ಬಗೆ ಬಗೆ ಬಸಳೆ
Team Udayavani, Nov 30, 2018, 6:00 AM IST
ಕಬ್ಬಿಣಾಂಶ ಹೊಂದಿರುವ ಹಲವಾರು ಸೊಪ್ಪುಗಳಲ್ಲಿ ಬಸಳೆಯೂ ಒಂದು. ರುಚಿಕರ ಖಾದ್ಯ ತಯಾರಿಕೆ ಮಾತ್ರವಲ್ಲ, ಔಷಧಿಯಾಗಿಯೂ ಇದು ಬಹಳ ಉಪಯೋಗಿ.
ಬಸಳೆ ಪತ್ರೊಡೆ
ಕೆಸುವಿನೆಲೆ ಪತ್ರೊಡೆ ಅರಿಯದವರಿಲ್ಲ. ಆದರೆ, ಬಸಳೆ ಸೊಪ್ಪಿನೊಂದಿಗಿನ ಪತ್ರೊಡೆಯೂ ಅಷ್ಟೇ ರುಚಿಕರ.
ಬೇಕಾಗುವ ಸಾಮಗ್ರಿ: ಬಸಳೆಸೊಪ್ಪು 10-12, ಅಕ್ಕಿ – 3/4 ಕಪ್, ಒಣಮೆಣಸು- 6, ಕಡಲೆಬೇಳೆ- 1 ದೊಡ್ಡ ಚಮಚ, ಒಣ ಕೊತ್ತಂಬರಿ- 2 ಚಮಚ, ಮೆಂತ್ಯ- 1/4 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಹುಣಸೆಹಣ್ಣು ಗೋಲಿಗಾತ್ರ.
ತಯಾರಿಸುವ ವಿಧಾನ: ಕಡಲೆಬೇಳೆ, ಅಕ್ಕಿ ಒಂದು ಗಂಟೆ ನೆನೆಸಿ ಒಣಮೆಣಸು, ಹುಣಸೆ, ಉಪ್ಪು ಸೇರಿಸಿ ರುಬ್ಬಿ. ನಯವಾಗಿ ರುಬ್ಬಬೇಕಾಗಿಲ್ಲ. ಕಡಲೆಬೇಳೆ, ಕೊತ್ತಂಬರಿ, ಮೆಂತ್ಯ ಹುರಿದು ಪುಡಿ ಮಾಡಿ ರುಬ್ಬಿದ ಮಿಶ್ರಣಕ್ಕೆ ಬೆರೆಸಿ. ಈ ಹಿಟ್ಟನ್ನು ಬಸಳೆಸೊಪ್ಪಿಗೆ ಪತ್ರೊಡೆಯಂತೆ ಸವರಿ, ಮಡಚಿ ಆವಿಯಲ್ಲಿ ಬೇಯಿಸಿ. ಬಿಸಿಬಿಸಿ ಬಸಳೆ ಪತ್ರೊಡೆ ಅತ್ಯಂತ ರುಚಿಕರ.
ಬಸಳೆ ವಡೆ
ಬೇಕಾಗುವ ಸಾಮಗ್ರಿ: ಬಸಳೆ ಸೊಪ್ಪು – 10, ಅಕ್ಕಿಹಿಟ್ಟು- 1/4 ಕಪ್, ಉಪ್ಪು ರುಚಿಗೆ ತಕ್ಕಷ್ಟು , ಕಡಲೆಬೇಳೆ- 1/2 ಕಪ್, ಹುರಿದ ಕೆಂಪು ಮೆಣಸು- 4.
ತಯಾರಿಸುವ ವಿಧಾನ: ಕಡಲೆಬೇಳೆ ಒಂದು ಗಂಟೆ ನೆನೆಸಿ. ನಂತರ ಉಪ್ಪು , ಮೆಣಸಿನೊಂದಿಗೆ ತರಿತರಿಯಾಗಿ ರುಬ್ಬಿ . ಬಸಳೆ ಸಣ್ಣದಾಗಿ ಕತ್ತರಿಸಿ ಇದಕ್ಕೆ ಅಕ್ಕಿಹಿಟ್ಟು ಬೆರೆಸಿ, ವಡೆಯಂತೆ ತಟ್ಟಿ ಕರಿಯಿರಿ.
ಬಸಳೆ ತಂಬುಳಿ
ಬೇಕಾಗುವ ಸಾಮಗ್ರಿ: ಬಸಳೆಸೊಪ್ಪು- 8, ಜೀರಿಗೆ- 1/2 ಚಮಚ, ಮೊಸರು- 1/2 ಕಪ್, ಕಾಯಿತುರಿ- 2 ಚಮಚ, ಬೆಣ್ಣೆ – 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು , ಮೆಣಸು-1.
ತಯಾರಿಸುವ ವಿಧಾನ: ಬಸಳೆಸೊಪ್ಪನ್ನು ತೊಳೆದುಕೊಂಡು ಸಣ್ಣಗೆ ಹೆಚ್ಚಿ. ನಂತರ ಬೆಣ್ಣೆ , ಜೀರಿಗೆಯೊಂದಿಗೆ ಹುರಿಯಿರಿ. ನಂತರ ಕಾಯಿತುರಿ, ಮೆಣಸಿನೊಂದಿಗೆ ನಯವಾಗಿ ರುಬ್ಬಿ. ಮೊಸರು, ಉಪ್ಪು ಸೇರಿಸಿ ಒಗ್ಗರಿಸಿ. ಬಾಯಿಹುಣ್ಣಿರುವವರಿಗೆ ಇದರ ಸೇವನೆ ಉತ್ತಮ.
ಬಸಳೆ ಕಷಾಯ
ಬೇಕಾಗುವ ಸಾಮಗ್ರಿ: ಬಸಳೆ ಸೊಪ್ಪು – 6, ಬೆಲ್ಲ- ಒಂದು ದೊಡ್ಡ ತುಂಡು, ಹಾಲು- 1/2 ಕಪ್.
ತಯಾರಿಸುವ ವಿಧಾನ: ಬಸಳೆ ಎಲೆಗಳನ್ನು ಚೆನ್ನಾಗಿ ತೊಳೆದು ಒಂದು ಕಪ್ ನೀರಿನಲ್ಲಿ ಕುದಿಸಿ, ಅರ್ಧಕ್ಕೆ ಇಳಿಸಿ, ಸೋಸಿಕೊಳ್ಳಿ. ಇದಕ್ಕೆ ಬೆಲ್ಲ, ಬಿಸಿ ಹಾಲು ಸೇರಿಸಿ ಸೇವಿಸಿ. ಉಷ್ಣ ಪ್ರಕೃತಿಯವರಿಗೆ, ಬಾಯಿಹುಣ್ಣಿನ ತೊಂದರೆ ಅನುಭವಿಸುವವರಿಗೆ ಇದರ ಸೇವನೆ ಉತ್ತಮ.
ದೀಪಾ ಡಿ ಹೆಗಡೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.