ಅದೇ ಹಳೆಯ ಸೀರೆನಾ…!

ಲೋಕಲ್‌ ಟ್ರೈನ್‌

Team Udayavani, May 10, 2019, 6:00 AM IST

26

ಗಲ್ಲಿ ಗಲ್ಲಿಗಳಲ್ಲಿ ಜಾತ್ರೆಯ ಸಡಗರವನ್ನು ನೋಡಬೇಕಾದರೆ ಮುಂಬಯಿ ನಗರಿಯನ್ನೊಮ್ಮೆ ಸುತ್ತಿ ಬರಬೇಕು. ಇಲ್ಲಿ ಚಾಳ್‌ನಲ್ಲಿ ವಾಸವಾಗಿರುವವರು ಸಂತೆ ಮಾರುಕಟ್ಟೆಯನ್ನು ನಿತ್ಯ ಮನೆಯೊಳಗಿದ್ದುಕೊಂಡೇ ನೋಡಬಹುದು. ಬೆಳಗಾತ ಏಳು ಗಂಟೆಗೆ ಶುರುವಾದರೆ ಕತ್ತಲಾಗುವವರೆಗೆ ಸಂತೆಯಲ್ಲಿ ಸಿಗುವಂಥ ಪ್ರತಿಯೊಂದು ವಸ್ತುಗಳು ಮನೆಬಾಗಿಲಿಗೆ ಬಂದು ಹೋಗುತ್ತಿರುತ್ತವೆ. ಚೌಕಾಶಿ ಮಾಡಲು ಗೊತ್ತಿದ್ದರೆ ಸಾಕು. ಸುಮ್ಮನೆ ಕೂತಲ್ಲಿಯೇ ಮನೆಗೆ ಏನೇನು ಬೇಕೋ ಎಲ್ಲವನ್ನೂ ಖರೀದಿಸುವ ಕೆಲಸ ನಡೆದು ಬಿಡುತ್ತದೆ. ಅಲ್ಲಿ ನಿತ್ಯ ಸುತ್ತಾಡುವ ವ್ಯಾಪಾರಸ್ಥರು ಕಳಪೆ ವಸ್ತುಗಳನ್ನು ತರುವುದಿಲ್ಲ. ತಂದರೆ ಮತ್ತೂಮ್ಮೆ ಆ ಪರಿಸರದಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲ ಅನ್ನುವ ಸತ್ಯ ಅವರಿಗೂ ಗೊತ್ತಿರುತ್ತದೆ. ಚಾಳ್‌ನಲ್ಲಿ ಬರುವ ಹೊಸ ವ್ಯಾಪಾರಿಗಳನ್ನು ಮಹಿಳೆಯರು ನಂಬುವುದಿಲ್ಲ. ಆಜುಬಾಜಿನವರೆಲ್ಲರನ್ನು ಕರೆದು, ವ್ಯಾಪಾರಿ ತಂದಿರುವ ವಸ್ತುವಿನ ಪರಿಶೀಲನೆಯನ್ನು ಬಹಳ ಗಂಭೀರವಾಗಿ ನಡೆಸುತ್ತಾರೆ. ಕೆಲವೊಮ್ಮೆ ಹತ್ತು ರೂಪಾಯಿಯ ವಸ್ತು ತೆಗೆದುಕೊಳ್ಳುವುದಕ್ಕೆ ಮಹಿಳೆಯರು ಅರ್ಧ ತಾಸು ಚೌಕಾಶಿ ಮಾಡುವುದುಂಟು. ಹಾಗಿದ್ದೂ ಕೆಲವೊಮ್ಮೆ ಮೋಸ ಹೋದ ಉದಾಹರಣೆಗಳಿವೆ
ಚಾಳ್‌ನಲ್ಲಿರುವ ನಮ್ಮೂರಿನ ಮಕ್ಕಳು ಮರಾಠಿ ಸಲೀಸಾಗಿ ಮಾತನಾಡುತ್ತಾರೆ.

ಚಾಳ್‌ ಎಂಬುದೊಂದು ಲೋಕ
ಚಾಳ್‌ನಲ್ಲಿ ಮನೆಯಿದ್ದರೆ ಉಪಕಾರದಷ್ಟೆ ತೊಂದರೆಯೂ ಇದೆ. ಮಳೆಗಾಲದಲ್ಲಿ ಒಳಚರಂಡಿಗಳು ತುಂಬಿ ನೀರು ಮನೆಯೊಳಗೆ ಬರುವುದು. ಚಳಿಗಾಲದಲ್ಲಿ ತಡೆಯಲಾಗದಷ್ಟು ಚಳಿ, ಬೇಸಿಗೆಯಲ್ಲಿ ವಿಪರೀತ ಸೆಕೆ, ದಿನವಿಡೀ ಅಕ್ಕಪಕ್ಕದ ಮನೆಯ ಮಹಿಳೆಯರು ಬಂದು ಅವರಿವರ ಸುದ್ದಿಗಳನ್ನು ಹಂಚಿಕೊಳ್ಳುವುದು. ಅದೇ ನೆರೆಕರೆಯಲ್ಲಿ ಮನಸ್ತಾಪಗಳಿಗೆ ಕಾರಣವಾಗುವುದು ಹಾಗೂ ಇದರಿಂದ ಏಕಾಂತದ ವಾತಾವರಣವೂ ತಪ್ಪುವುದು. ಆದರೆ, ಕಷ್ಟದ ಪರಿಸ್ಥಿಯಲ್ಲಿ ಎಲ್ಲರೂ ಸಹಾಯಕ್ಕೆ ಬರುತ್ತಾರೆ. ಚಾಳ್‌ನಲ್ಲಿ ಬೆಳೆದ ನಮ್ಮೂರಿನ ಮಕ್ಕಳು ಮರಾಠಿ ತುಂಬಾ ಸಲೀಸಾಗಿ ಮಾತನಾಡುತ್ತಾರೆ. ಇಲ್ಲಿ ಎಳೆಯ ಮಕ್ಕಳನ್ನು ಸಂಭಾಳಿಸುವುದು ಅಮ್ಮಂದಿರಿಗೆ ತುಂಬ ಕಷ್ಟ. ಅದರಲ್ಲೂ ಆಕರ್ಷಕವಾದ ಮಕ್ಕಳ ಆಟಿಕೆಗಳನ್ನು ಮಾರಿಕೊಂಡು ಬರುವವರಿಂದ ಕಿರಿಕಿರಿಯೇ ಹೆಚ್ಚು. ಅದಕ್ಕೆ ತಕ್ಕಂತೆ ಬಲೂನ್‌ ಮಾರುವವನು, ಕೊಳಲು ಊದುವವನು, ಬಾಂಬೆ ಮೀಠಾಯಿ, ಕಾಲಾಕಟ್ಟಾ (ಬಣ್ಣದ ಐಸ್‌) ಮಾರುವವರೆಲ್ಲ ಮಕ್ಕಳಿರುವ ಮನೆಯ ಮುಂದೆ ಹೆಚ್ಚು ಹೊತ್ತು ಸುತ್ತಾಡುತ್ತಾರೆ. ಅಲ್ಲಿರುವ ಅಮ್ಮಂದಿರು, “ಇದರ್‌ ಬಚ್ಚೆಲೋಗ್‌ ನಹೀ ಹೈ, ಆಗೆ ಜಾವೋ’ ಅಂದರೂ ಕೇಳಿಸದ ಹಾಗಿರುತ್ತಾರೆ. ಮನೆಯೊಳಗಿರುವ ಮಕ್ಕಳು ಕುಣಿದು ಕುಪ್ಪಳಿಸುತ್ತ ಅಮ್ಮನ ಕಾವಲಿನಿಂದ ತಪ್ಪಿಸಿಕೊಂಡು ಬೀದಿಗೆ ಬಂದು, “ಅಮ್ಮಾ, ಅದು ಬೇಕೇ ಬೇಕು’ ಎಂದು ರಚ್ಚೆ ಹಿಡಿಯುವವರೆಗೂ ವ್ಯಾಪಾರಿಗಳು ಅಲ್ಲಿಯೇ ನಿಲ್ಲುತ್ತಾರೆ. ಆ ಸಮಯದಲ್ಲಿ ಅಮ್ಮಂದಿರು ಸೋಲದಿದ್ದರೆ ಮಕ್ಕಳು ಅಳು ನಿಲ್ಲಿಸುವುದಿಲ್ಲ. ಮನೆಗೆಲಸವೂ ಆಗುವುದಿಲ್ಲ. “ನಾಳೆಯಿಂದ ಈ ಕಡೆ ಬರಬೇಡ ಮಾರಾಯ’ ಎಂದು ಮುನಿಸಿಕೊಂಡೆ. ಅಮ್ಮ ತನ್ನ ಮಗು ಕೇಳಿದ್ದನ್ನು ತೆಗೆದುಕೊಡುತ್ತಾಳೆ. ಮಗುವಿನ ಮುಖದಲ್ಲಿ ಗೆಲುವಿನ ನಗು, ವ್ಯಾಪಾರಿಗೆ ಬೋಣಿಯಾದ ಖುಷಿ, ತಾಯಿಗೆ ತನ್ನ ಮಗುವನ್ನು ಸಮಾಧಾನ ಮಾಡಿದೆನೆಂಬ ತೃಪ್ತಿಯಲ್ಲಿ ಎಲ್ಲವೂ ಆ ಹೊತ್ತಿಗೆ ಸುಖಾಂತ್ಯ ವಾಗಿ ಬಿಡುತ್ತದೆ.

ಸೀರೆಯ ಫ್ಯಾಶನ್‌
ಬದಲಾಗುವ ಸೀರೆಯ ಫ್ಯಾಷನ್‌ ತಿಳಿಯಬೇಕಾದರೆ ಊರಿಗೆ ಬರಬೇಕು.
ಸಣ್ಣಪುಟ್ಟ ವಸ್ತುಗಳನ್ನು ಮಾರುವ ಬೀದಿ ವ್ಯಾಪಾರಿಗಳು ಕಟ್ಟಡದೊಳಗೆ ಪ್ರವೇಶ ಮಾಡುವುದಿಲ್ಲ. ವಾಚ್‌ಮನ್‌ ಇರುವಂಥ ಕಟ್ಟಡಗಳಲ್ಲಿ ಸೇಲ್ಸ್‌ ಮನ್‌ಗಳಿಗೆ ಪ್ರವೇಶ ಇರುವುದಿಲ್ಲ. ಬೇರೆ ಎಲ್ಲ ಕಡೆಗೆ ಕಂಪೆನಿಯ ಹೆಸರನ್ನು ಹೇಳಿಕೊಂಡು ಕೆಲವು ಸೇಲ್ಸ್‌ಮನ್‌ಗಳು ಬರುತ್ತಾರೆ. ಇವರಲ್ಲಿ ಮಹಿಳೆಯರೇ ಹೆಚ್ಚು. ಅವರು ಮನೆ ಬಾಗಿಲಿಗೆ ಬಂದು, ಕರೆಗಂಟೆ ಒತ್ತಿದಾಗ ಕೆಲವರು ಮನೆಯೊಳಗಿನಿಂದಲೇ ಬಾಗಿಲ ರಂಧ್ರದಲ್ಲಿ ನೋಡಿ ಸುಮ್ಮನಾಗುತ್ತಾರೆ. ಇನ್ನು ಕೆಲವರು ಬಾಗಿಲು ತೆರೆದು ನೋಡಿ ಕರೆಗಂಟೆ ಒತ್ತಿದವರ ಮುಖಕ್ಕೆ ಹೊಡೆದ ಹಾಗೆ ಬಾಗಿಲು ಮುಚ್ಚಿ ಬಿಡುತ್ತಾರೆ. ಭರವಸೆಯ ವ್ಯಕ್ತಿಗಳಂತೆ ಕಂಡು ಬಂದಲ್ಲಿ, ಪುರುಸೊತ್ತು ಇರುವವರು ಬಾಗಿಲು ತೆರೆದು ಸೇಲ್ಸ್‌ಮನ್‌ ಮಾತಾಡುವುದನ್ನು ಕೇಳಿಸಿಕೊಳ್ಳುತ್ತಾರೆ. ಇಷ್ಟವಾದರೆ ಖರೀದಿಸುತ್ತಾರೆ.

ಹೀಗೆ ಮನೆ ಮನೆಗೆ ಬರುವ ಮಹಿಳೆಯರು ಒಂದು ಪ್ರಾಡಕ್ಟ್ ಮಾರಾಟ ಮಾಡಿದರೆ ಕಂಪೆನಿಯವರಿಗೆ ಸಾಕ್ಷಿ ಸಮೇತ ಅದರ ವಿವರವನ್ನು ಆನ್‌ಲೈನ್‌ ಮೂಲಕ ತಕ್ಷಣ ನೀಡಬೇಕಾಗುತ್ತದೆ. ಕಳೆದ ವಾರ ಸಫ್ì ಎಕ್ಸೆಲ್‌ ಮ್ಯಾಟಿಕ್‌ ಲಿಕ್ವಿಡನ್ನು ಮಾರಲು ಮಹಿಳೆಯೊಬ್ಬಳು ಬಂದಿದ್ದಳು. ಬಿಸಿಲಿನಲ್ಲಿ ಸುತ್ತಾಡಿದ ಸುಸ್ತು ಅವಳ ಮುಖದಲ್ಲಿ ಕಾಣಿಸುತ್ತಿತ್ತು. ಇರಲಿ, ಎಂದಕೊಂಡು ಒಂದು ಬಾಟಲಿ ಖರೀದಿಸಿದೆ. ಆದರೆ, ಅಷ್ಟಕ್ಕೆ ಮುಗಿಯಲಿಲ್ಲ. ನಾನು ಬೇಡ ಅಂದರೂ ಅವಳಲ್ಲಿರುವ ಸಣ್ಣ ಪ್ಲಾಸ್ಟಿಕ್‌ ಪೆಟ್ಟಿಗೆಯನ್ನು ತೆರೆದು ಕಲೆ ಇರುವ ಬಿಳಿ ಬಟ್ಟೆಯ ತುಂಡಿಗೆ ಸಫ್ ಎಕ್ಸೆಲ್‌ ಲಿಕ್ವಿಡ್‌ ಹಚ್ಚಿ ಕಲೆ ತೆಗೆದು ತೋರಿಸಿ ದಳು. ನಾನು ಖರೀದಿಸುವ ದೃಶ್ಯವನ್ನು ಅವಳ ಮೊಬೈಲ್‌ನಲ್ಲಿ ಸೆರೆ ಹಿಡಿದಳು. ಆನಂತರ ಒಂದು ಮೊಬೈಲ್‌ ಸಂಖ್ಯೆಯನ್ನು ಕೊಟ್ಟು ನನ್ನ ಮೊಬೈಲ್‌ನಲ್ಲಿ ಮಿಸ್‌ಕಾಲ್‌ ಕೊಡಲು ಹೇಳಿದಳು. ವೀಡಿಯೋ ರೆಕಾರ್ಡ್‌ ಆನ್‌ ಮಾಡಿ, “ನಮಸ್ಕಾರ್‌’ ಎಂದು ಅವಳ ಹೆಸರು ಹೇಳಿ, ಇಂಥ ಪರಿಸರ

ದಲ್ಲಿ ಇಂಥ ಕಟ್ಟಡದಲ್ಲಿ ಇದ್ದೇನೆ ಅನ್ನುತ್ತ ಸುತ್ತಲಿನ ದೃಶ್ಯವನ್ನು ಸೆರೆಹಿಡಿ ಯಲು ಮೊಬೈಲ್‌ನ ಜೊತೆ ಅವಳೂ ಒಂದು ಸುತ್ತು ತಿರುಗಿದಳು. ಕೊನೆಗೆ ಆ ಕಂಪೆನಿಯ ವೆಬ್‌ಸೈಟಿಗೆ ಹೋಗಿ ಎಲ್ಲವನ್ನೂ ಆ ಕ್ಷಣವೇ ಅಪ್ಲೋಡ್‌ ಮಾಡಿದಳು. ಇಷ್ಟೆಲ್ಲ ರಾಮಾಯಣ ಮುಗಿದ ನಂತರ ಅವರ ಕಂಪೆನಿಯಿಂದ ನನ್ನ ಮೊಬೈಲ್‌ಗೆ “ಥ್ಯಾಂಕ್‌ ಯೂ’ ಮೆಸೇಜ್‌ ಬಂತು. ಒಂದು ಪ್ರಾಡಕ್ಟ್ ಕೊಳ್ಳುವಂತೆ ಗ್ರಾಹಕರನ್ನು ಒಪ್ಪಿಸುವುದೇ ಕಷ್ಟ. ಅಂಥದ್ದರಲ್ಲಿ ಇಷ್ಟೆಲ್ಲ ನಿಯಮಗಳು! ಇವರ ಹೆಣಗಾಟ ನೋಡುವಾಗ ಇಷ್ಟು ಕಷ್ಟದ ಕೆಲಸವನ್ನು ಕೂಡ ಮಹಿಳೆಯರು ಮಾಡುತ್ತಿದ್ದಾರಲ್ಲ ಎಂದು ಸೋಜಿಗವೆನಿಸುತ್ತದೆ.

ಮಾರ್ಚ್‌, ಎಪ್ರಿಲ್‌ ತಿಂಗಳಿನಲ್ಲಿ ಮುಂಬೈಯ ಸೇಲ್ಸ್‌ಮನ್‌ಗಳಿಗೆ ಬೀದಿ ವ್ಯಾಪಾರಿಗಳಿಗೆ ಹಬ್ಬ.. ಆ ಸಮಯದಲ್ಲಿ ಊರಿಗೆ ಹೊರಡಲಿರುವ ಮಹಿಳೆಯರು ಹೆಚ್ಚು ಕ್ರಿಯಾಶೀಲರಾಗುತ್ತಾರೆ. ಯಾಕೆಂದರೆ ಎರಡು ತಿಂಗಳ ಮುಂಚೆಯೇ ಊರಿಗೆ ಹೋಗುವ ತಯಾರಿ ಶುರುವಾಗುತ್ತದೆ. ಊರಿನಲ್ಲಿರುವ ನಮ್ಮವರಿಗೆ ಏನೇನು ಬೇಕೋ ಅದನ್ನೆಲ್ಲ ಖರೀದಿಸುವ ಕೆಲಸ ಆರಂಭವಾಗುತ್ತದೆ. ಮಹಿಳೆಯರಿಗೆ ಮುಂಬೈಯಲ್ಲಿ ತಾವು ಹೇಗಿದ್ದರೂ ನಡೆಯುತ್ತದೆ. ಆದರೆ, ಊರಿಗೆ ಹೋಗುವಾಗ ಮಾತ್ರ ಬಿಂದಿ ಯಿಂದ ಆರಂಭಿಸಿ ಚಪ್ಪಲಿಯವರೆಗೆ ಎಲ್ಲವೂ ಹೊಸದೇ ಆಗಬೇಕು.

ಅದೇ ಹಳೇ ಸೀರೆ!
ಮುಂಬಯಿ ನಗರಿಯಲ್ಲಿ ಆಧುನಿಕ ಉಡುಪು (ಜೀನ್ಸ್‌, ಟೀಶರ್ಟ್‌, ಕುರ್ತಾ, ಚೂಡಿದಾರ್‌) ವಿನ್ಯಾಸ ಆಗಾಗ ಬದಲಾಗುತ್ತಿರುತ್ತದೆ. ಆದರೆ, ಇಲ್ಲಿ ಸೀರೆಯ ಬೇಡಿಕೆ ಕಡಿಮೆ ಇರುವುದರಿಂದ ಅಂಗಡಿಯವರು ಕೂಡ ಅಷ್ಟೊಂದು ಪ್ರಾಮುಖ್ಯ ಕೊಡುವುದಿಲ್ಲ ಅನಿಸುತ್ತದೆ. ಸೀರೆಯ ಬಗೆಗೆ ತಿಳಿಯಬೇಕಾದರೆ ಊರಿಗೆ ಹೋಗಬೇಕು. ಹಿಂದಿನ ವರ್ಷ ಊರಿಗೆ ಹೋದಾಗ ನಾವು ಉಟ್ಟ ಸೀರೆಯನ್ನು ಈ ಬಾರಿಯೂ ಉಟ್ಟೆವೆಂದರೆ, ನಮಗೆ ನೆನಪಿರುತ್ತೋ ಬಿಡುತ್ತೋ ಆದರೆ, ಊರವರಿಗೆ ಸರಿಯಾಗಿ ನೆನಪಿರುತ್ತದೆ. “ಈ ಸಲ ನೀನು ಹೊಸ ಸೀರೆ ತಗೊಂಡಿಲ್ವಾ! ಇದನ್ನು ಕಳೆದ ಸಲ ಒಂದು ಮದ್ವೆಗೂ ಉಟ್ಟಿದ್ದೆ. ಆದರೂ ಒಂಚೂರು ಬಣ್ಣ ಮಾಸಿಲ್ಲ ನೋಡು’ ಎಂದು ನಯವಾಗಿ ಹೇಳಿ ಬಿಡುತ್ತಾರೆ. ಊರಿನಲ್ಲಿರುವ ಓಲ್ಡ್‌ ಫ್ಯಾಷನ್‌, ನ್ಯೂ ಫ್ಯಾಷನ್‌ ಕೆಲವೊಮ್ಮೆ ಕಿರಿಕಿರಿ ಹುಟ್ಟಿಸುತ್ತದೆ. ಈ ವರ್ಷ ಒಂದಾದರೆ ಮತ್ತೆ ಬರುವ ವರ್ಷ ಇನ್ನೊಂದು. ಹೊಸ ಮಾದರಿಯ ಸೀರೆ, ಬ್ಲೌಸ್‌ಗಳು ಆಯಾ ವರ್ಷದಲ್ಲಿ ಯಾವುದಿರುತ್ತದೆಯೋ ಅವನ್ನೇ ಹೆಚ್ಚಿನವರು ಅನುಸರಿಸುತ್ತಾರೆ. ಆದರೆ, ಮುಂಬಯಿಯಲ್ಲಿ ಹಾಗಲ್ಲ. ನಾವು ಮಾಡಿದ್ದೇ ಪ್ಯಾಷನ್‌. ಊರಿನಲ್ಲಿ ನಾವು ಧರಿಸುವ ಆಭರಣಗಳ ಮೇಲೂ ಮಹಿಳೆಯರ ಗಮನವಿರುತ್ತದೆ. ಒಂದು ವೇಳೆ ಉಟ್ಟ ಸೀರೆಗೆ ಒಪ್ಪುವ ಬಣ್ಣದ ಆರ್ಟಿಫಿಶ್ಯಲ್‌ ಆಭರಣಗಳನ್ನು ಧರಿಸಿಕೊಂಡರೆ, “ತುಂಬಾ ಲಾಸ್‌ ಆಗಿರಬೇಕು. ಪಾಪ, ಅವಳ ಕುತ್ತಿಗೆಯಲ್ಲಿ ಒಂದು ತುಂಡು ಚಿನ್ನ ಇಲ್ಲ. ಹೆಸರಿಗೆ ಮಾತ್ರ ಮುಂಬಯಿ. ಒಳಗುಟ್ಟು ಯಾರಿಗೇನು ಗೊತ್ತು?’ ಅಂತ ಹಿಂದಿನಿಂದ ಇತರರ ಬಗ್ಗೆ ಮಾತನಾಡುವುದನ್ನು ಎಷ್ಟೋ ಸಲ ಕೇಳಿಸಿಕೊಂಡದ್ದಿದೆ.

ಮುಂಬೈ ಲೋಕಲ್‌ ರೈಲಿನಲ್ಲಿ ಒಂಚೂರು ಗಮನ ತಪ್ಪಿದರೆ ಸಾಕು, ಬ್ಯಾಗಿನಲ್ಲಿದ್ದ ರೂಪಾಯಿಗಳು ಕಾಣೆಯಾಗಿರುತ್ತವೆ. ಹೀಗಿರುವಾಗ ಚಿನ್ನ ಧರಿಸಿಕೊಂಡು ಹೋದರೆ ಉಳಿದೀತೆ! ಈ ಭಯದಿಂದ ಮಹಿಳೆಯರು ಸೀರೆಗೆ ಒಪ್ಪುವ ನಕಲಿ ಸೆಟ್‌ಗಳನ್ನೇ ಹೆಚ್ಚು ಇಷ್ಟ ಪಡುತ್ತಾರೆ. ಕ್ರಮೇಣ ಅದೇ ಅಭ್ಯಾಸವಾಗಿಬಿಡುತ್ತದೆ. ಇಲ್ಲಿ ನಾವು ಹೇಗೂ ಇರಬಹುದು. ಯಾರೂ ನಮ್ಮನ್ನು ಪ್ರಶ್ನೆ ಮಾಡುವುದಿಲ್ಲ. ಈ ವಿಷಯದಲ್ಲಿ “ಅಮಿc ಮುಂಬಯಿ’ ಎಷ್ಟೋ ವಾಸಿ. ಯಾಕೆಂದರೆ, ಕೂತು ಹರಟೆ ಹೊಡೆಯುವಷ್ಟು ಸಮಯ ಎಲ್ಲಿದೆ ಈ ನಗರಿಯಲ್ಲಿ !

ಅನಿತಾ ಪಿ. ತಾಕೊಡೆ

ಟಾಪ್ ನ್ಯೂಸ್

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.