ಅಪ್ಪಾ…ನೀನಂದ್ರೆ ನನಗಿಷ್ಟ !
Team Udayavani, Mar 16, 2018, 7:30 AM IST
ನನಗೆ ಸುಮಾರು 12 ವರ್ಷವಿರಬೇಕು. ನಮ್ಮ ಪಕ್ಕದ ಊರಿನ ಜಾತ್ರೆಗೆ ಅಪ್ಪ ನನ್ನನ್ನೂ ಅಣ್ಣನನ್ನೂ ಕರೆದುಕೊಂಡು ಹೋಗಿದ್ದರು. ತುಂಬಾ ಜನಜಂಗುಳಿಯಿದ್ದ ಪ್ರದೇಶವದು. ಎಲ್ಲೂ ಕೈತಪ್ಪಿ ಹೋಗದಂತೆ ಒಂದು ಕೈಯ್ಯಲ್ಲಿ ಅಣ್ಣನನ್ನು ಇನ್ನೊಂದು ಕೈಯ್ಯಲ್ಲಿ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ಸಂತೆ ಪೂರ್ತಿ ಸುತ್ತಾಡಿಸುತ್ತಿದ್ದರು. ತೇರು ಎಳೆದು ಜಾತ್ರೆ ಮುಗಿಯುವ ಹೊತ್ತು ಬಂದರೂ ಮನೆಗೆ ಬಾರದೆ ಅಲ್ಲೇ ಇರಬೇಕು ಎಂಬ ನನ್ನ ಹಠಕ್ಕೆ ಅಪ್ಪನೂ ಮಣೆ ಹಾಕುತ್ತಿದ್ದರು. ಕೇಳಿದ್ದನ್ನೆಲ್ಲಾ ಕೊಡಿಸುವ ಅಪ್ಪನ ಜೇಬು ಮನೆಗೆ ಕಾಲಿಡುವ ಹೊತ್ತಿಗಾಗಲೇ ಪೂರ್ತಿ ಖಾಲಿಯಾಗಿರುತ್ತಿತ್ತು.
ಅಮ್ಮ ಮಕ್ಕಳನ್ನು ಹೆಚ್ಚು ಮುದ್ದಿಸುತ್ತಾಳೆ ಎಂದು ಕೆಲವರು ಹೇಳುವುದುಂಟು. ಆದರೆ ಅಪ್ಪ ಯಾರಿಗೂ ಕಮ್ಮಿಯಿಲ್ಲ. ಅದರಲ್ಲೂ ಹುಡುಗಿಯರಿಗಂತೂ ಅಪ್ಪ ಅಂದ್ರೆ ಎಲ್ಲದಕ್ಕಿಂತಲೂ ಮಿಗಿಲು. ಅದಾಗ ನಾನು ಸಣ್ಣ ಹುಡುಗಿ. ಸುಮಾರು 9 ವರ್ಷವಿರಬೇಕು. ನಮ್ಮ ಪುಟ್ಟ ಮನೆಯಲ್ಲಿ ಇದ್ದದ್ದು ನಾನು ಅಪ್ಪ, ಅಮ್ಮ ಮತ್ತು ಅಣ್ಣ. ಮಳೆಗಾಲದ ಸಂದರ್ಭವದು. ವಿದ್ಯುತ್ ಸಮಸ್ಯೆ ಜಾಸ್ತಿಯಾಗಿಯೇ ಇತ್ತು. ಬಚ್ಚಲ ಮನೆ ತುಂಬಾ ದೂರವಿತ್ತು. ಕರೆಂಟ್ ಹೋಗಿದ್ದ ಕಾರಣ ಅಪ್ಪ ಸೀಮೆಎಣ್ಣೆ ದೀಪವನ್ನು ಉರಿಸಿ ಗಾಳಿಗೆ ಆರದಂತೆ ಒಂದು ಕೈಯಲ್ಲಿ ದೀಪವನ್ನು ಹಿಡಿದುಕೊಂಡು ಕಂಕುಳಲ್ಲಿ ನನ್ನನ್ನು ಕೂರಿಸಿಕೊಂಡು ಅಷ್ಟು ದೂರ ಸಾಗಿ ಸ್ನಾನ ಮಾಡಿಸಿ ಕರೆದುಕೊಂಡು ಬರುತ್ತಿದ್ದ ದಿನ ಈಗಲೂ ನನಗೆ ಚೆನ್ನಾಗಿ ನೆನಪಿದೆ.
ಮನೆಯಿಂದಲೇ ನನ್ನ ಆಟ, ಪಾಠ ಪ್ರಾರಂಭವಾದದ್ದು. ಮುಂಜಾನೆ ನಾನು ಏಳುವುದಕ್ಕೆ ಮೊದಲೇ ಅಪ್ಪನ ಅರ್ಧದಷ್ಟು ಕೆಲಸಗಳು ಮುಗಿದಿರುತ್ತಿದ್ದವು. ಶಾಲೆಗೆ ಹೊರಟಾಗ ಅಪ್ಪನ ಮುಂದೆ ಹಾಜರು. “ಅಪ್ಪಾ… ಒಂದು ರುಪಾಯಿ ಇದ್ರೆ ಕೊಡಪ್ಪಾ… ಐಸ್‌ಕ್ಯಾಂಡಿ ತಗೋಬೇಕು’ ಅಂದಾಗ ಜೇಬಿಗೆ ಕೈ ಹಾಕಿ ನನಗೂ ಅಣ್ಣನಿಗೂ ಒಂದು ರೂ. ಕೊಡುತ್ತಿದ್ದರು. ಹೊಸ ಯೂನಿಫಾರಮ್, ವರ್ಷಕ್ಕೆ ಎರಡು ಜೊತೆ ಬಟ್ಟೆ ತರುವುದನ್ನು ನೋಡಿದ್ದೇನೆ. ಆದರೆ, ಅಪ್ಪ ಅವರಿಗೆ ಏನನ್ನೂ ಕೊಂಡವರಲ್ಲ. ಇಂದಿಗೂ ತನ್ನ ಪಾಲಿನದ್ದನ್ನು ನಮಗೆ ನೀಡಿ ಇರುವುದರಲ್ಲೇ ತೃಪ್ತಿ ಪಟ್ಟುಕೊಳ್ಳುತ್ತಾರೆ.
ನಮ್ಮನ್ನು ನೋಡಿಕೊಳ್ಳಲು ಅದೆಷ್ಟು ಕಷ್ಟ ಪಟ್ಟಿದ್ದಾರೋ? ಅಕ್ಕಪಕ್ಕದ ಮನೆಯವರ ಕಿರಿಕಿರಿ, ದಿನನಿತ್ಯದ ಜಗಳ, ತೋಟದ ಕೆಲಸ, ಇದರ ಮಧ್ಯೆ ಮನೆ ನಡೆಸುವ ದೊಡ್ಡ ಜವಾಬ್ದಾರಿ ಅಪ್ಪನ ಹೆಗಲ ಮೇಲೆ. ನಮ್ಮನ್ನು ಶಾಲೆಗೆ ಕಳಿಸಲು ಫೀಸು, ಹೀಗೆ ದುಡ್ಡು ಖರ್ಚಾಗುತ್ತಿತ್ತೇ ಹೊರತು ಕೈಯ್ಯಲ್ಲಿ ಸ್ವಲ್ಪವೂ ಉಳಿಯುತ್ತಿರಲಿಲ್ಲ. ಆದರೂ ಹಿಂಜರಿಯದೆ ಬಂದ ಕಷ್ಟಗಳನ್ನೆಲ್ಲಾ ನುಂಗಿಕೊಂಡು ನಮ್ಮನ್ನು ಇಷ್ಟು ದೊಡ್ಡವರನ್ನಾಗಿ ಮಾಡಿದ್ದಾರೆ.
ದಿನನಿತ್ಯ ಅಮ್ಮ ಕಷ್ಟಪಡುವುದನ್ನು ನೋಡಿದ್ದೇನೆ. ಕಣ್ಣೀರು ಹಾಕಿದ್ದನ್ನು ನೋಡಿದ್ದೇನೆ. ಆದರೆ ಅಪ್ಪ ಯಾಕೆ ಅಳುವುದಿಲ್ಲ. ಅವ್ರಿಗೆ ಅಳು ಬರೋದಿಲ್ವಾ? ಅನ್ನೋ ನನ್ನ ಪ್ರಶ್ನೆಗೆ ಅದೊಂದು ದಿನ ಉತ್ತರ ಸಿಕ್ಕಿತ್ತು. ಬಾಗಿಲ ಸಣ್ಣ ಸಂದಿಯಲ್ಲಿ ನಿಂತು ಅಪ್ಪ ಅತ್ತಿದ್ದನ್ನು ನಾನು ಕಣ್ಣಾರೆ ಕಂಡಿದ್ದೆ. ಕಾರಣ, ತನಗಾಗಿ ಅಲ್ಲ, ಬೇರೆಯವರಿಗಾಗಿ. ಅಪ್ಪನ ಮನಸ್ಸು ಮಿಡಿಯುತ್ತದೆ ಎಂಬುದು ನನಗೆ ಅರಿವಾದ ದಿನವದು. ನನ್ನ ಕಣ್ಣಲ್ಲೂ ಸಣ್ಣಗೆ ಕಣ್ಣಹನಿ ಜಾರಿ ನೆಲದ ಮೇಲೆ ಬಿದ್ದಿತ್ತು. ಕೇವಲ ಅಪ್ಪನ ಗಡಸು ಧ್ವನಿ, ಉದ್ಗಾರದ ಮಾತು, ದಿಟ್ಟಿಸಿ ನೋಡಿದಾಗ ಕೆಂಪಗಾಗುತ್ತಿದ್ದ ಕಣ್ಣಲ್ಲಿ ಅಂದು ಅದೇ ಕೆಂಪಗಾಗಿದ್ದ ಕಣ್ಣು, ಆದರೆ, ಸ್ವಲ್ಪ ನೀರನ್ನೂ ಕಂಡಿದ್ದೆ.
ಮುಂದಿನ ವಿದ್ಯಾಭ್ಯಾಸಕ್ಕೆ ನಾನು ಇಷ್ಟಪಟ್ಟ ಕಾಲೇಜಿಗೆ ನನ್ನನ್ನು ಸೇರಿಸಿ, ಫೀಸಿಗೆ ಎಷ್ಟೇ ಖರ್ಚಾದರೂ ಅದನ್ನು ಭರ್ತಿ ಮಾಡಿ, ಕೊನೆಗೆ “ಖರ್ಚಿಗೆ ಇಟ್ಟುಕೋ… ಬೇಕಾಗುತ್ತದೆ’ ಎಂದು ಹೇಳುವ ಅಪ್ಪ. ನೂರು ರುಪಾಯಿ ಕೇಳಿದಾಗ “ಅಷ್ಟು ಸಾಕಾ ಬೇರೆ ಏನಕ್ಕಾದ್ರೂ ಬೇಕಾಗುತ್ತದೆ’ ಎಂದು ಹೇಳಿ ಇನ್ನೂ ಸ್ವಲ್ಪ ದುಡ್ಡನ್ನು ಕೈಗೆ ಇಡುತ್ತಿದ್ದರು. ತಾನು ನಡೆದರೂ ಪರಾÌಗಿಲ್ಲ. ಮಕ್ಕಳು ಚೆನ್ನಾಗಿರಬೇಕು ಎಂಬ ಮನೋಭಾವನೆ. ಮಕ್ಕಳಿಗಾಗಿಯೇ ಅಪ್ಪ ಹುಟ್ಟಿದ್ದಾರೆಯೇ ಎಂದೊಮ್ಮೆ ಅನ್ನಿಸುತ್ತಿತ್ತು. ಈ ಪ್ರಪಂಚದಲ್ಲಿ ಎಲ್ಲಾ ಕಷ್ಟವನ್ನು ಆ ದೇವರು ನನ್ನ ಅಪ್ಪನಿಗೆ ಯಾಕೆ ನೀಡಿದ್ದಾನೆ ಎಂಬ ಪ್ರಶ್ನೆ ಈಗಲೂ ನನ್ನ ಮನಸ್ಸಿನಲ್ಲಿ ಹಾಗೆಯೇ ಕೊರೆಯುತ್ತಿದೆ. ಯಾರಿಗೂ ಕೆಡುಕು ಬಯಸಿದವರಲ್ಲ ನನ್ನಪ್ಪ. ಸಹೋದರರ ಕಷ್ಟದಲ್ಲೂ ಪಾಲು ತೆಗೆದುಕೊಂಡವರು. ಆದರೆ ಕೊನೆಗೆ ಅವರಿಗೆ ಸಿಕ್ಕಿದ್ದು ಏನು?
ಅಪ್ಪ ಕಂಡ ಕಷ್ಟ ಅಷ್ಟಿಷ್ಟಲ್ಲ. ಬಳಗದವರ ಚುಚ್ಚುಮಾತು, ಅಸಹ್ಯ ನಡೆ, ಮಾನಸಿಕ-ದೈಹಿಕ ನೋವು. ನೆನಪಿಸಿಕೊಂಡಾಗ ಕಣ್ಣಂಚಿನಲ್ಲಿ ನೀರು ಉಕ್ಕಿ ಬರುತ್ತದೆ. ನಾನೂ ನೋಡಲು ಅಪ್ಪನಂತೇ ಎಂದು ಹೆಚ್ಚಿನವರು ಹೇಳುವುದನ್ನು ನೋಡಿದ್ದೇನೆ. ಆಗ ನನಗೆ ಹೆಮ್ಮೆ ಎನಿಸುತ್ತದೆ. ಎಷ್ಟಾದರೂ ನಾನು ಅಪ್ಪನ ಮಗಳಲ್ಲವೇ? ಹಾಗೆಯೇ ಇರುತ್ತೇನೆ ಎಂದು ಅವರಿಗೆ ತಿರುಗಿಸಿ ಹೇಳಿದ್ದೂ ಇದೆ. ಆಗ ಅಪ್ಪನ ಮುಖದಲ್ಲೊಮ್ಮೆ ನಗು ನೋಡುತ್ತಿದ್ದಾ. ನನಗೂ ಅಷ್ಟೇ ಬೇಕಾದದ್ದು.
“ಅಪ್ಪಾ… ಐ ಲವ್ ಯೂ ಪಾ’ ಹಾಡು ಬಂದಾಗ ಅದೆಷ್ಟು ಬಾರಿ ಕೇಳಿದ್ದಾನೋ ಗೊತ್ತಿಲ್ಲ. “ಪುಷ್ಪಕ ವಿಮಾನ’ ಸಿನೆಮಾ ಬಂದಾಗಲಂತೂ ಮುಗಿಲು ಮುಟ್ಟುವ ತನಕ ಅತ್ತಿದ್ದೆ. ಸಿನೆಮಾ ಮಾಡಿದ ನಿರ್ದೇಶಕರಿಗೆ ಮನಸ್ಸಿನಲ್ಲೇ ನೂರು ಬಾರಿ ಥ್ಯಾಂಕ್ಸ್ ಹೇಳಿದ್ದೆ. ಅಪ್ಪನ ಬಗೆಗಿನ ಹಾಡು, ಸಿನೆಮಾ ಇಷ್ಟು ಚೆನ್ನಾಗಿ ಮಾಡಬಹುದೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಅತ್ತಾಗ ಮುದ್ದಿಸೋ ಮಡಿಲು, ಹೊಡೆದರೂ, ಬೈದರೂ ಕೇಳಿಸಿಕೊಳ್ಳುವ ಮನಸ್ಸು. ಅಪ್ಪಾ ನಿನಗೆ ನೀನೇ ಸಾಟಿ. ನಿನ್ನಂಥ ಗೆಳೆಯ ಮತ್ತೂಬ್ಬ ಸಿಗಲು ಸಾಧ್ಯನೂ ಇಲ್ಲ. ಅಪ್ಪಾ ನೀನಂದ್ರೆ ನನಗಿಷ್ಟಪ್ಪಾ.
ವೇದಾವತಿ ಗೌಡ ಎಸ್. ಡಿ. ಎಂ. ಕಾಲೇಜು ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.