ಬ್ರೆಡ್ ವೈವಿಧ್ಯ
Team Udayavani, Jan 12, 2018, 2:50 PM IST
ವಿವಿಧ ಹಣ್ಣುಗಳು, ಮೊಳಕೆಕಾಳು, ಸ್ವೀಟ್‌ಕಾರ್ನ್ ಇತ್ಯಾದಿಗಳನ್ನು ಬಳಸಿ ಆರೋಗ್ಯಕ್ಕೆ ಪೂರಕವಾಗಿ ಮತ್ತು ನಾಲಿಗೆಗೆ ರುಚಿಯನ್ನು ನೀಡುವಂತೆ ಬ್ರೆಡ್‌ನ್ನು ನಾವು ವೈವಿಧ್ಯಮಯವಾಗಿ ಸವಿಯಬಹುದು. ಇಲ್ಲಿವೆ ಕೆಲವು ರಿಸಿಪಿಗಳು.
ಬ್ರೆಡ್ ವಿದ್ ಸ್ವೀಟ್‌ಕಾರ್ನ್ ಸ್ಯಾಂಡ್‌ವಿಚ್
ಬೇಕಾಗುವ ಸಾಮಗ್ರಿ: ಬ್ರೆಡ್ ಪೀಸ್‌ಗಳು- ಆರು, ಸ್ವೀಟ್‌ಕಾರ್ನ್- ಆರು ಚಮಚ, ಕಾಳುಮೆಣಸಿನ ಪುಡಿ- ಒಂದು ಚಮಚ, ಮೆಂತೆಸೊಪ್ಪು- ನಾಲ್ಕು ಚಮಚ, ನೀರುಳ್ಳಿ – ನಾಲ್ಕು ಚಮಚ, ಕ್ಯಾರೆಟ್‌ತುರಿ- ನಾಲ್ಕು ಚಮಚ, ಕೆಂಪುಮೆಣಸಿನ ಪುಡಿ- ಅರ್ಧ ಚಮಚ, ಟೊಮೆಟೋ ಕೆಚಪ್- ನಾಲ್ಕು ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಬಾಣಲೆಗೆ ಎರಡು ಚಮಚ ಬೆಣ್ಣೆ ಹಾಕಿಕೊಂಡು, ಇದು ಬಿಸಿಯಾದಾಗ ಸ್ವೀಟ್‌ಕಾರ್ನ್ ಹಾಕಿ ಬಾಡಿಸಿಕೊಳ್ಳಿ. ಇದಕ್ಕೆ ಕಾಳುಮೆಣಸಿನ ಪುಡಿ, ನೀರುಳ್ಳಿ, ಮೆಂತೆಸೊಪ್ಪು, ಕ್ಯಾರೆಟ್‌ತುರಿ ಕೆಂಪುಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಬಾಡಿಸಿಕೊಳ್ಳಿ. ತವಾ ಬಿಸಿಯಾಗಲು ಇಟ್ಟು ಬ್ರೆಡ್‌ನ್ನು ಸ್ವಲ್ಪ ತುಪ್ಪ ಹಾಕಿ ಎರಡೂ ಬದಿ ಸ್ವಲ್ಪ ಕಾಯಿಸಿಕೊಳ್ಳಿ. ನಂತರ, ಇದರ ಮೇಲೆ ಸ್ವಲ್ಪ ಟೊಮೆಟೋ ಕೆಚಪ್ ಹರಡಿ, ಅದರ ಮೇಲೆ ಮೊದಲೇ ತಯಾರಿಸಿರುವ ಸ್ವೀಟ್‌ಕಾರ್ನ್ನ್ನು ಹರಡಿ, ಮೇಲಿನಿಂದ ಇನ್ನೊಂದು ಬ್ರೆಡ್‌ಪೀಸ್‌ನ್ನು ಇಟ್ಟು ಸರ್ವ್ ಮಾಡಬಹುದು.
ಬೆಳ್ಳುಳ್ಳಿ ಟೋಸ್ಟ್
ಬೇಕಾಗುವ ಸಾಮಗ್ರಿ: ಬ್ರೌನ್‌ಬ್ರೆಡ್- ಎಂಟು ಪೀಸ್, ಹುರಿದ ಶೇಂಗಾ- ಎಂಟು ಚಮಚ, ಕೊತ್ತಂಬರಿಸೊಪ್ಪು- ಎಂಟು ಚಮಚ, ಶುಂಠಿ- ಅರ್ಧ ಇಂಚು, ಬೆಳ್ಳುಳ್ಳಿ- ಹತ್ತು ಬೀಜ, ಹಸಿ ಮೆಣಸಿನಕಾಯಿ- ನಾಲ್ಕು, ಲಿಂಬೆರಸ ಮತ್ತು ಉಪ್ಪು ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ಶೇಂಗಾ ಬೀಜಗಳಿಗೆ ಬ್ರೆಡ್‌ನ್ನು ಹೊರತುಪಡಿಸಿ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಗೂ ಸ್ವಲ್ಪ$ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪೇಸ್ಟ್‌ಮಾಡಿ. ಬ್ರೆಡ್‌ಗೆ ತುಪ್ಪಸವರಿ ಕಾದ ಕಾವಲಿಯಲ್ಲಿ ಟೋಸ್ಟ್ ಮಾಡಿ ಇದಕ್ಕೆ ಹಸಿರು ಚಟ್ನಿಯನ್ನು ಹಚ್ಚಿ ಮೇಲಿನಿಂದ ಇನ್ನೊಂದು ಬ್ರೆಡ್ ಪೀಸ್ ಇಟ್ಟು ಸರ್ವ್ ಮಾಡಬಹುದು.
ಬನಾನ ಸ್ಯಾಂಡ್‌ವಿಚ್
ಬೇಕಾಗುವ ಸಾಮಗ್ರಿ: ಬ್ರೆಡ್‌ಪೀಸ್- ಆರು, ಹೆಚ್ಚಿದ ಬಾಳೆಹಣ್ಣು – ನಾಲ್ಕು, ಹೆಚ್ಚಿದ ಖರ್ಜೂರ- ನಾಲ್ಕು, ಹೆಚ್ಚಿದ ಚೆರಿ- ನಾಲ್ಕು, ಫೂಟ್ಸ್ ಜಾಮ್- ನಾಲ್ಕು ಚಮಚ, ಜೇನುತುಪ್ಪ- ಎರಡು ಚಮಚ.
ತಯಾರಿಸುವ ವಿಧಾನ: ಬ್ರೆಡ್‌ಗೆ ತುಪ್ಪ ಸವರಿಕೊಂಡು ಕಾದ ಕಾವಲಿಯಲ್ಲಿ ಕೆಂಪಗೆ ಬಿಸಿ ಮಾಡಿ. ನಂತರ ಒಂದು ಬ್ರೆಡ್ ಪೀಸ್‌ಗೆ ಫೂಟ್‌ಜಾಮ್ ಸವರಿ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಹರಡಿ ಕೊನೆಗೆ ಜೇನುತುಪ್ಪ ಸವರಿ ಮೇಲಿನಿಂದ ಇನ್ನೊಂದು ಬ್ರೆಡ್ ಸೇರಿಸಿ ಸರ್ವ್ ಮಾಡಬಹುದು.
ಬ್ರೆಡ್ ರಸಾಯನ
ಬೇಕಾಗುವ ಸಾಮಗ್ರಿ: ಬ್ರೆಡ್‌ಪೀಸ್- ನಾಲ್ಕು, ತಂಪಾದ ದಪ್ಪಹಾಲು- ಒಂದೂವರೆ ಕಪ್, ಹೆಚ್ಚಿದ ಸೇಬು, ಬಾಳೆಹಣ್ಣು, ಖರ್ಜೂರ, ಒಣದ್ರಾಕ್ಷಿ, ಸಪೋಟ ಇತ್ಯಾದಿ ಹಣ್ಣುಗಳ ಮಿಶ್ರಣ- ಅರ್ಧ ಕಪ್, ಓಟ್ಸ್ – ಒಂದು ಚಮಚ, ಜೇನುತುಪ್ಪ – ಎರಡು ಚಮಚ, ಹೆಚ್ಚಿದ ಬಾದಾಮಿ- ಒಂದು ಚಮಚ.
ತಯಾರಿಸುವ ವಿಧಾನ: ಓಟ್ಸ್‌ನ್ನು ಸ್ವಲ್ಪ ಬೆಚ್ಚಗೆ ಮಾಡಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಹಾಲು ಹಾಗೂ ಮೇಲೆ ತಿಳಿಸಿದ ಎಲ್ಲಾ ಹಣ್ಣುಗಳನ್ನು ಮತ್ತು ಜೇನುತುಪ್ಪಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಸರ್ವ್ ಮಾಡುವಾಗ ಬ್ರೆಡ್‌ಚೂರುಗಳನ್ನು ಸೇರಿಸಿ ಮೇಲಿನಿಂದ ಚೆರಿಯಿಂದ ಅಲಂಕರಿಸಬಹುದು.
ಗೀತಸದಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.