ವರ್ಕ್ ಫ್ರಂ ಹೋಮ್!
Team Udayavani, Jul 19, 2019, 5:06 AM IST
“ಏನು ಕೆಲಸದಲ್ಲಿದ್ದೀರಿ?’
“ಗೃಹಿಣಿ’
“ಹಾಗಾದರೆ, ಎಲ್ಲಿಯೂ ಕೆಲಸ ಮಾಡುತ್ತಿಲ್ಲ’
“ಗೃಹಿಣಿಯಾಗಿಯೇ ಇದ್ದುಕೊಂಡು ಉದ್ಯೋಗಸ್ಥೆಯಾಗಿರ ಬಾರದೆಂದು ಯಾರು ಹೇಳಿದವರು? ’
ನಾವು ಸಣ್ಣವರಿದ್ದಾಗ ಶಾಲೆಯಲ್ಲಿ ನಮ್ಮ ಅಧ್ಯಾಪಕರು, “ಮಕ್ಕಳೇ ನೀವು ಮುಂದೆ ಏನಾಗಬೇಕು ಅಂತ ಇದ್ದೀರಿ?” ಎಂದು ಕೇಳುತ್ತಿದ್ದರು. ಆಗ ನಮ್ಮ ತರಗತಿಯಲ್ಲಿ ಕೆಲವರು, “ಸಾರ್, ನಾನು ಡಾಕ್ಟರ್ ಆಗುತ್ತೇನೆ’, “ಸರ್, ನಾನು ಇಂಜಿನಿಯರ್ ಆಗುತ್ತೇನೆ”, “ಸಾರ್, ನಾನು ಪೈಲಟ್ ಆಗುತ್ತೇನೆ” ಎಂದು ದೊಡ್ಡ ದೊಡ್ಡ ಉದ್ಯೋಗದ ಹೆಸರನ್ನು ಹೇಳುತ್ತಿದ್ದರು. ಆದರೆ, ನಾವು ಹುಡುಗಿಯರಲ್ಲಿ ಹೆಚ್ಚಿನವರು, “ಸಾರ್ ನಾನು ಟೀಚರ್ ಆಗುತ್ತೇನೆ”, “ಸಾರ್, ನಾನು ನರ್ಸ್ ಆಗುತ್ತೇನೆ”, “ನಾನು ಬ್ಯಾಂಕ್ ಕೆಲಸಕ್ಕೆ ಹೋಗುತ್ತೇನೆ” ಎಂದೇ ಹೇಳುತ್ತಿದ್ದರು.
ನನ್ನ ಸರದಿ ಬಂದಾಗ ನಾನು ಯಾವುದೋ ಒಂದು ಉದ್ಯೋಗ ಮಾಡುವ ಬಗ್ಗೆ ಹೇಳಿದರೆ, ನನ್ನ ಗೆಳತಿ “ಸಾರ್, ನಾನು ಗೃಹಿಣಿಯಾಗುತ್ತೇನೆ” ಎಂದದ್ದೇ ತಡ ಎಲ್ಲ ಮಕ್ಕಳೂ ಅವಳನ್ನೇ ನೋಡತೊಡಗಿದರು.
“ಗೃಹಿಣಿ’ ಎಂದ ತಕ್ಷಣ ಯಾಕೆ ಎಲ್ಲರೂ ಅವಳನ್ನೇ ನೋಡಿದರು? ಬಹುಶಃ ಗೃಹಿಣಿಯೆಂದರೆ ಸಂಪಾದನೆ ಮಾಡದವಳು, ಮನೆಯಲ್ಲೇ ಕಾಲಕ್ಷೇಪ ಮಾಡುವವಳು ಎನ್ನುವ ಭಾವನೆ ಅವರಲ್ಲಿರಬೇಕು ಎಂದು ಅಂದುಕೊಂಡೆ. ಆದರೆ, ನನಗೆ ನನ್ನಮ್ಮ, ನನ್ನಜ್ಜಿ, ದೊಡ್ಡಮ್ಮ, ಚಿಕ್ಕಮ್ಮ, ನೆರೆಹೊರೆಯ ಹೆಂಗಸರನ್ನು ನೋಡಿದರೆ ಅವರೆಲ್ಲ ಕೆಲಸವಿಲ್ಲದವರಂತೆ, ಸಂಪಾದನೆಯಿಲ್ಲದವರಂತೆ ಕಾಣುತ್ತಿರಲಿಲ್ಲ. ಬೆಳಗ್ಗೆಯಿಂದ ರಾತ್ರಿಯವರೆಗೆ ಒಂದು ಚೂರೂ ಪುರುಸೊತ್ತಿಲ್ಲದೆ ಕಷ್ಟಪಟ್ಟು ದುಡಿಯುತ್ತಿದ್ದ ಅವರನ್ನು ನೋಡುವಾಗ ಇಂತಹ ಪರಿಕಲ್ಪನೆ ಬರಲೂ ಸಾಧ್ಯವಿರಲಿಲ್ಲ. ಯಾಕೆಂದರೆ, ಅವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಮನೆಯಲ್ಲೇ ಗೃಹಿಣಿಯಾಗಿ ಇದ್ದುಕೊಂಡು ದುಡಿದು ಆದಾಯ ಗಳಿಸುತ್ತಿದ್ದರು. ನಾನು ಚಿಕ್ಕವಳಿರುವಾಗ ನಮ್ಮಜ್ಜಿ ಅಂದರೆ ಅಮ್ಮನ ಅಮ್ಮ ತೋಟದಲ್ಲಿ ತಮ್ಮ ಕೈಯಾರೆ ನೀರೆರೆದು ತರಕಾರಿ, ವೀಳ್ಯದೆಲೆಯನ್ನು ಬೆಳೆಸಿ ಮನೆ ಮನೆಗೆ ಹೋಗಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು. ನನ್ನಮ್ಮನೂ ಮೊದಲಿನಿಂದಲೂ ಗೃಹಿಣಿ. ಬೇಸಾಯದ ಕೆಲಸ, ಮನೆಗೆಲಸದ ಜತೆಗೆ ಅಮ್ಮ ದನ ಸಾಕುತ್ತಿದ್ದರು. ಹಾಲು ಕರೆದು ಮಾರುತ್ತಿದ್ದರು. ಹಾಲು ಮಾರಿ ಬಂದ ಹಣದಿಂದ ಮನೆಯ ಹೆಚ್ಚಿನ ಖರ್ಚುವೆಚ್ಚ ಸಾಗುತ್ತಿತ್ತು. ನಮ್ಮ ಶಾಲೆಯ ಫೀಸು, ಬಸ್ ಚಾರ್ಜು, ಪುಸ್ತಕ, ಬಟ್ಟೆಬರೆಯ ಖರ್ಚೂ ಅದರಲ್ಲೇ ಆಗುತ್ತಿತ್ತು. ಉಳಿದರೆ ಅದೇ ಉಳಿ ತಾಯ! ಎಷ್ಟೋ ಸಲ ಅನಿರೀಕ್ಷಿತ ಖರ್ಚು, ಮನೆಮಂದಿಗೆ ಅನಾರೋಗ್ಯವಾದಾಗ ಈ ಮೊತ್ತ ಆಪದ್ಧನವಾಗಿ ಒದಗಿಬರುತ್ತಿತ್ತು. ಅಮ್ಮನ ದುಡಿಮೆಯಿಂದ ಇಷ್ಟೆಲ್ಲ ಸಾಧ್ಯವಾಗುತ್ತಿತ್ತು ಎಂದ ಮೇಲೆ ಇದು ಅವಳ ಸಂಪಾದನೆ ಅಲ್ಲವೆ? ಮನೆಯಲ್ಲಿರುವ ಗೃಹಿಣಿ ಅಮ್ಮ ಇಷ್ಟೆಲ್ಲ ಕೆಲಸ ಕೈಗೊಂಡು ಸಂಪಾದಿಸುವಾಗ ಇದು ಯಾವ ಆಫೀಸಿನ ಕೆಲಸಕ್ಕೆ ಕಡಿಮೆ ಅಂತ ನನಗೆ ಅನಿಸಿದ್ದರಲ್ಲಿ ತಪ್ಪೇನೂ ಇಲ್ಲ.
ಮನೆ ಖರ್ಚು ನೋಡಿಕೊಳ್ಳುತ್ತಿದ್ದ ಅಮ್ಮನನಗೆ ಇನ್ನೂ ನೆನಪಿದೆ, ನಮ್ಮಮ್ಮ ಬೆಳಿಗ್ಗೆ ಬೇಗ ಏಳುವಾಗಲೇ ನಮ್ಮನ್ನೆಲ್ಲ ಅವಳೊಂದಿಗೆ ಎಬ್ಬಿಸುತ್ತಿದ್ದಳು. ದನಗಳಿಗೆ ಅಕ್ಕಚ್ಚು ಬಿಸಿಮಾಡಿ ಕುಡಿಯಲಿಕ್ಕಿಟ್ಟು ಹುಲ್ಲು ಹಾಕಿ ಹಾಲು ಕರೆದರೆ ಶಾಲೆಗೆ ಹೋಗುವ ಮೊದಲು ಆ ಹಾಲನ್ನು ಡೈರಿಗೆ ಸಾಗಿಸುವ ಕೆಲಸ ನನ್ನ ಪಾಲಿಗಿತ್ತು. ನನ್ನ ಈ ಕೆಲಸಕ್ಕೆ ಅಮ್ಮ ನನಗೆ ಹಾಲಿನಿಂದ ಬಂದ ದುಡ್ಡಲ್ಲಿ ಒಂದೆರಡು ರೂಪಾಯಿಯನ್ನು ಕೊಡುತ್ತಿದ್ದಳು. ಅದನ್ನು ನಾನು ಖರ್ಚು ಮಾಡದೆ ಹಾಗೇ ಸಂಗ್ರಹಿಸಿ ಇಡುತ್ತಿದ್ದೆ. ಅದೇ ಹಣದಲ್ಲಿ ನನ್ನಿಷ್ಟದ ಚೂಡಿದಾರ್, ಲೆದರ್ ಪರ್ಸು ಕೊಂಡದ್ದು ನಾನಿನ್ನೂ ಮರೆತಿಲ್ಲ. ಒಮ್ಮೆ ಶಾಲೆಯ ಪ್ರವಾಸಕ್ಕೆ ಹೋಗಲು ಅಪ್ಪನಲ್ಲಿ ಎಷ್ಟು ಸಲ ಕೇಳಿದರೂ ಅವರು ಹಣ ಕೊಡದೆ ಇದ್ದಾಗ ಅಮ್ಮ ನನ್ನನ್ನು ಪ್ರವಾಸಕ್ಕೆ ಕಳುಹಿಸಿದ್ದರು. ಅಮ್ಮ ನನಗೆ ಹಣ ಕೊಡದಿದ್ದರೆ ಖಂಡಿತ ನಾನು ಪ್ರವಾಸಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ.
ನನ್ನಮ್ಮ, ನಮ್ಮಜ್ಜಿಯಂತೆ ಕೃಷಿ, ಹೈನುಗಾರಿಕೆಯ ಮೂಲಕವೇ ಅದೆಷ್ಟೋ ಮಹಿಳೆಯರು ಸ್ವಾವಲಂಬನೆಯ ಬದುಕನ್ನು ಬಾಳುತ್ತಿದ್ದರು. ಕೃಷಿ ಇಲ್ಲದ ಮನೆಯ ಗೃಹಿಣಿಯರು ಗಂಡ ದುಡಿದು ತಂದದ್ದನ್ನು ಚೊಕ್ಕವಾಗಿ ಸಂಭಾಳಿಸಿ ಮನೆ ನಡೆಸುವುದರ ಜತೆಗೆ ಮನೆಯಲ್ಲೇ ಬೀಡಿ ಕಟ್ಟುವುದು, ತಿಂಡಿ ಮಾಡಿ ಮಾರುವುದು, ಕಾರ್ಖಾನೆಯಿಂದ ಗೇರುಬೀಜ ತಂದು ಸುಳಿಯುವುದು, ಬಟ್ಟೆ ಹೊಲಿಯುವುದು, ಹೂ ಮಾರುವುದು, ದನ-ಕೋಳಿ ಸಾಕುವುದು- ಹೀಗೆ ಒಂದಲ್ಲ ಒಂದು ಕಸುಬು ಅವರಿಗೆ ಆದಾಯ ಗಳಿಸಲು ಪೂರಕವಾಗುತ್ತಿತ್ತು. ಆ ಮೂಲಕ ಸ್ವಂತ ದುಡಿಮೆಯಿಂದ ಗೌರವಯುತ ಜೀವನ ನಡೆಸುತ್ತಿದ್ದರು.
ಅಂದಿನ ಗೃಹಿಣಿಯರ ಸ್ವಾವಲಂಬನೆಯ ಬದುಕಿನ ಚಿತ್ರಣ ಈ ರೀತಿ ಇದ್ದರೆ, ಇಂದಿನ ಗೃಹಿಣಿಯರ ಚಿತ್ರಣ ಬದಲಾಗಿದೆ. ಕಳೆದ ನೂರು ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗಿಹೋಗಿರುವುದರಿಂದ ಕಾಲಕ್ಕೆ ತಕ್ಕಂತೆ ಆಗುತ್ತಿರುವ ಬದಲಾವಣೆಗೆ ಅವರೂ ಸ್ಪಂದಿಸುತ್ತಾ ಬಂದಿದ್ದಾರೆ.
.
ನನ್ನ ನೆರೆಮನೆಯಾಕೆ ವೀಣಾ. ಅವಳು ಗೃಹಿಣಿ. ಮನೆಯಲ್ಲಿ ಟೈಲರಿಂಗ್ ಮಾಡುತ್ತಾಳೆ. ಚೂಡಿದಾರ, ಸೀರೆ ಬ್ಲೌಸ್ ತುಂಬಾ ಚೆನ್ನಾಗಿ ಹೊಲಿಯುತ್ತಾಳೆ. ನಾನು ಮತ್ತು ನಮ್ಮ ಅಕ್ಕಪಕ್ಕದವರೆಲ್ಲ ಅವಳಲ್ಲೇ ಬಟ್ಟೆ ಹೊಲಿಸಿಕೊಳ್ಳುತ್ತೇವೆ. ರೇಟೂ ಕಡಿಮೆ. ಪೇಟೆಯ ಟೈಲರ್‌ಗಳಷ್ಟು ದುಬಾರಿಯಲ್ಲ. ಮೊದಮೊದಲು ಬರೇ ಸ್ಟಿಚ್ಚಿಂಗ್ ಮಾತ್ರ ಮಾಡುತ್ತಿದ್ದ ಅವಳು ಈಗ ಸೀರೆಗೆ ಕುಚ್ಚು , ಎಂಬ್ರಾಯಿಡರಿ ಮಾಡುತ್ತಾಳೆ. ಅವಳತ್ತೆ ಅವಳಿಗೆ ಸೀರೆ ಪಾಲ್ಸ್, ಗುಬ್ಬಿ ಹಾಕಲು ನೆರವಾಗುತ್ತಾರೆ. ಮದುವೆ ಸೀಸನ್, ಹಬ್ಬ-ಹರಿದಿನಗಳಲ್ಲಿ ಅವಳು ತುಂಬಾ ಬ್ಯುಸಿ. ಈಗ ಅವಳು ವಿದ್ಯುತ್‌ಚಾಲಿತ ಹೊಲಿಗೆ ಮೆಶಿನ್ ಕೊಂಡಿದ್ದಾಳೆ. “ಮೊದಲಿನ ಹಾಗೆ ಮೆಶಿನ್ ತುಳಿಯುವ ಕಷ್ಟವಿಲ್ಲ” ಎಂದು ಹೇಳುವಾಗ ಅವಳ ಮುಖದಲ್ಲಿ ಸ್ವಂತ ದುಡಿಮೆಯ ಬಗ್ಗೆ ಅಭಿಮಾನ ಕಾಣಿಸುತ್ತದೆ.
.
ನನ್ನ ಚಿಕ್ಕಮ್ಮ ಸುಮತಿ ಪೋಸ್ಟಲ್ ಆರ್‌ಡಿ ಏಜನ್ಸಿ ತಗೊಂಡಿದ್ದಾರೆ. ಅವರು ಬಹಳ ಚುರುಕು ಸ್ವಭಾವದವರು. ಅರಳು ಹುರಿದಂತೆ ಮಾತನಾಡುತ್ತಾರೆ. ತಮ್ಮ ಬಂಧುಬಳಗದವರಲ್ಲಿ, ಗೆಳೆಯ-ಗೆಳತಿಯರು, ನೆರೆಹೊರೆಯವರಲ್ಲಿ ಉಳಿತಾಯ ಯೋಜನೆಯ ಬಗ್ಗೆ ಅವರಿಗೆ ಮನವರಿಕೆ ಮಾಡಿ ಅವರಿಂದ ಆರ್‌ಡಿ ಖಾತೆ ತೆರೆಸಿ ಹಣ ಸಂಗ್ರಹಿಸು ತ್ತಾರೆ. ಮನೆಗೆಲಸವೆಲ್ಲ ಮುಗಿದ ಮೇಲೆ ಮಳೆಯಿರಲಿ, ಬಿಸಿಲಿರಲಿ ಯಾವುದನ್ನೂ ಲೆಕ್ಕಿಸದೆ ಮನೆ ಮನೆಗೆ ಆರ್‌ಡಿ ಕಲೆಕ್ಷನ್‌ಗೆ ತೆರಳುತ್ತಾರೆ. ಆಗಾಗ ಪೋಸ್ಪಾಫೀಸು-ಮನೆ ಅಂತ ಓಡಾಡುತ್ತಿರುತ್ತಾರೆ. ಅವರು ಸಂಗ್ರಹಿಸಿದ ಹಣದ ಮೊತ್ತದ ಮೇಲೆ ಕಮಿಷನ್ ಬರುತ್ತದೆ. ಇದರಿಂದ ಅವರು ಸ್ವಾವಲಂಬಿಯಾಗಿದ್ದಲ್ಲದೆ, ಅವರ ಈ ಪುಟ್ಟ ಸಂಪಾದನೆ ಚಿಕ್ಕಪ್ಪನ ವರಿಗೂ ಸಂಸಾರವನ್ನು ತೂಗಿಸಿಕೊಂಡು ಹೋಗಲು ಸಹಾಯಕವಾಗಿದೆ.
.
ನನ್ನ ಗೆಳತಿ ಮಾಲತಿ. ಅವಳೂ ಗೃಹಿಣಿ. ಮನೆಯಲ್ಲೇ ಒಂದು ಕೋಣೆಯನ್ನು ಪಾರ್ಲರ್ ಆಗಿ ಪರಿವರ್ತಿಸಿ ಬ್ಯೂಟಿಷಿಯನ್ ಕೆಲಸ ಮಾಡುತ್ತಾಳೆ. ಐಬ್ರೋ, ಹೇರ್‌ಕಟ್, ಫೇಶಿಯಲ್ ಮಾಡುತ್ತಾಳೆ. ಮದುವೆ, ನಿಶ್ಚಿತಾರ್ಥದಂಥ ಸಮಾರಂಭಗಳಲ್ಲಿ ಮನೆಗೂ ಹೋಗಿ ಮದುಮಕ್ಕಳಿಗೆ, ಮನೆಮಂದಿಗೆ ಮೇಕಪ್ ಮಾಡುತ್ತಾಳೆ. ಪೇಟೆಯ ಪಾರ್ಲರ್‌ಗಳ ಬ್ಯೂಟಿಷಿಯನ್ಸ್‌ಗಳನ್ನು ಕರೆಸಿದರೆ ಸಿಕ್ಕಾಪಟ್ಟೆ ದುಬಾರಿ. ಹಾಗಾಗಿ ಹತ್ತಿರದ ಬ್ಯೂಟಿಷಿಯನ್‌ಗಳಿಗೆ ಬೇಡಿಕೆ ಹೆಚ್ಚು. ಮನೆಯಲ್ಲೇ ಕಮ್ಮಿ ಕಮ್ಮಿ ತಿಂಗಳಿಗೆ ಸಾವಿರಾರು ರೂಪಾಯಿ ಸಂಪಾದನೆ ಮಾಡುತ್ತಾಳೆ.
.
ನನ್ನ ನಾದಿನಿ ಪ್ರೇಮಾ ಮನೆಯಲ್ಲಿಯೇ ಇರುವವಳು. ಪದವೀಧರೆ. ಮನೆಗೆಲಸದಲ್ಲೂ ತುಂಬಾ ಜಾಣೆ. ಅವರ ಮನೆಗೆ ಹೋದರೆ ಏನೋ ಒಂಥರಾ ಖುಶಿಯಾಗುತ್ತದೆ. ಯಾಕೆಂದರೆ, ಅವಳು ನೀಟಾಗಿ ಇರುತ್ತಾಳೆ. ಜತೆಗೆ ಮನೆಯನ್ನೂ ಅಂದವಾಗಿ ಓಪ್ಪ-ಓರಣವಾಗಿ ಇಡುತ್ತಾಳೆ. ಸಾಮಾನ್ಯವಾಗಿ ಮನೆಯಲ್ಲಿ ಇರುವ ಹೆಣ್ಣುಮಕ್ಕಳು “ನಮಗೇನು ಆಗಬೇಕು, ನಾವು ಮನೆಯಲ್ಲಿ ಇರುವವರಲ್ಲ” ಎಂದು ಉದಾಸೀನತೆ ತೋರುತ್ತಾರೆ. ಆದರೆ, ಇವಳು ಹಾಗಲ್ಲ. ಮನೆಗೆಲಸ, ಮಕ್ಕಳ ಲಾಲನೆ-ಪಾಲನೆಯೊಂದಿಗೆ ಸಂಜೆ ಶಾಲೆಯಿಂದ ಬರುವ ಮಕ್ಕಳಿಗೆ ಟ್ಯೂಷನ್ ಕೊಡುತ್ತಾಳೆ. ಅವಳು ಹೇಳುತ್ತಾಳೆ, “”ನನಗೇನಾದರೂ ಬೇಕೆನಿಸಿದರೆ ನಾನೇ ಕೊಂಡುಕೊಳ್ಳುತ್ತೇನೆ. ಗಂಡನೆದುರು ಕೈಚಾಚುವುದಿಲ್ಲ” ಎಂದು ಹೆಮ್ಮೆಯಿಂದ ಹೇಳುತ್ತಿರುತ್ತಾಳೆ.
.
ಮನೆಯಲ್ಲಿಯೇ ಅಡುಗೆ-ಗೃಹಕೃತ್ಯ ಮಾಡಿಕೊಂಡು ಇರಬೇಕಾಗಿದ್ದ ಮಹಿಳೆ ಇಂದು ಕಲಿತು ಉದ್ಯೋಗಕ್ಕೆ ಹೋಗಿ ದುಡಿದು ಸ್ವಾವಲಂಬಿಯಾಗಿದ್ದಾಳೆ. ಆದರೆ, ವಿದ್ಯೆ ಕಲಿತು ಕೆಲಸ ಸಿಕ್ಕದೆಯೋ ಅಥವಾ ಅನಿವಾರ್ಯ ಕಾರಣಗಳಿಂದ ಕೆಲಸಕ್ಕೆ ಹೋಗಲು ಆಗದೆ ಮನೆಯಲ್ಲೇ ಉಳಿಯಬೇಕಾದ ಸಂದರ್ಭ ಬಂದರೂ ತಮ್ಮ ಪ್ರತಿಭೆ-ಕೌಶಲ, ಬುದ್ಧಿವಂತಿಕೆಯ ಮೂಲಕವೇ ದುಡಿಯುವ ಸಾಮರ್ಥ್ಯ ಅವರಲ್ಲಿದೆ. ಮನೆಯಲ್ಲೇ ತಮಗೆ ಬೇಕಾದ ವಾತಾವರಣವನ್ನು ಸೃಷ್ಟಿ ಮಾಡಿಕೊಂಡು ಆ ಮೂಲಕ ತಮ್ಮ ಸ್ವಂತದ ಖರ್ಚಿಗೆ ಆಗುವಷ್ಟು ಮಾತ್ರವಲ್ಲದೆ, ಕುಟುಂಬದ ಅಗತ್ಯಗಳನ್ನೂ ಪೂರೈಸುವಷ್ಟು ಆದಾಯ ಗಳಿಸುವಲ್ಲಿಯೂ ಸಶಕ್ತರಾಗಿದ್ದಾರೆ. ಟೈಲರಿಂಗ್‌ನಿಂದ ಹಿಡಿದು ಬ್ಯೂಟಿಷಿಯನ್, ಟ್ಯೂಷನ್ ಕ್ಲಾಸ್, ಆರ್‌ಡಿ, ಜೀವವಿಮೆ, ಫ್ಯಾಷನ್ ಡಿಸೈನಿಂಗ್, ಕೆಟರಿಂಗ್, ಡ್ಯಾ®Õ…, ಸಂಗೀತ, ಪೈಂಟಿಂಗ್, ಬರವಣಿಗೆ- ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿರುವ ಮಹಿಳೆಯರು ಎಲ್ಲೆಲ್ಲೂ ಕಾಣಸಿಗುತ್ತಾರೆ. ಮನೆಯಲ್ಲಿಯೇ ಕುಳಿತು ಪಾಠ ಓದುವುದು, ಮನೆಯಲ್ಲಿಯೇ ಡಿಗ್ರಿ ಪಡೆಯುವುದು. ಕಂಪ್ಯೂಟರ್, ಇಂಟರ್‌ನೆಟ್ ಬಳಸಿ ಮನೆಯಿಂದಲೇ “ವರ್ಕ್ ಫ್ರಂ ಹೋಮ್’ ಮಾಡುವವರೂ ಸಾಕಷ್ಟು ಮಂದಿ ಇದ್ದಾರೆ. ಗೃಹಿಣಿಯರು ಇಂದು ಈ ಮಟ್ಟಿಗೆ ಬೆಳೆದಿರುವ ಪರಿಯಂತೂ ಅದ್ಭುತ! ಒಟ್ಟಿನಲ್ಲಿ ಹೇಳುವುದಾದರೆ, ಒಂದು ಸಂಸಾರದ ಯಶಸ್ಸಿನಲ್ಲಿ ಮಹಿಳೆ ಗಂಡನಷ್ಟೇ ಮಹತ್ವದ ಪಾತ್ರ ವಹಿಸಿದ್ದಾಳೆ ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯ.
-ಸ್ವಾತಿ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.