ವಿದ್ಯಾರ್ಥಿಗಳು ಅರಳಿಸಿದ ಮೈಸೂರು ಮಲ್ಲಿಗೆ
Team Udayavani, Jan 13, 2017, 3:45 AM IST
ಕೇವಲ ಮೂವತ್ತೈದು ನಿಮಿಷಗಳ ಆ ಕಿರುನಾಟಕದಲ್ಲಿ ಗೆಳೆತನ, ಪ್ರೀತಿ, ಪ್ರಣಯ, ವಿರಹ, ಅಪನಂಬಿಕೆ, ಸೈನಿಕನ ಹೋರಾಟ, ಮಾತೃದೇಶಭಕ್ತಿ, ಸಾವು, ದುಃಖ, ಅಮ್ಮನ ವಾತ್ಸಲ್ಯ, ಹೆತ್ತವರ ತ್ಯಾಗ ವೃದ್ಧಾಶ್ರಮ- ಹೀಗೆ ಹತ್ತು ಹಲವು ವೈವಿಧ್ಯಮಯ ಅರ್ಥಪೂರ್ಣ ಸನ್ನಿವೇಶಗಳಿದ್ದವು. ಹಾಡುಗಳೇ ಪ್ರಧಾನವಾಗಿದ್ದ ನಾಟಕದಲ್ಲಿನ ಸೀಮಿತ ಸಂಭಾಷಣೆಗಳು ನಾಟಕದ ಗಂಭೀರವಾದ ಆಶಯವನ್ನು ಸಮರ್ಥವಾಗಿ ಪೇಕ್ಷಕರಿಗೆ ಮುಟ್ಟಿಸಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ, ತಂದೆತಾಯಿಗಳ ತ್ಯಾಗ ಪ್ರೀತಿಯನ್ನು ಅರ್ಥಮಾಡಿಕೊಳ್ಳದೆ ಅವರನ್ನು ತಿರಸ್ಕರಿಸುವ ಮಕ್ಕಳಿಗೆ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಜಾಗ್ರತಗೊಳಿಸುವಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮಾಡುವಲ್ಲಿ “ಮೈಸೂರು ಮಲ್ಲಿಗೆ’ ಯಶಸ್ವಿಯಾಗಿ ಮೂಡಿಬಂದಿತ್ತು.
ಹೌದು, ಮೈಸೂರು ಮಲ್ಲಿಗೆ ಎನ್ನುವ ಕಿರುನಾಟಕದ ಮೂಲಕ ಒಬ್ಬ ಕವಿಯ ಬದುಕಿನ ಕಾಲ್ಪನಿಕ ಆದರೆ, ನಿಜಬದುಕಿಗೆ ಹತ್ತಿರವೆನಿಸುವಂತಹ ಉತ್ತಮ ಕತೆಯನ್ನು ಅಭಿನಯಿಸಿ ತೋರಿಸಿದ್ದು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು.
ಶಾರದೆಯನ್ನು ಪ್ರೀತಿಸಿ ಮದುವೆಯಾಗುವ ಕವಿ, ಬಸುರಿ ಹೆಂಡತಿಯ ಶೀಲ ಶಂಕಿಸಿ ತವರು ಮನೆಗೆ ಅಟ್ಟುತ್ತಾನೆ. ಬಳೆಗಾರ ಅವರನ್ನು ಒಂದುಗೂಡಿಸುತ್ತಾನೆ. ಮೊದಲ ಮಗು ಸತ್ತ ಬಳಿಕ ಕವಿಯ ಜೀವನದಲ್ಲಿ ವಿಷಾದ, ಬಡತನ ಎರಡೂ ಆವರಿಸುತ್ತದೆ. ಕಾಲ ಸಾಗುತ್ತದೆ. ಮಿಲಿಟರಿ ಸೇರುವ ಹಿರಿಯ ಮಗ ಯುದ್ಧದಲ್ಲಿ ಮಡಿಯುತ್ತಾನೆ. ಅಮ್ಮನ ಕುರುಡುತನಕ್ಕೆ ಕಾರಣ ತಿಳಿಯದೆ ಅದೇ ಕಾರಣಕ್ಕೆ ಸಣ್ಣಮಗ ಶಾರದೆಯನ್ನು ದ್ವೇಷಿಸುತ್ತಾ ಬೆಳೆಯುತ್ತಾನೆ. ಮುಂದೆ ಹೆತ್ತವರನ್ನು ಕೇಳದೆ ಮದುವೆ ಆಗುತ್ತಾನೆ. ವಿಷಯ ತಿಳಿದು ಅಘಾತಗೊಂಡು ಶಾರದೆ ಸಾಯುತ್ತಾಳೆ.
ಬಂದ ಸೊಸೆ ಮಾವನನ್ನು ವೃದ್ಧಾಶ್ರಮಕ್ಕೆ ಸೇರಿಸುವಂತೆ ಗಂಡನ ಕಿವಿಯೂದುತ್ತಾಳೆ. ಮಗನೂ ತಲೆದೂಗುತ್ತಾನೆ. ಕವಿ ಮಗನಿಗೆ ಸುದೀರ್ಘ ಪತ್ರವೊಂದನ್ನು ಬರೆದು ಮನೆ ಬಿಟ್ಟು ಹೊರಡುತ್ತಾನೆ. ಮುಂದೇನು ಎನ್ನುವುದನ್ನು ಪ್ರೇಕ್ಷಕರಿಗೆ ಬಿಟ್ಟು ನಾಟಕ ಅಂತ್ಯಗೊಳ್ಳುತ್ತದೆ.
ತನ್ನ ವೇಗದ ಶೈಲಿ, ಆಕರ್ಷಕವಾದ ಹಿನ್ನೆಲೆ ಸಂಗೀತ, ಹಾಡುಗಳು ಮತ್ತು ಮನಮುಟ್ಟುವಂಥ ಮಕ್ಕಳ ಸಮರ್ಥ ಅಭಿನಯದಿಂದ ಇಡೀ ನಾಟಕ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಂಡಿತ್ತು. ನಾಟಕದುದ್ದಕ್ಕೂ ಕೆ. ಎಸ್. ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಕವನ ಸಂಕಲನದ ಹಲವಾರು ಹಾಡುಗಳನ್ನು ಬಳಸಿಕೊಳ್ಳಲಾಗಿತ್ತು. ಸಂದಭೋìಚಿತವಾಗಿ ವಿವಿಧ ಕವಿಗಳ ಹಾಡುಗಳನ್ನು ಜನಪದ ಸಾಹಿತ್ಯವನ್ನು , ಹಿನ್ನೆಲೆ ಸಂಗೀತವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ನಾಟಕವು ಪ್ರೇಕ್ಷಕರ ಮನಮುಟ್ಟುವಲ್ಲಿ ಸಫಲವಾಯಿತು. ದುಃಖದ ಸನ್ನಿವೇಶಗಳಲ್ಲಿ ಮಕ್ಕಳ ಕಣ್ಣೀರು ಪ್ರೇಕ್ಷಕರಲ್ಲೂ ಕಣ್ಣೀರು ಜಿನುಗಿಸಿದ್ದು ನಾಟಕದ ಸಫಲತೆಗೆ ಸಾಕ್ಷಿಯಾಗಿತ್ತು. ಈ ಕಿರುನಾಟಕವನ್ನು ರಚಿಸಿ ಸಿದ್ಧ ಸಂಗೀತ ಅಳವಡಿಸಿ ನಿರ್ದೇಶಿಸಿದ್ದು ಅಲ್ಲಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್. ಗಂಗೊಳ್ಳಿ.
ಮೂವತ್ತೈದು ನಿಮಿಷಗಳ ಕಿರುನಾಟಕದಲ್ಲಿ ದೊಡ್ಡದೊಂದು ಕತೆಯನ್ನು ಕಟ್ಟಿಕೊಡುವ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವ ಪ್ರಯತ್ನ ಸಂಪೂರ್ಣ ಯಶಸ್ವಿಯಾಯಿತು. ಶಾಲಾ ವಾರ್ಷಿಕೋತ್ಸವದ ಸಂದರ್ಭವಾದ್ದರಿಂದ ಸಂಜೆಯ ಬೆಳಕಿನಲ್ಲಿ ಕೃತಕ ನೆರಳು ಬೆಳಕಿನ ನಿರೀಕ್ಷಿತ ಸಂಯೋಜನೆ ಸಾಧ್ಯವಾಗಲಿಲ್ಲ. ಧ್ವನಿವರ್ಧಕಗಳ ಗುಣಮಟ್ಟ ಮತ್ತಷ್ಟು ಉತ್ತಮವಾಗಿರಬೇಕಿತ್ತು. ಒಂದೆರಡು ಕಡೆ ಸಣ್ಣ ತಪ್ಪುಗಳಾದರೂ ಕೂಡ ಅದನ್ನು ತೋರಗೊಡದೆ ಅಭಿನಯದ ಮೂಲಕವೇ ಸರಿದೂಗಿಸಿಕೊಂಡಿದ್ದು ಮಕ್ಕಳ ಸಾಮರ್ಥ್ಯಕ್ಕೆ ಸಾಕ್ಷಿ. ಒಟ್ಟಿನಲ್ಲಿ ಒಂದು ಉತ್ತಮವಾದ ವಿಭಿನ್ನ ನಾಟಕವನ್ನು ನೋಡಿದ ಧನ್ಯತೆ ಪ್ರೇಕ್ಷಕರಲ್ಲಿ ಮೂಡಿತ್ತು.
ನಾಟಕದ ಪಾತ್ರಧಾರಿಗಳಾಗಿ ಆಶಾ, ಅಕ್ಷತಾ, ನಿಶ್ಮಿತಾ, ದೀûಾ, ರಜನಿ, ಸ್ನೇಹಾ, ವಾಸುಕಿ, ಸಂಜಯ್, ಅಶ್ಮಿತಾ ಮತ್ತು ರಂಜಿನಿ ತಮ್ಮ ಪ್ರೌಢ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದರು. ಹೆಚ್ಚಿನ ಉಪಕರಣಗಳ ಬಳಕೆ ಇಲ್ಲದೆ ನಾಟಕದ ವೇದಿಕೆಯನ್ನು ಇಬ್ಭಾಗವಾಗಿ ಬಳಸಿಕೊಂಡು ವಿವಿಧ ರೂಪಕಗಳನ್ನು ಬಿಂಬಿಸಿದ್ದು ಗಮನ ಸೆಳೆಯಿತು. ಒಂದೇ ಪಾತ್ರಗಳನ್ನು ಇಬ್ಬರು ಅಭಿನಯಿಸಿದ್ದು, ಮುಖ್ಯ ಪಾತ್ರಧಾರಿಗಳನ್ನು ಸ್ತಬ್ಧವಾಗಿಸಿ ಹಿನ್ನೆಲೆಯಲ್ಲಿ ಹಳೆಯ ಕತೆಯನ್ನು ದೃಶ್ಯಗಳ ಮೂಲಕ ಕಟ್ಟಿಕೊಡುವ ಪ್ರಯತ್ನಗಳು ನಾಟಕದ ಮೆರುಗನ್ನು ಹೆಚ್ಚಿಸಿದ್ದವು. ಒಂದು ಕಡೆ ಮದುಮಕ್ಕಳ ಸರಸ, ಇನ್ನೊಂದು ಕಡೆ ತಾಯಿಯ ಸಾವು ಎರಡನ್ನೂ ಒಂದೇ ಸಲಕ್ಕೆ ಅಭಿನಯಿಸಿದ ದೃಶ್ಯ ವಿಶೇಷವಾಗಿ ಮೂಡಿಬಂದು ಜನರ ಹೃದಯಗಳನ್ನು ತಟ್ಟಿತ್ತು.
ಕೇವಲ ಸಾಮಾಜಿಕ ಹಾಸ್ಯ ನಾಟಕಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತಿರುವ ಶಾಲಾ-ಕಾಲೇಜುಗಳ ವಾರ್ಷಿಕ ಸಮಾರಂಭಗಳಲ್ಲಿ ಇಂತಹ ಸೃಜನಶೀಲ ಗಂಭೀರ ಚಿಂತನೆಗಳ ನಾಟಕದ ಮೂಲಕವೂ ಜನರನ್ನು ಗೆಲ್ಲಬಹುದು ಎಂದು ತೋರಿಸಿಕೊಟ್ಟ ಶ್ರೇಯಸ್ಸು ನಿರ್ದೇಶಕ ನರೇಂದ್ರ ಎಸ್. ಗಂಗೊಳ್ಳಿ ಮತ್ತು ಅವರ ಪ್ರತಿಭಾವಂತ ವಿದ್ಯಾರ್ಥಿ ತಂಡಕ್ಕೆ ಸಲ್ಲುತ್ತದೆ. ಭಾವಗೀತೆಗಳನ್ನು ಅರ್ಥಪೂರ್ಣವಾಗಿ ಜೋಡಿಸಿ ಅದಕ್ಕೊಂದು ಕತೆ ಹೆಣೆದು ಪ್ರೇಕ್ಷಕರನ್ನು ರಂಜಿಸುವ ಮತ್ತು ಚಿಂತನೆಗೆ ಹಚ್ಚುವ ಈ ತೆರನಾದ ಹೊಸ ಪ್ರಯತ್ನಗಳು ಅಭಿನಂದನೀಯ. ನಾಟಕದ ಮುನ್ನ ಕವಿಗಳನ್ನು , ಹಿನ್ನೆಲೆಗಾಯಕರನ್ನು ಸ್ಮರಿಸಿಕೊಂಡು ಕೃತಜ್ಞತೆ ಅರ್ಪಿಸಿದ್ದು ಉತ್ತಮ ಲಕ್ಷಣ.
ವಿದ್ಯಾರ್ಥಿಗಳಲ್ಲಿ ಜನರಲ್ಲಿ ಉತ್ತಮ ವಿಚಾರಗಳನ್ನು ಪ್ರಚೋದಿಸುವ ಹಿರಿಯ ಸಾಹಿತಿಗಳ ಬಗೆಗೆ ಗೌರವ ಮೂಡಿಸುವ ಇಂತಹ ಕಲಾತ್ಮಕ ನಾಟಕಗಳಿಗೆ ಮತ್ತಷ್ಟು ಪ್ರೋತ್ಸಾಹ ಸಿಗಬೇಕಿದೆ. ಸಿಗಲಿ ಎನ್ನುವುದು ಆಶಯ.
– ಸುಚಿತ್ರಾ ಕುಂದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.