀಯ ಕಲಾವಿದ ಇವರಿರಬಹುದು.
ನನ್ನ ಮತ್ತು ಇವರ ನಡುವೆ ಜಗಳವಾಗುವುದಕ್ಕೆ ಲೆಕ್ಕವೇ ಇಲ್ಲ. ಅವರಿಗೆ ಎಲ್ಲವೂ ನೀಟ್ ಆಗಿರಬೇಕು. ಹಾಗಾಗಿ, ಇವರ ಓದು, ಬರವಣಿಗೆಗೆ ಸಂಬಂಧಿಸಿದ ವಸ್ತುಗಳು ಸಿಗದೇ ಇದ್ದರೆ ಸಿಟ್ಟುಮಾಡಿಕೊಳ್ಳುತ್ತಾರೆ. ಆಮೇಲೆ “ಬೇಸರ ಮಾಡಿಕೊಳ್ಳಬೇಡ ಆಯಿತಾ!’ ಅಂತ ರಮಿಸುತ್ತಾರೆ. ಇನ್ನೂ ಸಿಟ್ಟಿದ್ದರೆ, ನಾನು ಮೀನು ಸಾರು ಮಾಡಿದರೆ ಎಲ್ಲ ತಣ್ಣಗಾಗುತ್ತದೆ. ನನ್ನ ಕೈಯ ಮೀನು ಸಾರು ಅವರಿಗೆ ಪ್ರಾಣ. ನಾನು ಮಾಡುವ ಅಡುಗೆ ಇವರಿಗೂ, ಇವರ ಬಳಗಕ್ಕೂ ಇಷ್ಟವೆನ್ನಿ. ನಮ್ಮ ಮನೆಯ ಮೇಲೆ ಪದ್ಮಗಿರಿ ಕುಟೀರ ಎಂಬ ಸಭಾಂಗಣವಿದೆ. ಅಲ್ಲಿ ನಿರಂತರ ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತವೆ. ಹಾಗೆ ಬರುವ ಅತಿಥಿಗಳಿಗೆ ನಮ್ಮ ಮನೆಯಲ್ಲಿಯೇ ಊಟ. ನನಗೂ ಆತಿಥ್ಯವೆಂದರೆ ಇಷ್ಟ.
ಮತ್ತೆ ಕೆಲವೊಮ್ಮೆ ಅನಿಸುವುದು, ಇವರಿಗೆ ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸದೇ ಇದ್ದರೆ ನಿದ್ದೆಯೇ ಬರುವುದಿಲ್ಲವೇನೋ. ರಂಗಚಿನ್ನಾರಿ ಎಂಬ ಟ್ರಸ್ಟ್ ಮೂಲಕ ಎಷ್ಟೊಂದು ಕಾರ್ಯಕ್ರಮ ಮಾಡಿದ್ದಾರೆ. ಕಾಸರಗೋಡಿನ ಐದು ಸಾವಿರ ಮಕ್ಕಳಿಗೆ ಕನ್ನಡ ನಾಡಗೀತೆಯನ್ನು ಕಲಿಸಿದ್ದಾರೆ.
ಕನ್ನಡದ 30 ಅತ್ಯುತ್ತಮ ಕತೆಗಳನ್ನು ಅವರು ಕೊಂಕಣಿಗೆ ಅನುವಾದಿಸಿದ್ದಾರೆ. ತೀಸ್ ಕಾನಿಯೋ ಎಂಬ ಅವರ ಕೃತಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ದೊರೆತಿದೆ. ಅವರನ್ನು ಅರಸಿಕೊಂಡು ನೂರಾರು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಅದನ್ನೆಲ್ಲ ನೋಡುವಾಗ, ಅವರ ಶ್ರಮವನ್ನು ಜನರು ಗುರುತಿಸಿದ್ದಾರೆಂದು ನನಗೂ ಖುಷಿಯಾಗುತ್ತದೆ.
ಈಗಂತೂ ಮಗಳಿಗೆ ಮದುವೆಯಾಗಿದೆ. ಮಗ ಉದ್ಯೋಗಸ್ಥನಾಗಿದ್ದಾನೆ. ಇವರು ಅದೇ ಬರವಣಿಗೆ ಮತ್ತು ಹೋರಾಟದ ಹಾದಿಯಲ್ಲಿ ವಿರಮಿಸದೆ ಸಾಗುತ್ತಿದ್ದಾರೆ. ನಾನೂ ಅವರನ್ನು ಅನುಸರಿಸುತ್ತಿದ್ದೇನೆ.
ಅವರು ಸದಾ ಬ್ಯುಸಿ ಇರುವ ಮನುಷ್ಯ. ಬ್ಯುಸಿ ಎಂದರೆ ಓಡಾಟದ ಬ್ಯುಸಿ ಅಂತಲ್ಲ. ಮನೆಯಲ್ಲಿಯೇ ಇದ್ದರೂ, ಕನ್ನಡಕ್ಕೆ ಸಂಬಂಧಿಸಿದ ಏನಾದರೊಂದು ವಿಚಾರದ ಕುರಿತು ಚರ್ಚೆ ಮಾಡುತ್ತ ಇರುತ್ತಾರೆ. ಒಳ್ಳೆಯ ಪುಸ್ತಕಗಳನ್ನು ಓದುವುದು ಅವರ ನಿರಂತರ ಹವ್ಯಾಸ. ಕನ್ನಡ, ಕೊಂಕಣಿ, ಮಲಯಾಳ, ಹಿಂದಿ, ಇಂಗ್ಲಿಷ್, ತುಳು -ಹೀಗೆ ಆರು ಭಾಷೆಗಳನ್ನು ಬಲ್ಲ ಅವರು ಈ ಎಲ್ಲ ಭಾಷೆಗಳಲ್ಲಿಯೂ ನಟನೆ ಮಾಡಿದ್ದಾರೆ.
– ಶಾಂತಿ ನಾಯಕ್
ಫೊಟೊ : ಸಂಜು ಕಾಸರಗೋಡು
ಕಾಸರಗೋಡು ಶಾಂತಿ ನಾಯಕ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.