ಪರೀಕ್ಷಾ ಕಾಲೇ… ವಿಪರೀತಾಭ್ಯಾಸಃ
Team Udayavani, Mar 31, 2017, 3:45 AM IST
ಪರೀಕ್ಷೆ ಇರುವುದು ಮಕ್ಕಳಿಗಾದರೂ ಅವರ ಪರೀಕ್ಷೆಯ ದೆಸೆಯಿಂದ ಮಗ್ಗಲು ಬದಲಾಯಿಸಿದರೆ ಬ್ಯೂಟಿಪಾರ್ಲರಿಗೆ ಹೋಗಿ ಬರಲೂ ತಾಯಿಯಂದಿರಿಗೆ ಸಮಯವಿರದು. ಮೆನಿಕ್ಯೂರ್, ಪೆಡಿಕ್ಯೂರ್ ಹೋಗಲಿ ಹತ್ತು ನಿಮಿಷದೊಳಗೆ ಮುಗಿಯುವ ಥೆÅಡ್ಡಿಂಗ್ ಮಾಡಿಸಿಕೊಂಡು ಹುಬ್ಬಿಗೊಂದು ಅರ್ಥ ನೀಡುವ ಆಕಾರ ಕೊಡಿಸಿಕೊಂಡು ಬರಲೂ ಸಾಧ್ಯವಾಗುತ್ತಿಲ್ಲ…
ಬಹಳ ವರ್ಷಗಳ ಹಿಂದಿನ ಮಾತಾದ್ದರಿಂದ ಒಂದಾನೊಂದು ಕಾಲದಲ್ಲಿ ಎಂದೇ ಶುರು ಮಾಡೋಣ. ಒಂದಾನೊಂದು ಕಾಲದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಚಂದ್ರಕಾಂತಾ ಧಾರಾವಾಹಿಯಲ್ಲಿ ಪೂರ್ಣವಿರಾಮ, ಅಲ್ಪವಿರಾಮ, ಉದ್ಘಾರವಾಚಕಗಳಿಗೆಲ್ಲ “ಯಕ್ಕು’ ಎಂಬ ಶಬ್ದ ಬಳಸುತ್ತಿದ್ದ ಕ್ರೂರ್‌ಸಿಂಗನ ಪಾತ್ರ ಪರಿಚಯ ತಮಗೆಲ್ಲರಿಗೂ ಇದ್ದಿರಲೇಬೇಕು. ಕ್ರೂರ್‌ಸಿಂಗನ ಬಗ್ಗೆ ಗೊತ್ತಿಲ್ಲದವರಿಗೆ ಒಂದೇ ಮಾತಲ್ಲಿ ಅವನ ವರ್ಣನೆ ಮಾಡಿಬಿಡುತ್ತೇನೆ, ಅವನು ನೋಡಲು ಹೇಗಿದ್ದನೆಂದರೆ ಅವನ ಮುಖದ ಅರ್ಧ ಭಾಗ ವಕ್ರವಾಗಿ ಬೆಳೆದ ಹುಬ್ಬಿನಿಂದಲೇ ತುಂಬಿ ಹೋಗಿತ್ತು, ಅವನ ಕೂದಲು ಸಹ, ತಲೆ ತುಂಬ ಕೊಂಬು ಮೂಡಿದಂತೆ ಬೆಳೆದಿತ್ತು. ಆಗೆಲ್ಲ ಧಾರಾವಾಹಿ ನೋಡುತ್ತ ಇಷ್ಟೊಂದು ವಿಚಿತ್ರ ಮುಖದ ಮನುಷ್ಯರ್ಯಾರಾದರೂ ಇರುತ್ತಾರಾ, ಪೊಳ್ಳು ಕಲ್ಪನೆ ಎಂದು ನಗುತ್ತಿದ್ದೆವು.
ಕಳೆದ ಕೆಲವು ವರ್ಷಗಳಿಂದ ಪರೀಕ್ಷೆಯ ಬಿಸಿ ಮೂಡಿಸುವ ಫೆಬ್ರವರಿ-ಮಾರ್ಚ್ ಬಂತೆಂದರೆ ಹೇಳಿಕೇಳುವವರಿಲ್ಲದೆ ಕರಡದಂತೆ ಪೊದೆ ಪೊದೆಯಾಗಿ ಹುಬ್ಬು ಬೆಳೆದು ಕ್ರೂರ್‌ಸಿಂಗನ ತಂಗಿಯೆಂಬಂತೆ ನನ್ನ ಮುಖದಲ್ಲೊಂದು ವಿಕಾರವಾದ ಕಳೆ ಮೂಡಲು ಪ್ರಾರಂಭವಾಗಿದ್ದೇ ತಡ, ನಾನು ನಕ್ಕು ಕ್ರೂರ್‌ಸಿಂಗನನ್ನು ಅಪಮಾನ ಮಾಡಿದ್ದು ಸರಿಯಿಲ್ಲ ಎಂದು ಮನದಟ್ಟಾಗಿಬಿಟ್ಟಿತ್ತು.
ಪರೀಕ್ಷೆ ಇರುವುದು ನನ್ನ ಮಕ್ಕಳಿಗಾದರೂ ಅವರ ಪರೀಕ್ಷೆಯ ದೆಸೆಯಿಂದ ಮಗ್ಗಲು ಬದಲಾಯಿಸಿದರೆ ಬ್ಯೂಟಿಪಾರ್ಲರಿಗೆ ಹೋಗಿ ಬರಲೂ ನನಗೆ ಸಮಯವಿರದು. ಮೆನಿಕ್ಯೂರ್, ಪೆಡಿಕ್ಯೂರ್ ಹೋಗಲಿ ಹತ್ತು ನಿಮಿಷದೊಳಗೆ ಮುಗಿಯುವ ಥೆÅಡ್ಡಿಂಗ್ ಮಾಡಿಸಿಕೊಂಡು ಹುಬ್ಬಿಗೊಂದು ಅರ್ಥ ನೀಡುವ ಆಕಾರ ಕೊಡಿಸಿಕೊಂಡು ಬರಲೂ ಸಾಧ್ಯವಾಗುತ್ತಿಲ್ಲ. ಇಂತಹ ತ್ಯಾಗ ಮಾಡಿಯೂ ನನ್ನ ಹುಬ್ಬನ್ನು ಕಂಡು ಮಕ್ಕಳು, ಅಮ್ಮ, ರಾತ್ರಿ ಬೆಳಗಾಗುವುದರೊಳಗಡೆ, “ಹಕ್ಕಿ ಬಂದು ನಿನ್ನ ಹುಬ್ಬಿನೊಳಗೆ ಬೆಚ್ಚಗೆ ಗೂಡು ಕಟ್ಟಿದರೆ ಏನು ಮಾಡುವುದು?’ ಎಂದು ಕಾಲೆಳೆದು ಪಕಪಕನೆ ನಗುವುದು ಬೇರೆ !
ಥೆಡ್ಡಿಂಗ್, ವ್ಯಾಕ್ಸಿಂಗ್ ಕಾಣದ ನನ್ನ ಕೈಕಾಲುಗಳಿಗೆ ಹಿಪ್ಪಿ ಬೆಳೆದು ಕರಡಿಯಂತಾಗಿಬಿಟ್ಟಿದ್ದೇನೆ. ನನ್ನ ದೌರ್ಭಾಗ್ಯ ಹೇಗಿದೆ ನೋಡಿ, ಬೆಂಗಳೂರಿನ ನೀರಿಗೆ ತಲೆಯ ಮೇಲಿನ ಕೂದಲುದುರುವಂತೆ, ಕೈ ಕಾಲಿನ ಮೇಲೆ ಕಪ್ಪಗೆ ಬೆಳೆದ ಕೂದಲು ಸಹ ಉದುರಿದ್ದಿದ್ದರೆ ಥೆÅಡ್ಡಿಂಗ್ ಮತ್ತು ವ್ಯಾಕ್ಸಿಂಗ್‌ನ ತಲೆಬಿಸಿಯೇ ಇರುತ್ತಿರಲಿಲ್ಲ.
ಒಟ್ಟಿನಲ್ಲಿ ಕ್ರೂರ್‌ಸಿಂಗನ ಮುಖ, ಕರಡಿಯ ದೇಹವಿರುವ ನನ್ನ ಪರೀಕ್ಷಾವತಾರಕ್ಕೆ ಇನ್ನೂ ನಾಮಕರಣವಾಗಲಿಲ್ಲ ಅಷ್ಟೇ !ಮಕ್ಕಳ ಪರೀಕ್ಷೆಯ ದಿನಗಳಲ್ಲಿ ನನ್ನ ಅವಸ್ಥೆಯೇ ಹೀಗಾದರೆ ನಮ್ಮನೆಯ ಫೋನು ಮೊಬೈಲುಗಳ ಗತಿಯ ಬಗ್ಗೆ ಯಾರಾದರೂ ಊಹಿಸಿದ್ದೀರಾ?
ಉಸಿರಾಡಲೂ ಸಮಯವಿರದೆ ಒದರಿ ಒದ್ದಾಡುತ್ತಿದ್ದ ಮೊಬೈಲ್‌ಗಳಿಗೆ ಈ ಎರಡು ತಿಂಗಳು ವೆಕೇಷನ್ ಸಿಕ್ಕಂತೆ ನೆಮ್ಮದಿಯಾಗಿ ದಿವಾನಿಯ ಮೇಲೋ ಬೆಡ್ಡಿನ ಮೂಲೆಯಲ್ಲೋ ಬಿದ್ದು ವಿಶ್ರಾಂತಿ ತೆಗೆದುಕೊಳ್ಳುತ್ತಿರುತ್ತವೆ. ಫೆಬ್ರವರಿಯಿಂದ ಮಾರ್ಚ್ ಕೊನೆಯವರೆಗೂ ನಮ್ಮ ಮನೆಯಲ್ಲಿ ಅವುಗಳನ್ನು ಮಾತಾಡಿಸುವವರೂ ಇರುವುದಿಲ್ಲ.
ಮೇಲಿಂದ ಮೊಬೈಲ್ ರಿಂಗಾದರೆ ಸಾಕು, ಒಂಥರ ಬಾಂಬಿದೆ ಅಂತ ಹೇಳಲು ಯಾರಾದರೂ ಕರೆ ಮಾಡಿದ್ದಾರೆಯೇ ಎನ್ನುವಷ್ಟು ಭಯ ಬಿದ್ದುಬಿಡುತ್ತೇವೆ. ಯಾಕೆಂದರೆ, ನಮ್ಮನೆಗೆ ಬರುವ ಅತಿಥಿ ಮಹೋದಯರಿಗೆಲ್ಲ ಬೆಂಗಳೂರು ನೆನಪಾಗುವುದು ಪರೀಕ್ಷೆಯ ಸಮಯದಲ್ಲೇ. ನಾಲ್ಕು ದಿನದಿಂದ ವಾರದ ಮಟ್ಟಿಗೆ ಉಳಿದುಕೊಳ್ಳಲು ಊರಿನಿಂದ ಸಕಲ ಸನ್ನದ್ಧರಾಗಿ ಪೊಟ್ಟಣ ಕಟ್ಟಿಕೊಂಡು ಬಂದಿರುತ್ತಾರೆ. ಬಾಕಿ ದಿನದಲ್ಲೆಲ್ಲ ನಾವು “ಅತಿಥಿದೇವೋ ಭವ’ ಎಂದು ಕೈ ಮುಗಿದು ಕೊಂಡಾಡಿದರೂ ಪರೀಕ್ಷೆಯ ಸಮಯದಲ್ಲಿ ನೆಂಟರಿಗೂ ಆಫ್ ಸೀಸನ್ ಎಂದು ಘೋಷಿಸಿಬಿಟ್ಟಿರುತ್ತೇವೆಯಲ್ಲ!
ಆದರೂ ಮರ್ಯಾದೆ ಹೋಗುವ ಪ್ರಸಂಗ ನನಗಂತಲೇ ಬಂದೆರಗುವುದನ್ನು ನೋಡಿ! ಒಂದಿನ ಹೀಗೆ ಮಾರ್ಚ್ ತಿಂಗಳಲ್ಲಿ ಫೋನು ರಿಂಗಾಯಿತು, ನಡುಗುವ ಕೈಗಳಿಂದಲೇ ಫೋನ್ ರಿಸೀವ್ ಮಾಡಿದೆ, ಅತ್ತ ಕಡೆಯಿಂದ ಮಾತನಾಡುತ್ತಿದ್ದ ಧ್ವನಿ ನನ್ನ ಸುಖ-ದುಃಖ, ಆರೋಗ್ಯ, ಐಶ್ವರ್ಯ, ಮೈ ಕೈ ನೋವು ಎಲ್ಲವನ್ನೂ ವಿಚಾರಿಸಿ ನಂತರ ಸೀದಾ ವಿಷಯಕ್ಕೆ ಬಂದಿತು, “”ಮುಂದಿನ ವಾರವೇನಾದರೂ ಪ್ಲ್ರಾನ್ ಇದೆಯಾ?” ಎಂದು. ಸಮಸ್ಯೆ ಕಾಲು ಬುಡದಲ್ಲೇ ಇದೆ ಎಂದು ತಿಳಿದು, “”ಹೇಳಿಕೊಳ್ಳುವಂಥ ಯಾವ ಪ್ಲ್ರಾನ್ ಕೂಡ ಇಲ್ಲ. ಇಲ್ಲಿಯೇ ರಾಜಾಜಿನಗರದಲ್ಲಿರುವ ಚಿಕ್ಕಿಯ ಮನೆಗೆ ಹೋಗಿ ನಾಲ್ಕು ದಿನ ಉಳಿದು ಬರುವುದಿದೆ” ಎಂದು ನನಗೇನೂ ಅವರ ಯೋಜನೆ ತಿಳಿಯಲಿಲ್ಲ ಎನ್ನುವಂತೆ ನನ್ನ ಸಾಚಾತನವನ್ನು ತೋರಿಸಿಕೊಳ್ಳುತ್ತ ಒಂದು ಸುಳ್ಳು ಹೇಳಿದೆ. ನಂತರ ಪರೀಕ್ಷೆಯ ಒತ್ತಡದಲ್ಲಿ ಆ ಧ್ವನಿಯನ್ನು ಮರೆತುಬಿಟ್ಟೆ. ಅದಾದ ಎರಡು ತಿಂಗಳುಗಳ ನಂತರ ಯಾವುದೋ ಮುಂಜಿಯಲ್ಲಿ ಹಠಾತ್ತಾಗಿ ಆ ದನಿಯ ವಾರಸುದಾರರು ಎದುರಿಗೆ ಬಂದು, “”ನಿಮ್ಮ ಚಿಕ್ಕಿಯ ಮನೆಯಲ್ಲೇ ತಂಗಿದ್ದೆ ಒಂದು ವಾರದ ಮಟ್ಟಿಗೆ, ಬರುತ್ತೀನಿ” ಎಂದವಳು, “”ನೀನು… ಬರುತ್ತೀಯೇನೋ ಎಂದುಕೊಂಡರೆ ಪತ್ತೆಯೇ ಇಲ್ಲ” ಎಂದು ಬೇಕೆಂದೇ ಬಾಯೆಳೆಯುತ್ತ ಹೇಳಿದರು. ಮುಜುಗರವೇನೋ ಆಯ್ತು; ಎಲ್ಲರೆದುರು ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದರಿಂದ. ಮಕ್ಕಳನ್ನು ಹಡೆದ ಮೇಲೆ ಮುಜುಗರ ಅನುಭವಿಸುವ ಮಾಮೂಲಿ ಪ್ರಸಂಗ ನನಗೆ ಪೂರ್ತಿ ಒಗ್ಗಿ ಹೋಗಿದ್ದರಿಂದ ನೀವು ನಿರೀಕ್ಷಿಸಿದಂತಹ ಯಾವ ಅನಾಹುತವೂ ಜರುಗಲಿಲ್ಲ. ಒಮ್ಮೆ ಒಗಟಾಗಿ ಅವರತ್ತ ನಗು ಎಸೆದು ವಟುವಿಗೆ ಆಶೀರ್ವದಿಸಲು ಹೊರಟುಬಿಟ್ಟೆ.
ಇಂತಹ ಸಂದರ್ಭ ಪದೇ ಪದೇ ಬಾರದಿರಲಿ ಎಂಬ ಕಾರಣಕ್ಕಾಗಿ ಪರೀಕ್ಷಾ ಸಮಯದಲ್ಲಿ ಫೋನುಗಳು, ಏರೋಪ್ಲೇನಿನಲ್ಲಿಲ್ಲದಿದ್ದರೂ ಏರೊಪ್ಲೇನ್ ಮೋಡಿನಲ್ಲಿರುವುದೇ ಜಾಸ್ತಿ.
ಫೋನಿನ ನಂತರದ ಸರದಿ ನಮ್ಮನೆಯ ಟೀವಿಯದ್ದು. ಪರೀಕ್ಷೆಯ ಹತ್ತಿರದ ಎರಡು ತಿಂಗಳು ಕೇಬಲ್ ಕನೆಕ್ಷನ್ ತೆಗೆದು ಹಾಕಿಸಿಬಿಡುತ್ತೇವೆ. ಅಮ್ಮನ ಬಳಿ ಬರೀ ಸುಳ್ಳು ಹೇಳುವ ನೋಬಿತಾ ಪರೀಕ್ಷೆಯ ದಿನ ಹತ್ತಿರ ಬಂದಂತೆ ಟಿವಿಯಲ್ಲಿ ಕಾಣಿಸಿಕೊಂಡರೆ ನನಗಲ್ಲವೇ ಭಯ! ಹೊಟ್ಟೆಗಿಲ್ಲದ ಪರದೇಶಿ ಟೀವಿಯ ಗೊಡವೆಗೆ ಯಾರೂ ಹೋಗದೆ ನಮ್ಮನೆ ಟೀವಿ ಮಾತಾಡುವುದನ್ನೇ ಮರೆತುಬಿಟ್ಟಿತ್ತು. “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವ ಟೀವಿಯ ಪುನರುಜ್ಜೀವನಕ್ಕೆ ಮತ್ತೆ ಏಪ್ರಿಲ್ ಬರಬೇಕು.
ಇವಿಷ್ಟೇ ಅಲ್ಲ, ಇಡೀ ಕೇರಿಯವರ ಬಾಯಿಯಲ್ಲಿ ನೀರೂರುವಂತೆ ಪೂರಿ, ಪಕೋಡ ಮಾಡಿಯೋ ಅಥವಾ ಹೊಟೇಲಿನಿಂದ ತರಿಸಿಕೊಂಡೋ ಮೆದ್ದುತ್ತಿದ್ದ ನಮ್ಮನೆಯಲ್ಲಿ ಈಗ ಅನ್ನ ಸಾಂಬಾರು, ಪಲ್ಯ, ಕೋಸಂಬರಿಯಂತಹ ಕನಿಕರ ಮೂಡಿಸುವ ಆಹಾರ ತಿಂದು ಬದುಕುತ್ತಿದ್ದೇವೆ. ಎಣ್ಣೆ ಇರದ ಅಡುಗೆ ಕಂಡು ನನ್ನ ಪಾತ್ರೆಗಳೂ ನಾಲಿಗೆ ಜಡ್ಡುಗಟ್ಟಿ ವಾಕರಿಸುತ್ತವೆ. ಪರೀಕ್ಷೆಯ ಸಮಯದಲ್ಲಿ ವೃಥಾ ರಿಸ್ಕ್ ಯಾಕೆ, ಮೊದಲೇ ನಿದ್ರೆಗೆಟ್ಟು ಪಿತ್ತ ಏರಿದ ಮಕ್ಕಳು ಎಣ್ಣೆಯಲ್ಲಿ ಕರಿದ ತಿಂಡಿ, ಫ್ರೀಜರ್‌ನ ಐಸ್‌ಕ್ರೀಮ್ ತಿಂದು ಕೆಮ್ಮು ದಮ್ಮು ಹಿಡಿಸಿಕೊಂಡರೆ ಯಾರಿಗೆ ಬೇಕು ಅಲ್ಲವೆ? ಮಕ್ಕಳಿಗೆ ಅನಾರೋಗ್ಯದ ಕಾಡದೆ ಅವರ ಪರೀಕ್ಷೆ ಸುಸೂತ್ರವಾಗಿ ಮುಗಿದರೆ ಸಾಕಪ್ಪಾ ಸಾಕು ಎಂದು ಶಾಪಿಂಗು, ಶಾಪಿಂಗಿನ ನೆಪದಲ್ಲಿ ತಿನ್ನುವ ರಸ್ತೆ ಬದಿಯ ತಿಂಡಿಗಳನ್ನೂ ಖೈದು ಮಾಡಿಬಿಟ್ಟಿರುತ್ತೇವೆ.
ನನ್ನ ಮಕ್ಕಳೆಂಬ ಕಣ್ಮಣಿಗಳ್ಳೋ, ರಾತ್ರಿಯಿಡೀ ದೀಪಾವಳಿ ಆಚರಿಸುತ್ತ ಮನೆ ತುಂಬಾ ಲೈಟ್ ಹಾಕಿ ಒಬ್ಬನು ಕುಂತು ಓದಿದರೆ, ಮತ್ತೂಬ್ಬಳು ಓಡಾಡುತ್ತ ಓದಿ ನೆಲ ಸವೆಸುತ್ತಿರುತ್ತಾಳೆ. ಆಮೇಲೆ ನೋವು ಹಿಡಿದ ಅವರ ಕೈ ಕಾಲಿಗೆ, ಬೆನ್ನು- ಕುತ್ತಿಗೆಗೆ ಎಣ್ಣೆ ಹಚ್ಚಿ ತಿಕ್ಕುವುದು ನನ್ನ ಕೆಲಸ. ಎಣ್ಣೆ ತಿಕ್ಕಾಣದ ದಿನದಿಂದ ಮನೆಯೆಲ್ಲ ಬಾಣಂತಿ ಕೋಣೆಯಂತೆ ಕೊಬ್ಬರಿ ಜಿಡ್ಡಿನ ಕಸರು ಕಂಪು!
ದೇವರ ಕೋಣೆಯೊಳಗಂತೂ ಬಲಮುರಿ ಗಣಪನ ಹೂವಿನ ಪ್ರಸಾದ, ರಾಗಿ ಗುಡ್ಡದ ಹನುಮನ ಭಂಡಾರ, ತಿರುಪತಿಯ ಲಡ್ಡು ಪ್ರಸಾದ, ರಾಘವೆಂದ್ರ ಸ್ವಾಮಿಯ ಕಲ್ಲುಸಕ್ಕರೆ ಪ್ರಸಾದ, ಬೇಡಿದ್ದನ್ನೆಲ್ಲ ಕಣ್ಣು ಮುಚ್ಚಿ ಕೊಡುವ ಭೋಲೆನಾಥನ ಹೂವಿನ ಪ್ರಸಾದವನ್ನು ಎರಡು ತಿಂಗಳಿಗಾಗುವಷ್ಟು ತಂದಿಟ್ಟುಬಿಡುತ್ತೇನೆ. ಪ್ರಸಾದ ಬಳಿದುಕೊಂಡರೆ ಮಕ್ಕಳ ಮಾನಸಿಕ ಶಕ್ತಿ ಹೆಚ್ಚುವುದಷ್ಟೇ ಅಲ್ಲ , ಕಳೆದ ಹತ್ತು ತಿಂಗಳಲ್ಲಿ ಕೆಡಿಸಿಕೊಂಡ ದೇವರೊಟ್ಟಿಗಿನ ನಮ್ಮ ಸಂಬಂಧವನ್ನು ಕುದುರಿಸಿಕೊಳ್ಳಬೇಕಿರುತ್ತದೆಯಲ್ಲ !
ಪರೀಕ್ಷೆಗೆ ಏನು ಇನ್ನೊಂದು ವಾರವಿದೆ ಎನ್ನುವಾಗಲಂತೂ ನಮ್ಮನೆಯ ಅನಕ್ಷರಸ್ಥ ಮಂಚ, ಹಾಸಿಗೆ, ದಿಂಬು, ಸೋಫಾಗಳಿಗೂ ನೆನಪಿರುವಂತೆ ಕುಂತಲ್ಲಿ, ನಿಂತಲ್ಲಿ, ಮಲಗಿದಲ್ಲಿ, ತಿನ್ನುವಾಗಲೂ ಶಾಲಾ ಪುಸ್ತಕವನ್ನು ಪಠಿಸಲಾಗುತ್ತದೆ. ಪರೀಕ್ಷೆಯ ದಿನವಂತೂ ಕೇಳಲೇಬೇಡಿ ಉಮಹೇ ಸಮಯದಲ್ಲಷ್ಟೇ ಅಲ್ಲ , ಸ್ನಾನದ ಸಂದರ್ಭದಲ್ಲೂ ಪಠ್ಯ ಪುಸ್ತಕಗಳು ಬಚ್ಚಲಿಗೆ ಹೋಗುತ್ತವೆೆ. ಅಲ್ಲಿ ಯಾವ ಆಸನದಲ್ಲಿ ತಟಸ್ಥರಾಗಿ ಪುಸ್ತಕ ಹಿಡಿದು ಓದಲಾಗುತ್ತದೆ ಎಂಬುದು ನನಗಿನ್ನೂ ತಿಳಿದಿಲ್ಲ !
ಇಷ್ಟೆಲ್ಲ ಓದುವ ಮಕ್ಕಳನ್ನು ಪಡೆದ ನನ್ನಲ್ಲಿ ಧನ್ಯತಾ ಭಾವನೆ ಮೂಡಿ, ಮಕ್ಕಳು ಓದಿದ್ದೆಲ್ಲ ನೆನಪಿನಲ್ಲಿರಲಿ ಎಂದು ಬೇಡುತ್ತ¤ ಎರಡು ಎಕ್ಸ್‌ಟ್ರಾ ತೆಂಗಿನ ಕಾಯಿಯನ್ನು ಒಡೆದು ದೇವರನ್ನು ಪೂಜಿಸುತ್ತೇನೆ. ಹೀಗೆ ಹಿಗ್ಗಾಮುಗ್ಗಾ ದೇವರ ಮೇಲೆ ಎಲ್ಲಾ ಕಡೆಯಿಂದಲೂ ಗೆರಿಲ್ಲಾ ದಾಳಿ ನಡೆಸಿ ಅವನನ್ನು ಒಲಿಸಿಕೊಳ್ಳುವ ಸರ್ವ ಪ್ರಯತ್ನವನ್ನೂ ಮಾಡಲಾಗುತ್ತದೆ. ಮಕ್ಕಳ ಪರೀಕ್ಷೆ ಎಂದರೆ ಸುಮ್ಮನಿರಲಾಗುತ್ತದೆಯೆ, ಇಷ್ಟೆಲ್ಲ ಕಸರತ್ತು ಮಾಡಲೇಬೇಕಿದೆ.
ಕಳೆದ ವರ್ಷದ ಫೆಬ್ರವರಿ-ಮಾರ್ಚ್‌ನ ಕಷ್ಟ ಕಾರ್ಪಣ್ಯ ಮುಗಿದು ನಾಲ್ಕು ದಿನ ನೆಮ್ಮದಿಯ ಉಸಿರು ಬಿಟ್ಟಿದ್ದೆನೋ ಇಲ್ಲವೋ ಈ ವರ್ಷ ಮತ್ತೆ ಪರೀಕ್ಷೆಯ ದಿನಗಳು ಬಂದುಬಿಟ್ಟಿದೆ. ಈ ಸಲದ ವೇಳಾಪಟ್ಟಿಯ ಪ್ರಕಾರ ಏಪ್ರಿಲ್‌ನ ಮೊದಲರ್ಧ ತಿಂಗಳು ಮುಗಿಯುವವರೆಗೂ ಪರೀಕ್ಷೆಯಿದೆಯಂತೆ! ಅದರೊಳಗಡೆ ನಿಮಗೆ ನಾನು ಎಲ್ಲಿಯಾದರೂ ಕಾಣಿಸಿದರೆ ನನ್ನನ್ನು ನೀವು ಖಂಡಿತ ಗುರುತಿಸಲಾರಿರಿ, ನಾನು ಬ್ಯೂಟಿಪಾರ್ಲರಿಗೆ ಹೋಗದೆ ಒಂದೂವರೆ ತಿಂಗಳ ಮೇಲಾಗಿದೆ ! ಮನೆಯಲ್ಲಿ ಮಕ್ಕಳ ಪರೀಕ್ಷೆಗೆ ಭರ್ಜರಿ ತಯಾರಿ ನಡೆಯುತ್ತಿದೆ.
– ಛಾಯಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.