ಇನ್ನೇನು ಹಬ್ಬಗಳ ಸಾಲು ಸಾಲು ಅರ್ಥ ತಿಳಿದು ಆಚರಿಸಬೇಕು
Team Udayavani, Jul 28, 2017, 6:50 AM IST
ಆಷಾಢ ಮುಗಿಯುತ್ತದೆ ಎನ್ನುವಾಗ ಶ್ರಾವಣ ಮಾಸ ಕುಣಿಯುತ್ತ ಬರುತ್ತದೆ. ಶ್ರಾವಣ ಮಾಸವೆಂದರೆ ಎಲ್ಲರಿಗೂ ತಿಳಿದ ಸಂಗತಿಯೇ. ಅದು ಹಬ್ಬಗಳ ಸಾಲನ್ನೇ ತರುತ್ತದೆ. ಭೀಮನ ಅಮಾವಾಸ್ಯೆ, ನಾಗರಪಂಚಮಿ, ಶ್ರಾವಣ ಶುಕ್ರವಾರಗಳು, ವರಮಹಾಲಕ್ಷ್ಮೀ ವ್ರತ ಅಬ್ಬಬ್ಟಾ ! ಹಬ್ಬ ಎಂದೊಡನೆ ಎಲ್ಲರ ಮನದಲ್ಲೂ ಏನೋ ಒಂದು ಆನಂದ, ಉತ್ಸಾಹ. ಸಣ್ಣ ಮಕ್ಕಳಿಗೆ ಹೊಸ ಬಟ್ಟೆ , ಸಿಹಿ ತಿನಿಸುಗಳು, ಮನೆಗೆ ಬರುವ ನೆಂಟರ ಸಂಭ್ರಮ. ದೊಡ್ಡವರಿಗೆ ಅತಿಥಿ ಅಭ್ಯಾಗತರನ್ನು ಸತ್ಕರಿಸಲು ನಡೆಸುವ ತಯಾರಿಯ ಸಡಗರ.
ಗೃಹಿಣಿಯರಿಗಂತೂ ಮನೆಯ ಸ್ವತ್ಛತೆಯಿಂದ ಹಿಡಿದು ಊಟ ಉಪಚಾರದವರೆಗೂ ಚಿಂತೆ. ಈ ಚಿತ್ರಣವನ್ನೆಲ್ಲಾ ನನ್ನಮ್ಮ ಅವಳು ಸಣ್ಣ ಹುಡುಗಿಯಾಗಿದ್ದಾಗ ನಡೆಯುತ್ತಿದ್ದ ವಿದ್ಯಮಾನ ಎಂದು ಬಣ್ಣಿಸುತ್ತಿದ್ದಳು. ಈಗಿನ ಮೈಕ್ರೋಫ್ಯಾಮಿಲಿ ಯುಗದಲ್ಲಿ, ಗಂಡು - ಹೆಣ್ಣು ಇಬ್ಬರೂ ದುಡಿಯುವ ಕಾಲದಲ್ಲಿ ಮೇಲೆ ಹೇಳಿದ ಸಡಗರ, ಸಂಭ್ರಮಪಡುವ ವ್ಯವಧಾನವೂ ಇರುವುದಿಲ್ಲ, ವೇಳೆಯೂ ಇಲ್ಲ. ಹೀಗೇ ಇದರ ಬಗ್ಗೆ ಚಿಂತಿಸುತ್ತ ಕುಳಿತೆ. ಎಲ್ಲರೂ ಹೇಳುತ್ತಾರೆ- ಕಾಲ ಬದಲಾಯಿತೆಂದು. ಆದರೆ, ಕಾಲ ಬದಲಾಗುವುದಿಲ್ಲ. ಅದೇ ಸೂರ್ಯ, ಅದೇ ಚಂದ್ರ, ಅದೇ ನಕ್ಷತ್ರ, ಭೂಮಿ. ಆದರೆ, ಬದಲಾಗಿರುವುದು ನಾವು ಬದುಕುವ ರೀತಿ.
ಪ್ರತಿ ಹಬ್ಬದಲ್ಲೂ ನಮ್ಮಮ್ಮನದು ಒಂದೇ ವರಾತ. “”ನೀನು ಹಬ್ಬಹರಿದಿನಗಳನ್ನು ಆಚರಿಸುವುದಿಲ್ಲ, ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗುವುದಿಲ್ಲ. ಹೀಗಾದರೆ ನಮ್ಮ ಸಂಸ್ಕೃತಿ ಮುಂದುವರಿಯುವುದು ಹೇಗೆ?” ಅಂತ. ಆಳವಾಗಿ ಸಂಸ್ಕೃತಿ ಎಂಬ ಪದದ ಮೂಲ ಹುಡುಕುತ್ತ ಹೋದರೆ, ಕಾಲಾಂತರದಿಂದ ಜನ ಯಾವುದನ್ನು ರೂಢಿ ಮಾಡಿಕೊಂಡು ನಡೆಸುತ್ತ ಬಂದಿದ್ದಾರೋ, ಅದೇ ಸಂಸ್ಕೃತಿ. ನಮ್ಮ ಹಿರಿಯರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಪ್ರೀತಿಸುತ್ತಿದ್ದರು. ತಮ್ಮೊಡನೆ ಈ ಭೂಮಿಯ ಮೇಲೆ ಸಹಬಾಳ್ವೆ ನಡೆಸುತ್ತಿರುವ ಇತರ ಜೀವಿಗಳನ್ನು ಗೌರವಿಸುತ್ತಿದ್ದರು. ಈ ವಿಷಯಗಳನ್ನು ತಮ್ಮ ಮುಂದಿನ ಪೀಳಿಗೆಗೆ ಮನದಟ್ಟು ಮಾಡಲು ಅನೇಕ ಮಾರ್ಗಗಳನ್ನು ಹುಡುಕಿಕೊಂಡರು. ಇಲಿ, ನವಿಲು, ಸಿಂಹ, ಕೋಣಗಳನ್ನು ದೇವತೆಗಳ ವಾಹನಗಳಾಗಿ ಮಾಡಿ ಅವುಗಳ ಬಗ್ಗೆ ಭಯಭಕ್ತಿ ಹುಟ್ಟುವಂತೆ ಮಾಡಿದರು. ಉದಾಹರಣೆಗೆ ಔಷಧೀಯ ಸಸ್ಯವೆಂದೇ ಹೆಸರಾದ ತುಳಸಿ ಗಿಡದಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಭಾವನೆ ಹುಟ್ಟಿಸಿ ಅದನ್ನು ನಮ್ಮ ದೈನಂದಿನ ಜೀವನದಲ್ಲಿ ತಂದರು. ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕುವುದರಿಂದ ಕಷ್ಟಗಳು ಪರಿಹಾರವಾಗುತ್ತವೆಂಬ ಭಾವನೆ ಹುಟ್ಟುಹಾಕಿ ಪ್ರದಕ್ಷಿಣೆಯಿಂದ ನಮ್ಮ ದೇಹಕ್ಕೆ ಆಮ್ಲಜನಕದ ಪೂರೈಕೆಯಾಗುವಂತೆ ಮಾಡಿದರು. ಸಂಬಂಧಗಳು ಗಟ್ಟಿಯಾಗಲಿ, ನೆರೆಹೊರೆಯವರೊಡನೆ ಸೌಹಾರ್ದ ಬೆಳೆಯಲಿ ಎಂಬ ಭಾವನೆಯಿಂದ ಹಬ್ಬ-ಹರಿದಿನಗಳನ್ನು ಆಚರಿಸಲು ಆರಂಭಿಸಿದರು. ಅವರು ಹುಟ್ಟು ಹಾಕಿದ ಪ್ರತಿ ಹಬ್ಬಕ್ಕೂ ತನ್ನದೇ ಆದ ಒಂದು ವೈಶಿಷ್ಟ್ಯವಿದೆ. ಉದಾಹರಣೆಗೆ ಯುಗಾದಿಯನ್ನೇ ತೆಗೆದುಕೊಳ್ಳಿ. ಹಿಂದೂಗಳ ಪ್ರಕಾರ ಯುಗಾದಿ ಹೊಸವರ್ಷದ ಮೊದಲ ದಿನ. ಅಂದಿನಿಂದ ಹೊಸ ಸಂವತ್ಸರದ ಪ್ರಾರಂಭ. ಶಿಶಿರದಲ್ಲಿ ಮರಗಿಡಗಳು ಒಣಗಿ ಎಲೆಗಳೆಲ್ಲ ಉದುರಿದ ನಂತರ ಚೈತ್ರದಲ್ಲಿ ಹೊಸ ಚಿಗುರು ಬರಲಾರಂಭಿಸುತ್ತದೆ. ಹೊಸ ಚಿಗುರನ್ನು ಧರಿಸಿದ ಭೂದೇವಿ ಕಣ್ಮನ ತಣಿಸುವಂತೆ ಕಂಗೊಳಿಸುತ್ತಾಳೆ.
ಯುಗಾದಿಯಲ್ಲಿ ಬೇವು-ಬೆಲ್ಲ ಮೆಲ್ಲುವುದೂ ಇದೇ ಕಾರಣಕ್ಕೆ. ಬೇವು ಅನೇಕ ರೋಗಗಳಿಗೆ ಪರಮೌಷಧ. ಇದರ ಚಿಗುರನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಬರಿದೆ ಕಹಿಯನ್ನು ತಿನ್ನಲಾಗದೆ ಅದರೊಡನೆ ಬೆಲ್ಲವೆಂಬ ಸಿಹಿಯನ್ನು ಬೆರೆಸಿ ಅದನ್ನು ಜೀವನಕ್ಕೂ ಹೋಲಿಸಿದರು. ಜೀವನದಲ್ಲಿ ಸಿಹಿಕಹಿಗಳು ಸಮವಾಗಿದ್ದರೇ ಅದು ನಿಜಜೀವನ ಎಂದರು. ಎಷ್ಟು ಅರ್ಥಪೂರ್ಣವಲ್ಲವೆ? ಇದನ್ನೇ ನಾವು ಈಗ ಸಂಪ್ರದಾಯವೆಂದು ಭಾವಿಸಿ ಈ ಕಾಂಕ್ರೀಟ್ ಯುಗದಲ್ಲಿ ಒಂದಕ್ಕೆ ನಾಲ್ಕರಷ್ಟು ದುಡ್ಡು ಕೊಟ್ಟು ಬೇವಿನ ಚಿಗುರನ್ನು ಖರೀದಿಸಿ ಅದರ ಬೆಲೆ ನೆನೆಯುತ್ತ ಮನಸ್ಸನ್ನು ಕಹಿ ಮಾಡಿಕೊಳ್ಳುತ್ತೇವೆ.
ನಮ್ಮ ಹಿರಿಯರು ಹೆಚ್ಚಿನ ಹಬ್ಬಗಳನ್ನು ಶ್ರಾವಣದಲ್ಲಿಯೇ ಏಕೆ ಹಮ್ಮಿಕೊಂಡರು? ಯೋಚಿಸಿ ನೋಡಿ. ಜ್ಯೇಷ್ಠ ಆಷಾಢಗಳಲ್ಲಿ ಮಳೆಯಲ್ಲಿ ಮಿಂದ ಇಳೆ ಶ್ರಾವಣದಲ್ಲಿ ಹೂವು ಹಣ್ಣುಗಳನ್ನು ಮೈದುಂಬಿಕೊಂಡು ನಲಿಯುತ್ತಿರುವಾಗ, ನಮಗೆ ಇಷ್ಟೆಲ್ಲ ನೀಡಿದ ಪ್ರಕೃತಿಗೆ ವಂದನೆ ಸಲ್ಲಿಸುವ ರೂಪದಲ್ಲಿ ಪ್ರಕೃತಿಯನ್ನು ದೇವರಂತೆ ಭಾವಿಸಿ ಪ್ರಕೃತಿಯಿಂದ ಬಂದ ಫಲಪುಷ್ಪಗಳನ್ನು ದೇವರೆಂಬ ಹೆಸರಿನಲ್ಲಿ ಪ್ರಕೃತಿಗೇ ಸಲ್ಲಿಸಲು ಈ ಹಬ್ಬಗಳನ್ನು ಜಾರಿಗೆ ತಂದರು. ನಾಗರ ಪಂಚಮಿಯೆಂಬ ಒಂದು ಕಥೆ ಹೇಳಿ ನಾಗರಹಾವಿಗೆ ಉನ್ನತ ಸ್ಥಾನ ಕೊಟ್ಟು ವರ್ಷದಲ್ಲಿ ಒಂದು ದಿನ ಅದನ್ನು ಪೂಜಿಸಿ, ನಾಗರವೆಂದರೆ ಹೆದರಿ ಅದನ್ನು ಕೊಲ್ಲಲು ಮುಂದಾಗುವ ಜನರಿಂದ ಇತರ ದಿನಗಳಲ್ಲಿ ಅದಕ್ಕೆ ಹಾನಿಯುಂಟಾಗದಂತೆ ಮಾಡಿದರು. ಆದರೆ, ನಾವು ಅದರ ಮಹತ್ವವನ್ನು ತಿಳಿಯದೆ, ಹಬ್ಬದಂದು ಬರಿದೆ ಹಬ್ಬದೂಟ ಮಾಡಿ ಕಲ್ಲುನಾಗರ ಕಂಡರೆ ಕೈಮುಗಿದು ನಿಜವಾದ ನಾಗರ ಕಂಡಾಗ ಜೀವಭಯದಿಂದ ಅದನ್ನು ಕೊಲ್ಲಲು ಮುಂದಾಗುತ್ತೇವೆ.
ಹೀಗಾದರೆ, ಎಷ್ಟೇ ಮಡಿಹುಡಿಗಳೆಂದು ನೇಮನಿಷ್ಟೆಗಳನ್ನು ಆಚರಿಸಿದರೂ ಅದರ ಫಲವೇನು? ಅಷ್ಟೇ ಅಲ್ಲ ನಾಗರಪಂಚಮಿಯಂದು ಭಾರತದ ಅನೇಕ ಭಾಗಗಳಲ್ಲಿ ವಿವಾಹಿತ ಮಹಿಳೆಯರು ಅಣ್ಣತಮ್ಮಂದಿರನ್ನು ಮನೆಗೆ ಆಹ್ವಾನಿಸಿ ಅವರಿಗೆ ರಕ್ಷಾಬಂಧನವನ್ನು ಕಟ್ಟಿ ಅವರನ್ನು ಸತ್ಕರಿಸುವ ಪರಿಪಾಠವೂ ಇದೆ. ಇದು ಬರಿಯ ತೋರಿಕೆಗೆಂದು ನಡೆದುಬಂದ ಕ್ರಮವಲ್ಲ. ಹೆಣ್ಣಿಗೆ ತವರುಮನೆಯ ಬಗೆಗೆ ಇರುವ ಅಭಿಮಾನವನ್ನು ಎತ್ತಿ ಹಿಡಿಯುತ್ತದೆ. ಸಂಬಂಧಗಳು ಗಟ್ಟಿಯಾಗುವಂತೆ ಮಾಡುತ್ತದೆ.
ಅಕ್ಕತಂಗಿಯರಿಂದ ಸತ್ಕಾರ ಪಡೆದ ಅಣ್ಣತಮ್ಮಂದಿರು ಅದಕ್ಕೆ ಪ್ರತಿರೂಪವಾಗಿ ಮುಂದಿನ ತಿಂಗಳಲ್ಲಿ ಬರುವ ಗೌರಿಗಣೇಶ ಹಬ್ಬಗಳಲ್ಲಿ ಅಕ್ಕತಂಗಿಯರಿಗೆ ಅರಸಿನ-ಕುಂಕುಮದೊಡನೆ ತಮ್ಮ ಕೈಲಾದ ರೀತಿಯಲ್ಲಿ ಅವರ ಬಗೆಗೆ ತಮ್ಮ ಪ್ರೀತಿಯನ್ನು ತೋರುತ್ತಾರೆ. ಗೌರಿ ಗಣೇಶರ ಪೂಜೆಯೆಂದು ಆರಂಭವಾದ ಈ ಸಂಸ್ಕೃತಿ ಮುಂದೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಜನರ ಸಂಘಟನೆಗೆ ಅತ್ಯಂತ ಬಲವಾದ ನೆಪವಾಯಿತು. ಗಣೇಶ ಚತುರ್ಥಿಯನ್ನು ಆಚರಿಸುವ ನೆಪದಲ್ಲಿ ಜನರನ್ನು ಸಂಘಟಿಸಲು ಭಾರತೀಯರಿಗೆ ಸಹಕಾರಿಯಾಯಿತು. ಆದರೆ, ಇಂದು ಪೂಜೆಯ ಹೆಸರಿನಲ್ಲಿ ಬೀದಿಬೀದಿಗಳಲ್ಲಿ ದೇವರನ್ನು ಕೂಡಿಸಿ 8-10 ದಿನಗಳ ಕಾಲ ಮೈಕಾಸುರನ ಹಾವಳಿ ನಡೆಸಿ ಸಂಭ್ರಮಿಸುವುದೇ ಪರಿಪಾಠವಾಗಿದೆ.ಮುಂದೆ ಆಶ್ವಯುಜದಲ್ಲಿ ಮಳೆ ಬಿಡುವು ಕೊಟ್ಟು ಜಡವಾಗಿದ್ದ ಮೈಮನಗಳಿಗೆ ಕೆಲಸ ಕೊಡಲು ನವರಾತ್ರಿಯ ಆಚರಣೆ ಸಹಾಯಕವಾಯಿತು. ಭಾರತದ ಅನೇಕ ಭಾಗಗಳಲ್ಲಿ ನವರಾತ್ರಿಯ ಹೆಸರಿನಲ್ಲಿ ದುರ್ಗಾ ಮಾತೆಯ ಪೂಜೆ ನಡೆಯುತ್ತದೆ. ಒಂಭತ್ತು ಅವತಾರಗಳಲ್ಲಿ ಸ್ತ್ರೀಯನ್ನು ಬಣ್ಣಿಸಿ ಜಗತ್ತಿನಲ್ಲಿ ಅವಳ ಪ್ರಾಶಸ್ತ್ಯವನ್ನು, ಶಕ್ತಿಯನ್ನು ಪರಿಚಯ ಮಾಡಿಕೊಡುವ ಪ್ರಯಾಸ ಕಾಣುತ್ತದೆ.
ಮುಂದೆ ಬರುವ ದೀವಳಿಗೆಯಲ್ಲಿ ನರಕಾಸುರನೆಂಬ ಅಸುರನ ಸಂಹಾರ, ಬಲಿ ಚಕ್ರವರ್ತಿಯ ಅಹಂಕಾರದ ದಹನದ ಮೂಲಕ ಮನಸ್ಸಿನಲ್ಲಿ ನಾನು ನನ್ನದೆಂಬ ಅಹಂಕಾರವನ್ನು ತೊಡೆಯಲು ಪ್ರಯತ್ನಿಸಿದ ಹಿರಿಯರು ಕಾರ್ತಿಕ ಮಾಸದಲ್ಲಿ ದೀಪಹಚ್ಚುವುದರಿಂದ ಮೈಮನಗಳ ಕತ್ತಲೆಯನ್ನು ತೊಳೆಯಲು ಪ್ರಯತ್ನಿಸಿದರು. ಆದರೆ, ಇಂದು ಅದೇ ದೀಪಾವಳಿ ತನ್ನೆಲ್ಲ ಅರ್ಥಗಳನ್ನು ಕಳೆದುಕೊಂಡು ಅವರವರ ಸಾಮರ್ಥ್ಯಕ್ಕನುಗುಣವಾಗಿ ಪಟಾಕಿ ಸುಟ್ಟು ಪರಿಸರವನ್ನೂ ಹಾಳು ಮಾಡುವುದಕ್ಕೆ ದ್ಯೋತಕವಾಗಿದೆ.
ಇಷ್ಟೆಲ್ಲಾ ಹೇಳಿ ಸಂಕ್ರಾಂತಿಯನ್ನು ಬಿಟ್ಟರೆ ಸರಿಯಾಗಲಾರದು. ಹೊಸಪೈರು ಬಂದ ಸಂಭ್ರಮದಲ್ಲಿ ಕಣಕ್ಕೆ ಪೂಜೆಯ ನೆಪದಲ್ಲಿ ಭೂದೇವಿಗೆ ಕೃತಜ್ಞತೆ ಸಲ್ಲಿಸಿ ಎಳ್ಳು, ಕಬ್ಬು, ಶೇಂಗಾಗಳ ಮಿಶ್ರಣವನ್ನು ಹಂಚಿ ಎಳ್ಳು ತಿಂದು ಒಳ್ಳೆಯ ಮಾತನಾಡು ಎಂಬ ಸಂದೇಶವನ್ನು ಸಾರಲು ಪ್ರಯತ್ನಿಸಿದ ನಮ್ಮ ಹಿರಿಯರು ನಿಜಕ್ಕೂ ಶ್ಲಾಘನೀಯರು. ನಾವು ಆಚರಿಸುವ ಪ್ರತಿಯೊಂದು ಸಂಪ್ರದಾಯಗಳಿಗೂ ಒಂದೊಂದು ಅರ್ಥವಿದೆ. ದೇವರ ಪೂಜೆ-ಪುನಸ್ಕಾರಗಳು ಮನಸ್ಸಿಗೆ ಶಾಂತಿ, ಶಕ್ತಿ, ಜೀವನಕ್ಕೆ ಒಂದು ಶಿಸ್ತನ್ನು ಕೊಟ್ಟರೆ ಆಹಾರದಲ್ಲಿನ ನಿಯಮಗಳು, ಉಪವಾಸಗಳಂತಹ ವ್ರತಗಳು ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕ.
ಒಟ್ಟಿನಲ್ಲಿ ಆಯಾ ಕಾಲಕ್ಕೆ ತಕ್ಕಂತಹ, ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶಗಳನ್ನೊಳಗೊಂಡ ಖಾದ್ಯಗಳನ್ನು ಸೇವಿಸಿ ಬಂಧು ಮಿತ್ರರೊಡಗೂಡಿ ಸಂಭ್ರಮಿಸುವುದೇ ನಿಜವಾದ ಹಬ್ಬ. ಇವುಗಳನ್ನು ಯಾವುದೇ ಅನಾವಶ್ಯಕ ಆಡಂಬರವಿಲ್ಲದೆ ನಮ್ಮ ಕೈಲಾದ ರೀತಿಯಲ್ಲಿ ಆಚರಿಸಿ ನಮ್ಮ ದೈನಂದಿನ ಬದುಕಿನ ಏಕತಾನತೆಯನ್ನು ಹೋಗಲಾಡಿಸಿಕೊಂಡು ಮತ್ತೆ ಹುಟ್ಟುವ ನಾಳೆಗೆ ಸಂತಸದಿಂದ ಮನಸ್ಸನ್ನು ಸಿದ್ಧಗೊಳಿಸುವುದೇ ನಿಜವಾದ ಹಬ್ಬದ ಆಚರಣೆ. ಆದ್ದರಿಂದ ಸಂಪ್ರದಾಯಗಳ ಆಚರಣೆಯನ್ನು ಗೊಡ್ಡೆಂದು ಭಾವಿಸದೆ, ಅಥವಾ ಅವುಗಳ ಅರ್ಥವನ್ನು ತಿಳಿಯದೇ, ಆಚರಿಸದಿದ್ದಲ್ಲಿ ಏನೋ ಕೇಡು ಸಂಭವಿಸಬಹುದೆನ್ನುವ ಭಯದಲ್ಲಿ ಆಚರಿಸದೆ ಅವುಗಳ ಅರ್ಥವನ್ನರಿತು ಆಚರಿಸೋಣ.
– ಇಂದಿರಾ ವಿವೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.