ತೆಂಕನಿಡಿಯೂರು ಕನ್ನಡ ಕುಟುಂಬಕ್ಕೆ ಹತ್ರಾವದಿ ಸಂಭ್ರಮ
Team Udayavani, Apr 19, 2019, 6:00 AM IST
ಗ್ರಾಮೀಣ ಪರಿಸರದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ ದೊರೆಯಬೇಕೆಂಬ ಸರಕಾರದ ಕಾಳಜಿಯ ಹಿನ್ನಲೆಯಲ್ಲಿ ತಲೆಯೆತ್ತಿದ ವಿದ್ಯಾಸಂಸ್ಥೆಯೇ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು, ಉಡುಪಿ. ಈ ಶಿಕ್ಷಣ ಸಂಸ್ಥೆ ತನ್ನ ಒಡಲಲ್ಲಿ ಅನೇಕ ಮಂದಿ ಶಿಕ್ಷಣ ಅಪೇಕ್ಷಿ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ನೀಗಿಸಿ, ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸಾಂಸ್ಕೃತಿಕ ಛಾಪು ಮೂಡಿಸಿದ ಶೈಕ್ಷಣಿಕ ಸಂಸ್ಥೆ.
ಆರಂಭದಲ್ಲಿ ಪದವಿ ತರಗತಿಗಳೊಂದಿಗೆ ಆರಂಭಗೊಂಡ ಈ ವಿದ್ಯಾಲಯ, ಮುಂದಿನ ದಿನಗಳಲ್ಲಿ ಆರು ವಿವಿಧ ವಿಷಯಕ್ಕೆ ಸಂಬಂಧಿಸಿದ ಸ್ನಾತಕೋತ್ತರ ವಿಭಾಗಗಳನ್ನು ಒಳಗೊಂಡು ಉಡುಪಿ ಪರಿಸರದ ಉನ್ನತ ಶಿಕ್ಷಣದ ಕನಸು ಹೊತ್ತಯುವ ಸಮುದಾಯಕ್ಕೆ ಆಶಾಕಿರಣವಾಗಿ ಪರಿಣಮಿಸಿದ್ದು ಇತಿಹಾಸ. ಇದರ ಭಾಗವಾದ ಕನ್ನಡ ಸ್ನಾತಕೋತ್ತರ ವಿಭಾಗದ ಶೈಕ್ಷಣಿಕ ಸಾಧನೆಯ ಮೈಲಿಗಲ್ಲನ್ನು ಗಮನಿಸಿದರೆ ಒಂದಷ್ಟು ಸಾಹಿತ್ಯಿಕ ಕನ್ನಡ ಮನಸ್ಸುಗಳನ್ನು ಅರಳಿಸಿ, ಬದುಕಿಗೆ ಅನ್ನದ ಭದ್ರತೆಯನ್ನು ನೀಡಿದ್ದನ್ನು ನೆನಪಿಸಲೇಬೇಕು. ಈ ಕನ್ನಡ ಕುಟುಂಬ ನಡೆದ ಹಾದಿಯೆ ರೋಮಾಂಚಕ. ಈ ನೆಪದಲ್ಲಿ “ಹತ್ರಾವದಿ’ ಎನ್ನುವ ವಿಶೇಷ ಕಾರ್ಯಕ್ರಮದೊಂದಿಗೆ ನಾವೆಲ್ಲ ಸೇರುವ ಕಾತರ. 2009ರಲ್ಲಿ ಆರಂಭಗೊಂಡ ಈ ಕನ್ನಡ ಕುಟುಂಬದ ರೂವಾರಿ ಅಂದಿನ ವಿಭಾಗ ಮುಖ್ಯಸ್ಥರಾದ ಡಾ| ಗಣನಾಥ ಶೆಟ್ಟಿ ಎಕ್ಕಾರು. ದೂರದ ಮಂಗಳೂರಿನ ಕೋಣಾಜೆಗೆ ಕನ್ನಡ ಸಾಹಿತ್ಯವನ್ನು ಅಭ್ಯಸಿಸಲು ತೆರಳಬೇಕಿದ್ದ ಉಡುಪಿ ಜಿಲ್ಲೆಯ ಕನ್ನಡ ವಿದ್ಯಾರ್ಥಿಗಳಿಗೆ ಅಂಗೈಯಲ್ಲಿಯೆ ಅವಕಾಶ ಕೊಟ್ಟ ಕೀರ್ತಿ ಎಕ್ಕಾರು ಅವರಿಗೆ ಸಲ್ಲುತ್ತದೆ. ಅವರ ಪದೋನ್ನತಿಯ ನಂತರದಲ್ಲಿ ವಿಭಾಗದ ಸಾರಥ್ಯವಹಿಸಿದ ಡಾ| ಜಯಪ್ರಕಾಶ ಶೆಟ್ಟಿ ಎಚ್. ಇವರ ಕಾಳಜಿಯಿಂದಾಗಿ ಕನ್ನಡ ಕುಟುಂಬ ದಶಮಾನೋತ್ಸವದ ಸವಿಯನ್ನು ಸವಿಯುವಂತಾಗಿದೆ. ಈ ನಡುವೆ ಈ ವಿಭಾಗವನ್ನು ಕಟ್ಟುವಲ್ಲಿ ಡಾ| ನಿಕೇತನ ಅವರ ಸೇವೆ ಅನುಪಮವಾದುದು.
ನಾನೋರ್ವ ಹಳೆವಿದ್ಯಾರ್ಥಿಯಾಗಿ ನನ್ನ ಈ ಕುಟುಂಬದ ಶೈಕ್ಷಣಿಕ, ಸಾಂಸ್ಕೃತಿಕ ಸಾಧನೆಯನ್ನು ಅವಲೋಕಿಸಿದಾಗ ಕೃತಜ್ಞತೆಯಭಾವ ಮೂಡುತ್ತದೆ. ಕಾರಣ ನನ್ನೀ ಕನ್ನಡ ವಿಭಾಗ ಯಾವುದೇ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಕಡಿಮೆಯೆನಿಸದೆ, 2009 ರಿಂದ 2019 ವರೆಗಿನ ಈ ಅವಧಿಯಲ್ಲಿ ನಾಲ್ಕು ಪ್ರಥಮ ರ್‍ಯಾಂಕು, ಐದು ದ್ವಿತೀಯ ರ್‍ಯಾಂಕು ಹಾಗೂ ಮೂರು ತೃತೀಯ ರ್‍ಯಾಂಕುಗಳನ್ನು ಇಲ್ಲಿಯ ಕನ್ನಡ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ. ನೂರಾರು ವಿದ್ಯಾರ್ಥಿಗಳು ಸಾಹಿತ್ಯಿಕ ಬದುಕು ಕಟ್ಟಿಸಿದ ಈ ವಿಭಾಗದ ಕರೆಗೆ ಓಗೊಟ್ಟು ಕನ್ನಡ ಸಾರಸ್ವತ ಲೋಕದ ಕವಿಗಳು, ಲೇಖಕರು, ವಿಮರ್ಶಕರು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಾಹಿತ್ಯಿಕ ಸಂವಾದವನ್ನು ನಡೆಸಿದ್ದಾರೆ. ಅಂಥವರುಗಳಲ್ಲಿ ಸಾರಾ ಅಬೂಬಕರ್, ನಿಸಾರ್ ಅಹಮದ್, ವೈದೇಹಿ, ಜಯಂತ್ ಕಾಯ್ಕಿಣಿ, ಬಂಜಗೆರೆ ಜಯಪ್ರಕಾಶ್, ಕಾಳೇಗೌಡ ನಾಗವಾರ ಮೊದಲಾದವರ ಮೆಚ್ಚುಗೆಗೆ ಈ ಕನ್ನಡ ಕುಟುಂಬ ಪಾತ್ರವಾಗಿದೆ. ಅಚ್ಚುಕಟ್ಟಾದ ಗ್ರಂಥಾಲಯ ವ್ಯವಸ್ಥೆ ಓದಿಗೆ ಪೂರಕವೆನಿಸಿದ್ದಲದಲ್ಲದೆ, ಇಲ್ಲಿಂದ ಸ್ನಾತಕೋತ್ತರ ಅಧ್ಯಯನ ಮುಗಿಸುತ್ತಲೆ ಸುಮಾರು ಇಪ್ಪತ್ತೆದು ಮಂದಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್), ಕೆ.ಸೆಟ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ, ಕೆಲವು ಮಿತ್ರರು ಸರಕಾರ ನೀಡುವ ಸಂಶೋಧನ ಫೆಲೋಶಿಪ್ (ಜೆ.ಆರ್.ಎಫ್) ಗಳನ್ನು ಪಡೆದುದು ಈ ಕನ್ನಡ ಸ್ನಾತಕೋತ್ತರ ವಿಭಾಗದ ಹಿರಿಮೆಗೆ ಸಾಕ್ಷಿ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಇಲ್ಲಿಯ ವಿದ್ಯಾರ್ಥಿಗಳು, ನಮ್ಮ ಜಿಲ್ಲೆಯ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ದುಡಿಯುತ್ತಿದ್ದಾರೆ. ಈ ಎಲ್ಲ ಸಾಧನೆಯ ಬೆನ್ನೆಲುಬಾಗಿ, ಕನ್ನಡ ಕುಟುಂಬದ ಬೌದ್ಧಿಕ ವಿಕಾಸಕ್ಕೆ ಸೇವೆಸಲ್ಲಿಸಿದ ಅಲ್ಲಿಯ ಪ್ರಾಂಶುಪಾಲರು, ಉಪನ್ಯಾಸಕ ವೃಂದದವರಾದ ಪ್ರೊ. ರಾಧಾಕೃಷ್ಣ, ಡಾ| ವೆಂಕಟೇಶ ಎಚ್. ಕೆ., ರತ್ನಮಾಲಾ, ಪ್ರತಾಪcಂದ್ರ ಶೆಟ್ಟಿ- ಹೀಗೆ ಹಲವರ ಸೇವೆ ಅನುಪಮವೇ ಸರಿ. ಇಂದು ರಂಗಭೂಮಿ ಕ್ಷೇತ್ರದಲ್ಲಿ ನಟನಾಗಿ, ನಿರ್ದೇಶಕನಾಗಿ ನಾಡಿನಾದ್ಯಂತ ಪ್ರದರ್ಶನ ನೀಡಿ, ದೆಹಲಿಯ ಎನ್‌ಎಸ್‌ಡಿಯವರೆಗೆ ಗುರುತಿಸಲ್ಪಟ್ಟ ಪ್ರಶಾಂತ ಉದ್ಯಾವರ, ಯಕ್ಷಗಾನ, ಸಾಹಿತ್ಯಿಕವಾಗಿ ಗುರುತಿಸಲ್ಪಡುತ್ತಿರುವ ಶಿವಕುಮಾರ್ ಇಲ್ಲಿಯ ಹಳೆ ವಿದ್ಯಾರ್ಥಿಗಳೇ. ಇಂದು ನಾನು ಉಡುಪಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಕನ್ನಡ ವಿಭಾದ ಉಪನ್ಯಾಸಕನಾಗಿ, ಎನ್.ಎಸ್.ಎಸ್. ಅಧಿಕಾರಿಯಾಗಿ ಸೇವೆಸಲ್ಲಿಸಲು ನನ್ನ ಕನ್ನಡ ಕುಟುಂಬ ನೀಡಿದ ನೈತಿಕ, ಬೌದ್ಧಿಕ ಬೆಂಬಲ ಅಗಾಧ.
ಹೀಗೆ ಕನ್ನಡ ಕುಟುಂಬದ ಸಾಹಿತ್ಯ ಪಯಣ ಮುಂದುವರಿಯಲಿ; ಇನ್ನಷ್ಟು ಸಾಹಿತ್ಯದ ಮೂರ್ತಿಗಳು ರೂಪುಗೊಳ್ಳಲಿ; ಸಾಗಿದ್ದು ಕಡಿಮೆ, ಸಾಗಬೇಕಾಗಿದ್ದು ಅಗಾಧ; ಜ್ಞಾನದ ಕಡಲೆನ್ನುವ ಈ ವಿದ್ಯಾಲಯವು ಕರಾವಳಿಯನ್ನಲ್ಲದೆ ನಾಡಲೆಲ್ಲ ಕಂಪು ಪಸರಿಸಲಿ ಎಂದಷ್ಟೇ ಹಾರೈಸಬಲ್ಲೆ!
ಶಮಂತ ಕುಮಾರ್ ಕೆ. ಎಸ್.
ಹಳೆ ವಿದ್ಯಾರ್ಥಿ
ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.