ಸಿಕ್ಕಿಬಿದ್ದ ಮೊಸಳೆ ಹಾಗೂ ಸಿಕ್ಕಾಗಿ ಬಿದ್ದ ಬದುಕು
Team Udayavani, Sep 6, 2019, 5:00 AM IST
ಒಮ್ಮೆ ಒಬ್ಬ ತಾಯಿ ಹಾಗೂ ಮಗು ನದಿಯ ದಡದಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ ಮಗುವನ್ನು ಒಂದು ಮೊಸಳೆ ಹಿಡಿಯಿತಂತೆ. ತಾಯಿ ಹೆದರಿ ಬೊಬ್ಬೆ ಹಾಕಿದಾಗ ಮೊಸಳೆ ಮಾತನಾಡತೊಡಗಿತಂತೆ. (ಇದು ಶಂಕರಾಚಾರ್ಯರ ಕಥೆಯಲ್ಲ !) “”ನಾನು ನಿನಗೊಂದು ಪ್ರಶ್ನೆ ಕೇಳುತ್ತೇನೆ. ಸರಿ ಉತ್ತರ ಕೊಟ್ಟರೆ ಮಗುವನ್ನು ಮರಳಿಸುತ್ತೇನೆ. ತಪ್ಪು ಉತ್ತರ ಕೊಟ್ಟರೆ ಕೊಲ್ಲುತ್ತೇನೆ” ಎಂದಿತಂತೆ. ಬೇರೆ ದಾರಿ ಕಾಣದೆ ತಾಯಿ ಒಪ್ಪಿಕೊಂಡಳಂತೆ. ಮೊಸಳೆ ಕೇಳಿದ ಪ್ರಶ್ನೆ ಹೀಗಿತ್ತು :
“”ನಾನು ನಿನ್ನ ಮಗನನ್ನು ಮರಳಿಸುತ್ತೇನೆಯೆ ಇಲ್ಲವೆ?”
ಆ ತಾಯಿ ಭಯದಿಂದ “”ಇಲ್ಲ” ಅಂದಳು. ಅವಳು ಹೇಳಿದ ಉತ್ತರ ಸರಿ ಎಂದಾದಲ್ಲಿ ಮೊಸಳೆ ಮಗುವನ್ನು ಹಿಂತಿರುಗಿಸಬೇಕು. ತಪ್ಪಾಗಿದ್ದರೆ, ಮೊಸಳೆಗೆ ಮಗುವನ್ನು ಮರಳಿಸುವ ಮನಸ್ಸು ಇದೆ ಎಂದಾಯಿತು. ಉತ್ತರ ತಪ್ಪು , ಹಾಗಾಗಿ ಮಗುವನ್ನು ಹಿಂದೆ ಕೊಡುವ ಹಾಗಿಲ್ಲ.
ಯಾವ ಉತ್ತರ ಕೊಟ್ಟರೂ ಮೊಸಳೆಗೆ ಸಂಕಷ್ಟವೇ. ಹಿಡಿದ ಬೇಟೆಯನ್ನು ಹಿಡಿದು ದೂರ ಹೋಗುವ ಬದಲು ಮಾತನಾಡುವ ಅಧಿಕ ಪ್ರಸಂಗ ಮಾಡಿ ಸಿಕ್ಕಿ ಬಿದ್ದ ಮೊಸಳೆ ಈಗ ಏನು ಮಾಡಬೇಕು? ತಾಯಿಯ ಉತ್ತರ ಸರಿಯಾಗಿದ್ದರೂ ತಪ್ಪಾಗಿದ್ದರೂ ಮಾತಿನ ಹಂಗಿಗೆ ಬಿದ್ದ ಮೊಸಳೆ ತನ್ನ ಮನಸ್ಸಿಗೆ ವಿರುದ್ಧವಾದುದನ್ನೇ ಮಾಡುವ ಸ್ಥಿತಿ ಬಂದೊದಗುತ್ತದೆ.
ಭಾರಿ ಜೋರಿನ ಉಪನ್ಯಾಸಕರು ಯಾವುದೋ ಒಂದು ವಿಚಾರದ ಬಗ್ಗೆ ಎಲ್ಲಿಂದಲೂ ಕಾಪಿ ಹೊಡೆಯದೆ ಸ್ವಂತವಾಗಿ ಬರೆದು ತರಲು ಹೇಳಿದ್ದಾರೆ. ಮನೆಗೆ ಹೋಗುವ ಅವಸರದಲ್ಲಿದ್ದ ಲೈಬ್ರೆರಿಯನ್‌ನಿಂದ ಬೈಸಿಕೊಂಡು, ಹೇಗೂ ಪುಸ್ತಕ ತಂದು, ಮನೆಗೆ ಬಂದು, ಮೆದುಳಿಗೆ ಪೂರ್ತಿ ಕೆಲಸ ಕೊಟ್ಟು, ಇಂಟರ್‌ನೆಟ್‌ನಿಂದ ಕದ್ದದ್ದು ಗೊತ್ತಾಗದ ಹಾಗೆ ಕದ್ದು, ರಾತ್ರಿಯಿಡೀ ಕುಳಿತು ಅಸೈನ್‌ಮೆಂಟ್ ಬರೆದಾಗಿದೆ. ಮರುದಿನ ತರಗತಿಗೆ ಬಂದಾಗ ಜೀವದ ಗೆಳೆಯನೋ ಗೆಳತಿಯೋ ನಿನ್ನೆ ತಲೆನೋವಿತ್ತೆಂದೂ, ಒಂದು ಸಾಲೂ ಬರೆಯಲಾಗಲಿಲ್ಲವೆಂಬ ನೆಪದೊಂದಿಗೆ ತಯಾರಾಗಿರುತ್ತಾರೆ. ಉಪನ್ಯಾಸಕರು ಬೇರೊಬ್ಬರ ಅಸೈನ್‌ಮೆಂಟ್ ಕಾಪಿ ಮಾಡಬಾರದೆಂದು ತಾಕೀತು ಮಾಡಿ ಆಗಿದೆ. ಅವರಿಗಿರುವ ಕೋಪವೋ, ದೂರ್ವಾಸ ಮುನಿ ಅವರ ಕಿರುಬೆರಳಿಗೆ ಸಮವಾದಾನು. ಮೊದಲೇ ಅವರಿಗೆ ಎನ್‌ಎಸ್‌ಎಸ್ ಎಂದೆಲ್ಲ ತರಗತಿ ತಪ್ಪಿಸಿ ತಿರುಗುತ್ತಾರೆಂಬ ಕೋಪವಿದೆ. ಈಗ ಜೀವದ ಮಿತ್ರರ ಕರೆಗೆ ಓಗೊಟ್ಟೆವೋ ಜೀವಕ್ಕೆ ಸಂಚಕಾರ, ಓಗೊಡಲಿಲ್ಲವೋ ತರಗತಿಯಲ್ಲಿ ಜೀವನ ನಡೆಸುವುದೆಂತು? ಅಂದುಕೊಂಡದ್ದನ್ನ ಮಾಡಿದರೂ ಅಡ್ಡಿ, ಮಾಡದಿದ್ದರೂ ಅಡ್ಡಿ!
ನಮ್ಮ ಬದುಕೂ ಇಷ್ಟೇ ಅಲ್ಲವೆ! ಮೊಸಳೆಯ ಹಾಗೆ ಯಾವುದೋ ಉತ್ಸಾಹದಲ್ಲಿ ಮಾತನಾಡುತ್ತೇವೆ. ಎಂದೋ ಆಡಿದ ಮಾತಿನಿಂದಾಗಿ ಎಂದೋ ಸಿಕ್ಕಿ ಬೀಳುತ್ತೇವೆ. ಬದುಕನ್ನು ಸಿಕ್ಕು ಸಿಕ್ಕಾಗಿಸಿ “ಈ ಸಿಕ್ಕೇ ದುಃಖಕ್ಕೆ ಮೂಲ’ ಎಂದು ವೈರಾಗ್ಯ ಮಾತಾಡುತ್ತೇವೆ. ಆಯುಧ ಹಿಡಿಯಲ್ಲ- ಅಂತ ಶಪಥ ಮಾಡಿದ್ದ ಕೃಷ್ಣನೇ ಮಾತು ಮುರಿದಿದ್ದನಂತೆ. ನಮ್ಮಂಥ ಚಂಚಲಿಗರ ಪಾಡೇನು? ಲೋಕವಿಖ್ಯಾತರಾದ ಗಾಯಕರೋ ನೃತ್ಯಪಟುಗಳ್ಳೋ, ನೂರು ಧಿಗಿಣ ತೆಗೆಯುವ ಆಟದ ಕಲಾವಿದರೋ ಆಗುವ ಆಸೆಯಿಂದಲೇ ಆಯಾ ತರಗತಿ ಸೇರಿರುತ್ತೇವೆ. ಎಷ್ಟೋ ಸಲ ನಮ್ಮ ಉದ್ಯೋಗ-ಅಂಕ, ರೆಸ್ಯೂಮ್‌ಗೆ ಗತ್ತು ಕೊಡುವ ಸರ್ಟಿಫಿಕೇಟ್ ಕೋರ್ಸ್, ಇಂಟರ್ನ್ ಶಿಪ್‌ಗ್ಳ ದೆಸೆಯಿಂದ ಮನಸ್ಸಿದ್ದರೂ ಬೇಕಾದುದನ್ನ ಮಾಡುವಂತಿಲ್ಲ. ಮನಸ್ಸಿರದಿದ್ದರೂ ಬೇಡವಾದುದನ್ನು ಮಾಡದೇ ಇರುವಂತಿಲ್ಲ.
ಕಾಲೇಜ್ ಡೇಗೆ ಯಾವಾಗಲೂ ನಿರೂಪಣೆ ಮಾಡುತ್ತಿದ್ದವರು, ಯಾವಾಗಲೂ ಪ್ರಾರ್ಥನೆ ಹಾಡುತ್ತಿದ್ದವರು, ಎನ್‌ಎಸ್‌ಎಸ್‌ನಲ್ಲಿ ಗಟ್ಟಿ ದನಿ ತೆಗೆದು ಎಲ್ಲರ ಬಾಯಿ ಮುಚ್ಚಿಸುತ್ತಿದ್ದವರು, ಒಂದೇ ಒಂದು ಗಂಟೆಯಲ್ಲಿ ಅಷ್ಟು ದೊಡ್ಡ ರಂಗೋಲಿ ಹಾಕುತ್ತಿದ್ದವರು, ತರಗತಿಯಲ್ಲಿ ಎದ್ದು ನಿಂತು ಉತ್ತರ ಹೇಳುವ ಧೈರ್ಯವಿಲ್ಲದಿದ್ದರೂ ಚಕಚಕನೆ ಲೆಕ್ಕ ಮಾಡಿ ಬೆರಗು ಹುಟ್ಟಿಸುತ್ತಿದ್ದವರು, ಕಾಲೇಜಿನ ಕಾರ್ಯಕ್ರಮಕ್ಕೆ ಬೀದಿ ಬೀದಿ ಸುತ್ತಿ ಹಣ ಸಂಗ್ರಹಿಸಿ ತಂದವರು, ಐಸ್‌ಕ್ರೀಮ್ ತಿಂದು ರ್ಯಾಪರ್ ಕೆಳಗೆ ಹಾಕಿದವರನ್ನು ಕಂಡು ತಲೆ ಸರಿಯಿಲ್ಲವೇನ್ರಿ ಅಂತ ಗದರಿದವರು- ಬದುಕಿನ ಸಿಕ್ಕಿನಲ್ಲಿ ಸಿಕ್ಕಿಕೊಂಡು, ಸಿಕ್ಕಿದ ಅವಕಾಶವನ್ನು ಬಳಸುವ ಸಮಯ ಹಾಗೂ ಗಡಿದಾಟಿ ಹೊರಗೆ ಬರುವ ಧೈರ್ಯ ಇಲ್ಲದೆ ಎಲ್ಲಿ ಹೋಗುತ್ತಾರೊ! ಉದ್ಯೋಗ ಸಿಕ್ಕಿ- ತಿಂಗಳಿಗೆ ಹತ್ತು ಸಾವಿರ ಉಳಿಸಿದರೂ ವರ್ಷಕ್ಕೆ ಒಂದು ಲಕ್ಷ ಇಪ್ಪತ್ತು ಸಾವಿರ ಅಷ್ಟೇ-ಆಗೋದು ಅನ್ನುವ ಲೆಕ್ಕದಲ್ಲಿ ಕಳೆದು ಹೋಗುತ್ತಾರೆ, ಇಲ್ಲವೇ ಮದುವೆಯಾಗಿ ಮನೆಕೆಲಸ ಹಾಗೂ ಮಕ್ಕಳ ಮನೆಕೆಲಸದಲ್ಲಿ ಕಳೆದುಹೋಗುತ್ತಾರೆ !
ನಮ್ಮ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮೂರು ದಿನ ಸಂಭ್ರಮ ಎಂಬ ಹೆಸರಲ್ಲಿ ಪ್ರತಿಭಾ ಪ್ರದರ್ಶನ ವರ್ಷಕ್ಕೊಮ್ಮೆ ನಡೆಯುತ್ತದೆ. ಸಾಂಸ್ಕೃತಿಕ ಲೋಕವೇ ಸೃಷ್ಟಿಯಾಗುತ್ತದೆ ! ನಮ್ಮ ಕ್ಯಾಂಪಸ್‌ನಲ್ಲಿ ಎಂತೆಂಥ ಪ್ರತಿಭೆಗಳಿವೆ ಎಂದು ಆಶ್ಚರ್ಯ ಪಡುತ್ತಿರುವಂತೆಯೇ, ಮೂರು ದಿನಗಳ ಸಂಭ್ರಮ ಮುಗಿದು ಎಲ್ಲರೂ ಯೂನಿವರ್ಸಿಟಿಯ ದುಃಖದಲ್ಲಿ ಕಳೆದುಹೋಗುತ್ತಾರೆ. ಹಾಡು- ಕುಣಿತ- ನಾಟಕ ಹೀಗೆ ಲೆಕ್ಕಕ್ಕೆ ಸಿಗದಷ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೇನು, ಪಿ. ಜಿ. ಮುಗಿಯುತ್ತಿದ್ದಂತೆಯೇ ಕೆಲಸ ಸಿಗಲಿಲ್ಲ ಎಂಬ ಗೋಳು ಬಿಟ್ಟರೆ ಮತ್ತೇನೂ ಉಳಿಯುವುದಿಲ್ಲ. ಎರಡು ವರ್ಷಗಳ ಹಿಂದೆ ನಾನು ಡಿಗ್ರಿ ಮುಗಿಸಿದ್ದಾಗ ನನ್ನ ಗೆಳತಿಯರು ಅನೇಕರು ಉದ್ಯೋಗಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿದರೂ ಟ್ಯಾಲೆಂಟು ಬಿಡಲಾರೆವು ಅಂದದ್ದು ಉತ್ತರಕುಮಾರನ ಉತ್ಸಾಹದಲ್ಲಿ ಅಂತ ಈಗೀಗ ತಿಳಿಯುತ್ತಿದೆ. ನಾನೇನೋ ಎಮ್‌ಎಸ್‌ಸಿ ಸೇರಿದೆ. ಕ್ಯಾಂಪಸ್‌ನಲ್ಲಿ ಏನೇ ಕಾರ್ಯಕ್ರಮವಿದ್ದರೆ ತರಗತಿಗೆ ಬಂಕ್ ಹೊಡೆದು ಹೋಗುವಂಥ ಉತ್ಸಾಹ ಹಾಗೂ ಪ್ರೋತ್ಸಾಹ ಕಡಿಮೆ ಇದ್ದರೂ ಇಲ್ಲವೇ ಇಲ್ಲ ಅನ್ನುವ ಹಾಗಿಲ್ಲ. ಡಿಗ್ರಿಯಲ್ಲಿದ್ದಾಗ ಹಾಡು-ನಾಟಕ-ಆಟ ಅಂತ ಸಾಕಷ್ಟು ಕುಣಿಯುತ್ತಿದ್ದಾಗ ನಮ್ಮ ಶಿಕ್ಷಕರೆಲ್ಲರೂ “ನಿಮಗೆಲ್ಲಾ ಉತ್ತಮ ಭವಿಷ್ಯವಿದೆ’ ಅನ್ನುತ್ತಿದ್ದರು. ಈಗ ಉದ್ಯೊಗಕ್ಕೆ ಹೋಗುತ್ತಿರುವ ಅವರೆಲ್ಲರನ್ನು ಕಂಡಾಗ ಭವಿಷ್ಯ-ಮೊಸಳೆಯ ಹಾಗೆ ಸಿಕ್ಕಲ್ಲಿ ಸಿಕ್ಕಿ ಬಿದ್ದು ಮಗುವನ್ನು ಮರಳಿಸಿ-ಕೆಲಸದ ಆಫೀಸ್‌ನಲ್ಲಿ ಬಿದ್ದುಕೊಂಡಿದೆ ಅಂತನಿಸುತ್ತಿದೆ.
ಸಿಕ್ಕಿದ ಬೇಟೆಯನ್ನು ಹಿಡಿದುಕೊಂಡು ಹೋಗುವ ಬದಲು ಪ್ರಶ್ನೆ ಕೇಳುವ ಅಧಿಕಪ್ರಸಂಗ ಮೊಸಳೆಗೆ ಯಾಕೆ ಬೇಕಿತ್ತು ಅಂತ ಕೇಳ್ಳೋದು, ಒಳಗಿರುವ ಕವಿ- ಕಲಾವಿದರನ್ನ ಮರೆತು ಬದುಕುತ್ತಿರುವವರು “ಇಂಥ ಆಸೆಗಳೆಲ್ಲ ಯಾಕೆ ಹುಟ್ಟುತ್ತವೆ? ಇದರ ಅರ್ಥವೇನು?’ ಅಂತ ಕೇಳಿದ ಹಾಗೆ-ಕೇಳುವುದೂ ತಪ್ಪು, ಉತ್ತರ ದಕ್ಕುವುದೂ ಕಷ್ಟ! ಬದುಕಿನ ಪ್ರತಿ ನಡೆಗೂ ಅರ್ಥ ಹುಡುಕಲೇ ಬೇಕಾಗಿಲ್ಲ! ಅರ್ಥ ಹುಡುಕಿದಷ್ಟೂ ಸಿಕ್ಕು ಮತ್ತಷ್ಟು ಸಿಕ್ಕಾಗುತ್ತದೆಯೇನೋ!
ಯಶಸ್ವಿನಿ ಕದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.