ಬನ್-ಪ್ರಿಯೆ
Team Udayavani, Mar 20, 2020, 5:00 AM IST
ಫ್ಯಾಷನ್ ಲೋಕದಲ್ಲಿ ಇಂದಿನ ಫ್ಯಾಷನ್ ನಾಳೆ ಮಾಯವಾಗಬಹುದು. ಅಥವಾ ಹಿಂದಿನ ಕಾಲದ ಫ್ಯಾಷನ್ ಮತ್ತೆ ಬರಲೂಬಹುದು. ಹಿಂದಿನ ಕಾಲದ ಮಹಿಳೆಯರ ಅಚ್ಚುಮೆಚ್ಚಿನ ಹೇರ್‌ಸ್ಟೈಲ್ ತುರುಬು (ಬನ್)ಈಗ ಮರಳಿ ಬಂದಿದೆ.
ಉದ್ದ ಕೂದಲನ್ನು ಗಂಟು ಕಟ್ಟಿ , ತುರುಬು ಹಾಕುವುದು ಹಳೇ ಫ್ಯಾಷನ್ ಎನ್ನುವಂತಿಲ್ಲ. ಇದೀಗ ಸೆಲೆಬ್ರಿಟಿಗಳಿಂದ ಶುರುವಾದ ಈ ಟ್ರೆಂಡ್ ಅಭಿಮಾನಿಗಳನ್ನು ತಲುಪಲು ಹೆಚ್ಚು ಸಮಯ ಬೇಕಾಗಿಲ್ಲ. ಈ ಹೊಸ ಟ್ರೆಂಡ್ ಸುಲಭ ವಿಧಾನವೂ ಆಗಿರುವುದರಿಂದ ಹೆಚ್ಚು ಜನಪ್ರಿಯವಾಗಿದೆ.
ಉದ್ದವಾದ ದಟ್ಟನೆಯ ಕೂದಲು ಎಂದರೆ ಮಹಿಳೆಯರಿಗೆ ಎಲ್ಲಿಲ್ಲದ ಪ್ರೀತಿ-ಅಕ್ಕರೆ. ಇಂಥ ಕೂದಲನ್ನು ಆರೈಕೆ ಮಾಡುವುದು ತುಂಬಾ ಕಷ್ಟದ ಕೆಲಸ. ಇನ್ನು ಬೇಸಿಗೆಯ ಸಮಯದಲ್ಲಿ ಜಡೆ, ಜುಟ್ಟು ಕಟ್ಟಿಕೊಳ್ಳಲು ಅಥವಾ ತಲೆಕೂದಲು ಬಿಟ್ಟು ಓಡಾಡುವುದು ಬಹಳ ಕಷ್ಟ. ಇಂಥ ಸಮಯದಲ್ಲಿ ನೀಳವೇಣಿಯರು ಬನ್ ಹೇರ್‌ಸ್ಟೈಲ್ ಮೊರೆ ಹೋಗಿದ್ದಾರೆ. ಈ ಹೇರ್‌ಸ್ಟೈಲ್‌ನಲ್ಲಿ ನೂರಾರು ವಿಧಗಳಿವೆ.
ಬನ್ ಕಟ್ಟಿಕೊಳ್ಳುವಾಗ ನೀಟಾಗಿ ಇರಬೇಕೆಂದೇನಿಲ್ಲ. ಕೂದಲು ಎಷ್ಟು ಕೆದರಿಕೊಂಡಿರುತ್ತದೆಯೋ, ಅದುವೇ ಸ್ಟೈಲ್ ಎನ್ನುವುದು ಈಗಿನ ಕೇಶ ವಿನ್ಯಾಸಕಾರರ ವಾದ. ಈ ಕೇಶ ವಿನ್ಯಾಸವು ಸೆಕೆಗಾಲದಲ್ಲಿ ಆರಾಮ ನೀಡುವುದಷ್ಟೇ ಅಲ್ಲದೆ, ಮುಖಕ್ಕೂ ಹೊಸಲುಕ್ ನೀಡುತ್ತದೆ. ಇನ್ನು ಈ ತರಹದ ಹೇರ್‌ಸ್ಟೈಲನ್ನು ಮದುವೆ, ಹಬ್ಬ-ಹರಿದಿನಗಳಲ್ಲಿ ಮಾಡುವವರ ಸಂಖ್ಯೆ ಇದೀಗ ಹೆಚ್ಚಾಗಿದೆ. ತಮ್ಮ ಬಟ್ಟೆಗೆ ಅನುಗುಣವಾಗಿ ಸುಂದರವಾಗಿ ಬನ್ ಹೇರ್‌ಸ್ಟೈಲ್ ಮಾಡಿಕೊಂಡು ಅದಕ್ಕೆ ಅಂದದ ಮುತ್ತುಗಳನ್ನು ಜೋಡಿಸಿದರೆ ಚಂದ ಚಂದ. ಗಾಜಿಗನ ಕ್ಲಿಪ್ಸ್ , ವೆರೈಟಿ ಪಿನ್‌ಗಳು, ಬಣ್ಣದ ಬೀಡ್ಸ್, ಹೊಳೆಯುವ ವಸ್ತು, ಹೂವಿನ ಆಕೃತಿಯ ಕ್ಲಿಪ್ಸ್‌ಗಳು, ಮಲ್ಲಿಗೆ ಮಾಲೆ ಹೋಲುವ ಕೃತಕ ತುರುಬು, ಹೇರ್‌ಬ್ಯಾಂಡ್- ಹೀಗೆ ಫ್ಯಾನ್ಸಿ ಅಂಗಡಿಯಲ್ಲಿ ನೂರಾರು ಆಯ್ಕೆಗಳಿವೆ.
ಇನ್ನು ಆಫೀಸಿಗೆ ಹೋಗುವಾಗ ಸಿಂಪಲ್ಲಾಗಿ ಬನ್ ಕಟ್ಟಿಕೊಳ್ಳಬಹುದು. ಹಾಗೆ ಪಾರ್ಟಿ, ಸಿನಿಮಾ, ಕಾಲೇಜು, ಹೊಟೇಲ್, ಶಾಪಿಂಗ್‌ಗೂ ಕೂಡ ತಮ್ಮ ಮುಖಕ್ಕೆ ಹೊಂದುವಂಥ ಈ ತರಹದ ಕೇಶವಿನ್ಯಾಸ ಮಾಡಿಕೊಳ್ಳಬಹುದು. ಒಂದು ಪೆನ್‌ಗೊ, ಪೆನ್ಸಿಲ್‌ಗೋ ಕೇಶವನ್ನು ಸುತ್ತಿಕೊಂಡು, ಬನ್ ಸ್ಟೈಲ್ ಮಾಡುವವರೂ ಇದ್ದಾರೆ.
ಈ ಕೇಶವಿನ್ಯಾಸ ಮಾಡರ್ನ್ ಉಡುಪು ಹಾಗೂ ಸಾಂಪ್ರದಾಯಿಕ ಉಡುಪು ಎರಡಕ್ಕೂ ಸೈ. ಮದುವೆ ಮುಂಜಿಗೆ ಹೋಗುವಾಗ ಧರಿಸುವ ಜರಿ ದಿರಿಸಿಗೆ ಹೋಲುವಂತೆ ಚಿನ್ನದ ಹೂ ಮುಡಿದು ತುರುಬನ್ನು ಶ್ರೀಮಂತವಾಗಿಸಬಹುದು. ಸಾಂಪ್ರದಾಯಿಕ ಉಡುಪಿಗೆ ತಕ್ಕಂತೆ ಗ್ರ್ಯಾಂಡಾಗಿ ಈ ಹೇರ್‌ಸ್ಟೆಲ್ ಮಾಡಿಕೊಂಡು ವೆರೈಟಿ ಬೀಡ್‌ಗಳ ಕ್ಲಿಪ್ ಧರಿಸಿ ಇನ್ನೂ ವೈಭವಯುತವಾಗಿ ಅಲಂಕರಿಸಿಕೊಳ್ಳಬಹುದು. ಮಾಡರ್ನ್ ಉಡುಪುಗಳಾದ ಬ್ಲೆಸರ್, ಸೂಟ್, ಮಿಡಿಗಳ ಮೇಲೆ ಮೆಸ್ಸಿ ಬನ್ ಹೇರ್‌ಸ್ಟೈಲ್ ಮಾಡಿಕೊಳ್ಳಬಹುದು.
ಸುಮಾ