ಕಿತ್ತಳೆಹಣ್ಣಿನ ವೈವಿಧ್ಯ
Team Udayavani, Dec 6, 2019, 5:00 AM IST
ಕಿತ್ತಳೆಯು ಹಣ್ಣುಗಳಲ್ಲಿ ಸರ್ವಶ್ರೇಷ್ಠ. ಈ ಹಣ್ಣನ್ನು ಸೇವಿಸುವುದರಿಂದ ಆಯಾಸ ಪರಿಹಾರವಾಗುವುದು. ಬಾಯಾರಿಕೆ ನೀಗುವುದು. ಹಸಿವು ಕಾಣಿಸಿಕೊಳ್ಳುವುದು. ರಕ್ತ ವೃದ್ಧಿಯಾಗುವುದು. ಈ ಹಣ್ಣಿನ ರಸವನ್ನು ಎಲ್ಲ ವಯಸ್ಸಿನವರಿಗೂ, ಯಾವುದೇ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೂ ನಿರಾತಂಕವಾಗಿ ಕೊಡಬಹುದು. ಇಲ್ಲಿವೆ ಕೆಲವು ಕಿತ್ತಳೆಯ ರೆಸಿಪಿಗಳು.
ಕಿತ್ತಳೆ ಅಪ್ಪೆಹುಳಿ
ಬೇಕಾಗುವ ಸಾಮಗ್ರಿ: 1-2 ಕಿತ್ತಳೆ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, ಚಿಟಿಕೆ ಇಂಗು, ಸ್ವಲ್ಪ ಕರಿಬೇವು, 1 ಒಣಮೆಣಸು, ರುಚಿಗೆ ತಕ್ಕಷ್ಟು ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು , 1 ಚಮಚ ಎಣ್ಣೆ.
ತಯಾರಿಸುವ ವಿಧಾನ: ಕಿತ್ತಳೆ ಸಿಪ್ಪೆ ತೆಗೆದು, ಸೊಳೆಯ ಬೀಜ ತೆಗೆದು ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಜಾಲರಿಯಲ್ಲಿ ಶೋಧಿಸಿ ಸ್ವಲ್ಪ ನೀರು ಸೇರಿಸಿ. ಬೆಲ್ಲ-ಉಪ್ಪು ಸೇರಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಇಂಗು, ಕರಿಬೇವು, ಒಣಮೆಣಸು ಸೇರಿಸಿ ಒಗ್ಗರಣೆ ಕೊಟ್ಟು ಸರಿಯಾಗಿ ತೊಳಸಿ. ಈಗ ರುಚಿಯಾದ ಅಪ್ಪೆ ಹುಳಿ ಅನ್ನ, ಗಂಜಿಯೊಂದಿಗೆ ತಿನ್ನಲು ರುಚಿ.
ಕಿತ್ತಳೆ ಸಿಪ್ಪೆ ಗೊಜ್ಜು
ಬೇಕಾಗುವ ಸಾಮಗ್ರಿ: 2 ಕಿತ್ತಳೆ ಹಣ್ಣಿನ ಸಿಪ್ಪೆ , 2-3 ಹಸಿಮೆಣಸು, 1/4 ಚಮಚ ಕೆಂಪುಮೆಣಸಿನ ಪುಡಿ, 1/2 ಚಮಚ ಸಾಂಬಾರುಪುಡಿ, 1/2 ಅಚ್ಚು ಬೆಲ್ಲ, 1/2 ಚಮಚ ಸಾಸಿವೆ, 1 ಕೆಂಪುಮೆಣಸು, 1 ಚಮಚ ಎಣ್ಣೆ, ಸ್ವಲ್ಪ ಕರಿಬೇವು, 1 ಚಮಚ ತುಪ್ಪ , ರುಚಿಗೆ ತಕ್ಕಷ್ಟು ಉಪ್ಪು .
ತಯಾರಿಸುವ ವಿಧಾನ: ಕಿತ್ತಳೆ ಸಿಪ್ಪೆಯನ್ನು ತೊಳೆದು ಸಣ್ಣಗೆ ಹೆಚ್ಚಿ ಬಾಣಲೆಗೆ ಹಾಕಿ ತುಪ್ಪ ಸೇರಿಸಿ ಕೆಂಪಗೆ ಹುರಿಯಿರಿ. ನಂತರ ಹಸಿಮೆಣಸು, ಉಪ್ಪು , ಬೆಲ್ಲ, ಕೆಂಪುಮೆಣಸಿನ ಪುಡಿ, ಸಾಂಬಾರು ಪುಡಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕೆಂಪುಮೆಣಸು, ಕರಿಬೇವು ಸೇರಿಸಿ ಒಗ್ಗರಣೆ ಕೊಡಿ.
ಕಿತ್ತಳೆ ಲಸ್ಸಿ
ಬೇಕಾಗುವ ಸಾಮಗ್ರಿ: 1 ಕಪ್ ಗಟ್ಟಿ ಮೊಸರು, 1 ಕಪ್ ಕಿತ್ತಳೆ ರಸ, 2 ಚಮಚ ಜೇನುತುಪ್ಪ , 1/2 ಚಮಚ ಹುರಿದ ಜೀರಿಗೆ ಪುಡಿ, 2 ಚಮಚ ಸಕ್ಕರೆ.
ತಯಾರಿಸುವ ವಿಧಾನ: ಮೊಸರು ಮತ್ತು ಕಿತ್ತಳೆ ರಸ ಒಟ್ಟಿಗೆ ಮಿಶ್ರಣ ಮಾಡಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಸಕ್ಕರೆ, ಜೇನುತುಪ್ಪ ಹಾಕಿ ಕರಗಿಸಿ. ಜೀರಿಗೆ ಪುಡಿ ಹಾಕಿ. ಐಸ್ ತುಂಡು ಹಾಕಿ ತಣ್ಣಗೆ ಮಾಡಿ. ನಂತರ ಗಾಜಿನ ಲೋಟಗಳಿಗೆ ಹಾಕಿ ಕುಡಿಯಿರಿ.
ಕಿತ್ತಳೆ ಖೀರು
ಬೇಕಾಗುವ ಸಾಮಗ್ರಿ: 1 ಕಪ್ ದಪ್ಪ ಹಾಲು, 1 ಕಪ್ ಸಕ್ಕರೆ, 100 ಗ್ರಾಂ ಸಪ್ಪೆ ಕೋವಾ, 1 ಸುಲಿದ ಕಿತ್ತಳೆಹಣ್ಣು , 7-8 ಗೋಡಂಬಿ, 9-10 ಒಣದ್ರಾಕ್ಷೆ , ಸ್ವಲ್ಪ ಕೇಸರಿದಳ, 2 ಚಮಚ ತುಪ್ಪ.
ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು 1 ಕಪ್ ದಪ್ಪ ಹಾಲು ಹಾಕಿ ಬಿಸಿ ಮಾಡಿ. ನಂತರ ಸಕ್ಕರೆ ಹಾಕಿ ತೊಳಸಿ. ಸಪ್ಪೆ ಕೋವಾ ಹಾಕಿ ಕರಗಿಸಿ. ನಂತರ ಸಿಪ್ಪೆ-ಬೀಜ ತೆಗೆದ ಕಿತ್ತಳೆ ಹಣ್ಣು ಹಾಕಿ ಸಣ್ಣ ಉರಿಯಲ್ಲಿ ತೊಳಸಿ. ಸ್ವಲ್ಪ ಕುದಿಯಲಿ. ನಂತರ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷೆ ಹುರಿದು ಮಿಶ್ರಣಕ್ಕೆ ಹಾಕಿ, ಕೆಳಗಿಳಿಸಿ. ಮೇಲಿನಿಂದ ಕೇಸರಿ ದಳ ಹಾಕಿ ಅಲಂಕರಿಸಿ.
ಕಿತ್ತಳೆ ಮುರಬ್ಬ
ಬೇಕಾಗುವ ಸಾಮಗ್ರಿ: 2 ಕಪ್ ಬೀಜ, ಸಿಪ್ಪೆ ತೆಗೆದು ತುಂಡು ಮಾಡಿದ ಕಿತ್ತಳೆ ತುಂಡುಗಳು, 1/2 ಕೆಜಿ ಸಕ್ಕರೆ, 1 ಚಮಚ ಏಲಕ್ಕಿ ಪುಡಿ, 1/2 ಚಮಚ ಸಿಟ್ರಿಕ್ ಆಮ್ಲ, 1/2 ಚಮಚ ಕೇಸರಿ ಎಸೆನ್ಸ್ .
ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಕಾಲು ಲೀಟರ್ ನೀರು ಹಾಕಿ. ನಂತರ ಸಕ್ಕರೆ ಹಾಕಿ. ಸಕ್ಕರೆ ಕರಗಿ ನೂಲು ಪಾಕವಾದಾಗ ಸಣ್ಣಗೆ ತುಂಡು ಮಾಡಿದ ಕಿತ್ತಳೆ ಚೂರು ಹಾಕಿ. ಪಾಕ ಗಟ್ಟಿಯಾಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ಕೇಸರಿ ಎಸೆನ್ಸ್ ಮತ್ತು ಏಲಕ್ಕಿ ಪುಡಿ ಹಾಕಿ ಬೆರೆಸಿ. ಮಿಶ್ರಣ ತಣಿದ ಮೇಲೆ ಬಾಟಲಿಯಲ್ಲಿ ಹಾಕಿಡಿ. ಚಪಾತಿ, ರೊಟ್ಟಿ ಜೊತೆ ಸವಿಯಲು ಚೆನ್ನಾಗಿರುತ್ತದೆ.
ಗೀತಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.