ಶೌಚದ ಮಾತಿಗೆ ಸಂಕೋಚವೇಕೆ!
Team Udayavani, Feb 21, 2020, 5:31 AM IST
ಮಹಿಳೆಯರ ಪೈಕಿ ಅನೇಕರು ಹೊಟ್ಟೆತುಂಬಾ ನೀರು ಕುಡಿಯುವುದು ಕಡಿಮೆ. ಅದರಲ್ಲಿಯೂ ಮನೆಯ ಹೊರಗೆ ಕೆಲಸ ಮಾಡುವವರು, ಪ್ರಯಾಣ ಮಾಡುವವರು, ಕಾರ್ಮಿಕ ಮಹಿಳೆಯರು ನೀರು ಕುಡಿಯಲು ಬಹಳ ಹಿಂದೇಟು ಹಾಕುತ್ತಾರೆ. ಮೂತ್ರ ಮಾಡುವುದಕ್ಕೆ ಸಾಮಾಜಿಕ ಕಟ್ಟುಪಾಡುಗಳು, ಮುಜುಗರ, ಸಂಕೋಚಗಳು ಎದುರಾಗುವುದರಿಂದ ನೀರು ಕುಡಿಯುವುದನ್ನೇ ಕಡಿಮೆ ಮಾಡೋಣ ಎಂದುಕೊಳ್ಳುವವರೇ ಅನೇಕರು. ಆದರೆ, ಈ ಸಂಕೋಚದ ಧೋರಣೆಯು ಆರೋಗ್ಯವನ್ನೇ ಹಾಳುಮಾಡುತ್ತದೆ. ನಮ್ಮ ದೇಹದಲ್ಲಿ ಶೇ. 60ರಷ್ಟು ದ್ರವಾಂಶವೇ ಇದೆ. ಆ ಪೈಕಿ ಹೃದಯ ಮತ್ತು ಮಿದುಳಿಗೇ ಶೇ. 73ರಷ್ಟು ನೀರಿನ ಅಗತ್ಯವಿದೆ. ಹಾಗಾಗಿ ದೇಹಕ್ಕೆ ಸೇರುವ ನೀರಿನ ಪ್ರಮಾಣದಲ್ಲಿ ಕೊರತೆಯಾದರೆ, ನಮ್ಮ ದೈಹಿಕ ಆರೋಗ್ಯ ಕೆಡುತ್ತದೆ. ಮಿದುಳು ನಿರ್ವಹಿಸುವ ಕೆಲಸಗಳೂ ಸುಸೂತ್ರವಾಗಿ ನಡೆಯುವುದಿಲ್ಲ. ಆದ್ದರಿಂದ ಮನಸ್ಸು ತೃಪ್ತಿಯಾಗುವಷ್ಟು ನೀರು ಕುಡಿಯುವ ಸುಖದಿಂದ ವಂಚಿತರಾಗುವುದು ಸರಿಯಲ್ಲ ಅಲ್ಲವೇ.
ಅದೊಂದು ಸಾರ್ವಜನಿಕ ಸಭೆ. ಅದರಲ್ಲಿ ಭಾಗವಹಿಸಲು ಸುಮಾರು 30 ಕಿ.ಮೀ. ದೂರದಿಂದ ಬಂದಿದ್ದ ಸಂಗೀತಾಳಿಗೆ ತುಂಬ ಬಾಯಾರಿಕೆ ಆಗಿತ್ತು. ಬಿಸಿಲನ್ನು ತಡೆದುಕೊಳ್ಳುತ್ತ, ಬೆವರನ್ನು ಒರೆಸಿಕೊಳ್ಳುತ್ತ ಇದ್ದವಳ ಬ್ಯಾಗಿನಲ್ಲಿ ಬಾಟಲಿ ತುಂಬ ನೀರಿತ್ತು. ಅದರಿಂದ ಎರಡೇ ಸಿಪ್ ನೀರು ಕುಡಿದು, ಮತ್ತೆ ಹಾಗೆಯೇ ಬ್ಯಾಗಿನೊಳಗೆ ಇಟ್ಟುಕೊಂಡಳು. ಅವಳ ಜೊತೆಗೆ ಬಂದಿದ್ದ ಸ್ನೇಹಿತರು ಪಕ್ಕದ ಅಂಗಡಿಗೆ ಹೋಗಿ ಎಳನೀರು ಕುಡಿದು, ಮತ್ತೂಂದು ಬಾಟಲಿ ನೀರು ತೆಗೆದುಕೊಂಡು, ಅದನ್ನೂ ಗಟಗಟನೆ ಎತ್ತಿ ಕುಡಿಯುತ್ತಿದ್ದುದು ನೋಡಿದಾಗ, ಸಂಗೀತಾಳಿಗೆ ತುಂಬಾ ಆಸೆಯಾಯಿತು.
ನೀರು ಕುಡಿಯಲೂ ಆಸೆಯಾಗುತ್ತದೆಯೆ?
ಹೌದು. ಮಹಿಳೆಯರೆಲ್ಲರೂ ನೀರು ಕುಡಿಯಲು ಒಂದಲ್ಲ ಒಂದು ಸಂದರ್ಭದಲ್ಲಿ ಹೀಗೆ ಬಹಳ ಆಸೆಪಟ್ಟಿರುತ್ತಾರೆ. ಯಾಕೆಂದರೆ, ನೀರು ಕುಡಿದ ಬಳಿಕ ಒಂದೆರಡು ಗಂಟೆಯೊಳಗೆ ಬಳಸಲು ಶೌಚಾಲಯ ಸಿಗಬಹುದಾ ಎಂಬ ಮುಂದಾಲೋಚನೆ ಮಾಡಿಕೊಂಡೇ ನೀರು ಕುಡಿಯುವ ಪ್ರಮಾಣವನ್ನು ಮಹಿಳೆಯರು ನಿರ್ಧರಿಸಬೇಕಾಗುತ್ತದೆ. ಆಂತಹ ಸಂದರ್ಭಗಳಲ್ಲಿ ಪಕ್ಕದಲ್ಲೇ ನಿಂತ ಗಂಡಸರು, ಚೊಂಬುಗಟ್ಟಲೆ ನೀರನ್ನು ಗಟಗಟ ಸದ್ದು ಮಾಡುತ್ತ ಕುಡಿಯುವುದನ್ನು ನೋಡುವಾಗ ಹೇಗನ್ನಿಸಬೇಡ? ಆಸೆಯಾಗದೇ ಇರುತ್ತದೆಯೆ!
ಬಾಡಿದ ಮುಖವನ್ನು ನೋಡಿ, “ತಕೊಳ್ಳಿ… ನೀರು ಕುಡಿದು ಸ್ವಲ್ಪ ಸುಧಾರಿಸ್ಕೊಳ್ಳಿ’ ಅಂತ ಯಾರಾದರೂ ತಂಪಾದ ಚೊಂಬು ನೀರು ಕೈಗಿತ್ತರೂ, “ಬೇಡ ಬೇಡ… ಬಾಯಾರಿಕೆ ಏನಿಲ್ಲ’ ಎಂದು ಸುಳ್ಳು ಹೇಳುವುದು ಬಿಟ್ಟರೆ, ಆಕೆಗೆ ಬೇರೆ ದಾರಿಯಿಲ್ಲ.
ಸಾಮಾನ್ಯವಾಗಿ ದೂರದೂರಿಗೆ ಪ್ರಯಾಣ ಮಾಡುವಾಗ ಮಹಿಳೆಯರು ಇಂತಹ ಸಮಸ್ಯೆಯನ್ನು ಎದುರಿಸುತ್ತಾರೆ. ಗಂಡಸರೆಲ್ಲರೂ ತಮಗೆ ಬೇಕೆನಿಸಿದಾಗ, ಡ್ರೈವರ್‌ಗೆ ಹೇಳಿ ಬಸ್ಸು ನಿಲ್ಲಿಸಿ, ಮೂತ್ರ ಮಾಡಿ ಬರುತ್ತಿದ್ದರೂ, ಮಹಿಳೆಯರು ಸುಮ್ಮನೇ ಕುಳಿತಿರಬೇಕಾಗುತ್ತದೆ. ಅಥವಾ “ಶೌಚಾಲಯ ಇರುವ ಕಡೆ ಬಸ್ಸು ಎಷ್ಟು ಗಂಟೆಗೆ ನಿಲ್ಲಿಸುತ್ತೀರಿ?’ ಎಂದು ಡ್ರೈವರ್ ಜೊತೆ ವಿಚಾರಿಸಬೇಕಾಗುತ್ತದೆ. ಆತ ಎಷ್ಟು ಗಂಟೆಗೆ ಬಸ್ಸು ನಿಲ್ಲಿಸುವುದಾಗಿ ಹೇಳುತ್ತಾನೋ, ಆ ಹೊತ್ತನ್ನು ಅಂದಾಜು ಮಾಡಿಕೊಂಡು, ತುಸುವೇ ನೀರು ಕುಡಿದು ಗಂಟಲಿನಲ್ಲಿ ಪಸೆ ಉಳಿಸಿಕೊಳ್ಳುವುದು ಅನಿವಾರ್ಯ.
ಮೂತ್ರ ನಿಯಂತ್ರಣ
ನೀರು ಕುಡಿಯುವುದನ್ನು ಹೀಗೆ ನಿಯಂತ್ರಿಸಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುವುದರಿಂದ ಅನೇಕ ಕಾಯಿಲೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅದೇ ರೀತಿ ಮೂತ್ರ ಮಾಡದೇ ದೀರ್ಘಕಾಲ ನಿಯಂತ್ರಿಸಿಕೊಳ್ಳುವುದರಿಂದಲೂ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ವೈದ್ಯರು ಸಲಹೆ ಮಾಡುತ್ತಾರೆ. ಆದ್ದರಿಂದ ಮಹಿಳೆಯರು ತಮ್ಮ ದೇಹಕ್ಕೆ ಬೇಕಾದ ನೀರಿನ ಪ್ರಮಾಣವನ್ನು ಪಡೆಯುವ, ನಿರ್ವಹಿಸುವ ಒಂದು ಕೌಶಲವನ್ನು ಕಲಿಯುವುದು ಮುಖ್ಯ.
ಹೆಣ್ಣುಮಕ್ಕಳಿಗೆ, ಎಲ್ಲೆಂದರಲ್ಲಿ “ಸುಸು’ ಮಾಡಬಾರದು ಎಂದು ಹೇಳಿಕೊಡುವಷ್ಟೇ ಆಸ್ಥೆಯಿಂದ, “ತುಂಬಾ ಹೊತ್ತು “ಸುಸು’ ತಡೆ ಹಿಡಿಯಬಾರದು, ಆ ಬಗ್ಗೆ ಇತರರಲ್ಲಿ ಮಾತನಾಡಲು ಸಂಕೋಚ ಪಡಬಾರದು ಎಂಬುದನ್ನೂ ಹೇಳಿಕೊಡುವುದು ಮುಖ್ಯ.
ದೀರ್ಘಕಾಲ ಮೂತ್ರವನ್ನು ತಡೆಹಿಡಿಯುವುದರಿಂದ ಮೂತ್ರಕೋಶವು ತುಂಬಾ ದಣಿಯುತ್ತದೆ. ಹುಟ್ಟಿದ ಮಗುವಿಗೆ ಸುಮಾರು ಎರಡು ವರ್ಷಗಳವರೆಗೆ ಮೂತ್ರವನ್ನು ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ. ಕ್ರಮೇಣ ದೈಹಿಕ ಬೆಳವಣಿಗೆ ಆಗುತ್ತಿದ್ದಂತೆಯೇ ದೇಹ ಮತ್ತು ಮಿದುಳಿನ ನಡುವೆ ಸಂವಹನ ಸಮರ್ಪಕವಾಗುತ್ತದೆ. ಮೂತ್ರಕೋಶವು ಭರ್ತಿಯಾದ ಕೂಡಲೇ ಅದು ಮಿದುಳಿಗೆ ಸಂಕೇತವನ್ನು ರವಾನಿಸುತ್ತದೆ. ಮೂತ್ರ ಮಾಡಲು ಅವಕಾಶವಿಲ್ಲದೇ ಇದ್ದರೆ ಕೆಲಕಾಲ ಅದನ್ನು ನಿಯಂತ್ರಿಸುವ ಸಾಮರ್ಥ್ಯವೂ ಮೂತ್ರಕೋಶಕ್ಕೆ ಇರುತ್ತದೆ.
ಸಾಮಾನ್ಯವಾಗಿ ಪುಟ್ಟ ಮಕ್ಕಳಲ್ಲಿ, ಗರ್ಭಿಣಿಯರಲ್ಲಿ, ಮೂತ್ರಕೋಶದ ಕಾಯಿಲೆ ಇರುವವರಲ್ಲಿ, ಮಧುಮೇಹಿಗಳಲ್ಲಿ ಹಾಗೂ ವೃದ್ಧಾಪ್ಯದಲ್ಲಿ ಮೂತ್ರವನ್ನು ನಿಯಂತ್ರಿಸುವ ಸಾಮರ್ಥ್ಯ ಕಡಿಮೆ ಇರುತ್ತದೆ.
ಗರ್ಭಧರಿಸಿದಾಗ ಮಹಿಳೆಯ ಗರ್ಭಕೋಶದ ಗಾತ್ರವು ದೊಡ್ಡದಾಗುವುದರಿಂದ ಮೂತ್ರಕೋಶವು ಹೆಚ್ಚು ಹೊತ್ತು ದ್ರವವನ್ನು ಸಂಗ್ರಹಿಸಿಕೊಂಡು ತಾಳಿಕೊಳ್ಳುವುದು ಸಾಧ್ಯವಾಗುವುದಿಲ್ಲ. ವೃದ್ಧಾಪ್ಯದಲ್ಲಿ ತಾಳಿಕೊಳ್ಳುವ ಸಾಮರ್ಥ್ಯ ಮೂತ್ರಕೋಶಕ್ಕೆ ಕಡಿಮೆಯಾಗಿರುತ್ತದೆ.
ಮೂತ್ರಕೋಶವು ಸಾಮಾನ್ಯವಾಗಿ 16 ಔನ್ಸ್‌ಗಳಷ್ಟು ದ್ರವವನ್ನು (ಎರಡು ಕಪ್‌ನಷ್ಟು) ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದಕ್ಕಿಂತ ಹೆಚ್ಚಿನ ಸಂಗ್ರಹವೆಂದರೆ ಅದು ಕೋಶಕ್ಕೆ ಭಾರವೆಂದೇ ಅರ್ಥ. ದೀರ್ಘಕಾಲ ಮೂತ್ರ ಮಾಡದೇ ಇರುವುದರಿಂದ ಮೂತ್ರಕೋಶದಲ್ಲಿ ನೋವು ಉಂಟಾಗಬಹುದು. ಹರಳುಗಳೂ ಸೃಷ್ಟಿಯಾಗಬಹುದು. ಅಥವಾ ಮೂತ್ರನಾಳಗಳಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ನಿರಂತರವಾಗಿ ಮೂತ್ರವನ್ನು ನಿಯಂತ್ರಣ ಮಾಡುವುದರಿಂದ ಕೋಶದ ಗಾತ್ರವು ಹಿಗ್ಗುವ ಅಪಾಯವಿದೆ. ಹಾಗಾದಲ್ಲಿ ಮುಂದಕ್ಕೆ ಮೂತ್ರ ಮಾಡುವುದೇ ಒಂದು ಸಮಸ್ಯೆಯಾಗುವ ಅಪಾಯವೂ ಇದೆ.
ನಿರ್ಜಲೀಕರಣ
ಇನ್ನು ನೀರೇ ಕುಡಿಯದೇ ಇರುವುದರಿಂದ ಆಗುವ ಅಪಾಯಗಳು ಅನೇಕ. ತಲೆಸುತ್ತು, ಯೋಚನೆ ಮಾಡಲು ಸಾಧ್ಯವಾಗದೇ ಇರುವುದು, ತೀರಾ ದಣಿವು, ಪಚನಕ್ರಿಯೆಯಲ್ಲಿ ಸಮಸ್ಯೆ, ಉರಿಮೂತ್ರ… ಹೀಗೆ ದೇಹದಲ್ಲಿ ನೀರಿನಂಶದ ಕೊರತೆ ಇದ್ದಾಗ ಮನಸ್ಸೂ ಏಕಾಗ್ರತೆಯಿಂದ ಕೆಲಸ ಮಾಡಲು ಹಿಂದೇಟು ಹಾಕುತ್ತದೆ.
ಮೂತ್ರನಿಯಂತ್ರಣದಿಂದ ಆಗುವ ಸಮಸ್ಯೆಗಳ ಬಗ್ಗೆ, ನೀರಿನಂಶ ಕೊರತೆಯಿಂದ ಆಗುವ ಸಮಸ್ಯೆಯ ಬಗ್ಗೆ ಎಲ್ಲ ಮಹಿಳೆಯರಿಗೂ ಅರಿವಿರುತ್ತದೆ. ಆದರೆ ಸಾಮಾಜಿಕ ಕಟ್ಟುಪಾಡುಗಳು, ತಾವೇ ರೂಢಿಸಿಕೊಂಡ ಮುಜುಗರಗಳಿಂದಾಗಿ ಮೂತ್ರಮಾಡಲು ಅರ್ಜಂಟ್ ಆಗಿದೆ ಎಂಬ ಮಾತನ್ನು ಹೇಳಲು ಅವರು ಹಿಂದೇಟು ಹಾಕುತ್ತಾರೆ. ಮೊತ್ತಮೊದಲನೆಯದಾಗಿ “ತನಗೆ ಹೀಗೆ ಅನಿಸುತ್ತಿದೆ’ ಎಂಬ ಮಾತನ್ನು ಮುಕ್ತವಾಗಿ ಹೇಳಲು ಸಂಕೋಚ ಮಾಡಬಾರದು.
ಉದಾಹರಣೆಗೆ, “ವಾಶ್‌ರೂಮ್‌ಗೆ ಹೋಗಬೇಕು’ ಎಂದು ಬಸ್ಸಿನ ಚಾಲಕನ ಬಳಿ ಮಾತನಾಡಲು ಹಿಂದೇಟು ಬೇಡ. “ಇಲ್ಲೆಲ್ಲೂ ಜಾಗವಿಲ್ಲ ಮೇಡಂ… ರಸ್ತೆ ಬದಿಯಾದರೆ ಅಡ್ಡಿಯಿಲ್ಲವಾ’ ಎಂದು ಚಾಲಕ ಕೇಳಿದಾಗ, “ಶೌಚಾಲಯವೇ ಬೇಕು. ಪೆಟ್ರೋಲ್ ಬಂಕ್ ಅಥವಾ ಹೊಟೇಲ್ ಇರೋ ಕಡೆ ನಿಲ್ಲಿಸಿ’ ಎಂದೋ ಅಥವಾ “ಸರಿ, ರಸ್ತೆ ಬದಿಯಾದರೂ ಅಡ್ಡಿಯಿಲ್ಲ’ ಎಂದೋ ಅನಿಸಿದ್ದನ್ನು ನೇರವಾಗಿ ಹೇಳುವ ಧೈರ್ಯವನ್ನು ರೂಢಿಸಿಕೊಳ್ಳಬೇಕು.
ಮುಜುಗರ, ಸಂಕೋಚದಿಂದ ಹಿಂದೇಟು ಹಾಕಿಕೊಳ್ಳುವ ಮನಸ್ಸಿಗೆ ಅಂತಿಮವಾಗಿ ಈ ಒಂದು ಪ್ರಶ್ನೆ ಕೇಳಿಕೊಳ್ಳುವುದು ಉತ್ತಮ- ಈ ಡ್ರೈವರ್ ಅಥವಾ ಪ್ರಯಾಣಿಕರು ಏನಂದುಕೊಳ್ಳುತ್ತಾರೆ ಎಂಬುದು ಮುಖ್ಯವೋ, ತನ್ನ ಕಿಡ್ನಿ, ಬ್ಲಾಡರ್‌ಗಳ ಆರೋಗ್ಯ ಮುಖ್ಯವೋ. ಖಂಡಿತ ಆರೋಗ್ಯಕ್ಕಿಂತ ಮುಖ್ಯವಾದದ್ದು ಈ ಜಗತ್ತಿನಲ್ಲಿ ಮತ್ತೂಂದಿಲ್ಲ ಅಲ್ಲವೆ? ದಾಕ್ಷಿಣ್ಯ ಮತ್ತು ಮುಜುಗರ ಪಡುತ್ತ ಆರೋಗ್ಯವನ್ನು ಬಲಿಕೊಡುವುದು ಎಷ್ಟು ಸರಿ ?
ಶಾಂತಿ ಸಾಲ್ಯಾನ್