ಕಾಲೇಜಿಗೆ ಬರುವ ಚಿಕುಬುಕು ರೈಲು
Team Udayavani, Feb 1, 2019, 12:30 AM IST
ಟ್ರೈನ್‌ನಲ್ಲಿ ಪ್ರಯಾಣಿಸುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ರೈಲು ಪ್ರಯಾಣವನ್ನು ಇಷ್ಟಪಡದವರು ತೀರಾ ವಿರಳ ಎಂದೇ ಹೇಳಬಹುದು. ಸಣ್ಣಮಕ್ಕಳಿಂದ ತೊಡಗಿ ಮುದುಕರವರೆಗೆ ಎಲ್ಲರೂ ರೈಲು ಪ್ರಯಾಣವನ್ನು ಇಷ್ಟಪಡುವವರೇ. ದೂರದೂರುಗಳಿಗೆ ಪ್ರಯಾಣ ಬೆಳೆಸುವಾಗ ರೈಲು ಯಾನವೇ ಹೆಚ್ಚು ಆರಾಮದಾಯಕ. ಯಾಕೆಂದರೆ, ರೈಲು ಪ್ರಯಾಣದಲ್ಲಿ ಬಸ್ಸಿನಂತೆ ಹೆಚ್ಚು ಕುಲುಕಾಟವಿರುವುದಿಲ್ಲ. ಬೆಟ್ಟ-ಗುಡ್ಡಗಳ ನಡುವೆ, ನದಿಗಳ ಮೇಲೆ ನಿರ್ಮಿಸಲಾದ ಹಳಿಗಳ ಮೂಲಕ, ಸುರಂಗ ಮಾರ್ಗದ ಮೂಲಕ ರೈಲಿನಲ್ಲಿ ಪ್ರಯಾಣಿಸುವಾಗ ಅದರ ಮಜಾವೇ ಬೇರೆ!
ಕಾಲೇಜು ವಿದ್ಯಾರ್ಥಿಯಾದ ನನ್ನ ಜೀವನದಲ್ಲಿ ದಿನನಿತ್ಯದ ಪ್ರಯಾಣ ಟ್ರೈನ್‌ನಲ್ಲಿಯೇ ಎನ್ನುವುದು ತುಂಬಾ ಖುಷಿಯ ವಿಚಾರ. ಮೊದಲನೇ ದಿನ ನಾನು ಟ್ರೈನ್‌ಗೆ ಹತ್ತಿದಾಗ ಮಗುವೊಂದು ಹೊಸ ವಸ್ತುವೊಂದನ್ನು ನೋಡಿದಂತೆ ಕಣ್ಣುಮಿಟುಕಿಸದೆ ಸುತ್ತಲೂ ನೋಡಿದ್ದು ಸುಳ್ಳಲ್ಲ. ತದನಂತರ ರೈಲು ಪ್ರಯಾಣ ಅಭ್ಯಾಸವಾಗಿಬಿಟ್ಟಿತು. ಈ ಟ್ರೈನ್‌ನಲ್ಲಿ ದಿನನಿತ್ಯ ವಿವಿಧ ಕಾರ್ಯಗಳ ನಿಮಿತ್ತ ಕಾಸರಗೋಡಿನಿಂದ ಮಂಗಳೂರಿಗೆ ಆಗಮಿಸುವವರು ಹಲವಾರು ಮಂದಿ. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು ಎನ್ನಬಹುದೇನೊ. ರೈಲು ಬಂದ ತಕ್ಷಣ ಪ್ರತಿಯೊಬ್ಬರೂ ಹರಸಾಹಸದಿಂದ ಸೀಟಿಗಾಗಿ ಹಾತೊರೆಯುತ್ತ ಮೆಟ್ಟಿಲೇರುತ್ತಾರೆ. ನೂಕುನುಗ್ಗಲು. ದಿನನಿತ್ಯ ಹಲವು ಮುಖಗಳ ಪರಿಚಯವೂ ಆಗುತ್ತದೆ. ಕೆಲವು ಪ್ರಯಾಣಿಕರು ಪರಸ್ಪರ ತಮ್ಮಷ್ಟಕ್ಕೆ ಮಾತನಾಡುತ್ತ ಪ್ರಯಾಣಿಸಿದರೆ, ವಿದ್ಯಾರ್ಥಿಗಳು ಪುಸ್ತಕ ಓದುತ್ತ¤, ಇನ್ನು ಕೆಲವರು ಮೊಬೈಲ್‌ನಲ್ಲಿಯೇ ತಮ್ಮೆಲ್ಲ ಪ್ರಪಂಚವಿದೆ ಎನ್ನುವಂತೆ ಅದರಲ್ಲೇತಲ್ಲೀನರಾಗಿರುತ್ತಾರೆ.
ರೈಲಿನಲ್ಲಿ ಸೀಟು ಸಿಕ್ಕಿದರೆ ಬಚಾವ್. ಇಲ್ಲಾಂದ್ರೆ ಮಂಗಳೂರಿನ ವರೆಗೂ ನಿಂತುಕೊಂಡೇ ಪ್ರಯಾಣಿಸಬೇಕಾಗುತ್ತದೆ. ಅದಕ್ಕಾಗಿ ಲಗೇಜ್ ಇಡಲಿರುವ ಸ್ಥಳಕ್ಕೆ ಹತ್ತಿ ಅದರ ಮೇಲೆ ಕುಳಿತುಕೊಳ್ಳುವವರೂ ಇದ್ದಾರೆ. ಅಲ್ಲಿ ಯಾರ ಕಿರಿಕಿರಿಯೂ ಇಲ್ಲದೆ ಸಮಾಧಾನದಿಂದ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಕೆಲವು ದಿನಗಳಲ್ಲಿ ಬೋಗಿಗಳು ಕಡಿಮೆ ಇರುವ ಸಂದರ್ಭದಲ್ಲಿ ಎಲ್ಲರೂ ನಜ್ಜುಗುಜ್ಜು ! ಬೋಗಿಯು ತುಂಬಿ ಉಸಿರುಗಟ್ಟಿದಂತಹ ಅನುಭವವೂ ಆದದ್ದುಂಟು. ಬೋಗಿಯೊಳಕ್ಕೆ ನಿಲ್ಲಲು ಸ್ಥಳವಿಲ್ಲದೆ ಮೆಟ್ಟಿಲಲ್ಲಿ ನಿಂತು ನೇತಾಡುತ್ತ ಪ್ರಯಾಣಿಸುವವರನ್ನು ನೋಡಿದಾಗ ಭಯವೂ ಕರುಣೆಯೂ ಹುಟ್ಟುತ್ತದೆ. ಆದರೆ, ಬೋಗಿಗಳಲ್ಲಿ ಸ್ಥಳವಿದ್ದೂ ಮೆಟ್ಟಿಲಲ್ಲಿ ನಿಂತು ಬೇಕುಬೇಕೆಂದೇ ಅಪಾಯವನ್ನು ಬರಮಾಡಿಕೊಳ್ಳುವ ಕೆಲವು ಪೋಕರಿ ಹುಡುಗರನ್ನು ಕಂಡಾಗ ಸಿಟ್ಟೂ ಬರುತ್ತದೆ. ಟ್ರೈನ್‌ನಲ್ಲಿ ಸೀನಿಯರ್‌ಗಳ ಜೊತೆಗಿನ ಒಡನಾಟ ಖುಷಿ ಕೊಡುವಂಥಾದ್ದೇ. ಸಂಜೆಯ ಹೊತ್ತು ನಗುನಗುತ್ತ ಹರಟೆ ಹೊಡೆಯುವಾಗ ಆನಂದವೋ ಆನಂದ.ಕಡ್ಲೆ ಮಾರುವವನು ಬಂದಾಗ ಕಡ್ಲೆ ತಗೊಂಡು ಎಲ್ಲರೂ ಹಂಚಿ ತಿನ್ನುವುದುಂಟು. ಟ್ರೈನ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಕೆಲವು ಹಿರಿಯ ಪ್ರಯಾಣಿಕರು ಅಪರೂಪಕ್ಕೆ ನಮ್ಮನ್ನು ಮಾತಾಡಿಸುವುದೂ ಇದೆ.
ರೈಲುಗಾಡಿ ನೇತ್ರಾವತಿ ಸೇತುವೆಯ ಮೇಲೆ ತಲುಪಿದಾಗ ನೇತ್ರಾವತಿಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ಪ್ರತಿಯೊಬ್ಬ ಪ್ರಯಾಣಿಕನ ದೃಷ್ಟಿಯೂ ಅತ್ತ ಕಡೆ ಹರಿಯುತ್ತದೆ. ಅಗಲವಾದ ಹಾಸಿಗೆಯೊಂದನ್ನು ಹಾಸಿದಂತೆ ನೇತ್ರಾವತಿಯು ಕಂಗೊಳಿಸುತ್ತಾಳೆ.ಬಸ್ಸಿನಲ್ಲಿ ಹೋಗುವುದಾದರೆ ಇಷ್ಟು ಹತ್ತಿರದಿಂದ ನೇತ್ರಾವತಿಯನ್ನು ಕಾಣಲು ಸಾಧ್ಯವಾಗುವುದಿಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುವ ನೇತ್ರಾವತಿಯನ್ನು ಕಂಡರೆ ಇನ್ನೇನು, ಆಕೆ ಕೈಗೆಟಕಿಯೇ ಬಿಡುತ್ತಾಳೆ ಎಂದೆನಿಸುತ್ತದೆ. ನೇತ್ರಾವತಿಯು ವಿಶಾಲವಾದ ಅರಬ್ಬೀ ಸಮುದ್ರವನ್ನು ಸೇರಲು ಹಾತೊರೆಯುವಂತೆಯೇ ಮುಗಿಲೇರಿ ನಿಂತ ಸೂರ್ಯನು ಸಂಜೆಯ ಹೊತ್ತು ತಾನೂ ಕಡಲನ್ನು ಸೇರುವೆನೆಂದು ಪಶ್ಚಿಮದೆಡೆಗೆ ಓಡುತ್ತಿರುವ ದೃಶ್ಯವನ್ನು ಬಣ್ಣಿಸುವುದು ಕಷ್ಟ.
ಮಂಗಳೂರಿನ ಗೆಳತಿಯರು ಕೆಲವು ಬಾರಿ ನಮ್ಮಲ್ಲಿ ಹೇಳುವುದುಂಟು, “ನಿಮಗೆ ಎಂಥಾ ಜಾಲಿ. ಯಾವತ್ತೂ ಟ್ರೈನ್ ಅಲ್ವಾ?’ ಅಂತ.
ತೇಜಶ್ರೀ ಶೆಟ್ಟಿ ಬೇಳ
ದ್ವಿತೀಯ ಪತ್ರಿಕೋದ್ಯಮ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.