ಬೇಕಲ ನೋಡಲೇಬೇಕಲ್ಲ !
Team Udayavani, Mar 6, 2020, 4:51 AM IST
ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಗಾದೆಯನ್ನು ಎಲ್ಲರೂ ಕೇಳಿದ್ದಾರೆ. ಕೋಶ ಓದು ಎಂದರೆ, ಪುಸ್ತಕಗಳನ್ನು ಓದಬೇಕು ಎಂಬ ವಿಶಾಲಾರ್ಥವೇ ತಾನೇ. ಈ ಮಾತಿನ ಹಿಂದೆ ಒಂದು ಆಶಯವಿದೆ. ಪುಸ್ತಕಗಳಲ್ಲಿ ಇರುವ ವಿಚಾರಗಳಿಗೂ, ನಮ್ಮ ಸುತ್ತಮುತ್ತಲಿನ ಪ್ರದೇಶಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಇದ್ದೇ ಇರುತ್ತದೆ. ಉದಾಹರಣೆಗೆ ಒಡಿಶಾದ ಪುರಿ ಜಗನ್ನಾಥ ದೇವಾಲಯಕ್ಕೆ ಒಂದು ಪ್ರವಾಸ ಹೊರಟಿದ್ದೇವೆ ಎಂದುಕೊಳ್ಳೋಣ. ಆ ದೇವಸ್ಥಾನದ ಬಗ್ಗೆ, ಒಡಿಶಾ ರಾಜ್ಯದ ಹವಾಮಾನ, ದೇವಸ್ಥಾನದ ಇತಿಹಾಸ, ಅಲ್ಲಿನ ಆರಾಧನಾ ಪದ್ಧತಿ, ಅಲ್ಲಿ ಆಳಿದ ರಾಜ ಮಹಾರಾಜರ ವಿಚಾರಗಳನ್ನು ನಾವು ತಿಳಿದುಕೊಳ್ಳಬಯಸುತ್ತೇವೆ. ಕರ್ನಾಟಕವನ್ನು ಆಳಿದ ರಾಜವಂಶಕ್ಕೂ ಈ ದೇವಸ್ಥಾನಕ್ಕೂ ಸಂಬಂಧವಿದೆ ಎಂದು ಯಾರಾದರೂ ಹೇಳಿದರೆ, ತಕ್ಷಣವೇ ಆ ಬಗ್ಗೆ ಓದಬೇಕು ಎನಿಸಿಬಿಡುತ್ತದೆ. ಹೀಗೆ ತಿರುಗಾಟಕ್ಕೂ, ಸುತ್ತಾಟಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಇದ್ದೇ ಇರುತ್ತದೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳಿಗೋಸ್ಕರ ಏರ್ಪಡಿಸುವ ಪ್ರವಾಸಕ್ಕೆ “ಶೈಕ್ಷಣಿಕ ಪ್ರವಾಸ’ ಎಂದು ಹೇಳುವುದು ವಾಡಿಕೆ.
ಪ್ರವಾಸಕ್ಕೆ ಬೇಸಿಗೆಯೇ ಅನುಕೂಲಕರ. ಅದರಲ್ಲಿಯೂ ಸುಡುವ ಬಿಸಿಲಿನಲ್ಲಿ ಮನಸ್ಸು ನೀರಿನ ಬಳಿ ಹೋಗಲು ತವಕಿಸುತ್ತಿರುತ್ತದೆ. ಬೀಚ್‌ಗಳಲ್ಲಿ ಆಟವಾಡಲು ಬೇಸಿಗೆಗಿಂತ ಪ್ರಶಸ್ತ ಸಮಯ ಯಾವುದಿದೆ. ಬೀಚ್‌ಗಳಲ್ಲಿ ಬಹುಸೊಗಸಾದ ಬೀಚ್ ಎಂದರೆ ಬೇಕಲಕೋಟೆ. ಅಲ್ಲಿ ಸಮುದ್ರವೂ ಇದೆ, ಕೋಟೆಯೂ ಇದೆ. ತಿಳಿದುಕೊಳ್ಳುವುದಕ್ಕೆ ಕತೆಗಳ ರೂಪದಲ್ಲಿ ನಮ್ಮ ನಾಡಿನ ಇತಿಹಾಸವೂ ದೀರ್ಘವಾಗಿದೆ ಅಲ್ಲವೇ.
ಗಡಿನಾಡು ಕಾಸರಗೋಡಿನ ಕಡಲತಡಿಯಲ್ಲಿರುವ ಪ್ರವಾಸಿ ತಾಣ ಬೇಕಲಕೋಟೆ ಪ್ರವಾಸಪ್ರಿಯರಿಗೆ ಅಚ್ಚುಮೆಚ್ಚು. ಅದ್ಭುತ ಸೌಂದರ್ಯದ ಜೊತೆಗೆ ಐತಿಹಾಸಿಕ ಮೌಲ್ಯವುಳ್ಳ ಸ್ಥಳವಿದು. ಈ ಕೋಟೆ ಸುಮಾರು ಕ್ರಿ.ಶ. 1650ರಲ್ಲಿ ನಿರ್ಮಾಣವಾದದ್ದು ಎಂದು ಹೇಳಲಾಗುತ್ತದೆ. ಸುಮಾರು 40 ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಕೋಟೆ ಕೇರಳ ರಾಜ್ಯದ ಅತೀ ದೊಡ್ಡ ಕೋಟೆ.
ಸ್ಥಳೀಯ ಆಡಳಿತಗಾರ ಹಿರಿಯ ವೆಂಕಟಪ್ಪ ನಾಯಕ ಈ ಕೋಟೆಯ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಅವರ ನಂತರ ಬಂದ ಶಿವಪ್ಪ ನಾಯಕರು ಕೋಟೆಯ ನಿರ್ಮಾಣವನ್ನು ಪೂರ್ಣಗೊಳಿಸಿದರು. ಅಷ್ಟು ದೀರ್ಘ ಕಾಲ ಶ್ರಮ ವ್ಯಯಿಸಿ ಬಲಿಷ್ಟವಾಗಿ ಕಟ್ಟಿದ ಕೋಟೆ ಇದು. ಆದರೆ, ಕಾಲಾನಂತರದಲ್ಲಿ ಈ ಕೋಟೆ ಹೈದರಾಲಿಯ ಅಧೀನಕ್ಕೆ ಒಳಪಟ್ಟಿತು. ಹೈದರಾಲಿಯ ಮಗ ಟಿಪ್ಪು ಸುಲ್ತಾನ ಕೋಟೆಯನ್ನು ತನ್ನ ಮುಖ್ಯ ಸೇನಾ ಕೇಂದ್ರವಾಗಿ ಮಾಡಿಕೊಂಡ. ಬ್ರಿಟಿಷರೊಂದಿಗಿನ 1799ರಲ್ಲಿ ನಾಲ್ಕನೇ ಆಂಗ್ಲೋ- ಮೈಸೂರು ಯುದ್ಧದಲ್ಲಿ ಟಿಪ್ಪು ಮರಣ ಹೊಂದಿದ ನಂತರ ಈಸ್ಟ್ ಇಂಡಿಯಾ ಕಂಪೆನಿಯು ಈ ಕೋಟೆಯನ್ನು ವಶಪಡಿಸಿಕೊಂಡಿತು ಎಂಬ ಹಿನ್ನೆಲೆ ಇದೆ.
ಈ ಕೋಟೆಯ ತಳಭಾಗದಲ್ಲಿ ಮುಖ್ಯಪ್ರಾಣ ದೇವಸ್ಥಾನವಿದೆ. ಆದ್ದರಿಂದ ಕೋಟೆಯ ಭಾರವನ್ನು ಮುಖ್ಯಪ್ರಾಣ ದೇವರೇ ಹೊತ್ತುಕೊಂಡಿದ್ದಾರೆ ಎಂದು ಹಿರಿಯರು ನಂಬುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಕೋಟೆಯು ಕಣ್ಮನ ಅರಳಿಸುವ ಪ್ರವಾಸೀ ಕೇಂದ್ರವಾಗಿ ಬದಲಾಗಿದೆ. ಸ್ಥಳಕ್ಕಾಗಮಿಸುವ ನಾನಾ ದೇಶಗಳ ಪ್ರವಾಸಿಗರು, ಇತಿಹಾಸಕಾರರು ಕೋಟೆಯನ್ನು ಬಗೆಬಗೆಯಾಗಿ ವರ್ಣಿಸಿದ್ದಾರೆ. ಈ ಕೋಟೆಯ ಸುತ್ತಮುತ್ತ ಇರುವ ಚಂದ್ರಗಿರಿ ಕೋಟೆ, ಬಂದಡ್ಕ ಕೋಟೆಗಳು ನಶಿಸುತ್ತಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ.
ಇದು ಡಚ್ಚರು ನಿರ್ಮಿಸಿದ ತಲಶ್ಯೆರಿ ಕೋಟೆ, ಕಣ್ಣೂರಿನ ಸೈಂಟ್ ಏಂಜಲೋ ಕೋಟೆಗಳನ್ನು ಹೋಲುತ್ತದೆ. ಇಲ್ಲಿನ ಟಿಪ್ಪು ಸುಲ್ತಾನನ ಕಾಲದ ಜಲಸಂಗ್ರಹಾಗಾರ, ಶಸ್ತ್ರಾಗಾರ ಮತ್ತು ವೀಕ್ಷಣಾ ಗೋಪುರಕ್ಕಿರುವ ಮೆಟ್ಟಿಲುಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು. ಕೋಟೆಯಿಂದಲೇ ಸಮುದ್ರಕ್ಕೆ ಹೋಗಲು ಸುರಂಗ ಮಾರ್ಗ ನಿರ್ಮಿಸಲಾಗಿದೆ.
ಬೇಕಲಕೋಟೆ ಪ್ರವಾಸ ಎರಡು ಲಾಭವನ್ನು ಕೊಡುತ್ತದೆ. ಒಂದೆಡೆ ಕೋಟೆಯ ಇತಿಹಾಸವನ್ನು ತಿಳಿದುಕೊಂಡು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಅಲ್ಲದೆ ಸಂಜೆ ಹೊತ್ತು ಸಮುದ್ರದಲ್ಲಿ ಮನಬಂದಷ್ಟು ಹೊತ್ತು ಆಟವಾಡಿ ಮರಳುವ ಈ ಪ್ರವಾಸ ನಿಜಕ್ಕೂ ಖುಷಿ ಕೊಡುತ್ತದೆ.
ದಾರಿ ಹೇಗೆ…
ಬೇಕಲಕೋಟೆ ಕಾಸರಗೋಡಿನಿಂದ 9 ಕಿ.ಮೀ. ದೂರದಲ್ಲಿರುವ ಪಳ್ಳಿಕೆರೆ ಪ್ರದೇಶದಲ್ಲಿದೆ. ಬೇಕಲಕೋಟೆ ಮತ್ತು ಕಾಂಞಂಗಾಡ್ ಹತ್ತಿರದ ರೈಲು ನಿಲ್ದಾಣಗಳು. ಮಂಗಳೂರು, ಕಣ್ಣೂರು ಮತ್ತು ಕಲ್ಲಿಕೋಟೆ ವಿಮಾನ ನಿಲ್ದಾಣಗಳು ಈ ಸ್ಥಳಕ್ಕೆ ಹತ್ತಿರದಲ್ಲಿವೆ.
ಸ್ಪೂರ್ತಿ ಕಮಲ್ ಪಿ. ಎಸ್.
ಪ್ರಥಮ ಬಿಎ (ಪತ್ರಿಕೋದ್ಯಮ)
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.