![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 24, 2019, 6:00 AM IST
ಈ ಅಡುಗೆ ಮನೆಯ ಕೆಲಸವೇ ಹಾಗೆ. ಹೊಸೆದಷ್ಟು ಹರಿಹರಿದು ಬರುವ ನವ್ಯ ಕವಿತೆಯಂತೆ. ಒಂದು ಕಪ್ ಚಹಾ ಮಾಡುವುದಾದರೂ ಎಲ್ಲಿಂದ ಪ್ರಾರಂಭಿಸಬೇಕು. ಹಾಲು, ನೀರು, ಚಹಾಪುಡಿ, ಸಕ್ಕರೆ, ಬೇಕಾದರೆ ಯಾಲಕ್ಕಿ ಸಿಪ್ಪೆ , ಶುಂಠಿ ಚೂರ್ಣ- ಇವೆಲ್ಲದರ ಸಮತೂಕದ ಸಮ್ಮಿಲನವೇ ಘಮಘಮಿಸುವ ಬಿಸಿ ಚಹಾ ಆಗಿ ಕಪ್ಪಲ್ಲಿ ಕಾಣಿಸುತ್ತದೆ. ಎಲ್ಲಿ ವ್ಯತ್ಯಯವಾದರೂ ರುಚಿಯಲ್ಲೇನೊ ಕೊರತೆ.
ಅಡುಗೆ ಮನೆಯೊಡತಿಯೇ ಗೃಹಿಣಿ ಎಂದಾದರೆ, ಆಕೆಗೆ ಅಡುಗೆಯಲ್ಲಿ ಏಕಾಂತ ಅಥವಾ ಏಕಾಗ್ರತೆ ಲಭಿಸುವುದೂ ಅಷ್ಟೇ ಅಪರೂಪ. ಮಾಡುವ ಕೆಲಸದಲ್ಲಿ ಕೈಬಿಡದಷ್ಟು ಅನಿವಾರ್ಯತೆಗಳಿರುವಾಗಲೇ ಫೋನು ರಿಂಗಣಿಸುತ್ತದೆ. ಎಲ್ಲ ಅಲ್ಲೇ ಬಿಟ್ಟು ಓಡಿದರೆ ಗ್ಯಾಸ್ ಒಲೆಯೆಂಬ ಅಗ್ನಿ, ನಳ್ಳಿಯೆಂಬ ಹರಿಯುವ ನೀರು, ಮೆಟ್ಟುಕತ್ತಿಯೆಂಬ ಮಾರಕಾಯುಧಗಳೆಲ್ಲ ಅನರ್ಥವೆಸಗಿ ಪ್ರತಿಭಟಿಸುತ್ತವೆ. ಫೋನು ರಿಂಗಣಿಸುವ ಸಮಯವೂ ಅಷ್ಟೇ ವಿಶಿಷ್ಟವಾದದ್ದು.
ಒಲೆಯಲ್ಲಿ ಎಣ್ಣೆ ಕುದಿಯುವ ಹೊತ್ತು, ನೀರಿನಲ್ಲಿ ನಾವೆಯನ್ನು ತೇಲಿಬಿಡುವಂತೆ ಒಂದೊಂದೇ ಹಪ್ಪಳವನ್ನು ಎಣ್ಣೆಗೆ ತೇಲಿಬಿಟ್ಟರೆ, ಅದು ಎಣ್ಣೆಯೊಳಗೆ ಇಳಿದು, ಗುಳ್ಳೆಗಳೊಂದಿಗೆ ನಗುತ್ತ ಗರಿಗರಿಯಾಗುವ ಕ್ಷಣದಲ್ಲೇ ಫೋನು ರಿಂಗಣಿಸುತ್ತದೆ.
ಅನ್ನ ಅದರಷ್ಟಕ್ಕೇ ಶಿಳ್ಳೆ ಹೊಡೆದ ಕುಕ್ಕರಿನಲ್ಲಿ ಮೈ ಹಿಗ್ಗಿಸುತ್ತಿದ್ದರೆ, ಮೇಲೋಗರವೆಂಬ ಯಜ್ಞದ ಅಂತಿಮ ಹವಿಸ್ಸಾದ ಒಗ್ಗರಣೆ ಚಿಟಿಪಿಟಿ ಎನ್ನುವಾಗಲೇ ಕಟಕಟಾಯಿಸುತ್ತದೆ ಅರ್ಧ ಹಾಳಾದ ಫೋನು.
ಒಲೆಯ ಮೇಲೆ ಹಾಲಿಟ್ಟು ನಾನೇನೂ ಕನಸು ಕಾಣುತ್ತಿರಲಿಲ್ಲ. ಆದರೂ ಅದು ಉಕ್ಕಿ ಒಲೆ ಕಟ್ಟೆಯಲ್ಲೆಲ್ಲ ಕೆರೆಕಟ್ಟಿ ಹರಿಯುತ್ತಿದ್ದರೆ ನೋಡಿ ಸುಮ್ಮನಿರಲಾಗುವುದೆ! ಅದರ ಸ್ವಚ್ಛತಾ ಕಾರ್ಯದ ಸೂಕ್ಷ್ಮ ಸ್ತರದಲ್ಲಿರು ವಾಗಲೇ ಮತ್ತೆ ಫೋನು ರಿಂಗಣಿಸಲಾರಂಭಿಸಬೇಕೆ! ಸೋಪು ಹಾಕಿ ಕೈತೊಳೆಯದೆ ಫೋನು ಮುಟ್ಟುವಂತಿಲ್ಲ. ಅಷ್ಟು ಮಾಡುವ ಹೊತ್ತಿಗೆ ರಿಂಗು ಮೌನಿಯಾಗಬಹುದು. ಹೇಗೊ ಸಾವರಿಸಿಕೊಂಡು ಕೈತೊಳೆದು, ಮತ್ತೂ ಮೌನವಾಗದೆ ರಾಗ ಹೊರಡಿಸುತ್ತಿರುವ ದೂರವಾಣಿಯ ಕೈ ಹಿಡಿದೆ.
ಆ ಕಡೆಯಿಂದ ಗೆಳತಿಯ ಕರೆ. “”ಹಲೋ ಎಷ್ಟೊತ್ತಾಯ್ತು, ಫೋನ್ ಮಾಡ್ತಾನೇ ಇದ್ದೇನಲ್ಲೇ. ಎಲ್ಲಿದ್ದಿ ನೀನು?”
ನಾನು ಕೂಡಲೇ “”ಹೆಡ್ ಆಫೀಸಿನಲ್ಲಿ” ಎಂದೆ.
“”ಏನಂದೆ ಹೆಡ್ ಆಫೀಸಾ? ಆ ಸಲ ನೀನು ಗೃಹಿಣಿಯಾಗಿ ಉದ್ಯೋಗವಿಲ್ಲದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದೀ ಎಂದಿದ್ದೆ. ಈಗ ಕೆಲಸ ಸಿಕ್ಕಿತಾ, ಯಾವ ಆಫೀಸಲ್ಲಿ”
“”ಅದೇ… ಹೆಡ್ ಆಫೀಸಲ್ಲಿ”
“”ಯಾವ ಹೆಡ್ ಆಫೀಸು. ಬ್ಯಾಂಕಿನ ಹೆಡ್ ಆಫೀಸಾ ಅಥವಾ ಬೇರೆ ಯಾವುದಾದರೂ…”
“”ಮನೆಯ ಹೆಡ್ ಆಫೀಸ್ ಮಾರಾಯ್ತಿ” ಎಂದು ಅರ್ಧದಲ್ಲೇ ತುಂಡರಿಸಿದೆ.
“”ಯಾವ ಮನೆ ಹೆಡ್ ಆಫೀಸು”
“”ನನ್ನದೇ ಮನೆಯ ಹೆಡ್ ಆಫೀಸು. ಅದೇ ಅಡುಗೆ ಕೋಣೆ” ಎಂದಾಗ ಆಕೆ, “”ಓಹ್ ಹಾಗಾ, ನಾನೇನೋ ನಿನಗೆ ಕೆಲಸ ಸಿಕ್ಕಿಬಿಟ್ಟಿತು ಅಂದೊRಂಡೆ. ನಾನು ಒಂದು ವಾರ ಬಿಟ್ಟು ಊರಿಗೆ ಬರ್ತೇನೆ. ಆಗ ನಿನ್ನ ಭೇಟಿ ಆಗ್ತೀನೆ. ಹೇಗೂ ಮನೆಯಲ್ಲೇ ಇರ್ತೀಯಲ್ಲ” ಎಂದು ಫೋನಿಟ್ಟಳು.
ಅವಳು ಕೊನೆಯಲ್ಲಿ “”ಹೇಗೂ ಮನೆಯಲ್ಲಿರ್ತೀಯಲ್ಲ” ಎನ್ನುವಾಗ ಏನೋ ಹಗುರ ಭಾವ ಅದರಲ್ಲಿಡಗಿರುವಂತೆ ಅನ್ನಿಸಿತು. ಮೊದಲೂ ಒಂದೆರಡು ಬಾರಿ ಸಿಕ್ಕಾಗ ಆಕೆ ಹೇಳಿದ ಮಾತು ಅದೇ: “”ಅಯ್ಯೋ… ನೀನು ಮನೆಯಲ್ಲಿ ಹೇಗಿರುತ್ತೀ. ನನಗೆ ಮನೆ ಅಂದರೆ ಆಗುವುದೇ ಇಲ್ಲ. ಕೆಲಸ ಇರಲಿ, ಇಲ್ಲದೇ ಇರಲಿ ನಾನಿರುವುದು ಹೆಚ್ಚಾಗಿ ಹೊರಗಡೆಯೇ”
ಹೌಸ್ ಬೇರೆ ಹೋಮ್ ಬೇರೆ !
ಮನೆಯೆಂದರೆ ಇವಳಿಗೇಕೆ ಇಷ್ಟು ತಾತ್ಸಾರ ಎಂದು ನನಗೆ ಆಶ್ಚರ್ಯವಾಯಿತು. ಮನೆ ಎನ್ನುವುದೊಂದು ಆಪ್ತ ವಲಯವಲ್ಲವೆ? ಆಂಗ್ಲ ಭಾಷೆಯಲ್ಲಿ “ಹೌಸ್’ ಹಾಗೂ “ಹೋಮ್’ ಎಂಬ ಎರಡು ಶಬ್ದಗಳಿವೆ. “ಹೌಸ್’ ಮನೆಯ ಕಟ್ಟಡ ವಾಸ್ತುವಿಗಷ್ಟೇ ಸೀಮಿತವಾದ ಶಬ್ದ. ಆದರೆ, “ಹೋಮ್’ ಮನದಾಳದೊಳಗೆ ಮನೆಯ ಅರ್ಥ ಸ್ಪುರಿಸುವ ಜೀವಬಿಂದು.
ಉದ್ದೇಶಪಟ್ಟು “ಮನೆಯಲ್ಲಿರು ವುದಿಲ್ಲ’ ಎನ್ನುವುದಕ್ಕೆ ಏನಾದರೂ ಅರ್ಥವಿದೆಯೆ? ಮನೆಯೇಕೆ ಬೇಡ, ಮನಸು-ಮನಸುಗಳ ನಡುವೆ ಮಮತೆಯ ಮಂಟಪ ಕಟ್ಟಿ , ಪ್ರೀತಿ ವಾಲಗ ಊದಿ, ಮನಸಿನ ಮೌನದಲ್ಲಿ ಕೆಲಕ್ಷಣ ಕಳೆದು ಮತ್ತೆ ಖುಷಿಯ ಕಲರವಿಸುವ ಖಾಸಾ ತಾಣವಲ್ಲವೇ ಮನೆ. ಮನೆಯ ಮೇಲೇಕೆ ಮುನಿಸು ಈಕೆಗೆ !
ಬಣ್ಣ ಬಣ್ಣದ ಚಿತ್ರ-ವಿಚಿತ್ರ ಕನಸುಗಳು ಕಣ್ಣು ತುಂಬಿದಂತೆಲ್ಲ ಹೊಸ ಕವಿತೆಯ ಹೊಸೆಹೊಸೆದು ಹಾಡಿ ಭಾವ ತುಣುಕುಗಳಿಗೆಲ್ಲ ಲಯವ ನೀಡುವ ಕಾರ್ಯಾಗಾರವಲ್ಲವೆ ಈ ಮನೆ.
ಕೈತೊಳೆದು ಎದುರಿಗೇ ಟವೆಲ್ ಇದ್ದರೂ ಸೊಂಟಕ್ಕೆ ಕಟ್ಟಿದ ಅಮ್ಮನ ಸೆರಗಲ್ಲೇ ಕೈ ಒರೆಸಿ, ಆಕೆಯಿಂದ ಹುಸಿಕೋಪದ, ನೋವಿಲ್ಲದ ಏಟು ತಿನ್ನುವ ಕೊಂಡಾಟದ ಕ್ಷಣ ಮತ್ತೆಲ್ಲಿ ಅರಸಲು ಸಾಧ್ಯ- ಮನೆಯಲ್ಲಲ್ಲದೆ!
ಅಂಗಳದಲ್ಲಿ ಅಮ್ಮ ಹಾಕಿದ ಉರುಟುರುಟಿನ ಹಸಿ ಹಸಿ ಸಂಡಿಗೆಯನ್ನು, ಕಾಗೆಯ ಒಕ್ಕಣ್ಣಿನಿಂದ ಕಾಯುವ ಕೆಲಸದ ಕುರಿತು “ನೀ ಮಾಡು’, “ನೀ ಮಾಡು’ ಎಂದು ಕಾಗೆಗಳಂತೆ ಕಚ್ಚಾಡಿ, ಕೊನೆಗೆ ಸೊಂಟಕ್ಕೇ ಸೆರಗು ಸಿಕ್ಕಿಸಿಕೊಂಡು ಬರುವ ಅಮ್ಮ, “”ನೀನು ಈ ಭಾಗದಲ್ಲಿ , ಆಕೆ ಆಚೆ ಭಾಗದಲ್ಲಿ ಕುಳಿತಿರಿ” ಎಂದು ಒಬ್ಬೊಬ್ಬರ ಕೈಯ್ಯಲ್ಲಿ ಒಂದೊಂದು ಕಮ್ಯುನಿಸ್ಟ್ ಗಿಡದ ಸಪೂರ ಬೆತ್ತ ಕೊಟ್ಟ ಮೇಲೆ ಮನಸ್ಸಿಲ್ಲದ ಮನಸ್ಸಿನಲ್ಲಿ ತುಟಿ ಸೊಟ್ಟಗೆ ಮಾಡಿ ಕುಳಿತುಕೊಳ್ಳುವ ಮನಭಾರದ ಮನರಂಜನೆ ಇನ್ನೆಲ್ಲಿ ಸಿಗಲು ಸಾಧ್ಯ!
ಮನೆಯ ಮರದಲ್ಲಿದ್ದ ಒಂದೇ ಒಂದು ದೋರೆಗಾಯಾದ ಪೇರಳೆಯನ್ನು ಅಣ್ಣ ಕಿತ್ತು ತರುತ್ತಾನೆ. ಆಗಲೇ ಕಚ್ಚಿ ತಿಂದು ಅದರ ರುಚಿ ನೋಡಿ, “ಆಹಾ’ ಎನ್ನುತ್ತಿದ್ದರೆ, ತಂಗಿಗೆ ಅದನ್ನು ತಾನೂ ತಿನ್ನಬೇಕೆಂಬ ಬಯಕೆ. “”ಪೇರಳೆ ನಂಗೂ ಬೇಕು. ಗುಬ್ಬಿ ಎಂಜಲು ಮಾಡಿ ಕೊಡು” ಎಂದಾಗ ಅಣ್ಣ , “ಓಹೋ!’ ಎನ್ನುತ್ತ ತಾನು ತಿಂದಿರದ ಪೇರಳೆಯ ಭಾಗವನ್ನು ಅಂಗಿಯಿಂದ ಮುಚ್ಚಿ , ಬಟ್ಟೆಯ ಮೇಲಿನಿಂದ ಕಚ್ಚಿ ತುಂಡು ಮಾಡಿ ಅವಳಿಗೆ ಕೊಟ್ಟಾಗ, ಆಕೆ ಗಬಕ್ಕನೆ ಸುಖದಲ್ಲಿ “”ಎಂಜಲೇನಲ್ಲವಲ್ಲಾ… ಗುಬ್ಬಿ ಎಂಜಲು ಶುದ್ಧ” ಎನ್ನುತ್ತ ಅಣ್ಣನೆಡೆಗೆ ಬೀರುವ ನೋಟದಲ್ಲಿನ ಹೊಳೆಯುವ ಪುಳಕಿತ ಮಿಂಚಲ್ಲಿ ಮನೆಯೆಲ್ಲ ಬೆಳಕಾಗುತ್ತಿದ್ದರೆ, ಎರಡು ಮನಗಳ ಬೆಸುಗೆಯ ಬಳ್ಳಿಯಲ್ಲಿ, ಪ್ರೀತಿ ಮಲ್ಲಿಗೆಯ ದಂಡೆ ಹೆಣೆಯುವ ವಿನ್ಯಾಸ ಹರಡಿಕೊಳ್ಳುವುದು ಅಲ್ಲೇ. ಆ ಮನೆಯಲ್ಲೇ. ಅವರು ನಿಂತ ಜಾಗದಲ್ಲೇ. ಚಾವಡಿಯೋ, ನಡುಕೋಣೆಯೊ, ಪಡಸಾಲೆಯ ಮೆಟ್ಟಿಲೊ ಎಲ್ಲಾದರಾಗಲಿ ಮನೆಯ ಛಾಯೆಯೊಳಗೆ ಘಮಿಸುವ ಈ ಗಂಧ ಮನೆಯ ಮಾಯೆಯಲ್ಲವೆ?
ಮನೆಗೆ ಬೀಗ ಹಾಕಿ ಹೊರ ಹೋಗಬಹುದು. ಆದರೆ, ಮನೆಯ ಈ ಖಾಸಾತನ ನಾವು ಕೊಂಡೊಯ್ಯುವ ಕೈಚೀಲದಲ್ಲಿರುವ ವಸ್ತುಗಳಲ್ಲಿ, ಬೀಗದ ಕೈಗಳಲ್ಲಿ , ಪಿನ್ನು-ಕ್ಲಿಪ್ಪುಗಳಲ್ಲಿ, ಪೆನ್ನು-ಒಕ್ಕಣೆಗಳಲ್ಲಿ ಪದೇ ಪದೇ ನಮ್ಮ ಕಣ್ಣಿಗೆ ಬೀಳುತ್ತ ಮನೆಯೆಡೆಗೆ ಸೆಳೆಯುತ್ತವಲ್ಲವೆ?
ಇಲ್ಲಿ ಕೆಲಸ ಮುಗಿಯುವುದೇ ಇಲ್ಲ !
ಮನೆಯಲ್ಲಿರುವ ಗೃಹಿಣಿಗೆ ಅಡಿಗೆ ಮನೆ “ಹೆಡ್ ಆಫೀಸ್’ ಆಗಿರುತ್ತದೆ. ಆಕೆಯ ಹೆಚ್ಚಿನ ಸಮಯ ಅಡುಗೆ ಕೋಣೆಯಲ್ಲಿ. “ಅಡುಗೆ ಕೋಣೆಯಲ್ಲಿ ಏನು ಕೆಲಸ’ ಎಂದು ಅಪ್ಪಿತಪ್ಪಿಯೂ ಯಾರೂ ಕೇಳುವಂತಿಲ್ಲ. ಯಾಕೆಂದರೆ, ಇಲ್ಲಿ ಕೆಲಸ ಎಂದಿಗೂ ಮುಗಿಯುವುದಿಲ್ಲ. ಮುಗಿಸಿದೆ ಅಂದುಕೊಂಡು ಹೊರಗೆ ಬಂದರೂ ಮುಗಿಸದೆ ಇದ್ದದ್ದು ಬಹಳಷ್ಟಿರುತ್ತದೆ.
ಮನೆಯವರೆಲ್ಲರ ಉದರ ರಾಗದ ಪಲ್ಲವಿ ಗ್ಯಾಸಿನ ಮೇಲಿಟ್ಟ ಪಾತ್ರೆಗಳಲ್ಲಿ, ಕಾವಲಿಯಲ್ಲಿ ಹೊಯ್ದ ದೋಸೆಗಳಲ್ಲಿ ಶುೃತಿಯಾಗಿ ಮೀಟುತ್ತಿದ್ದರೆ, ಹಿಟ್ಟು ಕಲಸುವ ತಟ್ಟೆಯಲ್ಲಿ ತಾಳಲಯಬದ್ಧವಾಗುತ್ತದೆ. ಕುಕ್ಕರಿನ ಶಿಳ್ಳೆಯಲ್ಲಿ ಸ್ವರ ಪ್ರಸ್ತಾರವಾಗುತ್ತಿದ್ದರೆ, ಗೊಟಾಯಿಸುವ ಬಾಣಲೆಯಲ್ಲಿ ಹಸಿವಿನ ಗುಸುಗುಸು ಪಿಸುಧ್ವನಿ ಪಾಕರಾಗದ ಸಾಹಿತ್ಯವಾಗುತ್ತದೆ. ಹೀಗೊಂದು ಉದರ ಸಂಗೀತ ಕಛೇರಿ ಏರ್ಪಡುವುದಿದ್ದರೆ ಅದು ಮನೆಯ ಖಾಸಾ ಅಡುಗೆಕೋಣೆಯಲ್ಲಿ ಮಾತ್ರ.
ಆಫೀಸಿನಲ್ಲಿ ದುಡಿಯುವ ಗೆಳತಿಗೆ, ಆಫೀಸಿನ ಜಡ ಫೈಲುಗಳ ಜಂಜಡದ ಕೆಲಸವಾದರೆ, ಗೃಹಿಣಿಗೆ ಮನೆಕೆಲಸದ ಒಪ್ಪಓರಣದ ಜಾಡು ಹಿಡಿದು ಮನೆಯವರ ಸಂತಸ ಸಮೀಕರಿಸುವ ಕೆಲಸ. ಗೆಳತಿ ತನ್ನ ಬದುಕಿಗೆ ಸಂಬಂಧವೇ ಇಲ್ಲದ, ತನ್ನ ಮನದ ಮಾತುಗಳಿಗೆ ವೇದಿಕೆಯಾಗದ, ತನ್ನ ಧ್ಯೇಯೋದ್ದೇಶದ, ಊಟ-ಹಸಿವುಗಳ, ಭಾವ ತಲ್ಲಣದ ಗೊಡವೆಯೇ ಇಲ್ಲದ ಯಾರದೊ, ಯಾವುದೊ ನಿಸ್ತಂತು ಫೈಲುಗಳ ಕೈ ಬದಲಾಟದಲ್ಲಿ, ಸಹಿಯ ಲೆಕ್ಕಗಳಲ್ಲಿ , ಬೆರಳ ತುದಿಯ ಚಲನೆಯಲ್ಲಿ ಪ್ರತ್ಯಕ್ಷವಾಗುವ ಅಕ್ಷರಗಳಲ್ಲಿ, ಸಂಖ್ಯೆಗಳಲ್ಲಿ ಕಳೆದು ಹೋಗುತ್ತ, ಬೆಳಗು ಸಂಜೆಯ ಭೇದವಿಲ್ಲದೆ, ಹವಾನಿಯಂತ್ರಿತ ಕೊಠಡಿಯಲ್ಲಿ ವಿದ್ಯುದ್ದೀಪ, ಫ್ಯಾನುಗಳ ಅಡಿಯಲ್ಲಿ ಮೇಜಿನ ಮೇಲಿನ ಪರದೆಯಿಂದ ಕಣ್ಣು ಅತ್ತಿತ್ತ ಹೊರಳಿಸಲಾಗದೆ, ಮುಚ್ಚಿದ ಕಿಟಕಿಯ ಹೊರಗಿರಬಹುದಾದ ಹಸಿರು ಬಯಲಿನ ವರ್ಣ ಪ್ರಪಂಚದ ಚೇತೋಹಾರಿ ನೋಟದಿಂದಲೇ ವಂಚಿತಳಾಗಿ ಅದು ಹೇಗೆ ಕಾಲ ಕಳೆಯುತ್ತಾಳೊ ಎಂದು ಮನೆಯಲ್ಲಿರುವ ಗೃಹಿಣಿಯೂ ಒಂದೊಮ್ಮೆ ಯೋಚಿಸಿರಬಹುದಲ್ಲವೆ!
ವಿಜಯಲಕ್ಷ್ಮಿ ಶ್ಯಾನ್‌ಭೋಗ್
You seem to have an Ad Blocker on.
To continue reading, please turn it off or whitelist Udayavani.