ಮಂತ್ರದಂಡದಂಥ ಬಿದಿರಕೊಳವೆ
ಅಂತರಂಗದ ಅಡುಮನೆ
Team Udayavani, Dec 13, 2019, 5:07 AM IST
ರಾಜಕುಮಾರಿ ಮನೆಯೊಳಗೆ ಬಗ್ಗಿ ನೋಡಿದಳಂತೆ. ಆಗ ಕಂಡದ್ದೇನು ಗೊತ್ತಾ? ಅಲ್ಲಿದ್ದಾಕೆಯ ಕೋರೆದಾಡೆಗಳು ಹೊರ ಬಂದಿದ್ದವು. ಇನ್ನೇನು ರಾಜಕುಮಾರಿಯನ್ನು ಸುಟ್ಟು ತಿನ್ನುವ ಆಸೆಯಲ್ಲಿ ನಾಲಿಗೆಯು ಜೊಲ್ಲು ಸುರಿಸುತ್ತಿತ್ತು. ತನ್ನ ಕಾಲುಗಳನ್ನೇ ಒಲೆಯೊಳಗೆ ತಳ್ಳಿ, ಬೆಂಕಿಯಿಟ್ಟು, ಮೂಳೆಯ ತುಂಡೊಂದನ್ನು ಹಿಡಿದು ಆ ಬೆಂಕಿಯುರಿಗೆ ಗಾಳಿ ಊದುತ್ತಾ ಕುಳಿತ ರಕ್ಕಸಿ…” ಪಾತಜ್ಜಿ ಹೀಗೆ ಕಥೆ ಹೇಳುತ್ತಿದ್ದರೆ ನಾವು ಹಿಡಿದ ಉಸಿರನ್ನು ಬಿಡಲು ಹೆದರಿ ಹೆಣಗಾಡುತ್ತಿದ್ದೆವು. ಅಡುಗೆ ಮನೆಯ ಒಲೆಯೆದುರೇ ಕುಳಿತೇ ರೊಟ್ಟಿ ತಟ್ಟುತ್ತಲೋ, ದೋಸೆ ಹೊಯ್ಯುತ್ತಲೋ ಈ ಕಥೆಗಳನ್ನು ಹೇಳುತ್ತಿದ್ದ ಆಕೆಯ ಮೊಗವೂ ಬೆಂಕಿಯ ಝಳಕ್ಕೆ ಕೆಂಪಾಗಿ ನಮ್ಮ ಪ್ರೀತಿಯ ಪಾತಜ್ಜಿಗೂ ಕೋರೆದಾಡೆಗಳು ಬಂದಾವೇನೋ ಎಂಬ ಭಯದ ಭಾವವೂ ಮೂಡಿ ಮರೆಯಾಗುತ್ತಿತ್ತು.
ಕೊಂಚ ಹೊತ್ತಿಗೆ ಕಥೆ ಸುಖಾಂತವಾಗಿ, “ಕಥೆ ಹೇಳು’ ಎಂದು ಪೀಡಿಸುವ ನಮ್ಮಿಂದ ಬಿಡುಗಡೆ ಹೊಂದಿದ ಪಾತಜ್ಜಿ ಅಬ್ಬಿ ಕೊಟ್ಟಿಗೆಯತ್ತ ಕಾಲು ಹಾಕುತ್ತಿದ್ದಳು. ಒಂದು ಬದಿಯಲ್ಲಿ ಒಣಗಿಸಿಟ್ಟ ತೆಂಗಿನ ಮಡಲು, ಗೋಡೆಯಲ್ಲಿ ಒಂದಿಷ್ಟು ತಟ್ಟಿದ ಬೆರಣಿ, ಪಕ್ಕದಲ್ಲಿ ಒಣ ಕುಂಟೆಗಳ ರಾಶಿ ಇದ್ದರೂ ಪಾತಜ್ಜಿಯ ಕೈ ಅರಸುತ್ತಿದ್ದುದು ಹುಡಿ ಸೌದೆಯ ತುಣುಕುಗಳನ್ನೇ. ಖಾಲಿ ಕರಟಕ್ಕೊಂದಿಷ್ಟು ಬೂದಿ ತುಂಬಿ ಬಿಡುತ್ತಿದ್ದಳು. ಕೈಯಲ್ಲಿದ್ದ ಸೀಮೆಎಣ್ಣೆ ದೀಪದ ಮುಚ್ಚಳ ತೆಗೆದು ಒಂದು ಹನಿ, ಅಂದರೆ ಒಂದೇ ಹನಿಯಾಗುವಷ್ಟು ಎಣ್ಣೆಯನ್ನು ಬೂದಿಯ ನಡುವಿಗೆ ಬೀಳುವಂತೆ ಹೊಯ್ಯುತ್ತಿದ್ದಳು. ಒಲೆಯ ಬದಿಯಲ್ಲೇ ಬೆಚ್ಚಗೆ ಬಿದಿರಂಡೆಯಲ್ಲಿ ಕುಳಿತಿದ್ದ ಬೆಂಕಿ ಪೆಟ್ಟಿಗೆ ಕೈಯಲ್ಲಿ ಹಿಡಿದು, ಅದರೊಳಗಿನ ಕಡ್ಡಿ ತೆಗೆದು ಸುಮ್ಮನೆ ಬದಿಗೊಂದು ಗೀರು ಹಾಕಿ ಹೊತ್ತಿಕೊಂಡ ಕಡ್ಡಿಯನ್ನು ಎಣ್ಣೆ ಬಿದ್ದ ಜಾಗಕ್ಕೆ ಬೀಳಿಸಿ ಬಿಡುತ್ತಿದ್ದಳು. ಹರಡಿದ ಎಣ್ಣೆಗೆಲ್ಲಾ ಹಿಡಿದ ಬೆಂಕಿಯ ನರ್ತನ ಕಡಿಮೆಯಾಗುವ ಮೊದಲೇ ಮಡಲ ಗರಿ, ಒಣ ಪುರುಳೆಗಳು, ಗಟ್ಟಿ ಕುಂಟೆ ಸೌದೆ. ಒಂದರ ನಂತರ ಒಂದು ಅದೇ ಕ್ರಮದಲ್ಲಿ, ಕೊಂಚ ಹೆಚ್ಚಿಲ್ಲ ಕಡಿಮೆಯೂ ಇಲ್ಲ. ಹೊತ್ತಿದ ಬೆಂಕಿಗೊಂದು ಕಣ್ಣು ಹಾಯಿಸಿ ಎಲ್ಲ ಒಲೆಯ ಒಳಗೇ ಇದೆಯೆಂದು ದೃಢಪಡಿಸಿಕೊಂಡೇ ಮನೆಯೊಳಗೆ ನುಗ್ಗುತ್ತಿದ್ದಳು ಪಾತಜ್ಜಿ. ಇವೆಲ್ಲ ಬೇಸಿಗೆ ಯ ಆರಾಮದ ಮಾತಾದರೆ ಮಳೆಗಾಲದ ಒದ್ದೆ ಸೌದೆಗೆ ಎಷ್ಟು ಸೇವೆ ಮಾಡಿದರೂ ಸಾಲದು ಎಂಬ ಕೆಟ್ಟ ಬುದ್ಧಿ.
ಆಗ ಅಡುಗೆ ಒಲೆಯಲ್ಲಿದ್ದ ಕೆಂಡವನ್ನೇ ಒಯ್ದು ಬಚ್ಚಲ ಒಲೆಯೊಳಗಿಕ್ಕಿ ಕೊಂಚ ಧಾರಾಳ ಮಡಲ ಗರಿಯನ್ನು ಅದರ ಮೇಲೆ ಹೊದೆಸಿ ಬಿಡುತ್ತಿದ್ದಳು. ಅದು ಹೊಗೆಯೇಳಲು ಶುರುವಾದಾಗ ಅಜ್ಜಿಯ ಕೈಯಲ್ಲೊಂದು ಮಂತ್ರ ದಂಡ ಕಾಣಿಸಿಕೊಳ್ಳುತ್ತಿತ್ತು. ಅದುವೇ ಬಿದಿರ ಕೊಳವೆ. ಅದರ ಒಂದು ತುದಿ ಬೆಂಕಿಗೆ ತಾಗಿಯೋ ಏನೋ ಸುಟ್ಟೇ ಇರುತ್ತಿತ್ತು. ಕೆಲವೊಮ್ಮೆ ಒಲೆಯೂದುವ ಭರದಲ್ಲಿ ಬಿದಿರ ಕೊಳವೆಗೇ ಬೆಂಕಿ ಹಿಡಿದು ಹೊಗೆಯಾಡುವುದೂ ಇತ್ತಲ್ಲ. ಬೂದಿ ಮುಚ್ಚಿದ ಕೆಂಡದ ಮೇಲೀಗ ಕೊಳವೆಯುಸಿರು. ಮೊದ ಮೊದಲಿಗೆ ಪರದೆಯ ಮರೆಯಿಂದ ಹೊರ ಬರಲಂಜುವ ಹೊಸ ಮದುಮಗಳಂತೆ ನಾಚುವ ಬೆಂಕಿ, ಬೂದಿ ಸರಿದೊಡನೇ ನಿಗಿ ನಿಗಿ ಹೊಳೆಯುತ್ತಿತ್ತು. ಹಾಗೆಂದು ಸಿಕ್ಕಿದ್ದನ್ನೆಲ್ಲ ನುಂಗುವ ಅವಸರವೇನೂ ಅದಕ್ಕಿಲ್ಲ. ಒದ್ದೆ ಮುದ್ದೆ ಸೌದೆಯಿನ್ನೂ ಕಾವು ಹಿಡಿದು ಬಿಸಿಯಾಗಬೇಕಾದರೆ ಅಷ್ಟು ಹೊತ್ತು ಬೇಡವೇ? ಅಷ್ಟೂ ಹೊತ್ತು ಪಾತಜ್ಜಿಯ ಎದೆ ಬಸಿದ ಉಸಿರು ಕೊಳವೆಯ ಮೂಲಕ ಬೆಂಕಿಯ ಮೇಲೆ ಹಾಯುತ್ತಲೇ ಇರುತ್ತಿತ್ತು. ತೆಂಗಿನ ಮಡಲಿಗೆ ಬೆಂಕಿ ಹಿಡಿದು ಬರ್ರನೇ ಹೊತ್ತಿ ಮುಗಿದರೂ ಒದ್ದೆ ಸೌದೆ ತನ್ನ ಪಾಡಿಗೆ ತಾನುಳಿದು ಹಿಂಭಾಗದಿಂದ ನೀರು ಹನಿಸುತ್ತ ಇರುತ್ತಿದ್ದುದೂ ಇತ್ತು. ಇದು ಹೊಗೆಯ ಖಾರಕ್ಕೆ ಅವಳ ಕಣ್ಣಿನಿಂದಿಳಿಯುತ್ತಿದ್ದ ನೀರಿನಷ್ಟಿರಲಿಲ್ಲ ಬಿಡಿ. ಮತ್ತೂಮ್ಮೆ ಮಗದೊಮ್ಮೆ ಇದೇ ಊದು ಕೊಳವೆಯ ಸೇವೆ. ಬೇಕೋ ಬೇಡವೋ ಎಂದುರಿವ ಬೆಂಕಿ ಒಮ್ಮೆ ಬಿಸಿಯ ಝಳವನ್ನು ಅಪ್ಪಿಕೊಂಡಿತೆಂದರೆ ಸಾಕು ಮತ್ತೇನನ್ನೂ ಬೇಡದೇ ಉರಿದುರಿದು ಬೂದಿಯಾಗುತ್ತಿತ್ತು. ಆ ಹೊತ್ತಿನಲ್ಲಿ ಅವಳ ಉಸಿರ ಭರವೆಲ್ಲಾದರೂ ಬಿದಿರಿನ ಕೊಳಲಿಗೆ ಸಿಕ್ಕಿಬಿಟ್ಟಿದ್ದರೆ ಅದೆಂತೆಂಥ ರಾಗಗಳು ಹೊಮ್ಮಿ ಬಿಡುತ್ತಿದ್ದುವೇನೋ? ಅದೇ ಬಿದಿರು ಸುಮ್ಮನೆ ಈಕೆ ಹಾಯಿಸಿದ ಗಾಳಿಯುಗುಳುತ್ತಿತ್ತಷ್ಟೇ.
ಆಗೆಲ್ಲ ಹೊತ್ತಲ್ಲದ ಹೊತ್ತಿನಲ್ಲಿ ನೆಂಟರು ಬಂದರೆ ಬಿಸಿಯಾದ್ದೇನಾದರೂ ಕೊಡಬೇಕಾದರೆ ಆಕೆ ಪಡುತ್ತಿದ್ದ ಪರಿಪಾಟಲು ಅಷ್ಟಿಷ್ಟಲ್ಲ. ಒಂದು ಲೋಟ ಕಾಫಿಯೋ, ಚಹಾವೋ, ಹೋಗಲಿ ಮಕ್ಕಳಿಗಿಷ್ಟು ಬೆಲ್ಲದ ನೀರೋ ಕೊಡಬೇಕಾದರೆ ಮತ್ತೆ ಒಲೆ ಉರಿ ಕಾಣಬೇಕಿತ್ತು. ಹಿತ್ತಲೊಲೆಯಲ್ಲಿ ಬಿಸಿ ನೀರು ಉಳಿದಿದ್ದರೆ ಪುಣ್ಯ. ಅದಕ್ಕೆ ಏನಾದರೂ ಹಾಕಿ ಕೊಡಬಹುದಿತ್ತು. ಆದರೆ ರಚ್ಚೆ ಹಿಡಿದಂತೆ ಸುರಿವ ಮಳೆಗಾಲದಲ್ಲಿ ಇಂತಹ ಆಸೆಗಳನ್ನು ಇಟ್ಟುಕೊಳ್ಳುವುದೂ ತಪ್ಪು ಎಂಬುದನ್ನು ಅವಳನುಭವ ಕಲಿಸಿತ್ತಲ್ಲÉ, ಮತ್ತೆ ಬಿದಿರ ಕೊಳವೆಯ ಮೊರೆ ಹೋಗುತ್ತಿದ್ದಳು. ನೆಂಟರೆದುರು ಬಿಸಿಯಾದ ದ್ರಾವಣದ ಲೋಟ ಇಟ್ಟ ಮೇಲೆಯೇ ಆಕೆಯ ಮೊಗದಲ್ಲಿ ನಗುವರಳುತ್ತಿದ್ದುದು. ನೆಂಟರ ಸಂಖ್ಯೆ ನೋಡಿ ಅದೇ ಒಲೆಗೆ ಇನ್ನೆರಡು ಸೌದೆ ಇಟ್ಟು ಅನ್ನದ ತಪ್ಪಲೆಯೇರಿಸುತ್ತಿದ್ದುದು.
ಅದೆಷ್ಟು ಹೆಂಗಳೆಯರ ಕಣ್ಣೀರು ಒರೆಸಿದ್ದ ಗೊತ್ತೇ ಬಿದಿರ ಕೊಳನೂದುವ ನಮ್ಮ ಕೃಷ್ಣ, ಪಾತಜ್ಜಿ ಅದೇ ಬಿದಿರ ಕೊಳವೆಯೊಂದನ್ನು ಪಕ್ಕಕ್ಕಿಡುವಾಗ “ಕೃಷ್ಣ ಕೃಷ್ಣಾ’ ಎಂದು ಕುಳಿತು ಸೋತ ಮಂಡಿಯನ್ನು ಬಲವಂತದಿಂದ ಮೇಲಕ್ಕೆತ್ತಿ ಸೊಂಟ ನೇರವಾಗಿಸುತ್ತಿದ್ದಳು. ಆಕೆ, ತನ್ನ ಕಾಲನ್ನು ತಾನೇ ಉರಿಸಿ ಬೆಂಕಿ ಮಾಡಿಕೊಳ್ಳದಿದ್ದರೂ ತನ್ನ ಉಸಿರಿನ ಬಹ್ವಂಶವನ್ನು ಈ ಬೆಂಕಿಯುರಿಸುವುದು ಎಂಬ ಕೆಲಸಕ್ಕೆ ಬಳಸಿ ಬಳಸಿ ಹಣ್ಣಾಗುತ್ತಿದ್ದಳು.
ಬದಲಾದ ಕಾಲಕ್ಕೆ ಅದೇ ಅಡುಗೆ ಮನೆ ಇದೆ, ಅದೇ ಬಚ್ಚಲು ಮನೆ ಇದೆ, ಅಲ್ಲಿ ಸ್ವಿಚ್ ತಿರುಗಿಸಿದರೆ ಉರಿವ ಬೆಂಕಿ, ಅದೇ ಬಿಸಿ ಕಾಫಿ, ಚಹಾ, ಈಗ ಗಳಿಗೆಯೊಳಗೆ ಸಿದ್ಧವಾಗಿ ಲೋಟ ಸೇರುತ್ತದೆ. ಆದರೆ, ಅದನ್ನು ಕೊಡುವ ನಮ್ಮ ನಗೆ ಗೆರೆಗಳು ಕಾಣಿಸುತ್ತವೋ ಇಲ್ಲವೋ ಎಂಬಂತಿರುತ್ತದೆ. ಏಕೆಂದರೆ, ನಮಗೆ ಪಾತಜ್ಜಿಗಿದ್ದಂತೆ ಬದುಕಿನ ಪ್ರೀತಿಯೆಂಬ ಊದು ಕೊಳವೆಗೆ ಉಸಿರೆರೆಯುವ ಚೈತನ್ಯವಿಲ್ಲ.
ಅನಿತಾ ನರೇಶ ಮಂಚಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.