ಬಟ್ಟೆ ಒಗೆಯುವುದು ಎಂಬುದೊಂದು ಧ್ಯಾನ
ಅಂತರಂಗದ ಅಡುಮನೆ
Team Udayavani, Jan 3, 2020, 4:11 AM IST
ಸಾಂದರ್ಭಿಕ ಚಿತ್ರ
ದೊಡ್ಡಮ್ಮ ಬೇಗ ಎದ್ದಿದ್ದಳು, ಬೇಗ ಬೇಗನೇ ಮನೆ ಕೆಲಸವನ್ನೂ ಮುಗಿಸುತ್ತಿದ್ದಳು ಅಂದರೆ ಇಂದೆಲ್ಲೋ ಹೊರಗೆ ಹೋಗುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾಳೆ ಎಂದೇ ಅರ್ಥ. ದೊಡ್ಡಮ್ಮ ಹೊರಟಿದ್ದಾಳೆಂದರೆ ನಾನು ಮನೆಯಲ್ಲಿರುವುದುಂಟೆ? ಅವಳ ಬಾಲದಂತೆ ನಾನೂ ಎದ್ದು ಅವಳ ಹಿಂದೆ-ಮುಂದೆ ಸುತ್ತಿ ಸುಳಿದೆ. ಎಲ್ಲಿಗಾದರೂ ಹೋಗುವುದಾದರೆ ದೇವರ ಕೋಣೆಯ ಮೂಲೆಯ ಮರದ ಪೆಟ್ಟಿಗೆಯ ಮೇಲೆ ಮಡಚಿಟ್ಟ ಆಕೆಯ ಸೀರೆ-ರವಿಕೆಗಳು ಕಾಣಿಸುತ್ತವೆ. ಅದರ ಆಧಾರದ ಮೇಲೆ ಹೇಳುವುದಾದರೆ ಇದ್ದ ಏಕೈಕ ಪಟ್ಟೆ ಸೀರೆ ತೆಗೆದಿಟ್ಟಿದ್ದರೆ ಅದು ಮದುವೆಯೋ ಮುಂಜಿಯೋ ಆಗಿರುತ್ತದೆ. ಮಾಮೂಲಿನ ನೈಲಾನ್ ಸೀರೆಗಳಾದರೆ ಪೂಜೆಯಂತಹ ಸಣ್ಣ ಸಮಾರಂಭಗಳು, ಎರಡೋ ಮೂರೋ ಸೀರೆಗಳಿದ್ದರೆ ನೆಂಟರ ಮನೆಗೆ ಹೊರಡುವ ತಯಾರಿ. ಇಂಥಾದ್ದೆಲ್ಲ ಯಾವದೂ ಕಾಣಿಸದಿದ್ದರೂ ದೊಡ್ಡಮ್ಮ ಗಡಬಡಿಸುತ್ತ ಕೆಲಸ ಮಾಡುತ್ತಿದ್ದಾಳೆ, ಎಲ್ಲಿಗಿರಬಹುದು ಎಂಬ ಗುಟ್ಟು ಬಿಟ್ಟುಕೊಡದೇ. ನನ್ನ ಕುತೂಹಲಕ್ಕೆ ಮುಕ್ತಿ ಸಿಕ್ಕಿದ್ದು ಮನೆಯ ಹೊರಗಿಟ್ಟ ಬಿದುರಿನ ದೊಡ್ಡ ಬುಟ್ಟಿ ನೋಡಿದ ನಂತರವೇ. ಮನೆಯ ಹೊರಗೆ ಕಟ್ಟಿ ಹಾಕಿದ್ದ ನಾಯಿ ತನ್ನ ಬಾಲ ಇನ್ನೇನು ಬಿದ್ದೇ ಹೋಗುತ್ತದೆ ಎನ್ನುವಂತೆ ಆಡಿಸುತ್ತ ಕುಣಿಯುವುದನ್ನು ಕಂಡಾಗ ಎಲ್ಲವೂ ನಿಚ್ಚಳವಾಗಿತ್ತು. ನಾವು ಹೋಗುತ್ತಿರುವುದು ತುಂಗಾ ನದಿಗೆ. ಅದೂ ಬಟ್ಟೆ ಒಗೆಯಲು.
ನಿತ್ಯದ ಬಳಕೆಯ ಬಟ್ಟೆಗಳೆಲ್ಲ ಮನೆಯ ಪಕ್ಕದಲ್ಲಿರುವ ಬಾವಿಯ ಬುಡದಲ್ಲಿ ಹಾಕಿದ ದೊಡ್ಡ ಕಲ್ಲಿನ ಮೇಲೆ ಹಾಕಿ ಒಗೆಯುವುದು ಎಂಬ ಪ್ರಕ್ರಿಯೆಗೆ ಒಳಗಾಗಿ ಅಲ್ಲೇ ಇನ್ನೊಂದು ಪಕ್ಕದ ಗೇರುಮರಕ್ಕೂ, ಮಾವಿನ ಮರಕ್ಕೂ ಕಟ್ಟಿದ ದಪ್ಪದ ಹಗ್ಗದ ಮೇಲೆ ನೇತಾಡಿಕೊಂಡು ಒಣಗುತ್ತಿದ್ದವು. ಇಂತಹ ಬಟ್ಟೆಗಳಿಗೇ ತಿಂಗಳಿಗೊಮ್ಮೆಯೋ ಎರಡು ತಿಂಗಳಿಗೊಮ್ಮೆಯೋ ಹೊಳೆಯಲ್ಲಿ ಈಜಾಡುವ ಭಾಗ್ಯ ದೊರೆಯುತ್ತಿತ್ತು. ಆ ದಿನಕ್ಕಾಗಿ ನಾವು ಕುತ್ತಿಗೆ ಎತ್ತರಿಸಿಕೊಂಡು ಕಾಯುತ್ತಿದ್ದುದೂ ಸುಳ್ಳಲ್ಲ.
ಅಣ್ಣನ ಸೈಕಲ್ಲಿನ ಎದುರಿನ ಭಾಗದಲ್ಲಿ ಸರಿಯಾಗಿ ಕುಳಿತುಕೊಳ್ಳುತ್ತಿದ್ದ ಬಟ್ಟೆಯ ಬುಟ್ಟಿ. ಹಿಂದಿನ ಕ್ಯಾರಿಯರ್‌ನಲ್ಲಿ ಕುಳಿತ ನಾನು. ನಮ್ಮ ಜೊತೆಗೇ ಓಡಿ ಬರುವ ಕಾಳುನಾಯಿ, ನಾವು ತಲುಪಿ ಅರ್ಧ ಗಂಟೆಯ ನಂತರ ಬೆವರಿಳಿಸಿಕೊಂಡು ಬರುವ ದೊಡ್ಡಮ್ಮ. ಇವಿಷ್ಟೂ ಬಟ್ಟೆ ಒಗೆಯುವ ಮೊದಲಿನ ದೃಶ್ಯಗಳು. ದೊಡ್ಡಮ್ಮ ಬರುವ ಮೊದಲೇ ಬಟ್ಟೆಗಳನ್ನೆಲ್ಲ ಒದ್ದೆ ಮಾಡಿ ಕಲ್ಲಿನ ಮೇಲಿಟ್ಟು ನಾವು ನೀರಲ್ಲಿ ಮುಳುಗೇಳುತ್ತ ನೀರಾಟದ ಸುಖ ಅನುಭವಿಸುತ್ತಿದ್ದೆವು. ದಪ್ಪ ದಪ್ಪ ಬೆಡ್ ಶೀಟುಗಳ ಒಂದು ಮೂಲೆಯನ್ನು ನದಿಯ ಬದಿಯ ಪೊದರುಗಳ ಗಟ್ಟಿ ಗೆಲ್ಲಿಗೆ ಕಟ್ಟಿ ಹರಿಯುವ ನೀರಲ್ಲಿ ಕುಣಿದಾಡಲು ಬಿಡುತ್ತಿದ್ದ ದೊಡ್ಡಮ್ಮ, ನೀರು ಬಟ್ಟೆಯ ನೂಲು ನೂಲಿನ ನಡುವೆಯೂ ರಭಸದಿಂದ ನುಗ್ಗಿ ಒಳಗಿನ ಕೊಳೆಯನ್ನು ಕಿತ್ತು ತೆಗೆಯುವ ಪಾಠ ಮಾಡುತ್ತಿದ್ದಳು. ಹೀಗೆ ಬಟ್ಟೆ ಒಗೆಯುವುದು ಎಂದರೆ ನೀರಾಟ ಎಂಬಷ್ಟು ಸುಖ ಆಗ.
ಆಕೆಯೊಬ್ಬಳಿದ್ದಳು. ಆಕೆಗೂ ಅಷ್ಟೇ ಪ್ರತಿನಿತ್ಯ ಮನೆಯ ಹತ್ತಿರವೇ ಇದ್ದ ಹರಿಯುವ ತೊರೆಯಲ್ಲಿ ಬಟ್ಟೆ ಜಾಲಾಡುವುದೆಂದರೆ ಪ್ರಿಯ. ಮನೆಯಲ್ಲಿ ಇಡೀ ದಿನ ನಡೆಯುತ್ತಿದ್ದ ಜಗಳ-ಕದನ, ಕೋಪ-ತಾಪ ನಿಟ್ಟುಸಿರು ಎಲ್ಲವೂ ಬಟ್ಟೆ ಒಗೆಯುವಿಕೆ ಎಂಬ ಕಾರ್ಯದಲ್ಲಿ ಕರಗಿ ನೀರಲ್ಲಿ ಮಾಯವಾಗಿ ಹೋಗಿ ಬಿಡುತ್ತಿತ್ತು. ದಿನವಿಡೀ ಮುಟ್ಟಿದ್ದಕ್ಕೆ ಹಿಡಿದಿದ್ದಕ್ಕೆಲ್ಲ ಕೊಸಕೊಸ ಮಾಡುವ ನಾದಿನಿಯ ಹೊಸಾ ಲಂಗ ಬೇಗನೇ ಹರಿಯುತ್ತಿದ್ದುದು ಅವಳ ಮೇಲಿನ ಸಿಟ್ಟಿನ ಪ್ರದರ್ಶನ ಬಟ್ಟೆಯ ಮೇಲಾಗುತ್ತಿದ್ದುದರಿಂದಲೇ ಎಂದು ಯಾವ ವಿಜ್ಞಾನಿಯ ಪ್ರಮೇಯದ ಸಹಾಯವೂ ಇಲ್ಲದೇ ನಿರೂಪಿಸಬಹುದಾದ ಸತ್ಯವಾಗಿತ್ತು. ಬಟ್ಟೆ ಒಗೆದಾದರೂ ಅವಳ ಹೆಜ್ಜೆಗಳು ಮನೆಯ ಕಡೆ ಹೋಗುವ ಉತ್ಸಾಹ ತೋರಿಸುತ್ತಿರಲಿಲ್ಲ. ಒಮ್ಮೊಮ್ಮೆ ಜೊತೆಯಾಗುತ್ತಿದ್ದ ಅವಳ ವಯಸ್ಸಿನವಳೇ ಆದ ಗೆಳತಿಯಿದ್ದರಂತೂ ಮುಗಿಯಿತು. ಬಟ್ಟೆಯನ್ನು ಹತ್ತಿರವೇ ಇದ್ದ ಬಂಡೆಗಲ್ಲಿಗೆ ಹರವಿ ಇಬ್ಬರೂ ತಮ್ಮ ತಮ್ಮ ಮನೆಯ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದರು. ತೀರಾ ವೈಯಕ್ತಿಕವಾದ ವಿಷಯಗಳೂ ಅವರ ನಡುವೆ ಅತ್ತಿತ್ತ ಹರಿದಾಡಿ ಕೆನ್ನೆ ಕೆಂಪೇರಿಸುತ್ತಿದ್ದುದು ಬಿಸಿಲ ಝಳಕ್ಕಂತೂ ಆಗಿರಲೇ ಇಲ್ಲ. ದಿನದ ಆಹ್ಲಾದದ ಕ್ಷಣಗಳವು. ಪಾದದಡಿಯಲ್ಲಿ ಹರಿಯುವ ತಣ್ಣನೆಯ ನೀರು ಆ ದಿನದ ನೋವನ್ನೆಲ್ಲ ಎಳೆದೊಯ್ದು “ನಾಳೆ ಬಾ, ನಾನಿದ್ದೇನೆ’ ಎಂಬ ಭರವಸೆಯನ್ನೇ ನೀಡುತ್ತಿತ್ತು.
ಕೊಂಚ ಮಳೆ ಕಡಿಮೆ ಇರುವ ಊರಿಗೆ ಮದುವೆಯಾಗಿ ಹೋಗಿದ್ದ ಅವಳು ಬಟ್ಟೆ ಮೂಟೆಯನ್ನು ಪಕ್ಕಕ್ಕಿಟ್ಟು ತಳ ಕಾಣದಷ್ಟು ಆಳಕ್ಕಿರುವ ಬಾವಿಗೆ ಕೊಡಪಾನ ಕಟ್ಟಿದ ಬಳ್ಳಿಯಿಳಿಸುತ್ತಿದ್ದಳು. ಹನುಮಂತನ ಬಾಲದಂತೆ ಸುರುಳಿ ಸುತ್ತಿಟ್ಟಿದ್ದ ಬಳ್ಳಿ ಮುಗಿದು ಕೊಡಪಾನ ನೀರಿಗೆ ಬಿದ್ದು ಸಣ್ಣದೊಂದೆರಡು ಬಳ್ಳಿಯ ಎಳೆದಾಟಕ್ಕೆ ನೀರು ತುಂಬಿಕೊಳ್ಳುತ್ತಿತ್ತು. ಇನ್ನೇನು ಎಳೆಯಬೇಕು ಎನ್ನುವಾಗ ಇನ್ನೊಂದು ಕೈ ಆಕೆಯ ಕೈಯ ಜೊತೆಗೇ ಸೇರುತ್ತಿತ್ತು. “ನೀವು ಬರಬೇಡಿ ಅತ್ತೇ’ ಎಂದು ಹೇಳಿಯೇ ಬಂದಿದ್ದರೂ ಆಕೆಗವಳ ಎಳೆಯ ಕೈಗಳ ಚಿಂತೆ. “ನನಗಿದೇನೂ ಹೊಸತಲ್ಲ ಬಿಡು’ ಎಂದು ನೀರೆಳೆದು ಪಕ್ಕದಲ್ಲಿದ್ದ ಚೆರಿಗೆಗೆ ತುಂಬುವಾಗ ಒರಟಾದ ಕೈಗಳೇ ಅವಳಿಗೆ, “ನಾವಿದ್ದೇವೆ ಬಿಡು’ ಎಂದು ಸಮಾಧಾನ ಹೇಳುತ್ತಿದ್ದವು. ಬಣ್ಣ ಬಿಡುವ ಬಟ್ಟೆ ಬೇರೆ ಹಾಕು, ಬಿಳಿಯದ್ದು ಬೇರೆ, ಮಕ್ಕಳದ್ದರಲ್ಲಿ ಹೆಚ್ಚು ಮಣ್ಣು, ನಿನ್ನ ಗಂಡನ ಬಟ್ಟೆಗೊಂದಿಷ್ಟು ಹೆಚ್ಚು ಸೋಪು, ಹೀಗೆಲ್ಲಾ ಆಕೆ ನಿರ್ದೇಶಿಸುತ್ತಲೇ ತಾನೇ ಒಗೆಯುತ್ತಲೂ ಇದ್ದಳು. ಅಲ್ಲೇ ಗಿಡಗಂಟೆಗಳ ಮೇಲೆಲ್ಲ ಹರಡಿ ಒಣಗಿದ ಬಟ್ಟೆಯನ್ನು ಇಬ್ಬರೂ ಕೂಡಿಯೇ ಮಡಚುತ್ತಿದ್ದರು. ಮರಳಿ ಬರುವಾಗ ತುಂಬಿದ ಕೊಡ ಹೊತ್ತ ಅತ್ತೆಯ ಜೊತೆ ಹಗುರ ಮನದ ಹಗುರ ಬಟ್ಟೆಯ ಗಂಟು ಹೊತ್ತ ಅವಳು.
ಈಗಲೂ ಮನೆ ಮನೆಯಲ್ಲಿ ಬಟ್ಟೆ ಒಗೆಯುಲ್ಪಡುತ್ತದೆ. ಮೆಷಿನ್ನುಗಳಲ್ಲಿ ಎಲ್ಲರೊಳಗೊಂದಾದ ಮಂಕುತಿಮ್ಮನಂತೆ ಒಂದೇ ಮುದ್ದೆಯಂತಹ ಬಟ್ಟೆ ಗಂಟು. ಬದುಕೂ ಇಷ್ಟೇ! ಕೊಳೆ ಕಳೆಯುತ್ತಲೇ ಕಗ್ಗಂಟಾಗುವ ಭಯ. ಅದಕ್ಕೆ ಬೆದರದೇ ಇವೆಲ್ಲವೂ ಸಹಜ ಎಂಬಂತೆ ತಾಳ್ಮೆಯಿಂದ ಗಂಟು ಬಿಡಿಸಿದರೆ ಒಲಿದು ಸುಮ್ಮನಾಗಿ ಬಿಡುತ್ತದೆ. ಪರಿಮಳ ಹೊತ್ತ ಶುಭ್ರ ಬದುಕು ನಮ್ಮದಾಗಿಬಿಡುತ್ತದೆ.
ಅನಿತಾ ನರೇಶ ಮಂಚಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.