ಗೃಹಿಣಿಯ ಕೆಲಸಕ್ಕೆ ಸಂಬಳ ಎಲ್ಲಿ !
Team Udayavani, May 31, 2019, 6:00 AM IST
ಮನೆಯ ಪೀಠೊಪಕರಣಗಳ ಧೂಳು ಒರೆಸಿ, ಕುಶನ್ ಕವರುಗಳನ್ನೆಲ್ಲ ಸರಿಯಾಗಿಟ್ಟು , ಮೇಜು, ಟೀಪಾಯ್‌ಗಳೆಲ್ಲ ಮಿರಮಿರನೆ ಮಿಂಚುತ್ತ ಅರಳಿದ ಹೂಗಳನ್ನು ಹೊತ್ತ ಹೊಸ ಹೂದಾನಿಯ ಒಪ್ಪಓರಣದಲ್ಲಿ ತೊಡಗಿಕೊಳ್ಳುವ ಸೌಂದರ್ಯಪ್ರಜ್ಞೆ ಕೈಯ ಬಳೆ ಕಿಣಿಕಿಣಿ ರವವನ್ನು ಅನುರಣಿಸುತ್ತಿದ್ದರೆ ಅದು ಮನೆ.
ಹೆಣ್ಣಿಲ್ಲದ ಮನೆ ಚೌಕಟ್ಟಿಲ್ಲದ ಚಿತ್ರದಂತೆ. ಮನೆಯ ಉಸಿರಾಗಿ, ಮನದ ಒತ್ತಡವನ್ನು ನುಂಗಿಕೊಳ್ಳುವ ನಿಟ್ಟುಸಿರಾಗಿ, ಪ್ರೀತಿ ಒತ್ತರಿಸುವ ಬಿಸಿಯುಸಿರಾಗಿ, ಸಮಸ್ಯೆಗಳಿಗೆಲ್ಲ ಸಹಜ ವಿದ್ಯಮಾನದ ಒಸರಾಗಿ, ಸಮಾಧಾನಿಸುವ ನಿರಾಳ ಉಸಿರಿನ ಸರಿಗಮಪವೇ ಆಗಿ ಅನನ್ಯವಾದದ್ದು ಮನೆಯಲ್ಲಿ ಹೆಣ್ಣಿನ ಉಪಸ್ಥಿತಿ.
ಪಿತೃಪ್ರಧಾನ ಕುಟುಂಬದಲ್ಲಿ ಹೆಣ್ಣುಮಗು ಹುಟ್ಟಿದರೆ ಮನೆಯವರಿಗೆ ಅಷ್ಟೇನೂ ಸಂತೋಷವಿಲ್ಲದ ಕಾಲವೊಂದಿತ್ತು. ಆ ಸಮಯದಲ್ಲೂ ಏನೂ ವಿದ್ಯಾಭ್ಯಾಸವಿಲ್ಲದ ನನ್ನ ಅಜ್ಜಿ ಬದುಕಿನ ಸತ್ಯವನ್ನು ಅರ್ಥೈಸಿಕೊಂಡ ಪರಿ ಹೀಗೆ. ಆಕೆ ಯಾವಾಗಲೂ ಹೇಳುತ್ತಿದ್ದರು ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕ್ಕೆ – ಕೂಸು ತಂಗಮ್ಮ ಒಳಹೊರಗೆ ಬೀಸಣಿಗೆಯಂತೆ ತಿರುಗ್ಯಾಳು. ಹೆಣ್ಣು ಇದ್ದ ಮನೆಗೆ ಕನ್ನಡಿ ಯಾತಕ್ಕೆ, ಹೆಣ್ಣು ತಂಗಮ್ಮ ಕನ್ನಡಿಯಂತೆ ಮನೆಯೊಳಗೆ… ಇಂತಹ ಸರಳ ಮಾತಿನಲ್ಲೂ ಎಂಥ ನಿಗೂಢ ಅರ್ಥ ಹುದುಗಿದೆ ಎನಿಸುತ್ತಿತ್ತು ನನಗೆ. ಅಂದರೆ ಮನೆಯೆಂಬ ಶ್ವಾಸಕೋಶದಲ್ಲಿ ಒಳ-ಹೊರಗೆ ಓಡಾಡುವ ಉಸಿರು ಹೆಣ್ಣು. ಗೃಹವೆಂಬ ಜಡದೇಹದಲ್ಲಿ ಚೇತನ, ಕ್ರಿಯಾಶೀಲತೆಯನ್ನೂ ತುಂಬುವ ಆತ್ಮ ಹೆಣ್ಣು. ಅವಳೇ ಗೃಹಿಣಿ. ಗೃಹದೊಡತಿ.
ನನ್ನ ಬಾಲ್ಯದಲ್ಲಿ ಗೋಕರ್ಣದಲ್ಲಿದ್ದ ನಮ್ಮ ಮನೆಯ ಗೋಡೆಯಲ್ಲಿ ಫೋಟೊ ಒಂದನ್ನು ಗೋಡೆಗೆ ತೂಗು ಹಾಕಲಾಗಿತ್ತು. ಫೋಟೊ ಎಂದರೆ ಛಾಯಾಚಿತ್ರವೇನೂ ಅಲ್ಲ. ದಪ್ಪ ಅಕ್ಷರಗಳಲ್ಲಿ ಕೆಲವೊಂದು ವಾಕ್ಯಗಳನ್ನು ಬರೆದು ಅದನ್ನು ಚೌಕಟ್ಟಿನೊಳಗೆ ಕನ್ನಡಿ ಕಟ್ಟಿಸಿ ಗೋಡೆಗೆ ಹಾಕಿತ್ತು. ಅದರಲ್ಲಿರುವ ಎಲ್ಲ ವಾಕ್ಯಗಳೂ ನನಗೆ ನೆನಪು ಬರುತ್ತಿಲ್ಲ. ಆದರೆ, ಮೊದಲ ವಾಕ್ಯ ಮಾತ್ರ ನೆನಪಿದೆ. ಸಂತೃಪ್ತ ಗೃಹಿಣಿಯೇ ಮನೆಯ ಲಕ್ಷ್ಮಿ. ಹೆಣ್ಣಿನ ಅಸ್ಮಿತೆಗೆ ಸಂಬಂಧಪಟ್ಟ ಇನ್ನೂ ಕೆಲವು ವಾಕ್ಯಗಳು ಅದರಲ್ಲಿತ್ತು. ನಮ್ಮ ಮನೆಯಲ್ಲಿ ಮಾತ್ರವಲ್ಲ , ಬೇರೆ ಕೆಲವು ಮನೆಗಳಲ್ಲೂ ಈ ಫೋಟೊ ನನ್ನ ಗಮನ ಸೆಳೆದಿತ್ತು. ಅಮ್ಮ ಒಳಗೆ ಕೋಪದಿಂದ ಏನಾದರೂ ಕಿರಿಕಿರಿ ಮಾಡುತ್ತಿದ್ದರೆ ಅಪ್ಪ ಅವಳ ಕೈ ಹಿಡಿದು ಸೀದಾ ಹಜಾರಕ್ಕೆ ಕರೆದುಕೊಂಡು ಬಂದು ಗೋಡೆಯ ಫೋಟೊದೆಡೆಗೆ ಕೈ ತೋರಿಸಿ, “ನೋಡು ಅದನ್ನು ಓದು. ಸಂತೃಪ್ತ ಗೃಹಿಣಿಯೇ ಮನೆಯ ಲಕ್ಷ್ಮಿ. ಕೋಪತಾಪ ಸಲ್ಲದು’ ಎನ್ನುತ್ತಿದ್ದರಂತೆ. ಅಮ್ಮನ ನೆನಪಿನ ಪರದೆಯಲ್ಲಿ ಆಗಾಗ ಮೂಡುವ ಈ ಚಿತ್ರ ಒಂದು ದೃಶ್ಯಕಾವ್ಯದಂತೆ ಅವಳ ಬಾಯಿಂದ ಹರಿದು ಬರುವುದಿದೆ. ಅದರ ಪ್ರತಿಧ್ವನಿ ನನ್ನ ಕಲ್ಪನಾ ಸುರುಳಿಯಲ್ಲಿಯೂ ಆಗಾಗ ಅದರ ಅರ್ಥಪೂರ್ಣತೆಯನ್ನು ಧ್ವನಿಸುತ್ತಿರುತ್ತದೆ.
ಮನೆಯ ಪ್ರತಿ ವಸ್ತುವಿನ ಚಲನೆಯಲ್ಲಿ ಮನೆಯಾಕೆಯ ಕೈಚಳಕವಿರುತ್ತದೆ. ಅಮ್ಮನಿಗೆ ಪಾತ್ರೆ ತೊಳೆದರೆ, ಅದನ್ನು ಕೂಡಲೇ ಒರೆಸಿ ಅದರ ಜಾಗದಲ್ಲಿಟ್ಟು ಬಿಡಬೇಕು. ಮತ್ತೆ ಮಾಡುತ್ತೇನೆ ಎಂದು ಬಾಕಿ ಮಾಡುವ ಹಾಗಿಲ್ಲ. ಅದು “ಅಮ್ಮ ತತ್ವ’.
ಮನುಷ್ಯನ ನಾಲಿಗೆ ಹಾಗೂ ಗುಣದ ಮಾದರಿಯನ್ನು ಆತ ಹೊಂದಿದ ಸಂಸ್ಕಾರವೇ ನಿರ್ಧರಿಸುತ್ತದೆ. ಚಿಕ್ಕದಿರುವಾಗ ಅಮ್ಮ ಹೇಳುವ ಹಿತನುಡಿಗಳು, ಬಿರುಸಿನ ಬೈಗಳು, ಆಪ್ತತೆಯ ಮುದ್ದು ಮುಗುಳಿನ ಶಬ್ದಗಳು, ನೋಡಬಾರದ, ಮಾಡಬಾರದ, ಹೇಳಬಾರದ, ಕೇಳಬಾರದವುಗಳ ನೀತಿ-ನಿಯಮಗಳ ಇತಿಮಿತಿ ಅಲೆಯನ್ನೆಲ್ಲ ಅಮ್ಮನಿಂದ ಕಲಿಯುತ್ತೇವೆ. ಯಾವ ಶಾಲೆಯಲ್ಲೂ , ಕಾಲೇಜಿನಲ್ಲೂ, ವಿಶ್ವವಿದ್ಯಾನಿಲಯದಲ್ಲೂ ಕಲಿಸದ ಪಾಠಗಳನ್ನು ನಾವು ಅಮ್ಮನಿಂದ ಕಲಿಯುತ್ತೇವೆ. ಹೆಣ್ಣೊಬ್ಬಳು ಮಗಳು, ತಾಯಿ, ಹೆಂಡತಿ, ಪ್ರೇಯಸಿ ಏನಾಗಿದ್ದರೂ ಅವ್ಯಕ್ತವಾಗಿ ಸುಷುಪ್ತಿಯಲ್ಲಿ ಆಕೆಯಲ್ಲಿರುವುದು ಮಾತೃತ್ವ ಪ್ರಜ್ಞೆ. ಹಾಗಾಗಿ, ಮನೆಯಲ್ಲಿ ಆಕೆ ಬೇಕು-ಬೇಡಗಳ, ಹೌದು-ಅಲ್ಲಗಳ ನಿಖರ ವೇದಾಂತ ಸಂಹಿತೆಯಾಗುತ್ತಾಳೆ.
ಈ ಕೆಲಸಕ್ಕೆ ಸಂಬಳ ಎಲ್ಲಿ !
ಉದ್ಯೋಗಂ ಪುರುಷ ಲಕ್ಷಣಂ ಎಂಬ ಕ್ಲೀಷೆಯೆನಿಸುವ ಒಂದು ಗಾದೆಯಿದೆ. ಅದು ಯಾವಾಗ ಹುಟ್ಟಿತೋ! ಆದಿಮಾನವರಾದ “ಆ್ಯಡಂ ಈವ್’ರ ಕಾಲದಲ್ಲಿ ಬೆಂಕಿಯ ಆವಿಷ್ಕಾರ. ನಂತರ “ಆ್ಯಡಂ’ ಬೇಟೆಯಾಡಿ ತಂದ ಪ್ರಾಣಿಯನ್ನು “ಈವ್’ಳು ಕತ್ತರಿಸಿ ಬೆಂಕಿಯಲ್ಲಿ ಸುಟ್ಟು ತಿನ್ನಲು ಸಿದ್ಧಗೊಳಿಸುತ್ತಾಳೆ. ಅದೇ ಮುಂದುವರಿದು ಹೊರಗೆ ಕಚೇರಿಯಲ್ಲಿ ದುಡಿಯುವ ಗಂಡ ತರುವ ತರಕಾರಿಯನ್ನು ಮನೆಯಲ್ಲಿರುವ ಗೃಹಿಣಿ ಅಡಿಗೆ ಮಾಡುತ್ತಾಳೆ. ಈಗಂತೂ ಪರಿಸ್ಥಿತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೆಣ್ಣು ಕಚೇರಿಗೂ ಹೋಗುತ್ತಾಳೆ. ತರಕಾರಿಯನ್ನೂ ತರುತ್ತಾಳೆ. ಅಡಿಗೆಯನ್ನು ಮಾಡುತ್ತಾಳೆ. ಹಾಗಾಗಿ ಉದ್ಯೋಗ ಎನ್ನುವುದು ಪುರುಷ ಲಕ್ಷಣ, ಸ್ತ್ರೀ ಲಕ್ಷಣವನ್ನೂ ದಾಟಿ ಅದು ಮನುಷ್ಯ ಲಕ್ಷಣವಾಗಿದೆ.
ಹೊರಗಿನ ಉದ್ಯೋಗದಲ್ಲಿರುವ ಮಹಿಳೆ ತಿಂಗಳ ಕೊನೆಯಲ್ಲಿ ಕೈಯ್ಯಲ್ಲಿ ಹಿಡಿಯಬಹುದಾದ ಸಂಬಳದ ಕನಸು ಹೊತ್ತು ಯಾವುದೇ ಬಂಧವಿಲ್ಲದೆ, ತಿಂಗಳಿಡೀ ಯಾಂತ್ರಿಕವಾಗಿ ದುಡಿಯುತ್ತಾಳೆ. ಆದರೆ ಮನೆಯಲ್ಲಿರುವ ಗೃಹಿಣಿ ಕೈಗೊಳ್ಳುವ ಕೆಲಸಕ್ಕೆ ಯಾವ ಆಫೀಸಿನ ಕೆಲಸವೂ ಸರಿಸಮವಲ್ಲ. ಗೃಹಿಣಿಯಾದವಳಿಗೆ ಕೆಲಸವೆಲ್ಲ ಅಚ್ಚುಕಟ್ಟಾಗಿರಬೇಕು. ಗಂಡ ಮೆಚ್ಚಬೇಕು, ಮಕ್ಕಳು ಸೈ ಎನ್ನಬೇಕು, ಬಂದವರು “ಆಹಾ’ ಎನ್ನುವಂತೆ ಮನೆಯ ರೂಪಿಸಲು ಆಕೆಯು ಹಗಲಿರುಳು ಮೀಸಲು.
ಗೃಹಿಣಿಯ ಕೆಲಸಕ್ಕೆ ಬೆಲೆ ಇಲ್ಲ. ಬಿಟ್ಟಿ ಕೆಲಸ. ಬೆಳಗಿಂದ ಸಂಜೆಯ ತನಕ ಆಕೆ ಸಂಬಳ ರಹಿತವಾಗಿ ದುಡಿಯುತ್ತಾಳೆ. ತನ್ನ ಮನೆಯವರಿಗಾಗಿ ಗಾಡಿಗೆ ಕಟ್ಟಿದ ಎತ್ತಿನಂತೆ ಎಂಬಂತಹ ಮಾತಿನಲ್ಲಿ ಅದು ಆಕೆಯ ತ್ಯಾಗಶೀಲತೆಯ ವೈಭವೀಕರಣ ಎನಿಸಿದರೂ ಆಕೆಗೆ ಅಂತಹ ಬೇಸರವೇನೂ ಇರುವುದಿಲ್ಲ. “ಅಮ್ಮನ ಪತ್ರೊಡೆಯ ರುಚಿ ಯಾರೂ ಮಾಡಿದರೂ ಆಗುವುದಿಲ್ಲ’. “ಅಮ್ಮ ಗೋಬಿಮಂಚೂರಿ ಎಕ್ಸ್‌ಪರ್ಟ್, ಅಮ್ಮ ಮಾಡಿದ ಮಂಚೂರಿ ತಿಂದ ನಂತರ ನನಗೆ ಹೊಟೇಲ್ಲಿನದು ಸೇರುವುದೇ ಇಲ್ಲ’ ಎಂದು ಮಕ್ಕಳು ಮೆಚ್ಚಿಗೆ ಸೂಚಿಸಿದರೆ, ಬಾಯಿ ಚಪ್ಪರಿಸುತ್ತ “ಇನ್ನೂ ಬೇಕು’ ಎಂದು ಹಾಕಿಸಿಕೊಳ್ಳುತ್ತ ತಿನ್ನುತ್ತಿದ್ದರೆ, ಅಮ್ಮನಿಗೆ ಅದನ್ನು ತಯಾರಿಸಲು ಆದ ಅದೆಷ್ಟೋ ಪ್ರಯಾಸ ಆ ಕ್ಷಣ ಮಾಯ.
ವಿಜಯಲಕ್ಷ್ಮಿ ಶ್ಯಾನ್‌ಭೋಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.