ಅಂತರಂಗಕ್ಕಾಗಿ ಡಿಜಿಟಲ್ ಬೆಳಕು
Team Udayavani, Jan 10, 2020, 4:50 AM IST
ಜಗತ್ತಿಗೆ ಬೆಳಕಾಗಿದ್ದ ಭಾರತವು ದಾಸ್ಯದ ಮದಿರೆಯನ್ನು ಕುಡಿದು ಆತ್ಮವಿಸ್ಮತಿಗೆ ಒಳಗಾಗಿರುವುದನ್ನು ಮನಗಂಡ ಸ್ವಾಮಿ ವಿವೇಕಾನಂದರು ಭಾರತದ ಪುನರುತ್ಥಾನಕ್ಕಾಗಿ ಪ್ರಯತ್ನಿಸಿದರು. ಹೀಗೆ, ಅವರು ನಿಷ್ಕಲ್ಮಶವಾಗಿ ನಡೆಸಿದ ಪ್ರಯತ್ನವೇ ಭಾರತಕ್ಕೆ ಬೆಳಕಾಗಿ ಪರಿಣಮಿಸಿದೆ.
1893ರಲ್ಲಿ ಅಮೆರಿಕಾದ ಚಿಕಾಗೋ ಎಂಬಲ್ಲಿ ವಿಶ್ವಧರ್ಮ ಸಮ್ಮೇಳನ ನಡೆದಾಗ, ವಿವೇಕಾನಂದರು, ಭಾರತವನ್ನೂ ಹಿಂದೂ ಧರ್ಮವನ್ನೂ ಪ್ರತಿನಿಧಿಸಿದ್ದರು. ಸೆಪ್ಟೆಂಬರ್ 11ರಿಂದ 27ರವರೆಗೆ ಈ ಸಮ್ಮೇಳನ ನಡೆಯಿತು. ಭಾರತವೆಂದರೆ ಬ್ರಿಟಿಷ್ ದಾಸ್ಯದಲ್ಲಿದ್ದ ಒಂದು ದೇಶವಷ್ಟೇ ಎಂದು ನಂಬಿದ್ದ ಜಗತ್ತಿನ ಇತರ ರಾಷ್ಟ್ರಗಳ ವಿದ್ವಾಂಸರ ಗ್ರಹಿಕೆಯು ಈ ಸಮ್ಮೇಳನದ ಬಳಿಕ ಬದಲಾಯಿತು. ಜಗತ್ತಿನ ಜನರಲ್ಲಿದ್ದ ಪೂರ್ವಗ್ರಹಗಳು ಬದಲಾಗುವಂತೆ ಸ್ವಾಮಿ ವಿವೇಕಾನಂದರು ಭಾರತದ ಕುರಿತು, ಭಾರತೀಯ ಸಂಸ್ಕೃತಿಯ ಕುರಿತು ಮಂಡಿಸಿದ ವಿಚಾರಗಳೇನು ಎಂಬುದು ಇಂದಿಗೂ ಅಧ್ಯಯನಕ್ಕೆ ಅರ್ಹವಾಗಿವೆ.
ವಿಶೇಷವೆಂದರೆ, ಬ್ರಿಟಿಷರು ಮೂಡಿಸಿದ ಕೀಳರಿಮೆಯಿಂದಾಗಿ ಭಾರತೀಯರೂ, ತಮ್ಮ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ವಿಸ್ಮತಿಯಲ್ಲಿದ್ದರು. ಆದರೆ ಚಿಕಾಗೋ ಭಾಷಣದ ವಿಚಾರವು ಭಾರತೀಯರನ್ನು ತಲುಪುತ್ತಲೇ, ಅಲ್ಲಿ ಭಾರತೀಯ ವಿಚಾರಗಳ ಕುರಿತು ವ್ಯಕ್ತವಾದ ಅಭಿಮಾನ ಪ್ರಶಂಸೆಯನ್ನು ಗಮನಿಸುತ್ತಲೇ, ಭಾರತೀಯರಿಗೂ “ಹೌದಲ್ಲ’ ಅನಿಸಿತು. ತಮ್ಮತನದ ಅರಿವು ಮೂಡಿಸಿದ ಭಾಷಣವನ್ನು ಸ್ವಾಮಿ ವಿವೇಕಾನಂದರು ಮಾಡಿದ್ದರಿಂದಲೇ ಇಂದಿಗೂ ಅದೊಂದು ಮಹತ್ವಪೂರ್ಣದ ಭಾಷಣವಾಗಿ ಉಳಿದಿದೆ.
ಇಂದು ಜಗತ್ತು ಅಂಗೈಯಲ್ಲಿಯೇ ಇದೆ. ಮೊಬೈಲ್ ಎಂಬುದು ಇಡೀ ಜಗತ್ತಿಗೇ ಕಿಟಕಿಯಾಗಿ ಪರಿಣಮಿಸಿದೆ. ಆದರೆ, ಅಂದು ಈ ಮಹತ್ ಪರಿವರ್ತನೆಗೆ ವಿವೇಕಾನಂದರಿಗೆ ವಿದೇಶ ಪ್ರವಾಸವನ್ನುಳಿದು ಬೇರೆ ಆಯ್ಕೆಗಳಿರಲಿಲ್ಲ.
ನಮ್ಮ ದೇಶ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ, ಆಸಕ್ತಿ ಇರುವ ಉದಯೋನ್ಮುಖರು ಖಂಡಿತ ಚಿಕಾಗೋ ಭಾಷಣವನ್ನು ಡೌನ್‌ಲೋಡ್ ಮಾಡಿಕೊಂಡು ಓದಲೇಬೇಕು. ಅದು ನಮ್ಮ ದೇಶದ ಏಳಿಗೆಗೆ ಪೂರಕವಾಗಿ ಹಲವಾರು ವಿಚಾರಗಳನ್ನು ಉಲ್ಲೇಖೀಸಿದೆ. ನಮ್ಮದೇ ದೇಶದ ಒಳಿತು, ಕೆಡುಕುಗಳನ್ನು ಅರಿಯುವ ಜವಾಬ್ದಾರಿ ನಮ್ಮ ಮೇಲಿದೆ ಅಲ್ಲವೇ. ಹಾಗಾಗಿ, ಅವರ ಕಾರ್ಯವನ್ನು ಮುಂದುವರಿಸಬೇಕೆಂಬ ಇಚ್ಛೆ ಇರುವ ಇಂದಿನ ಯುವ ಮನಸ್ಸುಗಳಿಗೆ ಇವತ್ತಿನ ಡಿಜಿಟಲ್ ಯುಗ ಅಂತಹ ನೂರಾರು ಅವಕಾಶ-ದಾರಿಗಳನ್ನು ತೆರೆದಿಟ್ಟಿದೆ.
ಕಾವಿಧಾರಿಯಾಗಿ ವಿದೇಶಕ್ಕೆ ಹೋದ ಸ್ವಾಮೀಜಿ, ಹೊರ ಆವರಣಕ್ಕೆ ಮಣೆ ಹಾಕುವ ಮನಸ್ಸುಗಳನ್ನು ತಮ್ಮತ್ತ¤ ಸೆಳೆದು, ಜೀವನದ ನಿಜ ಹೂರಣವನ್ನು ಅವರಿಗೆ ಮನದಟ್ಟು ಮಾಡಿಸುವ ಪ್ರಯತ್ನ ಮಾಡಿದರು. ಅವರ ಮಾತುಗಳು ಬರೀ ಒಣ ವೇದಾಂತಗಳಾಗಿರಲಿಲ್ಲ. ಆದ್ದರಿಂದಲೇ ಅವರು, ತಮ್ಮ ಪ್ರಯತ್ನದಲ್ಲಿ ಯಶಸ್ವಿ ಕಂಡರು. ಅವರ ಪ್ರಯತ್ನ ನಮಗಿಂದು ಪಾಠವಾಗುವುದಾದರೆ, ಇಂದಿನ ಡಿಜಿಟಲ್ ಯುಗದ ಬಣ್ಣಗಳ ಒಳಗೆ ನಾವು ಕಳೆದುಹೋಗದೇ, ಅದನ್ನೇ ಬಳಸಿಕೊಂಡು ನಾವು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ನಮ್ಮ ದೇಶದ ಮಹತ್ವವನ್ನು ಅರಿತು, ಹೊರಜಗತ್ತಿಗೆ ಅದನ್ನು ತಿಳಿಯಪಡಿಸಬಹುದು.
ಸೌಂದರ್ಯ ಮತ್ತು ಹಣದ ಮೂಲಕ ಇತರರನ್ನು ಆಕರ್ಷಿಸಲು ಮತ್ತು ಬಲಿಷ್ಟರನ್ನು ಮೆಚ್ಚಿಸುವುದಕ್ಕಾಗಿ ತಮ್ಮ ಸಹಾಯ-ಸಹಾನುಭೂತಿಯನ್ನು ತೋರ್ಪಡಿಸಲು ಉಪಯೋಗವಾಗುತ್ತಿರುವ ಇವತ್ತಿನ ಡಿಜಿಟಲ್ ಸಂಪತ್ತನ್ನು ನೊಂದವರ ಕಲ್ಯಾಣಕ್ಕಾಗಿ ಅಜ್ಞಾನಿಗಳಲ್ಲಿ ಸುಜ್ಞಾನ ತುಂಬಲು ಉಪಯೋಗಿಸಿದರೆ ಅದೇ ವಿವೇಕಾನಂದರ ದಾರಿಯಲ್ಲಿ ನಡೆಯುವ ನಿಜವಾದ ಪ್ರಯತ್ನ. ಇನ್ನೂ ಸರಳವಾಗಿ ಹೇಳಬೇಕಾದರೆ, ಭಾರತೀಯ ಜ್ಞಾನ ಸಂಪತ್ತನ್ನು ಅರ್ಥ ಮಾಡಿಕೊಂಡು, ಭಾರತೀಯ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ನಡೆಸಿದರೆ, ಅದುವೇ ಜಗತ್ತಿಗೆ ನಾವು ನೀಡುವ ಸಂದೇಶವಾಗಿರುತ್ತದೆ. ಮಾತಿಗಿಂತ ಕೃತಿ ಮುಖ್ಯ ಎಂದು ಸ್ವಾಮಿ ವಿವೇಕಾನಂದರೇ ಹೇಳಿದ್ದಾರರಲ್ಲ !
ಪ್ರಕಾಶ್ ಮಲ್ಪೆ, ವಡಭಾಂಡೇಶ್ವರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.