ಕೃಷಿಕರು ಎಲ್ಲಿ ಹೋದರು?


Team Udayavani, Nov 16, 2018, 6:00 AM IST

24.jpg

ನಾನು ಪುತ್ತೂರಿಗೆ ಹೋದಾಗಲೆಲ್ಲ ಫ್ಲಾಟ್‌ನಲ್ಲಿ ವಾಸಿಸುವ ಚಿಕ್ಕಮ್ಮನಿಗೆ ಬಾಳೆಲೆ ತೆಗೆದುಕೊಂಡು ಹೋಗುತ್ತೇನೆ. ಅವರು “”ಯಾಕೆ ಅಷ್ಟು ದೂರದಿಂದ ಹೊತ್ತುಕೊಂಡು ಬಂದದ್ದು?” ಎಂದು ಹುಸಿಮುನಿಸು ತೋರುತ್ತ ಅದನ್ನು ಜೋಪಾನವಾಗಿ ಎತ್ತಿಡುತ್ತಾರೆ. ಮಧ್ಯಾಹ್ನ ಊಟಕ್ಕೆ ನನಗೆ ಬಟ್ಟಲು ಇಟ್ಟರೆ ಅವರು ಮಾತ್ರ ಆ ಬಾಳೆಲೆಯ ಮುಂದೆ ಕೂರುತ್ತಾರೆ. ಊಟ ಮಾಡುವಾಗ ಅವರು ತನ್ನ ತೋಟದ ಮನೆಯಲ್ಲಿ ಕಳೆದ ದಿನಗಳನ್ನು, ಹಟ್ಟಿಗೊಬ್ಬರ ಹಾಕಿ ಬೆಳೆಸಿದ ತರಕಾರಿಗಳ ರುಚಿಯನ್ನು, ಬಾಳೆಲೆಯಲ್ಲಿ ಚಪ್ಪರಿಸಿ ಉಣ್ಣುತ್ತಿದ್ದದ್ದನ್ನು ಮೆಲುಕು ಹಾಕುತ್ತ ಹನಿಗಣ್ಣಾಗುತ್ತಾರೆ.

    ತುಂಬ ಹಿಂದೆಯೇನಲ್ಲ. ಐದು ವರ್ಷಗಳ ಹಿಂದಿನ ಮಾತು. ನನ್ನ ಚಿಕ್ಕಮ್ಮ ಅಡಿಕೆ, ಬಾಳೆ, ತೆಂಗು, ಮಾವು, ಹಲಸು, ಕರಿಮೆಣಸು, ಜಂಬು ನೇರಳೆ, ಕೊಕ್ಕೊ ಇನ್ನೂ ಹಲವು ಬೆಳೆಗಳನ್ನು ಹೊತ್ತ ದೊಡ್ಡ ಭೂಮಿಗೆ ಒಡೆಯರಾಗಿದ್ದರು. ಚಿಕ್ಕಮ್ಮ ಮದುವೆಯಾಗುವಾಗ ತೋಟ ಇರಲಿಲ್ಲ. ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಚಿಕ್ಕಪ್ಪ ಬಾಡಿಗೆ ಮನೆಯಲ್ಲಿದ್ದರು. ಕೃಷಿ ಹಿನ್ನೆಲೆ ಹೊಂದಿದ್ದ ಚಿಕ್ಕಮ್ಮನಿಗೋಸ್ಕರ ಚಿಕ್ಕಪ್ಪ ಸಾಲ ಮಾಡಿ ಖಾಲಿ ಭೂಮಿ ಖರೀದಿಸಿ ತೋಟ ಮಾಡಿದರು. ಚಿಕ್ಕಪ್ಪ ಶಾಲೆಯ ಕೆಲಸದಲ್ಲಿ ಬ್ಯುಸಿ ಇರುತ್ತಿದ್ದುದೇ ಹೆಚ್ಚು. ಚಿಕ್ಕಮ್ಮನೇ ತೋಟದ ಇಡೀ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಚಿಕ್ಕಪ್ಪ ಇರುವವರೆಗೆ ಎಲ್ಲವೂ ಚೆನ್ನಾಗಿತ್ತು. ಯಾವಾಗ ಚಿಕ್ಕಪ್ಪಅಕಾಲ ಮೃತ್ಯುಗೀಡಾದರೋ ಆಗ ಬಂತು ಕಷ್ಟ. ಇರುವ ಮೂವರು ಮಕ್ಕಳೂ ಹತ್ತಿರವಿಲ್ಲ. ಒಬ್ಬಳು ಅಮೆರಿಕದಲ್ಲಿದ್ದರೆ, ಇನ್ನೊಬ್ಬಳು ಲಂಡನ್‌, ಮತ್ತೂಬ್ಬಳು ದೂರದ ಪೇಟೆಯಲ್ಲಿ. ಎಲ್ಲರೂ ಅವರದ್ದೇ ಆದ ವೃತ್ತಿಯಲ್ಲಿ ತೊಡಗಿಕೊಂಡಿರುವುದರಿಂದ ಯಾರಿಗೂ ಊರಿಗೆ ಬರಲು ಸಮಯವಿಲ್ಲ. ಬಂದರೂ ಕೃಷಿಯಲ್ಲಿ ಆಸಕ್ತಿ ಇಲ್ಲ. ವಸ್ತುಸ್ಥಿತಿ ಹೀಗಿರುವಾಗ ಚಿಕ್ಕಮ್ಮ ಒಬ್ಬರೇ ಏನು ಮಾಡಿಯಾರು? ಹಗಲಾದರೆ ಕೆಲಸದವರು ಇರುತ್ತಾರೆ. ರಾತ್ರಿ ಯಾರು ಇರುತ್ತಾರೆ? ಒಂಟಿ ಹೆಂಗಸು ರಾತ್ರಿ ಮನೆಯಲ್ಲಿ ಇರುವುದೂ ಇಂದಿನ ದಿನದಲ್ಲಿ ಅಪಾಯವೇ. 

    ಕೃಷಿ ಒಂದು ತಪಸ್ಸು. ಅದು ದಿನವೂ ಕೆಲಸವನ್ನು ಬೇಡುತ್ತದೆ. ಬೇಸಿಗೆಯಲ್ಲಿ ಅಡಿಕೆ ಕೊçಲು ಆಗಬೇಕು. ಗಿಡಗಳಿಗೆ ನೀರು ಹಾಯಿಸಬೇಕು. ನೀರು ಹಾಯಿಸಬೇಕಾದರೆ ಕರೆಂಟ್‌ ಇರಬೇಕು. ಸುಡು ಬಿಸಿಲ ದಿನಗಳಲ್ಲಿ ಪವರ್‌ಕಟ್‌ ಇರುವುದೇ ಹೆಚ್ಚು. ಅಷ್ಟು ಮಾತ್ರವೇ? ನೀರೆತ್ತುವ ಪಂಪೂ ಸರಿ ಇರಬೇಕು. ಕೆಟ್ಟರೆ ರಿಪೇರಿ ಮಾಡಿಸಬೇಕು. ಕಾಳುಮೆಣಸು ಹಣ್ಣಾಗಲು ಶುರುವಾದಾಗ ಕೊಯ್ಯದಿದ್ದರೆ ಎಲ್ಲ ಉದುರಿ ಮುಗಿದಿರುತ್ತದೆ. ಮಳೆಗಾಲದಲ್ಲಿ ತೋಟಕ್ಕೆ ಔಷಧಿ ಬಿಡಬೇಕು. ಬಾಳೆ ಕಟಾವು, ತೆಂಗಿನಕಾಯಿ ಶೇಖರಣೆ… ಎಲ್ಲವೂ ಕ್ಲಪ್ತ ಸಮಯಕ್ಕೆ ಆಗಬೇಕು. ಒಂದು ದಿನ, ಎರಡು ದಿನ ಮಾಡದಿದ್ದರೂ ಹೇಗೋ ಸುಧಾರಿಸಬಹುದು. ಆದರೆ, ಇದು ಜೀವನಪರ್ಯಂತ ನಡೆಯಬೇಕಾದ ಕೆಲಸ. ಇಲ್ಲದಿದ್ದರೆ ಕೃಷಿಗೆ ಹಾಕಿದ ಬಂಡವಾಳ ಹೋಗಲಿ ಕೈಯಿಂದ ಖರ್ಚು ಮಾಡಬೇಕಾಗುತ್ತದೆ. “ವಯಸ್ಸು 60 ದಾಟುತ್ತಿರುವಾಗ ಇದು ತನ್ನ ಕೈಲಾಗುವ ಕೆಲಸ ಅಲ್ಲ. ಇನ್ನು ಕೃಷಿ ಬದುಕು ಸಾಧ್ಯವೇ ಇಲ್ಲ’ ಎಂದು ಚಿಕ್ಕಮ್ಮ ಮಕ್ಕಳಂತೆ ಬೆಳೆಸಿದ ತೋಟವನ್ನು ಮಾರಿ ಪೇಟೆಯಲ್ಲಿ ಫ್ಲಾಟ್‌ ಒಂದನ್ನು ಖರೀದಿಸುವ ನಿರ್ಧಾರ ಮಾಡಿದರು. ಮಾರಾಟ ಮಾಡುವುದು ಅವರಿಗೆ ಅತ್ಯಂತ ನೋವಿನ ವಿಷಯವಾದರೂ ಅನಿವಾರ್ಯವಾಗಿತ್ತು. ಬೇರೆ ದಾರಿ ಇರಲಿಲ್ಲ. ಮಕ್ಕಳಿಗೂ ಅಮ್ಮ ಒಬ್ಬರೇ ತೋಟದ ಮನೆಯಲ್ಲಿ ಇರುವುದರ ಬಗ್ಗೆ ಅಸಮಾಧಾನವಿತ್ತು. ಯಾವಾಗ ಅಮ್ಮನೇ ಮಾರಲು ಹೊರಟರೋ ಅವರು ಅದನ್ನು ಸ್ವಾಗತಿಸಿದರು.    

    ಈಗ ಚಿಕ್ಕಮ್ಮ ಫ್ಲಾಟಿಗೆ ಬಂದರೂ ಕೃಷಿಯೊಂದಿಗೆ ಇದ್ದ ಅವರ ಭಾವನಾತ್ಮಕ ನಂಟು ಕಡಿಮೆಯಾಗಿಲ್ಲ. ಸದಾ ಕಳೆದುಹೋದ ಹಳ್ಳಿ ಬದುಕಿನ ಧ್ಯಾನ. ಮೊನ್ನೆ “ಮಾರಿದ ನನ್ನ ತೋಟ ಈಗ ಹೇಗಿದೆ? ಎಂದು ನೋಡಬೇಕೆನಿಸುತ್ತದೆ. ನೀನೂ ಬಾ’ ಎಂದು ನನ್ನನ್ನೂ ಕರೆದುಕೊಂಡು ಹೋದರು. ಚಿಕ್ಕಮ್ಮ ತೋಟದ ಬಗ್ಗೆ ತುಂಬ ಕನಸುಗಳನ್ನು ಹೊತ್ತಿದ್ದರು. “ನನಗೆ ಹೇಗೂ ತೋಟ ನೋಡಿಕೊಳ್ಳಲು ಆಗಲಿಲ್ಲ. ಈಗ ಬಂದವರು ಗಿಡಗಳನ್ನು ಚೆನ್ನಾಗಿ ಸಾಕುತ್ತಿರಬಹುದು. ಅಂದು ನಾನು ನೆಟ್ಟ ಅಡಿಕೆ, ತೆಂಗು, ಬಾಳೆ ಈಗ ಫ‌ಲ ಹೊತ್ತು ನಳನಳಿಸುತ್ತಿರಬಹುದು’ ಹೀಗೆ ದಾರಿಯುದ್ದಕ್ಕೂ ಹೇಳುತ್ತಲೇ ಇದ್ದರು. ಆದರೆ, ಅಲ್ಲಿ ಹೋಗಿ ನೋಡಿದಾಗ ಅವರ ಕೃಷಿಭೂಮಿ ಗುರುತೇ ಸಿಗದಷ್ಟು ಬದಲಾಗಿತ್ತು. ತೋಟ ಹಡಿಲು ಬಿದ್ದಿತ್ತು. ಗಿಡಗಳು ಸೊರಗಿ ಈಗಲೋ ಆಗಲೋ ಜೀವ ಬಿಡಲು ತಯಾರಾದಂತೆ ಇದ್ದವು. ತೋಟದಲ್ಲಿ ಕಳೆಗಿಡಗಳು ಮನುಷ್ಯನೆತ್ತರ ಬೆಳೆದಿದ್ದವು. ಹಸುಗಳಿಂದ ತುಂಬಿದ್ದ ಹಟ್ಟಿ ಈಗ ಖಾಲಿ ಆಗಿತ್ತು. ಬದಲಾಗಿ ಅಲ್ಲಿ ಏನೇನೋ ಸಾಮಾನು ಸರಂಜಾಮುಗಳು ತುಂಬಿದ್ದವು. ವಿಚಾರಿಸೋಣವೆಂದರೆ ಅಲ್ಲಿ ಯಾರೂ ಇರಲಿಲ್ಲ. ಪಕ್ಕದ ಮನೆಯವರಲ್ಲಿ ಕೇಳಿದಾಗ ಹೇಳಿದರು, “ತೋಟದ ಮಾಲೀಕರು ಮಂಗಳೂರಿನಲ್ಲಿ ಇರುತ್ತಾರೆ. ಅವರ ಹೆಂಡತಿ, ಮಕ್ಕಳು ಹಳ್ಳಿಗೆ ಬರಲು ಒಪ್ಪುವುದಿಲ್ಲವಂತೆ. ಅವರು ಯಾವಾಗಾದರೊಮ್ಮೆ ಬಂದು ನೋಡಿ ಹೋಗುತ್ತಾರೆ. ಅವರಿಗೆ ಜೀವನ ಸಾಗಿಸಲು ಬೇರೆಯೇ ಉದ್ಯೋಗ ಇದೆ. ಕೃಷಿ ಅವರಿಗೆ ಬದುಕು ಅಲ್ಲ. ಹವ್ಯಾಸ ಅಷ್ಟೆ’.

    ನನ್ನ ಮನೆ ಪಕ್ಕ ಇದ್ದ ಆದರ್ಶ ಕೃಷಿಕ ದಂಪತಿಗಳ ಈ ಕತೆ ಕೇಳಿ. ಆ ದಂಪತಿಗಳು ಸತತ ಪರಿಶ್ರಮದಿಂದ ತಮ್ಮ ತೋಟವನ್ನು ನಂದನವನವನ್ನಾಗಿ ಮಾಡಿದ್ದರು. ಅದೊಂದು ಮಾದರಿ ತೋಟವಾಗಿತ್ತು. ನಾವು ಅವರೇನು ಕೃಷಿ ಮಾಡಿದ್ದಾರೆ ಎಂಬುದನ್ನು ನೋಡಿಕೊಂಡು ಅದನ್ನು ನಮ್ಮ ತೋಟದಲ್ಲಿ ಅಳವಡಿಸುತ್ತಿದ್ದೆವು. ಅವರ ಮಗ-ಸೊಸೆ ಬೆಂಗಳೂರಿನಲ್ಲಿ ವೈದ್ಯರಾಗಿದ್ದಾರೆ. ಅವರಿಗೆ ಇಲ್ಲಿಗೆ ಬರಲು ಬಿಡುವು ಇಲ್ಲ. ಇಲ್ಲಿಯೇ ವೈದ್ಯ ವೃತ್ತಿ ಮುಂದುವರಿಸಲು ಅವರಿಗೆ ಮನಸ್ಸಿಲ್ಲ. ಕಾರಣ ಅಲ್ಲಿ ಸಿಗುವ ಆದಾಯದ ಕಾಲುಭಾಗವೂ ಇಲ್ಲಿ ಸಿಗಲಿಕ್ಕಿಲ್ಲವೆಂಬ ಅಳುಕು. ಈಗ ದಂಪತಿಗಳಿಗೆ ವಯಸ್ಸಾಗಿದೆ. ತೋಟದ ಕೆಲಸ ಮಾಡಿಸುವುದು ಹೋಗಲಿ ಅಂಗಳಕ್ಕೆ ಇಳಿಯಲೂ ಆಗುವುದಿಲ್ಲ. ಮೊನ್ನೆ ಅವರ ಮಗ ಬಂದವನು ತೋಟ-ಮನೆಯನ್ನು ಮಾರಿ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾನೆ. 

    ಇದು ಚಿಕ್ಕಮ್ಮ, ಆ ವೃದ್ಧ ದಂಪತಿಗಳ ಕತೆ ಮಾತ್ರ ಅಲ್ಲ. ಮನೆಮನೆ ಕತೆ. ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರಿಗೂ ಕೃಷಿಯಲ್ಲಿ ಆಸಕ್ತಿ ಇಲ್ಲ. “ಮನೆಯಲ್ಲೇ ಕೃಷಿ ಮಾಡಿಕೊಂಡು ಕುಳಿತುಕೊಳ್ಳಿ ಮಕ್ಕಳೇ’ ಎಂದು ಹೇಳುವ ಹಾಗೂ ಇಲ್ಲ. ಏಕೆಂದರೆ, ಕೃಷಿ ಹಣ ಗಳಿಸುವ ವೃತ್ತಿಯೇ ಅಲ್ಲ. ನಮ್ಮ ನಂತರ ನಾವು ಜೀವ ತೇಯ್ದು ಬೆಳೆಸಿದ ತೋಟ ಏನಾಗುತ್ತದೋ ಬಲ್ಲವರಾರು? ಬದುಕನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ನೆಮ್ಮದಿ, ಸಂತೋಷವನ್ನು ಕಂಡುಕೊಂಡು ಕೃಷಿ ಮಾಡುವ ರೈತರು ಇಂದು ನಮ್ಮಲ್ಲಿ ಎಷ್ಟು ಮಂದಿ ಇದ್ದಾರೆ? ಬೇರೆ ದಾರಿ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ವ್ಯವಸಾಯ ಮಾಡುವ ಕೃಷಿಕರ ಸಂಖ್ಯೆಯೇ ಹೆಚ್ಚು. ಆದರೆ, ಅಲ್ಲೊಬ್ಬರು ಇಲ್ಲೊಬ್ಬರು ಸಾಫ್ಟ್ವೇರ್‌ ಅಥವಾ ಇನ್ನಿತರ ಉದ್ಯೋಗಿಗಳು ನಗರ ಜೀವನದ ಒತ್ತಡದಿಂದ ಬೇಸತ್ತು ಹಳ್ಳಿಗೆ ಹಿಂದಿರುಗುವುದು ಕತ್ತಲು ಕವಿದ ಕೃಷಿ ಲೋಕದಲ್ಲಿ ಬೆಳಕಿಂಡಿಯಂತೆ ಗೋಚರಿಸುತ್ತದೆ.  

ಸಹನಾ ಕಾಂತಬೈಲು

ಟಾಪ್ ನ್ಯೂಸ್

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.