ಡಬ್ಟಾವಾಲಾಗಳಲ್ಲಿ ಮಹಿಳೆಯರೂ ಇದ್ದಾರೆ !
Team Udayavani, May 3, 2019, 6:00 AM IST
ದಿನವಿಡೀ ಹೊರಗಡೆ ದುಡಿಯುವ ಮನೆಮಂದಿಯನ್ನು ಜೋಪಾನವಾಗಿ ನೋಡಿಕೊಳ್ಳಬೇಕೆಂಬ ಹಂಬಲ ಹೆಚ್ಚಿನ ಗೃಣಿಯರಿಗಿರುತ್ತದೆ. ತನ್ನ ಪತಿ, ಮಗ ಅಥವಾ ಮಗಳು ಮನೆಯಲ್ಲಿ ತಯಾರಿಸಿದ ಅಡುಗೆಯನ್ನೇ ಊಟ ಮಾಡಬೇಕು ಅನ್ನುವ ಆಸೆ ಅವರದು. ಹಾಗಂತ ಮಧ್ಯಾಹ್ನ ಮನೆಗೆ ಹೋಗಿ ಊಟ ಮಾಡಿ ಬರುವುದು ಕನಸಿನ ಮಾತು. ಗೃಹಿಣಿಯರಿಗೆ ಮನೆಯಲ್ಲಿಯೇ ಸಾಕಷ್ಟು ಜವಾಬ್ದಾರಿಗಳಿರುವಾಗ ಬುತ್ತಿಯನ್ನು ಆಫೀಸಿನವರೆಗೆ ಕೊಟ್ಟು ಬರುವುದೂ ಸಾಧ್ಯವಿಲ್ಲ. ನಿತ್ಯ ಹೊಟೇಲಿನ ಊಟ ಆರೋಗ್ಯಕ್ಕೆ ಮಾರಕವಾಗಬಹುದು. ತನ್ನವರ ಸಲುವಾಗಿ ಗೃಹಿಣಿಯರ ಕಳಕಳಿಗೆ ಮುಂಬೈ ನಗರಿಯಲ್ಲಿ ಸಹಾಯಕ್ಕೆ ಬಂದವರೆಂದರೆ ಡಬ್ಟಾವಾಲರು. ಇವರ ಸೇವಾನಿಷ್ಠೆಗೆ ಮುಂಬೈ ನಗರಿ ಮಾತ್ರವಲ್ಲ ಇಡೀ ವಿಶ್ವದಲ್ಲಿಯೇ ಮಾನ್ಯತೆ ಸಿಕ್ಕಿದೆ.
ಲೋಕಲ್ ರೈಲಿ ನಂತೆ ಮುಂಬಯಿ ನಗರ ದಾದ್ಯಂತ ನಿರಂತರವಾಗಿ ಸೇವೆ ಮಾಡುತ್ತಿರುವ ಕಾರ್ಮಿಕ ವರ್ಗವೆಂದರೆ ಡಬ್ಟಾವಾಲರು. ಮುಂಬೈಯಲ್ಲಿ ಇವರು ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಗಾಂಧಿ ಟೋಪಿ, ಬಿಳಿ ಶರ್ಟು ಮತ್ತು ಪ್ಯಾಂಟು ಧರಿಸಿಕೊಂಡಿರುವ ಇವರನ್ನು ಗುರುತು ಹಿಡಿಯು ವುದು ತುಂಬಾ ಸುಲಭ. ಡಬ್ಟಾವಾಲರು ಮಾಡುವ ಕೆಲಸವೇನೆಂದರೆ ಗೃಣಿಯರು ಮನೆಯಲ್ಲಿ ಮಾಡಿದ ಅಡುಗೆಯನ್ನು ಆಫೀಸಿಗೆ ತಲುಪಿಸುವುದು. ಕಾಲ್ನಡಿಗೆಯಲ್ಲಿ, ಕೈಗಾಡಿಗಳಲ್ಲಿ, ಸೈಕಲು ಗಳಲ್ಲಿ ಒಂದಷ್ಟು ಬುತ್ತಿಗಳನ್ನು ನೇತುಹಾಕಿಕೊಂಡು ನಗರದೆಲ್ಲೆಡೆ ಸಂಚರಿಸುತ್ತಿರುತ್ತಾರೆ. ಅವರ ಗುಂಪಿನಲ್ಲಿ ಸುಮಾರು ಐದು ಸಾವಿರ ಮಂದಿ ಕಾರ್ಮಿಕರಿದ್ದು, ದಿನಕ್ಕೆ ಸುಮಾರು ಎರಡು ಲಕ್ಷ ಬುತ್ತಿಯನ್ನು ಮನೆಯಿಂದ ಆಫೀಸಿಗೆ, ಆಫೀಸಿನಿಂದ ಮರಳಿ ಮನೆಗೆ ತಲುಪಿಸುವ ಜವಾಬ್ದಾರಿಯುತವಾದ ಕೆಲಸ ಇವರದು. ಡಬ್ಟಾವಾಲಾರನ್ನು ಭೇಟಿಯಾಗುವ ಇಚ್ಛೆಯಿಂದ ಇಂಗ್ಲೆಂಡಿನ ಪ್ರಿನ್ಸ್ ಚಾಲ್ಸ್ರ್ ಮುಂಬೈಗೆ ಬಂದಾಗ, ಇವರ ಮುಖಂಡ ಸುಭಾಷ್ ತಾಲೇಕರ್ ಅವರಿಗೆ ಕೊಟ್ಟ ಸಮಯ ಬರೇ ಇಪ್ಪತ್ತು ನಿಮಿಷವಂತೆ. ಅವರು ಹೇಳುವಂತೆ, ‘ನಮ್ಮನ್ನು ಭೇಟಿಯಾಗಲು ಬಂದವರು ಒಂದು ದೇಶದ ರಾಜರೇ ಆಗಿರಬಹುದು. ಆದರೆ, ಗ್ರಾಹಕರು ನಮಗೆ ಮಹಾರಾಜರು. ಅವರನ್ನು ಯಾವತ್ತಿಗೂ ಕಾಯಿಸುವುದಿಲ್ಲ.’ ಪ್ರಿನ್ಸ್‌ನನ್ನು ಯಾವುದೇ ಸ್ಟಾರ್ ಹೊಟೇಲಿನಲ್ಲಿ ಭೇಟಿ ಯಾಗಲು ಒಪ್ಪದೆ, ‘ರೈಲ್ವೆ ನಿಲ್ದಾಣಕ್ಕೆ ಅಥವಾ ರಸ್ತೆ ಬದಿಗೆ ಬನ್ನಿ. ಅಲ್ಲಿಯೇ ನಾವು ಸಿಗುವುದು’ ಎಂದು ತಾಲೇಕರ್ ನೇರವಾಗಿ ಹೇಳಿದ್ದರು. ಅವರ ಆದೇಶವನ್ನು ಪ್ರಿನ್ಸ್ ಪಾಲಿಸಿದ್ದೂ ಅಲ್ಲದೆ ನಂತರದಲ್ಲಿ ಅವರಿಬ್ಬರೂ ಒಳ್ಳೆಯ ಸ್ನೇಹಿತರಾದರು. ಇವರ ಸ್ನೇಹ ಎಷ್ಟೊಂದು ಗಾಢವಾಗಿತ್ತೆಂದರೆ ಪ್ರಿನ್ಸ್ ತನ್ನ ಮದುವೆಗೂ ಆತನನ್ನು ಆಹ್ವಾನಿಸಿದ್ದರು. ತಾಲೇಕರ್ ಪ್ರಿನ್ಸ್ ದಂಪತಿಗಳಿಗೆ ಉಡುಗೊರೆಯನ್ನೂ ಕೊಟ್ಟು ಕಳುಹಿಸಿದ್ದರು. ಡಬ್ಬವಾಲಾರಿಬ್ಬರಿಗೆ ಅವರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಲಂಡನ್ನಿಗೆ ಹೋಗುವ ಅವಕಾಶವೂ ಲಭಿಸಿತ್ತು.
ಮೂಲ ಕಲ್ಪನೆ ಆರಂಭವಾದದ್ದು ಬ್ರಿಟಿಷರಿಂದ
ಡಬ್ಟಾವಾಲಾರಿಗೂ ಸುದೀರ್ಘ ಇತಿಹಾಸವಿದೆ. ಅವರದೇ ಆದ ಒಂದು ಭದ್ರವಾದ ಸಮುದಾಯವಿದೆ. ಇವರು ಮಹಾರಾಷ್ಟ್ರದ ಪುಣೆ ಜಿಲ್ಲೆಯಿಂದ ಬಂದವರು. ಇವರಲ್ಲಿ ಅವಿದ್ಯಾವಂತರೇ ಹೆಚ್ಚು. ವಾರಕರಿ ಪಂಥಕ್ಕೆ ಸೇರಿದ ಇವರು ಪಂಢರಪುರದ ಪಾಂಡುರಂಗ ವಿಠಲನನ್ನು ಆರಾಧಿಸುತ್ತಾರೆ. ಸಸ್ಯಾಹಾರಿಗಳಾದ ಡಬ್ಟಾವಾಲರಿಗೆ ಯಾವುದೇ ದುರಾಭ್ಯಾಸವಿಲ್ಲ. ಮುಂಬೈಯಂತಹ ಜನನಿಬಿಡ ಪ್ರದೇಶದಲ್ಲಿ ಕಳೆದ ನೂರಾಇಪ್ಪತ್ತೇಳು ವರ್ಷಗಳಿಂದ ಇವರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಬ್ಟಾವಾಲಾರ ಈ ಕಾಯಕದ ಮೂಲಕಲ್ಪನೆ ಬಂದಿದ್ದು ಬ್ರಿಟಿಷರಿಂದ. ಅವರು ಭಾರತದ ದೇಸೀ ಆಹಾರವನ್ನು ಇಷ್ಟಪಡುತ್ತಿರಲಿಲ್ಲ. ಅವರ ಬಟ್ಲರುಗಳು ಬ್ರಿಟಿಷರಿಗೆ ಬೇಕಾದ ಅಡುಗೆಯನ್ನು ಮಾಡಿ ಕೊಡುತ್ತಿದ್ದರು. ಇದನ್ನು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಡಬ್ಟಾವಾಲಾರುಗಳು ವಹಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಕೆಲವರು ತಮ್ಮ ಕೆಲಸದ ಜೊತೆ ಜೊತೆಗೆ ಮಾಲಿಕರ ಮನೆಯಲ್ಲಿ ಅಡುಗೆ ಕೆಲಸವನ್ನೂ ಮಾಡುತ್ತಿದ್ದರು. ಅಲ್ಲಿಂದ ಅವರ ಅಭಿಯಾನ ಆರಂಭವಾಯಿತು.
ಲೋಕಲ್ ರೈಲಿನಲ್ಲಿ ಪ್ರಯಾಣ ಮಾಡುವುದೇ ಕಷ್ಟ. ಹಾಗಾಗಿ, ಹೆಚ್ಚಿನವರಿಗೆ ಬುತ್ತಿ ಕೊಂಡೊಯ್ಯುವುದು ಸಾಧ್ಯವಾಗುವುದಿಲ್ಲ. ಡಬ್ಟಾವಾಲಾರು ಇಂಥ ಕಷ್ಟಕರವಾದ ಕೆಲಸವನ್ನು ನಿತ್ಯ ನಿರ್ವಹಿಸುತ್ತಾರೆ. ಪ್ರತಿಯೊಂದು ಬುತ್ತಿಯ ಮೇಲೆ ಅವರು ನಮೂದಿಸುವ ಕೋಡಿಂಗ್ ಸಿಸ್ಟಮ್ ಡಬ್ಟಾವಾಲಾರಿಗೆ ಬಿಟ್ಟು ಬೇರೆ ಯಾರಿಗೂ ಅರ್ಥವಾಗುವುದಿಲ್ಲ. ಬಹಳಷ್ಟು ವರ್ಷಗಳ ಹಿಂದೆ ಆಯಾ ಸ್ಟೇಷನ್ನಿನಿಂದ ತಂದ ಬುತ್ತಿಗೆ ಬಣ್ಣ ಬಣ್ಣದ ಹಗ್ಗವನ್ನು ಗುರುತಾಗಿ ಕಟ್ಟುತ್ತಿದ್ದರು. ಈಗ ಕೆಲವೊಂದು ಬದಲಾವಣೆಗಳಾಗಿವೆ. ಮುಂಬಯಿಲ್ಲಿರುವ ಪ್ರತಿಯೊಂದು ರೈಲ್ವೆ ನಿಲ್ದಾಣಗಳಿಗೂ ಒಂದೊಂದು ನಿಗದಿತ ಅಂಕೆಯನ್ನು ಅವರು ಕೊಟ್ಟಿರು ತ್ತಾರೆ. ಬುತ್ತಿಯನ್ನು ಯಾವ ಸ್ಟೇಷನ್ನಿನಿಂದ ತಂದರು, ನಂತರ ಎಲ್ಲಿಗೆ ತಲುಪಿಸಬೇಕು, ಎಷ್ಟನೆಯ ಮಹಡಿ ಮತ್ತು ಎಷ್ಟನೆಯ ಮನೆ ನಂಬರ್? ಎಂಬುದೆಲ್ಲವನ್ನು ಸಂಕ್ಷಿಪ್ತವಾಗಿ ಬುತ್ತಿಯ ಮೇಲೆ ನಮೂದಿಸಿರುತ್ತಾರೆ.
ಡಬ್ಬವಾಲರಿಂದ ಕಲಿಯಬೇಕಾದುದು
ಡಬ್ಬವಾಲಾರಲ್ಲಿ ಮುಖ್ಯವಾಗಿ ನಮ್ಮ ಗಮನಕ್ಕೆ ಬರುವುದು ಅವರು ರೂಢಿಸಿಕೊಂಡಿರುವ ಶಿಸ್ತು. ಅಮ್ಮ ಅಡುಗೆ ಮಾಡಿ ಮಕ್ಕಳಿಗೆ ಹೊತ್ತೂತ್ತಿಗೆ ಊಟ ಬಡಿಸುವಾಗ ತಡವಾಗಬಹುದು. ಆದರೆ, ಡಬ್ಟಾವಾಲಾರಿಗೆ ಈ ವಿಷಯದಲ್ಲಿ ನಿರ್ಲಕ್ಷ್ಯವೇ ಇಲ್ಲ. ಮನೆ ಮತ್ತು ಆಫೀಸು ಎಷ್ಟೇ ದೂರದಲ್ಲಿದ್ದರೂ ಸಮಯಕ್ಕೆ ಸರಿಯಾಗಿ ಬುತ್ತಿ ಸೇರಬೇಕಾದ ಕಡೆಗೆ ತಲುಪಿರುತ್ತದೆ. ಮನೆಯ ಗೃಹಿಣಿಯರು ಬುತ್ತಿ ಕೊಡುವಾಗ ತಡಮಾಡಿದರೆ ಒಂದೆರಡು ದಿನ ಕ್ಷಮಿಸುತ್ತಾರೆ. ಆದರೆ, ಅದು ಪುನರಾವರ್ತನೆಯಾದಲ್ಲಿ ಅವರೊಂದಿಗೆ ವ್ಯವ ಹಾರವನ್ನೇ ಕಡಿದುಕೊಳ್ಳುತ್ತಾರೆ. ಗ್ರಾಹಕರು ಕೂಡ ಆ ಶಿಸ್ತಿಗೆ ಬದ್ಧರಾಗಿರಲೇಬೇಕು. ಡಬ್ಟಾವಾಲಾರ ಜೊತೆಗೆ ಕೆಲಸಕ್ಕೆಂದು ಸೇರುವ ಹೊಸಬರಿಗೆ ಒಂದು ತಿಂಗಳು ತರಬೇತಿ ನೀಡಲಾಗುತ್ತದೆ. ಅವರಿಂದಲೂ ನಿರಂತರವಾಗಿ ಕರ್ತವ್ಯಲೋಪವಾದಲ್ಲಿ ನಿರ್ದಾಕ್ಷಿಣ್ಯ ವಾಗಿ ಕೆಲಸದಿಂದ ವಜಾ ಮಾಡಲಾಗುತ್ತದೆ. ಶಿಸ್ತಿನ ವಿಚಾರದಲ್ಲಿ ಅವರೆಂದೂ ರಾಜಿ ಮಾಡಿಕೊಳ್ಳುವವರಲ್ಲ. ತಾವು ಶ್ರಮವಹಿಸಿ ಮಾಡುವ ಕೆಲಸಕ್ಕೆ ಇವರು ಪಡೆಯುವ ಸಂಭಾವನೆ ಅತ್ಯಲ್ಪ.
ಈಗ ಆನ್‌ಲೈನಿನಲ್ಲಿ ಸ್ವಿಗ್ಗಿ, ಜೊಮಾಟೊ ಇತ್ಯಾದಿ ಫುಡ್ ಡೆಲಿವರಿ ವ್ಯವಸ್ಥೆ ಆರಂಭವಾಗಿದೆ. ನಮಗೆ ಯಾವ ಹೊಟೇಲಿನ ಆಹಾರ ಬೇಕೋ ಕರೆ ಮಾಡಿ ಹೇಳಿದರಾಯಿತು. ಮರುಕ್ಷಣವೇ ನಮ್ಮ ಮನೆಬಾಗಿಲಿಗೆ ತಂದು ಮುಟ್ಟಿಸುವ ವ್ಯವಸ್ಥೆ ಮುಂಬೈ ನಗರದಲ್ಲಿದೆ. ಆದರೆ, ಇವರ ಕೆಲಸದಲ್ಲಾದರೂ ಲೋಪವಾದೀತು, ಡಬ್ಟಾವಾಲರು ಮಾತ್ರ ಎಂದಿಗೂ ನಿಯತ್ತು ತಪ್ಪಿದವರಲ್ಲ. ಅಪ್ಪಿತಪ್ಪಿಯೂ ಬುತ್ತಿ ಬದಲಾದ ದಾಖಲೆಗಳೂ ಇಲ್ಲ.
ಡಬ್ಟಾವಾಲರ ಗುಂಪಿನಲ್ಲಿ ಮಹಿಳೆಯರೂ ಇದ್ದಾರಂತೆ!
ಸ್ವಚ್ಛಭಾರತ ಅಭಿಯಾನದ ಭಾಷಣ ಕೇಳಿದ ಅರ್ಧ ಗಂಟೆ ಯಲ್ಲಿಯೇ ಆರುನೂರು ಮಂದಿ ಡಬ್ಟಾವಾಲಾರು ಮೊದಲ ಬಾರಿಗೆ ಮುಂಬೈ ನಗರಿಯ ರಸ್ತೆಗಳಲ್ಲಿ ಕಸವನ್ನು ಗುಡಿಸಿ ಸ್ವಚ್ಛತಾ ಅಭಿಯಾನ ನಡೆಸಿದ್ದು ಸೋಜಿಗದ ಸಂಗತಿ. ಬಡವರಿಗಾಗಿ ರೋಟಿ ಬ್ಯಾಂಕ್, ಕಪ್‌ಡಾ ಬ್ಯಾಂಕ್ ಆರಂಭಿಸಿದ್ದಾರೆ. ಕಸದ ತೊಟ್ಟಿಯಲ್ಲಿ ಅದೆಷ್ಟೋ ಆಹಾರ ಕೊಳೆತು ಹೋಗುವುದನ್ನು ತಡೆಯಲು ಹಲವಾರು ಹೊಟೇಲುಗಳಿಗೆ ಭೇಟಿ ನೀಡಿ, ಅಲ್ಲಿ ಉಳಿದ ಆಹಾರ ಪದಾರ್ಥಗಳನ್ನೆಲ್ಲ ಸಂಗ್ರಹಿಸಿ ತಂದು ಅದೆಷ್ಟೋ ನಿರ್ಗತಿಕರ ಚೈತನ್ಯವಾಗುತ್ತಿದ್ದಾರೆ. ಮನೆಮನೆಗಳಿಗೆ ಹೋಗಿ ಹಳೆಯ ಬಟ್ಟೆಗಳನ್ನೆಲ್ಲ ಒಟ್ಟುಗೂಡಿಸಿ ತಂದು ಬಡವರಿಗೆ ಹಂಚುವ ಕಾರ್ಯವೂ ಡಬ್ಟಾವಾಲರಿಂದ ನಡೆಯುತ್ತಿದೆ.
‘ಎಲ್ಲಿಯವರೆಗೆ ಲೋಕಲ್ ರೈಲು ಚಲಿಸುತ್ತಿರುತ್ತದೆಯೋ ಅಲ್ಲಿಯವರೆಗೆ ನಾವು ನಿರಂತರ ಸಂಚರಿಸುತ್ತಿರುತ್ತೇವೆ. ಲೋಕಲ್ ರೈಲು ನಿಂತರೆ ನಾವು ನಿಲ್ಲುತ್ತೇವೆ’ ಅನ್ನುತ್ತಾರೆ ಡಬ್ಟಾವಾಲರು. ಮಳೆ, ಬಿರುಗಾಳಿ, ಬಿಸಿಲು ಅದೇನೇ ಇದ್ದರೂ ಇವರು ನಿಲ್ಲುವುದಿಲ್ಲ. ನಿಂತರೆ ಇಡೀ ಮುಂಬೈ ನಗರಿಯೇ ಸ್ತಬ್ಧವಾಗಿಬಿಡಬಹುದೇನೋ! ತಮ್ಮ ವೃತ್ತಿಯನ್ನು ಶೃದ್ಧೆಯಿಂದ ಮಾಡಬೇಕೆನ್ನುವುದು ಅವರ ನಿಲುವು. ಈಗೀಗ ಡಬ್ಟಾವಾಲರ ಗುಂಪಿನಲ್ಲಿ ಮಹಿಳೆಯರೂ ಇದ್ದಾರಂತೆ. ಇಂಥ ತ್ರಾಸದಾಯಕವಾದ ಕೆಲಸವನ್ನು ಮಾಡಲು ಮಹಿಳೆಯರೂ ಮುಂದಾಗಿದ್ದಾರೆ. ಎಷ್ಟೋ ಸಂಘಸಂಸ್ಥೆಗಳು ಇವರ ನಿಷ್ಠಾವಂತ ಸೇವೆಯನ್ನು ಗುರುತಿಸಿ ಗೌರವಿಸಿ ಪ್ರಮಾಣಪತ್ರಗಳನ್ನೂ ನೀಡಿವೆ. ‘ಈ ಗುರುತು, ಸನ್ಮಾನಗಳಿಂದ ನಮಗೇನಾಗಬೇಕಾಗಿದೆ! ಆದರೂ ಕೊಟ್ಟಿದ್ದನ್ನು ಪ್ರೀತಿಯಿಂದ ತೆಗೆದುಕೊಳ್ಳುತ್ತೇವೆ’ ಎಂದು ಸುಭಾಶ್ ತಾಲೇಕರ್ ಹೇಳುತ್ತಾರೆ.
-ಅನಿತಾ ಪಿ. ತಾಕೊಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.