ಬೆಂದಕಾಳೂರಿನ ಪ್ರವಾಸ ಕಥನ
Team Udayavani, Aug 30, 2019, 5:00 AM IST
ಬೃಹತ್ ಬೆಂಗಳೂರು! ಅಲ್ಲಿಯ ಜೀವನ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ಬೆಂಗಳೂರು ಎಂದಾಕ್ಷಣ ನಮ್ಮ ಚಿತ್ತದಲ್ಲಿ ಮೂಡುವ ಚಿತ್ರಣ ಅಲ್ಲಿಯ ದೊಡ್ಡ ದೊಡ್ಡ ಕಟ್ಟಡಗಳದ್ದೋ, ವಾಹನ ದಟ್ಟಣೆಯದ್ದೋ, ವೇಗವಾಗಿ ಓಡುತ್ತಿರುವ ಜನರ ನಿತ್ಯದ ಜೀವನವೋ, ಮಾಲುಗಳ್ಳೋ ಇತ್ಯಾದಿ. ಹೀಗೆ ನಾಗಾಲೋಟದಲ್ಲಿ ಬೆಳೆಯುತ್ತಿರುವ ಬೆಂಗಳೂರಿನ ಹಿಂದಿನ ಸೌಂದರ್ಯವು ನಶಿಸಿ ಹೋಗುತ್ತಿರುವುದು ಬೇಸರದ ಸಂಗತಿಯಾದರೂ, ಪ್ರಾಚೀನ ಬೆಂದಕಾಳೂರಿನ ಗತವೈಭವವನ್ನು ಪ್ರತಿಫಲಿಸುವ ಪಾರಂಪರಿಕ ಕಟ್ಟಡಗಳು, ದೇವಾಲಯಗಳು ಪಳೆಯುಳಿಕೆಗಳೆಂಬಂತೆ ಇನ್ನೂ ಜೀವಂತವಾಗಿ ಉಳಿದುಕೊಂಡಿವೆ ಎಂಬುದು ಸಂತಸದ ವಿಚಾರ. ಅಂತಹವುಗಳಲ್ಲಿ ಬೆಂಗಳೂರಿನ ಕೋಟೆ, ಟಿಪ್ಪುವಿನ ಬೇಸಗೆ ಅರಮನೆಯೂ ಸೇರಿವೆ.
ಈ ಬಾರಿ ರಜೆಯಲ್ಲಿ ಬೆಂಗಳೂರಿನ ನೆಂಟರ ಮನೆಯಲ್ಲಿ ಕೆಲವು ದಿನಗಳು ತಂಗಿದ್ದ ಸಂದರ್ಭ, ಕೋಟೆ ಹಾಗೂ ಅರಮನೆಯನ್ನು ನೋಡುವ ಕುತೂಹಲದೊಂದಿಗೆ ಒಂದು ಬೆಳಗ್ಗೆ ಉಪಹಾರ ಮುಗಿಸಿ ಮನೆಯಿಂದ ಹೊರಬಿದ್ದೆವು. ತಂಗಿದ್ದ ಸ್ಥಳಕ್ಕೆ ಸಮೀಪದ ಮೆಟ್ರೋ ಸ್ಟೇಷನ್‌ನಲ್ಲಿ ರೈಲುಗಾಡಿ ಹತ್ತಿ ಕೃಷ್ಣರಾಜ ಮಾರುಕಟ್ಟೆಯ ಕಡೆ ಪ್ರಯಾಣ ಬೆಳೆಸಿದೆವು. ಕೆ. ಆರ್. ಮಾರುಕಟ್ಟೆ ಮೆಟ್ರೋ ಸ್ಟೇಷನ್‌ನ ಒಂದು ಗೇಟಿನಿಂದ ಹೊರಬಂದು ಸ್ವಲ್ಪ ಮುಂದೆ ಬರುತ್ತಿದ್ದಂತೆ ನಮ್ಮನ್ನು ಆಕರ್ಷಿಸಿದ್ದು ಒಂದು ಕೋಟೆಯ ಸ್ಮಾರಕ. ಅದುವೇ ಬೆಂಗಳೂರಿನ ಕೋಟೆ!
ಕೋಟೆಯನ್ನು ಸಮೀಪಿಸುತ್ತಿದ್ದಂತೆ ಎದುರಿಗೆ ಹಿರಿದಾದ ಮರದ ಬಾಗಿಲು ಹೊಂದಿರುವ ದ್ವಾರ ನಮ್ಮನ್ನು ಸ್ವಾಗತಿಸಿತು. ಅಲ್ಲಿಯ ಉಲ್ಲೇಖಗಳ ಪ್ರಕಾರ ಕ್ರಿ. ಶ. 1537ರ ಸುಮಾರಿಗೆ ನಾಡಪ್ರಭು ಕೆಂಪೇಗೌಡರು ವಿಜಯನಗರ ಅರಸರ ಅನುಮತಿ ಮೇರೆಗೆ ಮಣ್ಣಿನ ಕೋಟೆಯನ್ನು ಕಟ್ಟಿಸಿ ಹೊಸರಾಜಧಾನಿ ನಗರವನ್ನು ನಿರ್ಮಿಸಿದರಂತೆ. ಮುಂದೆ ಮೊಘಲರು ಈ ನಗರವನ್ನು ವಶಪಡಿಸಿಕೊಂಡು ಮೈಸೂರಿನ ಚಿಕ್ಕದೇವರಾಯ ಒಡೆಯರಿಗೆ ಜಹಗೀರಾಗಿ ನೀಡಿದರು. ತದನಂತರ ಒಡೆಯರು ಕ್ರಿ.ಶ. 1758ರಲ್ಲಿ ಹೈದರಾಲಿಯ ಸುಪರ್ದಿಗೆ ಕೋಟೆಯನ್ನು ಒಪ್ಪಿಸಿದರಂತೆ. 1791 ರಲ್ಲಿ ಕಾರ್ನ್ವಾಲಿಸ್‌ನ ಮುಂದಾಳತ್ವದಲ್ಲಿ ಬ್ರಿಟಿಷ್ ಸೇನೆ ಇದನ್ನು ಶಿಥಿಲಗೊಳಿಸಿ ವಶಪಡಿಸಿಕೊಂಡಿತು. ಆದರೆ, ಒಂದು ವರ್ಷದ ತರುವಾಯ ಶ್ರೀರಂಗಪಟ್ಟಣ ಒಪ್ಪಂದದಂತೆ ಬೆಂಗಳೂರು ಮತ್ತೆ ಟಿಪ್ಪುವಿನ ಕೈ ಸೇರಿತು.
ಇನ್ನು ಈ ಕೋಟೆಯೊಳಗೆ ಒಡೆಯರ ಆಳ್ವಿಕೆಯ ಕಾಲದಲ್ಲಿ ವೆಂಕಟರಮಣ ಸ್ವಾಮಿ ದೇವಾಲಯ ನಿರ್ಮಿಸಲ್ಪಟ್ಟರೆ, ಹೈದರಾಲಿ ಮತ್ತು ಟಿಪ್ಪುವಿನ ಕಾಲದಲ್ಲಿ ಬೇಸಗೆ ಅರಮನೆ ಜೀವತಳೆದಿತ್ತು. ಮೂಲವಾಗಿ ಕೋಟೆಯು ದೀರ್ಘ ಅಂಡಾಕಾರದ ತಳವಿನ್ಯಾಸ ಹೊಂದಿದ್ದು, ನೀರಿಲ್ಲದ ಕಂದಕದಿಂದ ಸುತ್ತುವರೆದಿತ್ತು. ಅಲ್ಲದೆ ಈ ಬೃಹತ್ ಕೋಟೆಯು ವಿನ್ಯಾಸಕ್ಕನುಗುಣವಾಗಿ ಆಯಕಟ್ಟಿನ ಸ್ಥಳಗಳಲ್ಲಿ ಉನ್ನತವಾದ ಯಲಹಂಕ ಬಾಗಿಲು, ಆಲಸೂರು ಬಾಗಿಲು, ಆನೆಕಲ್ಲು ಬಾಗಿಲು, ಕೆಂಗೇರಿ ಬಾಗಿಲು, ಯಶವಂತಪುರ ಬಾಗಿಲು, ಕನಕಹಳ್ಳಿ ಬಾಗಿಲು- ಎಂಬ ಮಹಾದ್ವಾರಗಳನ್ನು ಹೊಂದಿದ್ದು, ಪ್ರಸ್ತುತ ಮೈಸೂರು ಬಾಗಿಲು ಹಾಗೂ ಒಂದು ವೃತ್ತಾಕಾರದ ಕೊತ್ತಲ ಮಾತ್ರ ಉಳಿದಿದೆ. ಈ ದ್ವಾರವು ಕಮಾನಿನಾಕಾರದಲ್ಲಿದ್ದು ಗಚ್ಚುಗಾರೆಯ ಕುಸುರಿ ಕೆಲಸದಿಂದ ಅಲಂಕೃತವಾಗಿದೆ. ಇನ್ನು ಬೃಹತ್ ದ್ವಾರದಿಂದ ಒಳಪ್ರವೇಶಿಸುತ್ತಿದ್ದಂತೆಯೆ ಸಣ್ಣ ಗಣೇಶನ ದೇವಾಲಯವಿದೆ.
ದೇವಾಲಯದ ಎಡಭಾಗದಲ್ಲಿ ಒಂದು ಸೆರೆಮನೆಯಿದ್ದು, ಹಿಂದೆ ಸರ್ ಡೇವಿಡ್ ಬೈರ್ಡ್ ಮೊದಲಾದವರನ್ನು ಅಲ್ಲಿ ಬಂಧಿಸಲಾಗಿತ್ತೆಂದು ಅಲ್ಲಿರುವ ಶಿಲಾಫಲಕ ತಿಳಿಸುತ್ತದೆ. ದೇವಾಲಯದ ಬಲಭಾಗಕ್ಕೆ ಕಮಾನಿನಂತಿರುವ ಮತ್ತೂಂದು ದ್ವಾರವಿದ್ದು ರಾಜಪ್ರಾಂಗಣಕ್ಕೆ ತೆರೆದುಕೊಂಡಿದೆ. ಇದಲ್ಲದೆ ಇನ್ನೂ ಎರಡು ದ್ವಾರಗಳಿದ್ದು ಅವು ರಾಜಪ್ರಾಂಗಣ ಹಾಗೂ ಸಾರ್ವಜನಿಕ ನೆಲೆಗಳನ್ನು ಸೇರಿಸುತ್ತವೆ. ಹೈದರಾಲಿಯ ಆಳ್ವಿಕೆ ಕಾಲದಲ್ಲಿ ಕಪ್ಪು ಕಣಶಿಲೆಯಿಂದ ಭದ್ರಪಡಿಸಲ್ಪಟ್ಟ ಕೋಟೆಯ ಗೋಡೆಗಳು ಇಳಿಜಾರಾಗಿದ್ದು, ಪ್ರಾಣಿ-ಪಕ್ಷಿ, ನಾಗರಿಕರು, ರಾಜರು, ದೇವರಿಗೆ ಸಂಬಂಧಿಸಿದ ಉಬ್ಬು ಶಿಲ್ಪಗಳನ್ನು ಹೊಂದಿದೆ. ಕೋಟೆಯಲ್ಲಿ ಉಳಿದ ಈ ಒಂದು ಭಾಗವು ಕೆಲವೆಡೆ ಶಿಥಿಲಗೊಂಡಿದ್ದು ಅಲ್ಲಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಉಳಿದಂತೆ ಇದರ ಸೌಂದರ್ಯವನ್ನು ಅಲ್ಪವಾದರೂ ಕಣ್ತುಂಬಿಕೊಳ್ಳಬಹುದು. ಸದ್ಯ ಕೋಟೆಯು ಭಾರತೀಯ ಪುರಾತತ್ವ ಸರ್ವೆàಕ್ಷಣ ಇದರ ರಕ್ಷಣೆಯಲ್ಲಿದೆ. ನೋವಿನ ಸಂಗತಿ ಎಂದರೆ ಇಂತಹ ಅದ್ಭುತ ಸ್ಮಾರಕಗಳಲ್ಲಿ ಅಲ್ಲಲ್ಲಿ ಕಂಡುಬರುವ ಆಧುನಿಕ ಬರಹಗಳು. ಈ ಸ್ಮಾರಕಗಳನ್ನು ಸಂರಕ್ಷಿಸಿ, ಮುಂದಿನ ಜನಾಂಗಕ್ಕೆ ಉಳಿಸುವ ಜವಾಬ್ದಾರಿ ಇಂದಿನ ಯುವಜನಾಂಗದ ಮೇಲಿರುವುದರಿಂದ ನಾವುಗಳು ಇದರ ಕುರಿತು ಜಾಗೃತರಾಗಬೇಕಿರುವುದು ಅಗತ್ಯ.
ಕೋಟೆಯ ಈ ಭಾಗದಿಂದ ಕಾಲ್ನಡಿಗೆಯ ದೂರದಲ್ಲಿರುವುದೇ ಟಿಪ್ಪುವಿನ ಬೇಸಗೆ ಅರಮನೆ. ಈ ಅರಮನೆಯ ನಿರ್ಮಾಣ ಕಾರ್ಯ ಕ್ರಿ.ಶ. 1781ರಲ್ಲಿ ಹೈದರಾಲಿಯ ಕಾಲದಲ್ಲಿ ಆರಂಭಗೊಂಡು 1791ರಲ್ಲಿ ಟಿಪ್ಪುವಿನಿಂದ ಪೂರ್ಣಗೊಳಿಸಲ್ಪಟ್ಟಿತು. ಬೇಸಗೆ ತಾಣ ಮಾತ್ರವಲ್ಲದೆ, ಆಡಳಿತ ಹಾಗೂ ದರ್ಬಾರ್ ಸಂಬಂಧಪಟ್ಟ ಕಾರ್ಯ ನಿರ್ವಹಿಸುವುದು ಈ ಅರಮನೆಯ ನಿರ್ಮಾಣದ ಉದ್ದೇಶವಾಗಿತ್ತು. ಸಂಪೂರ್ಣ ಅರಮನೆಯು ಪ್ರಾಚೀನ ಭಾರತದಲ್ಲಿ ಇಸ್ಲಾಮಿಕ್ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿ ಹುಟ್ಟಿಕೊಂಡ ವಿನೂತನ ಶೈಲಿ ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿರುವುದು ಇದರ ವಿಶೇಷತೆ.
ಈ ಅರಮನೆಯ ಕೆಳ ಅಂತಸ್ತು ಹಾಗೂ ಮೇಲಂತಸ್ತುಗಳು ನಾಲ್ಕು ಮೂಲೆಗಳಲ್ಲಿರುವ ಮೆಟ್ಟಿಲುಗಳಿಂದ ಸಂಪರ್ಕಿಸಲ್ಪಟ್ಟಿದೆ. ಇನ್ನು ಕಟ್ಟಡದ ಎಡ ಹಾಗೂ ಬಲಭಾಗದಲ್ಲಿ ಕೋಣೆಗಳಿದ್ದು ಇವುಗಳನ್ನು ಅಂತಃಪುರಗಳು ಎಂಬುದಾಗಿ ಗುರುತಿಸಬಹುದು. ಮೇಲಂತಸ್ತಿನ ಮಧ್ಯಭಾಗದಲ್ಲಿ ಒಂದು ಆಯತಾಕಾರದ ಹಜಾರವಿದ್ದು, ಅದರ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಟಿಪ್ಪು ದೈನಂದಿನ ದರ್ಬಾರ್ ನಡೆಸುತ್ತಿದ್ದ ಕಟಾಂಜನ ಮಂಟಪವಿದೆ. ಇದರ ಕೆಳಭಾಗದಲ್ಲೊಂದು ಕೋಣೆಯಿದ್ದು, ಪ್ರಸ್ತುತ ಅದು ಛಾಯಾಚಿತ್ರ ಸಂಗ್ರಹಾಲಯವಾಗಿದೆ. ಅರಮನೆಯು ಬಹುತೇಕ ಮರದಲ್ಲಿ ರಚಿತವಾಗಿದ್ದು, ಗೋಡೆಗಳಿಗೆ ಮಾತ್ರ ಮಣ್ಣನ್ನು ಬಳಸಲಾಗಿದೆ. ಗೋಡೆಗಳು ಹಾಗೂ ಮೇಲ್ಛಾವಣಿ ವರ್ಣರಂಜಿತವಾಗಿದ್ದು, ಕಡು ಕೆಂಪು ಬಣ್ಣದ ಮೇಲ್ಮೆ„ಮೇಲೆ ಹೂ, ಎಲೆ ಮತ್ತು ಬಳ್ಳಿಗಳ ವಿನ್ಯಾಸಗಳಿಂದ ಅಲಂಕೃತಗೊಂಡಿವೆ. ಪ್ರಸ್ತುತ ಅರಮನೆಯ ಕೆಲವು ಭಾಗಗಳು, ವಿನ್ಯಾಸಗಳು ಶಿಥಿಲಗೊಳ್ಳುತ್ತ ಬಂದಿದ್ದು, ಅದನ್ನು ರಕ್ಷಿಸುವ ಉದ್ದೇಶದಿಂದ ಸಣ್ಣ-ಪುಟ್ಟ ದುರಸ್ಥಿ ಕಾರ್ಯಗಳು ನಡೆಯುತ್ತಿವೆ. ಇದರ ಹೊರತಾಗಿ ಅರಮನೆಯು ತನ್ನ ಸೌಂದರ್ಯವನ್ನು ಇನ್ನೂ ಉಳಿಸಿಕೊಂಡು, ಬೃಹದಾಕಾರವಾಗಿ ಬೆಳೆಯುತ್ತಿರುವ ಈ ಮಹಾನಗರಿಯಲ್ಲಿ ಗತಕಾಲದ ವೈಭವವನ್ನು ಸಾರುತ್ತಾ ಜನಾಕರ್ಷಣೆಯ ಕೇಂದ್ರವಾಗಿರುವುದು ಅಚ್ಚರಿ.
ಅಶ್ವಿನಿ ಶಾಸ್ತ್ರಿ
ದ್ವಿತೀಯ ಬಿ.ಎಡ್.
ಡಾ. ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.