ಬದುಕಿನಲ್ಲಿ ಜೊತೆಯಾಗೋಣವೆ?ಜೊತೆಯಾಗಿ ಬದುಕೋಣವೆ?
ಇಂದು ಪ್ರೇಮಿಗಳ ದಿನ!
Team Udayavani, Feb 14, 2020, 5:34 AM IST
ಪ್ರೇಮವಿವಾಹ, ಹಿರಿಯರು ನಿಶ್ಚಯಿಸಿದ ವಿವಾಹದ ಹೊರತಾಗಿ ಇತ್ತೀಚೆಗಿನ ದಶಕಗಳಲ್ಲಿ ಲಿವ್ -ಇನ್ ರಿಲೇಶನ್‌ಶಿಪ್ ಎಂಬ ಹೊಸ ಪರಿಕಲ್ಪನೆಯೊಂದು ಯುವಜನರನ್ನು ಆಕರ್ಷಿಸುತ್ತಿದೆ. ಪ್ರೇಮಿಸುವುದಕ್ಕೆ ಪ್ರೇಮವಷ್ಟೇ ಕಾರಣವಾಗಬೇಕು ಎಂಬ ಆಶಯದಿಂದ ರೂಪುಗೊಂಡ ಈ ಸಂಬಂಧದೊಳಗೆ ಕಾಲಿಡುವ ಮುನ್ನ ಮಹಿಳೆಯರು ಕಾನೂನಾತ್ಮಕ ಅಂಶಗಳನ್ನು ಅರಿತಿರುವುದು ಮುಖ್ಯ. ಪ್ರೇಮದ ಗುಂಗಿನಷ್ಟೇ, ಬದುಕಿನ ಸುರಕ್ಷತೆಯೂ ಮುಖ್ಯ ಅಲ್ಲವೆ?
ಇತ್ತೀಚಿನ ಎರಡು ದಶಕಗಳಲ್ಲಿ ಭಾರತದ ಸಾಮಾಜಿಕ ಪರಿಸ್ಥಿತಿ ತುಂಬ ಬದಲಾಗಿದೆ. ಕುಟುಂಬದ ಪರಿಕಲ್ಪನೆ ತೀರಾ ವಿಕೇಂದ್ರೀಕರಣಗೊಂಡಿದೆ. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾದ ಬಳಿಕ, ಮನೆ ಎಂದರೆ ಪತಿ, ಪತ್ನಿ ಮತ್ತು ಮಗು ಎಂಬಷ್ಟಕ್ಕೇ ಸೀಮಿತವಾಗಿತ್ತು.
ಆದರೆ, 21ನೆಯ ಶತಮಾನದ ಆದಿಭಾಗದಲ್ಲಿ, ಕುಟುಂಬ ಎನ್ನುವುದೇ ಹೊರೆ ಎನ್ನಿಸಿ, ಒಂದಿಷ್ಟು ಸಮಯ ಒಟ್ಟಾಗಿ ಇದ್ದುಬಿಟ್ಟರೆ ಸಾಕು ಎಂಬ ಆಶಯ ಯುವಜನರಲ್ಲಿ ಮೊಳಕೆಯೊಡೆಯಿತು. ವಿದೇಶಗಳಲ್ಲಿ ಇಂತಹ ಸಂಬಂಧಗಳು ಜಾರಿಯಲ್ಲಿವೆ. ಅಂದಮೇಲೆ ನಗರೀಕರಣದ ಬದುಕಿನಲ್ಲಿ ಭಾರತದಲ್ಲಿಯೂ ಅಂತಹ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಹೆಚ್ಚು ಕಷ್ಟವೇನಲ್ಲ ತಾನೆ? ಹಾಗಾಗಿ, ಹೊಸ ತಲೆಮಾರಿನ ಯುವಜನತೆ ಲಿವ್-ಇನ್ ರಿಲೇಶನ್‌ಶಿಪ್ ಕಡೆಗೆ ಒಲವು ತೋರುತ್ತಿದೆ.
ಮದುವೆಗೆ ಮುನ್ನ ಲೈಂಗಿಕತೆ ಎನ್ನುವುದನ್ನು ಮಹಾಪಾಪ ಎಂದೇ ಪರಿಗಣಿಸುತ್ತಿದ್ದ ಕಾಲವಿತ್ತು. ಜಾಗತೀಕರಣದ ಪರಿಣಾಮ ವಲಸೆ ಎಂಬುದು ಬಹಳ ಸುಲಭವಾದಾಗ, ಹೊಸ ಹೊಸ ಜೀವನ ಶೈಲಿಯೂ ಜನರನ್ನು ಆಕರ್ಷಿಸತೊಡಗಿದೆ. ಮದುವೆಗೆ ಮುನ್ನ ಲೈಂಗಿಕತೆಯು ಮಹಾ ಅಪರಾಧವೇನಲ್ಲ ಎಂದು ಹೊಸತಲೆಮಾರಿನ ಯುವಜನತೆ ಭಾವಿಸತೊಡಗಿತು. ಇಂತಹ ಕಟ್ಟುಪಾಡನ್ನು ನಿರ್ಲಕ್ಷಿಸಿದ ಮೇಲೆ, ಲಿವ್- ಇನ್ ರಿಲೇಶನ್‌ಶಿಪ್ ಎಂಬ ಹೊಸ ಪರಿಕಲ್ಪನೆಯತ್ತಲೂ ಕುತೂಹಲ ಹೆಚ್ಚಾಯಿತು.
ಲಿವ್-ಇನ್ ರಿಲೇಶನ್‌ಶಿಪ್ ಅಥವಾ ಸಹಬಾಳ್ವೆ ಎಂದರೆ, ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಇರುವ ಒಂದು ಅವಕಾಶ ಎನ್ನುವುದು ಆರಂಭಿಕ ಗ್ರಹಿಕೆಯಾಗಿತ್ತು. ಹೊಂದಾಣಿಕೆ ಆಗುವುದಾದರೆ ಮುಂದಕ್ಕೆ ಮದುವೆ ಆಗಲೂಬಹುದು ಅಥವಾ ಮದುವೆಯ ಗೊಡವೆಗೇ ಹೋಗದೆ, ಹೊಂದಾಣಿಕೆ ಕಷ್ಟವೆನಿಸಿದಾಗ ಇಬ್ಬರೂ ತಮ್ಮ ತಮ್ಮ ದಾರಿ ಕಂಡುಕೊಳ್ಳಬಹುದು ಎಂಬ ಅವಕಾಶ ಇಲ್ಲಿ ಮುಕ್ತವಾಗಿರುತ್ತದೆ. ಸಂಬಂಧವನ್ನು ಕೊಡವಿಕೊಂಡು ಅವನು ಹೊರಟು ಹೋಗುವಾಗ ಅವಳು ತಡೆಯುವಂತಿಲ್ಲ. ಅವಳು ಬೆನ್ನು ತಿರುವಿ ನಡೆದಾಗ ಅವನು ಪ್ರಶ್ನಿಸುವಂತಿಲ್ಲ.
ಹೀಗೆ, ಒಟ್ಟಾಗಿ ಇರುವುದಕ್ಕೆ ಕಾನೂನಾತ್ಮಕ ಒಪ್ಪಂದವೇನೂ ಇಲ್ಲದೇ ಇರುವುದರಿಂದ, ಬೇರೆಯಾಗುವುದಕ್ಕೂ ನ್ಯಾಯಾಲಯದ ಮೆಟ್ಟಿಲೇರಬೇಕಾದ ಆವಶ್ಯಕತೆ ಇರುವುದಿಲ್ಲ. ಲಿವ್-ಇನ್ ರಿಲೇಶನ್ ಶಿಪ್‌ಗೆ ಸಂಬಂಧಿಸಿದ ವ್ಯಾಜ್ಯಗಳು ಏರ್ಪಟ್ಟಾಗ, ಭಾರತದಲ್ಲಿ ಸ್ಪಷ್ಟ ಕಾನೂನೇನೂ ಇಲ್ಲ. ವಿವಿಧ ಪ್ರಕರಣಗಳ ತೀರ್ಪುಗಳನ್ನು ಆಧರಿಸಿಯೇ ಹೊಸ ಪ್ರಕರಣಗಳ ವಿಚಾರಣೆ ನಡೆಯುತ್ತದೆ.
ಪಾಶ್ಚಾತ್ಯ ಸಾಮಾಜಿಕ ಜೀವನ ಪದ್ಧತಿಯ ಪ್ರಭಾವದಿಂದ ಲಿವ್ ಇನ್ ಸಂಬಂಧ ಭಾರತಕ್ಕೆ ಕಾಲಿರಿಸಿದ್ದರೂ, ಅಲ್ಲಿಯ ಕಾನೂನುಗಳಿಗೂ ಭಾರತೀಯ ಕಾನೂನುಗಳಿಗೂ ವ್ಯತ್ಯಾಸವಿದೆ. ಮದುವೆಯಾಗಿರುವ ವ್ಯಕ್ತಿಯು, ಮದುವೆಯಾಗದೇ ಇರುವ ವ್ಯಕ್ತಿಯೊಡನೆ ಈ ಸಂಬಂಧ ಹೊಂದಬಹುದೇ, ಒಂದೇ ಲಿಂಗದ ಇಬ್ಬರು ವ್ಯಕ್ತಿಗಳ ಸಹಬಾಳ್ವೆಗೆ ಅವಕಾಶ ಇದೆಯೆ ಎಂಬೆಲ್ಲ ವಿಚಾರಗಳು ಇನ್ನೂ ಚರ್ಚೆಯ ಹಂತದಲ್ಲಿಯೇ ಇವೆ. ಲಿವ್-ಇನ್ ಸಂಬಂಧಕ್ಕೆ ನಿಶ್ಚಿತವಾದ ಕಾನೂನು ಇಲ್ಲದೆ ಇರುವುದರಿಂದ ಈಗಾಗಲೇ ಇರುವ ವೈಯಕ್ತಿಕ ಕಾನೂನುಗಳನ್ನೇ ಈ ಸಂಬಂಧಕ್ಕೆ ಅನ್ವಯಿಸಿ ವ್ಯಾಜ್ಯಗಳನ್ನು ಪರಿಹರಿಸಲು ನ್ಯಾಯಾಲಯ ಪ್ರಯತ್ನಿಸುತ್ತಿದೆ.
ಬಂಧನ ಮತ್ತು ಮುಕ್ತತೆಯ ಕವಲುದಾರಿ
ಮದುವೆ ಎನ್ನುವುದು, ಧಾರ್ಮಿಕವಾಗಿಯೂ, ಕಾನೂನಾತ್ಮಕ ವಾಗಿಯೂ ಸಮ್ಮತವಾದ ಒಂದು ಪ್ರಕ್ರಿಯೆ. ಮದುವೆಯು ದಂಪತಿಯ ಮೇಲೆ ಹಲವು ಜವಾಬ್ದಾರಿಗಳನ್ನೂ ಹೊರಿಸುತ್ತದೆ. ಆದ್ದರಿಂದ, ಮದುವೆಯನ್ನು ಮುರಿಯುವ ಅನಿವಾರ್ಯತೆ ಎದುರಾದಾಗ ಅನುಸರಿಸಬೇಕಾದ ಕಾನೂನುಗಳು ಸ್ಪಷ್ಟವಾಗಿವೆ.
ಆದರೆ ಲಿವ್-ಇನ್ ಸಂಬಂಧದ ಉದ್ದೇಶವೇ ಜವಾಬ್ದಾರಿಗಳ ಹಂಗಿಲ್ಲದೇ ಜೀವಿಸುವುದಾದ್ದರಿಂದ, ಕಾನೂನುಗಳು ಇನ್ನೂ ಸ್ಪಷ್ಟವಾಗಿ ರೂಪುಗೊಂಡಿಲ್ಲ. ಈ ರೀತಿಯ ಸಂಬಂಧದಲ್ಲಿ ಮಹಿಳೆ ಗರ್ಭಿಣಿಯಾದರೆ, ಮಗುವಿನ ಪಾಲನೆಯ ಹೊಣೆಯು ತಂದೆಯ ಸ್ಥಾನದಲ್ಲಿರುವ ವ್ಯಕ್ತಿಯ ಮೇಲಿರುತ್ತದೆ. ಮಹಿಳೆಯ ಹಕ್ಕುಗಳನ್ನು ಪೋಷಿಸುವ ದೃಷ್ಟಿಯಿಂದ ಆಕೆಗೆ ಹಿಂಸೆ ಉಂಟಾದಲ್ಲಿ, ಕೌಟುಂಬಿಕ ಹಿಂಸೆ ತಡೆ ಕಾಯ್ದೆಯನ್ನು ಅನ್ವಯಿಸಲಾಗುತ್ತದೆ. ಉಳಿದ ಸಂದರ್ಭಗಳಲ್ಲಿಯೂ ವೈಯಕ್ತಿಕ ಕಾಯ್ದೆಗಳನ್ನಷ್ಟೇ ನೆಚ್ಚಿಕೊಂಡು ಪ್ರಕರಣ ದಾಖಲಿಸಬಹುದು. ಆದರೆ, ಹುಟ್ಟುವ ಮಗುವಿಗೆ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 16ರ ಪ್ರಕಾರ ತಂದೆಯ ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿರುತ್ತದೆ. ಆದರೆ, ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇರುವ ಜೋಡಿ, ಮಕ್ಕಳನ್ನು ದತ್ತು ಪಡೆಯುವ ಅವಕಾಶ ಇಲ್ಲ.
ಕಾನೂನಿನ ಆಚೆಗಿನ ಮುಖ
ಲಿವ್ ಇನ್ ಸಂಬಂಧದಿಂದ ಹೊರಬಂದ ಮಹಿಳೆಯರು ಹೆಚ್ಚು ಸಮಸ್ಯೆ ಅನುಭವಿಸುತ್ತಾರೆ ಎನ್ನುವುದು ಒಂದು ಅಭಿಪ್ರಾಯ. “ಒಂದು ಸಂಬಂಧದಿಂದ ಮತ್ತೂಂದು ಸಂಬಂಧಕ್ಕೆ ಸುಲಭವಾಗಿ ಕಾಲಿಡುವ ಗಂಡಸರು, ಬಳಿಕ ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಾರೆ. ಆದರೆ, ಅಷ್ಟೇ ಸುಲಭವಾಗಿ ಮಹಿಳೆಯರು ಮತ್ತೂಬ್ಬನೊಡನೆ ಮದುವೆಯಾಗಿ ಜೀವನ ನಿರ್ವಹಿಸುವುದು ಸಾಧ್ಯವಾಗುವುದಿಲ್ಲ’ ಎಂದು ಹೇಳುತ್ತಾರೆ ವಿ. ಎಸ್. ಸುನೀತಾ. “ನಮ್ಮ ಸಮಾಜವು ಸಾಂಪ್ರದಾಯಿಕ ಮನಸ್ಥಿತಿಯನ್ನು ಹೊಂದಿರುವುದು ಒಂದು ಕಾರಣವಾದರೆ, ಒಂದು ಸಂಬಂಧವು ಮುರಿದು ಬಿದ್ದ ಬಳಿಕ, ಹೊಸ ಸಂಬಂಧದೆಡೆಗೆ ಮನಸ್ಸು ಹೊರಳಲು ಆಕೆಗೆ ತುಸು ಸಮಯ ಬೇಕಾಗುತ್ತದೆ. ಬಳಿಕ ಆಕೆ ಮದುವೆ ಆಗಲು ಮನಸ್ಸು ಮಾಡಿದರೂ, ಆಕೆಗೆ ವಯಸ್ಸಾಗಿದೆ ಎಂಬ ಟೀಕೆಯೂ ಕೇಳಿಬರುತ್ತದೆ’ ಎನ್ನುತ್ತಾರೆ ಸುನೀತಾ. ಸಾಂಪ್ರದಾಯಿಕತೆಯನ್ನು ಮೀರಿ, ಒಂಟಿ ಜೀವನದ ಸವಾಲನ್ನೂ ಎದುರಿಸಲು ಸಿದ್ಧವಾಗಿದ್ದಲ್ಲಿ ಮಾತ್ರ ಇಂತಹ ಸಂಬಂಧಗಳೆಡೆಗೆ ಮನ ಮಾಡಬಹುದೇನೋ. ಆರ್ಥಿಕ ಸ್ವಾತಂತ್ರ್ಯ ಇಲ್ಲದೇ ಇದ್ದಾಗಲೂ ಮಹಿಳೆಯರು ಹೆಚ್ಚು ಕಷ್ಟಪಡಬೇಕಾಗುತ್ತದೆ. ಇಂತಹ ಸಂಬಂಧಗಳಲ್ಲಿ ಮಕ್ಕಳು ಜನಿಸಿದಾಗ, ತಂದೆಯಿಂದ ಆಸ್ತಿ ಒದಗಿದರೂ, ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳಿಗೆ ಸಾಮಾಜಿಕ ಸುರಕ್ಷತೆಯ ಭಾವನೆಯನ್ನು ಒದಗಿಸುವ ಜವಾಬ್ದಾರಿಯನ್ನು ಮಹಿಳೆಯೇ ಹೊರಬೇಕಾಗುತ್ತದೆ. ಒಂದುವೇಳೆ ತಂದೆಯ ಸ್ಥಾನದಲ್ಲಿರುವವನು ಆಸ್ತಿವಂತನಾಗಿಲ್ಲದೇ ಇದ್ದಾಗ ಮಕ್ಕಳ ಜವಾಬ್ದಾರಿಯು ಮಹಿಳೆಯ ಹೆಗಲನ್ನೇ ಏರುತ್ತದೆ ಎಂದು ವಕೀಲರು ಅಭಿಪ್ರಾಯಪಡುತ್ತಾರೆ.
ಲಿವ್-ಇನ್ ಸಂಬಂಧ ಒಳ್ಳೆಯದೋ, ಕೆಟ್ಟದೋ ಎಂದು ಪ್ರಶ್ನಿಸಿದರೆ ಸ್ಪಷ್ಟವಾದ ಉತ್ತರ ಹೇಳುವುದು ಕಷ್ಟ. ವ್ಯಕ್ತಿಗಳು ವೈಯಕ್ತಿಕವಾಗಿ ಉತ್ತಮ ಮೌಲ್ಯಗಳನ್ನು ಹೊಂದಿದ್ದಲ್ಲಿ, ಸಂಬಂಧಗಳೂ ಉತ್ತಮವಾಗಿರಬಹುದು. ಆದರೆ, ಸಾಮಾಜಿಕ ಮೌಲ್ಯಗಳು ವ್ಯಕ್ತಿಗತವಾಗಿ ನಿರೂಪಣೆ ಆಗುವುದಿಲ್ಲ ತಾನೇ.
ಈ ಸಂಬಂಧದಲ್ಲಿ ಹುಟ್ಟುವ ಮಕ್ಕಳು ಹೆಚ್ಚಾಗಿ ಅನಾಥ ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ. ವಿಚ್ಛೇದಿತ ಸಂಬಂಧಗಳಲ್ಲಿಯೂ ಮಕ್ಕಳಲ್ಲಿ ಇಂತಹ ಭಾವನೆ ಹುಟ್ಟುತ್ತದೆ. ಆದರೆ, ಅಂತಹ ಕಡೆಗಳಲ್ಲಿ ಪ್ರತ್ಯೇಕಗೊಳ್ಳುವುದಕ್ಕೆ ಬಲವಾದ ಕಾರಣವಿದೆ ಎನ್ನುವುದನ್ನಾದರೂ ಮಕ್ಕಳು ನಂತರದ ದಿನಗಳಲ್ಲಿ ಅರಿತುಕೊಳ್ಳುತ್ತಾರೆ.
ಲಿವ್-ಇನ್ ಸಂಬಂಧದಲ್ಲಿ ಸಂಭ್ರಮಿಸುವ ಪ್ರೇಮಿಗಳು ಮದುವೆ ಬಂಧನವಿಲ್ಲದೆ ಮುಕ್ತ ಭಾವದಲ್ಲಿ ಪ್ರೇಮವು ತೀವ್ರವಾಗಿರುತ್ತದೆ ಎಂದು ನಂಬುತ್ತಾರೆ. ಮದುವೆಯ ಬಂಧನದಲ್ಲಿಯೇ ಹೆಚ್ಚು ಸುರಕ್ಷೆಯ ಭಾವವಿರುತ್ತದೆ ಎಂದು ದಂಪತಿ ನಂಬುತ್ತಾರೆ. ಎರಡೂ ನಂಬುಗೆಯ ದೋಣಿಯಲ್ಲಿ ಪ್ರೇಮವು ಪಯಣಿಸುತ್ತದೆ.
-ಮೀನಾ ಕುಮಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್ 2ನೇ ಪಂದ್ಯ
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.