ನಿನ್ನ ಮನೆ ಯಾವುದು? ತವರು ಮನೆ? ಗಂಡನ ಮನೆ?
Team Udayavani, May 19, 2017, 3:36 PM IST
ಮಗುವನ್ನೆತ್ತಿಕೊಂಡು ಪ್ರಯಾಣ ಹೊರಟಿದ್ದ ಯುವತಿಯನ್ನು ಸಮೀಪದಲ್ಲಿದ್ದ ಹಿರಿಯ ಮಹಿಳೆ ವಿಚಾರಿಸುತ್ತಿದ್ದರು. ತೀರಾ ಸನಿಹದಲ್ಲಿ ನಾನೂ ಇದ್ದ ಕಾರಣ ಬೇಡವೆಂದರೂ ಅವರ ಮಾತು ಕಿವಿಗೆ ಬೀಳುತ್ತಲಿತ್ತು. ಯುವತಿಯ ಕೈಲಿದ್ದ ಲಗೇಜ್ ಕಂಡರೆ ದೂರದ ಪ್ರಯಾಣ.ಅದೂ ಪುಟ್ಟ ಕಂದ ಬೇರೆ ತೋಳಿನಲ್ಲಿ. ಜೊತೆಗೆ ಬಂದವರನ್ನು ಕಾಣಲಿಲ್ಲ. ಬಹುಶಃ ಒಬ್ಬಂಟಿಯಾಗಿ ಹೊರಟಿರಬೇಕು. ಹಿರಿಯ ಮಹಿಳೆ ಗಟ್ಟಿದನಿಯಲ್ಲಿ ಮಾತುಕತೆ ಆಡುತ್ತಿದ್ದರೆ ಆಕೆಯೋ ಮೆಲ್ಲನೆ ಉತ್ತರ ಕೊಡುತ್ತಿದ್ದಳು. ವಿಚಾರಿಸಿದರಾಕೆ- “”ಅಪ್ಪನ ಮನೆಗೆ ಹೋಗ್ತಿದ್ದೀಯಮ್ಮ?” ತವರಿಗೆ ಹೊರಟ ಹೆಣ್ಣುಮಗಳು ಎಂದುಕೊಂಡಿರಬೇಕು. ಸಣ್ಣನೆಯ ಸ್ವರದ ಉತ್ತರ-“”ಇಲ್ಲ ” ನೆಂಟರಲ್ಲಿ ವಿಶೇಷವಿರಬೇಕಲ್ವಾ? ಅಲ್ಲಿಗೇನೋ?” ಪುನಃ ಅಲ್ಲವೆನ್ನುವ ದನಿ ಬಂತು. “”ಹೌದೇನು, ಮೊದಲೇ ಹೇಳಬಾರದಾ? ಗಂಡನ ಮನೆಗೆ ಹೊರಟದ್ದು ಹಾಗಿದ್ದರೆ, ಯಾವೂರು ಗಂಡನ ಮನೆ?”
ಆ ಮೇಲೆ ಕಷ್ಟ, ಸುಖ, ಧಾರಾವಾಹಿಗಳಲ್ಲಿ ದಿನ ದಿನ ಪಾಪದ ಸೊಸೆಗೆ ಕೊಡುವ ಕಿರುಕುಳ, ಸದಾ ಅಳುವ ಸೊಸೆಯ ಒಳ್ಳೆಯತನ, ತನಗೆಷ್ಟು ಕಷ್ಟ ಕೊಟ್ಟರೂ ಗಂಡನ ಮನೆಯ ಗುಟ್ಟು, ತನಗಾಗುವ ತೊಂದರೆ-ಕಿರುಕುಳದ ಬಗೆಗೆ ತಾಯಿಮನೆಯಲ್ಲಿ ದನಿ ತೆಗೆಯದ ಸೊಸೆಯ ಒಳ್ಳೆಯತನವನ್ನು ಮೆಚ್ಚಿ ಹೊಗಳುತ್ತಿದ್ದರಾಕೆ. ಯುವತಿ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದಳು.
ತಾನಾಗೇ ಕಿವಿಗೆ ಬಿದ್ದ ಮಾತುಕತೆ ಅದು. ಅದನ್ನು ಕೇಳಿದಾಗ ನನಗನ್ನಿಸಿದ್ದು ವಿವಾಹಿತ ಯುವತಿಗೆ ತನ್ನದೇ ಆದ ಮನೆ ಎಂಬುದು ಇಲ್ಲವೇ ಹಾಗಿದ್ದರೆ? ಹುಟ್ಟಿದ ಮನೆ ಆಕೆಯದು. ತನ್ನ ತಾಯ್ತಂದೆ ಬಯಸಿಯೋ ಬಯಸದೆಯೋ ಹಡೆದ ಶಿಶು ಆಕೆ. ಅಕ್ಕರೆಯಿಂದ ಬೆಳೆಸಿದ ಮಗುವಿಗೆ ಶೈಶವ ದಾಟಿದೊಡನೇ ಶಾಲೆಯ ಮೆಟ್ಟಲು ಹತ್ತಿಸುತ್ತಾರೆ. ಅದಕ್ಕೆ ಅಗತ್ಯದ ಶುಲ್ಕ, ಸಮವಸ್ತ್ರ, ಇತರ ವೆಚ್ಚ , ಖರ್ಚು ಎಲ್ಲವನ್ನು ಹೆತ್ತವರು ನೋಡಿಕೊಳ್ಳುತ್ತಾರೆ. ಮಗಳು ಬುದ್ಧಿವಂತೆಯಾಗಿ ಉತ್ತಮ ಶ್ರೇಣಿಯಲ್ಲಿ ಶಿಕ್ಷಣ ಪೂರೈಸಿದಾಗ ಹಿಗ್ಗುವವರು ಅವರೇ. ಆ ತನಕದ ವೆಚ್ಚವನ್ನು ಇದು ಮಗಳಿಗೆ ಮಾಡಿದ್ದು ಎಂದು ಅದ್ಯಾವ ತಂದೆತಾಯಿಯೂ ಲೆಕ್ಕ ಹಾಕಿ ಇಟ್ಟುಕೊಳ್ಳುವುದು ಇಲ್ಲವೆನ್ನಬಹುದು. ಮುಂದೆ ಆಕೆಯ ಉದ್ಯೋಗ, ವಿವಾಹ ಇತ್ಯಾದಿ ಹಂತಗಳಲ್ಲಿ ಕಾಳಜಿ, ಕಳಕಳಿಯಿಂದ ಅವಳ ಭವಿಷ್ಯ ಉತ್ತಮವಾಗಿರಲಿ ಎನ್ನುವ ದೃಷ್ಟಿಯಿಂದಲೇ ಇವೆಲ್ಲವನ್ನು ಮಾಡುತ್ತಾರೆ. ಅಲ್ಲಿ ಅಂತಃಕರಣವಿದೆ, ಕಕ್ಕುಲಾತಿಯಿರುತ್ತದೆ, ವಾತ್ಸಲ್ಯ, ಆಕೆಯ ಮುಂದಿನ ಜೀವನದ ಬಗ್ಗೆ ಎಚ್ಚರಿಕೆ ಎಲ್ಲವೂ ಮಿಳಿತಗೊಂಡಿರುತ್ತದೆ ಎಂದರೆ ಅದು ಒಪ್ಪುವ ಮಾತು.
ಆಕಸ್ಮಾತ್ ಮಗಳ ವೈವಾಹಿಕ ಬದುಕು ಅತಂತ್ರವಾದರೆ ತಾಯ್ತಂದೆ ಅತೀವವಾಗಿ ನೊಂದುಕೊಳ್ಳುತ್ತಾರೆ. ಈ ಅಂತಃಕರಣ, ಕಳಕಳಿಯಲ್ಲಿ ಆರ್ಥಿಕ ಅಳತೆಗೋಲು ಕೆಲಸಮಾಡುವುದಿಲ್ಲ. ಅವರು ಹೆತ್ತವರು ಅಷ್ಟೇ. ಎಂದಿಗೆ ಮನೆಮಗಳು ವಿವಾಹಿತೆಯಾಗಿ ತನ್ನದೇ ಸಂಸಾರಕ್ಕೆ ಹೊರಟುನಿಲ್ಲುತ್ತಾಳ್ಳೋ ಆಗ ಆ ತನಕ ಆಕೆ ಎದ್ದು, ಬಿದ್ದು, ಹೊಸದಾಗಿ ನಡಿಗೆ ಕಲಿತು, ಮೊದಲ ದಿನ ಸ್ಕೂಲಿಗೆ ಹೋಗಲು ಅತ್ತು, ರಚ್ಚೆ ಹಿಡಿದು ರಂಪ ಮಾಡಿದ ಮನೆ, ಶೈಶವ , ಬಾಲ್ಯ ಕಳೆದ ತಂಪಿನ ತಾಣ, ಮೊದಲಿಗೆ ದೊಡ್ಡವಳಾಗಿ ತಲ್ಲಣ, ಭೀತಿ, ಕಳವಳ, ಹೊಟ್ಟೆನೋವು ಎಲ್ಲವನ್ನೂ ನಿಶ್ಶಬ್ದವಾಗಿ ಹಲ್ಲು ಕಚ್ಚಿ ನುಂಗಿಕೊಂಡ ಮನೆ ಆಕೆಯದು. ತನ್ನದೇ ತಾಯಿಗೆ ಮಗಳಾಗಿ, ಆಪ್ತಸಖೀಯಾಗಿ, ಹಲವಾರು ಬಾರಿ ತಾಯಾಗಿ ಆಕೆ ಬೆನ್ನಿಗೆ ನಿಲ್ಲುವಾಕೆ. ಅಪ್ಪನಿಗೆ ಆಕೆ ಅವರಮ್ಮನನ್ನು ನೆನಪಿಸುವ ಮಗಳಾಗಿ, ತನಗಿಂತ ಚಿಕ್ಕವರಾದ ಒಡಹುಟ್ಟಿದವರಿಗೆ ಗುರುವಾಗಿ, ತಾಯಿಯಾಗಿ, ಅಕ್ಕನಾಗಿ ಅವರ ಯೋಗಕ್ಷೇಮವನ್ನು ಸಮರ್ಥವಾಗಿ ನಿಭಾಯಿಸುವ ಮಂತ್ರದಂಡದ ಒಡತಿ. ಇಷ್ಟೆಲ್ಲ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮಗಳು ಆಕೆ ಇರುವ ಮನೆಗೊಂದು ಕಳೆ, ಲಕ್ಷಣ ಕೊಡುವ ಬೆಡಗಿ.
ನಮ್ಮ ಸಂಪ್ರದಾಯದ ಹಾಗೆ ವಿವಾಹವಾದ ಕ್ಷಣದಲ್ಲಿ ಅವಳು, “ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ ಅಂತ ಹಾಡಿದರೆ’ ಅದು ಒಪ್ಪಬಹುದಾದ ಮಾತಲ್ಲ. ಜೀವನದ ಜೊತೆಗಾರನ ಸ್ವಭಾವ, ಗುಣ, ನಡವಳಿಕೆ, ಚರ್ಯೆಗಳ ಬಗ್ಗೆ ಅಸ್ಪಷ್ಟತೆಯ ತಿಳುವಳಿಕೆ ಇರುವ ಅವಳಿಗೆ ತನ್ನವರನ್ನು ಅಗಲಿ ಆತನ ಸಂಗಡ ಬದುಕು ಪೂರ್ತಿ ಹೆಜ್ಜೆ ಹಾಕುವ ಮಟ್ಟಿಗೆ ಮಾನಸಿಕವಾಗಿ ಸಿದ್ಧತೆ ಆಗಿರದು. ಆಗಲೇ “ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು. ಕೊಳ್ಳಿರಿ ಮಗುವನ್ನು; ಎಮ್ಮ ಮನೆ ಬೆಳಕನ್ನು’ ಎನ್ನುವ ಹಾಡು ಕಿವಿಗೆ ಬಿದ್ದರೆ ಹೆತ್ತವರ ಮನೆಗೆ ನಿಜವಾಗಿಯೂ ತಾನು ಹೊರಗಿನವಳಾದೆನೇ; ಅದು ನನ್ನದೇ ಮನೆಯಲ್ಲವೇ ಎಂಬ ನೋವು ಕಾಡಿ ಭಾವುಕತೆ ಉಕ್ಕಿ ಹೊನಲಾಗಿ ಹರಿಯುವುದು ಸಹಜ. ಇಂದಿನ ದಿನಗಳಲ್ಲಿ ಸಂಪರ್ಕಕ್ಕೆ ಹತ್ತು ಹಲವಾರು ಮಾಧ್ಯಮಗಳಿದೆ. ಅದೆಷ್ಟೇ ದೂರದಲ್ಲಿದ್ದರೂ ಬರಲು ಅನುಕೂಲತೆಗಳು ಸಾಕಷ್ಟಿವೆ.
ಮೊದಲಿನ ಕಾಲದ ಹಾಗೆ ವರ್ಷಕ್ಕೋ ಎರಡು ವರ್ಷಕ್ಕೊಮ್ಮೆಯೋ ಭೇಟಿ ಅಲ್ಲ. ಮಗಳು “ಹೆತ್ತ ಮನೆಗೆ ಹೊರಗಾದೆ ನೀ ಮಗಳೆ’ ಅಂತ ಹಾಡುವ ಹಾಗೆ ಮಗನು ವಿದ್ಯಾಭ್ಯಾಸ ನಿಮಿತ್ತ, ಉದ್ಯೋಗ ನಿಮಿತ್ತ ಮನೆಗೆ ದೂರವಾಗಿದ್ದಾಗ ಯಾವ ತಾಯ್ತಂದೆಯೂ “ಹೆತ್ತವರ ಮನೆಗಿಂದು ಹೊರಗಾದೆ ನೀ ಮಗನೆ’ ಅಂತ ಹಾಡುವುದೇ ಇಲ್ಲ. ಮಗ ನಾಲ್ಕು ವರ್ಷಕ್ಕೊಮ್ಮೆ ಮುಖ ತೋರಿಸಿದರೂ ಆತ ಮನೆಗೆ ಹೊರಗಿನವನಾಗುವುದಿಲ್ಲ. ಅವನಿಗೆ ಅದು ಅಪ್ಪನ ಮನೆ ಆಗುವುದಿಲ್ಲ ನಮ್ಮಲ್ಲಿ. ಬದಲಾಗಿ ಅದು ಅವನ ಮನೆ.
ಮದುವೆ ಎನ್ನುವುದು ಬದುಕಿನ ಒಂದು ಮಹತ್ವದ ಘಟ್ಟ. ನಮ್ಮ ಸಂಪ್ರದಾಯದಲ್ಲಿ ಗೃಹಸ್ಥ ಧರ್ಮಕ್ಕೆ ಅತೀವ ಮನ್ನಣೆಯಿದೆ. ಬ್ರಹ್ಮಚರ್ಯದ ಕಾಲ (ಈಗಿನ ವಿದ್ಯಾಭ್ಯಾಸದ ಕಾಲ) ಕಳೆದ ನಂತರ ಸಮಾಜ ಗೃಹಸ್ಥಾಶ್ರಮಕ್ಕೆ ಸ್ವಾಗತಿಸುತ್ತದೆ. ಅಲ್ಲಿ ಮಗ, ಮಗಳು ಅನ್ನುವ ಭೇದ ಇಲ್ಲ. ವಿವಾಹಿತ ಮಗನಿಗೆ ಹುಟ್ಟಿದ ಮನೆ ಅವನದು ಆಗಿರುವ ಹಾಗೆ ಮಗಳಿಗೆ ಕೂಡಾ ಹೌದು. ಹುಟ್ಟಿದ ಮನೆಯಿಂದ ಹೋಗುವಾಗ “”ಗಂಡನ ಮನೆಗಾ?” ಅನ್ನುವ ಪ್ರಶ್ನೆ ಎದುರಾಗುವಂತೆ, ಹುಟ್ಟಿ ಬೆಳೆದ ಮನೆ ಅಪ್ಪನ ಮನೆ ಆಗಿದ್ದೇ ಆದರೆ ಹೆಣ್ಣಿಗೆ ತನ್ನ ಮನೆ ಯಾವುದು? ಅಥವಾ ಹಲವಾರು ಕಡೆ ಮನೆಯ ಯಜಮಾನಿ ಗೃಹಿಣಿಗೆ ವಯಸ್ಸಾದ ನಂತರ ಅದು ತಾಯಿಯ ಮನೆ ಅಂತ ಪರಿಗಣನೆ ಇರುತ್ತದೆ. ಅದೇ ರೀತಿಯಲ್ಲಿ ವೈವಾಹಿಕ ಮನೆ ಅತ್ತೆಯ ಮನೆ ಎಂದು ಕರೆಯಲ್ಪಡುತ್ತದೆ. ಆ ವಯಸ್ಸಿನಲ್ಲಿ ಮಾತ್ರ ಆಕೆಗೆ ಅದು ಅವಳ ಮನೆ ಆಗಿ ಕರೆಯಲ್ಪಡುತ್ತದೆ.
ಮೊನ್ನೆ ಮೊನ್ನೆ ಆತ್ಮೀಯರೊಬ್ಬರು ಹೇಳಿದ ಮಾತು- “ಈಗಿನ ಹೆಣ್ಣುಮಕ್ಕಳು ಗಂಡಸರಿಗೆ ಸಮಸಮ ಇದ್ದಾರೆ’ ಅಂತ ಅವರಲ್ಲಿ, ಪರಿಚಿತರು ಮಾತಾಡುವಾಗ ಹೇಳಿದ್ದರು. ಥಟ್ಟನೆ ಇವರು ತಮಾಷೆಯಾಗಿ ಹೀಗೂ ಹೇಳಬಹುದಲ್ವಾ? “ಈಗ ಗಂಡಸರು ಹೆಣ್ಣುಮಕ್ಕಳಿಗೆ ಸಮ ಸಮವಾಗಿದ್ದಾರೆ’.
ಹೇಗೇ ಆದರೂ ಅರ್ಥ ಒಂದೇ ತಾನೆ?
– ಕೃಷ್ಣವೇಣಿ ಕಿದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.